ನಮಗೆಲ್ಲರಿಗೂ ರಾಮನವಮಿ ಹಬ್ಬದ ಬಗ್ಗೆ ತಿಳಿದಿದ್ದು, ದೇಶಾದ್ಯಂತ ಬಹಳ ಸಡಗರ ಸಂಭ್ರಮಗಳಿಂದ ಆಬಾಲವೃದ್ಧರಾದಿಯಾಗಿ ಎಲ್ಲರೂ ಆಚರಿಸುವುದನ್ನು ಕೇಳಿದ್ದೇವೆ. ಅರೇ ಪ್ರಭು ಶ್ರೀರಾಮ ಚಂದ್ರನ ಧರ್ಮಪತ್ನಿ ಸೀತೆಯ ಸೀತಾ ನವಮಿ ಅರ್ಥಾತ್ ಸೀತಾ ಜಯಂತಿ ಅಂತ ಹೇಳಿದ ತಕ್ಷಣಾ ಅರೇ, ಹೀಗೂ ಒಂದು ದಿನ ಇದೇಯೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವವರೇ ಹೆಚ್ಚಾಗಿರುವಾಗ, ಭೂ ತಾಯಿಯ ಮಗಳು, ಜನಕನ ಮಗಳಾದ ಜಾನಕಿ, ಶ್ರೀರಾಮಚಂದ್ರ ಪತ್ನಿ ಮತ್ತು ಲಕ್ಷ್ಮಿ ದೇವಿಯ ಅವತಾರವಾದ ಸೀತಾ ದೇವಿಯ ಜನ್ಮ ದಿನವಾದ ಸೀತಾ ನವಮಿಯ ಬಗ್ಗೆ ತಿಳಿಯೋಣ ಬನ್ನಿ.
ಪ್ರತೀ ವರ್ಷ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯಂದು ಪ್ರಭು ಶ್ರೀರಾಮ ನವಮಿ ಆಚರಿಸಿದಕ್ಕೆ ಸರಿಯಾಗಿ ಒಂದು ತಿಂಗಳ ನಂತರ ವೈಶಾಖ ಮಾಸದ ಶುಕ್ಲ ಪಕ್ಷದ ನವಮಿಯಂದು ಸೀತಾ ನವಮಿಯನ್ನಾಗಿ ಅಚರಿಸಲಾಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವಂತೆ ಮಿಥಿಲಾ ರಾಜ ಜನಕನು ತನ್ನ ರಾಜ್ಯದಲ್ಲಿ ಒಳ್ಳೆಯ ಮಳೆ ಬಿದ್ದು ತನ್ನ ರಾಜ್ಯ ಸಮೃದ್ಧಿಯಾಗಲಿ ಎಂಬ ಆಶಯದಿಂದ ಯಜ್ಞ ಮಾಡುವ ಸಲುವಾಗಿ ತನ್ನ ಮಿಥಿಲೆಯಲ್ಲಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾಗ, ಆತನ ನೇಗಿಲಿಗೆ ಗಟ್ಟಿಯಾದ ಚಿನ್ನದ ಪೆಟ್ಟಿಗೆ ಸಿಕ್ಕಿ ಹಾಕಿಕೊಂಡಾಗ, ಅದನ್ನು ಜಾಗ್ರತೆಯಿಂದ ತೆರೆದು ನೋಡಿದರೆ, ಆ ಪೆಟ್ಟಿಗೆಯಲ್ಲಿ ಬಹಳ ಮುದ್ದಾದ ಹೆಣ್ನು ಮಗುವೊಂದಿದ್ದನ್ನು