ಕೈಮಗ್ಗದ ಬಗ್ಗೆ ಮಾತನಾಡಿದರೆ ಪ್ರಧಾನಿ ‘ಇನ್‌ಫ್ಲುಯೆನ್ಸರ್’ ಆಗ್ತಾರಾ?

 ಒಂದು ವಿಡಿಯೋ… ಎರಡು ದೃಷ್ಟಿಕೋನ… ಒಂದು ದೊಡ್ಡ ಪ್ರಶ್ನೆ!

ರಾಷ್ಟ್ರೀಯ ಕೈಮಗ್ಗ ದಿನದಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ನಿವಾಸದಲ್ಲಿದ್ದ ವಿವಿಧ ರಾಜ್ಯಗಳ ಕೈಮಗ್ಗ ಉತ್ಪನ್ನಗಳನ್ನು ಜನರಿಗೆ ತೋರಿಸಿದರು. ಅವುಗಳ ಇತಿಹಾಸ, ವಿಶೇಷತೆ, ನೇಕಾರರ ಪರಿಶ್ರಮ ಮತ್ತು ಸ್ವದೇಶಿ ಉತ್ಪನ್ನಗಳ ಮಹತ್ವವನ್ನು ವಿವರಿಸಿ, ಭಾರತೀಯರು ಸಾಧ್ಯವಾದಷ್ಟು ಕೈಮಗ್ಗ ಉತ್ಪನ್ನಗಳನ್ನು ಬಳಸಬೇಕೆಂದು ಕರೆ ನೀಡಿದರು. ಸಾಮಾನ್ಯವಾಗಿ ನೋಡಿದರೆ ಇದು ಒಂದು ಸರಳ ವಿಡಿಯೋ. ಆದರೆ ಸೈದ್ಧಾಂತಿಕವಾಗಿ ಮೋದಿಯವರನ್ನು ವಿರೋಧಿಸುವ ಮತ್ತು ಶತಾಯಗತಾಯ ಮೋದಿಯವರನ್ನು ಅಧಿಕಾರದಿಂದ ಕೆಳಗೆ ಇಳಿಸಲೇ ಬೇಕೆಂದು ಕನಸು ಕಾಣುತ್ತಿರುವ ಪಟ್ಟಭದ್ರಹಿತಾಸಕ್ತಿಯ ಕೈಗೊಂಬೆ ಎಂದು ಈಗಾಗಲೇ ಜಗಜ್ಜಾಹೀರಾತಾಗಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮೋದಿಯೊಬ್ಬ  ಪ್ರೈಮ್ ಇನ್‌ಫ್ಲುಯನ್ಸರ್. ಇದೆಲ್ಲಾ ಬಿಟ್ಟು ಯುವಕರ ಬಗ್ಗೆ ಮಾತಾನಾಡಬೇಕು ಎಂದಿರುವುದು, ಸಾಂವಿಧಾನಿಕವಾಗಿ ಆಯ್ಕೆಯಾಗಿರುವ ದೇಶದ ಪ್ರಧಾನಿಗಳು ಮತ್ತು ನಮ್ಮ ಭಾರತದ ಮೌಲ್ಯವನ್ನು ಎಲ್ಲೆಡೆ ಎತ್ತಿ ಹಿಡಿಯುವ ಕೈ ಮಗ್ಗ ನೇಕಾರರಿಗೆ ಮಾಡುವ ಅವಮಾನವಲ್ಲವೇ?

ವಿದ್ಯಾರ್ಥಿಗಳ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದ್ದೇ ತಮ್ಮ ದೊಡ್ಡ ಗೆಲುವು ಮತ್ತು ತಾವು ಆಡಿದ್ದೇ ಆಟ. ನಾವು ಹೇಳಿದ ಹಾಗೆಯೇ ಈ ದೇಶದ ಪ್ರಧಾನಿಗಳು, ಕಾರ್ಯಾಂಗ ಮತ್ತು ನ್ಯಾಯಾಂಗ ಕೇಳಬೇಕು ಎನ್ನುವ ಉದ್ದಟತನವೇ? ಅಥವಾ ದೀಪ(ಪ್ಕೆ) ಆರುವ ಮುನ್ನಾ ಜೋರಾಗಿ ಉರಿಯುತ್ತದೆ ಎನ್ನುವ ಲಕ್ಷಣವೇ?

