ನಾಡದೇವತೆ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಮೈಸೂರು ಚಾಮುಂಡಿ ಬೆಟ್ಟವು ಕೋಟ್ಯಾಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ. ವಿಶೇಷವಾಗಿ ಆಷಾಢ ಮಾಸದಲ್ಲಿ ತಾಯಿಯ ದರ್ಶನ ಪಡೆಯಲು ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹಾಗೆ ಚಾಮುಂಡಿ ಬೆಟ್ಟಕ್ಕೆ ಬರುವವರಲ್ಲಿ ಬಹುಪಾಲು ಜನರು ಬಡ ಮತ್ತು ಮಧ್ಯಮ ವರ್ಗದವರೇ ಆಗಿದ್ದು, ಅವರು ಉತ್ತಮ ಆರೋಗ್ಯ, ತಮ್ಮ ಮಕ್ಕಳ ಉತ್ತಮ ಶಿಕ್ಷಣ ಹಾಗೂ ಕುಟುಂಬದ ಕಷ್ಟ-ಕಾರ್ಪಣ್ಯಗಳಿಂದ ರಕ್ಷಣೆ ಕೋರಿ ಚಾಮುಂಡೇಶ್ವರಿ ದೇವಿಯಲ್ಲಿ ಭಕ್ತಿಯಿಂದ ಪ್ರಾರ್ಥಿಸಲು ಬರುತ್ತಾರೆ. ಈ ವರ್ಷದ ಆಷಾಢೋತ್ಸವವು ಜುಲೈ 17ರಿಂದ ಆಗಸ್ಟ್ 7ರವರೆಗೆ ನಡೆಯಲಿದ್ದು, ಭಕ್ತರ ಅನುಕೂಲಕ್ಕಾಗಿ ಹಾಗೂ ಜನಸಂದಣಿ ನಿಯಂತ್ರಣಕ್ಕಾಗಿ ಹಲವು ಹೊಸ ಕ್ರಮಗಳನ್ನು ಸರ್ಕಾರ ಪ್ರಕಟಿಸಿದೆ. ಸಾಮನ್ಯವಾಗಿ ವಿಶೇಷ ದರ್ಶನಕ್ಕೆ ₹300 ಇರುತ್ತಿದ್ದರೆ, ಈ ಬಾರಿ ವಿಶೇಷ ದರ್ಶನ ಟಿಕೆಟ್ ಗಾಗಿ ₹2,000 ನಿಗದಿ ಪಡಿಸಿರುವುದು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಇಷ್ಟು ದೊಡ್ಡ ಮೊತ್ತವನ್ನು ಜನಸಾಮಾನ್ಯರು ಪಾವತಿಸುವುದು ಕಷ್ಟವಾಗಿದ್ದು, ಇನ್ನು ಮುಂದೆ ಚಾಮುಂಡಿಯ ದರ್ಶನ ಕೇವಲ ಹಣವಿದ್ದವರಿಗೇ ಮಾತ್ರವೇ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನೀಡಿರುವ ಮಾಹಿತಿಯಂತೆ ಈ ಬಾರಿಯ ಆಷಾಢೋತ್ಸವದ ಪ್ರಮುಖ ವ್ಯವಸ್ಥೆಗಳು ಹೀಗಿವೆ.
* ಆಷಾಢ ಮಾಸದ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.
* ಲಲಿತಮಹಲ್ ಅರಮನೆ ಮೈದಾನದಿಂದ ಭಕ್ತರಿಗೆ ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ.
* ಆಷಾಢದ ವಿಶೇಷ ದಿನಗಳಲ್ಲಿ ಬೆಳಿಗ್ಗೆ 5.30ರಿಂದ 9.30ರವರೆಗೆ ಮಾತ್ರ ವಿಐಪಿ ಹಾಗೂ ವಿವಿಐಪಿಗಳಿಗೆ ದರ್ಶನದ ಅವಕಾಶ ನೀಡಲಾಗಿದೆ.