ಕಂಡು ಅವರಿಗೆ ಬಹಳ ಸಂತೋಷವಾಗುತ್ತದೆ. ಅದುವರೆವಿಗೂ ಆತನಿಗೆ ಮಕ್ಕಳಿರದಿದ್ದ ಕಾರಣ, ಅಕೆಯನ್ನೇ ತನ್ನ ಮಗಳಾಗಿ ದತ್ತು ತೆಗೆದುಕೊಂದು ಆಕೆಗೆ ಸೀತಾ ಎಂದು ನಾಮಕರಣ ಮಾಡಲಾಗುತ್ತದೆ. ಹಾಗೆ ಸೀತಾ ಪದವೂ ಬಹಳ ಅರ್ಥಗರ್ಭಿತವಾಗಿದ್ದು ಸಂಸ್ಕೃತದಲ್ಲಿ, ಸೀತಾ ಎಂದರೆ ನೇಗಿಲಿನಿಂದ ಭೂಮಿಯಲ್ಲಿ ಎಳೆದ ಗೆರೆ ಎಂಬ ಅರ್ಥವಿದ್ದರೆ, ಮತ್ತೊಂದು ಅರ್ಥದ ಪ್ರಕಾರ ನೇಗಿಲಿನ ತುದಿಗೂ ಸಹಾ ಸೀತ ಎಂದು ಕರೆಯಲಾಗುತ್ತದೆ. ಹೀಗೆ ನೇಗಿಲಿನ ತುದಿಗೆ ಸಿಕ್ಕ ಕಾರಣ ಆಕೆಗೆ ಸೀತ ಎಂಬ ಹೆಸರಿಟ್ಟರೆ, ಆಕೆ ಜನಕನ ದತ್ತು ಮಗಳು ಅಥವಾ ಸಾಕು ಮಗಳಾಗಿದ್ದರಿಂದ ಆಕೆಗೆ ಜಾನಕಿ ಎಂಬ ಹೆಸರೂ ಸಹಾ ಇದೆ.
ವಾಲ್ಮೀಕಿ ರಾಮಾಯಣ, ಕಂಬ ರಾಮಾಯಣ ಅಥವಾ ರಾಮಚರಿತಮಾನಸದಲ್ಲಿ ಸೀತೆಯ ನಿಜವಾದ ಜನ್ಮದಾತರು ಯಾರು? ಎಂಬ ಬಗ್ಗೆ ತಿಳಿಸಿಲ್ಲವಾದರೂ, ಭಾರತದಲ್ಲಿರುವ ಕೆಲವು ಜನಪದ ರಾಮಾಯಣದ ಸೀತಾ ದೇವಿ ರಾವಣನ ಪತ್ನಿ ಮಂಡೋದರಿಯ ಮಗಳು ಎಂದು ತಿಳಿಸಲಾಗಿದೆ. ಈ ಆವೃತ್ತಿಗಳ ಪ್ರಕಾರ, ಮಂಡೋದರಿ ಮತ್ತು ರಾವಣನಿಗೆ ಮೊದಲ ಮಗುವಾಗಿ ಒಂದು ಹೆಣ್ಣು ಮಗು ಜನನವಾದಾಗ, ಆಕೆಯ ಜಾತಕದ ಪ್ರಕಾರ ಆ ಮಗುವಿನಿಂದಲೇ ಭವಿಷ್ಯದಲ್ಲಿ ರಾವಣನ ಸಾವಿಗೆ ಕಾರಣವಾಗುತ್ತದೆ ಎಂದು ಜ್ಯೋತಿಷ್ಯರೊಬ್ಬರು ತಿಳಿಸಿದ ಕಾರಣ, ಆ ಮಗು ಹುಟ್ಟಿದ ತಕ್ಷಣವೇ ಅದನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಅದನ್ನು ನೀರಿನಲ್ಲಿ ತೇಲಿ ಬಿಟ್ಟಾಗ ಅದು ಹಾಗೇ ಜನಕ ರಾಜನ ಮಿಥಿಲೆಯಲ್ಲಿ ಭೂಮಿಯ ಅಡಿಯಲ್ಲಿ ಸೇರಿಕೊಂಡಿತು