ತಾಯಿಯ ಪ್ರೀತಿಗೆ ತಲೆಬಾಗಿದ ಛತ್ರಪತಿ ಶಿವಾಜಿ ಮಹಾರಾಜ

ಸಹ್ಯಾದ್ರಿಯ ಬೆಟ್ಟಗಳ ನಡುವೆ ಅಜೇಯವಾಗಿ ತಲೆ ಎತ್ತಿ ನಿಂತಿದ್ದ ರಾಯಗಢ ಕೋಟೆಯಲ್ಲಿ 1674 ರ ಜೂನ್ 6 ರಂದು ಹಿಂದೂ ಪಂಚಾಂಗದ ಪ್ರಕಾರ 1596ರ ಆನಂದನಾಮ ಸಂವತ್ಸರ ಜೇಷ್ಠ ಶುದ್ಧ ತ್ರಯೋದಶಿಯಂದು ಮರಾಠಾ ಸ್ವರಾಜ್ ರಾಜನಾಗಿ ಶಿವಾಜಿ ಮಹಾರಾಜನಿಗೆ ಕಿರೀಟಧಾರಣೆ ಮಾಡುವ ಮೂಲಕ ಪಟ್ಟಾಭಿಷೇಕ ಮಾಡಿ ಆತನನ್ನು ಶಕಕರ್ತಾ (ಒಂದು ಯುಗದ ಸ್ಥಾಪಕ) ಮತ್ತು ಛತ್ರಪತಿ (ಪರಮಾಧಿಕಾರ ಸಾರ್ವಭೌಮ), ಹೈಂದವ ಧರ್ಮಧಾರಕ್ (ಹಿಂದೂ ಧರ್ಮದ ರಕ್ಷಕ) ಎಂಬ ಬಿರುದನ್ನು ಸಹ ನೀಡಿದ ನಂತರ ಛತ್ರಪತಿ ಶಿವಾಜಿ ಮಹಾರಾಜರು ಅದೇ ಕೋಟೆಯಿಂದ ಹೈಂದವಿ ಸಾಮ್ರಾಜ್ಯದಆಳ್ವಿಕೆ ನಡೆಸುತ್ತಿದ್ದರು. ಆ ಕೋಟೆಯ ಭಧ್ರತಾ ದೃಷ್ಟಿಯಿಂದ ಸೂರ್ಯಾಸ್ತವಾದ ನಂತರ ಕೋಟೆಯ ಬಾಗಿಲುಗಳನ್ನು ಮುಚ್ಚಿದರೆ, ಮರುದಿನ ಸೂರ್ಯೋದಯವಾಗುವವರೆಗೂ ಯಾರಿಗೂ ಒಳಗೆ ಹೋಗಲು ಅಥವಾ ಹೊರಬರಲು ಅವಕಾಶವೇ ಇರದಂತಹ ಅತ್ಯಂತ ಕಟ್ಟುನಿಟ್ಟಿನ ನಿಯಮವನ್ನು ಶಿವಾಜಿ ಮಹಾರಾಜರು ಜಾರಿಗೆ ತಂದಿದ್ದರು.

ಅದೇ ರಾಯಗಢದ ಬುಡದಲ್ಲಿದ್ದ ಒಂದು ಸಣ್ಣ ಹಳ್ಳಿಯಲ್ಲಿ ಹೀರಾ ಎಂಬ ಬಡ ಹಾಲು ಮಾರುವಾಕಿ ಜೀವನೋಪಾಯಕ್ಕಾಗಿ ಪ್ರತಿದಿನವೂ ಬೆಳಗ್ಗೆ ತನ್ನ ಹಸುಗಳಿಂದ ಹಾಲು ಕರೆದು, ಮನೆಯಲ್ಲಿ ಮೊಲೆಹಾಲು ಕುಡಿವ ಹಸಗಂದನನ್ನು ಬಿಟ್ಟು ಕರೆದ ಹಾಲನ್ನು ರಾಯಗಢ ಕೋಟೆಗೆ ತೆಗೆದುಕೊಂಡು ಹೋಗಿ ಅಲ್ಲಿನ ಮಾರಾಟ ಮಾಡುವ ಕಾಯಕದಲ್ಲಿ ನಿರತಳಾಗಿದ್ದರು. ಹಾಲಿನ ವ್ಯಾಪಾರ ಮಾಡುವಾಗಲೂ ಆಕೆಯ ಚಿತ್ತವೆಲ್ಲವೂ ಮನೆಯಲ್ಲಿರುತ್ತಿದ್ದ ತನ್ನ ಕಂದನತ್ತವೇ ಇರುತ್ತಿತ್ತು.

