ಮಾರಿಕಾಂಬೆ ಅಂದ ತಕ್ಷಣ ನಮಗೆ ನೆನಪಾಗೋದೇ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶಕ್ತಿ ದೇವತೆಯಾದ ಶಿರಸಿಯ ಶ್ರೀ ಮಾರಿಕಾಂಬೆ. ಕೋಟ್ಯಾಂತರ ಭಕ್ತರ ಆರಾಧ್ಯ ದೈವವಾಗಿರುವ ಮತ್ತು ಜನಪದ ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ದೇವಾಲಯದಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ಅತ್ಯಂತ ವೈಭವವಾಗಿ ನಡೆಯುವ ಮಾರಿಕಾಂಬಾ ಜಾತ್ರೆಯು ದೇಶಾದ್ಯಂತ ಅಪಾರ ಸಂಖ್ಯೆಯ ಭಕ್ತರನ್ನು ಆಕರ್ಷಿಸುತ್ತದೆ. ಅದೇ ರೀತಿ ಶಿರಸಿಯಿಂದ ಸುಮಾರು 70 ಕಿ.ಮೀ. ದೂರ ಇರುವ, ಸಹ್ಯಾದ್ರಿಯ ತಪ್ಪಲಿನ ಶಿವಮೊಗ್ಗ ಜಿಲ್ಲೆಗೆ ಸೇರಿರುವುಅ ಅಡಿಕೆ, ತೆಂಗುಗಳಂತಹ ಆರ್ಥಿಕ ಬೆಳೆಗಳ ನಡುವೆ ಇತಿಹಾಸ ಪ್ರಸಿದ್ಧ ಕೆಳದಿ ಮತ್ತು ಇಕ್ಕೇರಿಗಳಂತಹ ಐತಿಹ್ಯ ಇರುವ ಸುಂದರ ಪ್ರಕೃತಿಗಳ ಮಧ್ಯೆ ಸಾಗರ ಎಂಬ ಪಟ್ಟಣವಿದೆ. ಒಂದು ಕಾಲದಲ್ಲಿ ಅಲ್ಲಿನ ಜನರೇ ಹೇಳುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಕೇಂದ್ರವಾದರೂ, ಆರ್ಥಿಕವಾಗಿ ಸಾಗರವೇ ಹೆಚ್ಚು ಪ್ರಾಭಲ್ಯ ಪಡೆದಿದ್ದ ಕಾರಣ, ಸಾಗರವೇ ಜಿಲ್ಲಾ ಕೇಂದ್ರವಾಗಬೇಕು ಎಂಬ ಕೂಗು ಇತ್ತು. ಇಂತಹ ಸಾಗರದಲ್ಲಿ ಆದಿ ಗುರು ಶ್ರೀ ಶಂಕರಾಚಾರ್ಯದಿಂದ ಸ್ಥಾಪಿಸಲ್ಪಟ್ಟ ಮಾರಿಕಾಂಬೆಯು ಇದ್ದು ಇಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಬಹಳ ವೈಭವದಿಂದ ಒಂದು ರೀತಿ ಮೈಸೂರು ದಸರಾ ನೆನೆಪಿಸುವಂತೆ ಸುಮಾರು ಒಂಭತ್ತು ದಿನಗಳ ಕಾಲ ಬಹಳ ಅದ್ದೂರಿಯಿಂದ ಶ್ರೀ ಮಾರಿಕಾಂಬೆಯ ಜಾತ್ರೆ ನಡೆಯುತ್ತದೆ. ಸಾಗರದ ಮಾರಿಕಾಂಬಾ ಜಾತ್ರೆಯ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಐತಿಹ್ಯದ ಪ್ರಕಾರ ಕೆಳದಿಯ ಶಿವಪ್ಪನಾಯಕ ಮೂಲ ಪುರುಷನು ಈ ಊರಿನ ಎಡಬಲದಲ್ಲಿರುವ ಇಕ್ಕೆರಿಯಲ್ಲಿ ರಾಜ್ಯಾಡಳಿತ ನಡೆಸಿದ್ದಾರೆ. ಅದೇ ರಾಜಮನೆತನದ ಸದಾಶಿವನಾಯಕನು ತನ್ನ ಆಡಳಿತ ಅವಧಿಯಲ್ಲಿ ಸಾಗರದಲ್ಲಿ ಭವ್ಯವಾದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಗಣಪತಿ ಕೆರೆಯನ್ನು ನಿರ್ಮಿಸಿದನು. ಅನಂತರ ಕೆಳದಿ, ಇಕ್ಕೆರಿ ಸಂಸ್ಥಾನದ ಅರಸರು ತಮ್ಮ ಯುದ್ಧ ಸಾಮಗ್ರಿಗಳನ್ನು ಇದೇ ಊರಿನಲ್ಲಿ ಸಂಗ್ರಹಿಸಿ ಅವುಗಳ ರಕ್ಷಣೆಗಾಗಿ ಕೆಳದಿ ಇಕ್ಕೇರಿ ಸಂಸ್ಥಾನದ ಗಡಿ ದೇವತೆ ಮತ್ತು ಶಕ್ತಿ ದೇವತೆಯಾದ ಮಾರಿಕಾಂಬಾ ದೇವಿಯ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ, ಅಲ್ಲಿ ನಿರಂತವಾಗಿ ಪೂಜೆಗಳು, ಉತ್ಸವಗಳು ಮತ್ತು ಜಾತ್ರೆಯನ್ನು ನಡೆಸಲು ಆರಂಭಿಸಿದರು ಎನ್ನುವ ಪ್ರತೀತಿ ಇದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಮಾಘ ಪಾಸದದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಬಡವ ಬಲ್ಲಿದ, ಮೇಲು ಕೀಳು ಎನ್ನುವ ಯಾವುದೇ ಬೇಧಭಾವವಿಲ್ಲದೇ ಎಲ್ಲರೂ ಒಟ್ಟಾಗಿ ಸೇರಿಕೊಂಡು ಇಡೀ ನಗರವನ್ನು ತಳಿರು ತೋರಣಗಳಿಂದ ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಿ ಜಾತ್ರೆಯನ್ನು ಮಾಡಲಾಗುತ್ತದೆ. ಜಾತ್ರೆ ಆರಂಭವಾಗುವ 8 ದಿನಗಳ ಮುಂಚೆಯೇ ಇಡೀ ಊರಿಗೆ ಅಂಕೆ ಹಾಕುತ್ತಾರೆ. ಹೀಗೆ ಅಂಕೆ ಹಾಕಿದ ನಂತರ ಊರಿನಲ್ಲಿರುವವರು ಯಾಫೂ ಸಹಾ ಜಾತ್ರೆ ಮುಗಿಯುವವರೆಗೆ ಪರ ಊರಿಗೆ ಹೋಗಬಾರದು ಎಂಬ ನಿಯಮವಿದೆ.
ಸಾಮಾನ್ಯವಾಗಿ ಎಲ್ಲಾ ಶ್ರೀಕ್ಷೇತ್ರಗಳಲ್ಲಿ ಮೂಲ ದೇವಾಲಯವಿದ್ದು ಅಲ್ಲಿಯೇ ದೇವರು ಇದ್ದರೆ, ಸಾಗರದಲ್ಲಿ ಸ್ವಲ್ಪ ವಿಭಿನ್ನವಾಗಿ ಶ್ರೀ ಮಾರಿಕಾಂಬೆಯ ಎರಡು ದೇವಾಲಯಗಳಿದ್ದು, ಮೊದಲನೆಯದ್ದು ಬಹಳ ಕಾಲದಿಂದಲೂ ಇರುವ ಹಳೆಯ ಗುಡಿ ತವರುಮನೆ ಎಂಬ ಹೆಸರಿದ್ದರೆ, ಎರಡನೇಯದು ಸುಂದರ ಹೊರನೋಟವನ್ನು ಹೊಂದಿರುವ ಸ್ವಲ್ಪ ಹೊಸದಾದ ಗಂಡನ ಮನೆ ಎಂಬ ಬಹಳ ಆಕರ್ಷಕವಾದ ದೇವಾಲಯವಿದೆ.
ಜಾತ್ರೆಯ ಮೊದಲನೆಯ ದಿನ ಸೂರ್ಯೋದಯಕ್ಕೂ ಮುಂಚೆ 5 ಗಂಟೆಯ ಹೊತ್ತಿಗೆ ಸುಮಾರು 13 – 16 ಅಡಿ ಎತ್ತರದ ಮರದಲ್ಲಿ ಭವ್ಯವಾಗಿ ಮತ್ತು ದಿವ್ಯವಾಗಿ ನಿರ್ಮಿಸಿರುವ ಬಹಳ ಆಕರ್ಷಣೀಯವಾದ ಹಳದೀ ಬಣ್ಣದ ಸೀರೆಯುಟ್ಟ ರಕ್ತವರ್ಣದ ಕಣ್ಣು ಕೋರೈಸುವ ಶ್ರೀ ದೇವಿಯ ವಿಗ್ರಹದ ಮುಖವನ್ನು ವರ್ಣಿಸುವುದಕ್ಕಿಂತಲೂ ನೋಡಿ ಆನಂದಿವುದೇ ನಮಸ್ಸಿಗೆ ಮುದ ನೀಡುತ್ತದೆ. ಇಂತಹ ಮುದ್ದಾದ ಶ್ರೀ ಮಾರಿಕಾಂಬಾ ದೇವಿಯನ್ನು ತವರುಮನೆಯಲ್ಲಿ ಪ್ರತಿಷ್ಠಾಪಿಸಿ ಇಡೀ ದಿನ ಶೋಷಡಶೋಪಚಾರ ಪೂಜೆಯ ಜೊತೆ ಕುಂಕುಮಾರ್ಚನೆಗಳೆಲ್ಲವೂ ನಡೆದು ರಾತ್ರಿ ಸುಮಾರು 10 ಗಂಟೆಗೆ ಶ್ರೀ ಮಾರಿಕಾಂಬಾ ದೇವಿಯ ವೈಭವದ ರಥೋತ್ಸವವು ಮಂಗಳವಾದ್ಯಗಳ ಜೊತೆಗೆ ವಿವಿಧ ರೀತಿಯ ಡೊಳ್ಳು ಕುಣಿತದೊಂದಿಗೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಮೆರವಣಿಗೆ ನಡೆಸಿ ದೇವಿಯನ್ನು ಗಂಡನ ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಗಂಡನ ಮನೆ ದೇವಸ್ಥಾನವು ಬೇರಾವ ದೇವಾಲಯದಲ್ಲಿಯೂ ಕಾಣಸಿಗದಂತಹ ಈ ಅಪರೂಪದ 2 ಸಿಂಹಗಳು ಎಳೆಯುವ ರಥದ ಮಾದರಿಯಲ್ಲಿ ಭವ್ಯವಾಗಿ ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ನಗರದ ಮಧ್ಯದಲ್ಲಿ ಅತಿ ಎತ್ತರದ ಗೋಪುರವು ಬಹಳ ಆಕರ್ಷಣೀಯವಾಗಿದ್ದು, ಆ ಗೋಪುರದಲ್ಲಿ ದೇವಿಯ ನಾನಾ ರೂಪಗಳು ಮತ್ತು ದೇವಿಯ ಮಹಾತ್ಮೆಯಲ್ಲಿರುವಂತಹ ದೇವಿಯ ಮೂರ್ತಿ ರಚನೆಯ ಮೂಲಕ ಕಂಗೊಳಿಸುತ್ತಿದೆ. ಈ ಸಮಯದಲ್ಲಿ ದೇವಿಗೆ ನಿರಂತವಾಗಿ ಕುಂಕುಮಾರ್ಚನೆ, ಉಡಿತುಂಬುವುದು, ಗಾವುಗುರಿ ಕಾರ್ಯಕ್ರಮ ಚಾಟಿ ಸೇವೆ ಇನ್ನಿತರ ಪೂಜಾ ಕಾರ್ಯಕ್ರಮಗಳು ನಡೆದು ಅಂತಿಮವಾಗಿ ಒಂಭತ್ತನೇ ದಿನ ರಾತ್ರಿ 10 ಗಂಟೆಗೆ ಮತ್ತೆ ನಗರಾದ್ಯಂತ ರಾಜ ಬೀದಿಗಳಲ್ಲಿ ಭವ್ಯವಾದ ರಥದೊಂದಿಗೆ ಶ್ರೀ ದೇವಿಯನ್ನು ಸಾಗರದ ಹೊರ ವಲಯದಲ್ಲಿನ ವನದಲ್ಲಿ ದೇವಿಯ ವಿಸರ್ಜನಾ ಕಾರ್ಯಕ್ರಮವನ್ನು ನಡೆಸುವ ಮೂಲಕ ಒಂಭತ್ತು ದಿನಗಳ ಕಾಲದ ಜಾತ್ರೆ ಸುಸಂಪನ್ನವಾಗುತ್ತದೆ.
ಮಾರಿಕಾಂಬ ದೇವಿಯ ಮೆರವಣಿಗೆ ಸಂದರ್ಭದಲ್ಲಿ ಹಳೇ ಮೈಸೂರಿನ ಭಾಗದಲ್ಲಿ ದವನ ಚುಚ್ಚಿದ್ದ ಬಾಳೇ ಹಣ್ಣನ್ನು ರಥದ ಮೇಲೆ ಎಸೆಯುವಂತೆ ಮಲೆನಾಡಿನ ಈ ಸಾಗರದಲ್ಲಿ ಮಾರಿಕಾಂಬೆಯ ರಥದ ಮೇಲೆ ವಿವಿಧ ಹರಕೆಗಳನ್ನು ಹೊತ್ತು ಹರಕೆಯ ಕೋಳಿಗಳನ್ನು ತೂರುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುವ ಸಂಪ್ರದಾಯವಿದೆ. ಈಡುಗಾಯಿ ಹಾಕಿದಾಗ ಕಾಯಿಯ ಚೂರನ್ನು ಆಯ್ದು ಕೊಳ್ಳಲು ನೂಗು ನುಗ್ಗಲು ಆಗುವಂತೆ ಇಲ್ಲಿಯೂ ಸಹಾ ಭಕ್ತಾದಿಗಳು ರಥದ ಮೇಲೆ ತೂರಿದ ಕೋಳಿಗಳನ್ನು ಹಿಡಿದು ತಮ್ಮ ಮನೆಯಲ್ಲಿ ಸಾಕಲು ತೆಗೆದುಕೊಂಡು ಹೋಗುವ ಭಕ್ತರ ದಂಡೂ ಸಾಕಷ್ಟಿರುತ್ತದೆ. ಈ ಹಿಂದೆ ಶಿರಸಿಯಂತೆಯೇ ಇಲ್ಲೂ ಸಹಾ ಬಲಿತ ಕೋಣದ ಬಲಿ ನೀಡುವ ಸಂಪ್ರದಾಯವಿತ್ತು. ಅದರೆ ಕಾಲಾನಂತರ ಅದಕ್ಕೆ ಹಲವರಿಂದ ವಿರೋಧ ಬಂದ ಕಾರಣ, ಇಲ್ಲಿಯೂ ಸಹಾ ದೇವಿಗೆ ಕೋಣನ ಬಲಿ ಕೊಡುವುದನ್ನು ನಿಷೇಧಿಸಿದರೂ, ಸಂಪ್ರದಾಯವಾದಿಗಳ ಮನಸ್ಸನ್ನು ನೋಯಿಸಲು ಇಚ್ಚಿಸದೇ, ಅಪ್ಪಾ ಹಾಕಿದ ಆಲದ ಮರಕ್ಕೆ ಜೋತು ಬೀಳಿದೇ, ನಿರಂತರ ಬದಲಾವಣೆಯೇ ನಮ್ಮ ಸನಾತನದ ಧರ್ಮದ ವೈಶಿಷ್ಟ್ಯ ಎನ್ನುವಂತೆ, ಸರ್ಕಾರೀ ಅಧಿಕಾರಿಗಳು ಮತ್ತು ಪಶು ವೈದ್ಯರ ಸಮ್ಮುಖದಲ್ಲಿ ಸಿರಿಂಜು ಮೂಲಕ ಕೋಣನ ರಕ್ತ ತೆಗೆದು ಆದನ್ನು ಮಾರಿಕಾಂಬೆಗೆ ಅರ್ಪಿಸುವ ಸಂಪ್ರದಾಯವನ್ನು ರೂಢಿಸಿಕೊಂಡು ಸಂಸ್ಕೃತಿಯ ಮಾನವೀಯತೆ, ಭಾವೈಕ್ಯತೆ ಮೆರೆಸುವ ಸಂಪ್ರದಾಯವನ್ನು ಆರಂಭಿಸಿರುವುದು ಅನುಕರಣೀಯವಾಗಿದೆ.
ಸಾಗರದಲ್ಲಿ ಜಾತ್ರೆಗೆ ಮತ್ತೊಂದು ಹಿನ್ನಲೆಯೂ ಇದ್ದು, ಅದರ ಪ್ರಕಾರ ಬಹಳ ಕಾಲದ ಹಿಂದೆ ಸಾಗರ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಾರಕ ರೋಗಗಳಾದ ಪ್ಲೇಗ್ ಮತ್ತು ಕಾಲರಾ ಜ್ವರಗಳಂತಹ ಸಾಂಕ್ರಾಮಿಕ ರೋಗಗಳು ಹರಡಿ ನೂರಾರು ಜನರನ್ನು ಬಲಿ ತೆಗೆದುಕೊಂಡಿತ್ತಂತೆ. ಅಂತಹ ಸಮಯದಲ್ಲಿ ಊರಿನ ಜನರು ಈ ರೋಗರುಜಿನಗಳಿಂದ ಜನರನ್ನು ಪಾರು ಮಾಡಿದಲ್ಲಿ, ಮಾರಿಕಾಂಬೆಗೆ ಅದ್ದೂರಿಯಾಗಿ ಜಾತ್ರೆಯನ್ನು ಮಾಡುವುದಾಗಿ ಹರಕೆ ಹೊತ್ತು ಕೊಂಡರಂತೆ. ಮಾರಿಕಾಂಬೆಯ ಆಶೀರ್ವಾದ ಎನ್ನುವಂತೆ, ಆ ಸಮಯದಲ್ಲಿ ಹರಡಿದ್ದ ಎಲ್ಲಾ ರೋಗ ರುಜಿನಗಳು ಸಂಪೂರ್ಣವಾಗಿ ಮಾಯವಾದ ನಂತರ ಸಂತಸಗೊಂಡ ಊರಿನ ಹಿರಿಯರು ಆರಂಭದಲ್ಲಿ ಸಣ್ಣದಾಗಿ ಪ್ರಾರಂಭಿಸಿದ ಜಾತ್ರೆಯು ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗಿ ಈಗ ಮೂರು ವರ್ಷಗಳಿಗೊಮ್ಮೆ ಬಹಳ ಅದ್ದೂರಿಯಿಂದ ನಡೆಸಲಾಗುತ್ತಿದೆ. ಹಾಗಾಗಿ ಪ್ರತೀ ಮೂರು ವರ್ಷಕ್ಕೊಮ್ಮೆ ಮಾರಿಕಾಂಬೆ ವನಕ್ಕೆ ಹೋಗುವ ಮುಂಚೆ ಆಕೆಯ ತಂಗಿ ಎಲ್ಲಮ್ಮಳೊಂದಿಗೆ ಭಾಷೆಯನ್ನು ತೆಗೆದುಕೊಳ್ಳುವ ಸಂಪ್ರದಾಯವಿದ್ದು, ನಾನು ಈಗ ಊರಿನ ಎಲ್ಲಾ ಕಷ್ಟ ಕಾರ್ಪಣ್ಯಗಳು, ರೋಗ ರುಜಿನಗಳು ಮತ್ತು ದುಃಖ ದರಿದ್ರಗಳನ್ನು ಹೊತ್ತು ಕೊಂಡು ಊರಿನಿಂದ ಹೊರಕ್ಕೆ ಹೋಗುತ್ತಿದ್ದೇನೆ. ನಾನು ಮತ್ತೆ ಹಿಂದಿರುಗುವ ವರೆಗೂ ಊರನ್ನು ಕಾಪಾಡುವ ಜವಾಬ್ಧಾರಿಯನ್ನು ನಿನ್ನ ಮೇಲೆ ಹೊರಿಸುತ್ತಿದ್ದೇನೆ ಎನ್ನುವ ಪ್ರತೀತಿ ಇದೆ. ಈ ಜಾತ್ರೆಯ ಹೊರತಾಗಿಯೂ ಮಾರಿಕಾಂಬೆಗೆ ನಿರಂತರವಾಗಿ ನಿತ್ಯ ಪೂಜೆ ನಡೆಯುತ್ತಲಿದ್ದು, ಹಬ್ಬ ಹರಿದಿನಗಳಲ್ಲದೇ, ಪ್ರತೀ ಶುಕ್ರವಾರ ಮತ್ತು ಮಂಗಳವಾರ ಕುಂಕುಮಾರ್ಚನೆಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಅದೇ ರೀತಿಯಲ್ಲಿ ನವರಾತ್ರಿ ಸಮಯದಲ್ಲಿಯೂ ಸಹಾ 9 ದಿನಗಳ ಕಾಲ ನವರಾತ್ರಿ ಉತ್ಸವವೂ ಬಹಳ ಸಡಗರ ಸಂಭ್ರಮದಿಂದ ನಡೆಯುತ್ತದೆ.
ಈ ಜಾತ್ರೆಗೆ ಕೇವಲ ಸಾಗರ ಮತ್ತು ಸುತ್ತಮುತ್ತಲಿನ ಪ್ರದೇಶವಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿ ನೆಲೆಸಿರುವ ಭಕ್ತಾದಿಗಳು ಸೇರಿ ಲಕ್ಷಗಟ್ಟಲೆ ಜನರು ಬರುವುದರಿಂದ ಅವರ ಬಾಯಾರಿಗೆ ಮತ್ತು ಹಸಿವನ್ನು ನೀಗಿಸಲು ಅನೇಕ ಸಂಘ ಸಂಸ್ಥೆಗಳು ಜಾತ್ರೆ ನಡೆಯುವ ಆಷ್ಟೂ ದಿನಗಲ ಕಾಲ ಉಚಿತವಾಗಿ ಬಗೆ ಬಗೆಯ ಪಾನೀಯಗಳು ಮತ್ತು, ಭೋಜನದ ವ್ಯವಸ್ಥೆ ಮಾಡುವುದು ಸಹಾ ವಿಶೇಷವಾಗಿದೆ. ಜಾತ್ರೆ ನಡೆಯುವ ಆಷ್ಟೂ ದಿನಗಳ ಕಾಲ ಜಾತ್ರೆಯ ಆಯೋಜಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಸ್ಥಳೀಯ ಪ್ರತಿಭೆಗಳಲ್ಲದೇ ವಿವಿಧ ಸ್ಥಳಗಳಿಂದ ಹೆಸರಾಂತ ಕಲಾವಿದರನ್ನು ಕರೆಸಿ ನಡೆಸುವ ಕಾರ್ಯಕ್ರಮವೂ ಸಹಾ ಮತ್ತೊಂದು ಆಕರ್ಷಣಿಯವಾದ ಸಂಗತಿಯಾಗಿದೆ.
ಇನ್ನು ಜಾತ್ರೆಯ ಸಮಯದಲ್ಲಿ ಮೈಸೂರಿನ ದಸರಾದಂತೆಯೇ ಇಲ್ಲಿಯೂ ಸಹಾ ಇಂದು ರೀತಿಯ ವಿಸ್ಮಯದ ಮಾಯಾಲೋಕವೇ ಸೃಷ್ಟಿಯಾಗಿರುತ್ತದೆ ಎಂದರು ತಪ್ಪಾಗದು. ಇಡೀ ನಗರಾದ್ಯಂತ ಎಲ್ಲಿ ನೋಡಿದರೂ ಅಲ್ಲೆಲ್ಲಾ ಬಗೆ ಬಗೆಯ ಪೆಂಡಾಲುಗಳು, ವಿದ್ಯುತ ಅಲಂಕಾರಗಳಲ್ಲದೇ, ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗೆ ರಾಜ್ಯದ ನಾನಾ ಭಾಗಗಳಿಂದ ಹೆಸರಾಂತ ಕುಸ್ತಿ ಪಟುಗಳು ಬಂದು ಸೆಣಸಾಡುವುದನ್ನು ನೋಡಲು ಸಹಸ್ರಾರು ಜನರು ಬಂದು ಸೇರುತ್ತಾರೆ. ಅದೇ ರೀತಿಯಾಗಿ ವಿವಿಧ ವಸ್ತುಗಳ ಪ್ರದರ್ಶನ, ಬಟ್ಟೆ ಬರೆಗಳು, ಆಟದ ಸಾಮಾನುಗಳಲ್ಲದೇ, ಇನ್ನು ಆಬಾಲ ವೃದ್ಧರಾದಿಯಾಗಿ ಎಲ್ಲರ ಮನರಂಜಿಸಲು ದೊಡ್ಡ ದೊಡ್ಡದಾದ ಗಿರಿಗೀಟ್ಲೆಗಳಲ್ಲದೇ, ಇತ್ತೀಚಿನ ಆಧುನಿಕ ಆಕರ್ಷಣೆಗಳಾದ ಟೋರಾ ಟೋರಾ, ಕೊಲಂಬಸ್ ನಂತಹ ದೋಣಿ, ಆಳವಾದ ವೃತ್ತಕಾರದ ಬಾವಿಯಲ್ಲಿ ಮೋಟಾರ್ ಸೈಕಲ್ ಓಡಿಸುವುದು, ಸರ್ಕಸ್ಸುಗಳು, ಜಾದೂ, ವಿವಿಧ ಆಟದ ಸ್ಪರ್ಧೆಗಳು ಒಂದೆಡೆಯಾದರೆ, ಜಾತ್ರೆಯ ಪ್ರಮುಖ ಆಕರ್ಷಣೆಯದ ಕಡ್ಲೇ ಪುರಿ, ಬೆಂಡು ಬತ್ತಾಸುಗಳನ್ನು ಮೀರಿಸುವಂತೆ ಬಗೆ ಬಗೆಯ ಸಿಹಿ ತಿಂಡಿಗಳು, ಪಾನಿಪುರಿ, ಮಸಾಲಪುರಿ, ಗೋಬಿ ಮಂಚೂರಿ, ಫ್ರೈಡ್ ರೈಸ್ ಗಳಂತಹ ಇತ್ತೀಚಿನ ತಿಂಡಿ ತಿನಿಸುಗಳು ಆಂಗಡಿಗಳು ಅಲ್ಲಿರುತ್ತದೆ, ಇದ್ದಲ್ಲದೇ ರಾಜಬೀದಿಯ ಉತ್ಸವದಲ್ಲಿ ಡೊಳ್ಳು, ಕೊಂಗು, ಕಹಳೆ, ಕೀಲು, ಕುದುರೆ, ನೃತ್ಯ, ಗೊಂಬೆಗಳ ನೃತ್ಯ, ಅನೇಕ ವೇಷಭೂಷಣಗಳಿಂದ ಕೂಡಿದ ಜಾನಪದ ಕಲೆಗಳು ಪ್ರಮುಖ ಆಕರ್ಷಣೀಯವಾಗಿರುತ್ತದೆ.
ಮಳೆ ನಿಂತು ಹೋದರೂ ಮರಡಡಿಯಲ್ಲಿ ಹನಿ ನಿಲ್ಲುವುದಿಲ್ಲ ಎನ್ನುವಂತೆ ಒಂಭತ್ತು ದಿನಗಳಲ್ಲಿ ಕಾಲ ಜಾತ್ರೆ ಮುಗಿದು ಹೋದರೂ, ಮೈಸೂರು ದಸರಾ ಮೈದಾನದಲ್ಲಿ ಇರುವಂತೆಯೇ ಜಾತ್ರೆ ಮುಗಿದ ಸುಮಾರು ಒಂದು ತಿಂಗಳುಗಳ ಕಾಲ ಈ ಎಲ್ಲಾ ಅಕರ್ಷಣೆಗಳು ಮುಂದುವರೆದು, ಜಾತ್ರೆಯ ಸಮಯದ ನೂಕು ನುಗ್ಗಲಿನಲ್ಲಿ ಬರಲಾಗದೇ ಹೋದವರು ಈಗ ಆರಾಮವಾಗಿ ಬಂದು ದೇವಿಯ ದರ್ಕನ ಪಡೆದು ತಮ್ಮ ಹರಕೆಯನ್ನು ತೀರಿಸಿಕೊಂಡು ಅಲ್ಲಿನ ಮೋಜು ಮಸ್ತಿಗಳಲ್ಲಿ ಭಾಗವಹಿಸಬಹುದಾಗಿದೆ. ಸಾಗರದ ಮಾರಿಕಾಂಬಾ ಜಾತ್ರೆಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕೆ ತಡಾ, ಇದೇ ವಾರಾಂತ್ಯದಲ್ಲಿ ಸಮಯ ಮಾಡಿಕೊಂಡು ಕುಟುಂಬ ಸಮೇತರಾಗಿ ಸಾಗರಕ್ಕೆ ಹೋಗಿ ಅಲ್ಲಿನ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