ಕೆಲವೊಮ್ಮೆ ನಮ್ಮ ಜೀವನದಲ್ಲಿ ನಮಗೇ ಗೊತ್ತಿಲ್ಲದಂತೆ ಕೆಲವೊಬ್ಬರು ಅಚಾನಕ್ಕಾಗಿ ಬರುತ್ತಾರೆ. ಬಹಳ ಆತ್ಮೀಯರಾಗುತ್ತಾರೆ. ಅದೇ ರೀತಿ ಹೇಳದೇ ಕೇಳದೇ ಬಹಳ ಚಿಕ್ಕವಯಸ್ಸಿನಲ್ಲಿಯೇ ಅಕಾಲಿಕವಾಗಿ ನಮ್ಮನ್ನು ದುಃಖದ ಕಡಲಲ್ಲಿ ಬಿಟ್ಟು ಈ ಲೋಕವನ್ನೇ ಬಿಟ್ಟು ಹೋಗುತ್ತಾರೆ. ಯಾಕಪ್ಪಾ ಇಂತಹ ವೈರಾಗ್ಯದ ಮಾತು ಎಂದರೆ, ಅದು 2001-2002ರ ಸಮಯ. ಅಪ್ಪ ಕಟ್ಟಿದ ಮನೆಯಿಂದ ನಮ್ಮದೇ ಆದ ಸ್ವಂತದ್ದೊಂದು ಮನೆ ಕಟ್ಟಿಸಬೇಕು ಎಂದು ವಿದ್ಯಾರಣ್ಯಪುರಕ್ಕೆ ಬಂದು ತಂದೆ-ತಾಯಿ, ಅತ್ತೆ-ಮಾವದ ಜೊತೆ ಮಡದಿಯ ಸಹಕಾರದಿಂದ 2003ರಲ್ಲಿ ಮನೆ ಕಟ್ಟಿ, ಪೂರ್ವ ನಿರ್ಧಾರದಂತೆ ನಮ್ಮ ಹೊಸಾ ಮನೆಯಲ್ಲಿ ಸಂಘದ ಗುರು ಪೂಜೋತ್ಸವ ಕಾರ್ಯಕ್ರಮಕ್ಕೆ ಮೊತ್ತ ಮೊದಲಬಾರಿಗೆ ನಮ್ಮ ಮನೆಗೆ ಬಂದವನೇ ಮಹೇಂದರ್.
ಆಗಷ್ಟೇ ಎಂ.ಕಾಂ ಓದುತ್ತಿದ್ದ (ಕಲಾ ಮಾಧ್ಯಮ ಪರಮೇಶ್ವರ್ ಅವರ ಸಹಪಾಠಿ) ಇಲ್ಲವೇ ಮುಗಿಸಿದ್ದ ಬಹಳ ೨೨-೨೩ರ ಕುಳ್ಳನೆಯ ಪಟ ಪಟನೆ ಮಾತನಾಡುತ್ತಾ, ಎಲ್ಲರನ್ನು ನಗಿಸುತ್ತಿದ್ದ ತರುಣ ಸ್ವಯಂಸೇವಕ ಮಹೇಂದರ್ ನೋಡಿದ ಮೊದಲ ಬಾರಿಯೇ ಬಹಳ ವರ್ಷಗಳಿಂದಲೂ ಪರಿಚಯವೇನೋ ಎನ್ನುವಷ್ಟರ ಗೆಳೆಯನಾಗಿ ಹೋದ. ನಂತರ ಅವನ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದಾಗ ನಮ್ಮ ಮನೆಯಿಂದ ಕೇವಲ ಎರಡ್ಮೂರು ರಸ್ತೆ ಮೂರು ಆಚೆ ಇರುವ ಬಹಳ ಸ್ನೇಹಮಯಿ ಮತ್ತು ನಮ್ಮ ಇಡೀ ವಿದ್ಯಾರಣ್ಯಪುರದ ರಸ್ತೆ ರಸ್ತೆಗಳು ಅವನ ಕೈಗಳಲ್ಲಿರುವ ರೇಖೆಯಷ್ಟೇ ಪರಿಚಯವಿರುವ ಮತ್ತು ಕೇವಲ ರಸ್ತೆಗಳಷ್ಟೇ ಹಿರಿಯರು ಕಿರಿಯರು ಎನ್ನದೇ, ಅವನ ವಯಸ್ಸಿಗಿಂತಲೂ 20-30ವರ್ಷದ ಹಿರಿಯರಿಗೂ ಬಹಳ ಆತ್ಮೀಯನಾಗಿರುವ ಹುಡುಗ ಮಹಿ ಎಂದು ತಿಳಿದು ಬಂದ ನಂತರ. ನನಗೂ ಸಹಾ ಆತ ಆತ್ಮೀಯ ಮಹೀ ಆಗಿ ಬಿಟ್ಟ.