ಅದೊಮ್ಮೆ ಕೋಟೆಯೊಳಗೆ ಹಾಲು ಮಾರುವ ಕಾಯಕದಲ್ಲಿದ್ದಾಗ ಸಮಯವೇ ಹೋದದ್ದು ತಿಳಿಯದೇ ಆಕೆ ತಾನು ತಂದಿದ್ದ ಹಾಲನ್ನೆಲ್ಲಾ ಮಾರಿ ಮನೆಗೆ ಹಿಂದಿರುಗುವ ವೇಳೆಗಾಗಲೇ, ಸೂರ್ಯಾಸ್ತವಾದ ಕಾರಣ, ತನ್ನ ಮಗುವನ್ನೇ ನೆನೆಸಿಕೊಂಡು ಓಡೋಡಿ ಕೋಟೆಯ ಬೃಹತ್ತಾದ ಕಬ್ಬಿಣದ ಬಾಗಿಲುಗಳು ಬಳಿ ಬರುವಷ್ಟರಲ್ಲಿ ರಾಜನ ಆಜ್ಞೆಯಂತೆ ಕೋಟೆಯ ಬಾಗಿಲು ಮುಚ್ಚಿದ್ದನ್ನು ಕಂಡು ಆ ಕಾವಲುಗಾರ ಬಳಿ ಅಣ್ಣಾ ನನ್ನ ಕಂದ ನನಗಾಗಿ ಹಸಿವಿನಿಂದ ಕಾಯುತ್ತಿರುತ್ತದೆ. ದಯವಿಟ್ಟು ನನ್ನ ಹಳ್ಳಿಗೆ ಹೋಗಲು ಕೋಟೆಯ ಬಾಗಿಲು ತೆರೆಯಿರಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ, ಅಮ್ಮಾ, ಮಹಾರಾಜರ ಆದೇಶದಂತೆ, ಒಮ್ಮೆ ಬಾಗಿಲು ಮುಚ್ಚಿದರೆ ಬೆಳಿಗ್ಗೆಯವರೆಗೆ ಯಾರಿಗೂ ತೆರೆಯಲು ಸಾಧ್ಯವಿಲ್ಲ. ನಮ್ಮ ಅಸಹಾಯಕತೆಗಾಗಿ ದಯವಿಟ್ಟು ಕ್ಷಮಿಸಿಬಿಡು ಎಂದು ಕಾವಲುಗಾರರು ಕೇಳಿಕೊಂಡಿದ್ದರು.

ತನ್ನ ಮಗುವಿನ ಬಗ್ಗೆಯೇ ಯೋಚಿಸುತ್ತಿದ್ದ ಹೀರಾಳಿಗೆ ಕಾವಲುಗಾರ ಮಾತೇ ಕೇಳದಂತಾಗಿ ಹೇಗಾದರೂ ಮಾಡಿ, ತಾನು ಈ ಕೋಟೆಯಿಂದ ಹೊರೆಗೆ ಹೋಗಲೇ ಬೇಕೆಂದು ನಿರ್ಧರಿಸಿ, ಹಾಗೇ ಕೊಟೆಯನ್ನು ಸುತ್ತುತ್ತಿರುವಾಗ, ದೃಷ್ಟಿ ಕೋಟೆಯ ಮತ್ತೊಂದು ಬದಿಯಲ್ಲಿದ್ದ ಭಯಾನಕ ಬಂಡೆಯ ಮೇಲೆ ಬಿತ್ತು. ಅದು ನೇರವಾಗಿ ಕೆಳಕ್ಕೆ ಇಳಿಯುವ ಅಪಾಯಕಾರಿ ಪ್ರಪಾತವಾಗಿತ್ತು. ಹಗಲಲ್ಲೇ ಅದನ್ನು ಇಳಿಯಲು ಯಾರಿಗೂ ಧೈರ್ಯ ಇರಲಿಲ್ಲ. ಆದರೆ ಆ ಕ್ಷಣದಲ್ಲಿ ಹೀರಾಳಿಗೆ ತನ್ನ ಪ್ರಾಣಕ್ಕಿಂತ ತನ್ನ ಮಗುವಿನ ಹಸಿವೇ ದೊಡ್ಡದಾಗಿತ್ತು.

ನನ್ನ ಮಗ ನನ್ನನ್ನು ಕಾಯುತ್ತಿದ್ದಾನೆ ನಾನು ಹೋಗಲೇಬೇಕು, ಎಂದು ಮನಸ್ಸಿನಲ್ಲಿ ದೃಢ ನಿರ್ಧಾರ ಮಾಡಿಕೊಂಡು, ಆ ಕತ್ತಲೆಯ ರಾತ್ರಿಯಲ್ಲಿ, ಕಲ್ಲು ಮುಳ್ಳುಗಳನ್ನು ಲೆಕ್ಕಿಸದೆ, ಜಾರುವ ಬಂಡೆಗಳ ನಡುವೆ ಹೆಜ್ಜೆ ಹಾಕುತ್ತಾ ಆಕೆ ಆ ಭಯಾನಕ ಪ್ರಪಾತವನ್ನು ಇಳಿಯಲು ಆರಂಭಿಸಿದಳು. ಅನೇಕ ಬಾರಿ ಕೈ ಕಾಲುಗಳು ಜಾರಿ, ತರಚು ಗಾಯಗಳಾದರೂ, ತಾಯಿಯ ಪ್ರೀತಿಯ ಮುಂದೆ ಆ ಭಯವೆಲ್ಲವೂ ಸೋತು ಹೋಗಿ ಕೊನೆಗೂ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆಕೆ ಬೆಟ್ಟದಿಂದ ಇಳಿದು ತನ್ನ ಹಳ್ಳಿಯನ್ನು ತಲುಪಿ, ತನಗಾಗಿ ಕಾಯುತ್ತಿದ್ದ ತನ್ನ ಮಗನನ್ನು ಮಡಿಲಿಗೆ ಎತ್ತಿಕೊಂಡಾಗ ಆಕೆಯ ದೇಹಕ್ಕೆ ಆದ ಗಾಯವೆಲ್ಲವೂ ಮಾಯವಾಗಿ ಕಣ್ಣಲ್ಲಿ ಸಂತೋಷದ ಕಣ್ಣೀರು ಹರಿದಿತ್ತು.

ಯಥಾ ಪ್ರಕಾರ ಮರುದಿನ ಬೆಳಿಗ್ಗೆ, ತನಗೆ ಏನೂ ಆಗಿಲ್ಲ ಎಂಬಂತೆಯೇ ಹೀರಾ ಮತ್ತೆ ಹಾಲಿನ ಮಡಿಕೆ ಹಿಡಿದು ಕೋಟೆಗೆ ಬರುತ್ತಿದ್ದನ್ನು ಕಂಡ ಕಾವಲುಗಾರರಿಗೆ ಅಚ್ಚರಿಯಾಗಿ, ಅರೇ, ನೀನು ನೆನ್ನೆ ರಾತ್ರೆ ಹೇಗೆ ಹೊರಗೆ ಹೋದೆ ?” ಎಂದು ಕೇಳಿ, ಆಕೆ ಹೇಳಿದ್ದಲ್ಲವನ್ನೂ ಕೇಳಿದ ನಂತರ ಹೀರಾಳನ್ನು ಬಂಧಿಸಿ ಛತ್ರಪತಿ ಶಿವಾಜಿ ಮಹಾರಾಜರ ಮುಂದೆ ಕರೆದುಕೊಂಡು ಹೋದರು. ಹೀರಾಳ ಧೈರ್ಯದ ಕಥೆಯನ್ನು ಕೇಳಿದ ಶಿವಾಜಿ ಮಹಾರಾಜರು ಕೆಲ ಕ್ಷಣ ಮೌನವಾಗಿ, ತಾಯೀ, ಈ ಕೋಟೆಯನ್ನು ಯಾರೂ ಸಹಾ ಬೇಧಿಸಲಾಗದಷ್ಟು ಭದ್ರವಾಗಿ ಕಟ್ಟಿಸಿರುವಾಗ ನೀನು ಅದನ್ನೂ ದಾಟಿ ಹೇಗೆ ಹೋಗಿರುವೆ ಎಂದು ತೋರಿಸ ಬಲ್ಲಯಾ! ಎಂದಾಗ, ಆಕೆ ಹಿಂದಿನ ದಿನ ಹೋದ ಜಾಗಕ್ಕೆ ಹೋಗಿ ಬೆಳಕಿನಲ್ಲಿ ಆ ಪ್ರಪಾತವನ್ನು ನೋಡಿ ಒಂದು ಕ್ಷಣ ಅವಾಕ್ಕಾಗಿ ಅಯ್ಯಾ ಪ್ರಭು ನೆನ್ನೆ ನನ್ನ ಮನದಲ್ಲಿ ಕೇವಲ ಹಸಿವಿನಿಂದಿರುವ ತನ್ನ ಕಂದನಿಗೆ ಹಾಲುಣಿಸುವ ತವಕದಲ್ಲಿರುವಾಗ ಕತ್ತಲೆಯಲ್ಲಿ ಈ ಪ್ರಪಾತ ಯಾವುದೂ ಕಾಣಲಿಲ್ಲ ಈಗ ಬೆಳಕಿನಲ್ಲಿ ಖಂಡಿತವಾಗಿ ಈ ಪ್ರಪಾತದಿಂದ ಜಾರಿ ಪಾರಾಗಲು ಸಾಧ್ಯವಾಗದು! ಎಂದು ಕೈ ಮುಗಿದು ಕೇಳಿಕೊಂಡಾಗ, ಶಿವಾಜೀ ಮಹಾರಾಜರ ಮನಸ್ಸು ಕರಗಿ ಇದು ಸಾಮಾನ್ಯ ಮಹಿಳೆಯ ಸಾಹಸವಲ್ಲ. ಇದು ತಾಯಿಯ ಪ್ರೀತಿಯ ಪರಾಕಾಷ್ಠೆ. ತನ್ನ ಮಗುವಿಗಾಗಿ ಮರಣವನ್ನೇ ಸವಾಲು ಹಾಕಿದ ಈ ಮಹಿಳೆ ನಿಜವಾದ ವೀರನಾರಿ ಎಂದು ಮಹಾರಾಜರು ಹೇಳಿದರು.

