ಬೆಂಗಳೂರು ಸಂಸ್ಕೃತಿಯ ಹೃದಯ – ಎನ್.ಆರ್. ಕಾಲೋನಿ (ನರಸಿಂಹರಾಜ ಕಾಲೋನಿ)

ಬೆಂಗಳೂರು ಐಟಿ ನಗರವಾಗಿ ವಿಶ್ವಪ್ರಸಿದ್ಧಿಯಾದರೂ, ಇಂದಿಗೂ ಅದರ ಸಾಂಸ್ಕೃತಿಕ ಆತ್ಮವು ದಕ್ಷಿಣ ಬೆಂಗಳೂರಿನ ಬಸವನಗುಡಿ, ಶ್ರೀನಿವಾಸನಗರ, ಹನುಮಂತನಗರ, ತ್ಯಾಗರಾಜನಗರ, ಗಾಂಧಿಬಜಾರ್ ಸಾಕ್ಕಮ್ಮ ಗಾರ್ಡನ್ ಪ್ರದೇಶಗಳಿಂದ ಸುತ್ತುವರಿದ ಬೆಂಗಳೂರಿನ ಸಾಂಸ್ಕೃತಿಕ ಹೃದಯ ಭಾಗ ಎನಿಸಿಕೊಂಡಿರುವ ಎನ್.ಆರ್. ಕಾಲೋನಿ ಪ್ರದೇಶವಾಗಿದ್ದು, ಆ ಪ್ರದೇಶಕ್ಕೆ ಆ ಹೆಸರು ಏಕೆ ಮತ್ತು ಹೇಗೆ ಬಂದಿತು? ಆ ಪ್ರದೇಶ ಅಂದು ಮತ್ತು ಇಂದು ಹೇಗಿದೆ? ಎಂಬೆಲ್ಲಾ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

1898 ಬ್ಯೂಬೋನಿಕ್ ಪ್ಲೇಗ್ ಮಹಾಮಾರಿಯ ಬಳಿಕ ಸಾವಿರಾರು ಜನರು ಸಾವನ್ನಪ್ಪಿದ ಪರಿಣಾಮ, ಬ್ರಿಟಿಷ್ ಆಡಳಿತವು ವಿಶಾಲ ರಸ್ತೆಗಳು ಮತ್ತು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಂದಿಗೆ ಹೊಸ ಯೋಜಿತ ಬಡಾವಣೆಗಳನ್ನು ರೂಪಿಸಿತು. ಅದರ ಪರಿಣಾಮವಾಗಿ ಬಸವನಗುಡಿ, ಮಲ್ಲೇಶ್ವರಂ ಹಾಗೂ ನಂತರ ಎನ್.ಆರ್. ಕಾಲೋನಿ ಅಭಿವೃದ್ಧಿಯಾಯಿತು. ಐತಿಹಾಸಿಕವಾಗಿ ಈ ಪ್ರದೇಶವು ಸುಂಕೇನಹಳ್ಳಿ ಎಂಬ ಕೃಷಿ ಗ್ರಾಮವಾಗಿದ್ದು, ಕಡಲೆಕಾಯಿ ಹೊಲಗಳು ಮತ್ತು ಬುಲ್ ಟೆಂಪಲ್ ಸುತ್ತ ಬೆಳೆದಿತ್ತು. ಇಂದು ಎನ್.ಆರ್. ಕಾಲೋನಿ ಹಳೆಯ ಬೆಂಗಳೂರಿನ ಪರಂಪರೆ, ಧಾರ್ಮಿಕತೆ ಮತ್ತು ಸಾಂಸ್ಕೃತಿಕ ವೈಭವವನ್ನು ಜೀವಂತವಾಗಿಟ್ಟಿರುವ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿದೆ.

ಮೈಸೂರು ಸಂಸ್ಥಾನದ 24ನೇ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲವನ್ನು ಮೈಸೂರು ಸಂಸ್ಥಾನದ ಸುವರ್ಣಯುಗ ಎಂದೇ ಕರೆಯಲಾಗುತ್ತದೆ. ಅವರ ಕಾಲದಲ್ಲಿ ಆದ ಜನ ಪರ ಆಡಳಿತ ಸುಧಾರಣೆಗಳು, ಸಾಮಾಜಿಕ ನ್ಯಾಯ, ಶಿಕ್ಷಣ ಕೃಷಿ, ನೀರಾವರಿ,ವಿದ್ಯುತ್, ಕೈಗಾರೀಕೀರಣ ಇನ್ನೂ ಹತ್ತು ಹಲವಾರು ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಾಗಿ ಅವರಿಗೆ ಸ್ವತಃ ಮಹಾತ್ಮ ಗಾಂಧಿಯವರೇ ರಾಜರ್ಷಿ ಎಂಬ ಬಿರುದು ನೀಡಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಈ ಎಲ್ಲಾ ಸಾಧನೆಯ ಹಿಂದೆ ಬೆನ್ನೆಲುಬಾಗಿ ಸದ್ದಿಲ್ಲದೇ ಎಲೆ ಮರೆಕಾಯಿಯಂತೆ ದುಡಿದ ಶ್ರೇಯ ಅವರ ಒಡ ಹುಟ್ಟಿದ ಸಹೋದರ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರಿಗೇ ಸಲ್ಲುತ್ತದೆ.

ಹತ್ತನೇ ಮಹಾರಾಜ ಚಾಮರಾಜೇಂದ್ರ ಒಡೆಯರ್ ಮತ್ತು ಮಹಾರಾಣಿ ಕೆಂಪನಂಜಮ್ಮಣ್ಣಿ ದೇವಿಯವವರಿಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲ ಮಗ ಅವರ ಸಹೋದರರೇ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರಾಗಿದ್ದು ಶ್ರೀರಾಮನನ್ನು ಹೇಗೆ ಲಕ್ಷಣನು ಜತನದಿಂದ ಕಾಯ್ದನೋ ಅದೇ ರೀತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಯೊಂದು ಕಾರ್ಯದ ಹಿಂದೆಯೂ ಆನೆ ಬಲದಂತೆ ಕಂಠೀರವ ನರಸಿಂಹರಾಜ ಒಡೆಯರ್ ಅವರು ಬೆನ್ನೆಲುಬಾಗಿ ಕಾರ್ಯನಿರ್ವಸಿದ್ದರು.

ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರ ಕೊಡುಗೆ

  • ಮೈಸೂರು ಮಹಾರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಬೆಂಗಳೂರಿನ ನಾಗರಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕಲಾ ಕ್ಷೇತ್ರಗಳ ಬೆಳವಣಿಗೆಗೆ ನೀಡಿದ ಕೊಡುಗೆಗಳು ಅಪಾರವಾಗಿವೆ. ಬೆಂಗಳೂರಿನ  ನಗರದ ಪ್ರಮುಖ ಸಾಹಿತ್ಯ, ನಾಟಕ ಮತ್ತು ಸಾಂಸ್ಕೃತಿಕ ಕೇಂದ್ರವಾಯಿತು. ವ್ಯಾಪಾರ, ಸಾರ್ವಜನಿಕ ಮಾರುಕಟ್ಟೆಗಳು, ಶಿಕ್ಷಣ, ಕಲೆ, ಸಂಗೀತ, ನಾಗರಿಕ ಮೂಲಸೌಕರ್ಯ, ರಸ್ತೆ, ಉದ್ಯಾನ, ನೀರು ಹಾಗೂ ವಿದ್ಯುತ್ ವ್ಯವಸ್ಥೆಗಳ ಅಭಿವೃದ್ಧಿಗೆ ಅವರು ಪ್ರೋತ್ಸಾಹ ನೀಡಿದರು.
  • ಅವರ ಆಶ್ರಯ ಮತ್ತು ಆರ್ಥಿಕ ಸಹಕಾರದಿಂದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್1935 ಸೆಪ್ಟೆಂಬರ್ 11ರಂದು ಜೆ.ಸಿ. ರಸ್ತೆಯಲ್ಲಿರುವ ಟೌನ್ ಹಾಲ್ ( ಸರ್ ಪುಟ್ಟಣ್ಣ ಚೆಟ್ಟಿಪುರಭವನ), ನೃಪತುಂಗ ರಸ್ತೆಯಲ್ಲಿರುವ ಮಿಥಿಕ್ ಸೊಸೈಟಿ ಸೇರಿದಂತೆ ಹಲವು ಐತಿಹಾಸಿಕ ಕಟ್ಟಡಗಳು ನಿರ್ಮಾಣಗೊಂಡವು. ಇದೇ ಸಂದರ್ಭದಲ್ಲಿ ಜುಲೈ 1917ರಲ್ಲಿ ನೃಪತುಂಗ ರಸ್ತೆಯಲ್ಲಿರುವ ಐತಿಹಾಸಿಕ ಡಾಲಿ ಸ್ಮಾರಕ ಸಭಾಂಗಣವನ್ನು ಉದ್ಘಾಟಿಸಿ ಬೆಂಗಳೂರಿನ ಸಾಂಸ್ಕೃತಿಕ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಿದರು.
  • ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರ ಗೌರವಾರ್ಥವಾಗಿಯೇ ಇಂದು ಸಂಪಂಗಿರಾಮನಗರದಲ್ಲಿರುವ ರಾಜ್ಯದ ಹೆಸರಾಂತ ಒಳಾಂಗಣ ಕ್ರೀಡಾಂಗಣಕ್ಕೆ “ಶ್ರೀ ಕಂಠೀರವ ಕ್ರೀಡಾಂಗಣ” ಎಂದು ನಾಮಕರಣ ಮಾಡಲಾಗಿದೆ.
  • ರಾಷ್ಟ್ರಸೇವೆಯಲ್ಲಿಯೂ ಅವರ ಪಾತ್ರ ಗಮನಾರ್ಹವಾಗಿತ್ತು. ಪ್ರಥಮ ಮಹಾಯುದ್ಧದ ಸಂದರ್ಭದಲ್ಲಿ ಮೈಸೂರು ಸಂಸ್ಥಾನದಿಂದ ಸುಮಾರು ೨ ಕೋಟಿ ರೂಪಾಯಿಗಳ ಆರ್ಥಿಕ ನೆರವು ನೀಡಿದ್ದಲ್ಲದೆ, ಮೈಸೂರು ಸಂಸ್ಥಾನದ ಸೈನಿಕರನ್ನು ದೂರದ ಇಸ್ರೇಲ್‌ನ ಹೈಫಾ ಯುದ್ಧಭೂಮಿಗೆ ಕಳುಹಿಸಿ ಅವರು ಸಾಧಿಸಿದ ವಿಜಯದ ಹಿಂದೆಯೂ ನರಸಿಂಹರಾಜ ಒಡೆಯರ್ ಅವರ ದೂರದೃಷ್ಟಿ ಮತ್ತು ನಾಯಕತ್ವವಿತ್ತು.
  • ಮಹಾತ್ಮ ಗಾಂಧೀಜಿ ಅವರು ಮೈಸೂರು ಸಂಸ್ಥಾನಕ್ಕೆ 1915ರ ಮೇ, 1927ರ ಆಗಸ್ಟ್ ಹಾಗೂ 1934ರ ಜನವರಿಯಲ್ಲಿ ಭೇಟಿ ನೀಡಿದಾಗ, ಅವರ ಪ್ರವಾಸದ ಸಂಪೂರ್ಣ ವ್ಯವಸ್ಥೆ ಮತ್ತು ವೆಚ್ಚವನ್ನು ವಹಿಸಿಕೊಂಡು ರಾಷ್ಟ್ರಪಿತರಿಗೆ ಅತ್ಯುನ್ನತ ಗೌರವ ಸಲ್ಲಿಸಿದವರೂ ಇವರೇ.
  • ಸಂಗೀತ ಮತ್ತು ಕಲೆಯ ಪೋಷಕರಾಗಿದ್ದ ನರಸಿಂಹರಾಜ ಒಡೆಯರ್ ಅವರು, 1902ರಲ್ಲಿ ಭಾರತದ ಮೊದಲ ಗ್ರಾಮೋಫೋನ್ ಧ್ವನಿಮುದ್ರಣ ಕಲಾವಿದೆಯಾಗಿ ಖ್ಯಾತಿ ಪಡೆದ ಗೋಹರ್ ಜಾನ್ ಅವರು ನಂತರ ಗ್ವಾಲಿಯರ್‌ನಲ್ಲಿ ಇದ್ದಾಗ ಅವರ ಪ್ರತಿಭೆಯನ್ನು ಗುರುತಿಸಿ, ಮುಂಬೈ ಮೂಲಕ ಮೈಸೂರಿಗೆ ಆಹ್ವಾನಿಸಿ ಆಸ್ಥಾನ ಗಾಯಕಿಯಾಗಿ ನೇಮಿಸಿದರು. ಇದರಿಂದ ಮೈಸೂರು ಸಂಸ್ಥಾನವು ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಮುಖ ಕೇಂದ್ರವಾಗಿ ಮತ್ತಷ್ಟು ಹೆಸರು ಗಳಿಸಿತು.