ವಿದ್ಯಾರಣ್ಯಪುರದ ಯಾವುದೇ ಧಾರ್ಮಿಕ ಅಥವಾ ಸಂಘದ ಕಾರ್ಯಕ್ರಮಗಳಾಗಿರಲೀ ಆತ ಎಷ್ಟೇ ಬ್ಯುಸಿ ಆಗಿದ್ದರೂ ಹೇಗೋ ಸಮಯ ಮಾಡಿಕೊಂಡು ತಪ್ಪದೆ ಹಾಜರಾಗುತ್ತಿದ್ದಲ್ಲದೇ, ಅಲ್ಲಿ ನನ್ನನ್ನು ಹುಡುಕಿ, ಅಕಸ್ಮಾತ್ ನಾನು ಅಲ್ಲಿರದೇ ಹೋದಲ್ಲಿ ಎಲ್ಲಿ ಜೀ.. ಕಾಣ್ತಾನೇ ಇಲ್ಲಾ ಎಂದು ಕಕ್ಕುಲತೆಯಿಂದ ವಿಚಾರಿಸುವಷ್ಟರ ಮಟ್ಟಿಗೆ ಆತ್ಮೀಯನಾಗಿದ್ದ. ಅನೇಕ ಬಾರಿ ನಾನು ಹೋಗದೇ ಇದ್ದ ಬೌದ್ಧಿಕ್, ಬೈಠಕ್ ಇಲ್ಲವೇ ಕಾರ್ಯಕ್ರಮಗಳ ಸಂಪೂರ್ಣ ವರದಿಯನ್ನು ಹೀಗೆ ನೀಡುತ್ತಿದ್ದ ಎಂದರೆ, ನಾನೇ ಆ ಕಾರ್ಯಕ್ರಮಕ್ಕೆ ಹೋಗಿದ್ದರೂ ಅಷ್ಟು ಮಾಹಿತಿ ಸಂಗ್ರಹಿಸುತ್ತಿರಲಿಲ್ಲವೇನೋ ಎಂದು ಅನಿಸುತ್ತಿದ್ದದ್ದಂತೂ ಸುಳ್ಳಲ್ಲ.
ನಂತರ ದಿನಗಳಲ್ಲಿ ಅವನು ಕೆಲಸಕ್ಕೆ ಹೋಗಲು ಆರಂಭಿಸಿದ್ದ. ನಾನೂ ನನ್ನ ಕೆಲಸದಲ್ಲಿ ಸ್ವಲ್ಪ ಬ್ಯುಸಿ ಆಗಿದ್ದ ಕಾರಣ ವಯಕ್ತಿಯವಾಗಿ ಭೇಟಿ ಆಗಲು ಸಾಧ್ಯವಾಗದೇ ಹೋದರೂ ವಾರಕ್ಕೊಂದು ಇಲ್ಲವೇ ಎರಡು ಬಾರಿಯಾದರೂ ಪೋನ್ ಮಾಡಿ ಏನು ಜೀ.. ಸುದ್ದೀನೇ ಇಲ್ಲಾ ಅಂತಾನೇ ಮಾತನಾಡಿಸಿ, ಇಡೀ ವಿದ್ಯಾರಣ್ಯಪುರದಲ್ಲಿ ನಡೆಯುತ್ತಿದ್ದ ಆಗೂ ಹೋಗುಗಳು ರಾಜಕೀಯ ಬದಲಾವಣೆಗಳು, ಈ ಬಾರಿ ಅವರಿಗೆ ಟಿಕೆಟ್ ಕೊಟ್ರೇ ಗೆಲ್ತಾರೆ. ಇವರಿಗೆ ಟಿಕೆಟ್ ಕೊಟ್ರೇ ನೂರು ಓಟು ಸಹಾ ಬರೋದಿಲ್ಲಾ ಎಂದು ಒಳ್ಳೆಯ ರಾಜಕೀಯ ವಿಶ್ಲೇಕನಂತೆಯೇ ಮಾತನಾಡುತ್ತಿದ್ದರೆ, ಇನ್ನೂ ಕೆಲವು ಬಾರಿ ನಾನೂ ಎಲ್ಲೋ ಹೋಗುತ್ತಿರುವ ಮಾರ್ಗದ ಮಧ್ಯದಲ್ಲೇ ಕರೆ ಮಾಡೀ, ಏನ್ ಜೀ.. ಇಲ್ಲಿದ್ದೀರಾ!! ಅಂತಾ ಕೇಳಿದಾಗ, ಅರೇ ಎಲ್ಲೋ ಇದ್ಯಾ ಮಹೀ.. ಅಂತಾ ಅಕ್ಕ ಪಕ್ಕ ಹುಡುಕುವಷ್ಟರಲ್ಲೇ ಓಡಿ ಬಂದು ತಬ್ಬಿಕೊಳ್ತಾ!! ಲವ್ ಮಾಕ್ ಟೇಲ್ ಸಿನಿಮಾದ ಹೆಂಗೆ ನಾವೂ!! ಎನ್ನುವಂತೆ ಹುಬ್ಬು ಹಾರಿಸುತ್ತಿದ್ದದ್ದು ನಿಜಕ್ಕೂ ಅಪ್ಯಾಯಮಾನವಾಗಿತ್ತಲ್ಲದೇ, ನನ್ನ ಬಗ್ಗೆ ಆಷ್ಟು ಮಮಕಾರ ತೋರುವ ಇಬ್ಬರು ತಂಗಿಯರ ಜೊತೆ ಆತನೂ ತಮ್ಮನಂತೆಯೇ ಕಾಣುತ್ತಿದ್ದ.