ಕೈಮಗ್ಗವನ್ನು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಿದ ನಾಯಕರು

ಪ್ರಧಾನಿ ಮೋದಿಯವರ ಈ ಪ್ರಯತ್ನ ಹೊಸದೇನಲ್ಲ. ಸ್ಮೃತಿ ಇರಾನಿ ಕೇಂದ್ರ ಜವಳಿ ಸಚಿವೆಯಾಗಿದ್ದ ಸಂದರ್ಭದಲ್ಲಿ ಅವರು ಭಾರತದ ವಿವಿಧ ರಾಜ್ಯಗಳ ಕೈಮಗ್ಗ ಸೀರೆಗಳನ್ನು ಧರಿಸುವ ಮೂಲಕ ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಹೊಸ ಮೌಲ್ಯ ತಂದರು. ನಿರ್ಮಲಾ ಸೀತಾರಾಮನ್ ಕಳೆದ ಹಲವು ವರ್ಷಗಳಿಂದ ಪ್ರತಿಯೊಂದು ಕೇಂದ್ರ ಬಜೆಟ್ ಮಂಡನೆಯ ಸಂದರ್ಭದಲ್ಲೂ ಅವರು ದೇಶದ ವಿವಿಧ ಭಾಗಗಳ ವಿಶಿಷ್ಟ ಕೈಮಗ್ಗ ಸೀರೆಗಳನ್ನೇ ಧರಿಸುತ್ತಿದ್ದಾರೆ. ಅದು ಕೇವಲ ಉಡುಪು ಆಯ್ಕೆ ಅಲ್ಲ. ಅದು ಭಾರತದ ನೇಕಾರ ಸಮುದಾಯಕ್ಕೆ ನೀಡುವ ಗೌರವ. ಅದೇ ಪರಂಪರೆಯನ್ನು ಪ್ರಧಾನಿ ಮೋದಿ ಮುಂದುವರೆಸಿರುವುದು ಅಪರಾಧವೇ?

ಖಾದಿ ಮತ್ತು ಕೈಮಗ್ಗ ಎಂದರೆ ಕೇವಲ ಬಟ್ಟೆಯಲ್ಲ

ಖಾದಿ ಮತ್ತು ಕೈಮಗ್ಗವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಅರ್ಥ ಮಾಡಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಚರಕವನ್ನು ಕೇವಲ ನೂಲಿನ ಯಂತ್ರವಾಗಿ ನೋಡಲಿಲ್ಲ. ಅದನ್ನು ಭಾರತದ ಆರ್ಥಿಕ ಸ್ವಾತಂತ್ರ್ಯದ ಸಂಕೇತವನ್ನಾಗಿ ರೂಪಿಸಿದರು. ಒಂದು ಕಾಲದಲ್ಲಿ ಬ್ರಿಟಿಷರು ಭಾರತದ ಹತ್ತಿಯನ್ನು ಕಡಿಮೆ ಬೆಲೆಗೆ ಕೊಂಡೊಯ್ದು, ಅದೇ ಹತ್ತಿಯಿಂದ ತಯಾರಿಸಿದ ಬಟ್ಟೆಯನ್ನು ಭಾರತದಲ್ಲೇ ದುಬಾರಿಯಾಗಿ ಮಾರುತ್ತಿದ್ದರು. ಅದಕ್ಕೆ ಉತ್ತರವಾಗಿ ಗಾಂಧೀಜಿಯವರು “ನಮ್ಮ ಹತ್ತಿಯನ್ನು ನಾವು ನೆಯ್ದು ನಾವು ಧರಿಸೋಣ.” ಎಂದು ಖಾದಿ ಚಳವಳಿಯನ್ನು ಆರಂಭಿಸಿದರು. ಅವರು ಜೀವಮಾನವಿಡೀ ಚರಕ ಮತ್ತು ಖಾದಿಯನ್ನು ಒಪ್ಪಿ, ಅಪ್ಪಿ, ಇಡೀ ದೇಶಕ್ಕೆ ಖಾದಿಯ ನಂಟನ್ನು ಹತ್ತಿಸಿದರು. ಅದೇ ಸಂದೇಶವನ್ನೇ ಆಧುನಿಕ ರೂಪದಲ್ಲಿ ಇಂದು ಪ್ರಧಾನಿ ಮೋದಿಯವರು ಹೇಳಿದರೆ ಇನ್‌ಫ್ಲುಯೆನ್ಸರ್ ಎಂದು ಕರೆಯುವುದು, ಮೋದಿಯವರಿಗೆ ಮಾಡಿದ ಅವಮಾನ ಎನ್ನುವುದಕ್ಕಿಂತಲೂ ರಾಷ್ಟ್ರಪಿತ ಮಹಾತ್ಮಾಗಾಂಧಿಯವರಿಗೆ ಮಾಡಿದ ಅವಮಾನ ಆಗುತ್ತದೆ ಅಲ್ಲವೇ?