ಎನ್ನಲಾಗಿದ್ದು, ಆ ಪುಟ್ಟ ಮಗು ಮಹಾಲಕ್ಷ್ಮಿಯ ಅಪರಾವತಾರ ಆಗಿದ್ದ ಕಾರಣ ಆ ಮಗು ಜೀವಂತವಾಗಿದ್ದು, ಜನಕನ ನೇಗಿಲಿಗೆ ಸಿಕ್ಕಿತು. ಇದೇ ಕಾರಣದಿಂದಾಗಿಯೇ ಹನುಮಂತನು ಸೀತಾ ದೇವಿಯನ್ನು ಅರಸಿಕೊಂಡು ಲಂಕೆಗೆ ಹೋಗಿದ್ದಾಗ, ಆತ ರಾವಣನ ಮಡದಿ ಮಂಡೋದರಿಯನ್ನು ನೋಡಿ ಅಕೆಯನ್ನೇ ಸೀತೆ ಎಂದು ತಪ್ಪು ತಿಳಿದುಕೊಂಡಿದ್ದನಂತೆ. ಏಕೆಂದರೆ ಈ ಕಥೆಯ ಪ್ರಕಾರ ಮಂಡೋದರಿ ಮತ್ತು ಸೀತೆ ತಾಯಿ ಮಗಳಾಗಿದ್ದ ಕಾರಣ, ಅವರಿಬ್ಬರ ಸೌಂದರ್ಯ ಮತ್ತು ರೂಪದಲ್ಲಿ ಸಾಮ್ಯತೆ ಬಹಳಷ್ಟು ಇತ್ತು ಎನ್ನುತ್ತದೆ ಈ ಜಾನಪದ ಕಥೆ.
ಸೀತಾ ದೇವಿಯು ತ್ಯಾಗ, ತಾಳ್ಮೆ, ಸದ್ಗುಣ ಮತ್ತು ದೈವಿಕ ಸ್ತ್ರೀತ್ವದ ಮೂರ್ತ ರೂಪವಾಗಿರುವ ಕಾರಣ,ಸೀತಾ ನವಮಿಯಂದು ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಬೆಳ್ಳಂ ಬೆಳಿಗ್ಗೆ ಎದ್ದು ಮನೆಯ ಮುಂದೆ ಸಾರಿಸಿ ಗುಡಿಸಿ ಚಂದನೆಯ ರಂಗೋಲಿ ಹಾಕಿ, ಮನೆಯ ದೇವರ ಕೋಣೆಯಲ್ಲಿ ಸೀತಾ ದೇವಿ ಮತ್ತು ಶ್ರೀರಾಮನ ವಿಗ್ರಹ ಇಲ್ಲವೇ ಪಟವನ್ನಿಟ್ಟು ಅದಕ್ಕೆ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸುತ್ತಾರಲ್ಲದೇ ನೈವೇದ್ಯಕ್ಕೆ ಎಳ್ಳು, ಅಕ್ಕಿ, ಬಾರ್ಲಿ ಮತ್ತು ಹಣ್ಣುಗಳನ್ನು ಅರ್ಪಿಸುತ್ತಾರೆ. ಈ ದಿನ ಉಪವಾಸ ವ್ರತವನ್ನು ಆಚರಿಸುತ್ತಾರೆ. ಇನ್ನು ದೇವಾಲಯಗಳಲ್ಲಿಯೂ ವಿಶೇಷವಾಗಿ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುವುದಲ್ಲದೇ ಭಜನೆ ಮತ್ತು ಉಪನ್ಯಾಸಗಳನ್ನು ನಡೆಸುವ ಮೂಲಕ ಸೀತಾ ಜಯಂತಿಯನ್ನು ಆಚರಿಸಲಾಗುತ್ತದೆ.
