ಕಳೆದ ತಿಂಗಳು ದೇಶಾದ್ಯಂತ ಪಂಚರಾಜ್ಯಗಳ ಚುನಾವಣೆ ಮುಗಿದು ಮೇ 4 ರಂದು ಎಣಿಕೆ ಮುಗಿದು ಎಲ್ಲಾ ರಾಜ್ಯಗಳಲ್ಲಿಯೂ ಸ್ಪಷ್ಟವಾಗಿ ಜನಾದೇಶ ಪ್ರಕಟವಾಗಿದ್ದರೂ, ತಮಿಳುನಾಡಿನಲ್ಲಿ ಸ್ವಲ್ಪ ರಾಜಕೀಯ ಅನಿಶ್ಚಿತೆ ಮತ್ತು ಬಿಕ್ಕಟ್ಟು ತಲೆದೋರಿದ್ದು ತಮಿಳುನಾಡಿನ ಒಟ್ಟು 234 ಕ್ಷೇತ್ರಗಳಲ್ಲಿ ಅಚ್ಚರಿ ಎನ್ನುವಂತೆ ಪ್ರಥಮಬಾರಿಗೆ ಚುನಾವಣೆಯನ್ನು ಎದುರಿಸಿದ ತಮಿಳುನಾಡಿನ ಜನಪ್ರಿಯ ಸಿನಿಮಾ ನಟ ವಿಜಯ್ ಜೋಸೆಫ್ ಆವರ ಟಿವಿಕೆಗೆ 108 ಸ್ಥಾನಗಳಿದೆ. ವಿಜಯ್ ಜೋಸೆಫ್ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದು, ಆಯ್ಕೆಯಾದ 14 ದಿನಗಳ ಒಳಗೆ ಯಾವುದಾದರೂ ಒಂದು ಕ್ಷೇತ್ರಕ್ಕೆ ರಾಜಿನಾಮೆ ಕೊಡಬೇಕಾಗಿರುವುದರಿಂದ ತಾಂತ್ರಿಕವಾಗಿ ಸದ್ಯಕ್ಕೆ ಟಿವಿಕೆಗೆ 107 ಸ್ಥಾನಗಳಿದ್ದರೂ ತಮಿಳು ನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಜೋಸೆಫ್ ಅವರಿಗೆ ಮುಖ್ಯಮಂತ್ರಿ ಅಧಿಕಾರಕ್ಕೇರಲು ಅವಕಾಶ ಮಾಡಿಕೊಡದೇ ಇರುವುದರ ಕುರಿತಾಗಿ ಪರ ಮತ್ತು ವಿರೋಧ ಚರ್ಚೆ ನಡೆಯುತ್ತಿದ್ದು, ರಾಜಕೀಯ ಅರಿಯದ ವಿಜಯ್ ಅಭಿಮಾನಿಗಳು ಮತ್ತು ಅವಕಾಶವಾದಿ ಕಾಂಗ್ರೇಸ್ಸಿಗರು, ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ ಎಂದು ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತಿರುವಾಗ, ಈ ಕುರಿತು ವಸ್ತುನಿಷ್ಠ ವರದಿ ಇದೋ ನಿಮಗಾಗಿ
ತಮಿಳುನಾಡಿನ ವಿಧಾನದಭೆಯ ಒಟ್ಟು 234 ಸ್ಥಾನಗಳಲ್ಲಿ ಕ್ಷೇತ್ರಗಳಲ್ಲಿ 118 ಸ್ಥಾನಗಳಷ್ಟು ಸರಳ ಬಹುಮತ ಗಳಿಸಿದ್ದ ಪಕ್ಷವು ಸುಲಭವಾಗಿ ಅಧಿಕಾರಕ್ಕೇರಬಹುದಾಗಿದೆ. ಆದರೆ ತಾಂತ್ರಿಕವಾಗಿ 107 ಸ್ಥಾನಗಳಿಸಿರುವ ಟಿವಿಕೆಕೆ ಸರಳ ಬಹುಮತ ಗಳಿಸಲು ಇನ್ನೂ 11 ಶಾಸಕರ ಬೆಂಬಲ ಅಗತ್ಯವಿದ್ದು ಅದಕ್ಕಾಗಿಯೇ ಚುನಾವಣಾ ಫಲಿತಾಂಶ ಬಂದ ದಿನದಿಂದಲೂ ಇವತ್ತಿನವರೆಗೂ ವಿಜಯ್ ಮತ್ತು ಅವರ ಪಕ್ಷದ ಹಿರಿಯ ನಾಯಕರು ಡಿ.ಎಂ.ಕೆ ಮತ್ತು ಎಐಎಡಿಎಂಕೆ ಪಕ್ಷದ ಹೊರತು ಪಡಿಸಿ 1,2,3,4,5 ಸ್ಥಾನಗಳಿಸಿರುವ ಎಲ್ಲಾ ಪಕ್ಷಗಳ ಬಳಿ ತಮಗೆ ಬೆಂಬಲ ನೀಡಬೇಕೆಂದು ಕೋರುತ್ತಿದೆ.
