ಎಲ್ಲರಿಗೂ ಅಚ್ಚರಿ ಎನ್ನುವಂತೆ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಪಡೆದ ಅನೇಕಕಲಾವಿದರುಗಳು ಮತ್ತು ತಂತ್ರಜ್ಞರು ಹೊರ ರಾಜ್ಯದಿಂದ ಬಂದವರು ಅಥವಾ ಅವರ ಮಾತೃಭಾಷೆ ತಮಿಳಾಗಿರದೇ, ಕನ್ನಡ, ತೆಲುಗು, ಮಲೆಯಾಳಂ, ಮರಾಠಿ ಆಗಿರುವುದನ್ನು ನಾವು ನೀವು ಈಗಾಗಲೆ ಕಂಡಿದ್ದೇವೆ. ಅದಕ್ಕೆ ಉದಾಹರಣೆ ಎನ್ನುವಂತೆ ತಮಿಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ ಮತ್ತು ಸ್ಕ್ರೀನ್‌ಪ್ಲೇ ಕಿಂಗ್ ಎಂದೇ ಹೆಸರಾಗಿದ್ದ ಮತ್ತು ಜೂನ್ 27, 2026 ಶನಿವಾರದಂದು ತಮ್ಮ 73ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ ಕೆ ಭಾಗ್ಯರಾಜ್ ಅವರ ಮಾತೃಭಾಷೆಯೂ ಕೂಡ ತೆಲುಗು. ಅವರ ಪೂರ್ವಜರು ಆಂಧ್ರಪ್ರದೇಶಕ್ಕೆ ಸೇರಿದವರು ಮತ್ತು ಅವರು ಬಹಳ ಹಿಂದೆಯೇ ತಮಿಳುನಾಡಿಗೆ ವಲಸೆ ಬಂದರಾಗಿದ್ದರು ಭಾಗ್ಯರಾಜ್ ಅವರ ನಿಧನವು ಕೇವಲ ತಮಿಳು ಚಿತ್ರರಂಗಕ್ಕೆ ಮಾತ್ರವಲ್ಲದೆ ಭಾರತೀಯ ಸಿನಿಮಾರಂಗಕ್ಕೇ ದೊಡ್ಡ ನಷ್ಟವಾಗಿದೆ ಎಂದರೂ ತಪ್ಪಾಗದು.
ಕೃಷ್ಣಸ್ವಾಮಿ ಭಾಗ್ಯರಾಜ್ ಕೆ.ಭಾಗ್ಯರಾಜ್ ಎಂದು ಪ್ರಖ್ಯಾತರಾದ ದಕ್ಷಿಣ ಭಾರತೀಯ ಚಲನಚಿತ್ರ ನಿರ್ದೇಶಕ , ಚಿತ್ರಕಥೆಗಾರ , ನಟ , ಸಂಯೋಜಕ , ಚಲನಚಿತ್ರ ನಿರ್ಮಾಪಕ , ಬರಹಗಾರ, ಹಿನ್ನಲೆ ಗಾಯಕ ಮತ್ತು ರಾಜಕಾರಣಿ ಹೀಗೆ ಆಡು ಮುಟ್ಟದ ಸೊಪ್ಪಿಲ್ಲಾ, ತಮಿಳು ಚಿತ್ರರಂಗದಲ್ಲಿ ಭಾಗ್ಯರಾಜ್ ಕೈ ಆಡಿಸದ ಕ್ಷೇತ್ರವಿಲ್ಲಾ ಎನ್ನುವಂತೆ ಪಕ್ಕಾ ಹೈಳ್ಳಿ ಹೈದಾ ಪಟ್ಟನದಲ್ಲಿ ಮಿಂಚಿ ಮರೆಯಾದ ಕಥೆಯೇ ರೋಚಕವಾಗಿದೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ಬಳಿಯ ವೆಲ್ಲಂಕೋಯಿಲ್‌ನಲ್ಲಿನ ಕೃಷಿಕರಾದ ಶ್ರೀ ಕೃಷ್ಣಸ್ವಾಮಿ ಮತ್ತು ಅಮರಾವತಿಯಮ್ಮ ದಂಪತಿಗಳಿಗೆ 7 ಜನವರಿ 1953 ಜನಿಸಿದ ಮಗ ಜೀವನದಲ್ಲಿ ಭಾಗ್ಯವಂತನಾಗಿ ಬೆಳೆಯಲಿ ಎನ್ನುವಂತೆ ಭಾಗ್ಯರಾಜ್ ಎಂದು ಹೆಸರು ಇಟ್ಟರು. ಇವರಿಗೆ ಬಾಲ್ಯದಿಂದಲೇ ಬರವಣಿಗೆ ಮತ್ತು ಶಾಲಾ ನಾಟಕಗಳಲ್ಲಿ ಅಪಾರ ಆಸಕ್ತಿ ಇತ್ತು. ಹಾಗಾಗಿಯೇ 1970ರ ದಶಕದ ಮಧ್ಯಭಾಗದಲ್ಲಿ ಜಿ. ರಾಮಕೃಷ್ಣನ್ ನಂತರ ಇತ್ತೀಚೆಗಷ್ಟೇ ನಿಧನರಾದ ಕನ್ನಡ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಶಿಷ್ಯರಾಗಿದ್ದಂತಹ ಭಾರತಿರಾಜ ಅವರ ಬಳಿಯಲ್ಲಿ ಸಹಾಯಕ ನಿರ್ದೇಶಕರಾಗಿ ತಮಿಳು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿ, ಸಿನಿಮಾದ ಸೂಕ್ಷ್ಮತೆಗಳನ್ನು ಕಲಿಯುತ್ತಲೇ ಅನೇಕ ಚಲನಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ ಸಣ್ಣ ಸಣ್ಣ ಪಾತ್ರಗಳಲ್ಲಿಯೂ ಕಾಣಿಸಿಕೊಂಡರು. 1980 ರ ದಶಕದ ಆರಂಭದಲ್ಲಿ, ಸ್ವತಂತ್ರವಾಗಿ ಕಥೆ, ಚಿತ್ರಕಥೆ ಬರೆದು ನಟಿಸುವ ಮೂಲಕ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದರು. 1979 ರಲ್ಲಿ ಸುವರಿಲ್ಲದ ಚಿತ್ತಿರಂಗಲ್ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಶುವ ಮೂಲಕ ಸಾಮಾನ್ಯವಾಗಿ ಸಿನಿಮಾಗಳಲ್ಲಿದ್ದ ಅತಿರಂಜಿತ ಸಾಹಸ ಮತ್ತು ಕಲ್ಪನೆಗಳಿಂದ ದೂರ ಸರಿದು, ಮಧ್ಯಮ ವರ್ಗದ ಕುಟುಂಬಗಳ ಕಥೆಗಳಿಗೆ ಭಾಗ್ಯರಾಜ್ ಜೀವ ತುಂಬಿದರು. ಹಾಸ್ಯ, ಕೌಟುಂಬಿಕ ಸವಾಲುಗಳು ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು ಅವರು ಹೆಣೆದ ರೀತಿ ತಮಿಳು ಚಿತ್ರರಂಗದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು. ಇವರ ನಿರ್ದೇಶನದ ‘ಒರು ಕೈ ಓಸೈ’ ಮತ್ತು ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ‘ಮುಂದಾನೈ ಮುಡಿಚ್ಚು’ ಚಿತ್ರಗಳು ಇಂದಿಗೂ ಮಾದರಿಯಾಗಿವೆ.