ಒಂದು ವಿಡಿಯೋ… ಲಕ್ಷಾಂತರ ಕುಟುಂಬಗಳ ಬದುಕಿನ ಪ್ರಶ್ನೆ

ಭಾರತದ ಕೈಮಗ್ಗ ಕ್ಷೇತ್ರವು ಇಂದಿಗೂ ದೇಶದ ಅತಿದೊಡ್ಡ ಗ್ರಾಮೀಣ ಉದ್ಯೋಗ ಕ್ಷೇತ್ರಗಳಲ್ಲಿ ಒಂದಾಗಿದೆ.

  • ಲಕ್ಷಾಂತರ ನೇಕಾರ ಕುಟುಂಬಗಳು ಇದನ್ನೇ ಜೀವನಾಧಾರವಾಗಿಟ್ಟುಕೊಂಡಿವೆ.
  • ಸಾವಿರಾರು ಗ್ರಾಮಗಳಲ್ಲಿ ಚರಕ, ನೂಲು, ನೈಸರ್ಗಿಕ ಬಣ್ಣ, ನೇಯ್ಗೆ, ಕಸೂತಿ, ಹೊಲಿಗೆ ಸೇರಿದಂತೆ ಸಂಪೂರ್ಣ ಆರ್ಥಿಕ ಸರಪಳಿ ಇದನ್ನೇ ಅವಲಂಬಿಸಿದೆ.
  • ಕೃಷಿಯ ನಂತರ ಗ್ರಾಮೀಣ ಉದ್ಯೋಗ ನೀಡುವ ಪ್ರಮುಖ ಕ್ಷೇತ್ರಗಳಲ್ಲಿ ಕೈಮಗ್ಗವೂ ಒಂದು.

ಹೀಗಿರುವಾಗ ದೇಶದ ಪ್ರಧಾನಿ ಕೈಮಗ್ಗದ ಬಗ್ಗೆ ಮಾತನಾಡಿದರೆ ಅದನ್ನು “ಇನ್‌ಫ್ಲುಯೆನ್ಸರ್ ವಿಡಿಯೋ” ಎಂದು ವ್ಯಂಗ್ಯ ಮಾಡುವುದು ಯಾರಿಗೆ ಅವಮಾನ? ಪ್ರಧಾನಿಗೇ? ಅಥವಾ ಆ ನೇಕಾರರಿಗೆ?

ಇದು ವಿರೋಧವಲ್ಲ. ವ್ಯಂಗ್ಯ

India's Cockroach Janta party protest victory signals trouble ahead for Modi | India | The Guardianಯಾವುದೇ ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯ ನೀತಿಗಳನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಮೋದಿ ಅವರ ರಾಜಕೀಯ, ಅವರ ಸರ್ಕಾರ, ಅವರ ನಿರ್ಧಾರಗಳನ್ನು ಪ್ರಶ್ನಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಅವರು ದೇಶದ ಪರಂಪರೆ, ಕೈಮಗ್ಗ, ಖಾದಿ, ಗ್ರಾಮೀಣ ಉದ್ಯೋಗಗಳ ಬಗ್ಗೆ ಮಾತನಾಡಿದ ಸಂದರ್ಭವನ್ನೇ ವ್ಯಂಗ್ಯ ಮಾಡುವುದು ಅಕ್ಷಮ್ಯ ಅಪರಾಧ. ಅಭಿಜಿತ್ ದೀಪ್ಕೆ ಕೈಯ್ಯಲ್ಲಿ ಸಂವಿಧಾನ ಪುಸ್ತಕ ಹಿಡಿಯುವುದು ಕೇವಲ ತೋರಿಕೆಯಂತಾಗಿ, ಹೇಳುವುದು ಶಾಸ್ತ್ರ ತಿನ್ನುವುದು ಮಾತ್ರಾ ಬದನೇ ಕಾಯಿ ಎಂಬಂತಾಗುತ್ತದೆ.  ಪ್ರಧಾನಿಯನ್ನು “ಪ್ರೈಮ್ ಇನ್‌ಫ್ಲುಯೆನ್ಸರ್” ಎಂದು ಕರೆಯುವುದರಿಂದ ಯಾರಿಗೆ ಲಾಭ? ಆ ವಿಡಿಯೋ ನೋಡಿದ ನೇಕಾರ ಕುಟುಂಬಕ್ಕೆ? ಅಥವಾ ಸಾಮಾಜಿಕ ಜಾಲತಾಣದ ಟ್ರೆಂಡ್‌ಗೆ?

