ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕರಣ: ಮೂರು ವರ್ಷಗಳ ವಿವಾದ, ನ್ಯಾಯಾಲಯದ ಖುಲಾಸೆ ಮತ್ತು ಭಾರತೀಯ ನ್ಯಾಯ ವ್ಯವಸ್ಥೆಯ ಮಹತ್ವ
2026ರ ಆಗಸ್ಟ್‌ನಲ್ಲಿ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ನೀಡಿದ ತೀರ್ಪಿನೊಂದಿಗೆ ಕಳೆದ ಮೂರು ವರ್ಷಗಳಿಂದ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಮಹತ್ವದ ಕಾನೂನು ತಿರುವು ಸಿಕ್ಕಿದೆ. ರೌಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ACJM) ಅಶ್ವಿನಿ ಪನ್ವಾರ್ ಅವರು, ಪ್ರಾಸಿಕ್ಯೂಷನ್, ದೂರುದಾರರು ಹಾಗೂ ಆರೋಪಿಗಳ ವಾದಗಳನ್ನು ಪರಿಶೀಲಿಸಿದ ಬಳಿಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಸಹ ಆರೋಪಿ, ಡಬ್ಲ್ಯುಎಫ್‌ಐ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದರು. ವಿಚಾರಣೆಯನ್ನು ಇನ್-ಕ್ಯಾಮೆರಾ (ಗೌಪ್ಯವಾಗಿ) ನಡೆಸಲಾಯಿತು.
ಪ್ರಕರಣದ ಹಿನ್ನೆಲೆ
2023ರ ಜನವರಿಯಲ್ಲಿ ಭಾರತದ ಖ್ಯಾತ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಸೇರಿದಂತೆ ಹಲವರು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮಾಡಿದರು. ಸರ್ಕಾರ ಮೊದಲ ಹಂತದಲ್ಲಿ ತನಿಖೆಗೆ ಮೇಲ್ವಿಚಾರಣಾ ಸಮಿತಿಯನ್ನು ರಚಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆಯಲಾಯಿತು. ಆದರೆ ಸಮಿತಿಯ ವರದಿ ಸಾರ್ವಜನಿಕವಾಗದ ಕಾರಣ 2023ರ ಏಪ್ರಿಲ್ 23ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಮರು ಆರಂಭವಾಯಿತು.
ದೆಹಲಿ ಪೊಲೀಸರು ಆರಂಭದಲ್ಲಿ ಎಫ್‌ಐಆರ್ ದಾಖಲಿಸದ ಕಾರಣ ದೂರುದಾರರು ಸುಪ್ರೀಂ ಕೋರ್ಟ್ ಮೊರೆ ಹೋದರು. 2023ರ ಏಪ್ರಿಲ್ 25ರಂದು ಸುಪ್ರೀಂ ಕೋರ್ಟ್ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತು.
ಆರೋಪಗಳು ಮತ್ತು ತನಿಖೆ
ದೆಹಲಿ ಪೊಲೀಸರು ಸುಮಾರು 1,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದರು.
ಬ್ರಿಜ್ ಭೂಷಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಕೆಳಕಂಡ ಸೆಕ್ಷನ್‌ಗಳಡಿ ಆರೋಪ ದಾಖಲಿಸಲಾಗಿತ್ತು:
- ಸೆಕ್ಷನ್ 354 – ಮಹಿಳೆಯ ಮೇಲೆ ಅಸಭ್ಯ ಉದ್ದೇಶದಿಂದ ಹಲ್ಲೆ ಅಥವಾ ಬಲಪ್ರಯೋಗ
- ಸೆಕ್ಷನ್ 354A – ಲೈಂಗಿಕ ಕಿರುಕುಳ
- ಸೆಕ್ಷನ್ 354D – ಹಿಂಬಾಲಿಸುವುದು (Stalking)
- ಸೆಕ್ಷನ್ 506(1) – ಕ್ರಿಮಿನಲ್ ಬೆದರಿಕೆ
ವಿನೋದ್ ತೋಮರ್ ವಿರುದ್ಧ ಮೇಲಿನ ಆರೋಪಗಳ ಜೊತೆಗೆ ಸೆಕ್ಷನ್ 109 (ಪ್ರಚೋದನೆ/ಸಹಾಯ) ಕೂಡ ದಾಖಲಿಸಲಾಗಿತ್ತು.
2024ರ ಮೇ ತಿಂಗಳಲ್ಲಿ ನ್ಯಾಯಾಲಯ ಆರೋಪಗಳನ್ನು (Charges) ರೂಪಿಸಿತ್ತು. ಆದರೆ ದೂರುದಾರೆ ಸಂಖ್ಯೆ 6 ಮಾಡಿದ್ದ ಆರೋಪಗಳಿಂದ ಬ್ರಿಜ್ ಭೂಷಣ್ ಅವರನ್ನು ಆಗಲೇ ಬಿಡುಗಡೆ ಮಾಡಲಾಗಿತ್ತು. ಇದೇ ವೇಳೆ, ಅಪ್ರಾಪ್ತ ಕುಸ್ತಿಪಟುವೊಬ್ಬರು ನೀಡಿದ್ದ ದೂರಿನ ಆಧಾರದ ಮೇಲೆ ದಾಖಲಾಗಿದ್ದ ಪೋಕ್ಸೊ (POCSO) ಪ್ರಕರಣದಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣ ರದ್ದುಪಡಿಸುವ ವರದಿಯನ್ನು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನ್ಯಾಯಾಲಯದ ಅಂತಿಮ ತೀರ್ಪು
ಸುದೀರ್ಘ ವಿಚಾರಣೆ, ಸಾಕ್ಷ್ಯಗಳು, ಪ್ರತಿಪರಿಶೀಲನೆ ಹಾಗೂ ಉಭಯ ಪಕ್ಷಗಳ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಲಯವು ಆರೋಪಗಳನ್ನು ಸಾಬೀತುಪಡಿಸಲು ಅಗತ್ಯವಾದ ಸಾಕ್ಷ್ಯಾಧಾರಗಳು ಪರ್ಯಾಪ್ತವಾಗಿಲ್ಲ ಎಂದು ಅಭಿಪ್ರಾಯಪಟ್ಟಿತು.
ಈ ಹಿನ್ನೆಲೆಯಲ್ಲಿ:
- ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಲಾಯಿತು.
- ಸಹ ಆರೋಪಿ ವಿನೋದ್ ತೋಮರ್ ಅವರನ್ನೂ ದೋಷಮುಕ್ತಗೊಳಿಸಲಾಯಿತು.
ದೂರುದಾರರ ಪರವಾಗಿ ಹಿರಿಯ ವಕೀಲೆ ರೆಬೆಕ್ಕಾ ಜಾನ್ ವಾದ ಮಂಡಿಸಿದ್ದರೆ, ಬ್ರಿಜ್ ಭೂಷಣ್ ಪರವಾಗಿ ರಾಜೀವ್ ಮೋಹನ್ ಹಾಜರಾಗಿದ್ದರು.
ಪ್ರತಿಭಟನೆಯ ರಾಜಕೀಯ ಆಯಾಮ
ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ದೇಶದ ಗಮನ ಸೆಳೆಯಿತು. ಅನೇಕ ರಾಜಕೀಯ ನಾಯಕರು, ಸಾಮಾಜಿಕ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ನಂತರದ ದಿನಗಳಲ್ಲಿ ಪ್ರತಿಭಟನೆಯ ಕೇಂದ್ರಬಿಂದು ಕೇವಲ ಮಹಿಳಾ ಕುಸ್ತಿಪಟುಗಳ ನ್ಯಾಯದ ಪ್ರಶ್ನೆಯಷ್ಟೇ ಉಳಿಯದೆ, ಅದರ ಸುತ್ತ ರಾಜಕೀಯ ಆರೋಪ–ಪ್ರತ್ಯಾರೋಪಗಳು, ವಿವಿಧ ಸಂಘಟನೆಗಳ ಭಾಗವಹಿಸುವಿಕೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಸೇರಿಕೊಂಡವು. ಈ ಕಾರಣದಿಂದ, ಮೂಲ ಪ್ರಶ್ನೆಯಾಗಿದ್ದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ದೊರಕಬೇಕೆಂಬ ವಿಷಯಕ್ಕಿಂತ ಪ್ರತಿಭಟನೆಯ ರಾಜಕೀಯ ಆಯಾಮವೇ ಹೆಚ್ಚು ಚರ್ಚೆಗೆ ಗ್ರಾಸವಾಯಿತು ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದರು.
ನ್ಯಾಯ ವ್ಯವಸ್ಥೆ ನೀಡಿದ ಸಂದೇಶ
ಈ ಪ್ರಕರಣವು ಮತ್ತೊಮ್ಮೆ ಭಾರತೀಯ ನ್ಯಾಯ ವ್ಯವಸ್ಥೆಯ ಒಂದು ಮೂಲಭೂತ ತತ್ವವನ್ನು ನೆನಪಿಸಿದೆ.
ಯಾವುದೇ ವ್ಯಕ್ತಿಯ ವಿರುದ್ಧ ಎಷ್ಟೇ ಗಂಭೀರ ಆರೋಪಗಳಿದ್ದರೂ:
- ತನಿಖೆ ನಡೆಯಬೇಕು,
- ಸಾಕ್ಷ್ಯಾಧಾರಗಳನ್ನು ಪರಿಶೀಲಿಸಬೇಕು,
- ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕು,
- ಆರೋಪಗಳು ಕಾನೂನಾತ್ಮಕವಾಗಿ ಸಾಬೀತಾದ ನಂತರವೇ ಶಿಕ್ಷೆ ವಿಧಿಸಬಹುದು.
ಸಾರ್ವಜನಿಕ ಅಭಿಪ್ರಾಯ, ಮಾಧ್ಯಮ ಚರ್ಚೆಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿನ ಅಭಿಯಾನಗಳು ನ್ಯಾಯಾಲಯದ ಸಾಕ್ಷ್ಯಾಧಾರಗಳಿಗೆ ಪರ್ಯಾಯವಾಗುವುದಿಲ್ಲ. ಅದೇ ರೀತಿ, ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದೆ ಎಂದರೆ ದೂರು ನೀಡಿದವರನ್ನು ಸ್ವಯಂಚಾಲಿತವಾಗಿ ಅಪರಾಧಿಗಳೆಂದು ಪರಿಗಣಿಸಲಾಗುವುದಿಲ್ಲ. ಅದು ಕೇವಲ ಲಭ್ಯವಿದ್ದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಗಳು ಸಾಬೀತಾಗಲಿಲ್ಲ ಎಂಬ ನ್ಯಾಯಾಂಗದ ನಿರ್ಧಾರವಾಗಿರುತ್ತದೆ.
ಕೊನೆಯ ಮಾತು
2024ರ ಅಕ್ಟೋಬರ್ 8ರಂದು ನಡೆದ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ, ಕುಸ್ತಿಪಟುಗಳ ಪ್ರತಿಭಟನೆಯ ಪ್ರಮುಖ ಮುಖವಾಗಿದ್ದ ವಿನೇಶ್ ಫೋಗಟ್ ಅವರು ಹರ್ಯಾಣಾದ ಜುಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾದರು. ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆರೋಪಗಳು ಮತ್ತು ತಮಗೆ ಅನ್ಯಾಯವಾಗಿದೆ ಎಂಬ ವಿಚಾರವನ್ನು ಅವರು ತಮ್ಮ ಸಾರ್ವಜನಿಕ ಹೋರಾಟದ ಪ್ರಮುಖ ಅಂಶವನ್ನಾಗಿ ಮುಂದಿಟ್ಟಿದ್ದರು.
ವಿನೇಶ್ ಫೋಗಟ್ ಸೇರಿದಂತೆ ಹಲವು ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಗಂಭೀರ ಆರೋಪಗಳ ಕುರಿತಾಗಿ 2023ರಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ದೇಶದಾದ್ಯಂತ ಭಾರೀ ಗಮನ ಸೆಳೆದಿತ್ತು. ಈ ಪ್ರತಿಭಟನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅರವಿಂದ್ ಕೇಜ್ರೀವಾಲ್, ಟಿಕಾಯತ್ ಕನ್ನಡ ಚಿತ್ರರಂಗದ ಕಲಾವಿದರುಗಳದ ಪ್ರಕಾಶ್ ರಾಜ್, ಕಿಶೋರ್ ಮುಂತಾದ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಾರ್ವಜನಿಕ ವ್ಯಕ್ತಿಗಳು ಬೆಂಬಲ ವ್ಯಕ್ತಪಡಿಸಿದರು. ಪ್ರತಿಭಟನೆಯ ವೇಳೆ ಕೆಲವರು ಕೇಂದ್ರ ಸರ್ಕಾರದ ವಿರುದ್ಧವೂ ತೀವ್ರ ಟೀಕೆಗಳನ್ನು ಮಾಡಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಯನ್ನೂ ಆಗ್ರಹಿಸಿದ್ದರು.
ಆದರೆ, ಸುಮಾರು ಮೂರು ವರ್ಷಗಳ ತನಿಖೆ ಮತ್ತು ನ್ಯಾಯಾಲಯದ ವಿಚಾರಣೆಯ ಬಳಿಕ, ದೆಹಲಿಯ ನ್ಯಾಯಾಲಯವು ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಆರೋಪಗಳಿಂದ ಖುಲಾಸೆಗೊಳಿಸಿದೆ. ಈ ತೀರ್ಪಿನ ನಂತರ ಸಾರ್ವಜನಿಕ ವಲಯದಲ್ಲಿ ಹೊಸ ಚರ್ಚೆ ಆರಂಭವಾಗಿದ್ದು ಈ ರೀತಿಯ
- ಸುಳ್ಳು ಸುಳ್ಳು ಸುದ್ಧಿಗಳನ್ನು ಹರಡಿಸುತ್ತಾ ದೇಶದಲ್ಲಿ ಕೋಮು ದಳ್ಳುರಿಯನ್ನು ಹೆಚ್ಚಿಸುತ್ತಿರುವ ಮೇಲೆ ತಿಳಿಸಿದ ನಾಯಕರುಗಳಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು?
- ಇಂತಹ ನಾಯಕರು ನಮ್ಮನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರತಿನಿಧಿಸಲು ಅವಕಾಶ ನೀಡಬೇಕೇ?
- ತಮ್ಮ ಸೌಧ್ಧಾಂತಿಕ ವಿರೋಧಾಭಾಸ ಮತ್ತು ಸ್ವಾರ್ಥಕ್ಕಾಗಿ ನೂರು ಸುಳ್ಳುಗಳನ್ನು ಪದೇ ಪದೇ ಹೇಳುತ್ತಾ ಅದನ್ನೇ ನಿಜವಾಗಿಸಲು ಪ್ರಯತ್ನಿಸಿ ವಿಫಲರಾದ ಆ ಎಲ್ಲಾ ಮಹಿಳಾ ಕುಸ್ತಿ ಪಟುಗಳನ್ನು ಏನು ಮಾಡಬೇಕು ?
ಎಂದು ಕೇಳುತ್ತಿರುವುದು ಗಮನಾರ್ಹವಾದ ಅಂಶವಾಗಿದೆ
ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯವೇ ಅಂತಿಮ ನಿರ್ಣಾಯಕ ಸಂಸ್ಥೆ. ಆರೋಪ ಮಾಡಿದವರಿಗೂ, ಆರೋಪ ಎದುರಿಸಿದವರಿಗೂ ನ್ಯಾಯ ದೊರೆಯಬೇಕಾದರೆ, ಭಾವನೆಗಳಿಗಿಂತ ಕಾನೂನು ಮತ್ತು ಸಾಕ್ಷ್ಯಾಧಾರಗಳೇ ಅಂತಿಮ ಮಾನದಂಡವಾಗಿರಬೇಕು.
ಈ ದೇಶದಲ್ಲಿ ಕಾನೂನಿಗಿಂತ ಮಿಗಿಲಾದವರು ಯಾರೂ ಇಲ್ಲಾ. ಹಾಗಾಗಿ ಎಲ್ಲರೂ ಕಾನೂನಿಗೆ ತಲೆ ಬಾಗಲೇ ಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಈ ರೀತಿಯ ಘಟನೆಗಳು ಮತ್ತೊಮ್ಮೆ ನಡೆಯಬಾರದು ಎನ್ನುವುದಾದರೆ, ಸುಳ್ಳು ಆರೋಪ ಮಾಡಿದ ಮತ್ತು ಆ ಸುಳ್ಳನ್ನೇ ಸತ್ಯವೆಂದು ಸಮರ್ಥನೆ ಮಾಡಿದವರೆಲ್ಲರಿಗೂ ಕಠಿಣ ಶಿಕ್ಷೆ ಆಗಲೇ ಬೇಕಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