ಇದು ವ್ಯಕ್ತಿ ಪೂಜೆಯಲ್ಲ, ತತ್ವ ಪೂಜೆಯ ಮಹಾನ್ ಗುರು ಪರಂಪರೆ. ಗುರುದಕ್ಷಿಣೆ ಎನ್ನುವುದು ಕೇವಲ ಅರ್ಪಣೆಯಲ್ಲಾ ಅದು ಸ್ವಯಂಸೇವಕರ ಸಮರ್ಪಣೆ
ಭಾರತೀಯ ಸಂಸ್ಕೃತಿಯಲ್ಲಿ “ಗುರು ಬ್ರಹ್ಮಾ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ“ ಎಂಬ ಮಾತಿಗೆ ಅತ್ಯಂತ ಉನ್ನತ ಸ್ಥಾನವಿದೆ. ಜ್ಞಾನವನ್ನು ನೀಡುವ ಗುರುವನ್ನು ದೇವರ ಸಮಾನವಾಗಿ ಕಾಣುವ ಪರಂಪರೆ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಬೆಳೆದು ಬಂದಿದೆ. ಇದೇ ಗುರುತತ್ವವನ್ನು ವಿಶಿಷ್ಟ ರೀತಿಯಲ್ಲಿ ಅಳವಡಿಸಿಕೊಂಡಿರುವ ಸಂಘಟನೆ ಎಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್).
ಸಂಘದಲ್ಲಿ ಸಂಪ್ರದಾಯದಂತೆ ಆಷಾಢ ಪೂರ್ಣಿಮೆ (ವ್ಯಾಸ ಪೂರ್ಣಿಮೆ) ಯಂದು ಗುರುಪೂಜೋತ್ಸವ ಆಚರಿಸಲಾಗುತ್ತಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಎಲ್ಲ ಸ್ವಯಂಸೇವಕರ ಅನುಕೂಲಕ್ಕಾಗಿ ಇದನ್ನು ವಾರಾಂತ್ಯದಲ್ಲಿ ಆಯೋಜಿಸುವ ಪದ್ಧತಿ ರೂಢಿಯಾಗಿದೆ. ನಿನ್ನೆ ಭಾನುವಾರ ಪ್ರತಿವರ್ಷದಂತೆ ಸಂಘದ ಗುರುಪೂಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಮನಸ್ಸಿಗೆ ಬಂದ ಕೆಲವು ಅಭಿಪ್ರಾಯಗಳನ್ನು ಎಲ್ಲರೊಡನೆ ಹಂಚಿಕೊಳ್ಳುವ ಬಯಕೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಸಂಘದ ಬಗ್ಗೆ ಪೂರ್ವಾಗ್ರಹ ಹೊಂದಿರುವವರು ಗುರುಪೂಜೋತ್ಸವ ಮತ್ತು ಸ್ವಯಂಸೇವಕರು ಸಲ್ಲಿಸುವ ಗುರುದಕ್ಷಿಣೆ ಬಗ್ಗೆ ಅನೇಕ ರೀತಿಯ ಟೀಕೆಗಳನ್ನು ಮಾಡುತ್ತಿರುವುದನ್ನು ನೋಡುತ್ತೇವೆ. ಆದರೆ ಸಂಘವನ್ನು ದೂರದಿಂದ ಟೀಕಿಸುವ ಬದಲು, ಪ್ರತಿನಿತ್ಯ ನಡೆಯುವ ಶಾಖೆಯೊಂದರಲ್ಲಿ ಅಥವಾ ಇಂತಹ ಉತ್ಸವಗಳಲ್ಲಿ ಒಮ್ಮೆ ಭಾಗವಹಿಸಿದರೆ ಅವರ ಬಹುತೇಕ ತಪ್ಪು ಕಲ್ಪನೆಗಳು ದೂರವಾಗುತ್ತವೆ ಎಂಬುದು ನನ್ನ ವೈಯಕ್ತಿಕ ಆಭಿಪ್ರಾಯವಾಗಿದೆ.