ಪ್ರಧಾನಿ ಏನು ಯೂಟ್ಯೂಬರಾ?

ಇಂದು ನರೇಂದ್ರ ಮೋದಿ ಕೇವಲ ರಾಜಕೀಯ ಪಕ್ಷದ ನಾಯಕ ಅಲ್ಲ. ಅವರು

  • ಸತತ ಮೂರು ಬಾರಿ ದೇಶದ ಜನರಿಂದ ಆಯ್ಕೆಯಾದ ಪ್ರಧಾನಿ.
  • ಎರಡು ದಶಕಗಳಿಗಿಂತ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ನಾಯಕ.
  • ಜಾಗತಿಕ ವೇದಿಕೆಗಳಲ್ಲಿ ಭಾರತದ ಪರವಾಗಿ ಮಾತನಾಡುವ ಸಂವಿಧಾನಾತ್ಮಕ ಹುದ್ದೆಯ ವ್ಯಕ್ತಿ.

ಅಂತಹ ವ್ಯಕ್ತಿ ದೇಶದ ಕೈಮಗ್ಗವನ್ನು ಪ್ರೋತ್ಸಾಹಿಸಿದರೆ ಅದನ್ನು “ಇನ್‌ಫ್ಲುಯೆನ್ಸರ್ ಕೆಲಸ” ಎಂದು ಕರೆಯುವುದು ಸಮಂಜಸವೇ?

ದೀಪ್ಕೆ  ಕಳೆದುಕೊಂಡ ಮತ್ತೊಂದು ಅವಕಾಶ

ಯುವಜನರ ಮೇಲೆ ಪ್ರಭಾವವಿದೆ ಎಂದು ಹೇಳಿಕೊಳ್ಳುವ ದೀಪ್ಕೆ “ನಾವೂ ಭಾರತೀಯ ಕೈಮಗ್ಗ ಉತ್ಪನ್ನಗಳನ್ನು ಬಳಸೋಣ.” ಎಂದು ಹೇಳಿದ್ದರೆ ಸಾಕಾಗುತ್ತಿತ್ತು. ಸಾವಿರಾರು ಯುವಕರು ಅದನ್ನೇ ಅನುಸರಿಸುತ್ತಿದ್ದರು. ಅದರ ಮೂಲಕ ಕೈಮಗ್ಗಕ್ಕೆ ಹೊಸ ಮಾರುಕಟ್ಟೆ ಸಿಗುತ್ತಿತ್ತು. ನೇಕಾರರ ಬದುಕಿಗೆ ಆಶಾಕಿರಣ ಮೂಡುತ್ತಿತ್ತು. ಆದರೆ ಆತುರಗಾರನಿಗೆ ಬುದ್ಧಿ ಮಟ್ಟ ಎನ್ನುವಂತೆ ಸ್ವಂತ ಬುದ್ದಿ ಇಲ್ಲದೇ ಮತ್ತಾರದ್ದೋ ಕೈಗೊಂಬೆಯಾಗಿರುವ ದೀಪ್ಕೆ ಮತ್ತೊಮ್ಮೆ ಆ ಅವಕಾಶ ಕೈಚೆಲ್ಲಿಕೊಂಡಿದ್ದಾನೆ.
.