ಹೀಗೆ ನಾನು ಹೋದ ಬಂದ ಕಡೆಯಲ್ಲೆಲ್ಲಾ ನನ್ನ ಬಾಲದಂತೆಯೇ ಇರುತ್ತಿದ್ದ ಮಹೀ..ಗೆ ಮದುವೆ ಆದಾಗಾ.. ಇದೇನೋ ಚೈಲ್ಡ್ ಮ್ಯಾರೇಜೇನೋ!! ಎಂದು ರೇಗಿಸಿದ್ದೂ ಇನ್ನೂ ಹಚ್ಚ ಹಸಿರಾಗಿಯೇ ಇದೆ. ನೋಡ ನೋಡುತ್ತಿದ್ದಂತೆಯೇ ಸುಂದರವಾದ ಮಗಳು ಮತ್ತು ಆತನ ತದ್ರೂಪವೇ ಆದಂತನ ಮಗನ ತಂದೆಯಾದರೂ, ಅವನಿನ್ನು ಚಿಕ್ಕ ವಯಸ್ಸಿನ ಹುಡುಗನಂತೆಯೇ ಆಡುತ್ತಿದ್ದ. ಕಛೇರಿಯಲ್ಲಿ ಆದ ಸಣ್ಣ ಪುಟ್ಟ ಕಿರಿಕಿರಿಯಾಗಲೀ, ಇಲ್ಲವೇ ಕುಟುಂಬದಲ್ಲಿ ಆಗಬಹುದಾದ ಸಣ್ಣ ಪುಟ್ಟ ಸಮಸ್ಯೆಗಳಿಗೂ.. ಕರೆ ಮಾಡಿ ಜೀ.. ಏನಾಯ್ತು ಗೊತ್ತಾ.. ಎಂದು ಗಂಟೆ ಗಟ್ಟಲೆ ಮಾತನಾಡುತ್ತಾ, ಅದಕ್ಕೆ ನನ್ನಿಂದ ದೊರೆಯ ಬಹುದಾದ ಪರಿಹಾರಗಳನ್ನು ತಿಳಿದು ಥ್ಯಾಂಕ್ಸ್ ಜೀ.. ಎಂದು ಹೇಳುವುದನ್ನು ಮಾತ್ರಾ ಎಂದುಗೂ ಮರೆಯುತ್ತಿರಲಿಲ್ಲ.
ಇಷ್ಟೇಲ್ಲಾ ಹೇಳಿದ ಮೇಲೆ ಮಹೀ ಕೇವಲ ನನ್ನ ಹತ್ತಿರ ಮಾತ್ರಾ ಇಂತಹ ಅನ್ಯೋನ್ಯತೆ ಇತ್ತು ಎಂದು ತಿಳಿದರೆ ಅದು ದೊಡ್ಡ ತಪ್ಪಾಗುತ್ತದೆ. ಇದೇ ರೀತಿಯ ಸಂಬಂಧವನ್ನು ತನ್ನ ನೂರಾರು ಸ್ನೇಹಿತರೊಂದಿಗೆ ಇಟ್ಟುಕೊಳ್ಳುವ ಮೂಲಕ ಒಂದು ರೀತಿಯ ಅಜಾತ ಶತ್ರುವಾಗಿದ್ದರಿಂದಲೇ ನಮ್ಮ ಗೆಳೆಯರ ಬಹುತೇಕ ಸಭೆ ಸಮಾರಂಭಗಳಲ್ಲಿ ಮಹೀಗೆ ತಪ್ಪದೇ ಆಹ್ವಾನ ಇರುತ್ತಿತ್ತು ಮತ್ತು ಆ ರೀತಿ ಆಹ್ವಾನಿಸಿದವರ ಕಾರ್ಯಕ್ರಮಗಳಿಗೆ ಆದಷ್ಟೂ ತಪ್ಪದೇ ಹೋಗುವ ಮೂಲಕ ಎಲ್ಲರ ಗೆಳೆತನವನ್ನೂ ಗಟ್ಟಿಯಾಗಿರಿಸಿಕೊಳ್ಳುವ ಸ್ವಭಾವ ಆತನಿಗೆ ಜನ್ಮತಃ ಸಿದ್ದಿಸಿತ್ತು.