* ಶಿಷ್ಟಾಚಾರದ ವ್ಯಾಪ್ತಿಗೆ ಬಾರದ ಶಿಫಾರಸು ಪತ್ರಗಳಿಗೆ ಯಾವುದೇ ವಿಶೇಷ ದರ್ಶನ ವ್ಯವಸ್ಥೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
* ಮಹಿಷಾಸುರ ಪ್ರತಿಮೆ ವೃತ್ತದ ಬಳಿ ವಿಐಪಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
* ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಹಾಲು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಬೆಟ್ಟದ ಮೇಲೆ ಖಾಸಗೀ ವಾಹನಗಳ ದಟ್ಟಣೆಯನ್ನು ತಪ್ಪಿಸಲು ಈ ರೀತಿಯ ವ್ಯವಸ್ಥೆ ಉತ್ತಮವಾಗಿದ್ದರೂ, ಇದುವರೆಗೆ ಜಾರಿಯಲ್ಲಿದ್ದ ₹300 ವಿಶೇಷ ದರ್ಶನ ಟಿಕೆಟ್ ಅನ್ನು ಈ ಬಾರಿ ಸಂಪೂರ್ಣವಾಗಿ ರದ್ದುಪಡಿಸಿ, ಅದರ ಬದಲಿಗೆ ₹2,000 ವಿಶೇಷ ದರ್ಶನ ಟಿಕೆಟ್ ಪರಿಚಯಿಸಲಾಗಿದೆ.
ಈ ರೀತಿಯ ಟಿಕೆಟ್ ಪಡೆಯುವ ಭಕ್ತರಿಗೆ:
* ಪ್ರತ್ಯೇಕ ಪ್ರವೇಶ ವ್ಯವಸ್ಥೆ,
* ಸರದಿ ಸಾಲಿನಲ್ಲಿ ಕಾಯದೆ ದರ್ಶನ,
* ತಾಯಿ ಚಾಮುಂಡೇಶ್ವರಿಯ ಭಾವಚಿತ್ರ,
* ಲಾಡು ಪ್ರಸಾದ ಸೇರಿದಂತೆ ವಿಶೇಷ ಕಿಟ್ ನೀಡುವ ವ್ಯವಸ್ಥೆಯು, ಆಡಳಿತದ ಮಂಡಳಿಯು ಪ್ರಕಾರ, ಭಕ್ತರ ಅನುಕೂಲ ಹಾಗೂ ದೇವಾಲಯದ ಆದಾಯವನ್ನು ಹೆಚ್ಚಿಸುವ ಉದ್ದೇಶ ಎನ್ನುವ ನಿರ್ಧಾರವು ಭಕ್ತರಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿದ್ದು, ಇದು ₹2,000 ಮೊತ್ತದ ಬಗ್ಗೆ ಮಾತ್ರವಲ್ಲದೇ, ದೇವಾಲಯದ ಮೂಲ ತತ್ವದ ಬಗ್ಗೆಯೂ ಆಗಿದೆ.
ನಮ್ಮ ಸಂಸ್ಕೃತಿಯಲ್ಲಿ ದೇವರ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆ ಇದೆ. ಆದರೆ ಹಣ ಪಾವತಿಸಿದವರು ಕೆಲವೇ ನಿಮಿಷಗಳಲ್ಲಿ ದರ್ಶನ ಪಡೆದು, ಸಾಮಾನ್ಯ ಭಕ್ತರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ಅದು ಭಕ್ತಿಯಲ್ಲಿಯೂ ಆರ್ಥಿಕ ಅಸಮಾನತೆಯನ್ನು ಪ್ರತಿಬಿಂಬಿಸುವುದೇ? ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ. ಸಾಮಾನ್ಯ ರೈತರು, ಕೂಲಿ ಕಾರ್ಮಿಕರು, ನಿವೃತ್ತ ಹಿರಿಯ ನಾಗರಿಕರು ಅಥವಾ ಮಧ್ಯಮ ವರ್ಗದ ಕುಟುಂಬಕ್ಕೆ ₹2,000 ಪಾವತಿಸುವುದು ಸುಲಭದ ವಿಷಯವಲ್ಲ.