ಕೈಮಗ್ಗ ಎಂದರೆ ಸಂಪೂರ್ಣ ಜೀವನ ವ್ಯವಸ್ಥೆ

ಪ್ರಧಾನಿಯಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೂ ಕೈಮಗ್ಗದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಒಂದು ಕಹಿ ಸತ್ಯವಿದೆ. “ಹ್ಯಾಂಡ್‌ಲೂಮ್” ಹೆಸರಿನಲ್ಲಿ ಮಾರಾಟವಾಗುವ ಬಹುತೇಕ ವಸ್ತುಗಳು ನಿಜವಾದ ಕೈಮಗ್ಗ ಉತ್ಪನ್ನಗಳೇ ಅಲ್ಲ. ನಕಲಿ ಉತ್ಪನ್ನಗಳು ನೈಜ ನೇಕಾರರ ಮಾರುಕಟ್ಟೆಯನ್ನು ಕಬಳಿಸುತ್ತಿವೆ. ಇದರಿಂದ ನೇಕಾರರಿಗೆ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಲಾಭ ಮಾತ್ರ ಹೆಚ್ಚುತ್ತಿದೆ. ಅನೇಕ ಹಳ್ಳಿಗಳಲ್ಲಿ ಚರಕಗಳು ನಿಂತಿವೆ. ನೂಲು ತೆಗೆಯುವ ಕೆಲಸವೇ ಸ್ಥಗಿತವಾಗಿದೆ.

ಚರಕ ಸಂಸ್ಥೆಯ ಪ್ರಸನ್ನ ಅವರು ಹೇಳುವಂತೆ:

“ಕೈಮಗ್ಗ ಎಂದರೆ ಕೇವಲ ಬಟ್ಟೆಯಲ್ಲ. ಅದು ಒಂದು ಜೀವನ ವ್ಯವಸ್ಥೆ.” ಒಂದು ಸೀರೆ ತಯಾರಾಗ ಬೇಕಾದಲ್ಲಿ,  ರೈತ ಹತ್ತಿ ಬೆಳೆಯುತ್ತಾನೆ. ನೂಲು ತೆಗೆಯುವವರು ಕೆಲಸ ಮಾಡುತ್ತಾರೆ. ನೈಸರ್ಗಿಕ ಬಣ್ಣ ತಯಾರಾಗುತ್ತದೆ. ಗಂಜಿ ಬಳಿಯುತ್ತಾರೆ. ನೇಕಾರರು ನೇಯುತ್ತಾರೆ. ಕಸೂತಿ ಕಲಾವಿದರು ಅಲಂಕರಿಸುತ್ತಾರೆ. ಹೊಲಿಗೆಗಾರರು ಪೂರ್ಣಗೊಳಿಸುತ್ತಾರೆ. ವ್ಯಾಪಾರಿಗಳು ಮಾರುಕಟ್ಟೆಗೆ ತರುತ್ತಾರೆ. ಒಂದು ಕೈಮಗ್ಗ ಸೀರೆ ಖರೀದಿಸುವುದು ಎಂದರೆ ಒಂದು ಸಂಪೂರ್ಣ ಗ್ರಾಮೀಣ ಆರ್ಥಿಕ ವ್ಯವಸ್ಥೆಗೆ ಬೆಂಬಲ ನೀಡುವುದು.

ಬ್ರಾಂಡೆಡ್ ಬಟ್ಟೆಯ ಹಿಂದಿನ ಕಹಿ ಸತ್ಯ

ಇಂದು ಸಾವಿರಾರು ರೂಪಾಯಿ ಕೊಟ್ಟು ಬ್ರಾಂಡೆಡ್ ಉಡುಪು ಖರೀದಿಸುವವರು, ಅದನ್ನು ತಯಾರಿಸಲು ಎಷ್ಟು ನೀರು ಬಳಸಲಾಗಿದೆ? ಎಷ್ಟು ರಾಸಾಯನಿಕ ಬಳಕೆಯಾಗಿದೆ? ಎಷ್ಟು ಅರಣ್ಯ ನಾಶವಾಗಿದೆ? ಎಂಬ ಪ್ರಶ್ನೆಯನ್ನು ಕೇಳುತ್ತಾರೆಯೇ? ವೇಗದ ಫ್ಯಾಷನ್ (Fast Fashion) ಜಾಗತಿಕ ತಾಪಮಾನ ಹೆಚ್ಚಳಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆಂದು ಅನೇಕ ಅಧ್ಯಯನಗಳು ಹೇಳುತ್ತಿವೆ. ಆದರೆ ಕೈಮಗ್ಗ ಪರಿಸರ ಸ್ನೇಹಿ. ಕಡಿಮೆ ಕಾರ್ಬನ್ ಹೊರಸೂಸುವಿಕೆ. ಕಡಿಮೆ ವಿದ್ಯುತ್ ಬಳಕೆ. ನೈಸರ್ಗಿಕ ನಾರು. ಆರೋಗ್ಯಕ್ಕೂ ಉತ್ತಮ.