ನನ್ನ ಮತ್ತು ಅವನ ನಡುವಿನ ಬಾಂಧವ್ಯ ಗಟ್ಟಿಯಾಗಿಸುತ್ತಿದ್ದದ್ದೇ, ವಿದ್ಯಾರಣ್ಯಪುರದ ಹಿಂದೂ ಯುವಕರ ಸಂಘದ ವಾರ್ಷಿಕ ಗಣೇಶೋತ್ಸವ ಮತ್ತು ಆಗ್ಗಾಗ್ಗೆ ಬರುತ್ತಿದ್ದ ಎಲ್ಲಾ ಚುನಾವಣೆಗಳು. ಸಾಧಾರಣವಾಗಿ ಈ ಕುರಿತಾದ ಬೈಠಕ್ಕುಗಳಿಗೆ ನನಗೆ ಹೋಗಲು ಸಾಧ್ಯವಾಗದೇ ಹೋದಾಗ, ಅದರ ಎಲ್ಲಾ ವಿವರಗಳನ್ನೂ ನನಗೆ ತಪ್ಪಿಲ್ಲದೇ ತಿಳಿಸುತ್ತಿದ್ದನಲ್ಲದೇ, ಇಡೀ ಕಾರ್ಯಕ್ರಮದಲ್ಲಿ ತಪ್ಪದೇ ಎಲೆ ಮರೆ ಕಾಯಿಯಂತೆ ಅವರಿವರನ್ನು ನಗಿಸುತ್ತಲೇ ಭಾಗಿಯಾಗುತ್ತಿದ್ದ. ಇನ್ನು ಅವರ ಮನೆಯ ಎದುರಿಗಿದ್ದ ಸೆಂಟ್ ಫಿಲೋಮಿನಾಸ್ ಶಾಲೆಯೇ ಚುನಾವಣಾ ಬೂತ್ ಆಗಿರುತ್ತಿದ್ದರಿಂದ ಬಹುತೇಕ ಹುಡುಗರಿಗೆ ಅವರ ಮನೆಯೇ ಅಡ್ಡಾ. ನಮ್ಮ ಭೂತ್ ಸ್ವಲ್ಪ ದೂರದ ದೇವಮಾತಾ ಶಾಲೆಯಲ್ಲಿ ಇದ್ದ ಕಾರಣ (ಮಡದಿಯದ್ದು ಮಾತ್ರಾ ಸೆಂಟ್ ಫಿಲೋಮಿನಾಸ್ ಶಾಲೆ), ನಾನು ಮತ್ತು ನನ್ನ ಇತರೇ ಸ್ನೇಹಿತರು ಅಲ್ಲಿ ಇರುತ್ತಿದ್ದರೂ, ಆಗ್ಗಾಗ್ಗೇ ಅರೆ ಮಾಡುತ್ತಾ ಜೀ.. ಎಷ್ಟು ಆಯ್ತು ಓಟಿಂಗ್ ಪರ್ಸೆಂಟೇಜ್ ಅಂತ ಕೇಳುತ್ತಲೇ ಅಲ್ಲಿ ಆಗುತ್ತಿದ್ದ ರೋಚಕತೆಯನ್ನು ತಿಳಿಸುತ್ತಿದ್ದಲ್ಲದೇ, ಅಲ್ಲಿ ರಷ್ ಕಡಿಮೆ ಆಗುತ್ತಿದ್ದಂತೆಯೇ, ಜೀ.. ಈಗ ಸ್ವಲ್ಪ ಕಡಿಮೆ ಜನ ಇದ್ದಾರೆ. ಅಕ್ಕನನ್ನು ಕರೆದುಕೊಂಡು ಬಂದು ಓಟ್ ಹಾಕಿಸಿಬಿಡಿ ಜೀ.. ಎಂದು ಕಕ್ಕುಲತೆಯಿಂದ ತಿಳಿಸುತ್ತಿದ್ದ. ಸಂಜೆ ಚುನಾವಣೆ ಮುಗಿಯುತ್ತಿದ್ದಂತೆಯೇ ನಮ್ಮ ಬಹುತೇಕ ಆತ್ಮೀಯರು ಅವನ ಮನೆಯ ಮುಂದೆ ಬಂದು ಎಲ್ಲರೂ ಇಂಕ್ ಹಚ್ಚಿಕೊಂಡಿದ್ದ ಬೆರಳನ್ನು ತೋರಿಸುತ್ತಾ ಪೋಟೋ ತೆಗೆಸಿಕೊಳ್ಳುವುದು ನಮ್ಮ ಮತ್ತೊಂದು ರೂಢಿ. ಹಾಗಾಗಿ ಆ ಫೋಟೋಗಾಗಿ ಎಲ್ಲರನ್ನೂ ಒಗ್ಗೂಡಿಸುತ್ತಿದ್ದದ್ದೇ ಇದೇ ನಮ್ಮ ಮಹಿ.
ತನ್ನ ವಯಕ್ತಿಕ ಜೀವನದಲ್ಲಿ ಅದೆಷ್ಟೇ ಕಷ್ಟ ನಷ್ಟವಾಗಿದ್ದರೂ ಎಲ್ಲವನ್ನೂ ನನ್ನೊಂದಿಗೆ ಹೇಳಿಕೊಳ್ಳುತ್ತಿದ್ದರೂ ಎಂದಿಗೂ ನನ್ನ ಬಳಿಯಾಗಲೀ ಅಥವಾ ನನಗೆ ತಿಳಿದವರ ಬಳಿಯಾಗಲೀ ಅತ ಎಂದಿಗೂ ಆರ್ಥಿಕ ನೆರವನ್ನು ಕೇಳದ ಸ್ವಾಭಿಮಾನಿಯಾಗಿದ್ದದ್ದೇ ಆತನ ವಿಶೇಷ. ಕೆಲವೊಮ್ಮೆ ಆತನ ಮಾತುಗಾರಿಕೆಯೇ ಅವನಿಗೆ ಶತ್ರುವಾಗಿ ಪರಿಣಮಿಸಿ ಹಲವಾರು ಬಾರಿ. ಒಳ್ಳೊಳ್ಳೇ ಕೆಲಸವನ್ನು ಕಳೆದುಕೊಳ್ಳುವ ಸಂಧರ್ಭ ಬಂದರೂ, ಅಯ್ಯೋ ಬಿಡೀ ಜೀ.. ಇನ್ನೊಂದು ಕೆಲಸ ಸಿಗುತ್ತದೆ ಎಂದು ಹೇಳುವ ಹುಂಬನಾದರೂ ಮನಸ್ಸಿನಲ್ಲಿ ಅವರಿಗೆ ಕೆಲಸದ ಅಭಧ್ರತೆ ಸದಾಕಾಲವೂ ಕಾಡುತ್ತಿದ್ದಂತೂ ಸುಳ್ಳಲ್ಲ. ಒಂದೆರಡು ಬಾರಿ ನನಗೆ ತಿಳಿದವರ ಬಳಿ ಕೆಲಸ ಕೊಡಿಸಿದ್ದಾಗ ಎಂದಿನಂತೆ ಒಂದೆರಡು ವರ್ಷ ಕೆಲಸ ಮಾಡಿ ಅಲ್ಲಿಂದ ಬಿಟ್ಟು ಬಂದು ಮತ್ತೆ ಜೀ.. ಕೆಲಸ ಹೋಯ್ತು ಅಂತಾನೋ ಇಲ್ವೇ, ಕೆಲ್ಸ ಬಿಟ್ಟು ಬಂದೇ ಅಂತಾನೋ ಹೇಳಿ, ಬೇರೆ ಯಾವುದಾದ್ರೂ ಕೆಲ್ಸ ಇದ್ರೇ ಹೇಳಿ ಜೀ.. ಎಂದು ಕೇಳುತ್ತಿದ್ದ.
