ವಿಘ್ನಗಳನ್ನು ದೂರ ಮಾಡಿ ಸುಖ–ಸಮೃದ್ಧಿಯನ್ನು ಕರುಣಿಸುವ ಶ್ರೀ ಗಣೇಶನ ಆರಾಧನೆಯ ಮಹತ್ವ
ಹಿಂದೂ ಧರ್ಮದಲ್ಲಿ ಶ್ರೀ ಗಣೇಶನನ್ನು ವಿಘ್ನವಿನಾಶಕ, ಬುದ್ಧಿದಾತ, ಸಿದ್ಧಿದಾತ ಹಾಗೂ ಮಂಗಳಕರ ದೇವರು ಎಂದು ಆರಾಧಿಸಲಾಗುತ್ತದೆ. ಯಾವುದೇ ಶುಭಕಾರ್ಯವನ್ನು ಆರಂಭಿಸುವ ಮುನ್ನ ಮೊದಲು ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಅಂತಹ ಗಣೇಶನಿಗೆ ಅತ್ಯಂತ ಪ್ರಿಯವಾದ ವ್ರತಗಳಲ್ಲಿ ಸಂಕಷ್ಟಹರ ಚತುರ್ಥಿ (ಸಂಕಟಹರ ಚತುರ್ಥಿ) ಪ್ರಮುಖವಾದದ್ದು. ಪ್ರತಿ ತಿಂಗಳ ಹುಣ್ಣಿಮೆಯ ನಂತರ ಬರುವ ಕೃಷ್ಣಪಕ್ಷದ ಚತುರ್ಥಿ ತಿಥಿಯನ್ನು ಸಂಕಷ್ಟಹರ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನ ಭಕ್ತರು ಉಪವಾಸವಿದ್ದು, ಗಣೇಶನನ್ನು ಭಕ್ತಿಯಿಂದ ಪೂಜಿಸಿ, ರಾತ್ರಿ ಚಂದ್ರದರ್ಶನದ ನಂತರ ವ್ರತವನ್ನು ಪೂರ್ಣಗೊಳಿಸುತ್ತಾರೆ.
“ಸಂಕಷ್ಟಹರ” ಎಂಬ ಹೆಸರಿನ ಅರ್ಥ
“ಸಂಕಷ್ಟ” ಎಂದರೆ ಕಷ್ಟ, ವಿಘ್ನ, ತೊಂದರೆ ಮತ್ತು ದುಃಖ. “ಹರ” ಎಂದರೆ ನಿವಾರಿಸುವವನು. ಹೀಗಾಗಿ ಸಂಕಷ್ಟಹರ ಚತುರ್ಥಿ ಎಂದರೆ ಜೀವನದ ಸಂಕಷ್ಟಗಳನ್ನು ನಿವಾರಿಸುವ ಗಣೇಶನ ಆರಾಧನೆಯ ದಿನ ಎಂಬ ಅರ್ಥ.
ಪಾರ್ವತಿ ದೇವಿಯಿಂದ ಗಣೇಶನ ಸೃಷ್ಟಿ
ಶಿವಪುರಾಣದ ಪ್ರಕಾರ, ಪಾರ್ವತಿ ದೇವಿಯು ಸ್ನಾನಕ್ಕೆ ತೆರಳುವಾಗ ತಮ್ಮ ಮೈಗೆ ಹಚ್ಚಿಕೊಂಡಿದ್ದ ಅರಿಶಿನದ ಲೇಪದಿಂದ ಒಂದು ಬಾಲಕನನ್ನು ಸೃಷ್ಟಿಸಿ, “ನಾನು ಹೇಳುವವರೆಗೆ ಯಾರನ್ನೂ ಒಳಗೆ ಬಿಡಬೇಡ” ಎಂದು ಆಜ್ಞಾಪಿಸಿದರು. ಅಷ್ಟರಲ್ಲಿ ಶಿವನು ಅಲ್ಲಿಗೆ ಬಂದಾಗ ಗಣೇಶನು ಅವರನ್ನು ತಡೆದನು. ಕೋಪಗೊಂಡ ಶಿವನು ಗಣೇಶನ ತಲೆಯನ್ನು ಕಡಿದುಹಾಕಿದನು.