ಒಟ್ಟಾರೆಯಾಗಿ, ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಆಡಳಿತಗಾರರಷ್ಟೇ ಅಲ್ಲದೆ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ, ರಾಷ್ಟ್ರಸೇವೆ ಮತ್ತು ಸಾರ್ವಜನಿಕ ಮೂಲಸೌಕರ್ಯಗಳ ಮಹಾನ್ ಪೋಷಕರಾಗಿ ಕರ್ನಾಟಕದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ.

ಎನ್.ಆರ್. ಕಾಲೋನಿ ಹೆಸರಿನ ಹಿಂದಿರುವ ವ್ಯಕ್ತಿತ್ವವೇ, ಶ್ರೀ ಕಂಠೀರವ ನರಸಿಂಹರಾಜ ಒಡೆಯರ್

ಹಾಗಾಗಿಯೇ 1950ರ ದಶಕದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ರೂಪುಗೊಂಡ ಈ ಬಡಾವಣೆಗೆ ಸರಳ ವ್ಯಕ್ತಿತ್ವ, ಜನಪರ ಮನೋಭಾವ ಹಾಗೂ ಶಿಕ್ಷಣ–ಸಂಸ್ಕೃತಿಯ ಮೇಲಿನ ಅಭಿಮಾನದಿಂದ ಅವರು ಬೆಂಗಳೂರಿನ ಯೋಜಿತ ನಗರೀಕರಣದ ಮೌನ ಶಿಲ್ಪಿಗಳಲ್ಲಿ ಒಬ್ಬರು ಎಂಬ ಗೌರವಕ್ಕೆ ಪಾತ್ರರಾಗಿದ್ದ, ಮೈಸೂರು ರಾಜವಂಶದ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರ ಗೌರವಾರ್ಥವಾಗಿ ನರಸಿಂಹರಾಜ ಕಾಲೋನಿ ಎಂದು ನಾಮಕರಣ ಮಾಡಲಾಗಿ ಅದು ಜನರ ಬಾಯಿಯಲ್ಲಿ Short & Sweet ಆಗಿ N. R. ಕಾಲೋನಿ ಎಂದೇ ಚಿರಪರಿತವಾಯಿತು,

ಎನ್.ಆರ್. ಕಾಲೋನಿ ಗೆಳೆಯರ ಬಳಗ – ಕನ್ನಡ ಸಂಸ್ಕೃತಿಯ ಜೀವಂತ ವೇದಿಕೆ

1920–30ರ ದಶಕಗಳಲ್ಲಿ, ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದ ಕಾಲದಲ್ಲಿ, ಎನ್.ಆರ್. ಕಾಲೋನಿಯ ನಿವಾಸಿಗಳು ಪ್ರತಿದಿನ ಸಂಜೆ ಒಂದೆಡೆ ಸೇರಿ ರಾಜಕೀಯ, ಕನ್ನಡ ಸಾಹಿತ್ಯ, ಸಂಗೀತ, ನಾಟಕ, ಸಿನಿಮಾ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚಿಸುತ್ತಿದ್ದ ಸಂಸ್ಕೃತಿಯೇ ಕಟ್ಟೆಬಳಗವಾಗಿ ಬೆಳೆದಿತು.

ಯಾವುದೇ ಸದಸ್ಯತ್ವ, ಅಧ್ಯಕ್ಷ ಅಥವಾ ನಿಯಮಾವಳಿಗಳಿಲ್ಲದೆ ಜನಸಾಮಾನ್ಯರ ಬದುಕಿನಿಂದಲೇ ಹುಟ್ಟಿದ ಈ ವೇದಿಕೆ, ಅನೇಕ ಸಾಹಿತಿಗಳು, ಕಲಾವಿದರು, ಪತ್ರಕರ್ತರು ಹಾಗೂ ಚಿಂತಕರ ವಿಚಾರ ವಿನಿಮಯದ ಕೇಂದ್ರವಾಗಿತ್ತು. ಕಾಲಕ್ರಮೇಣ ರಕ್ತದಾನ ಶಿಬಿರಗಳು, ಸ್ವಚ್ಛತಾ ಅಭಿಯಾನಗಳು, ಬಡ ವಿದ್ಯಾರ್ಥಿಗಳಿಗೆ ನೆರವು, ಉಚಿತ ಪಾಠ, ಕನ್ನಡ ರಾಜ್ಯೋತ್ಸವ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಸ್ಥಳೀಯರ ಸಹಕಾರದಿಂದ ನಡೆಸುತ್ತಾ, ಎನ್.ಆರ್. ಕಾಲೋನಿ ಗೆಳೆಯರ ಬಳಗ (ಕಟ್ಟೆ ಬಳಗ) ಇಂದಿಗೂ ಹಳೆಯ ಬೆಂಗಳೂರಿನ ಸಮುದಾಯ ಜೀವನ ಮತ್ತು ಕನ್ನಡ ಸಂಸ್ಕೃತಿಯ ಜೀವಂತ ಸಂಕೇತವಾಗಿ ಉಳಿದಿದೆ.