ಏಳೆಂಟು ವರ್ಷಗಳ ಹಿಂದೆ ವಿದ್ಯಾರಣ್ಯಪುರದಲ್ಲಿ ಸಾವಯವ ಸಂತೆ ಆರಂಭಿಸಿದಾಗ, ನಿರೀಕ್ಷೆಗೂ ಮೀರಿ ಜನರು ಪ್ರತಿಸ್ಪಂದಿಸಿದಾಗ, ತರಕಾರಿ ಮಾರಲು ಬರುತ್ತಿದ್ದ ವ್ಯಾಪಾರಿಗಳ ಬಳಿ ಅಷ್ಟು ಜನರು ಇರದಿದ್ದ ಕಾರಣ, ಆಯೋಜಕರಾದ ನಾವುಗಳೇ ಅವರೊಂದಿಗೆ ಕೈ ಜೋಡಿಸಿ ತರಕಾರಿ ತೂಕ ಹಾಕುವುದು, ಲೆಖ್ಖ ಹಾಕಿ ಹಣ ತೆಗೆದುಕೊಳ್ಳುವುದೆಲ್ಲವನ್ನೂ ಮಾಡುವಾಗ ಅದಾಗಲೇ ಮಹಂತೇಶ್, ಚಂದ್ರಶೇಖರ್, ಕುಮಾರ್, ಜಯಂತ್ ಜೊತೆ ಯಥಾ ಪ್ರಕಾರ ನನ್ನ ಜೊತೆಗೆ ಕೈ ಜೋಡಿಸಿದ್ದೇ ಮಹೀ. ಕರೆಯದೇ ಹೋದರು ಸುಮಾರು ತಿಂಗಳುಗಳ ಕಾಲ ನಿಸ್ವಾರ್ಥವಾಗಿ ನಮ್ಮ ಜೊತೆಗೆ ಸಾವಯವ ಸಂತೆ ಯಶ್ವಸಿಯಾಗಿ ನಡೆಸಲು ಸಹಕರಿಸಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಅದೇ ರೀತಿಯಾಗಿ ಜಾಲಹಳ್ಳಿಯಲ್ಲಿ ಪ್ರತೀ ವರ್ಷವೂ ಚಂದ್ರಶೇಖರ್ ಆಜಾದ್ ಅವರ ನೆನಪಿನಾರ್ಥ ನಡೆಸುವ ರಕ್ತದಾನ ಶಿಬಿರದಲ್ಲೂ ಮಹೀ ಹಾಜರಾಗುತ್ತಿದ್ದ. ಮಾವಿನ ಹಣ್ಣಿನ ಕಾಲದಲ್ಲಿ ಊರಿನ ಅವರ ತೋಟದಿಂದ ಬರುತ್ತಿದ್ದ ಮಾವಿನ ಹಣ್ಣುಗಳಲ್ಲಿ ನನ್ನ ಪಾಲೂ ಇದ್ದೇ ಇರುತ್ತಿತ್ತು.