ಸಂಘದಲ್ಲಿ ವ್ಯಕ್ತಿಪೂಜೆಗೆ ಎಂದಿಗೂ ಸ್ಥಾನವಿಲ್ಲ. ಇಲ್ಲಿ ಯಾವುದೇ ನಾಯಕನನ್ನು ಅಥವಾ ವ್ಯಕ್ತಿಯನ್ನು ಆರಾಧಿಸುವುದಿಲ್ಲ. ತತ್ವ, ಆದರ್ಶ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾದ ಭಗವಾಧ್ವಜವೇ ಸಂಘದ ಗುರು. ಧ್ವಜದ ಮುಂದೆ ನಿಂತು ಮುಖ್ಯಶಿಕ್ಷಕರು ನೀಡುವ ಆಜ್ಞೆಯೇ ಅಲ್ಲಿ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ಹುದ್ದೆ, ವಯಸ್ಸು, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ಸ್ಥಾನಮಾನಕ್ಕೆ ಅಲ್ಲಿ ಯಾವುದೇ ವಿಶೇಷ ಮಹತ್ವ ಇರುವುದಿಲ್ಲ.
ಇಂದಿನ ಕಾರ್ಯಕ್ರಮದಲ್ಲಿಯೂ ನಮ್ಮ ಕಣ್ಣೆದುರೇ ಶಾಖೆಯಲ್ಲಿ ಬೆಳೆದಿದ್ದ ಬಾಲಕರು ಇಂದು ಮುಖ್ಯಶಿಕ್ಷಕರು, ಕಾರ್ಯವಾಹರು, ನಗರ ಹಾಗೂ ಭಾಗ ಮಟ್ಟದ ಜವಾಬ್ದಾರಿಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿರುವುದನ್ನು ನೋಡುವ ಅವಕಾಶ ದೊರೆಯಿತು. ವಿಶೇಷವಾಗಿ ಬೌದ್ಧಿಕ ನೀಡಿದ ಯುವಕ, ಯಾವುದೇ ಅಳುಕಿಲ್ಲದೇ, ಮುಂದೆ ಕುಳಿತಿದ್ದ ಹಿರಿಯರು ಮತ್ತು ಕಿರಿಯರ ನಡುವೆ ಅತ್ಯಂತ ಸರಳವಾಗಿ, ನಿರರ್ಗಳವಾಗಿ ವಿಚಾರ ಮಂಡಿಸುತ್ತಿದ್ದನ್ನು ಕಂಡಾಗ, “ವ್ಯಕ್ತಿತ್ವ ವಿಕಸನ” ಎಂಬ ಡಾ. ಹೆಡಗೆವಾರ್ ಅವರ ಕನಸು ಹೇಗೆ ಸಾಕಾರವಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸಿತು.
ಸಂಘದಲ್ಲಿ ಕಾರ್ಯಕರ್ತರು ಹೇಗೆ ರೂಪುಗೊಳ್ಳುತ್ತಾರೆ ಎಂಬುದಕ್ಕೆ ಒಂದು ಸುಂದರ ಪ್ರಸಂಗವಿದೆ.
ಒಬ್ಬ ಘಟನಾಯಕ ಬದಲಿಸಿದ ಹಿರಿಯ ವಕೀಲರ ಮನಸ್ಸು
ಒಂದು ದೊಡ್ಡ ನಗರದಲ್ಲಿ ಸಂಘದ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಒಬ್ಬ ಹಿರಿಯ ವಕೀಲರನ್ನು ಆಹ್ವಾನಿಸಬೇಕೆಂದು ನಿರ್ಧಾರವಾಯಿತು. ಅವರ ಮನೆಯಲ್ಲಿ ಹತ್ತಿರವೇ ವಾಸವಾಗಿದ್ದ ಚಿಕ್ಕ ವಯಸ್ಸಿನ ಘಟನಾಯಕನಿಗೆ ಅವರನ್ನು ಆಹ್ವಾನಿಸುವ ಜವಾಬ್ದಾರಿ ನೀಡಲಾಯಿತು.