ಜೆನ್ Z ಮುಂದೆ ಇರುವ ನಿಜವಾದ ಸವಾಲು

ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎನ್ನುವವರಿಗೆ ಸರ್ಕಾರವೇ ಎಲ್ಲರಿಗೂ ಉದ್ಯೋಗ ಕೊಡಲು ಸಾಧ್ಯವಿಲ್ಲಾ ಎಂಬ ಸತ್ಯದ ಅರಿವಂತೂ ಇರಲೇ ಬೇಕು. ತಮ್ಮ ವಿದ್ಯೆಗೆ ಅನುಗುಣವಾಗಿ ಖಾಸಗಿ ಕ್ಷೇತ್ರದಲ್ಲಿ ಕೆಲಸ ಸಿಕ್ಕರೂ ಅದೂ ಉದ್ಯೋಗವೇ. ಆದರೆ ತನ್ನ ಕಾಲು ಮೇಲೆ ಸ್ವಂತ ಉದ್ಯೋಗ ಮಾಡಬೇಕು ಎನ್ನುವವರಿಗೆ ಕೇವಲ ಐಟಿ ಸಂಬಂಧಿತ ಸಾಫ್ಟ್‌ವೇರ್/ಹಾರ್ಡ್ ವೇರ್ ಉದ್ಯಮ ಮಾತ್ರವೇ ಸ್ಟಾರ್ಟ್‌ಅಪ್ ಅಲ್ಲಾ. ಗ್ರಾಮೀಣ ಕೌಶಲ್ಯಗಳಿಗೆ ಮೌಲ್ಯ ನೀಡುವ ಹೊಸ ಮಾರುಕಟ್ಟೆ ನಿರ್ಮಿಸುವ, ತಮ್ಮ ಸೃಜನಶೀಲತೆಗೆ ಅನುಗುಣವಾಗಿ ಮೌಲ್ಯವನ್ನು ತಂದುಕೊಂಡುವ ಒಂದು ಹಳ್ಳಿಯ ಕೈಮಗ್ಗ ಉತ್ಪನ್ನದ ಗುಡಿ ಕೈಗಾರಿಕೆಯೂ ಸ್ಟಾರ್ಟ್‌ಅಪ್ ಎಂಬುದರ ಅರಿವಿರಬೇಕು. ಪ್ರಸ್ತುತ ನಮ್ಮ ದೇಶದಲ್ಲಿ ಕೆಲಸಕ್ಕೇನೂ ಕೊರತೆ ಇಲ್ಲಾ. ಆದರೆ ಇಂತಹದ್ದೇ ಕೆಲಸ ಬೇಕೆಂದು ಬಯಸಿದರೆ, ಅದಕ್ಕೆ ತಕ್ಕ ವಿದ್ಯಾರ್ಹತೆ ಮತ್ತು ಕಠಿಣ ಪರಿಶ್ರಮ ಇರಬೇಕು.

ಭಾರತೀಯ ಸಂಸ್ಕೃತಿಗೆ ಮೊದಲು ಗೌರವ ಬೇಕು

ಹಕ್ಕುಗಳಿಗಾಗಿ ಹೋರಾಟ ಅಗತ್ಯ. ಅಕ್ರಮಗಳನ್ನು ವಿರೋಧಿಸುವುದೂ ಅಗತ್ಯ. ಆದರೆ ಅದೇ ಸಮಯದಲ್ಲಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವುದೂ ಅಷ್ಟೇ ಅಗತ್ಯ. ಯೋಗ, ಆಯುರ್ವೇದ, ಖಾದಿ, ಕೈಮಗ್ಗ, ಹಸ್ತಶಿಲ್ಪ… ಇವು ರಾಜಕೀಯ ಪಕ್ಷಗಳ ಆಸ್ತಿಯಲ್ಲ. ಇವು ಭಾರತದ ಆಸ್ತಿ. ಯಾರು ಇವುಗಳನ್ನು ಪ್ರೋತ್ಸಾಹಿಸಿದರೂ, ಅದು ದೇಶಕ್ಕೇ ಲಾಭ.