ಇನ್ನು ದೇವಾಲಯದ ಆದಾಯ ಹೆಚ್ಚಿಸುವುದು ತಪ್ಪೇ? ಎಂದು ಪ್ರಶ್ನಿಸಿದರೆ, ಅದು ಖಂಡಿತವಾಗಿಯೂ ತಪ್ಪಲ್ಲಾ. ದೇವಾಲಯದ ನಿರ್ವಹಣೆ, ಸಿಬ್ಬಂದಿಯ ವೇತನ, ಅನ್ನದಾಸೋಹ, ಧಾರ್ಮಿಕ ಕಾರ್ಯಕ್ರಮಗಳು, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಆರ್ಥಿಕ ಸಂಪನ್ಮೂಲ ಅಗತ್ಯ ಎನ್ನುವು ಸತ್ಯವಾದರೂ, ಹಾಗೆ ದೇವಾಲಯದ ಆದಾಯ ಹೆಚ್ಚಿಸುವುದಕ್ಕೆ ದುಬಾರಿ ವಿಶೇಷ ದರ್ಶನ ವ್ಯವಸ್ಥೆಯೇ ಏಕೈಕ ಮಾರ್ಗವೇ? ಎಂಬುದೇ ಪ್ರಶ್ನೆಯಾಗಿದೆ. ಈ ರೀತಿಯಾಗಿ ದುಬಾರಿಯಾದ ವಿಶೇಷ ಸಂದರ್ಶನ ಟಿಕೆಟ್ ಮೂಲಕ ಸಂಗ್ರಹಿಸುವ ಹಣದಲ್ಲಿ ದೇವಾಲಯ ಅಥವಾ ಭಕ್ತಾದಿಗಳಿಗೆ ರೀತಿಯಲ್ಲಿ ವಿನಿಯೋಗ ಮಾಡಲಾಗುತ್ತದೆ? ಎಂಬುದರ ಕುರಿತಾದ ಯಾವುದೇ ಮಾಹಿತಿ ನೀಡದೇ ಇರುವುದು ಮತ್ತು ಈಗಾಗಲೇ ತಿಳಿದಿರುವಂತೆ ಹಿಂದೂ ಧಾರ್ಮಿಕ ದತ್ತಿಗಳಲ್ಲಿ ಸಂಗ್ರಹಿಸಿದ ಹಣವನ್ನು ಅನ್ಯ ಧರ್ಮೀಯರ ಉದ್ಧಾರಕ್ಕೆ ಬಳಸಿದ ಅನೇಕ ಉದಾರಣೆಗಳು ಕಣ್ಣ ಮುಂದೆಯೇ ಇರುವ ಕಾರಣ ಭಕ್ತಾದಿಗಳಲ್ಲಿ ಈ ಹೊಸಾ ಆದೇಶ ಹೆಚ್ಚಿನ ಆತಂಕವನ್ನು ಮೂಡಿಸಿದೆ.
ದೇವಾಲಯದ ಜೀರ್ಣೋದ್ಧಾರ, ದೇವಾಲಯದ ವಿಶೇಷ ಪೂಜೆ ಪುನಸ್ಕಾರಗಳಿಗೆ ಹಣ ಬೇಕೆಂದರೆ, ಸ್ವಯಂಪ್ರೇರಿತವಾಗಿ ದೇಣಿಗೆ ಕೊಡಲು ಹಲವಾರು ಕಾರ್ಪೊರೇಟ್ ಕಂಪನಿಗಳ CSR ನೆರವು ಇದ್ದರೆ, ಹಣ ಉಳ್ಳವರು ಡಿಜಿಟಲ್ ದೇಣಿಗೆ, ಸೇವಾ ಯೋಜನೆಗಳು ಹಾಗೂ ಪಾರದರ್ಶಕ ನಿಧಿ ಸಂಗ್ರಹಣೆಯಂತಹ ಪರ್ಯಾಯ ಮಾರ್ಗಗಳಿವೆ ಎಂಬುದನ್ನು ಸರ್ಕಾರವಾಗಲೀ ಅಥವಾ ಆಡಳಿತ ಮಂಡಳಿಯವರು ಯೋಚಿಸದೇ ಏಕಾಏಕಿ ವಿಶೇಶ ದರ್ಶನದ ಹಣವನ್ನು ಹೆಚ್ಚಿಸಿರುವುದು ಅಕ್ಷಮ್ಯ ಅಪರಾಧವಾಗಿದೆ.