ಸಾಧಾರಣವಾಗಿ ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಇದ್ದಲ್ಲಿ, ಅತಿ ಹೆಚ್ಚು ಸ್ಥಾನಗಳಿಸಿರುವ ಪಕ್ಷವನ್ನು ರಾಜಭವನಕ್ಕೆ ಕರೆಸಿ ಅವರಿಂದ ಸರ್ಕಾರ ರಚಿಸಿ ಬಹುಮತ ಸಾಭೀತು ಮಾಡಲು ಸಾಧ್ಯವೇ? ಎಂಬುದನ್ನು ಅರಿತು, ನಂತರ ತಮ್ಮ ವಿವೇಚನೆಯಿಂದ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವು ರಾಜ್ಯಪಾಲರಿಗೆ ಸಾಂವಿಧಾನಿಕವಾಗಿ ಇದೆ. ವಿಜಯ್ ಮತ್ತು ಅವರ ಪಕ್ಷ ಇತರೇ ಪಕ್ಷಗಳ ಬೆಂಬಲಕ್ಕಾಗಿ ಪ್ರಯತ್ನಿಸುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ರಾಜ್ಯಪಾಲರೂ ಸಹಾ ಸ್ವಲ್ಪ ಸಮಯಾವಕಾಶವನ್ನು ನೀಡಿದ್ದಾರೆ.
ರಾಜಕೀಯದ ಗಂಧಗಾಳಿಯನ್ನೇ ಅರಿಯದ ತಮಿಳಿಗ ವೆಟ್ರಿ ಕಳಗಂ ಪಕ್ಷದ ವಿಜಯ ಸಮರ್ಥಕರು ಮತ್ತು ಕಳೆದ ನಾಲ್ಕೈದು ದಶಕಗಳಿಂದಲೂ ತಮಿಳುನಾಡು ಅಧಿಕಾರದ ರಾಜಕಾರಣದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎನ್ನುವಂತಾಗಿರುವ ಕಾಂಗ್ರೇಸ್ ಪಕ್ಷವರು ತಮ್ಮ ಇಂಡಿ ಕೂಟದ ಡಿ.ಎಂ.ಕೆ. ಪಕ್ಷಕ್ಕೆ ಕೈಕೊಟ್ಟು ವಿಜಯ್ ಪಕ್ಷಕ್ಕೆ ಸಮರ್ಥ ನೀಡಿ TVK ಪಕ್ಷಕ್ಕೆ ಸರ್ಕಾರ ರಚಿಸಲು ತಮಿಳುನಾಡು ರಾಜ್ಯಪಾಲರು ಅವಕಾಶ ನಿರಾಕರಿಸಿದ್ದಾರೆ ಎಂಬ ಗುಲ್ಲೆಬ್ಬೆಸಿ ತಮಿಳು ನಾಡಿನಾದ್ಯಂತ ಬೀದಿ ರಂಪಾಟದ ಜೊತೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಕಾರಣೀಭೂತರಾಗಿದ್ದಾರೆ.