ಎರಡು ತಿಂಗಳುಗಳ ಹಿಂದೆ ಇದ್ದಕ್ಕಿದಂತೆಯೇ ವ್ಯಾಟ್ಸಪ್ ಸಂದೇಶ ಕಳುಹಿಸಿ ಜೀ.. ನಿಮ್ಮ ರೇವಾ ಕಾಲೇಜ್ ಬಳಿ ಸಂದರ್ಶನಕ್ಕೆ ಬಂದಿದ್ದೀನಿ ಎಂದಾಗ, ಸಂದರ್ಶನ ಆದ ಕೂಡಲೇ ನಮ್ಮ ಮೇನ್ ಗೇಟ್ ಬಳಿ ಬಂದು ಕರೆ ಮಾಡು. ನಾನು ನಮ್ಮ ಸೆಕ್ಯುರಿಟಿಗೆ ಹೇಳಿ ಒಳಗೆ ಬಿಡಲು ಹೇಳ್ತೀನಿ ಎಂದು ಹೇಳಿದ ಸುಮಾರು ಒಂದು ಘಂಟೆಯೊಳಗೆ ಹೇಳಿದಂತೆ ನನನ್ನು ಭೇಟಿಯಾದಾಗ ಬಹಳ ಸೊರಗಿ ಹೋಗಿದ್ದನ್ನು ಕಂಡು ಇದೇನೋ ಮಹೀ ಹೀಗಾಗಿದ್ದೀಯಾ? ಎಂದು ಕೇಳಿದಾಗ ಜೀ.. ಕೆಲ ದಿನಗಳ ಹಿಂದೆ ಬ್ರೈನ್ ಸ್ಟ್ರೋಕ್ ಆಗಿತ್ತು. ಯಾರಿಗೂ ಹೇಳಲಿಲ್ಲ ಎಂದಾಗ, ನಾವೆಲ್ಲಾ ಸ್ನೇಹಿತರು ಅಂತಾ ಇರೋದು ಯಾಕೇ? ಮಣ್ಣು ಹೋರೋದಕ್ಕಾ ಎಂದು ಬೈದು ಹಾಗೇ ಬಯ್ಯುತ್ತಿದ್ದ ಸಮಯಕ್ಕೇ ಪ್ರದ್ಮಶ್ರೀ ವಿಜೇತ ದಿವ್ಯಾಂಗ ವೆಂಕಟೇಶ್ ನನ್ನನ್ನು ನೋಡಲು ನಮ್ಮ ಕಾಲೇಜಿಗೆ ಬಂದಾಗ ಇಬ್ಬರಿಗೂ ಒಬ್ಬರನ್ನೊಬ್ಬರನ್ನು ಪರಿಚಯಿಸಿ ಎಲ್ಲರೂ ಒಟ್ಟಿಗೆ ತಿಂಡಿ ತಿಂದು ಕಾಫೀ ಕುಡಿದು ಹೋದ ನಂತರ. thanks for hospatality ಎಂದು ಬಹಳ formal ಆಗಿ ಮೆಸೇಸ್ ಹಾಕಿದ್ದಾಗಲೋ, ಸ್ವಲ್ಪ ಚನ್ನಾಗಿ ತಿಂದುಂಡು ಮೊದಲಿನಂತೆಯೇ ದಷ್ಟ ಪುಷ್ಟನಾಗು ಎಂದು ಹಾಕಿದ್ದ ಮೇಸೇಜಿಗೆ I will be back with Bang ಎಂದು ತಿರುಗೆ ಮೆಸೇಜ್ ಕಳುಹಿಸಿದ್ದ.
ಆದಾದ ನಂತರ ಕಳೆದ ತಿಂಗಳು ದುರ್ಗಾಪರಮೇಶ್ವರಿಯ ವಾರ್ಷಿಕೋತ್ಸವದ ಸಂಧರ್ಭದಲ್ಲಿ ಕರಗದ ದಿನ ಕರೆ ಮಾಡೀ ಜಿ.. ಇವತ್ತೇ ಅಲ್ವಾ ಕರಗ.. ಊರಿಗೆ ಬಂದಿದ್ದೀನಿ. ಹಾಗಾಗಿ ಈ ಸಾರಿ ಕರಗ ಮಿಸ್ ಆಯ್ತು. ಹೇಗೂ ನೀವು ವಿಡೀಯೋ ಮಾಡ್ತೀರಲ್ವಾ ಅದರಲ್ಲೇ ನೋಡ್ತೀನಿ ಬಿಡಿ ಎಂದು ಕರೆ ಮಾಡಿದ್ದ. ನಂತರ ಬ್ರಹ್ಮರಥೋತ್ಸವದ ದಿನ ವಿದ್ಯಾರಣ್ಯ ಪುರ ಬಸ್ ಸ್ಟಾಂಡಿನ ಬಳಿ ಬಹಳ ಅದ್ದೂರಿಯಾಗಿ ಹೊಡೆಯುವ ಪಟಾಕಿಗಳ ವಿಡಿಯೋ ಮಾಡುವಾಗಲೂ ನನ್ನ ಜೊತೆಗೆ ಇದ್ದದ್ದೇ ಕಡೆಯದಾಗಿ ಅವನನ್ನು ನೋಡಿದ್ದು.
2026ರ ಏಪ್ರಿಲ್ 18 ಶನಿವಾರ ಮಧ್ಯಾಹ್ನ ನಮ್ಮೆಲ್ಲರಿಗೂ ಆತ್ಮೀಯರೂ ಮತ್ತು ಹಿರಿಯರಾದ ಶರಣಪ್ಪ ಅವರು ಕರೆ ಮಾಡಿ ಶ್ರೀಕಂಠಾ ನಮ್ಮ ಮಹೀ ಹೋಗ್ಬಿಟ್ಟಾ ಅಂದಾಗಲೇ ಜೀವ ಝಲ್ ಎಂದೆನಿಸಿ ಮತ್ತೊಮ್ಮೆ ಯಾವ ಮಹೀ ಏನಾಗಿತ್ತು ಎಂದಾಗ, ನೆನ್ನೆ ಸಂಜೆ low BP ಅಂತಾ ರಾಮಚಂದ್ರಪುರದ CANS hospitalಗೆ ಸೇರಿಸಿದ್ರು. ಇವತ್ತು ಮಧ್ಯಾಹ್ನ brain stroke ಆಗಿ ಹೋಗಿಬಿಟ್ಟಾ ಎಂದು ಹೇಳಿತ್ತಿದ್ದಂತೆಯೇ ನನಗೇ ಅರಿವಿಲ್ಲದಂತೆಯೇ ಕಣ್ಣೀರಿನ ಕಟ್ಟೆ ಒಡೆದು ಬಂದು ಕೂಡಲೇ ಅವರ ಮನೆ ಹತ್ತಿರ ಹೋಗುವಷ್ಟರಲ್ಲೇ ಅದಾಗಲೇ ಆವನ ಬಂಧು ಮಿತ್ರರು ಸೇರಿ ಬಿಟ್ಟಿದ್ದರು.