ಎನ್.ಆರ್. ಕಾಲೋನಿಯ ಮಾಡಲ್ ಹೌಸ್ ಸ್ಟ್ರೀಟ್

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ರಾಜ್ಯದ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದ . ತಂಡೋನಿ ರಾವ್ ಅವರು ಕನ್ನಂಬಾಡಿ ಅಣೆಕಟ್ಟು ನಿರ್ಮಾಣದ ಜೊತೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮಕ್ಕಳ ವಿಭಾಗ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳ ನಿರ್ಮಾಣದ ಮೇಲ್ವಿಚಾರಣೆ ವಹಿಸಿದ್ದರು. ನಿವೃತ್ತಿಯ ನಂತರ ಅವರು ತಮ್ಮ ಖಾಸಗಿ ನಿವಾಸವನ್ನು ಆ ಕಾಲದ ಅತ್ಯಾಧುನಿಕ ನಿರ್ಮಾಣ ತತ್ವಗಳನ್ನು ಅನುಸರಿಸಿ ಕಟ್ಟಿದರು. ಆ ಮನೆಯ ವಿನ್ಯಾಸದಿಂದ ಆಕರ್ಷಿತರಾದ ಜನರು ಅದನ್ನು ಮಾಡಲ್ ಹೌಸ್ ಎಂದು ಕರೆಯಲಾರಂಭಿಸಿದರು. ಕ್ರಮೇಣ ಆ ರಸ್ತೆಗೆ Model House Street ಎಂಬ ಹೆಸರು ಬಂತು. ಬಳಿಕ ಸುತ್ತಮುತ್ತಲಿನ ಮನೆಗಳೂ ಗಾಳಿ–ಬೆಳಕು, ಒಳಚರಂಡಿ, ನೀರು ಹಾಗೂ ಆರೋಗ್ಯಕರ ವಾಸಸ್ಥಳದ ತತ್ವಗಳನ್ನು ಅನುಸರಿಸಿ ನಿರ್ಮಾಣವಾದ ಕಾರಣ, ಆ ಪ್ರದೇಶವು 1st, 2nd ಮತ್ತು 3rd Model House Street ಎಂಬ ಹೆಸರಿನಿಂದ ಇಂದಿಗೂ ಪ್ರಸಿದ್ಧಿಯಲ್ಲಿದೆ.

ಎನ್.ಆರ್. ಕಾಲೋನಿಯ ಪ್ಲೇಗ್ ಮಾರಮ್ಮ ದೇವಾಲಯ

1898ರಲ್ಲಿ ಬೆಂಗಳೂರಿನಲ್ಲಿ ಪ್ಲೇಗ್ ಮಹಾಮಾರಿ ಕಾಣಿಸಿಕೊಂಡು ಸಾವಿರಾರು ಜನರು ಸಾವನ್ನಪ್ಪಿದಾಗ, ಅದನ್ನು ದೇವಿಯ ಕೋಪವೆಂದು ನಂಬಿದ್ದ ಜನರಲ್ಲಿ ಪ್ಲೇಗಮ್ಮ (ಪ್ಲೇಗ್ ಮಾರಮ್ಮ) ಆರಾಧನೆ ಆರಂಭವಾಯಿತು. ವೈದ್ಯಕೀಯ ಸೌಲಭ್ಯಗಳು ಸೀಮಿತವಾಗಿದ್ದ ಕಾರಣ, ದೇವಿಗೆ ಹರಕೆ ಹೊತ್ತರೆ ರೋಗ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿಂದ ಸುಮಾರು 100 ವರ್ಷಗಳ ಹಿಂದೆ, ಇಂದಿನ ತ್ಯಾಗರಾಜನಗರ 2ನೇ ಮುಖ್ಯರಸ್ತೆಯಲ್ಲಿ, ಎನ್.ಆರ್. ಕಾಲೋನಿಬಸವನಗುಡಿ ಗಡಿಯಲ್ಲಿರುವ ತ್ರಿವೇಣಿ ಮೆಡಿಕಲ್ಸ್ ಸಮೀಪ ಸಣ್ಣ ಕಲ್ಲಿನ ದೇವರಗುಡಿಯಾಗಿ ಈ ದೇವಸ್ಥಾನ ನಿರ್ಮಾಣವಾಗಿ, ನಂತರ ಭಕ್ತರ ಸಹಕಾರದಿಂದ ದೊಡ್ಡ ದೇವಾಲಯವಾಗಿ ಬೆಳೆಯಿತು. ಪ್ಲೇಗ್ ಕಾಲದಿಂದಲೇ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಇಂದಿಗೂ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಹೊಸ ಮನೆ, ಹೊಸ ವ್ಯಾಪಾರ ಹಾಗೂ ಮಕ್ಕಳ ಆರೋಗ್ಯಕ್ಕಾಗಿ ಹರಕೆ ಹೊರುವ ಸಂಪ್ರದಾಯವೂ ಮುಂದುವರಿದಿದೆ. 2020 ಕೋವಿಡ್ ಮಹಾಮಾರಿಯ ಸಂದರ್ಭದಲ್ಲೂ, ಪ್ಲೇಗ್ ಕಾಲದಂತೆ ಅನೇಕರು ಆರೋಗ್ಯ ಮತ್ತು ರಕ್ಷಣೆಗಾಗಿ ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಇತಿಹಾಸ ಮರುಕಳಿಸಿದಂತಾಯಿತು.