ಗೋವಾ ಮೂಲದ ತಮಿಳು ನಾಡಿನ ರಾಜ್ಯಪಾಲದಾದ ಶ್ರೀ ರಾಜೇಂದ್ರ ಅರ್ಲೇಕರ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ, ವಿಜಯ್ ಜೋಸೆಫ್ ಅವರಿಗೆ ಅಧಿಕಾರವನ್ನು ಕೊಡಲು ಹಿಂಜರಿಯುತ್ತಿದ್ದಾರೆ ಎಂಬ ಅಪಾದನೆಯ ಜೊತೆಗೆ. 2018ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಇದೇ ರೀತಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದಂತಹ ಸಂಧರ್ಭದಲ್ಲಿ ಕರ್ನಾಟಕದಲ್ಲಿ ಅಂದಿನ ಸಂಧರ್ಭದಲ್ಲಿ ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ಅವರು ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದಲ್ಲದೇ, ಸದನದಲ್ಲಿ ಬಹುಮತ ಸಾಬೀತುಪಡಿಸಲು 15 ದಿನಗಳ ಕಾಲಾವಕಾಶ ನೀಡಿದ್ದನ್ನು ತಿಳಿಸಿರುವುದಲ್ಲದೇ, ಎಸ್. ಆರ್.ಬೊಮ್ಮಾಯಿ ಅವರ ಅಧಿಕಾರದ ಕುರಿತಾದ ತೀರ್ಪಿನಲ್ಲಿ ಉಚ್ಚನ್ಯಾಯಾಲಯವು ರಾಜ್ಯಪಾಲರು ರಾಜಭವನದೊಳಗೆ ಕುಳಿತು ಸಂಖ್ಯಾಬಲವನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿಲ್ಲ ಬದಲಾಗಿ ಬಹುಮತವನ್ನು ಸಾಬೀತುಪಡಿಸಲು ವಿಧಾನಸಭೆ ಮಾತ್ರ ಏಕೈಕ ಸಾಂವಿಧಾನಿಕ ವೇದಿಕೆಯಾಗಿದೆ ಎಂಬ ಐತಿಹಾಸಿಕವಾದ ತೀರ್ಪನ್ನು ನೆನಪಿಸಿದ್ದಾರೆ.
ಪ್ರತೀ ಸಂಧರ್ಭದಲ್ಲೂ ಅಲ್ಲಿನ ಪರಿಸ್ಥಿತಿಗೆ ಅನ್ವಯವಾಗಿ ತಮ್ಮ ವಿವೇಚನೆಯಂತೆ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ನಮ್ಮ ಸಂವಿಧಾನದಲ್ಲಿ ತಿಳಿಸಿದ್ದರೂ, ರಾಜ್ಯ ಪ್ರಜಾಪ್ರಭುತ್ವವನ್ನು ವೈಯಕ್ತಿಕ ವಿವೇಚನೆ ಅಥವಾ ಸೈದ್ಧಾಂತಿಕ ಒಲವುಗಳಿಂದ ಬದಲಾಯಿಸಲು ಖಂಡಿತಾ ಸಾಧ್ಯವಿಲ್ಲ. ನೀವು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರಬಹುದು, ಆದರೆ ರಾಜ್ಯಪಾಲರಾಗಿ ರಾಜಕೀಯ ಸಿದ್ಧಾಂತಕ್ಕಿಂತ ಮೇಲೇರಿ ಭಾರತದ ಸಂವಿಧಾನವನ್ನು ಎತ್ತಿಹಿಡಿಯುವುದು ನಿಮ್ಮ ಕರ್ತವ್ಯವಾಗಿದೆ ಎಂದೂ ಸಹಾ ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ದೇಶಾದ್ಯಂತ ಸುದ್ದಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರುಗಳು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಸಾಂವಿಧಾನಿಕ ಸಂಪ್ರದಾಯಗಳನ್ನು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪದೇ ಪದೇ ಬದಲಾಯಿಸುವ ಮೂಲಕ ದಕ್ಷಿಣ ಭಾರತ ಅದರಲ್ಲೂ ತಮಿಳುನಾಡಿನ ಜನತೆಯನ್ನು ಕಡೆಗಣಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದ್ದು, ಇದನ್ನು ತಮಿಳಿಗರು ತೀವ್ರವಾಗಿ ವಿರೋಧಿಸುತ್ತಾರೆ ಎನ್ನಲಾಗಿದೆ.
ತಮ್ಮ ವಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಅನೇಕ ಬಿಕ್ಕಟ್ಟು ಮತ್ತು, ಸಂಕಷ್ಟಗಳನ್ನು ಎದುರಿಸಿಯೇ ಅಂತಿಮವಾಗಿ ಸಾಂವಿಧಾನಾತ್ಮಕವಾಗಿಯೇ ನಟ ವಿಜಯ್ ಅವರು ಈ ಹಂತಕ್ಕೆ ಬಂದಿದ್ದು, ನಿಮ್ಮ ರಾಜಕೀಯ ಪಿತೂರಿಗಳಿಂದ ಅವರನ್ನು ಅಧಿಕಾರ ವಂಚಿತಗೊಳಿಸುತ್ತಿರುವುದಕ್ಕೆ ಧಿಕ್ಕಾರವಿದೆ ಎಂದು ಬಹಳ ಕಟುವಾಗಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಗೋವಾ ಮೂಲದವರಾಗಿರುವ ರಾಜ್ಯಪಾಲರಾಗಿರುವ ರಾಜೇಂದ್ರ ಅರ್ಲೇಕರ್ ಅವರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುವ, ಕಾನೂನು ಪಾಲಿಸುವ ಗೋವಾದವರ ಹೆಸರಿಗೆ ಕಳಂಕ ತರಬಾರದು ಎಂಬ ಕಿವಿಮಾತುಗಳನ್ನೂ ಆಡಿರುವುದು ಗಮನಾರ್ಹವಾಗಿದೆ.
ವಸ್ತುನಿಷ್ಠವಾಗಿ ಹೇಳಬೇಕೆಂದರೆ, ವಿಜಯ್ ಜೋಸೆಫ್ ಅವರ ರಾಜಕೀಯ ಅಪ್ರಬುದ್ದತೆಯಿಂದಾಗಿ ಆತುರಗಾರನಿಗೆ ಬುದ್ಧಿ ಮಟ್ಟ ಎಂಬ ಗಾದೆ ಮಾತಿನಂತೆ ಸ್ವಯಂಕೃತಾಪರಾಧದಿಂದಾಗಿ ಈ ರೀತಿಯ ಬಿಕ್ಕಟ್ಟಿಗೆ ಕಾರಣವಾಗಿದ್ದಾರೆ. ಸರ್ಕಾರ ರಚಿಸಲು ಅಗತ್ಯವಿರುವ ಬಹುಮತ 118 ಸಂಖ್ಯಾಬಲ ತಮ್ಮ ಬಳಿ ಇಲ್ಲದೇ ಇದ್ದಾಗ ಏನು ಮಾಡಬೇಕು? ಎಂದು ತಮ್ಮ ಪಕ್ಷದಲ್ಲಿ ವಿಚಾರ ನಡೆಸುತ್ತಿದ್ದಾಗ, ಈ ಹಿಂದೆ ಎಐಎಡಿಎಂಕೆ ಪಕ್ಷದಲ್ಲಿದ್ದ ಮತ್ತು ಸುಮಾರು 9 ಬಾರಿ ಶಾಸಕರಾಗಿರುವ ಅನುಭವ ಹೊಂದಿರುವ ಪ್ರಸ್ತುಅವಾಗಿ ಟಿವಿಕೆ ಪಕ್ಷದ ಹಿರಿಯ ನಾಯಕರಾಗಿರುವ ಸೆಂಗೊಟ್ಟೈಯನ್ ಅವರು ನಮ್ಮ ಟಿವಿಕೆ ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ತಮಗೇ ಅಧಿಕಾರವನ್ನು ನೀಡಬೇಕು ಎಂದು ರಾಜ್ಯಪಾಲರ ಬಳಿಗೆ ಹೋಗಿ ಕೇಳುವಂತೆ ಸಲಹೆ ನೀಡಿದ್ದರು. ಆದರೆ ರಾಜಕೀಯದ ಗಂಧಗಾಳಿಯೂ ಇಲ್ಲದ ವಿಜಯ್ ಆವರ ತಂದೆ ಚಂದ್ರಶೇಖರ್, ಫಲಿತಾಂಶ ಬಂದ ದಿನದ ರಾತ್ರಿಯೇ ಕಾಂಗ್ರೇಸ್ ಪಕ್ಷ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಕೋರಿದರೆ, ವಿಜಯ್ ಸಹಾ ಸೆಂಗೊಟ್ಟೈಯನ್ ಅವರ ಮಾತುಗಳನ್ನು ಧಿಕ್ಕರಿಸಿ ಕೇವಲ ಸ್ಥಳೀಯ ಕಾಂಗ್ರೇಸ್ ಮುಖಂಡರಲ್ಲದೇ, ಖರ್ಗೆ ಮತ್ತು ರಾಹುಲ್ ಗಾಂಧಿಯವರೊಡನೆಯೂ ದೂರವಾಣಿಯಲ್ಲಿ ಸಂಪರ್ಕಿಸಿ ಅವರ ಬೆಂಬಲವನ್ನು ಕೋರಿದ್ದೇ ಇಷ್ಟೆಲ್ಲಾ ಬಿಕ್ಕಟ್ಟಿಗೆ ಕಾರಣವಾಗಿದೆ.
ಇಂತಹ ಅವಕಾಶಕ್ಕಾಗಿಯೇ ಬಕ ಪಕ್ಷಿಯಂತೆ ಬರಗೆಟ್ಟು ಕಾಯುತ್ತಿದ್ದ ಕಾಂಗ್ರೇಸ್ಸಿಗರೂ ತಮ್ಮ ಇಂಡೀ ಕೂಟದವರ ಬೆನ್ನಿಗೆ ಚೂರಿ ಹಾಕಿ, 2018ರಲ್ಲಿ ಕರ್ನಾಟಕಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತು 2019 ರಲ್ಲಿ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಹೆಸರಿನಲ್ಲಿ ಅತೀ ಹೆಚ್ಚಿನ ಸಂಖ್ಯಾಬಲ ಹೊಂದಿದ್ದ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಜನಾದೇಶದ ವಿರುದ್ಧವಾಗಿ ಬೆಂಬಲ ನೀಡಿ ಅಧಿಕಾರಗಳಿಸಿದ್ದಂತೆಯೇ ಇಲ್ಲೂ ಸಹಾ ತಮ್ಮ 5 ಶಾಸಕರ ಬೆಂಬಲ ಸೂಚಿಸಿ ಒಟ್ಟು 112 ಆದರೂ ಇನ್ನೂ 6 ಶಾಸಕರ ಬೆಂಬಲದ ಕೊರತೆಯನ್ನು ನೀಗಿಸಲು ಕಮ್ಯೂನಿಸ್ಟ್ ಮತ್ತು ಇತರೇ ಪಕ್ಷಗಳ ಮನವನ್ನು ಒಲಿಸುವ ಆಶ್ವಾಸನೆಯನ್ನು ವಿಜಯ್ ಜೋಸೆಫ್ ಆವರಿಗೆ ನೀಡಿತು.
ಕಾಂಗ್ರೇಸ್ ಪಕ್ಷದ ಅಧಿಕಾರದ ಹಪಾಹಪಿಯ ಅರೆಬೆಂದ ನಾಯಕ ಮಾತನ್ನು ನಂಬಿಕೊಂಡು ವಿಜಯ್ ಜೋಸೆಫ್ ಟಿವಿಕೆ ಮತ್ತು ಕಾಂಗ್ರೆಸ್ ಶಾಸಕರನ್ನು ಒಳಗೊಂಡ 112 ಶಾಸಕರ ಒಕ್ಕೂಟ ಅಧಿಕಾರದ ಹಕ್ಕು ಮಂಡಿಸಿತು. ಬಹುಶಃ ರಾಜ್ಯಪಾಲರು ಕರೆಯುವವರೆಗೂ ತಾಳ್ಮೆ ವಹಿಸಿದ್ದರೆ, ರಾಜ್ಯಪಾಲರೇ ಟಿವಿಕೆ ಪಕ್ಷವನ್ನು ನ್ನು ಆಹ್ವಾನಿಸಲೇ ಬೇಕಿತ್ತು ಅಥವಾ ವಿಜಯ್ ಜೋಸೆಫ್ ಸೆಂಗೊಟ್ಟೈಯನ್ ಅವರ ಮಾತುಗಳನ್ನು ಕೇಳಿ, ಟಿವಿಕೆ ಪಕ್ಷವೇ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ನಮಗೇ ಅಧಿಕಾರ ನೀಡಿ ಎಂದಿದ್ದರೆ, ರಾಜ್ಯಪಾಲರು ಯಾವುದೇ ಚರ್ಚೆಗೆ ಆಸ್ಪದವಿಲ್ಲದಂತೆ ವಿಜಯ್ ಜೋಸೆಫ್ ಅವರಿಗೆ ಮುಖ್ಯಮಂತ್ರಿ ಪದವಿಯ ಅಧಿಕಾರ ವಹಿಸಿ, ಇಷ್ಟು ಕಾಲಾವಕಾಶದಲ್ಲಿ ಸದನದಲ್ಲಿಯೇ, ಬಹುಮತ ಸಾಬೀತುಪಡಿಸಲು ಅವಕಾಶ ಕೋಡಲೇ ಬೇಕಿತ್ತು.
ಯಾವಾಗ ಕಾಂಗ್ರೇಸ್ ಪಕ್ಶದೊಂದಿಗೆ ಚುನಾವಣೋತ್ತರ ಮೈತ್ರಿಯಾಗಿ 112 ಶಾಸಕರ ಒಕ್ಕೂಟ ಎಂದು ತನ್ನನ್ನು ತಾನೇ ಕರೆದುಕೊಂಡಿತೋ ಆಗ, ರಾಜ್ಯಪಾಲರೂ ಸಂವಿಧಾನದ 164 ನೇ ವಿಧಿಯ ಅಡಿಯಲ್ಲಿ ಅಧಿಕೃತವಾಗಿ ಪೂರ್ಣವಾಗಿ ಒಕ್ಕೂಟದ ಬಹುಮತದ ಬೆಂಬಲದ ಪುರಾವೆ ಕೇಳಿದ್ದಾರೆ. ಅಂದು ಯಡೆಯೂರಪ್ಪನರನ್ನು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಕ್ಷದ ನಾಯಕ ಎಂದು ವಜೂವಾಲ ಕರೆದಿದ್ದರ ವಿರುದ್ಧ ಪ್ರತಿಭಟಿಸಿದ್ದ ಕಾಂಗ್ರೇಸ್ ಮನುಸಿಂಘ್ವಿ ಅವರ ವಕೀಲಿಕೆಯಲ್ಲಿ ರಾತ್ರೋ ರಾತ್ರಿ ಸುಪ್ರೀ ಕೋರ್ಟಿನ ನ್ಯಾಯಾಧೀಶರನ್ನು ಎಬ್ಬಿಸಿ, ವಿಚಾರಣೆ ನಡಿಸಿ ಯಡೆಯೂರಪ್ಪನವರಿಗೆ ನೀಡಿದ್ದ 15 ದಿನಗಳ ಕಾಲಾವಕಾಶವನ್ನು ಕೇವಲ 48 ಘಂಟೆಗಳು ಅರ್ಥಾತ್ 2 