ಕೇವಲ ತಮಿಳಿಗಷ್ಟೇ ಸೀಮಿತವಾಗದೆ, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲೂ ತಮ್ಮದೇ ಮರುನಿರ್ಮಾಣಗೊಂಡು ಭರ್ಜರಿ ಯಶಸ್ಸು ಕಂಡವು. ಭಾಗ್ಯರಾಜ್ ಅವರ ಚಿತ್ರಕಥೆಗಳು ಉದಯೋನ್ಮುಖ ಬರಹಗಾರರಿಗೆ ಒಂದು ಸುಂದರ ಪಠ್ಯಪುಸ್ತಕದಂತೆ. ಅವರು ಕೇವಲ ದೃಶ್ಯಗಳನ್ನು ಬರೆಯುತ್ತಿರಲಿಲ್ಲ. ಬದಲಿಗೆ ಮನುಷ್ಯನ ನೈಜ ಸ್ವಭಾವವನ್ನು ತೆರೆಯ ಮೇಲೆ ತರುತ್ತಾರೆ ಎನ್ನುವ ಮಾತಿದ್ದು, 1980 ರ ದಶಕದಲ್ಲಿ ತಮಿಳು ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಬರಹಗಾರ-ನಿರ್ದೇಶಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಲ್ಲದೇ, ಅವರು ಭಾಗ್ಯ ಎಂಬ ತಮಿಳು ವಾರಪತ್ರಿಕೆಯ ಸಂಪಾದಕರಾಗಿದ್ದಲ್ಲದೇ ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. 25 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಬರೆದು ನಿರ್ದೇಶಿಸಿದರು ಮತ್ತು 75 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. MGR ಅವರ ಅಪಾರ ಅಭಿಮಾನಿಯಾಗಿದ್ದ ಕಾರಣ, ಕೇವಲ ಚಿತ್ರರಂಗವಲ್ಲದೇ, ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ ಭಾಗ್ಯರಾಜ್, 1989 ರಲ್ಲಿ MGR ಮಕ್ಕಳ್ ಮುನ್ನೇತ್ರ ಕಳಗಂ ಅನ್ನು ಸ್ಥಾಪಿಸಿದರೂ, ಅವರ ಪಕ್ಷ ಜನರಿಂದ ಮನ್ನಣೆಗಳಿಸದ ಕಾರಣ ತಮ್ಮ ಪಕ್ಷವನ್ನು ಮುಂದೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದೊಂದಿಗೆ ವಿಲೀನ ಗೊಳಿಸಿದರು. ಹೀಗೆ 1990 ಮತ್ತು 2000 ರ ದಶಕದ ಆರಂಭದವರೆಗೂ ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ ಹೆಚ್ಚಿನ ಜನಮನ್ನಣೆ ಗಳಿಸಲಿಲ್ಲ.
ವಯಕ್ತಿಕ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡ ಭಾಗ್ಯರಾಜ್ ಮೊದಲು ನಟಿ ಪ್ರವೀಣಾ ಅವರನ್ನು ವಿವಾಹವಾಗಿದ್ದು, ಅವರು ಕಾಮಾಲೆ ರೋಗದಿಂದಾಗಿ ೧೯೮೩ ರಲ್ಲಿ ಅಕಾಲಿಕವಾಗಿ ಆಗಲಿದಾಗ ತೀವ್ರ ಆಘಾತವನ್ನು ಅನುಭವಿಸಿದ ನಂತರ ಫೆಬ್ರವರಿ ೭, ೧೯೮೪ ರಂದು, ಖ್ಯಾತ ನಟಿ ಪೂರ್ಣಿಮಾ ಜಯರಾಮ್ ಅವರನ್ನು ಎರಡನೆ ಮದುವಾಗಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಶಂತನು ಭಾಗ್ಯರಾಜ್ ಮತ್ತು ಶರಣ್ಯಾ ಭಾಗ್ಯರಾಜ್ ಎಂಬ ಮಕ್ಕಳಿದ್ದು ಅವರೂ ಸಹಾ ತಮ್ಮ ಪೋಷಕರಂತೆಯೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಹಂತ ಹಂತವಾಗಿ ತಮಿಳು ಚಿತ್ರರಂಗದಿಂದ ಹೊರಬರುತ್ತಿದ್ದಂತೆ ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಡಿಡಿ ಪೊಧಿಗೈಗಾಗಿ ನೀಂಗ ನೆನೈಚಾ ಸಾಧ್ಯಕಳಂಗ ಮತ್ತು ಇದು ಒರು ಕಧಾಯಿನ್ ಕಧೈ ಎಂಬ ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದರು ಮತ್ತು ಈ ಅವಧಿಯಲ್ಲಿ ಜಯಾ ಟಿವಿಯಲ್ಲಿ ಅಪಾಪಡಿ ಪೋಡುನಲ್ಲಿ ಕಾಣಿಸಿಕೊಂಡರು. ಅವರ ಟೆಲಿ-ಸೀರಿಯಲ್ ರೂಲ್ಸ್ ರಂಗಾಚಾರಿ ಡಿಡಿ ಚಾನೆಲ್‌ನಲ್ಲಿ ಬಹಳ ಪ್ರಸಿದ್ಧವಾಗಿತ್ತು ಮತ್ತು ಇದು 390 ಸಂಚಿಕೆಗಳನ್ನು ಪೂರ್ಣಗೊಳಿಸಿತು.