ಒಬ್ಬ ವ್ಯಕ್ತಿಯ ಸಾಧನೆ ಯಾವಾಗ ಗೊತ್ತಾಗುತ್ತದೆ ಎಂದರೆ ಅವನ ಅಂತಿಮ ಸಂಸ್ಕಾರಕ್ಕೆ ಎಷ್ಟು ಜನರು ಬಂದಿರುವುದರ ಮೂಲಕ ಗೊತ್ತಾಗುತ್ತದೆ ಎನ್ನುತ್ತಾರೆ ಹಿರಿಯರು. ನಮ್ಮ ಮಹಿಯ ವಿಚಾರದಲ್ಲಿ ಅದು ಅಕ್ಷರಶಃ ಸತ್ಯವೆನಿಸಿ, ಅವರ ಬಂಧುಗಳಿಗಿಂತಲೂ ಮಿತ್ರರ ಸಂಖ್ಯೆಯೇ ಹೆಚ್ಚಾಗಿತ್ತು. ಎಲ್ಲರ ಬಾಯಲ್ಲೂ ಅಯ್ಯೋ ಮೊನ್ನೇ ಇನ್ನೂ ಪೋನ್ ಮಾಡಿದ್ದ. ಒಂದು ವಾರದ ಹಿಂದೆ ಮಗನಿಗೆ ಕ್ರಿಕೆಟ್ ಬ್ಯಾಟ್ ತೆಗೆದುಕೊಳ್ಳುವ ಸಮಯದಲ್ಲಿ ಅಂಗಡಿಯಲ್ಲಿ ಸಿಕ್ಕಿ ನಮ್ಮ ಕಾಲವೆಲ್ಲಾ ಮುಗಿದು ಹೋಯ್ತು. ಇನ್ನೇನಿದ್ರೂ ನಮ್ಮ ಮಕ್ಕಳ ಕಾಲ ಎಂದಿದ್ದ ಎಂದು ಹೇಳಿದ್ದಾ ಅಂತ ಹೇಳಿದ್ರೇ. ಇನ್ನೊಬ್ಬರು ಶನಿವಾರ ಸಿಗೋಣ ಅಂದಿದ್ದ. ಆದರೆ ಈ ರೀತಿಯಾಗಿ ಅವನನ್ನು ನೋಡ್ತೀನಿ ಎಂದು ಭಾವಿಸಿರಲಿಲ್ಲ ಎಂದು ಹೇಳುತ್ತಿದ್ದಾಗ ಎಲ್ಲರಿಗೂ ಅವರಿಗೇ ಅರಿವಿಲ್ಲದಂತೆಯೇ ಕಣ್ಣೀರು ಸುರಿಯುತ್ತಿದ್ದದ್ದಂತೂ ಸುಳ್ಳಲ್ಲ.
ಆರನೇ ತರಗತಿಯಲ್ಲಿ ಓದುತ್ತಿರುವ ಮಗಳಿಗೆ ತಂದೆಯ ಅಗಲಿಕೆ ಸ್ವಲ್ಪ ಅರಿವಾಗಿ ಅಳುತ್ತಿದ್ದ ಅಮ್ಮನ ಪಕ್ಕ ಸುಮ್ಮನೇ ಕುಳಿತಿದ್ದರೆ, ಏನೂ ಅರಿಯದ ಎರಡನೇ ತರಗತಿಯ ಮಗ ಅಲ್ಲೇ ತನ್ನ ಪಾಡಿಗೆ ತಾನು ಆಡಿ ಕೊಳ್ಳುತ್ತಿದ್ದದ್ದನ್ನು ನೋಡಿದಾಗ, ಭಗವಂತ ನೀನೇಕೆ ಇಷ್ಟು ಕ್ರೂರಿಯಾದೇ.. ಯಾವುದೇ ದುರಾಭ್ಯಾಸ ಇರದಿದ್ದ, ಒಳ್ಳೆಯ ಸಭ್ಯ ವ್ಯಕ್ತಿಯನ್ನು ಇಷ್ಟು ಬೇಗ ಕರೆಸಿ ಕೊಂಡಿದ್ದು ಏಕೇ? ಎಂದು ಕೇಳಬೇಕು ಎನಿಸಿದರೂ, ಜಾತಸ್ಯ ಮರಣಂ ಧೃವಂ ಎನ್ನುವಂತೆ ಹುಟ್ಟಿದವರು ಸಾಯಲೇ ಬೇಕೆಂಬುದು ಈ ಜಗದ ನಿಯಮ. ಮೊನ್ನೆ ಯಾರೋ ನೆನ್ನೇ ಮಹಿ ಇಂದು ಮತ್ಯಾರೋ ಸಾಯಲೇ ಬೇಕೆಂದು ಸಮಾಧಾನ ಪಟ್ಟಿಕೊಂಡಿದ್ದೂ ಆಗಿತ್ತು. ಬಿಇಎಲ್ ಶಾಲೆಯಲ್ಲಿ ಬಾಲ್ಯದ ಸಹಪಾಠಿಗಳಿಂದ ಹಿಡಿದು ಪಿಯೂಸಿ, ಬಿಕಾಂ ಎಂಕಾಂ ಅಲ್ಲದೇ, ಅವನ ಜೊತೆ ಆಟವಾಡಿದ್ದವರು ಮತ್ತು ಕೆಲಸ ಮಾಡಿದ್ದವರೆಲ್ಲರೂ ಸೇರಿ ಸುಮಾರು ೯೦ವರ್ಷದ ವಯೋವೃದ್ಧರವರೆಗೂ ಮಹೀಯನ್ನು ನೋಡಲು ಬಂದಿದ್ದರೆಂದರೆ ಅವನೆಂತಹ ಸ್ನೇಹಮಯಿ ಮತ್ತು ಅಜಾತಶತ್ರು ಎಂಬುದು ತಿಳಿಯುತ್ತಿತ್ತು.