ಕೊನೆಯ ಮಾತು

ನಾವು ಪ್ರಧಾನಿ ಮೋದಿಯವರ ರಾಜಕೀಯವನ್ನು ಬೆಂಬಲಿಸಬಹುದು. ವಿರೋಧಿಸಬಹುದು. ಆದರೆ ಅವರು ಭಾರತದ ಕೈಮಗ್ಗ, ಖಾದಿ, ಗ್ರಾಮೀಣ ಉದ್ಯೋಗಗಳ ಬಗ್ಗೆ ಮಾತನಾಡಿದ ಸಂದರ್ಭವನ್ನು ವ್ಯಂಗ್ಯ ಮಾಡುವ ಮೊದಲು, ಒಮ್ಮೆ ಚರಕದ ಮುಂದೆ ಕುಳಿತಿರುವ ವೃದ್ಧ ನೇಕಾರನನ್ನು, ಅವನ ಪಕ್ಕದಲ್ಲಿ ನೂಲು ಸುತ್ತುತ್ತಿರುವ ಅವನ ಪತ್ನಿಯನ್ನು, ಅವರ ಮೇಲೆ ಅವಲಂಬಿತವಾಗಿರುವ ಕುಟುಂಬವನ್ನು ನೆನಪಿಸಿಕೊಳ್ಳಬೇಕು. ಏಕೆಂದರೆ… ಕೈಮಗ್ಗ ಉಳಿದರೆ ಕೇವಲ ಒಂದು ಉದ್ಯಮ ಉಳಿಯುವುದಿಲ್ಲ. ಭಾರತದ ಸಾವಿರಾರು ವರ್ಷಗಳ ಸಂಸ್ಕೃತಿ, ಗ್ರಾಮೀಣ ಆರ್ಥಿಕತೆ ಮತ್ತು ಸ್ವಾವಲಂಬನೆಯ ಆತ್ಮವೇ ಉಳಿಯುತ್ತದೆ.

 

ಏನೋ ಮಕ್ಕಳು ಹುಡುಗಾಟಿಕೆಯಲ್ಲಿ ದೆಹಲಿಯಲ್ಲಿ ಪುಂಡಾಟ ನಡೆಸಿದ್ದಾರೆ. ದೊಡ್ಡವರಾಗಿ ಕ್ಷಮಿಸಿ ಬಿಡೋಣ ಎಂದು ಪ್ರಧಾನಿಗಳು ದೊಡ್ಡ ಮನಸ್ಸು ಮಾಡಿರುವುದನ್ನೇ ಅವರ ಝೆನ್ ಝೀ ಗಳಿಗೆ ಹೆದರಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿಯವರು (CJP) ಭಾವಿಸಿ ಬಾಯಿಗೆ ಬಂದಂತೆ ದೇಶ, ದೇಶದ ಸೈನಿಕರು ಪ್ರಧಾನಿಗಳು ಮತ್ತು ಅವರ ತಾಯಿಯವರ ಕುರಿತಾಗಿ ಅಸಂಬದ್ಧವಾಗಿ ಮಾತನಾಡಿದರೆ, ಮುಂದೈತೆ ಮಾರೀ ಹಬ್ಬಾ! ಎಂದು ಸಂಸತ್ ಅಧಿವೇಶನ ಮುಗಿಯುತ್ತಿದ್ದಂತೆಯೇ ತಿಳಿಯುವಂತೆ ಮಾಡಲು ಅಮಿತ್ ಶಾ ಸಿದ್ಧವಾಗಿದ್ದಾರೆ. ಸಿಂಹ ಒಂದು ಹೆಜ್ಜೆ ಹಿಂದೆ ಇಟ್ಟಿದೆ ಅಂದ್ರೇ, ಅದರ ಮುಂದಿನ ಭೇಟೆ ದೊಡ್ಡಾಗಿದೆ ಎಂದರ್ಥ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply