ವಿದೇಶಿ ಅಮದನ್ನು ನಿಲ್ಲಿಸಿ ಎನ್ನುವುದೂ ತಪ್ಪೇ?



ಪ್ರಜಾಪ್ರಭುತ್ವದ ಆಡಳಿತದಲ್ಲಿ ಸಹಜವಾಗಿಯೇ ಜನರಿಂದ ಬಹುಮತವಾಗಿ ಆಯ್ಕೆಯಾದ ಆಡಳಿತ ಪಕ್ಷವೊಂದಿದ್ದರೆ, ಬಹುಮತ ಪಡೆಯದ ವಿರೋಧ ಪಕ್ಷ ಎರಡೂ ಸಹಾ ಇರುತ್ತದೆ. ಪ್ರಜಾಪ್ರಭುತ್ವ ಆಡಳಿತದಲ್ಲಿ ರಾಜ್ಯ/ದೇಶದ ಹಿತದೃಷ್ಟಿಯಿಂದ ಆಡಳಿತ ಪಕ್ಷಕ್ಕೆ ಯಾವ ರೀತಿಯಾದ ಉತ್ತರದಾಯಿತ್ವ ಇರುತ್ತದೆಯೋ ಅಷ್ಟೇ ಹಕ್ಕು ವಿರೋಧ ಪಕ್ಷಕ್ಕೂ ಇದ್ದು, ವಿರೋಧ ಪಕ್ಷವು ಸರ್ಕಾರದ ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ಶಾಸನವನ್ನು ಪರಿಶೀಲಿಸುತ್ತದೆ ಮತ್ತು ಪರ್ಯಾಯ ನೀತಿಗಳನ್ನು ಒದಗಿಸುತ್ತದೆ ಮತ್ತು ಆಡಳಿತ ಪಕ್ಷಕ್ಕೆ ಮತ ಹಾಕದ ನಾಗರಿಕರನ್ನು ಪ್ರತಿನಿಧಿಸುತ್ತದೆ. ರಚನಾತ್ಮಕ ಟೀಕೆಗಳನ್ನು ನೀಡುವ ಮೂಲಕ ಮತ್ತು ವೈವಿಧ್ಯಮಯ ದೃಷ್ಟಿಕೋನಗಳನ್ನು ಪರಿಗಣಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಆಡಳಿತ ಪಕ್ಷದ ಸರ್ವಾಧಿಕಾರತ್ವವನ್ನು ತಡೆಯುವ ಮೂಲಕ ಪ್ರಜಾಪ್ರಭುತ್ವದ ನಿರ್ಣಾಯಕ ಕಾವಲುಗಾರನಾಗಿ( Watch dog) ಕಾರ್ಯನಿರ್ವಹಿಸುತ್ತದೆ.

ಹಾಗೆಂದ ಮಾತ್ರಕ್ಕೆ ಸೈದ್ಧಾಂತಿಕ ವಿರೋಧಾಭಾಸಕ್ಕಾಗಿ ಮತ್ತು ಆಡಳಿತ ಪಕ್ಷದ ಮೇಲಿನ ಕುತ್ಸುಕದಿಂದಾಗಿ ಆಡಳಿತ ಪಕ್ಷದ ಪ್ರತಿಯೊಂದು ನಡೆಯನ್ನೂ ಟೀಕಿಸುವುದು ಉತ್ತಮವಾದ ವಿರೋಧ ಪಕ್ಷದ ಲಕ್ಷಣವಲ್ಲಾ. 2026ರ ಮೇ 10, ಭಾನುವಾರದಂದು ಹೈದರಾಬಾದ್‌ನಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಜಾಗತಿಕವಾತಿ ಪ್ರಸ್ತುತ ನಡೆಯುತ್ತಿರುವ ಅನಿಶ್ಚಿತ ಯುದ್ದವನ್ನು ಮನದಲ್ಲಿಟ್ಟುಕೊಂಡು ಭಾರತೀಯ ನಾಗರಿಕರು ಚಿನ್ನದ ಖರೀದಿ ಮತ್ತು ವಿದೇಶಿ ಪ್ರಯಾಣವನ್ನು ಒಂದು ವರ್ಷದವರೆಗೆ ಮುಂದೂಡಬೇಕೆಂದು ಕೇಳಿಕೊಂಡಿದ್ದಲ್ಲದೇ, ಸಾರ್ವಜನಿಕ ಸಾರಿಗೆ ಮತ್ತು ವಿದ್ಯುತ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಅನಗತ್ಯವಾಗಿ ಇಂಧನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಸಾಧ್ಯವಾದಷ್ಟು ಮನೆಯಿಂದ ಕೆಲಸ ಮಾಡುವ ಪದ್ಧತಿ(Work from home)ಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಸಾಧ್ಯವಾದಷ್ಟೂ ದೇಶೀಯ ಉತ್ಪನ್ನಗಳನ್ನು ಬಳಸುವಂತೆ ಕರೆ ನೀಡಿದರು.

ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಹೇಳದೇ ಕೇಳದೇ ವಿದೇಶಕ್ಕೆ ಹೋಗಿ ಅಲ್ಲಿ ದೇಶವಿರೋಧಿ ಶಕ್ತಿಗಳೊಡನೆ ಸಭೆ ಮಾಡಿ ಅವರು ಹೇಳಿಕೊಟ್ಟ ಟೂಲ್ ಕಿಟ್ ಗಳನ್ನು ದೇಶದ ಜನರ ಮೇಲೆ ಹೇರಿ ಅನಗತ್ಯವಾಗಿ ದೇಶದ ಪ್ರಜೆಗಳನ್ನು ಗೊಂದಲಕ್ಕೀಡು ಮಾಡುವ, ಕಳೆದ ೧೨ ವರ್ಷಗಳಿಂದಲೂ ಕೇಂದ್ರದಲ್ಲಿ ಅಧಿಕಾರವಿಲ್ಲದೇ ಸತತವಾಗಿ ೯೯ ಚುನಾವಣೆಗಳಲ್ಲಿ ಸೋಲು ಕಂಡು ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಕಾಂಗ್ರೇಸ್ಸಿನ ಚಿರಯ್ಯೌವನಿಗ, ಸ್ವಘೋಷಿತ ಭಾವೀ ಪ್ರಧಾನಿ ಮತ್ತು ಪ್ರಸ್ತುತ ನಾಮಕಾವಾಸ್ತೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂದಿಯವರಿಗೆ ಪ್ರಧಾನಿಗಳ ಮಿತವ್ಯಯದ ಕರೆ ಕೇಳುತ್ತಿದ್ದಂತಯೇ, ಇದು ಸರ್ಕಾರದ ವೈಫಲ್ಯಕ್ಕೆ ಪುರಾವೆಗಳು. ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಜನಸಾಮಾನ್ಯರಿಗೆ ನೀಡಿರುವ ‘ತ್ಯಾಗ’ದ ಕರೆಗಳನ್ನು ಕುರಿತಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿರುವುದು ನಿಜಕ್ಕೂ ಆತನ ಬೌದ್ಧಿಕ ಮಟ್ಟ ಮತ್ತು ಮಾನಸಿಕ ದೌರ್ಬಲ್ಯತೆಯನ್ನು ತೋರಿಸುತ್ತಿರುವುದಲ್ಲದೇ, ವಿನಾಕಾರಣ ದೇಶದ ಜನರನ್ನು ಬಡಕಾಯಿಸಿ ದೇಶದಲ್ಲಿ ಆಂತರಿಕ ದಂಗೆಯನ್ನು ಉಂಟು ಮಾಡಲು ಹೊರಟಿರುವ ದುಷ್ಟತನ ಆತನದಲ್ಲಿ ಎದ್ದು ಕಾಣುತ್ತಿದೆ.

ಚಿನ್ನ ಖರೀದಿಸಬೇಡಿ, ವಿದೇಶಕ್ಕೆ ಹೋಗಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ, ರಸಗೊಬ್ಬರ ಮತ್ತು ಅಡುಗೆ ಎಣ್ಣೆ ಬಳಕೆ ತಗ್ಗಿಸಿ, ಮೆಟ್ರೋದಲ್ಲಿ ಪ್ರಯಾಣಿಸಿ, ಮನೆಯಿಂದಲೇ ಕೆಲಸ ಮಾಡಿ. ಇವು ಕೇವಲ ಉಪದೇಶಗಳಲ್ಲ ಇವು ಸರ್ಕಾರದ ವೈಫಲ್ಯದ ಸಾಕ್ಷಿಗಳು.12 ವರ್ಷಗಳಲ್ಲಿ ದೇಶವನ್ನು ಎಂತಹ ಸ್ಥಿತಿಗೆ ತಂದಿದ್ದಾರೆಂದರೆ, ಜನರು ಏನನ್ನು ಖರೀದಿಸಬೇಕು, ಏನು ಖರೀದಿಸಬಾರದು, ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ಸರ್ಕಾರವೇ ಹೇಳುವಂತಾಗಿದೆ. ಪ್ರತಿ ಬಾರಿಯೂ ಜವಾಬ್ದಾರಿಯನ್ನು ಜನರ ಮೇಲೆ ಹಾಕಿ, ತಾವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ.ದೇಶವನ್ನು ಮುನ್ನಡೆಸುವುದು ಈಗ ಈ ‘ರಾಜಿ ಮಾಡಿಕೊಂಡಿರುವ ಪ್ರಧಾನಿ’ಯಿಂದ (Compromised PM) ಸಾಧ್ಯವಿಲ್ಲದ ಮಾತು ಎಂಬೆಲ್ಲಾ ಮಾತುಗಳು ಜನರನ್ನು ಬಡಕಾಯಿಸುವುದಕ್ಕಾಗಿ ಹೇಳುವುದಷ್ಟೇ ಆಗಿದ್ದು, ವಿರೋಧ ಪಕ್ಷದ ನಾಯಕನಂತನ ಜವಾಬ್ಧಾರಿಯುತ ಸ್ಥಾನದಲ್ಲಿರುವವರನ ಹೇಳಿಗಳಾಗಿರುವುದಕ್ಕೆ ಖಂಡಿತವಾಗಿಯೂ ಸಾಧ್ಯವಿಲ್ಲದಾಗಿದೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಅನಿಶ್ಚಿತ ಪರಿಸ್ಥಿತಿಯಿಂದಾಗಿ ಭಾರತದ ವಿದೇಶಿ ವಿನಿಮಯ ಮೀಸಲು ಮೇಲೆ ಒತ್ತಡ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಹೈದರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಜನರಿಗೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರೇ ಹೊರತು ಆಜ್ಞಾಪಿಸಿರಲಿಲ್ಲ. ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕಟ್ಟುನಿಟ್ಟಿನ ಮಿತವ್ಯಯ ಕ್ರಮಗಳನ್ನು ಅನುಸರಿಸುವಂತೆ ಕರೆ ನೀಡಿರುವುದು, ಇಂತಹ ಸಂಕಷ್ಟದ ಸಮಯದಲ್ಲಿ ರಾಷ್ಟ್ರದ ಕರ್ತವ್ಯಕ್ಕೆ ಆದ್ಯತೆ ನೀಡುವಂತೆ ಮನವಿ ಮಾಡಿರುವುದು ೧೪೦ ಕೋಟಿ ಜನರನ್ನು ಪ್ರತಿನಿಧಿರುತ್ತಿರುವ ನಾಯಕನ ಮುತ್ಸದ್ದಿ ತನವನ್ನು ತೋರುತ್ತಿದೆಯೇ ಹೊರತು, ರಾಹುಲ್ ಗಾಂಧಿ ಹೇಳಿರುವಂತೆ ಅದರಲ್ಲಿ ಯಾವುದೇ ರೀತಿಯ ಪಲಾಯನವಾದ ಕಾಣುತ್ತಿಲ್ಲ.

