ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ನಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಬಹುತೇಕ ನಾಗರಿಕತೆಗಳು ನದಿಯ ಸುತ್ತಮುತ್ತಲೇ ಹುಟ್ಟಿಕೊಂಡಿದ್ದು ನಂತರ ಆ ಸಾಮ್ರಾಜ್ಯದ ವಿಸ್ತರಣೆಗಳು, ವ್ಯಾಪಾರ ಮತ್ತು ವಹಿವಾಟುಗಳು ಅಯಾಯಾ ಪ್ರದೇಶಕ್ಕೆ ಸೇರಿದ ಬಂದರುಗಳು ಮತ್ತು ಸಮುದ್ರ ಮಾರ್ಗಗಳ ಮೂಲಕ ನಿರ್ಮಾಣವಾಗಿವೆ.  ಜಾಗತಿಕ ಶಕ್ತಿಯಾಗಲು ಬಯಸುವ ಯಾವುದೇ ರಾಷ್ಟ್ರಕ್ಕೆ ಸಮುದ್ರವೇ ಮೊದಲ ಶಕ್ತಿಯಾಗಿದ್ದು ಅದನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತದೆಯೋ ಆಷ್ಟರ ಮಟ್ಟಿಗೆ ಆ ರಾಷ್ಟ ಬಲಿಷ್ಟವಾಗುತ್ತದೆ ಎನ್ನುವುದಕ್ಕೆ ಇತ್ತೀಚಿನ ಇರಾನ್ ಮತ್ತು ಅಮೇರಿಕಾದ ಯುದ್ಧದ ನಂತರ ಇರಾನ್ ಹಾರ್ಮುಜ್ ಬಂದರನ್ನು ಬಳಸಿಕೊಂಡು ಜಾಗತಿಕವಾಗಿ ಇಡೀ ವಿಶ್ವವನ್ನೇ ಹೇಗೆ ಆಟವಾಡಿಸುತ್ತಿದೆ ಎಂಬುದೇ ಜ್ವಲಂತ ಉದಾಹರಣೆಯಾಗಿದೆ.

ನಮ್ಮ ಭಾರತ ದೇಶದ ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ: ಅರಬ್ಬೀ ಸಮುದ್ರ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಹೀಗೆ ಮೂರು ಕಡೆ ನೀರಿನಿಂದ ಆವೃತವಾಗಿ ಒಂದು ಕಡೆ ಭೂಮಿಯಿಂದ ಆವೃತವಾಗಿರುವ ಪರ್ಯಾಯ ದ್ವೀಪವಾಗಿದೆ. ಹೀಗೆ ಭೌಗೋಳಿಕವಾಗಿ ಕಡಲ ಚಟುವಟಿಕೆಗಳಿಗೆ ಅತ್ಯಂತ ಅನುಕೂಲಕರ ರಾಷ್ಟ್ರಗಳಲ್ಲಿ ಒಂದಾಗಿದ್ದು, 10,000 ಕಿ.ಮೀ.ಗೂ ಹೆಚ್ಚು ಕರಾವಳಿಗಳು , ಹಿಂದೂ ಮಹಾಸಾಗರದ ಪ್ರಮುಖ ವ್ಯಾಪಾರ ಮಾರ್ಗಗಳ ಕೇಂದ್ರ ಸ್ಥಾನ, ಹಲವಾರು ನೈಸರ್ಗಿಕ ಆಳ-ನೀರಿನ ಬಂದರುಗಳು ಮತ್ತು ಅನುಕೂಲಕರ ಮಾನ್ಸೂನ್ ಮಾರುತಗಳು ಐತಿಹಾಸಿಕವಾಗಿ ಸಂಚರಣೆಗೆ ಸಹಾಯ ಮಾಡುತ್ತವೆಯಾದರೂ, ಭಾರತವು ಅತ್ಯಂತ ಕಡಿಮೆ ಸಾಮರ್ಥ್ಯದಲ್ಲಿ ತನ್ನ ಕಡಲ ಸಂಪತ್ತು ಮತ್ತು ಮಾರ್ಗವನ್ನು ಬಳಸಿಕೊಳ್ಳುತ್ತಿದೆ ಎಂದು ತಿಳಿಸಲು ಬಹಳ ಬೇಸರ ಎನಿಸುತ್ತದೆ.

ನೌಕಾ ಶಕ್ತಿ ಮತ್ತು ಕಡಲ ವ್ಯಾಪಾರದ ನಿರ್ಲಕ್ಷ್ಯದಿಂದಾಗಿಯೇ ಶತಶತಮಾನಗಳಿಂದ ಭಾರತದ ಮೇಲೆ ಜಾಗತಿಕ ಶಕ್ತಿಗಳ ಆಕ್ರಮಣ ಮತ್ತು ವಸಾಹತುಶಾಹಿ ಶೋಷಣೆಗೆ ಕಾರಣವಾಗಿರುವುದರ ಹೊರತಾಗಿಯೂ, ಸ್ವಾತಂತ್ರ್ಯದ ನಂತರವೂ ನಮ್ಮ ದೇಶವನ್ನು ಆಳಿದ ಸರ್ಕಾರಗಳು ಇದರಿಂದ ಯಾವುದೇ ಪಾಠಗಳನ್ನು ಕಲಿಯದೇ ತನ್ನ ಕಡಲ ಸಾಮರ್ಥ್ಯವನ್ನು ಸೂಕ್ತವಾಗಿ ಬಳಸಿಕೊಳ್ಳದೇ ಇರುವುದು ಅಕ್ಷಮ್ಯ ಅಪರಾಧ ಎಂದರೂ ತಪ್ಪಾಗದು. ಸಿಂಗಾಪುರ, ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯಾ ಅಥವಾ ಚೀನಾದಂತಹ ಇತರ ಸಣ್ಣ ಅಥವಾ ಕಡಿಮೆ ಅನುಕೂಲಕರ ಸ್ಥಾನದಲ್ಲಿರುವ ರಾಷ್ಟ್ರಗಳು ತಮ್ಮ ಕಡಲ ಮಾರ್ಗವನ್ನು ಅತ್ಯಂತ ಸಮರ್ಥವಾಗಿ ವ್ಯಾಪಾರ, ರಕ್ಷಣೆ ಮತ್ತು ತಮ್ಮ ದೇಶದ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತಿರುವುದನ್ನು ನೋಡಿಯೂ ಸಹಾ ಹಲವಾರು ದಶಕಗಳಿಂದ ನಾವು ನಮ್ಮ ಸಮುದ್ರ ಸಾಮರ್ಥ್ಯದ ಶೇ 50ರಷ್ಟನ್ನೂ ಸಹ ಬಳಸುತ್ತಿಲ್ಲ. ವಿಪರ್ಯಾಸವೆಂದರೆ, ನಮ್ಮ ನೆರೆಹೊರೆಯವರು ನಮ್ಮ ನೀರಿನಿಂದ ಲಾಭ ಪಡೆಯುತ್ತಿದ್ದರೂ, ನಾವು ನಮ್ಮ ಭೌಗೋಳಿಕ ಸಂಪತ್ತನ್ನು ಬಳಸಿಕೊಳ್ಳದೆ ಹಿಂದುಳಿದಿದ್ದೇವೆ.

2025–26ರ ವರದಿಯಂತೆ ನಮ್ಮ ನೆರೆಹೊರೆ ರಾಷ್ಟ್ರಗಳಾದ ಚೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಹಡಗು ನಿರ್ಮಾಣ ಮಾರುಕಟ್ಟೆಯ 92% ಕ್ಕಿಂತ ಹೆಚ್ಚು ನಿಯಂತ್ರಣ ಹೊಂದಿದದ್ದರೆ, ಭಾರತವು ಜಾಗತಿಕ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ 1% ಕ್ಕಿಂತ ಕಡಿಮೆ ಪಾಲನ್ನು ಹೊಂದಿದ್ದು, ವಿಶ್ವದ 16 ನೇ ಸ್ಥಾನದಲ್ಲಿದೆ.

ಹಾಗೆ ನೋಡಿದರೆ, ಚೋಳರು ಮತ್ತು ಮರಾಠರ ನೌಕಾ ಶಕ್ತಿ, ವ್ಯಾಪಾರದ ಪ್ರಭಾವ ಮತ್ತು ಕಾರ್ಯತಂತ್ರದ ಪ್ರತಿಭೆಯು ಪ್ರಗತಿ ಮತ್ತು ಶಕ್ತಿಯ ಮಾರ್ಗಗಳಾಗಿ ಮಾರ್ಪಡಿಸಿಕೊಂಡು ಸಾಗರಗಳ ಅವಕಾಶಗಳನ್ನು ಸೇತುವೆಗಳಾಗಿ ಬಳಸಿಕೊಂಡು ಹಡಗು ನಿರ್ಮಾಣ ಮತ್ತು ಕರಾವಳಿ ವ್ಯಾಪಾರಕ್ಕೆ ಹೆಸರುವಾಸಿಯಾಗಿತ್ತು. ಅದಕ್ಕಿಂತಲೂ ಮುಂಚೆಯೇ 1498 ರಲ್ಲಿ ವಾಸ್ಕೋ ಡ ಗಾಮಾ ಹಿಂದೂ ಮಹಾಸಾಗರದ ಮೂಲಕ ಭಾರತಕ್ಕೆ ಒಂದು ಸುರಕ್ಷಿತವಾದ ಮಾರ್ಗವನ್ನು ಕಂಡುಹಿಡಿಯಲು ಹೆಣಗಾಡುತ್ತಿದ್ದಾಗ, ಮಾನ್ಸೂನ್ ಮಾರುತಗಳು ಮತ್ತು ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳಲ್ಲಿ ಚೆನ್ನಾಗಿ ಪರಿಣತಿ ಹೊಂದಿದ್ದ ಗುಜರಾತ್ ಮೂಲಕ ಕಾಂಜಿ ಮಾಲಂ ಎಂಬ ವ್ಯಾಪಾರಿ ಅಗತ್ಯವಾದ ಸಂಚರಣೆ ಜ್ಞಾನವನ್ನು ಒದಗಿಸಿ, ವಾಸ್ಕೋಗೆ ದ ವೇ ಎಂದು ತೋರಿಸಿದ ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ. ಎಲ್ಲಕ್ಕಿಂತಲೂ ಅಚ್ಚರಿಯ ವಿಷಯ ಎಂದರೆ, ಕಾಂಜಿ ಮಾಲಂ ಅವರ ಹಡಗು ವಾಸ್ಕೋ ಡ ಗಾಮನ ಹಡಗಿಗಿಂತ ಗಮನಾರ್ಹವಾಗಿ ದೊಡ್ಡದಾಗಿದ್ದು, ಆ ಹಡಗಿನಲ್ಲಿ ಎಲ್ಲಾ ರೀತಿಯ ಸರಕುಗಳೂ ಇದ್ದು ಸಮುದ ಮಾರ್ಗದ ಮಧ್ಯದಲ್ಲೇ ವ್ಯಾಪಾರ ವಹಿವಾಟುಗಳನ್ನು ನಡೆಸುವಷ್ಟರ ಮಟ್ಟಿಗೆ ಇತ್ತು ಎನ್ನಲಾಗುತ್ತದೆ.

ಅದೇ ರೀತಿಯಲ್ಲಿ ಭಾರತದ ಹಡಗು ನಿರ್ಮಾಣ ತಂತ್ರಜ್ಞಾನವು ಸುಮಾರು 2,000 ವರ್ಷಗಳಷ್ಟು ಹಳೆಯದಾಗಿದ್ದು, ಆಗಿನ ಕಾಲದಲ್ಲಿ ಮರದ ಹಲಗೆಗಳಿಗೆ ನೀರಲ್ಲಿ ಸುಲಭವಾಗಿ ತುಕ್ಕು ಹಿಡಿಯುವ ಕಬ್ಬಿಣದ ಮೊಳೆಯನ್ನು ಬಳಸದೇ ನೀರಿನಲ್ಲಿ ನೆನದಷ್ಟೂ ಗಟ್ಟಿಯಾಗುವ ತೆಂಗಿನ ಹಗ್ಗವನ್ನು ಬಳಸಿ (ತಂಕೈ ತಂತ್ರ) ಹಡಗುಗಳನ್ನು ನಿರ್ಮಿಸುವ ಪದ್ದತಿಯಿತ್ತು. ಈ ರೀತಿಯ ತಯಾರಿಕಾ ವಿಧಾನವನ್ನು ಮಹಾರಾಷ್ಟ್ರದ ಅಜಂತಾ ಗುಹೆಗಳಲ್ಲಿನ 5 ನೇ ಶತಮಾನದ ವರ್ಣಚಿತ್ರವನ್ನು ಆಧರಿಸಿ ನಮ್ಮ ನೌಕಾ ತಂಡ, 2025ರಲ್ಲಿ ಐಎನ್‌ಎಸ್‌ವಿ ಕೌಂಡಿನ್ಯಾ ಎಂಬ ಹೆಸರಿನಲ್ಲಿ ಇದೇ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿ ಯಶಸ್ವಿಯಾಗಿ ಸಮುದ್ರದ ಮೇಲೆ ಚಾಲನೆ ಮಾಡಲಾಗಿದೆ.

ಹಡಗು ನಿರ್ಮಾಣ ಮತ್ತು ಸಮುದ್ರಯಾನ ಮತ್ತು ಸಮುದ್ರ ವ್ಯಾಪಾರದಲ್ಲಿ ಇಷ್ಟೆಲ್ಲಾ ಪರಿಣಿತಿ ಹೊಂದಿದ್ದರೂ, ಭಾರತದ ಧ್ವಜ ಹೊತ್ತ ಹಡಗುಗಳು ದೇಶದ ರಫ್ತು-ಆಮದು ವ್ಯಾಪಾರದ ಕೇವಲ 5–7% ರಷ್ಟನ್ನು ಮಾತ್ರ ಸಾಗಿಸುತ್ತಿದ್ದು ಉಳಿದ 93–95% ರಷ್ಟು ವಿದೇಶಿ ಹಡಗುಗಳ ಪಾಲಾಗಿ, ಭಾರತದ ವಿದೇಶೀ ವಿನಿಮಯ ಹೊರಹರಿವು ಮತ್ತು ಅವಲಂಬನೆಗೆ ಕಾರಣವಾಗಿದ್ದು, ಬಹಳ ಕಳವಳಕಾರಿಯಾಗಿದೆ. ಉತ್ಪ್ರೇಕ್ಷೆಯಿಲ್ಲದೇ ಹೇಳಬೇಕೆಂದರೆ, ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಗಳಾದ ನಂತರ ಅವರ ಸರ್ಕಾರವು ಆ ಲೋಪವನ್ನು ಸರಿಯಾಗಿ ಗುರುತಿಸಿ, ನಮ್ಮ ತಪ್ಪುಗಳನ್ನು ಸರಿಪಡಿಸಲು ಹಲವಾರು ನೀತಿಗಳನ್ನು ತರಲಾಗಿದೆ ಮತ್ತು ಪ್ರಸ್ತುತ ಸರ್ಕಾರವು ಹಡಗು ನಿರ್ಮಾಣದಲ್ಲಿ ಬಂಡವಾಳವನ್ನು ಹೂಡುತ್ತಿದ್ದು, 2030ರ ವೇಳೆಗೆ ಹಡಗು ನಿರ್ಮಾಣದಲ್ಲಿ 5% ಜಾಗತಿಕ ಪಾಲನ್ನು ಮತ್ತು 2047 ರ ವೇಳೆಗೆ ಜಾಗತಿಕವಾಗಿ ಅಗ್ರ 5 ಶ್ರೇಯಾಂಕವನ್ನು ಪಡೆಯುವ ಗುರಿಯನ್ನು ಹೊಂದಿದೆ.

2025-26 ರಲ್ಲಿ, ದಾಖಲೆಯ ಕಾರ್ಯಕ್ಷಮತೆಯೊಂದಿಗೆ, 92 ಸರಕು ಹಡಗುಗಳ ಸೇರ್ಪಡೆಯೊಂದಿಗೆ, ಭಾರತದ ವ್ಯಾಪಾರಿ ನೌಕಾಪಡೆ ಮತ್ತು ಹಡಗು ಸಾಮರ್ಥ್ಯವು 14.2 ಮಿಲಿಯನ್ ಒಟ್ಟು ಟನ್‌ಗಳನ್ನು ದಾಟಿದ್ದು, 2024-25 ಕ್ಕೆ ಹೋಲಿಸಿದರೆ ಸರಿಸುಮಾರು ಮೂರು ಪಟ್ಟು ಹೆಚ್ಚಳವಾಗಿದ್ದರೂ, ನಾವು ಬಹಳ ಹಿಂದಿದ್ದೇವೆ. ಪ್ರಸ್ತುತವಾಗಿ ಭಾರತದ ಒಡೆತನದ ಮತ್ತು ಭಾರತ ಧ್ವಜ ಹೊತ್ತ ಹಡಗುಗಳು ಸಂಖ್ಯೆ ಕೇವಲ 1500 ಇದ್ದು, ಜಾಗತಿಕ ಸರಕು ಸಾಗಿಸುವ ಸಾಮರ್ಥ್ಯದ ಶ್ರೇಯಾಂಕದಲ್ಲಿ ನಾವು 17 ಅಥವಾ 18 ನೇ ಸ್ಥಾನದಲ್ಲಿದ್ದೇವೆ. ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ, ಭಾರತದ ಕಡಲ ವಲಯದಲ್ಲಿ ಬಹಳ ಹಳತಾದ ಕಾನೂನುಗಳು ಮತ್ತು ಸೀಮಿತ ಸಾಮರ್ಥ್ಯಗಳಿಂದ ತುಂಬಿದ್ದನ್ನು ಗಮನಿಸಿ ಹೊಸಾ ಹೊಸಾ ರೀತಿಯ ಕಾನುನೂಗಳನ್ನು ತಂದಿದ್ದಾರೆ. ಪ್ರಸ್ತುತ ನಮ್ಮಲ್ಲಿ ಸುಮಾರು ೧೦-೧೨ ಕ್ಕೂ ಹೆಚ್ಚು ಪ್ರಮುಖ ಬಂದರುಗಳನ್ನು ಹೊಂದಿದ್ದರೂ, ಅವುಗಳಲ್ಲಿ JNPA ಮತ್ತು ಮುಂದ್ರಾ, ಕಂಟೇನರ್ ಥ್ರೋಪುಟ್‌ನಲ್ಲಿ ವಿಶ್ವದಾದ್ಯಂತ ಅಗ್ರ 40–50 ರಲ್ಲಿ ಸ್ಥಿರವಾಗಿ ಸ್ಥಾನ ಪಡೆದಿವೆ. ಹಾಗಾಗಿ ಗಲಾಥಿಯಾ ಬೇ ಅಂತರರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಬಂದರು ಮತ್ತು ಗ್ರೇಟ್ ನಿಕೋಬಾರ್ ಯೋಜನೆಯ ಅತ್ಯವಶ್ಕಕವಾಗಿದ್ದು, ಇದು ಕೇವಲ ನಮ್ಮ ಸಮುದ್ರ ಮಾರ್ಗದ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳುವ ಸಲುವಾಗಿಯಷ್ಟೇ ಅಲ್ಲದೇ ನಮ್ಮ ಸಂಪೂರ್ಣ ರಾಷ್ಟ್ರೀಯ ಭದ್ರತಾ ಅವಶ್ಯಕತೆಯಾಗಿರುವುದರಿಂದ ಪ್ರಸ್ತುತ ಭಾರತ ಸರ್ಕಾರವು ನಿಕೋಬಾರ್ ನೌಕಾನೆಲೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ.