ಪಾರ್ವತಿಯ ದುಃಖವನ್ನು ಕಂಡ ದೇವತೆಗಳು ಉತ್ತರ ದಿಕ್ಕಿಗೆ ಮುಖಮಾಡಿ ಮಲಗಿದ್ದ ಆನೆಯ ತಲೆಯನ್ನು ತಂದು ಗಣೇಶನಿಗೆ ಜೋಡಿಸಿದರು. ಶಿವನು ಗಣೇಶನಿಗೆ “ಎಲ್ಲಾ ದೇವತೆಗಳಿಗಿಂತ ಮೊದಲು ಪೂಜಿಸಲ್ಪಡುವ ದೇವರು“ ಎಂಬ ವರವನ್ನು ನೀಡಿದನು. ಅಂದಿನಿಂದಲೇ ಯಾವುದೇ ಶುಭಕಾರ್ಯಕ್ಕೂ ಮೊದಲು ಗಣೇಶನ ಆರಾಧನೆ ಮಾಡುವ ಸಂಪ್ರದಾಯ ಆರಂಭವಾಯಿತು.
ಈ ವ್ರತವನ್ನು ಏಕೆ ಆಚರಿಸಲಾಗುತ್ತದೆ?
ಪುರಾಣಗಳ ಪ್ರಕಾರ, ಒಮ್ಮೆ ದೇವತೆಗಳೆಲ್ಲರೂ ವಿವಿಧ ಸಂಕಷ್ಟಗಳಿಂದ ಬಳಲುತ್ತಿದ್ದರು. ಅಸುರರ ಕಾಟ ಹೆಚ್ಚಾಗಿ ಯಜ್ಞ–ಯಾಗಗಳು, ಶುಭಕಾರ್ಯಗಳು ನಿರಂತರವಾಗಿ ವಿಘ್ನಕ್ಕೊಳಗಾಗುತ್ತಿದ್ದವು. ಆಗ ಬ್ರಹ್ಮದೇವರು ಅವರಿಗೆ ಕೃಷ್ಣಪಕ್ಷದ ಚತುರ್ಥಿಯಂದು ಶ್ರೀ ಗಣೇಶನ ವ್ರತವನ್ನು ಆಚರಿಸುವಂತೆ ತಿಳಿಸಿದರು. ದೇವತೆಗಳು ಉಪವಾಸವಿದ್ದು ಭಕ್ತಿಯಿಂದ ಗಣೇಶನನ್ನು ಪೂಜಿಸಿದ ನಂತರ ಅವರ ಎಲ್ಲ ವಿಘ್ನಗಳು ನಿವಾರಣೆಯಾಗಿ ವಿಜಯವನ್ನು ಪಡೆದರು. ಅಂದಿನಿಂದ ಈ ವ್ರತಕ್ಕೆ “ಸಂಕಷ್ಟಹರ ಚತುರ್ಥಿ“ ಎಂಬ ಹೆಸರಿನಿಂದ ಪ್ರಸಿದ್ಧಿಯಾಯಿತು.
ನಾರದ ಪುರಾಣ, ಗಣೇಶ ಪುರಾಣ ಹಾಗೂ ಸ್ಕಂದ ಪುರಾಣಗಳಲ್ಲಿ ಸಂಕಷ್ಟಹರ ಚತುರ್ಥಿಯ ಮಹತ್ವವನ್ನು ವಿವರಿಸಲಾಗಿದೆ. ಈ ವ್ರತವನ್ನು ಆಚರಿಸಿದವರಿಗೆ ವಿಘ್ನಗಳು ದೂರವಾಗಿ, ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಮಹಾಭಾರತದಲ್ಲಿ ಯುಧಿಷ್ಠಿರನು ರಾಜ್ಯ, ಕುಟುಂಬ ಹಾಗೂ ಯುದ್ಧದ ಸಂಕಷ್ಟಗಳಿಂದ ಕಂಗೆಟ್ಟಾಗ ಶ್ರೀಕೃಷ್ಣನು ಗಣೇಶನ ಸಂಕಷ್ಟಹರ ಚತುರ್ಥಿ ವ್ರತದ ಮಹಿಮೆಯನ್ನು ವಿವರಿಸಿ, ಈ ವ್ರತವನ್ನು ಆಚರಿಸಿದರೆ ಜೀವನದ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ತಿಳಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.
ಸಂಕಷ್ಟಹರ ಚತುರ್ಥಿಯ ವೈಶಿಷ್ಟ್ಯಗಳು
- ಪ್ರತಿ ತಿಂಗಳು ಕೃಷ್ಣಪಕ್ಷದ ಚತುರ್ಥಿ ತಿಥಿಯಂದು ಆಚರಿಸಲಾಗುವ ಗಣೇಶನ ವಿಶೇಷ ವ್ರತ.
- ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸ ಆಚರಿಸುವ ಪದ್ಧತಿ.