ದಿನಕ್ಕೆ ಸೀಮಿತಗೊಳಿಸಿ, ಚುನಾವಣೆಯಲ್ಲಿ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದ ಜಿಡಿಎಸ್ ನೊಂದಿಗೆ ಅನೈತಿಕ ಒಪ್ಪಂದ ಮಾಡಿಕೊಂಡು ಸಮ್ಮಿಶ್ರ ಸರ್ಕಾರದ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್, ಇಂದು ಮತ್ತೆ ತನ್ನ ಅಧಿಕಾರದ ಆಸೆಗಾಗಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷಕ್ಕೆ ಅಧಿಕಾರ ಏಕೆ ಕೊಡುತ್ತಿಲ್ಲಾ ಎಂದು ಪ್ರತಿಭಟಿಸುತ್ತಿರುವುದು, ಸಂವಿಧಾನದ ರಕ್ಷಕರು ಎಂದು ತಮ್ಮನ್ನೇ ತಾವು ಬಿಂಬಿಸಿಕೊಳ್ಳುವ ಕಾಂಗ್ರೇಸ್ಸಿಗರು, ಅಧಿಕಾರಕ್ಕಾಗಿ ಎಂತಹ ಕುಕೃತ್ಯವನ್ನಾದರೂ ಮಾಡುವುದಲ್ಲದೇ, ವಿಜಯ್ ಜೋಸೆಫ್ ರಂತಹ ಅಮಾಯಕ ಜನನಾಯಕರ ರಾಜಕೀಯ ಭವಿಷ್ಯವನ್ನೇ ಹಾಳು ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಅಲ್ವೇ?
ಹೊಸಾ ವೈದ್ಯರಿಗಿಂತ ಹಳೇ ಕಾಂಪೌಂಡರೇ ಹೆಚ್ಚು ಪ್ರಭಾವಶಾಲಿ ಎಂಬಂತೆ 9 ಬಾರಿ ಶಾಸಕರಾದವರ ಸಲಹೆಯನ್ನು ನಿರ್ಲಕ್ಷಿಸಿ, ಏಕ್ ದಿನ್ ಕಾ ಸುಲ್ತಾನ್ ಎನ್ನುವಂತೆ ರಾಹುಲ್ ಗಾಂಧಿಯ ಪಟಾಲಂ ಮಾತು ಕೇಳಿಕೊಂಡು ವಿಜಯ್ ಜೋಸೆಫ್ ಕೊಟ್ಟವನು ಕೋಡಂಗಿ ಇಸ್ಕೊಂಡವನು ಈರಭದ್ರ ಎಂಬಂತಾಗಿದ್ದು, ರಾಜ್ಯದಲ್ಲಿ ರಾಜಕೀಯ ಬದಲಾವಣೆಯನ್ನು ಬಯಸಿದ್ದ ತಮಿಳುನಾಡಿನ ಜನತೆ ಡಿಎಂಕೆ ಬದಲಾಗಿ ಟಿವಿಕೆಯನ್ನು ಅಧಿಕಾರಕ್ಕೆ ತಂದರೂ ಕಾಂಗ್ರೇಸ್ ಎಂಬ ಪೆಂಡಂಭೂತ ಆಡಳಿತ ಪಕ್ಷದ ಹೆಗಲ ಮೇಲೆ ಕೂತಿದ್ದಾಗ, ಬಾಣಲೆಯಿಂದ ನೇರವಾಗಿ ಬೆಂಕಿಗೇ ಬಿಂದ್ದಂತಾಗಿ ರಾಜಕೀಯ ಪರಿವರ್ತನೆ ಎನ್ನುವುದು ಮರೀಚಿಕೆ ಆಗುವುದಂತೂ ಖಂಡಿತ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