ಹಾಗೆಂದ ಮಾತ್ರಕ್ಕೆ ಈ ರೀತಿಯ ವ್ಯವಸ್ಥೆ ಕೇವಲ ಚಾಮುಂಡಿ ಬೆಟ್ಟಕ್ಕೆ ಮಾತ್ರವೇ ಸೀಮಿತವಾಗಿರದೇ. ತಿರುಪತಿಯ ತಿಮ್ಮಪ್ಪನ ದೇವಾಲಯದಲ್ಲಿ ಆರಂಭವಾದ ಈ ರೀತಿಯ ವ್ಯವಸ್ಥೆ ಇತ್ತೀಚಿನ ವರ್ಷಗಳಲ್ಲಿ ದೇಶದ ಅನೇಕ ಪ್ರಮುಖ ದೇವಾಲಯಗಳಲ್ಲಿ ವಿವಿಧ ದರದ ವಿಶೇಷ ದರ್ಶನಗಳು ಜಾರಿಯಾಗಿವೆ. ಆದರೆ ಆಧ್ಯಾತ್ಮಿಕ ಅನುಭವವು. ಈ ರೀತಿಯಾಗಿ ಹಣದ ಮೇಲೆ ಅವಲಂಬಿತ ಆಗುವುದು ಎಷ್ಟು ಸರಿ ಎನ್ನುವುದು ಇಲ್ಲಿನ ಪ್ರಶ್ನೆಯಾಗಿದೆ. ಒಬ್ಬ ಶ್ರೀಮಂತ ಭಕ್ತನ ಪ್ರಾರ್ಥನೆಯೂ, ಒಬ್ಬ ಬಡ ಮಹಿಳೆಯ ಕಣ್ಣೀರಿನ ಪ್ರಾರ್ಥನೆ ಎರಡೂ ಸಹಾ ದೇವರ ದೃಷ್ಟಿಯಲ್ಲಿ ಸಮಾನವೆಂಬುದು ಭಾರತೀಯ ಧಾರ್ಮಿಕ ಪರಂಪರೆಯ ಸಾರವಾಗಿದೆ.
ಭಕ್ತಾದಿಗಳು ದೇವಾಲಯಕ್ಕೆ ಕೇವಲ ದೇವರ ದರ್ಶನಕ್ಕಾಗಿ ಮಾತ್ರ ಹೋಗುವುದಿಲ್ಲ. ಬದಲಾಗಿ ಮನಸ್ಸಿಗೆ ಶಾಂತಿ, ಆತ್ಮಕ್ಕೆ ನೆಮ್ಮದಿ ಮತ್ತು ಜೀವನಕ್ಕೆ ಧೈರ್ಯ ಪಡೆಯಲು ಹೋಗುತ್ತಾರೆ. ದೇವಾಲಯವು ಭಕ್ತನಿಗೆ ದೇವರ ಸಾನ್ನಿಧ್ಯವನ್ನು ಅನುಭವಿಸುವ ಪವಿತ್ರ ಸ್ಥಳವಾಗಿದೆ. ದೇವರ ದರ್ಶನದಿಂದ ಮತ್ತು ದೇವರ ಕೃಪೆಯಿಂದ ಭಕ್ತರ ಜೀವನದಲ್ಲಿ ಸುಖ, ಶಾಂತಿ ಮತ್ತು ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆಯಿಂದ ದೇವರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಅದೇ ರೀತಿಯಾಗಿ ದೇವರಿಂದಾಗಿ ಆತನ ಜೀವನದಲ್ಲಿ ದೊರೆತ ಅನುಗ್ರಹಗಳಿಗೆ ದೇವರಿಗೆ ಧನ್ಯವಾದ ಹೇಳಲು ಕೃತಜ್ಞತೆ ಸಲ್ಲಿಸಲು, ತಮ್ಮ ಜೀವನದಲ್ಲಿ ಆಗುತ್ತಿರುವ ಒತ್ತಡ, ದುಃಖ, ಆತಂಕಗಳಿಂದ ಮುಕ್ತವಾಗಿ ಆಧ್ಯಾತ್ಮಿಕ ಶಾಂತಿ ಅನುಭವಿಸಲು ದೇವಾಲಯಕ್ಕೆ ಬರುತ್ತಾರೆ.
ದೇವಾಲಯದಲ್ಲಿ ನಡೆಸಲಾಗುವ ಪೂಜೆ ಪುನಸ್ಕಾರಗಳು ಸ್ವಾರ್ಥಕ್ಕಿಂತ ಸಮರ್ಪಣೆಯ ಮನೋಭಾವ ಬೆಳೆಸಲು ಮತ್ತು ದೇವರ ಮುಂದೆ ಎಲ್ಲರೂ ಸಮಾನರು ಎಂಬ ಭಾವನೆ ಮೂಡಿಸಲು ಮಾಡಲಾಗುತ್ತದೆ. ದೇವಾಲಯಗಳಲ್ಲಿ ಅನ್ನದಾಸೋಹ, ದಾನಧರ್ಮ ಮತ್ತು ಸಮಾಜಸೇವೆಯಂತಹ ಪುಣ್ಯ ಕಾರ್ಯಗಳನ್ನು ನಡೆಸುವ ನಿಜವಾದ ಉದ್ದೇಶವು ಹಣ ಅಥವಾ ವಿಶೇಷ ಸೌಲಭ್ಯಗಳಿಗಾಗಿ ಅಲ್ಲದೇ, ಭಕ್ತಿ, ಶ್ರದ್ಧೆ ಮತ್ತು ಆತ್ಮೋನ್ನತಿಗಾಗಿ ಆಗಿದೆ. ದೇವರ ಮುಂದೆ ಶ್ರೀಮಂತ-ಬಡವ, ಉನ್ನತ-ಅಧಮ ಎಂಬ ಭೇದವಿಲ್ಲದೇ, ಭಕ್ತಿಯೇ ದೇವರನ್ನು ಸೇರುವ ಅತ್ಯಂತ ಶ್ರೇಷ್ಠ ಮಾರ್ಗ ಎಂಬುದಾಗಿದ್ದು, ದೇವಾಲಯಕ್ಕೆ ಹೋಗುವುದು ದೇವರನ್ನು ಬದಲಾಯಿಸಲು ಅಲ್ಲ. ಬದಲಾಗಿ ನಮ್ಮ ಮನಸ್ಸನ್ನು, ನಮ್ಮ ಜೀವನವನ್ನು ಬದಲಾಗಿಸುವ ಸಲುವಾಗಿದೆ.
ವೈಯಕ್ತಿಕವಾಗಿ ಹೇಳುವುದಾದರೆ, ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಮಾನ್ಯ ವಾರಾಂತ್ಯದಲ್ಲಿ ಎರಡು ಬಾರಿ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದರೂ ದೇವರ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ.ಒಮ್ಮೆ ₹300 ವಿಶೇಷ ದರ್ಶನದ ಟಿಕೆಟ್ ಪಡೆದು ಸುಮಾರು ಮೂರು-ನಾಲ್ಕು ಗಂಟೆಗಳ ಕಾಲ ಸರದಿಯಲ್ಲಿ ನಿಂತರೂ ದರ್ಶನವಾಗದೇ ಹಿಂದಿರುಗಬೇಕಾಯಿತು. ಮತ್ತೊಮ್ಮೆ ದೊಡ್ಡ ಬಸವಣ್ಣನ ಬಳಿಯವರೆಗೂ ಕಾರುಗಳ ಉದ್ದ ಸಾಲು ನಿಂತಿದ್ದರಿಂದ ಅರ್ಧಗಂಟೆಗೂ ಹೆಚ್ಚು ಕಾಯಬೇಕಾಗಿ ಬಂದು ಹಿಂದಿರುಗಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಈಗ ₹2,000 ಪಾವತಿಸಿ ದರ್ಶನ ಪಡೆಯುವುದು ಸಾಮಾನ್ಯ ಭಕ್ತರಿಗೆ ಇನ್ನಷ್ಟು ಕಷ್ಟಕರವಾಗಲಿದೆ.
ದೇವಾಲಯದ ಆಡಳಿತ ಮಂಡಳಿಗೆ, ಭಕ್ತರಿಗೆ ನಿಜವಾಗಿಯೂ ಸುಲಭವಾಗಿ ದೇವರ ದರ್ಶನ ಮಾಡಿಸುವ ಉದ್ದೇಶವಾಗಿದ್ದಲ್ಲಿ, ದೇವಾಲಯಗಳನ್ನು ಕೇವಲ ಆದಾಯ ಕೇಂದ್ರಗಳಾಗಿ ನೋಡದೇ, ಸಾಮಾನ್ಯ ದರ್ಶನ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ದೂರದ ಊರಿನಿಂದ ಬರುವ ಭಕ್ತರಿಗೆ ಶೀಘ್ರವಾಗಿ ದರ್ಶನದ ವ್ಯವಸ್ಥೆ ಕಲ್ಪಿಸುವುದು, ದೇವರ ಹುಂಡಿಯಿಂದ ಸಂಗ್ರಹವಾಗುವ ಆದಾಯದಿಂದ ಶಿಕ್ಷಣ, ಅನ್ನದಾಸೋಹವಲ್ಲದೇ, ನಮ್ಮ ಸನಾತನ ಸಂಸ್ಕಾರ ಮತ್ತು ಸಂಸ್ಕೃತಿಯ ಭಾಗಗಳಾದ ಭಜನೆ, ಸಂಗೀತ, ನೃತ್ಯ, ಸಮಾಜಸೇವೆಯನ್ನು ಮಾಡುವುದಲ್ಲದೇ, ಭಕ್ತರಿಂದ ಸಂಗ್ರಹವಾದ ಹಣದಿಂದ ದೇವಾಲಯದ ಯಾವ ಯಾವ ಅಭಿವೃದ್ಧಿ ಕಾರ್ಯಗಳಿಗೆ ಹೇಗೇಹೆ ಬಳಸಲಾಗುತ್ತಿದೆ ಎಂಬುದನ್ನು ಸಾರ್ವಜನಿಕವಾಗಿ ಪಾರದರ್ಶಕವಾಗಿ ಪ್ರಕಟಿಸಿದಲ್ಲಿ, ದೇವಾಲಯದ ಬಗ್ಗೆ ಭಕ್ತರಲ್ಲಿನ ವಿಶ್ವಾಸ ಮತ್ತಷ್ಟು ವೃದ್ಧಿಯಾಗಿ ತಾವು ಕೊಟ್ಟ ಹಣ ದೇವಾಲಯಕ್ಕೇ ಸದ್ಬಳಕೆಯಾಗುತ್ತಿದೆ ಎಂದು ಕೈಬಿಚ್ಚಿ ಮತ್ತಷ್ಟು ಹಣವನ್ನು ದೇಣಿಗೆ ನೀಡುವುದರಿಂದ ಖಂಡಿತವಾಗಿಯೂ ದೇವಾಲಯದ ಆದಾಯ ಹೆಚ್ಚುತ್ತದೆ.
ಆದ್ದರಿಂದ ದೇವಾಲಯಗಳ ಆಡಳಿತದಲ್ಲಿ ಆರ್ಥಿಕ ನಿರ್ವಹಣೆಯ ಜೊತೆಗೆ ಧಾರ್ಮಿಕ ಸಂವೇದನೆ ಮತ್ತು ಭಕ್ತರ ಭಾವನೆಗೂ ಸಮಾನ ಮಹತ್ವ ನೀಡಬೇಕಾಗಿದೆ. ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತರು ತಾಯಿ ಚಾಮುಂಡೇಶ್ವರಿಯ ದರ್ಶನಕ್ಕಾಗಿ ಬರುತ್ತಾರೆ. ಅವರಲ್ಲಿ ಪ್ರತಿಯೊಬ್ಬರ ಭಕ್ತಿಯೂ ಅಮೂಲ್ಯವಾಗಿದ್ದು, ₹2,000 ವಿಶೇಷ ದರ್ಶನ ವ್ಯವಸ್ಥೆಯಿಂದ ದೇವಾಲಯಕ್ಕೆ ಹೆಚ್ಚುವರಿ ಆದಾಯ ದೊರೆಯಬಹುದಾದರೂ, ಉಳ್ಳವರಿಗಾಗಿ ಇಲ್ಲವೇ ಹೆಚ್ಚು ಹಣ ನೀಡುವವರಿಗಾಗಿ ಸಾಮಾನ್ಯ ಭಕ್ತರನ್ನು ಹೆಚ್ಚು ಸಮಯ ಸರದಿ ಸಾಲಿನಲ್ಲಿ ನಿಲ್ಲಿಸುವ ಮೂಲಕ ಅನ್ಯಾಯ ಮಾಡುವುದು ತಪ್ಪಾದ ನಿರ್ಧಾರವಾಗುತ್ತದೆ.
ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮತ್ತು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೂ ಸಹ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರ ಅಭಿಪ್ರಾಯದಂತೆ, ₹2,000 ಟಿಕೆಟ್ ಸಾಮಾನ್ಯ ಭಕ್ತರಿಗೆ ಹೊರೆಯಾಗಲಿದ್ದು, ಇಂತಹ ದುಬಾರಿ ದರ ನಿಗದಿಪಡಿಸುವ ಅಗತ್ಯವೇ ಇರಲಿಲ್ಲ. ಭಕ್ತರಿಗೆ ಮುಖ್ಯವಾದುದು ದೇವರ ದರ್ಶನವೇ ಹೊರತು, ಟಿಕೆಟ್ ಜೊತೆಗೆ ನೀಡುವ ವಿಶೇಷ ಕಿಟ್ ಅಲ್ಲ. ಅಧಿಕಾರಿಗಳು ಯಾವ ಆಧಾರದ ಮೇಲೆ ಈ ದರ ನಿಗದಿಪಡಿಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಎಂದಿದ್ದಾರೆ.ಇದೇ ವೇಳೆ, ಈ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಖರೀದಿಸಬೇಕೇ ಅಥವಾ ದೇವಸ್ಥಾನದ ಕೌಂಟರ್‌ನಲ್ಲೇ ದೊರೆಯಲಿದೆಯೇ ಎಂಬ ಕುರಿತು ಇನ್ನೂ ಸ್ಪಷ್ಟ ಮಾಹಿತಿ ನೀಡದಿರುವುದನ್ನೂ ಅವರು ಪ್ರಶ್ನಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಥಳೀಯರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳೂ ಜಿಲ್ಲಾಡಳಿತದ ಈ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ, ಭಕ್ತರಿಗೆ ಅನ್ಯಾಯವಾಗದಂತೆ ಈ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿವೆ.
ದರ್ಶನದ ವೇಗವನ್ನು ಹಣ ನಿರ್ಧರಿಸಬಹುದು, ಆದರೆ ದೇವರ ಕೃಪೆಯನ್ನು ಭಕ್ತಿಯೇ ನಿರ್ಧರಿಸುತ್ತದೆ. ಅದೇ ನಮ್ಮ ಸಂಸ್ಕೃತಿಯ ಸಾರ, ಅದೇ ದೇವಾಲಯಗಳ ಪಾವಿತ್ರ್ಯವನ್ನು ಶಾಶ್ವತವಾಗಿ ಉಳಿಸುವ ಮಾರ್ಗ. ಅದರ ಹೊರತಾಗಿ ದೇವಾಲಯದಲ್ಲೂ ಸಾಮಾನ್ಯ ಮತ್ತು ವಿಶೇಷ ಎಂದು ವರ್ಗೀಕರಿಸಿದಲ್ಲಿ ಅಲ್ಲಿ ಭಕ್ತಿಗಿಂತ ವ್ಯಾಪಾರವೇ ಹೆಚ್ಚಾಗುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