ಎನ್.ಆರ್. ಕಾಲೋನಿ ಶ್ರೀ ರಾಮ ಮಂದಿರ ಟ್ರಸ್ಟ್ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ

ಎನ್.ಆರ್. ಕಾಲೋನಿ, ಬಸವನಗುಡಿ ಹಾಗೂ ಸುತ್ತಮುತ್ತಲಿನ ನಿವಾಸಿಗಳ ಸಹಕಾರದಿಂದ ಶ್ರೀರಾಮನ ಆರಾಧನೆ ಮತ್ತು ಸಾರ್ವಜನಿಕ ಚಟುವಟಿಕೆಗಳಿಗೆ ಶಾಶ್ವತ ವೇದಿಕೆ ನಿರ್ಮಿಸುವ ಉದ್ದೇಶದಿಂದ ಸ್ಥಾಪಿತವಾದ ಶ್ರೀ ರಾಮ ಮಂದಿರ ಟ್ರಸ್ಟ್, ಕಳೆದ ಒಂಬತ್ತು ದಶಕಗಳಿಂದ ಈ ಪ್ರದೇಶದ ಪ್ರಮುಖ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕೇಂದ್ರವಾಗಿ ಬೆಳೆದಿದೆ. ದೇವಾಲಯದಲ್ಲಿ ಶ್ರೀರಾಮ, ಸೀತಾದೇವಿ, ಲಕ್ಷ್ಮಣ ಹಾಗೂ ಶ್ರೀ ಆಂಜನೇಯಸ್ವಾಮಿಯ ವಿಗ್ರಹಗಳಿದ್ದು, ಶ್ರೀರಾಮನವಮಿ, ಹನುಮ ಜಯಂತಿ, ವೈಕುಂಠ ಏಕಾದಶಿ, ನವರಾತ್ರಿ ಹಾಗೂ ದೀಪಾವಳಿ ಸೇರಿದಂತೆ ಪ್ರಮುಖ ಉತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಟ್ರಸ್ಟ್ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆಧ್ಯಾತ್ಮಿಕ ಉಪನ್ಯಾಸ, ವೇದ–ಭಗವದ್ಗೀತಾ ಪಾಠ, ಹಿರಿಯ ನಾಗರಿಕರ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಟ್ರಸ್ಟ್ ಆವರಣದಲ್ಲಿ ಸುಮಾರು 450 ಆಸನಗಳ ಸಭಾಂಗಣ ಮತ್ತು ಹವಾನಿಯಂತ್ರಿತ ಕಲ್ಯಾಣ ಮಂಟಪಗಳಿದ್ದು, ವರ್ಷಪೂರ್ತಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮುದಾಯ ಕಾರ್ಯಕ್ರಮಗಳಿಗೆ ಆತಿಥ್ಯ ವಹಿಸುತ್ತಿವೆ.

ಎನ್.ಆರ್. ಕಾಲೋನಿಯ ಪ್ರಸಿದ್ಧ ಉಪಹಾರ ಮತ್ತು ಆಹಾರ ತಾಣಗಳು

ಎನ್.ಆರ್. ಕಾಲೋನಿ ಮತ್ತು ಅದರ ಸುತ್ತಮುತ್ತಲಿನ ಬಸವನಗುಡಿ ಪ್ರದೇಶವು ಬೆಂಗಳೂರಿನ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯ ಹೃದಯಭಾಗವೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ದರ್ಶಿನಿಗಳು, ಸಣ್ಣ ಹೋಟೆಲ್‌ಗಳು ಮತ್ತು ಖಾನಾವಳಿಗಳು ಹಲವು ದಶಕಗಳಿಂದ ಸ್ಥಳೀಯರಷ್ಟೇ ಅಲ್ಲದೆ ನಗರದ ಮೂಲೆ ಮೂಲೆಗಳಿಂದ ಬರುವ ಆಹಾರ ಪ್ರಿಯರನ್ನು ಆಕರ್ಷಿಸುತ್ತಿವೆ.

  • Hotel Dwarka – ತನ್ನ ಮೃದುವಾದ ಖಾಲಿ ದೋಸೆ, ಬೆಣ್ಣೆ ದೋಸೆ, ಪಲ್ಯ ಮತ್ತು ಫಿಲ್ಟರ್ ಕಾಫಿಗೆ ಹೆಸರುವಾಸಿ. ಅನೇಕ ದಶಕಗಳಿಂದ ಎನ್.ಆರ್. ಕಾಲೋನಿಯ ಗುರುತಾಗಿ ಉಳಿದಿರುವ ಈ ಹೋಟೆಲ್ ಇಂದಿಗೂ ಬೆಳಗಿನ ಉಪಹಾರ ಪ್ರಿಯರ ಮೊದಲ ಆಯ್ಕೆಯಾಗಿದೆ.
  • Upahara Darshini – ಹೋಟೆಲ್ ಉದ್ಯಮದ ಪ್ರವರ್ತಕ ಆರ್. ಪ್ರಭಾಕರ್ ಅವರು 1993–95 ಅವಧಿಯಲ್ಲಿ ಡಿವಿಜಿ ರಸ್ತೆಯಲ್ಲಿ ಆರಂಭಿಸಿದ ಈ ಸಂಸ್ಥೆ, ಬೆಂಗಳೂರಿನಲ್ಲಿ ಆಧುನಿಕ ಸ್ವಯಂಸೇವೆ (Self-Service) ದರ್ಶಿನಿ ಸಂಸ್ಕೃತಿಗೆ ಹೊಸ ದಿಕ್ಕು ನೀಡಿತು. ಉತ್ತಮ ಗುಣಮಟ್ಟದ ಇಡ್ಲಿ, ದೋಸೆ, ವಡೆ, ಬೊಂಡಾ ಸೂಪ್ ಮತ್ತು ಫಿಲ್ಟರ್ ಕಾಫಿಯಿಂದ ಇಂದಿಗೂ ಜನಪ್ರಿಯವಾಗಿದೆ.
  • South Kitchen – ಸಂಪ್ರದಾಯಬದ್ಧ ಕನ್ನಡ ಶೈಲಿಯ ಉಪಹಾರ, ಮೃದುವಾದ ಇಡ್ಲಿ, ವಿವಿಧ ಬಗೆಯ ದೋಸೆ ಮತ್ತು ಮನೆಯ ರುಚಿಯ ಊಟಕ್ಕಾಗಿ ಹೆಸರಾಗಿದೆ.
  • Puliyogare Point – ಪುಳಿಯೋಗರೆ, ಚಿತ್ರಾನ್ನ, ಮೊಸರನ್ನ, ಖಾರಾಬಾತ್ ಮತ್ತು ಸಾಂಪ್ರದಾಯಿಕ ಕರ್ನಾಟಕದ ತಿನಿಸುಗಳಿಗಾಗಿ ಬೆಂಗಳೂರಿನಾದ್ಯಂತ ಪ್ರಸಿದ್ಧಿ ಪಡೆದಿದೆ.
  • Eat Rep Eat – ಯುವಜನರ ಮೆಚ್ಚಿನ ತಾಣವಾಗಿದ್ದು, ದಕ್ಷಿಣ ಭಾರತೀಯ ಉಪಹಾರಗಳ ಜೊತೆಗೆ ನವೀನ ಶೈಲಿಯ ತಿನಿಸುಗಳನ್ನೂ ನೀಡುತ್ತಿದೆ.

ಇವುಗಳ ಜೊತೆಗೆ, ವಿದ್ಯಾರ್ಥಿ ಭವನ, ಬ್ರಾಹ್ಮಿನ್ಸ್ ಕಾಫಿ ಬಾರ್, ಎಂ.ಟಿ.ಆರ್., ಕಮತ್ ಬಗಲ್ ರಾಕ್ ಹಾಗೂ ಬಸವೇಶ್ವರ ಖಾನಾವಳಿ ಮೊದಲಾದ ಬೆಂಗಳೂರಿನ ಐತಿಹಾಸಿಕ ಆಹಾರ ತಾಣಗಳೂ ಎನ್.ಆರ್. ಕಾಲೋನಿಯಿಂದ ಕೆಲವೇ ನಿಮಿಷಗಳ ಅಂತರದಲ್ಲಿದ್ದು, ಈ ಪ್ರದೇಶವನ್ನು ನಿಜಕ್ಕೂ ಬೆಂಗಳೂರು ಉಪಹಾರ ಸಂಸ್ಕೃತಿಯ ಕೇಂದ್ರಬಿಂದುವಾಗಿ ರೂಪಿಸಿವೆ.

ಸಮುದಾಯದ ಪರಂಪರೆ ಮತ್ತು ಆಧುನಿಕ ರೂಪಾಂತರ

ಎನ್.ಆರ್. ಕಾಲೋನಿ ಕೇವಲ ವಸತಿ ಪ್ರದೇಶವಲ್ಲ; ಇದು ಬೆಂಗಳೂರಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪತ್ರಿಕೋದ್ಯಮದ ಇತಿಹಾಸವನ್ನು ತನ್ನೊಳಗೆ ಹೊತ್ತಿರುವ ಬಡಾವಣೆಯಾಗಿದೆ. ಎನ್.ಆರ್. ಕಾಲೋನಿ ಮುಖ್ಯರಸ್ತೆ ಮತ್ತು ಡಿ.ವಿ.ಜಿ. ರಸ್ತೆಯ ಸಂಗಮದಲ್ಲಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಸಂಸ್ಥಾಪಕರಾದ ಶ್ರೀ ಕೆ. ನೆಟ್ಟಕಲ್ಲಪ್ಪ ಅವರ ಸ್ಮರಣಾರ್ಥ ನಿರ್ಮಿಸಲಾದ ಐತಿಹಾಸಿಕ ಬಸ್ ತಂಗುದಾಣ ಇಂದಿಗೂ ಈ ಪ್ರದೇಶದ ಹೆಗ್ಗುರುತಾಗಿದೆ.

ಇಂದಿನ ಎನ್.ಆರ್. ಕಾಲೋನಿ, 70 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ವಸತಿ ಪ್ರದೇಶಗಳಲ್ಲಿ ಒಂದಾಗಿದೆ. ವಿಶಾಲವಾದ ಮರಗಳಿಂದ ಆವೃತ ರಸ್ತೆಗಳು, ಹಳೆಯ ಸ್ವತಂತ್ರ ಮನೆಗಳು, ಮಧ್ಯಮ ಎತ್ತರದ ಅಪಾರ್ಟ್‌ಮೆಂಟ್‌ಗಳು ಮತ್ತು ಆಧುನಿಕ ಸೌಲಭ್ಯಗಳ ಸಮತೋಲನ ಇಲ್ಲಿನ ವಿಶೇಷತೆ. ನಮ್ಮ ಮೆಟ್ರೋ ಗ್ರೀನ್ ಲೈನ್‌ನ ಸೌತ್ ಎಂಡ್ ಸರ್ಕಲ್ ನಿಲ್ದಾಣ ಈ ಪ್ರದೇಶಕ್ಕೆ ಸುಲಭ ಸಂಪರ್ಕ ಕಲ್ಪಿಸಿದ್ದು, ಹಳೆಯ ಬೆಂಗಳೂರಿನ ಸೊಗಡನ್ನು ಉಳಿಸಿಕೊಂಡೇ ಆಧುನಿಕ ನಗರ ಜೀವನವನ್ನು ಅಳವಡಿಸಿಕೊಂಡಿರುವ ಅಪರೂಪದ ಬಡಾವಣೆಯಾಗಿದೆ.

ಶಿಕ್ಷಣ ಮತ್ತು ಸಂಸ್ಕೃತಿಯ ಕೇಂದ್ರ

ಎನ್.ಆರ್. ಕಾಲೋನಿ–ಬಸವನಗುಡಿ ಪ್ರದೇಶವು ನ್ಯಾಷನಲ್ ಕಾಲೇಜು, ಬಸವನಗುಡಿ, ಆಚಾರ್ಯ ಪಾಠಶಾಲೆ (APS), ಬಿಎಂಎಸ್ ಶಿಕ್ಷಣ ಸಂಸ್ಥೆಗಳು, ಕುಮಾರನ್ಸ್, ರಾಮಕೃಷ್ಣ ಆಶ್ರಮ ಸೇರಿದಂತೆ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ನೆಲೆಯಾಗಿದೆ. ಇದೇ ಕಾರಣಕ್ಕೆ ಇದನ್ನು ಹಳೆಯ ಬೆಂಗಳೂರಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರ ಎಂದು ಕರೆಯಲಾಗುತ್ತದೆ. ಕನ್ನಡ ಸಾಹಿತ್ಯ, ಸಂಗೀತ, ನಾಟಕ, ಹರಿಕಥೆ, ಉಪನ್ಯಾಸಗಳು ಮತ್ತು ಸಮುದಾಯ ಚಟುವಟಿಕೆಗಳು ಇಂದಿಗೂ ಇಲ್ಲಿ ಜೀವಂತವಾಗಿವೆ.

ಡಾ. ಸಿ. ಅಶ್ವಥ್ ಕಲಾ ಭವನ

ಡಾ. ಸಿ. ಅಶ್ವಥ್ ಮತ್ತು ಬೆಂಗಳೂರಿನ ಎನ್.ಆರ್. ಕಾಲೋನಿ (ನರಸಿಂಹರಾಜ ಕಾಲೋನಿ) ನಡುವೆ ಅತ್ಯಂತ ಆತ್ಮೀಯ, ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಸಂಬಂಧವಿದೆ. ಕನ್ನಡ ಸುಗಮ ಸಂಗೀತದ ಧ್ರುವತಾರೆಯಾಗಿದ್ದ ಸಿ. ಅಶ್ವಥ್ ಅವರ ಜೀವನದ ಪ್ರಮುಖ ಅಧ್ಯಾಯವೊಂದು ಈ ಪ್ರದೇಶದೊಂದಿಗೆ ಬೆಸೆದುಕೊಂಡಿದೆ. ಚಾಮರಾಜಪೇಟೆಯಲ್ಲಿ ಬಾಲ್ಯ ಕಳೆದಿದ್ದ ಸಿ. ಅಶ್ವಥ್ ಅವರು ತಮ್ಮ ಪ್ರೌಢ ಶಿಕ್ಷಣವನ್ನು ಎನ್.ಆರ್. ಕಾಲೋನಿಯ ಪ್ರತಿಷ್ಠಿತ ಆಚಾರ್ಯ ಪಾಠಶಾಲೆ (Acharya Pathasala – APS) ಯಲ್ಲಿ ಪೂರ್ಣಗೊಳಿಸಿದರು. ಶಾಲಾ ದಿನಗಳಲ್ಲೇ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳತ್ತ ಅವರಲ್ಲಿ ಮೂಡಿದ ಆಸಕ್ತಿಯೇ ಮುಂದೆ ಅವರನ್ನು ಕನ್ನಡ ಸುಗಮ ಸಂಗೀತದ ಅಪರೂಪದ ಗಾಯಕ, ಸಂಗೀತ ನಿರ್ದೇಶಕ ಹಾಗೂ ಸಂಯೋಜಕರನ್ನಾಗಿ ರೂಪಿಸಿತು.

ಅವರ ಕನ್ನಡ ಸಂಗೀತ ಕ್ಷೇತ್ರದ ಅಪಾರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಪಾಲಿಕೆ (BBMP) ಎನ್.ಆರ್. ಕಾಲೋನಿಯಲ್ಲಿ, ಬಸ್ ನಿಲ್ದಾಣದ ಎದುರು ಡಾ. ಸಿ. ಅಶ್ವಥ್ ಕಲಾ ಭವನವನ್ನು ನಿರ್ಮಿಸಿ ಅವರ ಹೆಸರನ್ನೇ ಇಟ್ಟಿದೆ. ಇಂದು ಈ ಸಭಾಂಗಣವು ಬಸವನಗುಡಿ ಮತ್ತು ಎನ್.ಆರ್. ಕಾಲೋನಿ ಭಾಗದ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದ್ದು, ನಾಟಕಗಳು, ಸುಗಮ ಸಂಗೀತ ಕಚೇರಿಗಳು, ನೃತ್ಯ ಪ್ರದರ್ಶನಗಳು, ಸಾಹಿತ್ಯಿಕ ಕಾರ್ಯಕ್ರಮಗಳು ಮತ್ತು ವಿವಿಧ ಕಲಾ ಚಟುವಟಿಕೆಗಳಿಗೆ ಪ್ರಮುಖ ವೇದಿಕೆಯಾಗಿದೆ. ಹೀಗೆ, ವಿದ್ಯಾರ್ಥಿಯಾಗಿ ತಮ್ಮ ಕನಸುಗಳಿಗೆ ಅಡಿಪಾಯ ಹಾಕಿಕೊಂಡ ನೆಲದಲ್ಲೇ ಇಂದು ಅವರ ಹೆಸರಿನ ಸಾಂಸ್ಕೃತಿಕ ಭವನ ತಲೆ ಎತ್ತಿ ನಿಂತಿರುವುದು, ಡಾ. ಸಿ. ಅಶ್ವಥ್ ಮತ್ತು ಎನ್.ಆರ್. ಕಾಲೋನಿ ನಡುವಿನ ಅವಿನಾಭಾವ ಸಂಬಂಧಕ್ಕೆ ಜೀವಂತ ಸಾಕ್ಷಿಯಾಗಿದೆ.