ಆ ಬಾಲಕ ವಕೀಲರ ಮನೆಗೆ ಹೋದಾಗ ಜನರಿಂದ ಮನೆ ತುಂಬಿತ್ತು. ತನ್ನ ಸರದಿ ಬಂದ ನಂತರ ಸಂಘದ ಕಾರ್ಯಕ್ರಮದ ಕುರಿತು ವಿವರಿಸಿ, ಅಧ್ಯಕ್ಷತೆ ವಹಿಸುವಂತೆ ವಿನಂತಿಸಿಕೊಂಡ. ಬಾಲಕನ ಉತ್ಸಾಹ ನೋಡಿ ವಕೀಲರು “ಸರಿ, ಬರುತ್ತೇನೆ” ಎಂದು ಹೇಳಿ ಕಳುಹಿಸಿದರು.
ಕಾರ್ಯಕ್ರಮಕ್ಕೆ ಇನ್ನೂ ಒಂದು ವಾರ ಇದ್ದಾಗ ಬಾಲಕ ಮತ್ತೆ ನೆನಪಿಸಿದ. ಕಾರ್ಯಕ್ರಮದ ಹಿಂದಿನ ದಿನವೂ ಹೋಗಿ ನೆನಪಿಸಿದ. ಕಾರ್ಯಕ್ರಮದ ದಿನ ಒಂದು ಗಂಟೆ ಮುಂಚೆಯೇ ಅವರ ಮನೆಗೆ ತೆರಳಿ, “ಇನ್ನೇನು ಸಿದ್ಧರಾಗಿ, ಹತ್ತು ನಿಮಿಷ ಮುಂಚೆಯೇ ಸಂಘಸ್ಥಾನದಲ್ಲಿರಬೇಕು” ಎಂದು ವಿನಯದಿಂದ ಕೋರಿದ. ಬಾಲಕನ ಕಾರ್ಯತತ್ಪರತೆ ಮತ್ತು ತನಗೆ ವಹಿಸಿದ್ದ ಜವಾಬ್ಧಾರಿಯನ್ನು ನಿಭಾಯಿಸುತ್ತಿದ್ದದ್ದನ್ನು ಕಂಡು ಕಂಡ ವಕೀಲರು ನಿರಾಕರಿಸಲು ಸಾಧ್ಯವಾಗದೆ ಅವನೊಂದಿಗೆ ಕಾರ್ಯಕ್ರಮಕ್ಕೆ ಬಂದರು.
ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಯಿತು. ಇಡೀ ಕಾರ್ಯಕ್ರಮವನ್ನು ಸಣ್ಣ ವಯಸ್ಸಿನ ಬಾಲಕರು /ತರುಣರುಎಷ್ಟು ಶಿಸ್ತಿನಿಂದ, ಆತ್ಮವಿಶ್ವಾಸದಿಂದ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದಾರೋ ಅದನ್ನು ಕಂಡು ವಕೀಲರು ಆಶ್ಚರ್ಯಚಕಿತರಾದರು. ಸಂಘದ ಬಗ್ಗೆ ತಮಗಿದ್ದ ಪೂರ್ವಾಗ್ರಹಗಳು ಕರಗಿ ಹೋದವು. “ಇಷ್ಟು ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಇಷ್ಟೊಂದು ನಾಯಕತ್ವ, ಶಿಸ್ತು ಮತ್ತು ಜವಾಬ್ದಾರಿಯ ಭಾವನೆ ಬೆಳೆಸುವ ಸಂಘಟನೆಯ ಬಗ್ಗೆ ನಾನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ” ಎಂದು ಒಪ್ಪಿಕೊಂಡರು.
ಆ ದಿನದ ನಂತರ ಅವರು ಸಂಘದೊಂದಿಗೆ ಸಕ್ರಿಯವಾಗಿ ಬೆಸೆದುಕೊಂಡರು. ಮುಂದೆ ಅದೇ ನಗರದ ಸಂಘಚಾಲಕರಾಗಿ ಸೇವೆ ಸಲ್ಲಿಸಿದರು ಎಂಬುದು ಈ ಪ್ರಸಂಗದ ವಿಶೇಷ.
ಈ ಕಥೆ ಕೇವಲ ಒಬ್ಬ ವ್ಯಕ್ತಿಯ ಪರಿವರ್ತನೆಯಲ್ಲ; ಸಂಘದ ಕಾರ್ಯಪದ್ಧತಿಯ ಪರಿಚಯವಾಗಿದೆ. ಸಂಘ ಕೇವಲ ಒಂದು ಸಂಘಟನೆಯಲ್ಲ; ಅದು ವ್ಯಕ್ತಿ ನಿರ್ಮಾಣದ ಕೇಂದ್ರ. ಹುದ್ದೆಗಾಗಿ ಅಲ್ಲ, ಜವಾಬ್ದಾರಿಗಾಗಿ; ವ್ಯಕ್ತಿಗಾಗಿ ಅಲ್ಲ, ತತ್ವಕ್ಕಾಗಿ; ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ವ್ಯಕ್ತಿಗಳನ್ನು ರೂಪಿಸುವ ಒಂದು ಅಪರೂಪದ ಕಾರ್ಯಪದ್ಧತಿ ಎಂಬುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ.
ಸಂಘದಲ್ಲಿ ಗುರುಪೂಜೋತ್ಸವದ ಹಿನ್ನೆಲೆ
ಸಂಘದಲ್ಲಿ ಗುರುಪೂಜೋತ್ಸವದಂದು ಯಾವುದೇ ವ್ಯಕ್ತಿ ಅಥವಾ ನಾಯಕನನ್ನು ಗುರುವಾಗಿ ಪೂಜಿಸುವುದಿಲ್ಲ. ಬದಲಿಗೆ ಭಗವಾಧ್ವಜವನ್ನು ಗುರುವಾಗಿ ಸ್ವೀಕರಿಸಿ ಅದರ ಮುಂದೆ ನಮನ ಸಲ್ಲಿಸಲಾಗುತ್ತದೆ.
ಭಗವಾಧ್ವಜವೇ ಗುರು – ಏಕೆ?
ಸಂಘದ ಸಂಸ್ಥಾಪಕರಾದ ಎಲ್ಲರ ಪ್ರೀತಿಯ ಡಾಕ್ಟರ್ ಜೀ (ಡಾ. ಕೇಶವ ಬಲಿರಾಮ ಹೆಡಗೆವಾರ್) ಅವರು 1925ರಲ್ಲಿ ಸಂಘವನ್ನು ಆರಂಭಿಸಿದಾಗಲೇ, ಸಂಘದಲ್ಲಿ ಯಾವುದೇ ವ್ಯಕ್ತಿಪೂಜೆ ಬೆಳೆಯಬಾರದು ಎಂದು ನಿರ್ಧರಿಸಿದರು. “ವ್ಯಕ್ತಿ ನಶ್ವರ, ತತ್ವ ಶಾಶ್ವತ“ ಸಂಘದ ಮಾರ್ಗದರ್ಶಕ, ಪ್ರೇರಕ ಮತ್ತು ಶಾಶ್ವತ ಗುರುವಾಗಿ ಭಗವಾಧ್ವಜವನ್ನು ಆಯ್ಕೆ ಮಾಡಿದರು.
ಭಗವಾಧ್ವಜವು ಭಾರತೀಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ: ತ್ಯಾಗದ ಸಂಕೇತ, ಜ್ಞಾನದ ಪ್ರತೀಕ, ಶೌರ್ಯದ ಧ್ವಜ, ವೈರಾಗ್ಯದ ಚಿಹ್ನೆ, ಧರ್ಮ ಮತ್ತು ರಾಷ್ಟ್ರನಿಷ್ಠೆಯ ಸಂಕೇತ ಎಂದು ಗೌರವಿಸಲ್ಪಟ್ಟಿದೆ. ಈ ಧ್ವಜವು ಯಾವುದೇ ವ್ಯಕ್ತಿಯಲ್ಲ; ಆದ್ದರಿಂದ ವ್ಯಕ್ತಿಯ ಮಿತಿಗಳು, ದುರ್ಬಲತೆಗಳು ಅಥವಾ ಕಾಲದ ಪ್ರಭಾವ ಇದಕ್ಕೆ ಇರುವುದಿಲ್ಲ. ತತ್ವ ಮಾತ್ರ ಶಾಶ್ವತವಾಗಿರುತ್ತದೆ ಎಂಬ ಸಂದೇಶವನ್ನು ಸಂಘ ಈ ಮೂಲಕ ಸಾರುತ್ತದೆ.
ಗುರುದಕ್ಷಿಣೆಯ ಮಹತ್ವ
ಗುರುಪೂಜೋತ್ಸವದ ಪ್ರಮುಖ ಆಕರ್ಷಣೆಯೇ ಗುರುದಕ್ಷಿಣೆ. ಸಂಘದಲ್ಲಿ ಯಾವುದೇ ಕಡ್ಡಾಯ ಸದಸ್ಯತ್ವ ಶುಲ್ಕ ಇರುವುದಿಲ್ಲ. ಪ್ರತಿಯೊಬ್ಬ ಸ್ವಯಂಸೇವಕನು ತನ್ನ ಇಚ್ಛೆಯಂತೆ, ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಸರನ್ನು ಪ್ರಕಟಿಸದೆ ಭಗವಾಧ್ವಜದ ಮುಂದೆ ದಕ್ಷಿಣೆಯನ್ನು ಅರ್ಪಿಸುತ್ತಾನೆ.
ಈ ಸಂಪ್ರದಾಯದ ಉದ್ದೇಶ ಸಂಘದ ಕಾರ್ಯಗಳಿಗೆ ಸ್ವಯಂಪ್ರೇರಿತ ಸಹಕಾರ, ಸ್ವಾವಲಂಬನೆ, ತ್ಯಾಗದ ಮನೋಭಾವ ಬೆಳೆಸುವುದು, ಸೇವೆಗೆ ಆರ್ಥಿಕ ಬೆಂಬಲ ನೀಡುವುದು. ಗುರುದಕ್ಷಿಣೆಯ ಮೂಲಕ ಸಂಗ್ರಹವಾಗುವ ಹಣವನ್ನು ಸಂಘದ ವಿವಿಧ ಸಾಮಾಜಿಕ, ಶೈಕ್ಷಣಿಕ, ಸೇವಾ ಹಾಗೂ ಸಂಘಟನಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ.
ಗುರುದಕ್ಷಿಣೆ ಎನ್ನುವುದು ಕೇವಲ ಅರ್ಪಣೆಯಲ್ಲ. ಸ್ವಯಂಸೇವಕರ ಸಮರ್ಪಣೆ
ಇಲ್ಲಿ ಗುರುದಕ್ಷಿಣೆ ಎನ್ನುವುದನ್ನು ಕೇವಲ ಅರ್ಪಣೆ ಎಂದು ಹೇಳುವುದಕ್ಕಿಂತ ಸಮರ್ಪಣೆ ಎಂದು ಕರೆಯುವುದೇ ಹೆಚ್ಚು ಸೂಕ್ತವೆನಿಸುತ್ತದೆ. ಏಕೆಂದರೆ, ಒಬ್ಬ ಸ್ವಯಂಸೇವಕ ಗುರುಪೂಜೋತ್ಸವದ ಸಂದರ್ಭದಲ್ಲಿ ಸಲ್ಲಿಸುವ ಕಾಣಿಕೆ ಆ ಕ್ಷಣದ ದಾನವಲ್ಲ; ಅದು ಒಂದು ವರ್ಷದ ಮನೋಭಾವದ ಪ್ರತಿಫಲ. ಅನೇಕ ಸ್ವಯಂಸೇವಕರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವರ್ಷಪೂರ್ತಿ ಸ್ವಲ್ಪ ಸ್ವಲ್ಪವಾಗಿ ಹಣವನ್ನು ಉಳಿಸಿಕೊಂಡು ಗುರುದಕ್ಷಿಣೆಗೆ ಸಿದ್ಧರಾಗಿರುತ್ತಾರೆ.
ಅದೇ ರೀತಿ, ಅವರು ಪ್ರತಿದಿನವೂ ತಮ್ಮ ಅಮೂಲ್ಯವಾದ ಒಂದು ಗಂಟೆಯನ್ನು ಶಾಖೆಗೆ ಸಮರ್ಪಿಸುತ್ತಾರೆ. ಅಲ್ಲಿ ತಮಗಿಂತ ಕಿರಿಯರು ಮತ್ತು ಹಿರಿಯರೊಂದಿಗೆ ಸಮಯ ಕಳೆಯುತ್ತಾ, ಶಾರೀರಿಕವಾಗಿ, ಬೌದ್ಧಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯುತ್ತಾ, ಶಿಸ್ತು, ಸಂಘಟನಾ ಸಾಮರ್ಥ್ಯ ಮತ್ತು ರಾಷ್ಟ್ರೀಯ ಚಿಂತನೆಯ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ.
ಈ ಸಮರ್ಪಣೆಯ ನಿಜವಾದ ಅರ್ಥವು ಸಂಕಷ್ಟದ ಸಮಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅಗತ್ಯ ಬಂದಾಗ ದೇಶಕ್ಕಾಗಿ ಮತ್ತು ದೇಶದ ಜನರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುವ ಮನೋಭಾವವನ್ನು ಸಂಘದ ಕಾರ್ಯಕರ್ತರು ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ. ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ನೆರೆ, ಭೂಕಂಪ, ಚಂಡಮಾರುತ, ಭೂಕುಸಿತ ಸೇರಿದಂತೆ ಅನೇಕ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ, ಸರ್ಕಾರಿ ಆಡಳಿತ ಯಂತ್ರ ಸಂಪೂರ್ಣವಾಗಿ ತಲುಪುವ ಮೊದಲುವೇ ಸಂಘದ ಕಾರ್ಯಕರ್ತರು ನಿಸ್ವಾರ್ಥವಾಗಿ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ತೊಡಗಿರುವುದನ್ನು ದೇಶದ ಜನರು ಅನೇಕ ಬಾರಿ ಕಂಡಿದ್ದಾರೆ.
ಕೊನೆಯ ಮಾತು
ಹೀಗಾಗಿಯೇ, ಗುರುದಕ್ಷಿಣೆ ಎನ್ನುವುದು ಕೇವಲ ಹಣದ ಕಾಣಿಕೆಯಲ್ಲ; ಅದು ಸಮಯ, ಶ್ರಮ, ಶಿಸ್ತು, ವ್ಯಕ್ತಿತ್ವ ಮತ್ತು ರಾಷ್ಟ್ರಸೇವೆಯ ಮನೋಭಾವವನ್ನು ಭಗವಾಧ್ವಜದ ಮುಂದೆ ಸಮರ್ಪಿಸುವ ಜೀವನಪದ್ದತಿ ಎಂಬುದೇ ಹೆಚ್ಚು ಸೂಕ್ತವಾದ ವಿವರಣೆ.
ಸಂಘದಲ್ಲಿ ಭಗವಾಧ್ವಜವನ್ನು ಗುರುವಾಗಿ ಸ್ವೀಕರಿಸುವ ಮೂಲಕ ಇಲ್ಲಿ ವ್ಯಕ್ತಿಪೂಜೆಗೆ ಅವಕಾಶವಿಲ್ಲದೇ, ರಾಷ್ಟ್ರಭಕ್ತಿ, ತ್ಯಾಗ, ಸೇವೆ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಹಾಗಾಗಿ ಗುರುಪೂಜೋತ್ಸವವು ಕೇವಲ ಒಂದು ಆಚರಣೆಯಷ್ಟೇ ಆಗಿರದೇ, ದೇಶ ಮೊದಲು ಉಳಿದದ್ದು ಆನಂತರ ಎನ್ನುತ್ತಾ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಚಿಂತನೆಯ ಪ್ರತಿಜ್ಞೆಯನ್ನು ಮತ್ತೊಮ್ಮೆ ಪುನರುಚ್ಚರಿಸುವ ಪವಿತ್ರ ಸಂದರ್ಭವಾಗಿದೆ. ಹಾಗಾಗಿಯೇ ಸಂಘ ನೂರು ವರ್ಷ ದಾಟಿ ಕೇವಲ ದೇಶವಲ್ಲದೇ ವಿದೇಶಗಳಲ್ಲಿಯೂ ಭರ್ಜರಿಯಾಗಿ ಮುನ್ನುಗ್ಗುತ್ತಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