ನಂತರ ಅವರು ಹೀರಾಳಿಗೆ ಅಮೂಲ್ಯ ಉಡುಗೊರೆಗಳನ್ನು ನೀಡಿ ಗೌರವಿಸಿದ್ದಲ್ಲದೇ, ಆಕೆ ಇಳಿದಿದ್ದ ಆ ಅಪಾಯಕಾರಿ ಬಂಡೆಯಿಂದ ಮುಂದೆ ಯಾರೂ ಸಹಾ ಅಂತಹ ಸಾಹಸ ಮಾಡಬಾರದು ಎಂದು ಅಲ್ಲೊಂದು ಕಾವಲು ಗೋಪುರ ನಿರ್ಮಿಸಿ ಅದಕ್ಕೆ ಹೀರಾಳ ನೆನಪಿನಾರ್ಥವಾಗಿ ಹಿರ್ಕಾನಿ ಬುರ್ಜ್ ಎಂದು ಹೆಸರಿಟ್ಟರು. ಇಂದಿಗೂ ಸಹಾ ರಾಯಗಢ ಕೋಟೆಯಲ್ಲಿ ತಾಯಿಯ ಪ್ರೀತಿಯ ಮತ್ತು ಧೈರ್ಯದ ಅಮರ ಸ್ಮಾರಕವಾಗಿ ಹಿರ್ಕಾನಿ ಬುರ್ಜ್ ಇರುವುದನ್ನು ಕಾಣಬಹುದಾಗಿದೆ.

ಶತ್ರುಗಳನ್ನು ಹಿಮ್ಮೆಟ್ಟಿರುವಾಗ ಯಾವುದೇ ಕರುಣೆಯಿಲ್ಲದೇ ಧಾಳಿ ಮಾಡುತ್ತಾ ಶತ್ರುಗಳ ರುಂಡವನ್ನು ಚಿಂದಿ ಚಿಂದಿ ಮಾಡುತ್ತಿದ್ದ ಶಿವಾಜಿ ಮಹಾರಾಜರು ಒಬ್ಬ ತಾಯಿಯ ಪ್ರೀತಿಯ ಮುಂದೆ ಕರಗಿ ಹೋಗುವಂತಹ ಮಾನವೀಯ ಗುಣಗಳನ್ನು ಹೊಂದಿದ್ದರು. ಮನಸ್ಸಿನಲ್ಲಿ ಧೃಢ ಸಂಕಲ್ಪವನ್ನು ಮಾಡಿದಲ್ಲಿ ಅಸಾಧ್ಯವೆಂಬುದೇ ಇಲ್ಲ. ಕತ್ತಲೆಯ ರಾತ್ರಿ, ಅಪಾಯಕಾರಿ ಬೆಟ್ಟ, ಮರಣದ ಭಯ ಇವೆಲ್ಲವನ್ನೂ ಮೀರಿಸಿ ತನ್ನ ಮಗುವಿನ ಬಳಿಗೆ ತಲುಪಿದ ಹೀರಾಳ ಕಥೆ, ತಾಯಿಯ ಹೃದಯದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ. ಹಾಗಾಗಿಯೇ ದೇವರು ಎಲ್ಲಾ ಕಡೆಯಲ್ಲಿಯು ಎಲ್ಲಾ ಸಮಯದಲ್ಲಿ ಇರಲು ಸಾಧ್ಯವಾಗದೇ ಇರುವುದಕ್ಕಾಗಿಯೇ ತಾಯಿಯನ್ನು ಸೃಷ್ಟಿಸಿದನು ಎಂಬ ಪ್ರಚಲಿತ ಮಾತು ಎಷ್ಟು ಸತ್ಯ ಎಂಬುದು ನಮ್ಮ ಅರಿವಿಗೆ ಬರುತ್ತದೆ.

ಹಿರ್ಕಾನಿಯ ಕಥೆ ಕೇವಲ ಒಂದು ಐತಿಹಾಸಿಕ ಘಟನೆ ಅಲ್ಲ ಅದು ತಾಯಿಯ ಪ್ರೀತಿಯ ಅನಂತ ಶಕ್ತಿಗೆ ಶಾಶ್ವತ ಸಾಕ್ಷಿ ಮತ್ತು ಶಿವಾಜಿ ಮಹಾರಾಜರು ತನ್ನ ಸಾಮ್ರಾಜ್ಯದಲ್ಲಿ ಒಂದು ಹೆಣ್ಣಿಗೆ ಯಾವ ರೀತಿಯಲ್ಲಿ ಮರ್ಯಾದೆ ಮತ್ತು ಗೌರವಗಳನ್ನು ನೀಡುತ್ತಿದ್ದರು ಎಂಬುದರ ಧ್ಯೋತಕ. ಶಿವಾಜೀ ಮಹರಾಜರ ಪಟ್ಟಾಭಿಷೇಕವಾದ ದಿನವನ್ನು ದೇಶಾದ್ಯಂತ ಅತ್ಯಂತ ಗೌರವಗಳಿಂದ ಹಿಂದೂ ಸಾಮ್ರಾಜ್ಯ ದಿನೋತ್ಸವ ಎಂದು ಆಚರಿಸಲಾಗುತ್ತದೆ. ಬಹುಶಃ ಅಂದು ಶಿವಾಜಿ ಮಹಾರಾಜರು ಮುಸಲ್ಮಾರ ವಿರುದ್ಧ ತೊಡೆ ತಟ್ಟಿ ಅವರುಗಳ ಅಟ್ಟಹಾಸವನ್ನು ಮೆಟ್ಟಿ ಹೈಂದವೀ ಸಾಮ್ರಾಜ್ಯ ಕಟ್ಟದೇ ಹೋಗಿದ್ದಲ್ಲಿ ಇಂದು ಹಿಂದೂಸ್ಥಾನದಲ್ಲಿ ನಾವೂ ನೀವು ಹುಟ್ಟುತ್ತಲೇ ಇರುತ್ತಿರಲಿಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಭಯವಾಗುತ್ತದೆ ಅಂತಹ ಮಹಾಹ್ ಚೇತನ ಛತ್ರಪತಿ ಶಿವಾಜಿ ಮಹಾರಾಜರಿಗೆ ಅವರ ಪಟ್ಟಾಭಿಷೇಕವಾದ ದಿನದಂದು ಒಂದು ಗೌರವದ ಪ್ರಣಾಮಗಳನ್ನು ಸಲ್ಲಿಸಲೇಬೇಕಾದದ್ದು ಪ್ರತಿಯೊಬ್ಬ ಹಿಂದೂವಿನ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ



Leave a comment