- ಗಣೇಶ ಅಷ್ಟೋತ್ತರ, ಗಣಪತಿ ಅಥರ್ವಶೀರ್ಷ, ಸಂಕಷ್ಟನಾಶನ ಗಣೇಶ ಸ್ತೋತ್ರ ಮತ್ತು ಗಣೇಶ ಸಹಸ್ರನಾಮ ಪಾರಾಯಣಕ್ಕೆ ವಿಶೇಷ ಮಹತ್ವ.
- ಮಂಗಳವಾರದಂದು ಬರುವ ಸಂಕಷ್ಟಹರ ಚತುರ್ಥಿಯನ್ನು ಅಂಗಾರಕ ಸಂಕಷ್ಟಿ ಚತುರ್ಥಿ ಎಂದು ಕರೆಯಲಾಗುತ್ತದೆ. ಇದನ್ನು ಅತ್ಯಂತ ಪುಣ್ಯಕರವೆಂದು ಪರಿಗಣಿಸಲಾಗುತ್ತದೆ.
ವ್ರತ ಆಚರಿಸುವ ವಿಧಾನ
- ಬೆಳಗ್ಗೆ ಬೇಗನೆ ಸ್ನಾನ ಮಾಡಿ ಶುಭ್ರ ವಸ್ತ್ರ ಧರಿಸಬೇಕು.
- ಶ್ರೀ ಗಣೇಶನ ಮೂರ್ತಿ ಅಥವಾ ಚಿತ್ರದ ಮುಂದೆ ದೀಪ ಹಚ್ಚಿ ಪೂಜೆ ಮಾಡಬೇಕು.
- ದುರ್ವೆ, ಹೂವು, ಹಣ್ಣು, ಮೋದಕ ಅಥವಾ ಕಡುಬುಗಳನ್ನು ನೈವೇದ್ಯವಾಗಿ ಅರ್ಪಿಸಬೇಕು.
- ದಿನವಿಡೀ ಸಾಧ್ಯವಾದಷ್ಟು ಉಪವಾಸ ಅಥವಾ ಫಲಾಹಾರ ವ್ರತ ಆಚರಿಸಬಹುದು.
- ಸಂಜೆ ಗಣೇಶನ ಕಥೆ, ಸ್ತೋತ್ರ, ಭಜನೆ ಅಥವಾ ಪಾರಾಯಣ ಮಾಡಬೇಕು.
- ಚಂದ್ರದರ್ಶನದ ನಂತರ ಗಣೇಶನಿಗೆ ಮತ್ತೊಮ್ಮೆ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ವ್ರತ ಮುಗಿಸಬೇಕು.
ಚಂದ್ರದರ್ಶನದ ಮಹತ್ವ
ಸಂಕಷ್ಟಹರ ಚತುರ್ಥಿಯ ದಿನ ಚಂದ್ರದರ್ಶನಕ್ಕೆ ವಿಶೇಷ ಸ್ಥಾನವಿದೆ. ದಿನವಿಡೀ ಉಪವಾಸವಿದ್ದು, ರಾತ್ರಿ ಚಂದ್ರೋದಯವಾದ ನಂತರ ಗಣೇಶನಿಗೆ ಅರ್ಘ್ಯ ಸಮರ್ಪಿಸಿ ಚಂದ್ರನ ದರ್ಶನ ಮಾಡಿದ ಬಳಿಕವೇ ವ್ರತವನ್ನು ಪೂರ್ಣಗೊಳಿಸಲಾಗುತ್ತದೆ.
ಇದರ ಹಿಂದೆಯೂ ಒಂದು ಸುಂದರ ಪುರಾಣ ಕಥೆಯಿದೆ.
ಒಮ್ಮೆ ಗಣೇಶನು ತನ್ನ ವಾಹನವಾದ ಮೂಷಕದ ಮೇಲೆ ಸಂಚರಿಸುತ್ತಿದ್ದಾಗ ಅದು ಹಾವನ್ನು ನೋಡಿ ಹೆದರಿತು. ಗಣೇಶನು ಕೆಳಗೆ ಬಿದ್ದನು. ಇದನ್ನು ಕಂಡ ಚಂದ್ರನು ನಗತೊಡಗಿದನು. ಚಂದ್ರನ ಅಹಂಕಾರವನ್ನು ಕಂಡ ಗಣೇಶನು ಕೋಪಗೊಂಡು,
“ನಿನ್ನನ್ನು ನೋಡುವವರಿಗೆ ಅಪವಾದ ಉಂಟಾಗಲಿ“ ಎಂದು ಶಾಪ ನೀಡಿದನು.
ನಂತರ ದೇವತೆಗಳ ಪ್ರಾರ್ಥನೆಯ ಮೇರೆಗೆ ಗಣೇಶನು ಶಾಪವನ್ನು ಸಡಿಲಿಸಿ, ಭಾದ್ರಪದ ಶುಕ್ಲ ಚತುರ್ಥಿಯಂದು ಮಾತ್ರ ಚಂದ್ರನನ್ನು ನೋಡಬಾರದು ಎಂದು ಅನುಗ್ರಹಿಸಿದನು. ಆದರೆ ಸಂಕಷ್ಟಹರ ಚತುರ್ಥಿಯಂದು ಚಂದ್ರದರ್ಶನ ಮಾಡಿ ಗಣೇಶನನ್ನು ಆರಾಧಿಸಿದರೆ ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
ಸಂಕಷ್ಟಹರ ಚತುರ್ಥಿಯಿಂದ ಆಗುವ ಪ್ರಯೋಜನಗಳು
ಶಾಸ್ತ್ರಗಳಲ್ಲಿ ಈ ವ್ರತದಿಂದ ಅನೇಕ ಆಧ್ಯಾತ್ಮಿಕ ಮತ್ತು ಮಾನಸಿಕ ಫಲಗಳು ದೊರೆಯುತ್ತವೆ ಎಂದು ಹೇಳಲಾಗಿದೆ.
- ಜೀವನದಲ್ಲಿನ ವಿಘ್ನಗಳು ಹಾಗೂ ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ.
- ವಿದ್ಯೆ, ಬುದ್ಧಿಶಕ್ತಿ ಮತ್ತು ಏಕಾಗ್ರತೆ ವೃದ್ಧಿಯಾಗುತ್ತದೆ.
- ಉದ್ಯೋಗ, ವ್ಯವಹಾರ ಮತ್ತು ಆರ್ಥಿಕ ಪ್ರಗತಿಗೆ ಅನುಕೂಲವಾಗುತ್ತದೆ.
- ಕುಟುಂಬದಲ್ಲಿ ಶಾಂತಿ, ಸೌಹಾರ್ದ ಮತ್ತು ನೆಮ್ಮದಿ ನೆಲೆಸುತ್ತದೆ.
- ಆರೋಗ್ಯ ಹಾಗೂ ಮಾನಸಿಕ ಸ್ಥೈರ್ಯ ವೃದ್ಧಿಯಾಗುತ್ತದೆ.
- ಸಾಲಬಾಧೆ, ನ್ಯಾಯಾಲಯದ ವ್ಯಾಜ್ಯ ಹಾಗೂ ವಿವಿಧ ಸಂಕಷ್ಟಗಳಿಂದ ಮುಕ್ತಿ ಸಿಗಲಿ ಎಂದು ಭಕ್ತರು ಪ್ರಾರ್ಥಿಸುತ್ತಾರೆ.
- ವಿವಾಹ ವಿಳಂಬ, ಸಂತಾನ ಸಮಸ್ಯೆ ಹಾಗೂ ಕುಟುಂಬದ ಇತರ ಕಷ್ಟಗಳು ದೂರವಾಗಲಿ ಎಂಬ ಆಶಯದಿಂದ ಅನೇಕರು ಈ ವ್ರತವನ್ನು ಆಚರಿಸುತ್ತಾರೆ.
- ಭಕ್ತಿ, ತಾಳ್ಮೆ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆ ಬೆಳೆಯಲು ಸಹಕಾರಿ.
ಅಂಗಾರಕ ಸಂಕಷ್ಟಿ ಚತುರ್ಥಿಯ ವಿಶೇಷತೆ
ಪ್ರತಿ ತಿಂಗಳು ಸಂಕಷ್ಟಹರ ಚತುರ್ಥಿ ಬರುತ್ತದೆ. ಆದರೆ ಮಂಗಳವಾರದಂದು ಬರುವ ಸಂಕಷ್ಟಹರ ಚತುರ್ಥಿಯನ್ನು “ಅಂಗಾರಕ ಸಂಕಷ್ಟಿ ಚತುರ್ಥಿ“ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ಭೂಮಿದೇವಿಯ ಪುತ್ರನಾದ ಅಂಗಾರಕ (ಮಂಗಳ ಗ್ರಹ) ಗಣೇಶನ ಪರಮಭಕ್ತನಾಗಿದ್ದನು. ಅವನು ಸಾವಿರಾರು ವರ್ಷಗಳ ಕಾಲ ಗಣೇಶನ ತಪಸ್ಸು ಮಾಡಿ ಪ್ರಸನ್ನನಾದ ಗಣೇಶನಿಂದ ಅಪರೂಪದ ವರಗಳನ್ನು ಪಡೆದನು.
“ಮಂಗಳವಾರದಂದು ಬರುವ ಸಂಕಷ್ಟಿ ಚತುರ್ಥಿಯನ್ನು ಭಕ್ತಿಯಿಂದ ಆಚರಿಸುವವರಿಗೆ ಒಂದು ವರ್ಷದ ಸಂಕಷ್ಟಿ ವ್ರತದಷ್ಟೇ ಪುಣ್ಯ ಲಭಿಸಲಿ.” ಆದ್ದರಿಂದ ಅಂಗಾರಕ ಸಂಕಷ್ಟಿಯನ್ನು ಅತ್ಯಂತ ಪುಣ್ಯಕರವೆಂದು ಪರಿಗಣಿಸಲಾಗುತ್ತದೆ.
ಸಂಕಷ್ಟಹರ ಚತುರ್ಥಿ, ಆರೋಗ್ಯ ಮತ್ತು ವೈಜ್ಞಾನಿಕ ದೃಷ್ಟಿಕೋನ
ಈ ವ್ರತದ ಮತ್ತೊಂದು ವಿಶೇಷತೆ ಉಪವಾಸ. ಆಯುರ್ವೇದದ ದೃಷ್ಟಿಯಿಂದ ನಿಯಮಿತ ಉಪವಾಸವು ಜೀರ್ಣಾಂಗಗಳಿಗೆ ವಿಶ್ರಾಂತಿ ನೀಡುತ್ತದೆ. ಮನಸ್ಸನ್ನು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ಕೇಂದ್ರೀಕರಿಸುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಸಂಯಮ, ಶಿಸ್ತು ಮತ್ತು ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ಆದ್ದರಿಂದ ಈ ವ್ರತವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ಬೆಳೆಸುವ ಮತ್ತು ಆತ್ಮೀಯ ಶಿಸ್ತು ಬೆಳೆಸುವ ಒಂದು ಜೀವನಪದ್ಧತಿಯೂ ಆಗಿದೆ.
ಕೊನೆಯ ಮಾತು
ಸಂಕಷ್ಟಹರ ಚತುರ್ಥಿಯ ನಿಜವಾದ ಸಂದೇಶವೆಂದರೆ ಸಂಕಷ್ಟಗಳು ಬರದಂತೆ ಬೇಡುವುದಲ್ಲ. ಬಂದ ಸಂಕಷ್ಟಗಳನ್ನು ಧೈರ್ಯ, ಭಕ್ತಿ ಮತ್ತು ವಿವೇಕದಿಂದ ಎದುರಿಸುವ ಶಕ್ತಿಯನ್ನು ಸಂಪಾದಿಸಿಕೊಳ್ಳುವುದು. ಸಂಕಷ್ಟಹರ ಚತುರ್ಥಿಯ ಸಾರವೆಂದರೆ ಕೇವಲ ಉಪವಾಸ ಮಾಡುವುದಲ್ಲ; ಭಕ್ತಿ, ಶ್ರದ್ಧೆ, ಆತ್ಮವಿಶ್ವಾಸ ಮತ್ತು ಸತ್ಕಾರ್ಯಗಳ ಮೂಲಕ ಜೀವನದ ವಿಘ್ನಗಳನ್ನು ಎದುರಿಸುವ ಮನೋಬಲವನ್ನು ಬೆಳೆಸಿಕೊಳ್ಳುವುದು
“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ॥“
ಈ ಮಂತ್ರದ ಅರ್ಥವೇ ಸಂಕಷ್ಟಹರ ಚತುರ್ಥಿಯ ನಿಜವಾದ ಸಂದೇಶವಾಗಿದೆ,
ಸಂಕಷ್ಟಹರ ಚರ್ತುರ್ಥಿಯನ್ನು ತಪ್ಪದೇ ಆಚರಿಸುವ ಮೂಲಕ ಎಲ್ಲರ ಜೀವನದ ಪ್ರತಿಯೊಂದು ಕಾರ್ಯವೂ ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ಸುಖ–ಶಾಂತಿ, ಆರೋಗ್ಯ, ಐಶ್ವರ್ಯ ಮತ್ತು ಜ್ಞಾನ ಲಭಿಸುವಂತಾಗಲಿ ಎನ್ನುವುದೇ ಈ ವ್ರತಾಚರಣೆಯ ನಿಜವಾದ ಆಶಯವಾಗಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
.