ಭಾರತದಲ್ಲಿ ಒಟ್ಟು ಬಳಕೆಯಾಗುವ 88% ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ವಿಷಯವೇನೂ ಹೊಸದಲ್ಲಾ. ಈಗ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ತೈಲ ಪೂರೈಕೆ ಸರಪಳಿಯ ಏರುಪೇರಿನಿಂದಾಗಿ ಭಾರತಕ್ಕೆ ಕಚ್ಚಾ ತೈಲದ ಆಮದು ಕಠಿಣವಾಗಿದೆ. ರಾಹುಲ್ ಗಾಂಧಿಯ ಹಿರಿಯಣ್ಣನಂತಿರುವ ಅಮೇರಿಕಾದ ಅಧ್ಯಕ್ಷ ಟ್ರಂಪ್ ದಿನೇ ದಿನೇ ಹೊಸಾ ಹೊಸಾ ನೀತಿ ನಿಯಮಗಳನ್ನು ತುಘಲಕ್ ರೀತಿಯಲ್ಲಿ ಜಾರಿಗೆ ತರುತ್ತಿರುವ ಕಾರಣ್, ರೂಪಾಯಿ ಮತ್ತು ಡಾಲರ್ ವಿನಿಯಮದಲ್ಲಿ ಹಿಂದೆಂದಿಗಿಂತಲೂ ಅತ್ಯಂತ ಹೆಚ್ಚಿಗಿದ್ದು ಬಹುತೇಕ ೧$ಗೆ ೧೦೦ ರೂಪಾಯಿಯಷ್ಟಾಗಿರುವ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅತ್ಯಂತ ಮಿತವಾಗಿ ಬಳಸುವುದು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಸೌಲಭ್ಯವಿರುವ ನಗರಗಳಲ್ಲಿ ಸ್ವಂತ ವಾಹನಗಳ ಬದಲಿಗೆ ಮೆಟ್ರೋ ರೈಲುಗಳನ್ನು ಬಳಸುವುದು ಇಲ್ಲವೇ ಕಾರು ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಕಾರ್‌ಪೂಲಿಂಗ್ ರೂಢಿಸಿಕೊಳ್ಳಿ ಎಂದಿರುವುದು ಸೂಕ್ತವಾಗಿದೆ. ಅಷ್ಟೇ ಅಲ್ಲದೇ, ಅನಿವಾರ್ಯ ಸಂಧರ್ಭದ ಹೊರತಾಗಿ ಮೋಜು ಮಸ್ತಿಗಾಗಿ ಭಾರತೀಯರು ವಿದೇಶೀ ಪ್ರವಾಸ ಮಾಡಿದಾಗ, ಅನಗತ್ಯವಾಗಿ ವಿದೇಶಿ ಹಣವು ದೇಶದಿಂದ ಹೊರಹೋಗುವುದನ್ನು ತಡೆಗಟ್ಟುವ ಸಲುವಾಗಿ ಭಾರತೀಯರು ಸ್ವಲ್ಪ ಕಾಲದ ಮಟ್ಟಿಗೆ ವಿದೇಶಿ ಪ್ರವಾಸಗಳನ್ನು ಮುಂದೂಡುವಂತೆಯೂ, ಆಮದಾಗುವ ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವಂತೆಯೂ ಮತ್ತು ಅನಿವಾರ್ಯದ ಹೊರತಾಗಿ ಚಿನ್ನದ ಖರೀದಿಯನ್ನು ತಾತ್ಕಾಲಿಕವಾಗಿ ಮುಂದೂಡವಂತೆ ಭಾರತೀಯರಲ್ಲಿ ಮನವಿ ಮಾಡುವ ಮೂಲಕ ದೇಶದ ಆಮದು ವೆಚ್ಚವನ್ನು ತಗ್ಗಿಸಲು ಸಹಕರಿಸುವಂತೆ ಅವರು ಕೋರಿದ್ದಾರೆ.

ಜಗತ್ತಿನಲ್ಲಿ ಚೀನಾ ಹೊರತುಪಡಿಸಿದರೆ, ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವುದೇ ನಮ್ಮ ದೇಶವಾಗಿದ್ದು, 2025-26ರಲ್ಲಿ ಸುಮಾರು 72 ಬಿಲಿಯನ್ ಡಾಲರ್ ಮೊತ್ತದ ಚಿನ್ನವನ್ನು ಆಮದು ಮಾಡಿಕೊಂಡುದ್ದು, ಇದು ದೇಶದ ಒಟ್ಟು ಆಮದು ವೆಚ್ಚದ ಶೇ. 9ರಷ್ಟಿದೆ. ಅದೇ ರೀತಿಯಾಗಿ ಇಂಧನಕ್ಕಾಗಿ ಭಾರತ 134.7 ಬಿಲಿಯನ್ ಡಾಲರ್ ವೆಚ್ಚ ಮಾಡುತ್ತಿದೆ. ಇನ್ನು ರಸಗೊಬ್ಬರ ಮತ್ತು ಅಡುಗೆ ಎಣ್ಣೆ ಆಮದಿನ ಮೂಲಕವೂ ಕೋಟ್ಯಂತರ ರೂಪಾಯಿಗಳಷ್ಟು ಹಣ ವಿದೇಶಕ್ಕೆ ಹರಿಯುತ್ತಿದ್ದು, 2025-26ರ ಸಾಲಿನಲ್ಲಿ ಭಾರತದ ಒಟ್ಟು ಆಮದು ವೆಚ್ಚ 775 ಬಿಲಿಯನ್ ಡಾಲರ್ ಆಗಿದೆ. ಈಗ ಪ್ರಧಾನಿಯವರು ಮನವಿ ಮಾಡಿಕೊಂಡಿರುವುದನ್ನು ಚಾಚೂ ತಪ್ಪದೇ ಪಾಲಿಸಿದಲ್ಲಿ ಸುಮಾರು 240.7 ಬಿಲಿಯನ್ ಡಾಲರ್ ಗಳು ಅಂದರೆ ಶೇ. 31.1ರಷ್ಟು ವಿದೇಶೀ ವಿನಿಮಯವನ್ನು ಕಡಿಮೆ ಮಾಡಬಹುದಾಗಿದ್ದು, ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಪ್ರಧಾನಿಗಳು ಎಲ್ಲಾ ರೀತಿಯ ವಿದೇಶಿ ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಮಾಡುವ ಮೂಲಕ ದೇಶದ ಹಣ ದೇಶದ ಒಳಗೇ ಉಳಿಯುವಂತೆ ಮಾಡಲು ಭಾರತೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪೆಟ್ರೋಲಿಯಂ ಮತ್ತು ಚಿನ್ನದ ಮೇಲಿನ ಅವಲಂಬನೆ ತಗ್ಗಿದರೆ ರೂಪಾಯಿಯ ಮೌಲ್ಯ ವೃದ್ಧಿಯಾಗುವುದಲ್ಲದೆ, ಆರ್ಥಿಕವಾಗಿ ಭಾರತ ಮತ್ತಷ್ಟು ಸಬಲವಾಗಲಿದೆ ಎಂಬ ಆಶಯದಿಂದ ಪ್ರಧಾನಿಗಳು ದೂರದೃಷ್ಟಿಯಿಂದ ಈ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆಯೇ ಹೊರತು ಅಪ್ರಬುದ್ಧ ರೀತಿಯಂತೆ ಮಾತನಾಡುವ ರಾಹುಲ್ ನಂತೆ ಈ ಕ್ರಮಗಳು ಯಾವುದೇ ವಿಪತ್ತಿನ ಸೂಚನೆಯಲ್ಲ.

ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಸಮಯದಲ್ಲಿ, ಭಾರತೀಯರಾಗಿ ಪ್ರತಿಯೊಬ್ಬ ಭಾರತೀಯರೂ ಪ್ರಧಾನಿಗಳು ಕೋರಿರುವ ಕರ್ತವ್ಯದ ಸಂಕಲ್ಪವನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಪೂರೈಸಿದಾಗಲೇ ಭಾರತ ಸಧೃಢವಾಗುತ್ತದೆ. ಬೇರೆ ದೇಶಗಳನ್ನು ಮಣಿಸ ಬೇಕೆಂದರೆ ಅದಕ್ಕೆ ಯುದ್ಧವನ್ನೇ ಮಾಡಬೇಕೆಂದೇನಿಲ್ಲಾ. ನಾವು ಆರ್ಥಿಕವಾಗಿ ಸಧೃಢರಾದಲ್ಲಿ ಪ್ರಪಂಚವೇ ನಮ್ಮ ಮುಂದೆ ನತಮಸ್ತಕರಾಗಿ ತಲೆಬಾಗುತ್ತದೆ ಅಲ್ವೇ? ಅದಕ್ಕಾಗಿಯೇ ನಮ್ಮ ಮನೆಯ ಹೆಣ್ಣುಮಕ್ಕಳು ಗಂಡಂದಿರು ಕೊಡುವ ಪ್ರತಿಯೊಂದು ರೂಪಾಯಿ ಹಣವನ್ನು ಎಚ್ಚರಿಕೆಯಿಂದ ಬಳಸಿ, ಉಳಿದ ಹಣವನ್ನು ಎಚ್ಚರಿಕೆಯಿಂದ ಸಾಸಿವೆ ಡಬ್ಬದಲ್ಲಿ ಬಚ್ಚಿಟ್ಟು ಕುಟುಂಬದ ಆರ್ಥಿಕ ಕಷ್ಟದ ಸಮಯದಲ್ಲಿ ಸಹಾಯ ಮಾಡುವುದನ್ನು ಸಾವಿರಾರು ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದಾರೆ. ಅದನ್ನೇ ಈಗ ಪ್ರಧಾನಿಗಳು ಕೇವಲ ಹೆಣ್ಣು ಮಕ್ಕಳಷ್ಟೇ ಅಲ್ಲದೇ ಸಕಲ ಭಾರತೀಯರು ಅದೇ ರೀತಿಯ ಉಳಿತಾಯವನ್ನು ಮಾಡಲು ಕರೆ ನೀಡಿದ್ದಾರೆ ಆಷ್ಟೇ. ಆದರೆ ದೇಶದ ಹಿತಕ್ಕಿಂತಲೂ ತನ್ನ ಸ್ವಾರ್ಥ ಅಧಿಕಾರಕ್ಕಾಗಿ ದೇಶವನ್ನೇ ಬಲಿ ಕೊಡಲು ಮುಂದಾಗಿರುವ ವಿರೋಧ ಪಕ್ಷಗಳು ಅದರಲ್ಲೂ ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಬುರಾ ದೇಖೇನೇ ವಾಲೋ! ತೇರಾ ಮುಹ್ ಕಾಲಾ!! ಎಂಬುದನ್ನು ಮುಖದ ಮೇಲೆ ಹೊಡೆದಂತೆ ತಿಳಿಸುವುದು ಪ್ರತಿಹೊಬ್ಬ ಭಾರತೀಯರ ಆದ್ಯಕರ್ತವ್ಯವೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a comment