ಮಲಕ್ಕಾ ಜಲಸಂಧಿಯು ಅತ್ಯಂತ ಕಿರಿದಾದ ಚಕ್‌ಪಾಯಿಂಟ್ ಆಗಿದ್ದು, ಇದು ಕೇವಲ ಭಾರತ ಮತ್ತು ಪೆಸಿಫಿಕ್ ಸಾಗರಗಳ ನಡುವಿನ ಪ್ರಮುಖ ಹಡಗುಗಳ ಮಾರ್ಗವಾಗಿರದೇ, ವಿಶ್ವದ ಪ್ರಮುಖ ಹಡಗು ಮಾರ್ಗಗಳಲ್ಲಿ ಒಂದಾಗಿದ್ದು, ಜಾಗತಿಕ ವ್ಯಾಪಾರದ 40% ಕ್ಕಿಂತ ಹೆಚ್ಚು ಹಡಗುಗಳ ಇದರ ಮೂಲಕ ಹಾದುಹೋಗುತ್ತದೆ. ಈ ಜಲಸಂಧಿಯಿಂದ ಕೇವಲ 40 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಗ್ರೇಟ್ ನಿಕೋಬಾರ್ ನೌಕಾನೆಲೆಯನ್ನು ಆಧುನಿಕ ರೀತಿಯಲ್ಲಿ ವಿಸ್ತರಿಸಿಕೊಳ್ಳುವ ಮೂಲಕ ಅತ್ಯಂತ ನಿರ್ಣಾಯಕ ಕಡಲ ಅಪಧಮನಿಯನ್ನು ಪಡಯಬಹುದಾಗಿದ್ದು, ಜಾಗತಿಕ ವ್ಯಾಪಾರವು ನಮ್ಮ ಪ್ರದೇಶದ ಮೂಲಕವೇ ಹಾದು ಹೋಗುವುದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ. ಪ್ರತಿ ವರ್ಷ ಸುಮಾರು 94,000ಕ್ಕೂ ಹೆಚ್ಚು ಹಡಗುಗಳು ಈ ಮಾರ್ಗದ ಮೂಲಕ ಸಂಚರಿಸಲ್ಪಶುತ್ತಿದ್ದು, ಸಮುದ್ರದ ಮೂಲಕ ಸಾಗಿಸಲಾದ ತೈಲದ 35% ಕ್ಕಿಂತ ಹೆಚ್ಚು ಮತ್ತು ಅನಿಲದ 20% ಕ್ಕಿಂತ ಹೆಚ್ಚು ಇದೇ ಮಾರ್ಗದಲ್ಲಿ ಹೋಗುತ್ತವೆ. ಚೀನಾ ದೇಶದ ಬಹುತೇಕ ಉತ್ಪನ್ನಗಳು, ಕಲ್ಲಿದ್ದಲು, ಮಲೇಶಿಹಾದ ತಾಳೆ ಎಣ್ಣೆ ಮತ್ತು ಇಂಡೋನೇಷಿಯನ್ ಕಾಫಿ ಸೇರಿದಂತೆ ವಿಶ್ವದ ವ್ಯಾಪಾರದ ಸರಕುಗಳಲ್ಲಿ ಸುಮಾರು 25% ಇದೇ ಮಾರ್ಗದಲ್ಲಿ ಸಾಗಿಸಲ್ಪಡುತ್ತದೆ. ಈ ಪ್ರಮಾಣದ ದಟ್ಟಣೆಯಿಂದಾಗಿ, ಆಧುನಿಕ ಕಡಲ್ಗಳ್ಳತನ ಮತ್ತು ಕಳ್ಳಸಾಗಣೆ ಜಲಸಂಧಿಗೆ ಕಳವಳಕಾರಿಯಾಗಿದೆ.

ದೇಶದ ಕಡಲ ಸಂಪತ್ತಿನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹೆಚ್ಚಿಸುವುದಲ್ಲದೇ, ದೇಶದ ಭದ್ರತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಭಾರತ ಸರ್ಕಾರವು ₹81,000 ಕೋಟಿ (ಸುಮಾರು US$9.4–10 ಬಿಲಿಯನ್) ಮೌಲ್ಯದ ಗ್ರೇಟ್ ನಿಕೋಬಾರ್ ದ್ವೀಪ (GNI) ಯೋಜನೆಯನ್ನು ಅನುಷ್ಠಾನಗೊಳಿಸುವ ಮೂಲಕ ಈ ದ್ವೀಪವನ್ನು ಪ್ರಮುಖ ಅಂತರರಾಷ್ಟ್ರೀಯ ಹಡಗು ಸಾಗಣೆ, ಲಾಜಿಸ್ಟಿಕ್ಸ್ ಮತ್ತು ರಕ್ಷಣಾ ಕೇಂದ್ರವಾಗಿ ಪರಿವರ್ತಿಸಲು ಮುಂದಾಗಿದೆ. ನೀತಿ ಆಯೋಗದಿಂದ ಅಂಗೀಕೃತಕೊಂಡ ಈ ಯೋಜನೆಯು ಸುಮಾರು 30 ವರ್ಷಗಳ ಕಾಲವಾಗಿದ್ದು. ಸುಮಾರು 2050 ಈ ಯೋಜನೆ ಸಂಪೂರ್ಣವಾಗಿ ಪೂರ್ಣಗೊಂಡಾಗ, ಮಲಕ್ಕಾ ಜಲಸಂಧಿಯ ಬಳಿಯ ಇಂಡೋ-ಪೆಸಿಫಿಕ್‌ನಲ್ಲಿ ಕಡಲ ವ್ಯಾಪಾರವನ್ನು ಹೆಚ್ಚಿಸುವ ಮತ್ತು ಭಾರತದ ಕಾರ್ಯತಂತ್ರದ ಉಪಸ್ಥಿತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