ಕಹಳೆ ಬಂಡೆ– ಬೆಂಗಳೂರಿನ ಪ್ರಾಚೀನ ಕಾವಲುಗಲ್ಲು

ಸುಮಾರು 3,000 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಕಹಳೆ ಬಂಡೆ, ಬೆಂಗಳೂರಿನ ಅತ್ಯಂತ ಪ್ರಾಚೀನ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಇಲ್ಲಿ ಕಾವಲುಗಾರರು ನಿಂತು ಬುಗಲ್ ಊದುತ್ತಿದ್ದ ಕಾರಣವೇ Bugle Rock ಎಂಬ ಹೆಸರು ಬಂದಿದೆ. ಇಂದು ಇದು ಹಿರಿಯ ನಾಗರಿಕರ ವಾಕಿಂಗ್ ಸ್ಥಳ, ಮಕ್ಕಳ ಆಟದ ತಾಣ, ಹಕ್ಕಿಪ್ರಿಯರ ಸ್ವರ್ಗ ಹಾಗೂ ಪ್ರಕೃತಿ ಪ್ರೇಮಿಗಳ ನೆಚ್ಚಿನ ಉದ್ಯಾನವಾಗಿದೆ.

ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಪುತ್ಥಳಿ ಅನಾವರಣ

ಇತ್ತೀಚೆಗೆ ಎನ್ ಆರ್ ಕಾಲೋನಿಯ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನರಸಿಂಹರಾಜ ಒಡೆಯರ್ ಅವರ 138ನೇ ಜಯಂತ್ಯೊತ್ಸವದ ಸಂಧರ್ಭದಲ್ಲಿ ಅವರ ಪುತ್ಥಳಿಯ ಅನಾವರಣವನ್ನು ಯುವರಾಜ ಯದುವೀರ್ ಮತ್ತು ಶ್ರೀ ಶತಾವಧಾನಿ ಗಣೇಶ್, ಬಸವನಗುಡಿ ಕ್ಷೇತ್ರದ ಶಾಸಕರಾದ ಶ್ರೀ ರವಿ ಸುಬ್ರಹ್ಮಣ್ಯ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ ಎ ಶರವಣ ಅವರ ಉಪಸ್ಥಿತಿಯಲ್ಲಿ ಬಹಳ ಅದ್ದೂರಿಯಾಗಿ ನಡೆಸಲಾಗಿದೆ

ಕೊನೆಯ ಮಾತು

ಬೆಂಗಳೂರು ಎಷ್ಟೇ ಆಧುನಿಕವಾಗಿದ್ದರೂ, ಅದರ ನಿಜವಾದ ಆತ್ಮವನ್ನು ಅನುಭವಿಸಬೇಕಾದರೆ ಎನ್.ಆರ್. ಕಾಲೋನಿಯ ಬೀದಿಗಳಲ್ಲಿ ಒಮ್ಮೆ ನಡೆದು ಬರಲೇಬೇಕು. ಕಹಳೆ ಬಂಡೆ,  ಬುಲ್ ಟೆಂಪಲ್, ಗಾಂಧಿಬಜಾರ್, ದ್ವಾರಕಾ ಹೋಟೆಲ್‌ನ ದೋಸೆ, ಉಪಹಾರ ದರ್ಶಿನಿಯ ಫಿಲ್ಟರ್ ಕಾಫಿ, ಕಟ್ಟೆಬಳಗದ ಚರ್ಚೆಗಳು, ಶ್ರೀ ರಾಮ ಮಂದಿರದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಇಲ್ಲಿನ ಜನರ ಆತ್ಮೀಯತೆ—ಇವೆಲ್ಲವೂ ಸೇರಿ ಎನ್.ಆರ್. ಕಾಲೋನಿಯನ್ನು ಹಳೆಯ ಬೆಂಗಳೂರಿನ ಸಾಂಸ್ಕೃತಿಕ ಹೃದಯವನ್ನಾಗಿ ರೂಪಿಸಿವೆ.

ಹಳೆಯ ಬೆಂಗಳೂರನ್ನು ನೋಡಬೇಕೆಂದರೆ ಒಮ್ಮೆ ಎನ್.ಆರ್. ಕಾಲೋನಿಯ ಬೀದಿಗಳಲ್ಲಿ ನಿಧಾನವಾಗಿ ನಡೆದು  ಕೊಂಡು ಹೋಗುತ್ತಾ, ಅಲ್ಲಿನ ಪ್ರತಿಯೊಂದು ರಸ್ತೆ, ಪ್ರತಿಯೊಂದು ಕಟ್ಟೆ, ಪ್ರತಿಯೊಂದು ದೇವಾಲಯವೂ ಬೆಂಗಳೂರಿನ ನೂರಾರು ವರ್ಷಗಳ ಕಥೆಯನ್ನು ನಿಮಗೆ ಹೇಳುತ್ತದೆ.”

ಬೆಂಗಳೂರು ಸಂಸ್ಕೃತಿಯ ಹೃದಯ ಭಾಗವಾದ ಎನ್.ಆರ್. ಕಾಲೋನಿ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿದ ಮೇಲೇ, ಅದೇ ಪ್ರದೇಶದಲ್ಲಿ ಹುಟ್ಟಿ ಬೆಳೆದಾವರು, ಪ್ರಸ್ತುತ ಅಲ್ಲೇ ವಾಸಿಸುತ್ತಿರುವವರು, ಈ ಹಿಂದೆ ಅಲ್ಲಿ ವಾಸಿಸಿದ್ದವರು, ಅಥವಾ ಅಲ್ಲಿನ ಬಗ್ಗೆ ಹೆ‍ಚ್ಚಿನ ಮಾಹಿತಿ ತಿಳಿದಿದ್ದವರು ಎನ್.ಆರ್. ಕಾಲೋನಿಯ ಕುರಿತಾದ ತಮ್ಮ ಅನುಭವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಎನಂತೀರೀ?
ನಿಮ್ಮವನೇ ಉಮಾಸುತ

Leave a Reply