ತಮಿಳು ಚಿತ್ರರಂಗದ ದಿಗ್ಗಜನಾಗಿದ್ದರೂ, ಕೆ. ಭಾಗ್ಯರಾಜ್ ಅವರಿಗೆ ಕನ್ನಡ ಸಿನಿಮಾ ಲೋಕ ಮತ್ತು ಕನ್ನಡಿಗರ ಮೇಲೆ ಅಪಾರ ಗೌರವವಿತ್ತು. ಅವರ ಅನೇಕ ಸಿನಿಮಾಗಳು ಕನ್ನಡಕ್ಕೂ ರಿಮೇಕ್ ಆಗಿವೆ. 2015ರಲ್ಲಿ ತೆರೆಕಂಡ ರೆಡ್ ಅಲರ್ಟ್ ಎಂಬ ಕನ್ನಡ ಸಿನಿಮಾದಲ್ಲಿ ಕೆ. ಭಾಗ್ಯರಾಜ್ ಅವರು ವಿಶೇಷ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಚಂದನವನಕ್ಕೂ ಹೆಜ್ಜೆ ಇಟ್ಟಿದ್ದರು. ರವಿಚಂದ್ರನ್ ಅವರ ವೃತ್ತಿ ಬದುಕಿನಲ್ಲಿ ಅಪಾರವಾದ ಖ್ಯಾತಿಯನ್ನು ತಂದುಕೊಟ್ಟ ಅಣ್ಣಯ್ಯ ಚಿತ್ರದ ಮೂಲ ಕಥೆಗಾರರೇ ಕೆ. ಭಾಗ್ಯರಾಜ್. ತಮಿಳಿನ ಸೂಪರ್ ಹಿಟ್ ಎಂಗ ಚಿನ್ನ ರಾಸಾ ಕಥೆಯೇ ಕನ್ನಡದಲ್ಲಿ ಅಣ್ಣಯ್ಯ ಆಗಿ ಸೂಪರ್ ಸಕ್ಸಸ್ ಆಗಿತ್ತು. ಅದೇ ರೀತಿಯಲ್ಲಿ ಹಿರಿಯ ನಟ ಮತ್ತು ನಿರ್ದೇಶಕ ದ್ವಾರಕೀಶ್ ಅವರು 1991ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಗೌರಿ ಕಲ್ಯಾಣ ಚಿತ್ರಕತೆಯೂ ಭಾಗ್ಯರಾಜ್ ಅವರ ತಮಿಳಿನ ತೂರಲ್ ನಿನ್ನು ಪೋಚು ಅಗಿತ್ತು. ಬಹುಭಾಷಾ ನಟಿ ಊರ್ವಶಿ ಅವರನ್ನು ತಮ್ಮ ಮುಂದಾನೈ ಮುಡಿಚ್ಚು ಮೂಲಕ ಪರಿಚಯಿಸಿದ ನಂತರ ಅವರ ಸಹೋದರಿ ಕಲ್ಪನಾ ಚಿನ್ನ ವೀಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿ ಆ ಚಿತ್ರ ವಾಣಿಜ್ಯವಾಗಿ ಯಶಸ್ವಿಯಾದ ನಂತರ ಅದೇ ಚಿತ್ರದ ಕನ್ನಡ ರಿಮೇಕ್ ನಲ್ಲಿ ಕಾಶೀನಾಥ್ ಮತ್ತಿ ಕಲ್ಪನಾ ನಟಿಸಿದ್ದು ಅದೂ ಸಹಾ ಬಾರಿ ಯಶಸ್ವಿಯಾಗಿತ್ತು. ಕೇವಲ ಅವರ ತಮಿಳು ಚಿತ್ರಗಳು ಮಾತ್ರಾ ರೀಮೇಕ್ ಆಗದೇ ಕನ್ನಡದ ರಾಜ್‌ಕುಮಾರ್ ಮತ್ತು ಬಿ ಸರೋಜಾ ದೇವಿ ಆವರ ಜನಪ್ರಿಯ ಚಲನಚಿತ್ರ ಮಲ್ಲಮ್ಮನ ಪವಾಡವನ್ನು ತಮ್ಮ ವಿನೂತನ ಶೈಲಿಯ ಚಿತ್ರಕಥೆಯಿಂದ 1987 ರಲ್ಲಿ ಎಂಗ ಚಿನ್ನ ರಾಸ ಎಂದು ತಮಿಳೀನಲ್ಲಿ ರೀಮೇಕ್ ಮಾಡಿದ ಚಿತ್ರ ದೊಡ್ಡ ಬ್ಲಾಕ್‌ಬಸ್ಟರ್ ಆಗಿ ಭಾಗ್ಯರಾಜ್ ಅವರಿಗೆ ಬಾರಿ ಹೆಸರು ತಂದು ಕೊಟ್ಟಿತ್ತು.
ಅವರ ಅನೇಕ ಯಶಸ್ವಿ ತಮಿಳು ಚಲನಚಿತ್ರಗಳು 1990ರ ದಶಕದಲ್ಲಿ ಹಿಂದಿ ಭಾಷೆಯಲ್ಲಿ ರೀಮೇಕ್ ಆಗಿ ಭಾರಿ ಹಿಟ್ ಆಗಿದ್ದವು ರಾಸುಕುಟ್ಟಿ, ರಾಜ ಬಾಬು ಆಗಿ ರೀಮೇಕ್ ಆದರೆ, ಸುಂದರ ಕಾಂಡಮ್ ಅನ್ನು ಅಂದಾಜ್ ಆಗಿ ರೀಮೇಕ್ ಮಾಡಲಾಯಿತು. ಅವಸರ ಪೊಲೀಸ್ 100 ಗೋಪಿ ಕಿಶನ್ ಆಗಿ ಯಶಸ್ವಿಯಾಗಿತ್ತು, ಇವರೇ ಚಿತ್ರಕಥೆ ಬರೆದಿದ್ದ ಪಾಂಡಿಯರಾಜನ್ ಅಭಿನಯಿಸಿದ್ದ ತಮಿಳು ಚಿತ್ರ ಥೈಕುಲಮೇ ಥೈಕುಲಮೇ ಹಿಂದಿಯಲ್ಲಿ ಘರ್ವಾಲಿ ಬಹರ್ವಾಲಿ ಎಂದು ರೀಮೇಕ್ ಆಗಿತ್ತು. ಅವರ ಮುಂದಾನೈ ಮುಡಿಚ್ಚು ಚಿತ್ರ ಹಿಂದಿಯಲ್ಲಿ ರಾಜೇಶ್ ಖನ್ನಾ ನಾಯಕನಾಗಿ ನಟಿಸಿದ್ದ ಮಾಸ್ಟರ್‌ಜಿ ಎಂದು ರೀಮೇಕ್ ಆಗಿತ್ತು. ಖ್ಯಾತ ಅಮಿತಾಭ್ ಬಚ್ಚನ್ ದ್ವಿಪಾತ್ರದಲ್ಲಿ ನಟಿಸಿದ್ದ ಆಲ್-ಟೈಮ್ ಹಿಟ್ ಸಿನಿಮಾ ಆಖ್ರಿ ರಾಸ್ತಾ, ಅನಿಲ್ ಕಪೂರ್-ಶ್ರೀದೇವಿ ನಟನೆಯ ಮಿಸ್ಟರ್ ಬೆಚಾರಾ, ಅನಿಲ್ ಕಪೂರ್-ಮಾಧುರಿ ದೀಕ್ಷಿತ್ ಜೋಡಿಯ ಬೇಟಾ’ ಚಿತ್ರಗಳ ಚಿತ್ರಕಥೆಗಳು ಭಾಗ್ಯರಾಜ್ ಅವರದ್ದಾಗಿತ್ತು.
* 1979ರಲ್ಲಿ ಭಾಗ್ಯರಾಜ್ ಅವರು ಪುತಿಯ ವಾರ್ಪುಗಲ್ ಚಿತ್ರದ ಅತ್ಯುತ್ತಮ ಸಂಭಾಷಣೆ ಬರಹಗಾರರಿಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
* 1983ರಲ್ಲಿ ಮುಂದಾನೈ ಮುಡಿಚ್ಚು ಚಿತ್ರದ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ
* 2014 ರಲ್ಲಿ SIIMA ಜೀವಮಾನ ಸಾಧನೆ ಪ್ರಶಸ್ತಿಗಃಳಲ್ಲದೇ ಇನ್ನೂ ಹತ್ತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಬದಲಾಗುತ್ತಿರುವ ಟ್ರೆಂಡ್‌ಗಳ ಮಧ್ಯೆಯೂ, ಸಿನಿಮಾ ರಂಗದಲ್ಲಿ ತಾಂತ್ರಿಕತೆ ಎಷ್ಟು ಬದಲಾದರೂ, ಗಟ್ಟಿಯಾದ ಕಥೆಗೆ ಎಂದಿಗೂ ಸಾವಿಲ್ಲ ಎನ್ನುವುದಕ್ಕೆ ಕೆ. ಭಾಗ್ಯರಾಜ್ ಅವರ ಕಥೆಗಳು ಇಂದಿಗೂ ಪ್ರಸ್ತುತವಾಗಿವೆ. ಸರಳ ಹಳ್ಳಿಯಿಂದ ಸಿನಿಮಾ ತುತ್ತ ತುದಿಯವರೆಗೂ ಏರಿದ್ದಲ್ಲದೇ, ತಮ್ಮ ಚಿತ್ರಕಥೆ, ಕುಟುಂಬದ ಮೇಲಿನ ಪ್ರೀತಿ, ನವಿರಾದ ಹಾಸ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಹೊಂದಿದ್ದಂತಹ ಅತ್ಯಂತ ಸರಳವಾದ ಕಥಾನಕದಲ್ಲಿ ಬೆರೆಸುವ ಅದ್ಭುತ ಸಾಮರ್ಥ್ಯದಿಂದಾಗಿ ಸ್ಕ್ರೀನ್‌ಪ್ಲೇ ಕಿಂಗ್ ಎಂಬ ಹೆಗ್ಗಳಿಕೆಕೆ ಪಾತ್ರರಾಗಿದ್ದರಿಂದಲೇ ಭಾಗ್ಯರಾಜ್ ಸಾಮಾನ್ಯ ನಿರ್ದೇಶಕರಿಗಿಂತ ವಿಭಿನ್ನವಾಗಿದ್ದರು. ತಮ್ಮ ಸಿನಿಮಾಗಳಲ್ಲಿ ಸಾಮಾನ್ಯ ಜನರ ಬದುಕಿನ ನೋವು, ಪ್ರೀತಿ, ಕುಟುಂಬದ ಸಂಬಂಧಗಳು ಮತ್ತು ಹಾಸ್ಯ ತುಂಬಿರುತ್ತಿತ್ತು. ಅದಕ್ಕಾಗಿಯೇ ಅವರ ಸಿನಿಮಾಗಳು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರೇಕ್ಷಕರನ್ನು ಸಮಾನವಾಗಿ ಸೆಳೆದವು ಅವರು ನಿರ್ದೇಶಿಸಿದ ಮತ್ತು ನಟಿಸಿದ ಅನೇಕ ಚಿತ್ರಗಳು ಇಂದಿಗೂ ಸಿನಿಪ್ರಿಯರ ನೆನಪಿನಲ್ಲಿ ಜೀವಂತವಾಗಿವೆ: ಚಿತ್ರಕಥೆಯನ್ನು ಹೇಗೆ ಬರೆಯಬೇಕು, ಸಾಮಾನ್ಯ ಕಥೆಯನ್ನು ಹೇಗೆ ಅಸಾಮಾನ್ಯವಾಗಿ ಹೇಳಬೇಕು ಮತ್ತು ಕುಟುಂಬ ಮನರಂಜನೆಯನ್ನು ಹೇಗೆ ಜನರ ಹೃದಯಕ್ಕೆ ತಲುಪಿಸಬೇಕು ಎಂಬುದನ್ನು ಭಾರತೀಯ ಸಿನಿಮಾರಂಗಕ್ಕೆ ಕಲಿಸಿದ ಮಹಾನ್ ನಿರ್ದೇಶಕರಲ್ಲಿ ಕೆ. ಭಾಗ್ಯರಾಜ್ ಒಬ್ಬರು. 2025 ರಲ್ಲಿ ಬಿಡುಗಡೆಯಾದ ಕುಬೇರ ಚಿತ್ರವು ಅವರ ನಟನೆಯ ಕೊನೆಯ ಚಿತ್ರವಾಗಿತ್ತು.
ನಟ, ಚಿತ್ರಕಥೆಗಾರ, ಸಂಭಾಷಣೆ ಬರಹಗಾರ, ನಿರ್ಮಾಪಕ, ಸಂಗೀತ ನಿರ್ದೇಶಕ, ಕಾದಂಬರಿಕಾರ,ಪತ್ರಿಕಾ ಸಂಪಾದಕರಾಗಿಯೂ ಗುರುತಿಸಿಕೊಂಡಿದ್ದ ಭಾಗ್ಯರಾಜ್ ಅವರ ಸಿನಿಮಾಗಳು ಮುಂದಿನ ಪೀಳಿಗೆಯ ನಿರ್ದೇಶಕರಿಗೆ ಪಾಠಪುಸ್ತಕಗಳಂತಿವೆ. ಭಾಗ್ಯರಾಜ್ ಎಂಬ ವ್ಯಕ್ತಿ ಇನ್ನು ಮುಂದೆ ಜೀವಂತವಾಗಿ ನಮ್ಮೊಂದಿಗಿರುವುದಿಲ್ಲ. ಆದರೆ ಕಲಾವಿದರುಗಳಿಗೆ ಸಾವಿಲ್ಲ ಎನ್ನುವಂತೆ ಅವರು ಬರೆದ ಕಥೆಗಳು, ಅವರು ಸೃಷ್ಟಿಸಿದ ಪಾತ್ರಗಳು ಮತ್ತು ಅವರು ಕಟ್ಟಿಕೊಟ್ಟ ಚಿತ್ರಕಥೆಯ ಸಾಮ್ರಾಜ್ಯ ಮೂಲಕ ಆಚಂದ್ರಾರ್ಕವಾಗಿ ನಮ್ಮೊಂದಿಗೆ ಎಂದೆಂದಿಗೂ ಜೀವಂತವಾಗಿರುತ್ತಾರೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