ಈ ಯೋಜನೆಯ ಮೂಲಕ

  • 14.2 ಮಿಲಿಯನ್ TEU ಅಂತರರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಟರ್ಮಿನಲ್ (ICTT)
  • ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯನ್ನು (4000 ಪೀಕ್ ಅವರ್ ಪ್ರಯಾಣಿಕರು) ನಿರ್ವಹಿಸುವ ಮತ್ತು ಮಿಲಿಟರಿ ವಾಯುನೆಲೆಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಹೊಸ ವಿಮಾನ ನಿಲ್ದಾಣ.
  • 450 MVA ಅನಿಲ-ಸೌರ ವಿದ್ಯುತ್ ಸ್ಥಾವರದ ಅಭಿವೃದ್ಧಿ ಹೊಂದಿರುವ ಸಕಲ ಮೂಲ ಸೌಕರ್ಯವನ್ನು ಹೊಂದಿರುವ ಹೊಸ ಪಟ್ಟಣ
  • 1 ಲಕ್ಷ ಹೊಸ  ಮತ್ತು 1.5 ಲಕ್ಷ ಪರೋಕ್ಷ  ಜನರಿಗೆ ಉದ್ಯೋಗಾವಕಾಶ
  •  ಸಿಂಗಾಪುರದಂತಹ ವಿದೇಶಿ ಬಂದರುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು
  • ಭಾರತದ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಪ್ರಮುಖ ಸಮುದ್ರ ಮಾರ್ಗಗಳ ಮೇಲ್ವಿಚಾರಣೆ.
  • ಅರಣ್ಯ ಯೋಜನೆಯು ಅಭಿವೃದ್ಧಿಗಾಗಿ 137 ಚದರ ಕಿಮೀ (ದ್ವೀಪದ 2%) ಅನ್ನು ತೆರವುಗೊಳಿಸುವುದನ್ನು ಒಳಗೊಂಡಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಅಲ್ಲಿರುವ ಅಧಿಸೂಚಿತ ಬುಡಕಟ್ಟು ಮೀಸಲು ಪ್ರದೇಶಗಳನ್ನು ಮುಟ್ಟದೇ, ಅಲ್ಲಿನ ಮೂಲನಿವಾಸಿಗಳಿಗೆ ಯಾವುದೇ ರೀತಿಯಾದ ತೊಂದರೆಯನ್ನು ನೀಡದಂತೆ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶವನ್ನು ಹೊಂದಿದೆ.

ಗ್ಯಾಲಥಿಯಾ ಕೊಲ್ಲಿ ಗ್ರೇಟ್ ನಿಕೋಬಾರ್ ದ್ವೀಪದ ಆಗ್ನೇಯ ಕರಾವಳಿಯಲ್ಲಿ 20 ಮೀಟರ್‌ಗಳಿಗಿಂತ ಹೆಚ್ಚು ಆಳದ ನೀರಿನ ಹರಿವು ಹೊಂದಿರುವ ಕಾರಣ, ನೈಸರ್ಗಿಕವಾದ ಆಳ ನೀರಿನ ಬಂದರನ್ನು ಅಭಿವೃಧ್ಧಿ ಪಡಿಸುವ ಮೂಲಕ ಸಿಂಗಾಪುರ, ಕೊಲಂಬೊ ಜಾಗತಿಕ ಬಂದರುಗಳಿಗಿಂತಲೂ ಉತ್ತಮ ರೀತಿಯಲ್ಲಿ ವಹಿವಾಟು ನಡೆಸಬಹುದಾಗಿದ್ದು, ಇದು ಕಾರ್ಯರೂಪಕ್ಕೆ ಬಂದಲ್ಲಿ ಅನೇಕ ಸ್ಪರ್ಧಾತ್ಮಕ ಕೇಂದ್ರಗಳು ಎದುರಿಸುತ್ತಿರುವ ಮಿತಿಗಳಿಲ್ಲದೆಯೇ ಬಂದರು ಅತಿದೊಡ್ಡ ಕಂಟೇನರ್ ಹಡಗುಗಳಿಗೆ ಅವಕಾಶ ಕಲ್ಪಿಸಬಲ್ಲದು. ಗಲಾಥಿಯಾ ಕೊಲ್ಲಿ ಅಂತರರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಬಂದರು (ICTP) ಕೇವಲ ಬಾಹ್ಯ ಬಂದರು ಯೋಜನೆ ಆಗಿರದೇ, ಪೂರ್ವ ಹಿಂದೂ ಮಹಾಸಾಗರದಲ್ಲಿ ಭಾರತದ ಕಾರ್ಯತಂತ್ರದ ಆಧಾರಸ್ತಂಭವಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹವನ್ನು ದೂರದ ಹೊರಠಾಣೆಯಿಂದ ವಾಣಿಜ್ಯ ಮತ್ತು ರಕ್ಷಣೆ ಎರಡಕ್ಕೂ ಮುಂದಕ್ಕೆ ಕಾರ್ಯನಿರ್ವಹಿಸುವ ಸ್ಪ್ರಿಂಗ್‌ಬೋರ್ಡ್ ಆಗಿ ಪರಿವರ್ತಿಸಲಿದೆ.

ಇನ್ನು ವಾಣಿಜ್ಯಿಕವಾಗಿ ಹೇಳುವುದಾದರೆ, ಪ್ರಸ್ತುತ, ಭಾರತದ ಸುಮಾರು 75% ಕಂಟೇನರೀಕೃತ ಸರಕುಗಳನ್ನು ಕೊಲಂಬೊ ಮತ್ತು ಸಿಂಗಾಪುರದಂತಹ ವಿದೇಶಿ ಬಂದರುಗಳ ಮೂಲಕ ಟ್ರಾನ್ಸ್‌ಶಿಪ್ ಮಾಡುವುದನ್ನು ತಪ್ಪಿಸಿ ನೇರವಾಗಿ ನಮ್ಮ ಬಂದರಿನಲ್ಲಿಯೇ ತರಿಸಿಕೊಳ್ಳುವ ಮೂಲಕ ಬೃಹತ್ ವಿದೇಶಿ ವಿನಿಮಯ ಹೊರಹರಿವು ಮಾತ್ರವಲ್ಲದೆ, ಬೃಹತ್ ಲಾಜಿಸ್ಟಿಕಲ್ ಅವಲಂಬನೆಗೂ ಕಾರಣವಾಗುತ್ತದೆ. ಪ್ರಸ್ತಾವಿತ ಗಲಾಥಿಯಾ ಬೇ ಐಸಿಟಿಪಿ ಹಡಗುಗಳ ಸಂಚಾರವನ್ನು ಆಂತರಿಕಗೊಳಿಸುವುದಲ್ಲದೇ, ಸಾಗಣಿಕೆಯ ವೆಚ್ಚವನ್ನು ಕಡಿತಗೊಳಿಸುತ್ತದೆ. ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಏಷ್ಯಾ-ಯುರೋಪ್, ಏಷ್ಯಾ-ಆಫ್ರಿಕಾ ಮತ್ತು ಏಷ್ಯಾ-ಯುಎಸ್ ವ್ಯಾಪಾರ ಮಾರ್ಗಗಳಿಗೆ ಭಾರತವನ್ನು ಪ್ರಮುಖ ಕೇಂದ್ರವಾಗಿ ಇರಿಸುತ್ತದೆ. ದೊಡ್ಡ ಗ್ರೇಟ್ ನಿಕೋಬಾರ್ ಯೋಜನೆಯು ನಾಗರಿಕ-ಮಿಲಿಟರಿ ವಿಮಾನ ನಿಲ್ದಾಣ, 450 MVA ನವೀಕರಿಸಬಹುದಾದ-ಭಾರೀ ವಿದ್ಯುತ್ ಸ್ಥಾವರ ಮತ್ತು ಪರಿಸರ ವ್ಯವಸ್ಥೆಯನ್ನು ಪೂರ್ಣಗೊಳಿಸಲು ಸಂಯೋಜಿತ ಪಟ್ಟಣವನ್ನು ಪ್ರಸ್ತಾಪಿಸುತ್ತದೆ , ಇದು ಸ್ವಾವಲಂಬಿ ಕಡಲ ನೋಡ್ ಅನ್ನು ಸೃಷ್ಟಿಸುತ್ತದೆ.

ಸರ್ಕಾರವು ಗಲಾಥಿಯಾ ಬೇ ಐಸಿಟಿಪಿ ಮತ್ತು ಗ್ರೇಟ್ ನಿಕೋಬಾರ್ ಯೋಜನೆಯನ್ನು ಮುಳುಗಿಸಲಾಗದ ವಿಮಾನವಾಹಕ ನೌಕೆ ಎಂದು ಉಲ್ಲೇಖಿಸಿದೆ, ಇದು ಮಹತ್ವಾಕಾಂಕ್ಷೆಯ ಆದರೆ ನಿರ್ಣಾಯಕ ನಡೆಯಾಗಿದ್ದು, ಇದು ವ್ಯಾಪಾರ ಜೀವನಾಡಿಗಳನ್ನು ಭದ್ರಪಡಿಸುತ್ತದೆ, ನೌಕಾ ಶಕ್ತಿಯನ್ನು ಯೋಜಿಸುತ್ತದೆ, ಸುತ್ತುವರಿಯುವಿಕೆಯನ್ನು ಎದುರಿಸುತ್ತದೆ ಮತ್ತು ಭಾರತವು ನಿಜವಾದ ಕಡಲ ಸೂಪರ್ ಪವರ್ ಆಗಿ ಹೊರಹೊಮ್ಮುವುದನ್ನು ಭದ್ರಪಡಿಸುತ್ತದೆ.

ಪ್ರಧಾನ ಮಂತ್ರಿ ಮೋದಿಯವರು ಪದೇ ಪದೇ ಹೇಳುವಂತೆ ಇದು ಯುದ್ಧದ ಯುಗವಲ್ಲ. ಆದರೆ ಇದು ತಾಂತ್ರಿಕ ಅನುಕೂಲತೆ ಮತ್ತು ಸಂಪನ್ಮೂಲಗಳು ಮತ್ತು ಅಧಿಕಾರಕ್ಕಾಗಿ ಸ್ಥಿರವಾದ, ನಿರಂತರ ಜಾಗತಿಕ ಸ್ಪರ್ಧೆಯ ಯುಗ. ರಾಜಕೀಯ ಪ್ರಕ್ಷಬ್ಧತೆ  ಮತ್ತು ವಿದೇಶಿ ಶಕ್ತಿಗಳ ವಸಾಹತುಶಾಹಿಯಿಂದಾಗಿ ಭಾರತವು ಸುಮಾರು ಶತಮಾನಗಳಿಂದಲೂ ದಬ್ಬಾಳಿಕೆಗೆ ಒಳಗಾಗಿದ್ದರೂ, ಭೌಗೋಳಿಕವಾಗಿ ಹಿಂದೂ ಮಹಾಸಾಗರವು ನಮ್ಮನ್ನು ರಕ್ಷಕರ ಸ್ಥಾನದಲ್ಲಿ ನೇಮಿಸಿದೆ, ಹಾಗಾಗಿ ನಾವು ಆ ರಕ್ಷಕರ ಪಾತ್ರವನ್ನು ಕಾರ್ಯತಂತ್ರವಾಗಿ ಮತ್ತು ಅಧಿಕೃತವಾಗಿ ವಹಿಸಿಕೊಳ್ಳುವ ಸಮಯ ಇದಾಗಿದ್ದು,  ಹಿಂದೂ ಸಾಗರವು ನಮಗೆ ಸೇರಿದ್ದು ಅದನ್ನು ನಾವು ಸೂಕ್ತರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳದೇ ಹೋದಲ್ಲಿ ಇತರರ ಪಾಲಾಗುವುದನ್ನು ತಪ್ಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಗಲಾಥಿಯಾ ಕೊಲ್ಲಿ ಭಾರತಕ್ಕೆ ವಾಣಿಜ್ಯಿಕವಾಗಿ ಮಾತ್ರ ವಿವೇಕಯುತವಲ್ಲ; ಇದು ಚೀನಾ ವಿರುದ್ಧದ ಕಾರ್ಯತಂತ್ರದ ಮಿಲಿಟರಿ ಮತ್ತು ವಾಣಿಜ್ಯ ಮಾಸ್ಟರ್ ನಡೆ. ಚೀನಾ ದೇಶವು ಈಗಾಗಲೇ ಮ್ಯಾನ್ಮಾರ್, ಶ್ರೀಲಂಕಾ ಮತ್ತು ಪಾಕಿಸ್ತಾನದ ಗ್ವಾದರ್, ಹಂಬಂಟೋಟ ಮತ್ತು ಕ್ಯುಕ್ಪ್ಯು ಬಂದರುಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿರುವಾಗ, ಭಾರತವು ತನ್ನ ಗ್ರೇಟ್ ನಿಕೋಬಾರ್‌ನಲ್ಲಿ ವಿಶ್ವ ದರ್ಜೆಯ ಬಂದರನ್ನು ನಿರ್ಮಿಸುವ ಮೂಲಕ ಜಾಗತಿಕ ಸಾಗಣೆಗೆ ಚೀನಾದ ಬಂದರುಗಳಿಗೆ ಪರ್ಯಾಯವನ್ನು ಒದಗಿಸುವುದಲ್ಲದೇ, ಇಂಡೋ-ಪೆಸಿಫಿಕ್‌ನಲ್ಲಿ ಲಾಜಿಸ್ಟಿಕ್ಸ್ ಕೇಂದ್ರವಾಗಿ ಭಾರತದ ಪಾತ್ರವನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಭೌಗೋಳಿಕ ಅಥವಾ ಮಿಲಿಟರಿ ಉದ್ವಿಗ್ನತೆಯ ಸಂದರ್ಭದಲ್ಲಿ ಭಾರತಕ್ಕೆ ಹತೋಟಿ ನೀಡುತ್ತದೆ.

ಕಳೆದ 10-12 ವರ್ಷಗಳಿಂದಲೂ ಪ್ರಜಾತಂತ್ರಾತ್ಮಕವಾಗಿ ಬಿಜೆಪಿ ಸರ್ಕಾರವನ್ನು ಹಿಮ್ಮೆಟ್ಟಿಸಲು ಸಾಧ್ಯವಾಗದ ಭಾರತದ ವಿರೋಧ ಪಕ್ಷಗಳಿಗೆ ಅದರಲ್ಲೂ ಪ್ರಧಾನ ಮಂತ್ರಿಯಾಗಲು ತುದಿಗಾಲಿನಲ್ಲಿ ನಿಂತಿರುವ ರಾಹುಲ್ ಗಾಂಧಿಗೆ, ತಮ್ಮ ಸೈದ್ಧಾಂತಿಕ ವಿರೋಧಿ ಮೋದಿಯವರ ಈ ಅಭಿವೃದ್ಧಿ ಕಾರ್ಯ ಸಹಜವಾಗಿ ಇರಿಸು ಮುರಿಸು ತರುವಂತಿದ್ದು, ಸುಮಾರು ₹₹81,000 ಕೋಟಿ ಕೋಟಿ ಮೌಲ್ಯದ ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆಯನ್ನು ಇಂದೊಂದು ಭಾರೀ ಹಗರಣ ಮತ್ತು ಪ್ರಕೃತಿಯ ವಿರುದ್ಧದ ಅಪರಾಧ ಎಂದು ವಿರೋಧಿಸುತ್ತಿದ್ದಾರೆ. ಈ ಯೋಜನೆಗಾಗಿ ಅಭಿವೃದ್ಧಿಯ ನೆಪದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳಿಗಾಗಿ ಪ್ರಾಚೀನ ನೈಸರ್ಗಿಕ ಕಾಡುಗಳ ಲಕ್ಷಾಂತರ ಮರಗಳನ್ನು ನಾಶಮಾಡುವ ಮೂಲಕ ಬೃಹತ್ ಪ್ರಮಾಣದಲ್ಲಿ ಪರಿಸರ ನಾಶ ಮತ್ತು ಸ್ಥಳೀಯ ಬುಡಕಟ್ಟು ಸಮುದಾಯಗಳ ಸ್ಥಳಾಂತರ ಮಾಡಲಾಗುತ್ತದೆ ಎನ್ನುವುದು ಅವರ ವಾದವಾಗಿದೆ. ಅಷ್ಟೇ ಅಲ್ಲದೇ ಈ ಯೋಜನೆಯಿಂದಾಗಿ ಸುಮಾರು 160 ಚದರ ಕಿ.ಮೀ. ಪ್ರಾಚೀನ ಮಳೆಕಾಡನ್ನು ನಾಶಪಡಿಸುವ ಅಭಿವೃದ್ಧಿಯ ಭಾಷೆಯಲ್ಲಿ ಧರಿಸಿರುವ ವಿನಾಶ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಆದರೆ ಭಾರತ ಸರ್ಕಾರವು ಈ ಎಲ್ಲಾ ಆರೋಪಗಳನ್ನೂ ಸಾರಾಸಗಟಾಗಿ ತಿರಸ್ಕರಿಸಿದ್ದು, ಈ ಯೋಜನೆಯು ಭದ್ರತೆ ಮತ್ತು ಆರ್ಥಿಕ ಬೆಳವಣಿಗೆಗೆ ನಿರ್ಣಾಯಕವಾದ ಕಾರ್ಯತಂತ್ರದ ರಾಷ್ಟ್ರೀಯ ಉಪಕ್ರಮ ಎಂದು ವಾದಿಸಿದೆ, ಇಂಡೋ-ಪೆಸಿಫಿಕ್‌ನಲ್ಲಿ ಸಾಮರ್ಥ್ಯವನ್ನು ನಿರ್ಮಿಸುವಾಗ ಪರಿಸರದ ಪ್ರಭಾವವನ್ನು ತಗ್ಗಿಸಲು ವಿನ್ಯಾಸಗೊಳಿಸಲಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ ಬೆಂಬಲ ಮತ್ತು ಕೆಲವು ಮಾಧ್ಯಮ ಮೂಲಕ ವಿರೋಧವನ್ನು ಮಾಡುತ್ತಿರುವವರಿಗೆ ಭಾರತದ ಅಭಿವೃದ್ಧಿ ಮತ್ತು ಹಿಂದೂ ಮಹಾಸಾಗರದಲ್ಲಿ ಚೀನಾದ ಹಿತಾಸಕ್ತಿಗಳ ವಿರುದ್ಧ ಕಾರ್ಯತಂತ್ರದ ಪ್ರಯೋಜನವನ್ನು ತಡೆಯುವ ಉದ್ದೇಶ ಹೊಂದಿದೆ ಎನ್ನುತ್ತಿದೆ.