ಪ್ರಸ್ತುತ ಬಿಹಾರ ರಾಜ್ಯದ ಉತ್ತರ ಭಾಗದ ಲಖಂಡೈ ನದಿಯ ಪಶ್ಚಿಮ ದಂಡೆಯಲ್ಲಿರುವ ಅಂದು ಮಿಥಿಲಾ ರಾಜ್ಯದ ಭಾಗವಾಗಿ ಭೂಮಿಯಲ್ಲಿ ಜನಕನಿಗೆ ಸೀತೆ ಸಿಕ್ಕಿದ್ದರಿಂದ ಆ ಗ್ರಾಮಕ್ಕೆ ಸೀತೆಯ ನೆನಪಿನಿಂದಾಗಿ ಸೀತಾಮರ್ಹಿ ಎಂಬ ಹೆಸರು ಬಂದಿದ್ದು, ಇಂದಿಗೂ ಸಹಾ ಸೀತಾಮರ್ಹಿ ನಗರದಲ್ಲಿ, ಜಾನಕಿ ನವಮಿಯ ದಿನದಂದು ಅಂತರ ಗೃಹ ಪರಿಕ್ರಮ ಎಂಬ ವಿಶಿಷ್ಠವಾದ ಸಂಪ್ರದಾಯವಿದೆ. ಸೀತಾನವಮಿಯ ಪ್ರಮುಖ ಆಕರ್ಷಣೆಯೇ ಅಂತರ ಗೃಹ ಪರಿಕ್ರಮ ಎಂದು ಕರೆಯಲ್ಪಡುವ ನಗರದ ಒಂದು ದಿನದ ಆಂತರಿಕ ಪ್ರದಕ್ಷಿಣೆಯಾಗಿದ್ದು, ಅಂದು ಸೀತಾ ದೇವಿ ಕಾಣಿಸಿಕೊಂಡಿದ್ದಾಳೆಂದು ನಂಬಲಾಗಿರುವ ಪವಿತ್ರ ಉರ್ವಿಜಾ ಕುಂಡದಲ್ಲಿ ಪ್ರಾರ್ಥನೆ ಮತ್ತು ಜಪಗಳಿಂದ ಪ್ರಾರಂಭವಾಗಿ ನೆರೆದಿರುವ ಭಕ್ತಾದಿಗಳೆಲ್ಲರೂ ಇಡೀ ದಿನ ಭವ್ಯವಾಗಿ ಸೀತಾಮರ್ಹಿ ಧಾಮ ಪರಿಕ್ರಮವನ್ನು ಮಾಡಿ ನಂತರ ಪರಿಕ್ರಮ ಆರಂಭಗೊಂಡ ಉರ್ವಿಜಾ ಕುಂಡದಲ್ಲಿಯೇ ಮುಕ್ತಾಯವಾಗುತ್ತದೆ. ಇನ್ನು ಆ ನಗರದಲ್ಲಿರುವ ಜಾನಕಿ ದೇವಾಲಯದಲ್ಲಿ ಪ್ರಭು ಶ್ರೀರಾಮ ಮತ್ತು ಸೀತಾಮಾತೆಗೆ ಮಹಾ ಅಭಿಷೇಕ ಮಾಡಿ ನಂತರ ಸುಂದರವಾದ ಹೂವುಗಳಿಂದ ಅಲಂಕರಿಸಿ ನಂತರ ಅದರ ಸುತ್ತಲೂ ವಿವಿಧ ರೀತಿಯ ದೀಪಾಲಂಕಾರ ಮಾಡಿ ವಿಶೇಷವಾದ ಮಂಗಳಾರತಿಯನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಸೀತಾ ಮತ್ತು ರಾಮನ ವಿವಾಹವನ್ನು ಸಾಂಕೇತಿಕವಾಗಿ ಪುನರಾವರ್ತನೆ ಮಾಡಿ ರಾಮ ಸೀತೆಯ ಉತ್ಸವಮೂರ್ತಿಯ ಮದುವೆ ದಿಬ್ಬಣದ ಮೆರವಣಿಗೆಯನ್ನು ಸಹಾ ಮಾಡಲಾಗುತ್ತದೆ.
ಇನ್ನು ಸೀತಾ ನವಮಿಯ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದ್ದು, ಈ ದಿನದಂದು ಸುಂದರವಾದ ಪೂಜಾ ಮಂಟಪವನ್ನು ಸ್ಥಾಪಿಸಿ ಆದಕ್ಕೆ ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ, ಆ ಮಂಟಪದಲ್ಲಿ ರಾಮ, ಸೀತೆ, ಲಕ್ಷ್ಮಣರಲ್ಲದೇ, ಸೀತಾಮಾತೆಯ ಸಾಕು ತಂದೆ ತಾಯಿಯರಾದ ಜನಕ ಮಹಾರಾಜ ಮತ್ತು ರಾಜಮಾತೆ ಸುನೈನರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದೇ ದಿನ ಜನಕ ಮಹಾರಾಜನಿಗೆ ಭೂ ಗರ್ಭದಲ್ಲಿ ಸೀತಾ ಮಾತೆ ಸಿಕ್ಕಿದ್ದರಿಂದ ಭೂದೇವಿಯನ್ನೂ ಸಹಾ ಪೂಜಿಸಿ, ಭೂತಾಯಿತಿಗೆ ಎಳ್ಳು, ಅಕ್ಕಿ ಮತ್ತು ಬಗೆ ಬಗೆಯ ಹಣ್ಣುಗಳು ಸೇರಿದಂತೆ ವಿವಿಧ ರೀತಿಯ ನೈವೇದ್ಯಗಳನ್ನು ಅರ್ಪಿಸುತ್ತಾರೆ. ಅದೇ ರೀತಿ ಇದಕ್ಕಾಗಿಯೇ ವಿಶೇಷ ಭೋಜನವನ್ನು ನೈವೇದ್ಯ ರೂಪದಲ್ಲಿ ತಯಾರಿಸಿ ಅದನ್ನು ಸೀತಾಮಾತೆಗೆ ಅರ್ಪಿಸಿದ ನಂತರ ಸೀತಾ ನವಮಿ ಪೂಜೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರು ಸೇವಿಸುತ್ತಾರೆ. ಅದೇ ರೀತಿಯಲ್ಲಿ ದೇಶಾದ್ಯಂತದ ಇರುವ ವಿವಿಧ ರಾಮ ಮಂದಿರಗಳಲ್ಲಿ ಸೀತಾ ನವಮಿಯಂದು ವಿಶೇಷ ಪೂಜೆಗಳನ್ನು ನಡೆಸಲಾಗುವುದಲ್ಲದೇ, ಬಹುತೇಕ ದೇವಾಲಯಗಳಲ್ಲಿ ಭಜನೆಗಳು ಮತ್ತು ಕೀರ್ತನೆಗಳೊಂದಿಗೆ ರಾಮಾಯಣ ಪಠಣಗಳನ್ನು ಸಹ ಮಾಡಲಾಗುತ್ತದೆ.
ಸೀತಾ ಮಾತೆಯು ಓರ್ವ ಆದರ್ಶ ಮಗಳು, ಹೆಂಡತಿ ಮತ್ತು ತಾಯಿಯಾಗಿ ತನ್ನ ಸದ್ಗುಣಗಳು ಮತ್ತು ಗುಣಲಕ್ಷಣಗಳಿಂದಾಗಿ ಗೌರವಿಸಲ್ಪಟ್ಟಿದ್ದಾಳೆ ಮತ್ತು ಹೆಣ್ತನದಲ್ಲಿ ಉದಾತ್ತವಾದ ಎಲ್ಲವನ್ನೂ ಸಂಕೇತಿಸುತ್ತಾಳೆ. ಸೀತಾ ನವಮಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೆ ಇನ್ನೇಕೆ ತಡಾ, ನಮ್ಮ ಮನೆಯ ಮುತ್ತೈದೆಯರೂ ಸಹಾ ತಮ್ಮ ತಮ್ಮ ಪತಿಯ ಆರೋಗ್ಯ ವೃದ್ಧಿ, ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಉಪವಾಸ ವೃತದೊಂದಿಗೆ ಸೀತಾಮಾತೆಗೆ ವಿಶೇಷ ಪೂಜೆಯನ್ನು ಸಲ್ಲಿಸುರುವ ಮೂಲಕ ತಮ್ಮ ದಾಂಪತ್ಯ ಜೀವನದ ಸುಖ ಸಂತೋಷವನ್ನು ವೃದ್ಧಿಯಾಗಿಸಿಕೊಳ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