ಚುನಾವಣೆಯ ಮೇಲೆ ಚುನಾವಣೆಯನ್ನು ಸೋಲುತ್ತಲೇ, ಸೋಲಿನಲ್ಲೇ ಶತಕ ಬಾರಿಸಲು ಧಾಪುಗಾಲು ಹಾಕುತ್ತಿರುವ ಕಾಂಗ್ರೇಸ್ ಪಕ್ಷದ ಚಿರಯೌವನಿಗ ಮತ್ತು ಯುವ ನಾಯಕ ಹೋದ ಬಂದ ಕಡೆಯಲ್ಲೆಲ್ಲಾ ತಮ್ಮ ಸೋಲಿಗೆ ಓಟ್ ಚೋರಿಯೇ ಕಾರಣ ಎಂಬ ಗುಲ್ಲೆಬ್ಬಿಸಿ ಜನರ ಅನುಕಂಪ ಗಿಟ್ಟಿಸಲು ದೇಶಾದ್ಯಂತ ಸಭೆಯ ಮೇಲೆ ಸಭೆಯನ್ನು ನಡೆಸುತ್ತಿರುವಾಗ, ಕಳೆದ ಭಾನುವಾರವಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚಾ ಸುದೀಪ್ ಸಾರಥ್ಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಸ್ಪರ್ಧೆ ಮುಕ್ತಾಯವಾಗಿ ಅಂತಿಮವಾಗಿ ಬಡವರ ಮಕ್ಕಳು ಗೆಲ್ಲಬೇಕ್ರೀ!! ಎನ್ನುವ ಇತ್ತೀಚಿನ ಮಾತಿನಂತೆ ತಮ್ಮ ಅರ್ಹತೆ ಮತ್ತು ಆಟದ ಮೂಲಕ ಹಾಸ್ಯ ಕಲಾವಿದ ಗಿಲ್ಲಿ ನಟ ಮೊದಲನೇ ಸ್ಥಾನ ಗಳಿಸಿದರೆ ಕರಾವಳಿಯ ಸುಂದರಿ ರಕ್ಷಿತಾ ಶೆಟ್ಟಿ ಎಂಬ ಪುಟ್ಟ ಹುಡುಗಿ ಎರಡನೇ ಸ್ಥಾನಗಳಿಸಿದ್ದನ್ನು ಬಹುತೇಕ ಕನ್ನಡಿಗರು ಸಂಭ್ರಮಿಸುತ್ತಿದ್ದರೆ, ಇನ್ನು ತಾನೇ ಗೆಲ್ಲುತ್ತೇನೆ ಎಂಬ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದ, ಕುಣಿಯಲಾರದವಳು ನೆಲ ಡೊಂಕು ಎಂದಳಂತೆ ಎನ್ನುವ ಗಾದೆ ಮಾತಿನಂಟೆ ಮೂರನೇ ಸ್ಥಾನಕ್ಕಿಳಿದ ಸ್ವಘೋಷಿತ ಛಲಗಾರ್ತಿ, ರಾಜಮಾತೆ ಆಶ್ವಿನಿ ಗೌಡ ಮಾತ್ರಾ ತನ್ನ ಸೋಲಿಗೆ ಓಟ್ ಚೋರಿಯೇ ಕಾರಣ ಎಂಬ ಮಾತುಗಳನ್ನು ಸಂದರ್ಶನವೊಂದರಲ್ಲಿ ಆಡುವ ಮೂಲಕ ಬಿಗ್ ಬಾಸ್ ನಲ್ಲಿ ನೋಡಿದ್ದ ಆಕೆಯ ಜಗಳಗಾರ್ತಿ ವ್ಯಕ್ತಿತ್ವವೇ ನಿಜವಾದ ವ್ಯಕ್ತಿತ್ವ ಎಂದು ಹೊರಬಂದಮೇಲೂ ತೋರಿಸಿದ್ದಾರೆ.
ಹಿಂದಿನ 11 ಸೀಸನ್ ಗಳಿಗಿಂತಲೂ ಈ ಬಾರಿಸ ಸೀಸನ್ ಬಹಳ ಅದ್ದೂರಿಯಾಗಿತ್ತಲ್ಲದೇ, ಬಹಳ ಸದ್ದು ಮಾಡುವ ಮೂಲಕ ಟಿ.ಆರ್.ಪಿ ನಲ್ಲಿಯೂ ಟಾಪ್ ಆಗಿದ್ದಲ್ಲದೇ ಕಲರ್ಸ್ ಕನ್ನಡ ವಾಹಿನಿಯನ್ನು ಹಲವು ದಿನಗಳ ನಂತರ ನಂಬರ್ -1 ಸ್ಥಾನಕ್ಕೂ ಏರಿಸಿತ್ತು. ಈ ಹಿಂದಿನ 11 ಸೀಸನ್‌ಗಳಿಗೆ ಇಲ್ಲದ ಕ್ರೇಜ್ ಈ ಸೀಸನ್‌ಗೆ ಇತ್ತು ಎಂದು ಸ್ವತಃ ಸುದೀಪ್ ಹೇಳಿದ್ದಲ್ಲದೇ ಅದಕ್ಕೆ ತಕ್ಕಂತಯೇ ದಾಖಲೆ ಮಟ್ಟದಲ್ಲಿ ಜನ ವೋಟ್ ಮಾಡಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡಿದ್ದರು. ಹಿಂದಿನ ಸೀಸನ್ನಿನ ವಿಜೇತ ಅಭ್ಯರ್ಥಿ ಗಳಿಸಿದ್ದ ಓಟ್ ಗಿಂತಲೂ ಅದೆಷ್ಟೋ ಪಟ್ಟು ಹೆಚ್ಚಿನ ಓಟುಗಳನ್ನು ಈ ಬಾರಿಯ 6ನೇ ಅಭ್ಯರ್ಥಿ ಪಡೆದಿದ್ದರು ಎಂಬುದನ್ನೂ ಸಹಾ ಸುದೀಪ್ ತಿಳಿಸಿದ್ದಲ್ಲದೇ ಫಿನಾಲೆಯ ಒಂದು ದಿನ ಮುನ್ನ ಮೊದಲ ಸ್ಥಾನದಲ್ಲಿದ್ದ ಅಭ್ಯರ್ಥಿಗೆ 37 ಕೋಟಿ ಮತಗಳು ಬಂದಿದೆ ಎನ್ನುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ಪಡುವಂತೆ ಮಾಡಿದ್ದರು.
2026ರ ಜನವರಿ 18ರ ಭಾನುವಾರ ಸಂಜೆ ಯಶಸ್ವಿಯಾಗಿ ಮುಗಿದ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಹೊರ ಗಿಲ್ಲಿ ನಟನೇ ಜಯಶಾಲಿ ಆಗುತ್ತಾನೆ ಎಂದು ಈ ಬಾರಿಯ ಬಿಗ್ ಬಾಸ್ ಸೀಸನ್ ಆರಂಭದಿಂದಲೂ ಹೇಳುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಟದಪುರದ ಸಾಮಾನ್ಯ ಬಡ ಕೃಷಿ ಕುಟುಂಬದಲ್ಲಿ ಜನಿಸಿ ಉದ್ಯೋಗವನ್ನರಸಿಕೊಂಡು ಬೆಂಗಳೂರಿಗೆ ಬಂದು ತನ್ನ ಪ್ರತಿಭೆ ಮತ್ತು ಪರಿಶ್ರಮದಿಂದ ಹಂತ ಹಂತವಾಗಿ ಮೇಲೆ ಬಂದು ಮೂರ್ನಾಲ್ಕು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿ ತನ್ನ ಹಾಸ್ಯಗಾರಿಕೆಯಿಂದ ಜನಮಾನಸವನ್ನು ಗೆದ್ದಿದ್ದ ಗಿಲ್ಲಿ ನಟರಾಜ್ ಎಲ್ಲರ ಪ್ರೀತಿಯ ಗಿಲ್ಲಿ ನಟ ಮೊದಲ ಸ್ಥಾನ ಗಳಿಸಿದರೆ ಅಶ್ವಿನಿ ಗೌಡ ಕನಿಷ್ಠ ಪಕ್ಷ ಎರಡನೇ ಸ್ಥಾನವನ್ನಾದರೂ ಪಡೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಮೊದಲನೇ ರನ್ನರ್ ಅಪ್ ಕೈತಪ್ಪಿ 2ನೇ ರನ್ನರ್‌ಅಪ್‌ಗೆ ಆಗುತ್ತಿದ್ದಂತೆಯೇ, ಬಿಗ್ ಬಾಸ್ ಮುಗಿದ ದಿನದಿಂದಲೂ ಅಶ್ವಿನಿ ಗೌಡ ಅದರ ಬಗ್ಗೆ ಒಂದಲ್ಲ ಒಂದು ರೀತಿ ಅಸಮಧಾನವನ್ನು ಹೊರ ಹಾಕುತ್ತಲೇ ಇದ್ದು ಪರೋಕ್ಷವಾಗಿ ಗಿಲ್ಲಿ ವಿರುದ್ಧವಂತೂ ವಿಷಕಾರುತ್ತಲೇ ಇದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ತಾನೇ ದೊಡ್ಡವಳು, ತಾನು ಹೇಳಿದ್ದೇ ಸರಿ. ಎಲ್ಲರೂ(ವೂ) ತಾನು ಹೇಳಿದಂತೆಯೇ ನಡೆಯಬೇಕು, ಎನ್ನುತ್ತಿದ್ದ ಅಶ್ವಿನಿ ಗೌಡ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗದು ಎನ್ನುವಂತೆ, ಧನುಷ್ ಹೊರತು ಪಡಿಸಿ ಫೈನಲ್ ತಲುಪಿದ್ದ ಉಳಿದ ನಾಲ್ಕು ಸ್ಪರ್ಧಿಗಳು ಆ ಸ್ಥಾನಕ್ಕೆ ಬರಲು ತನ್ನದೇ ಹೆಚ್ಚಿನ ಪಾತ್ರವಿದೆ. ಹಾಗಾಗಿಯೇ ಅವರೆಲ್ಲರ ಜಯದ ಶ್ರೇಯ ತನಗೇ ಸಿಗಬೇಕು ಎಂಬ ಬಾಲಿಶ ಮಾತುಗಳ ಮೂಲಕ ನಗೆಪಾಟಲಾಗೀಡಾಗಿದ್ದಲ್ಲದೇ, ಆರಂಭದಿಂದ ಹಿಡಿದು ಅಂತಿಮ ದಿನದವರೆಗೂ ನಾನು ಒಂಟಿಯಾಗಿಯೇ ಆಟ ಆಡಿದೆ. ಇಡೀ ಮನೆಗೆ ಬಹಳಷ್ಟು ನೀಡಿದ್ದೇನೆ. ಇಡೀ ಮನೆಯೇ ಒಂದು ದಿಕ್ಕಲ್ಲಿ ಇರುತ್ತಿದ್ದರೆ, ನಾನೇ ಮತ್ತೊಂದು ದಿಕ್ಕಿನಲ್ಲಿ ಇದ್ದು ಇಡೀ ಮನೆಯನ್ನು ಸರಿದಾರಿಗೆ ತೆಗೆದುಕೊಂಡು ಹೋಗುವ ಮೂಲಕ ಒಂದು ರೀತಿ ಶೋ ನಡೆದದ್ದೇ ತನ್ನಿಂದ ಎನ್ನುವಂತಹ ಮಾತುಗಳನ್ನಾಡಿದ್ದಾರೆ.
ಹಾಗೆಯೇ ಮಾತುಗಳನ್ನು ಮುಂದುವರೆಸಿ, ಇಡೀ ಮನೆಯಲ್ಲಿ ತಾನಾಯ್ತು ನನ್ನ ಲೈಫ್ ಆಯ್ತು ಎಂದು ನಾನು ಮತ್ತು ಜಾನ್ಹವಿ ನಮ್ಮ ಪಾಡಿಗೆ ನಾವಿದ್ದೆವು ಆದರೆ ನಮ್ಮನ್ನು ವಿನಾಕಾರಣ ಕೆದುಕಿದರೆ ಮಾತ್ರ ಸುಮ್ಮನಿರುತ್ತಿರಲಿಲ್ಲ. ಹಾಗಾಗಿಯೇ ಉಳಿದವರೆಲ್ಲರೂ ಸೇರಿಕೊಂಡು ಒಗ್ಗಟ್ಟಾಗಿ ಒಪ್ಪಂದ ಮಾಡಿಕೊಂಡವರಂತೆ ತನ್ನನ್ನು ಏಕವಚನದಲ್ಲಿ ಸಂಬೋಧಿಸುವ ಮೂಲಕ ತನ್ನನ್ನು ಕೆಣಕಿ ರೊಚ್ಚಿಗೇಳಿಸುತ್ತಾ, ಜಗಳವಾಡುತ್ತಾ, ಅವರು ಒಳ್ಳೆಯವರಾಗುತ್ತಿದ್ದಂತಹ ವಿಷಯ ತನಗೆ ಸ್ವಲ್ಪ ತಡವಾಗಿ ಅರ್ಥ ಆಯ್ತು. ಇದನ್ನು ತುಂಬಾ ಚೆನ್ನಾಗಿ ಬಳಸಿಕೊಂಡಿದ್ದು ಗಿಲ್ಲಿ. ಗಿಲ್ಲಿ ವ್ಯಕ್ತಿತ್ವವೇನು ಅನ್ನೋದು ಯಾರಿಗೂ ಗೊತ್ತಿಲ್ಲ. ಗಿಲ್ಲಿ ಬಿಗ್ ಬಾಸ್ ಆಟವನ್ನು ನೋಡಿಕೊಂಡು ಬಂದಿದ್ದರು. ಇದೊಂದು ಚದುರಂಗದ ಆಟ. ಇದರಲ್ಲಿ ರಾಜ, ಮಂತ್ರಿ ಅಂತ ಏನೇನೋ ಇರುತ್ತವಲ್ಲ. ಮಂತ್ರಿ-ತಂತ್ರಿ ಅಂತೆಲ್ಲ ಹೇಳುತ್ತಾರೆ. ಇನ್ನು ಕುತಂತ್ರಿ ಅನ್ನೋರು ಇರುತ್ತಾರೆ. ನಾವು ಆಟವನ್ನು ಆಡುತ್ತಿದ್ದರೆ, ಗಿಲ್ಲಿ ಆಟವನ್ನು ಹಾಳು ಮಾಡಿದ. ನನ್ನ ಜೊತೆ ಜಗಳ ಆಡುತ್ತಾ, ನನ್ನನ್ನು ಕೆಳಗಿಟ್ಟು ಆಟ ಆಡಿದ್ದು ಬಿಟ್ಟರೆ, ಗಿಲ್ಲಿ ಬೇರೆ ಕಡೆ ಎಲ್ಲಿಯೂ ಗಿಲ್ಲಿ ಆಡಲಿಲ್ಲ. ಆಶ್ವಿನಿ ಮನೆಯ ಕ್ಯಾಪ್ಟನ್ ಆಗಲು ಬಿಡಬಾರದು ಎಂಬ ಪ್ಲಾನ್ ಮಾಡಿ, ತಾನು ಸರಿಯಾಗಿ ಆಟ ಆಡದೇ ಇರುವಂತೆ ಮೈಂಡ್ ಡೈವರ್ಟ್ ಮಾಡಿದ ಎಂಬ ಆರೋಪವನ್ನೂ ಮಾಡಿದರು.
ಮನೆಯಲ್ಲಿಯೂ ಗಿಲ್ಲಿ ನಟ ಬಡವನೋ ಶ್ರೀಮಂತನೋ ಎಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿತ್ತು. ಇದ್ದನ್ನೇ ಬಂಡವಾಳ ಮಾಡಿಕೊಂಡ ಗಿಲ್ಲಿ ಸದಾ ಕಾಲವೂ ಒಂದು ಚಡ್ಡಿ, ಬನಿಯನ್ ಧರಿಸಿ, ಬಡವ ಎಂಬ ಬೋರ್ಡ್ ಹಾಕಿಕೊಂಡು ಗೆದ್ದಿದ್ದಾನೆ. ಹಾಗಾಗಿ ಅವನ ಗೆಲುವು ಗೆಲುವಲ್ಲಾ. ಬಿಗ್ ಬಾಸ್ ಎನ್ನುವುದು ಕಾಮಿಡಿ ಶೋ ಅಲ್ಲ. ಇದು ವ್ಯಕ್ತಿತ್ವದ ಆಟ. ಆದರೆ ಇಲ್ಲಿ ಯಾವ ಮಾನದಂಡದ ಮೇಲೆ ಆ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ. ಇಡೀ ಮನೆಗೆ ನಾನು ಸಮರ್ಪಿಸಿ ಕೊಂಡಿದ್ದೆ. ದೈಹಿಕವಾಗಿ, ಮಾನಸಿಕವಾಗಿ ಗಾಯಗೊಂಡಿದ್ದೀನಿ. ಇಲ್ಲಿಯವರೆಗೂ ಬಿಗ್‌ಬಾಸ್‌ಗೆ ನನ್ನಂತ ಪ್ರಬಲ ಸ್ಪರ್ಧಿ ಬಂದಿಲ್ಲ. ಆ ಹೆಮ್ಮೆ ಇದೆ. ನಟಿ ಶ್ರುತಿ ಬಳಿಕ ಬಿಗ್‌ಬಾಸ್ ಕನ್ನಡದಲ್ಲಿ ಮಹಿಳಾ ಸ್ಪರ್ಧಿ ಪ್ರಶಸ್ತಿ ಗೆದ್ದಿರಲಿಲ್ಲ. ಈ ಬಾರಿ ಮಹಿಳಾ ಸ್ಪರ್ಧಿಯೇ ಗೆಲ್ಲಬಹುದು ಎಂದು ಹಲವರು ಭಾವಿಸಿದ್ದರು. ಹಾಗಾಗಿಯೇ ನನ್ನಂತಹ ಪ್ರಭಲ ಮಹಿಳಾ ಸ್ಪರ್ಧಿಯ ಕೈಯನ್ನೇ ಈ ಸಲ ಸುದೀಪ್ ಸರ್ ಮೇಲೆ ಎತ್ತುತ್ತಾರೆ ಎಂದು ಭಾವಿಸಿದ್ದೆ. ಆದರೆ ಈ ರೀತಿಯಾಗಿ ಕೈ ಎತ್ತುತ್ತಾರೆ(ಬಿಡ್ತಾರೆ) ಎಂದುಕೊಂಡಿರಲಿಲ್ಲ ಎಂಬ ಬೇಸರವನ್ನೂ ಅಶ್ವಿನಿ ಗೌಡ ವ್ಯಕ್ತಪಡಿಸಿದ್ದಾರೆ.
ಸೋತ ಅಭ್ಯರ್ಥಿಗಳು ನೋವಿನಿಂದ ಈ ರೀತಿಯಾಗಿ ಬೇಸರ ವ್ಯಕ್ತಪಡಿಸುವುದು ಸಹಜ ಎನ್ನುವುದಾದರೆ, ಅಚ್ಚರಿ ಎನ್ನುವಂತೆ, ಬಿಗ್ ಬಾಸ್ 12ರ ಒಟ್ಟಾರೆ ವೋಟ್ ನಂಬರ್ ಗಳನ್ನು ಸರಿಯಾಗಿ ಕಲರ್ಸ್ ಕನ್ನಡ ವಾಹಿನಿ ಬಹಿರಂಗ ಪಡಿಸಿದರೆ, ನಿಜಕ್ಕೂ ನಾನೇ ಗೆಲ್ತೀನಿ ಎಂಬ ಸವಾಲನ್ನೂ ಅಶ್ವಿನಿ ಗೌಡ ಸವಾಲು ಹಾಕಿರುವುದು ಈಗ ವೈರಲ್ ಆಗುತ್ತಿದೆ. ನನಗೂ, ಗಿಲ್ಲಿಗೂ ಬಂದ ಮತಗಳ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ ಎಂಬುದು ನನಗೆ ಬಂದ ಮಾಹಿತಿ. ಆ ಸಂಖ್ಯೆ ಬಹಿರಂಗವಾದಲ್ಲಿ ನಾನೇ ವಿನ್ನರ್ ಎಂದು ಅಶ್ವಿನಿ ಒತ್ತಿ ಒತ್ತಿ ಹೇಳುವ ಮೂಲಕ ಗಿಲ್ಲಿಯನ್ನು ವಿನ್ನರ್ ಎಂದು ಒಪ್ಪಿಕೊಳ್ಳಲು ಅಶ್ವಿನಿ ಇನ್ನೂ ಸಹಾ ಸಿದ್ಧವಾಗಿಲ್ಲ ಎಂಬುದು ಜಗಜ್ಜಾಹೀರಾತಾಗಿದೆ.
ಜೋರಾಗಿ ಮತ್ತೊಬ್ಬರ ಬಾಯಿ ಬಡಿಯುವಂತೆ ಮಾತನಾಡಿದವರನ್ನು ಯಾರೂ ಕನ್ನಡ ಹೋರಾಟಗಾರ್ತಿ ಎನ್ನುವುದಿಲ್ಲ. ಇನ್ನು ಛಲಗಾರ್ತಿ ಎಂದು ಬರೆಯುವ ಬದಲು ಛಲಗಾತಿ ಎಂದು ಬರೆದಿದ್ದಕ್ಕೆ ಸರಿಯಾಗಿ ಕನ್ನಡದಲ್ಲಿ ಬರೆಯೋಕೆ ಬಾರದವರೆಲ್ಲಾ, ಎಂತಹ ಕನ್ನಡ ಹೋರಾಟಗಾರ್ತಿ? ಎಂದು ಟ್ರೋಲ್ ಮಾಡಿದ್ದ ವಿಷಯಕ್ಕೆ ಪ್ರತಿಕ್ರಿಯಿಸಿದ ಅಶ್ವಿನಿ, ತಾನು ಓದಿದ್ದು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆದರೂ ತಾನು ಇವತ್ತು ಕನ್ನಡಪರ ಹೋರಾಟಗಾರ್ತಿ ಎಂದು ಪ್ರಖ್ಯಾತಳಾಗಿದ್ದೇನೆ. ತನಗೆ ಚೆನ್ನಾಗಿ ಕನ್ನಡ ಓದಲು ಮತ್ತು ಮಾತನಾಡಲು ಬರುತ್ತದೆ. ಆದರೆ ಬರೆಯುವಾಗ ಕೊಂಚ ಕಷ್ಟ ಆಗುವ ಕಾರಣ ಕೆಲವೊಮ್ಮೆ ತಪ್ಪು ಬರೆಯುತ್ತೇನೆ ಎಂದು ತಮ್ಮ ತಪ್ಪನ್ನು ತಾವೇ ಸಮರ್ಥಿಸಿಕೊಳ್ಳುವಾಗ ನಮ್ಮ ರಾಜ್ಯದ ಶಿಕ್ಷಣ ಸಚಿವರಿಗೂ ಕನ್ನಡ ಓದಲು ಬರೆಯಲು ಬಾರದೇ ನೆನಪಾಗುವುದೂ ಕಾಕತಾಳಿಯ ಎಂದರೂ ತಪ್ಪಾಗದು.
ಗೌರವ ಮತ್ತು ಸನ್ಮಾನಗಳನ್ನು ಕೇಳಿಯೋ ಇಲ್ಲವೇ ಜಗಳ ಮಾಡಿಯೋ ಪಡೆಯುವುದಲ್ಲ. ಬದಲಾಗಿ ನಮ್ಮ ವ್ಯಕ್ತಿತ್ವ ಮತ್ತು ಸಾಧನೆಗಳ ಮೂಲಕವೇ ಪಡೆಯಬೇಕು. ಅದೇ ಅಶ್ವಿನಿಯವರೇ ಹೇಳಿದಂತೆ ಬಿಗ್ ಬಾಸ್ ಎನ್ನುವುದು ಕಾಮಿಡಿ ಶೋ ಆಗಿರದೇ ಅದೊಂದು ವ್ಯಕ್ತಿತ್ವದ ಆಟದ ಮನೆ ಆಗಿರುವುದರಿಂದ, ಆಟ ಎಂದ ಮೇಲೇ ಒಬ್ಬರು ಗೆದ್ದ ಮೇಲೆ ಮತ್ತೊಬ್ಬರು ಸೋಲಲೇ ಬೇಕು. ಗೆದ್ದವರು ಸೋತವರ ಮೇಲೂ ಮತ್ತು ಅದೇ ರೀತಿಯಲ್ಲಿ ಸೋತವರು ಗೆದ್ದವರ ಮೇಲೆ ವೃಥಾ ಕಾರಣ ಈ ರೀತಿಯಾಗಿ ಆರೋಪ ಮತ್ತು ಪ್ರತ್ಯಾರೋಪ ಮಾಡುವುದು ಕ್ರೀಡಾ ಸ್ಪೂರ್ತಿಯಾಗದು. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವಂತೆ ಈ ವಾಸ್ತವದ ಸಂಗತಿಯನ್ನು ಅಶ್ವಿನಿ ಗೌಡ ಆವರಿಗೆ ಯಾರಾದರೂ ಅದಷ್ಟು ಶೀಘ್ರವಾಗಿ ಅರ್ಥ ಮಾಡಿಸಿದರೆ ಒಳ್ಳೆಯದು. ದುರಾದೃಷ್ಟವಷಾತ್ ವಂದಿಮಾಗಧರ ಹೊಗಳುವಿಕೆಯ ಉತ್ತುಂಗದಲ್ಲಿ ಭ್ರಮಾ ಲೋಕದಲ್ಲಿ ತೇಲಾಡುತ್ತಿರುವ ಆಶ್ವಿನ್ ಗೌಡರವರಿಗೆ ಇದಲ್ಲಾ ಅರ್ಥ ಆಗುತ್ತಿಲ್ಲವೇ? ಅಥವಾ ಅರ್ಥವಾದರೂ, ಹುಂಬತನದಿಂದ ಈ ರೀತಿಯ ಮಾತುಗಳನ್ನು ಆಡುತ್ತಿದ್ದಾರೆಯೇ? ಎಂಬುದನ್ನು ಅವರೇ ಹೇಳಬೇಕು. ಬಿಗ್ ಬಾಸ್ ಎನ್ನುವುದು ಕೇವಲ ಒಂದು ಮನರಂಜನಾತ್ಮಕ ಶೋ ಆಗಿದ್ದು, ಅದರ ಹೊರತಾಗಿಯೂ ಜೀವನವಿದ್ದು, ಇನ್ನೂ ಸಣ್ಣ ವಯಸ್ಸಿನ ಅಶ್ವಿನಿ ತಮ್ಮ ತಪ್ಪನ್ನು ಸರಿಪಡಿಸಿಕೊಂಡಲ್ಲಿ, ಜೀವನದಲ್ಲಿ ನಿಜವಾದ ಛಲಗಾರ್ತಿ/ಹೋರಾಟಗಾರ್ತಿ ಆಗಬಲ್ಲರು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