ನೆನ್ನೆ ರಾತ್ರಿ ಮನೆಗೆ ಬಂದು ನನ್ನ ಜೀವನದಲ್ಲಿ a brother from another mother ಎಂಬಂತಿದ್ದ ಮಹೀ ಕುರಿತಾದ ನುಡಿ ನಮನಗಳನ್ನು ಬರೆಯಲು ಆರಂಭಿಸಿದನಾದರೂ, ಬಿಟ್ಟೂ ಬಿಡದೇ, ಬಿಕ್ಕಳಿಸಿ ಬರುತ್ತಿದ್ದ ಆಳುವಿನ ಮಧ್ಯೆ ಬರೆಯಲು ಸಾಧ್ಯವಾದಾಗ ಸುಮ್ಮನೇ ಅರ್ಧ ಮುಗಿಸಿ ಬಿಟ್ಟಿದ್ದೆ. ಈಗಲೂ ಸಹಾ ಬಹಳ ಕಷ್ಟದಿಂದಲೇ ನನ್ನ ಆತ್ಮೀಯನಾಗಿದ್ದ ಮಹೇಂದರ್ (ಮಹೀ) ಆತ್ಮಕ್ಕೆ ಆ ಭಗವಂತ ಸದ್ಗತಿಯನ್ನು ನೀಡಲಿ ಮತ್ತು ಅಕಾಲಿಕವಾಗಿ ಅವನನ್ನು ಕಳೆದುಕೊಂಡ ಅವನ ಕುಟುಂಬಕ್ಕೆ ಆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಕೋರಿಕೊಳ್ಳುತ್ತೇನೆ.
ಪ್ರತೀ ಲೇಖನ ಓದಿದಾಗ, ಇಲ್ಲವೇ ವಿಡೀಯೋ ನೋಡಿದಾಗಲೂ ಸೂಪರ್ ಜೀ.. ನೀವೂ.. ಎನ್ನುತ್ತಿದ್ದ ಮಹೀ… ಸಾಧ್ಯವಾದರೆ, ನಿನ್ನ ಮಾತಿನ ಚಾಕಚಕ್ಯತೆಯಿಂದ ಯಮನನ್ನೂ ಮರುಳು ಮಾಡಿ ಮತ್ತೊಮ್ಮೆ ಮರಳಿ ಬರಲಿ ಎನ್ನುವ ಆಸೆ ಇನ್ನೂ ಜೀವಂತವಾಗಿದ್ದು, ಖಂಡಿತವಾಗಿಯೂ ಯಾವುದೋ ಒಂದು ರೀತಿಯಲ್ಲಿ ಮತ್ತೆ ಬರುವ ನಿರೀಕ್ಷೆಯಲ್ಲಿ ನಿನಗಾಗಿ ಕಾಯುತ್ತಿರುವೇ..
ಬಂದೇ ಬರ್ತೀಯಾ ತಾನೇ!!
ಏನಂತೀರೀ?
ನಿಮ್ಮವನೇ ಉಮಾಸುತ
ಮಹಿ ಅವರು ನಿಮ್ಮ ಮೂಲಕನೇ ನನಗೆ ಸಂತೇನಲ್ಲಿ ಪರಿಚಯ ಆಗಿದ್ರು ವಿಷಯ ಕೇಳಿ ತುಂಬಾ ಬೇಸರ ಆಯ್ತು ಪಾಪ ಚಿಕ್ಕ ವಯಸ್ಸಿನಲ್ಲಿ ಅವರು ಈ ರೀತಿಯಾದದ್ದು ತುಂಬಾ ಬೇಸರ ಆಯ್ತು ತುಂಬಾ ಚಟುವಟಿಕೆಯಿಂದ ಎಲ್ಲರನ್ನು ಮಾತಾಡಿಸ್ತಾ ಇದ್ರು, ನಮ್ಮ ಮೋದಿ ಕೇರ್ ಶಾಪ್ ಇದ್ದಾಗ ಅಲ್ಲಿಗೂ ಬರ್ತಾ ಇದ್ರೂ, ಅಲ್ಲೂ ಮಾತಾಡುತ್ತಿದ್ದೆ ತುಂಬಾ ಬೇಜಾರಾಯ್ತು ಅವರಿಗೆ ಮತ್ತು ಅವರ ಕುಟುಂಬಕ್ಕೆ ಈ ನೋವನ್ನು ಬರಿಸುವ ಶಕ್ತಿಯನ್ನು ಕೊಡ್ಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಧನ್ಯವಾದಗಳು ನೀವು ಬರೆದಿರುವ ಈ ಲೇಖನ ಕೂಡ ತುಂಬಾ ಚೆನ್ನಾಗಿ ಬರೆದಿದ್ದೀರ ತುಂಬಾ ಮನಸ್ಸಿಗೆ ಮುಟ್ಟುತ್ತಿದೆ.
LikeLike