 

ಇದಕ್ಕೆ ಪೂರಕ ಎನ್ನುವಂತೆ 2008 ರಲ್ಲಿ ಬೀಜಿಂಗ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದ ಸೋನಿಯಾ, ರಾಹುಲ್ ಪ್ರಿಯಾಂಕ ಮತ್ತು ರಾಬರ್ಟ್ ವಾದ್ರಾ, ಪ್ರಸ್ತುತ ಚೀನಾದ ಅಧ್ಯಕ್ಷ ಮತ್ತು ಅಂದು ಚೀನಾ ಕಮ್ಯುನಿಸ್ಟ್ ಪಕ್ಷ ಪ್ರಮುಖ ನಾಯಕ ಮತ್ತು ಚೀನಾದ ಉಪಾಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ರಾಷ್ಟ್ರೀಯ ಕಾಂಗ್ರೆಸ್‌ನ ಅಂದಿನ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದನಾಗಿದ್ದ ರಾಹುಲ್ ಗಾಂಧಿ ಮಾಡಿಕೊಂಡ ಒಪ್ಪಂದದ ವಿಚಾರ ಇನ್ನೂ ಬಹಿರಂಗವಾಗಿರದೇ ಹೋದದ್ದು ಬಹಳ ಕಳವಳಕಾರಿಯಾದ ಆಂಶವಾಗಿದೆ. 2008ರ ಈ ಒಪ್ಪಂದ ನಂತರ ಹೋದ ಬಂದ ಕಡೆಯಲ್ಲೆಲ್ಲಾ ಭಾರತವನ್ನು ತೆಗಳುತ್ತಾ ಚೀನಾ ದೇಶವನ್ನು ಹೊಗಳುವುದು ಮತ್ತು ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ನಡೆದಾಗಲೆಲ್ಲಾ ಚೀನಾ ಪರ ರಾಹುಲ್ ಗಾಂಧಿ ಮಾತನಾಡುವುದು ಅನುಮಾನವನ್ನು ಉಂಟು ಮಾಡುತ್ತಿದೆ.

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸಾಮ್ರಾಜ್ಯ ಮತ್ತು ವ್ಯಾಪಾರ ಮತ್ತು ಆರ್ಥಿಕ ವಿಸ್ತರಣೆಗಾಗಿ ನಡೆಯುತ್ತಿರುವ ಪ್ರತ್ಯಕ್ಷ ಮತ್ತು ಪರೋಕ್ಷ ಯುದ್ಧಗಳು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಹಗೆತನಗಳು, ಅಲ್ಲಿ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯ ಮೂಲಕ ಪ್ರಮುಖ ಸಮುದ್ರ ವ್ಯಾಪಾರ ಮಾರ್ಗಗಳ ಮೇಲಿನ ಹಿಡಿತವನ್ನು ಸಾಧಿಸುವ ಮೂಲಕ, ಇಡೀ ಪ್ರಪಂಚದಾದ್ಯಂತ ಆರ್ಥಿಕ ಮತ್ತು ಸಾಗಣೆ ಆಘಾತಗಳನ್ನು ಉಂಟುಮಾಡುತ್ತಿರುವ ಸಂಧರ್ಭದಲ್ಲಿ ನಿಕೋಬಾರ್ ನೌಕಾನೆಲೆ ಮತ್ತು ಗಲಾಥಿಯಾ ಕೊಲ್ಲಿ ಅಭಿವೃದ್ಧಿ ಭಾರತಕ್ಕೆ ಸಮುದ್ರ ವ್ಯಾಪಾರದ ಮೇಲೇ ಅನಾಯಾಸವಾಗಿ ದೊರೆತಿರುವ ವರದಾನವಾಗಿದ್ದು ಅದನ್ನು ಸದ್ಭಳಕೆ ಮಾಡಿಕೊಳ್ಳುವುದೇ ಉತ್ತಮವಾದ ಕಾರ್ಯತಂತ್ರವಾಗಿದೆ. ದೇಶದ ಅಭಿವೃದ್ಧಿ ಸಮಯದಲ್ಲಿ ಪರಿಸರದ ಮೇಲೆ ಇಂತಹ ಸಣ್ಣ ಪುಟ್ಟ ಅಘಾತಗಳು ಆಗುತ್ತವೆ ಎನ್ನುವುದನ್ನು ಜಿಮ್ಮಿ ಗಲ್ಲು ಚಿತ್ರದಲ್ಲಿ ಸೂಚ್ಯವಾಗಿ ಡಾ. ವಿಷ್ಣುವರ್ಧನ್ ಅವರು ಕಾಡ್ನಾಗೊಂದು ಮರವೇ ಒಣಗಿ ಬಿದ್ರೆ ಏನಾಯ್ತು, ಊರ್ನಾಗೊಂದು ಮನೆಯೇ ಉರಿದು ಹೋದ್ರೆ ಏನಾಯ್ತು ಎಂದು ಹಾಡಿರುವುದು ಅರ್ಥಗರ್ಭಿತ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment