ಸಂತ ತುಳಸೀದಾಸರು – ರಾಮಭಕ್ತಿಯ ಮೂಲಕ ಭಾರತವನ್ನು ಒಂದುಗೂಡಿಸಿದ ಮಹಾನ್ ಸಂತ

“ಸೀಯಾರಾಮಮಯ ಸಬ ಜಗ ಜಾನೀ, ಕರೌಂ ಪ್ರಣಾಮ ಜೋರಿ ಜುಗ ಪಾನೀ”

“ಈ ಜಗತ್ತೆಲ್ಲವೂ ಸೀತಾರಾಮಮಯವಾಗಿದೆ ಎಂದು ತಿಳಿದು, ಎರಡು ಕೈಗಳನ್ನು ಜೋಡಿಸಿ ಎಲ್ಲರಿಗೂ ನಮಸ್ಕರಿಸುತ್ತೇನೆ.”

ಈ ಒಂದು ಸಾಲೇ ಸಂತ ತುಳಸೀದಾಸರ ಜೀವನದರ್ಶನವನ್ನು ತಿಳಿಸುತ್ತದೆ. ಅವರು ಕೇವಲ ಕವಿಯಲ್ಲ, ಕೇವಲ ಸಂತನೂ ಅಲ್ಲ; ಭಾರತೀಯ ಸಂಸ್ಕೃತಿ, ಭಕ್ತಿ ಮತ್ತು ನೈತಿಕ ಮೌಲ್ಯಗಳನ್ನು ಜನಸಾಮಾನ್ಯರ ಹೃದಯಕ್ಕೆ ತಲುಪಿಸಿದ ಮಹಾನ್ ಯುಗಪುರುಷ.

ತುಳಸೀದಾಸರು ಯಾರು?

ಸಂತ ತುಳಸೀದಾಸರು ಹಿಂದೂ ಧರ್ಮದ ಅತ್ಯಂತ ಶ್ರೇಷ್ಠ ಭಕ್ತಕವಿಗಳಲ್ಲಿ ಒಬ್ಬರು. ವಾಲ್ಮೀಕಿ ಮಹರ್ಷಿಗಳು ಸಂಸ್ಕೃತದಲ್ಲಿ ರಚಿಸಿದ್ದ ರಾಮಾಯಣವನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳುವ ಅವಧಿ ಭಾಷೆಯಲ್ಲಿ “ಶ್ರೀರಾಮಚರಿತಮಾನಸ” ಎಂಬ ರೂಪದಲ್ಲಿ ರಚಿಸಿ ರಾಮಕಥೆಯನ್ನು ಮನೆಮನೆಗೆ ತಲುಪಿಸಿದ ಮಹಾನುಭಾವರು. ಭಾರತದಲ್ಲಿ ರಾಮಾಯಣವನ್ನು ಹೆಚ್ಚು ಜನ ಓದುವ ಗ್ರಂಥ ಯಾವುದು ಎಂದು ಕೇಳಿದರೆ, ಸಂಸ್ಕೃತದ ವಾಲ್ಮೀಕಿ ರಾಮಾಯಣದ ಜೊತೆಗೆ ತುಳಸೀದಾಸರ ರಾಮಚರಿತಮಾನಸವೇ ಮೊದಲ ಸ್ಥಾನದಲ್ಲಿರುತ್ತದೆ.

ಜನನ ಮತ್ತು ಬಾಲ್ಯ

ತುಳಸೀದಾಸರು ಇಂದಿನ ಉತ್ತರ ಪ್ರದೇಶದ ರಾಜಾಪುರ (ಚಿತ್ರಕೂಟ ಜಿಲ್ಲೆ)ದ ಆತ್ಮಾರಾಮ ದುಬೆ ಮತ್ತು ಹುಲಸಿ ದೇವಿ ದಂಪತಿಗಳಿಗೆ ಕ್ರಿ.ಶ. 1532ರಲ್ಲಿ ಜನಿಸಿದರು

ಜನನದ ಕುರಿತು ಅನೇಕ ಜನಪ್ರಿಯ ಕಥೆಗಳು ಇವೆ.

  • ಜನಿಸಿದ ಕೂಡಲೇ ಅವರು ಅಳದೆ “ರಾಮ” ಎಂದು ಉಚ್ಚರಿಸಿದರು ಎನ್ನಲಾಗುತ್ತದೆ.
  • ಹುಟ್ಟುವಾಗಲೇ ಅವರಿಗೆ ಮೂವತ್ತೆರಡು ಹಲ್ಲುಗಳಿದ್ದವು ಎಂಬ ಜನಪ್ರಿಯ ನಂಬಿಕೆಯೂ ಇದೆ.
  • ಈ ಅಸಾಮಾನ್ಯ ಲಕ್ಷಣಗಳಿಂದ ಜನರು ಅವರನ್ನು ದೈವಿಕ ಬಾಲಕನೆಂದು ಭಾವಿಸಿದರು.

ಆದರೆ ಬಾಲ್ಯವು ಅತ್ಯಂತ ದುಃಖಕರವಾಗಿತ್ತು. ಜನನವಾದ ಕೆಲವೇ ದಿನಗಳಲ್ಲಿ ತಾಯಿ-ತಂದೆಯರನ್ನು ಕಳೆದುಕೊಂಡರು. ನಂತರ ನರಹರಿದಾಸ ಎಂಬ ಗುರುಗಳು ಅವರನ್ನು ಸಾಕಿ ಬೆಳೆಸಿದರು.

ರಾಮನಾಮವೇ ಮೊದಲ ಪಾಠ

ನರಹರಿದಾಸರು ಬಾಲಕನಿಗೆ ರಾಮಕಥೆಯನ್ನು ಹೇಳುತ್ತಿದ್ದರು. ರಾಮನ ಹೆಸರು ಕೇಳುತ್ತಿದ್ದಂತೆ ಬಾಲಕ ತುಳಸೀದಾಸರ ಕಣ್ಣುಗಳು ಆನಂದದಿಂದ ತುಂಬುತ್ತಿದ್ದವು. ಅಲ್ಲಿಯೇ ರಾಮಭಕ್ತಿಯ ಬೀಜ ಬಿತ್ತಲ್ಪಟ್ಟಿತು.

ಶಿಕ್ಷಣ

ತುಳಸೀದಾಸರು ಕಾಶಿಯಲ್ಲಿ ವೇದ, ಉಪನಿಷತ್ತು, ವ್ಯಾಕರಣ, ನ್ಯಾಯ, ಮೀಮಾಂಸೆ, ಪುರಾಣ, ಕಾವ್ಯ ಮೊದಲಾದ ಶಾಸ್ತ್ರಗಳನ್ನು ಆಳವಾಗಿ ಅಧ್ಯಯನ ಮಾಡಿದರು.

ಅವರು ಸಂಸ್ಕೃತದಲ್ಲಿ ಅಸಾಧಾರಣ ಪಾಂಡಿತ್ಯ ಹೊಂದಿದ್ದರೂ, ತಮ್ಮ ಕೃತಿಗಳನ್ನು ಜನರ ಭಾಷೆಯಲ್ಲಿ ಬರೆಯಬೇಕು ಎಂಬ ಮಹತ್ತರ ನಿರ್ಧಾರ ಕೈಗೊಂಡರು.

ಇದು ಭಾರತೀಯ ಸಾಹಿತ್ಯದ ಇತಿಹಾಸದಲ್ಲಿಯೇ ಒಂದು ದೊಡ್ಡ ಕ್ರಾಂತಿ.

ವಿವಾಹ ಮತ್ತು ಜೀವನದ ಮಹತ್ವದ ತಿರುವು

ತುಳಸೀದಾಸರು ರತ್ನಾವಳಿ ಎಂಬ ಮಹಿಳೆಯನ್ನು ವಿವಾಹವಾದರು. ಒಮ್ಮೆ ಪತ್ನಿ ತವರು ಮನೆಗೆ ಹೋದಾಗ, ಅವರನ್ನು ಕಾಣಲು ತುಳಸೀದಾಸರು ಪ್ರವಾಹದ ನದಿಯನ್ನೇ ದಾಟಿ ರಾತ್ರಿ ವೇಳೆಯಲ್ಲಿ ಅಲ್ಲಿಗೆ ತೆರಳಿದರು.  ಅದನ್ನು ಕಂಡ ರತ್ನಾವಳಿಯವರು

“ಈ ನಶ್ವರ ದೇಹದ ಮೇಲೆ ಇರುವ ಪ್ರೀತಿಯ ಅರ್ಧದಷ್ಟಾದರೂ ಶ್ರೀರಾಮನಲ್ಲಿ ಇದ್ದಿದ್ದರೆ ನೀವು ಮೋಕ್ಷವನ್ನು ಪಡೆಯುತ್ತಿದ್ದಿರಿ.”

ಈ ಮಾತು ತುಳಸೀದಾಸರ ಬದುಕನ್ನೇ ಬದಲಿಸಿತು. ಅವರು ಸಂಸಾರವನ್ನು ತ್ಯಜಿಸಿ ಸಂಪೂರ್ಣವಾಗಿ ಶ್ರೀರಾಮನ ಭಕ್ತಿಗೆ ತಮ್ಮ ಜೀವನವನ್ನು ಸಮರ್ಪಿಸಿದರು.

ಹನುಮಂತನ ಅನುಗ್ರಹ

ರಾಮನ ದರ್ಶನಕ್ಕಾಗಿ ತುಳಸೀದಾಸರು ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದರು. ಪರಂಪರೆಯ ಪ್ರಕಾರ ಶ್ರೀ ಹನುಮಂತನ ಅನುಗ್ರಹದಿಂದ ಅವರಿಗೆ ಚಿತ್ರಕೂಟದಲ್ಲಿ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ ದರ್ಶನ ದೊರೆಯಿತು. ಈ ಘಟನೆ ಅವರ ಜೀವನದ ಪ್ರಮುಖ ತಿರುವಾಯಿತು.

ಶ್ರೀರಾಮಚರಿತಮಾನಸ

ಕ್ರಿ.ಶ. 1574ರ ಸುಮಾರಿಗೆ ಅಯೋಧ್ಯೆಯಲ್ಲಿ ರಾಮನವಮಿಯಂದು ತುಳಸೀದಾಸರು ರಾಮಚರಿತಮಾನಸ ರಚನೆ ಆರಂಭಿಸಿದರು. ಸುಮಾರು ಎರಡು ವರ್ಷಗಳಲ್ಲಿ ಈ ಮಹಾಗ್ರಂಥ ಪೂರ್ಣಗೊಂಡಿತು.

ಏಳು ಕಾಂಡಗಳು

  • ಬಾಲಕಾಂಡ
  • ಅಯೋಧ್ಯಾಕಾಂಡ
  • ಅರಣ್ಯಕಾಂಡ
  • ಕಿಷ್ಕಿಂಧಾಕಾಂಡ
  • ಸುಂದರಕಾಂಡ
  • ಲಂಕಾಕಾಂಡ
  • ಉತ್ತರಕಾಂಡ

ಸುಮಾರು 12,000ಕ್ಕೂ ಹೆಚ್ಚು ಸಾಲುಗಳುಳ್ಳ ಈ ಕೃತಿ ಉತ್ತರ ಭಾರತದ ಮನೆಮನೆಗಳಲ್ಲಿ ಇಂದಿಗೂ ಪಾರಾಯಣವಾಗುತ್ತದೆ.

ಏಕೆ ವಿಶೇಷ?

ವಾಲ್ಮೀಕಿ ರಾಮಾಯಣವು ಸಂಸ್ಕೃತದಲ್ಲಿದ್ದರೆ, ರಾಮಚರಿತಮಾನಸವು ಅವಧಿ ಭಾಷೆಯಲ್ಲಿತ್ತು. ಇದರಿಂದ ರೈತ, ಕಾರ್ಮಿಕ, ಮಹಿಳೆ, ಸಾಮಾನ್ಯ ಜನ ಎಲ್ಲರೂ ರಾಮಕಥೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.

ಇತರ ಪ್ರಮುಖ ಕೃತಿಗಳು

ತುಳಸೀದಾಸರು ಸುಮಾರು ಹನ್ನೆರಡು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು:

  • ರಾಮಚರಿತಮಾನಸ
  • ವಿನಯ ಪತ್ರಿಕಾ
  • ಹನುಮಾನ್ ಚಾಲೀಸಾ
  • ದೋಹಾವಳಿ
  • ಕವಿತಾವಳಿ
  • ಗೀತಾವಳಿ
  • ಜಾನಕೀ ಮಂಗಳ
  • ಪಾರ್ವತೀ ಮಂಗಳ
  • ರಾಮಾಜ್ಞಾ ಪ್ರಶ್ನ
  • ವೈರಾಗ್ಯ ಸಂದೀಪಿನಿ

ಹನುಮಾನ್ ಚಾಲೀಸಾ

ಇಂದು ವಿಶ್ವದಾದ್ಯಂತ ಕೋಟ್ಯಂತರ ಜನ ಪ್ರತಿದಿನ ಪಠಿಸುವ ಹನುಮಾನ್ ಚಾಲೀಸಾವನ್ನು ತುಳಸೀದಾಸರೇ ರಚಿಸಿದ್ದಾರೆ. 40 ಚೌಪಾಯಿಗಳಿರುವ ಈ ಸ್ತೋತ್ರವು ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ.

ಸಮಾಜ ಸುಧಾರಕ

ತುಳಸೀದಾಸರು ಸಮಾಜದಲ್ಲಿ:

  • ಸತ್ಯ
  • ಧರ್ಮ
  • ಕರುಣೆ
  • ಸೇವೆ
  • ಭಕ್ತಿ
  • ಕುಟುಂಬ ಮೌಲ್ಯ
  • ಉತ್ತಮ ಆಡಳಿತ

ಇವುಗಳನ್ನು ಬೋಧಿಸಿದರು. ಅವರ “ರಾಮರಾಜ್ಯ” ಪರಿಕಲ್ಪನೆಯು ನ್ಯಾಯ, ಸಮಾನತೆ ಮತ್ತು ಜನಕಲ್ಯಾಣದ ಆದರ್ಶ ರಾಜ್ಯದ ಚಿತ್ರಣವಾಗಿದೆ.

ತುಳಸೀದಾಸರ ಕೆಲವು ಪ್ರಸಿದ್ಧ ಉಕ್ತಿಗಳು

ಪರಹಿತ ಸರಿಸ ಧರ್ಮ ನಹಿ ಭಾಯಿ (ಇತರರಿಗೆ ಉಪಕಾರ ಮಾಡುವುದಕ್ಕಿಂತ ದೊಡ್ಡ ಧರ್ಮವಿಲ್ಲ)

ಪರ ಪೀಡಾ ಸಮ ನಹಿ ಅಧಮಾಯಿ (ಇತರರಿಗೆ ನೋವು ಕೊಡುವುದಕ್ಕಿಂತ ದೊಡ್ಡ ಪಾಪವಿಲ್ಲ)

ಅಕ್ಬರನೊಂದಿಗೆ ಸಂಬಂಧಿಸಿದ ಪ್ರಸಂಗ

ಅಂದಿನ ಮೊಘಲ್ ಚಕ್ರವರ್ತಿ ಅಕ್ಬರನು ತುಳಸೀದಾಸರ ಪವಾಡವನ್ನು ಪರೀಕ್ಷಿಸಲು ಮುಂದಾದಾಗ, ತುಳಸೀದಾಸರು “ಪವಾಡಗಳನ್ನು ತೋರಿಸುವ ಶಕ್ತಿ ನನ್ನದಲ್ಲ. ಎಲ್ಲವೂ ಶ್ರೀರಾಮನ ಕೃಪೆ ಎಂದು ಉತ್ತರಿಸಿದ್ದರಂತೆ ನಂತರ ಹನುಮಂತನ ಕೃಪೆಯಿಂದ ಕೋಟ್ಯಾಂತರ ಕೋತಿಗಳು ನಗರವನ್ನು ಆವರಿಸಿದವು ಎಂಬ ಪ್ರಸಿದ್ಧ ಕಥೆ  ಇಂದಿಗೂ ಜನಮಾನದಲ್ಲಿದೆ.

ಭಕ್ತ ಶಿರೋಮಣಿ ಸಂತ ತುಳಸೀದಾಸರ ಭಕ್ತಿಯ ಮಹಿಮೆಯನ್ನು ಸಾರುವ ಅನೇಕ ಕಥೆಗಳು ಜನಪ್ರಿಯವಾಗಿವೆ. ಅವುಗಳಲ್ಲಿ, ಕಳ್ಳತನ ಮಾಡಲು ಅವರ ಆಶ್ರಮಕ್ಕೆ ಬಂದ ಇಬ್ಬರು ಕಳ್ಳರಿಗೆ ಸಾಕ್ಷಾತ್ ಶ್ರೀರಾಮ ಮತ್ತು ಲಕ್ಷ್ಮಣರ ದಿವ್ಯ ದರ್ಶನವಾಗಿ, ಅವರ ಜೀವನವೇ ಬದಲಾದ ಘಟನೆ ಅತ್ಯಂತ ಮನಮುಟ್ಟುವ ಕಥೆಯಾಗಿದೆ.

ಆಶ್ರಮಕ್ಕೆ ಬಂದ ಕಳ್ಳರು, ಧನುರ್ಬಾಣ ಹಿಡಿದು ಕಾವಲು ಕಾಯುತ್ತಿದ್ದ ದಿವ್ಯ ಯುವಕರು

ಒಮ್ಮೆ ಸಂತ ತುಳಸೀದಾಸರ ಆಶ್ರಮದಲ್ಲಿ ಕೆಲವು ಬೆಲೆಬಾಳುವ ವಸ್ತುಗಳಿದ್ದವು. ಇದನ್ನು ಗಮನಿಸಿದ ಇಬ್ಬರು ಕಳ್ಳರು, ರಾತ್ರಿ ವೇಳೆ ಆಶ್ರಮಕ್ಕೆ ನುಗ್ಗಿ ಕಳ್ಳತನ ಮಾಡಲು ನಿರ್ಧರಿಸಿದರು. ರಾತ್ರಿಯ ಕತ್ತಲೆಯಲ್ಲಿ ಅವರು ಆಶ್ರಮದ ಬಳಿ ಬಂದು ಒಳಗೆ ಪ್ರವೇಶಿಸಲು ಮುಂದಾದರು. ಆದರೆ ಅಲ್ಲಿ ಅವರು ಕಂಡ ದೃಶ್ಯ ಅವರನ್ನೇ ಬೆಚ್ಚಿಬೀಳಿಸಿತು. ಆಶ್ರಮದ ಪ್ರವೇಶದ್ವಾರದಲ್ಲಿ ಇಬ್ಬರು ಅಪೂರ್ವ ತೇಜಸ್ಸಿನಿಂದ ಕೂಡಿದ ಯುವಕರು ಧನುರ್ಬಾಣಗಳನ್ನು ಹಿಡಿದು ಕಾವಲು ಕಾಯುತ್ತಿದ್ದರು. ಅವರ ದೇಹದಿಂದ ಹೊರಹೊಮ್ಮುತ್ತಿದ್ದ ದಿವ್ಯ ಕಾಂತಿ ಸಾಮಾನ್ಯ ಮನುಷ್ಯರಿಗಿಂತ ಸಂಪೂರ್ಣ ವಿಭಿನ್ನವಾಗಿತ್ತು. ಅವರ ಮುಖದಲ್ಲಿ ಅಪೂರ್ವ ಶಾಂತಿ ಮತ್ತು ತೇಜಸ್ಸು ಕಾಣುತ್ತಿತ್ತು. ಕಳ್ಳರು ಅವರನ್ನು ದಾಟಿ ಆಶ್ರಮದೊಳಗೆ ಹೋಗಲು ಹಲವು ಬಾರಿ ಪ್ರಯತ್ನಿಸಿದರು. ಆದರೆ ಆ ದಿವ್ಯ ಕಾವಲುಗಾರರ ಸಾನ್ನಿಧ್ಯದಿಂದಾಗಿ ಅವರಿಗೆ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಾಗಲಿಲ್ಲ. ಹೀಗೆ ಇಡೀ ರಾತ್ರಿ ಕಳೆಯಿತು. ಬೆಳಗಿನ ಜಾವ ಸಮೀಪಿಸುತ್ತಿದ್ದಂತೆ ಆ ಇಬ್ಬರು ದಿವ್ಯ ಯುವಕರು ಅಲ್ಲಿಂದ ನಿಧಾನವಾಗಿ ಅದೃಶ್ಯರಾದರು.

ನಿಜ ತಿಳಿದ ಕಳ್ಳರು

ಬೆಳಗಾದ ನಂತರ ಕಳ್ಳರಿಗೆ ಹಿಂದಿನ ರಾತ್ರಿ ನಡೆದ ಘಟನೆ ನೆನಪಾಯಿತು. ತಾವು ಕಂಡವರು ಸಾಮಾನ್ಯ ಕಾವಲುಗಾರರಲ್ಲ ಎಂಬ ಭಾವನೆ ಅವರ ಮನಸ್ಸಿನಲ್ಲಿ ಮೂಡಿತು. ತುಳಸೀದಾಸರ ಅಪಾರ ರಾಮಭಕ್ತಿಯ ಮಹಿಮೆಯಿಂದಾಗಿ, ತಮ್ಮ ಕಣ್ಣೆದುರೇ ಸಾಕ್ಷಾತ್ ಶ್ರೀರಾಮ ಮತ್ತು ಲಕ್ಷ್ಮಣರ ದರ್ಶನ ದೊರೆತಿದೆ ಎಂದು ಅವರು ಅರಿತುಕೊಂಡರು. ತಾವು ಕಳ್ಳತನದ ಉದ್ದೇಶದಿಂದ ಬಂದಿದ್ದರೂ, ಭಕ್ತನ ಆಶ್ರಮದ ಪ್ರಭಾವದಿಂದ ಭಗವಂತನ ದರ್ಶನ ಪಡೆಯುವಂತಹ ಅಪೂರ್ವ ಅವಕಾಶ ತಮಗೆ ದೊರೆತಿದೆ ಎಂಬ ಅರಿವು ಅವರ ಮನಸ್ಸನ್ನು ಸಂಪೂರ್ಣವಾಗಿ ಬದಲಿಸಿತು.

ತುಳಸೀದಾಸರ ಪಾದಗಳಿಗೆ ಬಿದ್ದ ಕಳ್ಳರು, ಕಳ್ಳತನ ಬಿಟ್ಟು ಭಕ್ತಿಯ ದಾರಿ

ಪಶ್ಚಾತ್ತಾಪದಿಂದ ತುಂಬಿದ ಇಬ್ಬರೂ ಕಳ್ಳರು ಕೂಡಲೇ ತುಳಸೀದಾಸರ ಬಳಿಗೆ ಓಡಿಬಂದರು. ಅವರ ಪಾದಗಳಿಗೆ ಬಿದ್ದು, ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದರು. “ನಾವು ಪಾಪದ ದಾರಿಯಲ್ಲಿ ನಡೆಯುತ್ತಿದ್ದವರು. ಆದರೆ ನಿಮ್ಮ ಭಕ್ತಿಯ ಪ್ರಭಾವದಿಂದ ಜಗತ್ತಿನ ರಕ್ಷಕರಾದ ಶ್ರೀರಾಮ ಮತ್ತು ಲಕ್ಷ್ಮಣರ ದರ್ಶನ ನಮಗೆ ದೊರೆಯಿತು” ಎಂದು ಕಣ್ಣೀರಿಡುತ್ತಾ ತಮ್ಮ ಅನುಭವವನ್ನು ವಿವರಿಸಿದರು. ತುಳಸೀದಾಸರ ಸಾನ್ನಿಧ್ಯ ಮತ್ತು ಶ್ರೀರಾಮನ ದಿವ್ಯ ದರ್ಶನ ಅವರ ಹೃದಯವನ್ನು ಪರಿವರ್ತಿಸಿತ್ತು. ಆ ಘಟನೆಯ ನಂತರ ಅವರು ಕಳ್ಳತನದ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿದರು. ತುಳಸೀದಾಸರ ಆಶ್ರಮದಲ್ಲೇ ಉಳಿದು, ಭಕ್ತಿಯ ಮಾರ್ಗವನ್ನು ಅನುಸರಿಸುತ್ತಾ ಜೀವನ ಸಾಗಿಸಲು ಆರಂಭಿಸಿದರು.

ಈ ಕಥೆಯ ಸಾರ ಕೇವಲ ಒಂದು ಅದ್ಭುತ ಘಟನೆಯಲ್ಲ. ಒಬ್ಬ ವ್ಯಕ್ತಿಯ ಜೀವನವನ್ನು ಬದಲಿಸುವಷ್ಟು ಶಕ್ತಿಯುತವಾದುದು ಸತ್ಸಂಗ, ಭಕ್ತಿ ಮತ್ತು ದೈವಸ್ಮರಣೆ ಎಂಬ ಸಂದೇಶವನ್ನು ಇದು ನೀಡುತ್ತದೆ. ಕೆಟ್ಟ ಉದ್ದೇಶದಿಂದ ಬಂದವರನ್ನೂ ಒಳ್ಳೆಯ ದಾರಿಯತ್ತ ಕರೆದೊಯ್ಯುವ ಶಕ್ತಿ ಸಂತರ ಸಾನ್ನಿಧ್ಯದಲ್ಲಿದೆ ಎಂಬ ನಂಬಿಕೆಯನ್ನು ಈ ಕಥೆ ಪ್ರತಿಬಿಂಬಿಸುತ್ತದೆ.

ತುಳಸೀದಾಸರ ಅಂತಿಮ ದಿನಗಳು

ಜೀವನದ ಬಹುಭಾಗವನ್ನು ಕಾಶಿಯಲ್ಲಿ ಕಳೆದ ಅವರು ಕ್ರಿ.ಶ. 1623ರ ಸುಮಾರಿಗೆ ಗಂಗಾತೀರದಲ್ಲಿ ಲೋಕಕಲ್ಯಾಣಕ್ಕಾಗಿ ರಾಮನಾಮ ಜಪಿಸುತ್ತಲೇ ಪರಮಪದ ಹೊಂದಿದರು ಎಂದು ಪರಂಪರೆ ಹೇಳುತ್ತದೆ.

ತುಳಸೀದಾಸರ ಪ್ರಭಾವ

ಇಂದಿಗೂ:

  • ಉತ್ತರ ಭಾರತದ ಸಾವಿರಾರು ರಾಮಲೀಲೆಗಳು ಅವರ ರಾಮಚರಿತಮಾನಸವನ್ನು ಆಧರಿಸಿವೆ.
  • ಹನುಮಾನ್ ಚಾಲೀಸಾ ವಿಶ್ವದ ಅತ್ಯಂತ ಜನಪ್ರಿಯ ಭಕ್ತಿಗೀತೆಗಳಲ್ಲಿ ಒಂದಾಗಿದೆ.
  • ರಾಮಭಕ್ತಿ ಚಳವಳಿಯ ಪ್ರಮುಖ ಸ್ತಂಭರಾಗಿ ಅವರನ್ನು ಗೌರವಿಸಲಾಗುತ್ತದೆ.
  • ಹಿಂದಿ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲಿ ಅವರಿಗೆ ಅಗ್ರಸ್ಥಾನವಿದೆ.

ತುಳಸೀದಾಸರ ಜೀವನದಿಂದ ಕಲಿಯಬೇಕಾದ ಪಾಠಗಳು

  • ಸಂಕಷ್ಟಗಳೇ ಸಾಧನೆಗೆ ಅಡ್ಡಿಯಾಗುವುದಿಲ್ಲ.
  • ಒಬ್ಬರ ಮಾತು ಜೀವನವನ್ನೇ ಬದಲಾಯಿಸಬಹುದು.
  • ಜ್ಞಾನವು ಜನಸಾಮಾನ್ಯರಿಗೆ ತಲುಪಿದಾಗ ಮಾತ್ರ ಅದು ಸಮಾಜವನ್ನು ಬದಲಿಸುತ್ತದೆ.
  • ಭಕ್ತಿ ಮತ್ತು ಸೇವೆ ಸಮಾಜವನ್ನು ಒಂದುಗೂಡಿಸುತ್ತವೆ.
  • ಭಾಷೆ ಜನರಿಗೆ ಅರ್ಥವಾಗುವಂತಿರಬೇಕು.

ಕೊನೆಯ ಮಾತು

ತುಳಸೀದಾಸರು ಕೇವಲ ರಾಮಾಯಣವನ್ನು ಬರೆದವರಲ್ಲ. ರಾಮನ ಆದರ್ಶ ಜೀವನವನ್ನು ಕೋಟ್ಯಂತರ ಜನರ ಜೀವನದ ಭಾಗವಾಗಿಸಿದ ಮಹಾನ್ ಸಂತ. ಅವರು ರಾಮನನ್ನು ಅರಮನೆಯಿಂದ ಗುಡಿಸಲಿಗೆ, ಸಂಸ್ಕೃತದಿಂದ ಜನಭಾಷೆಗೆ, ಪಂಡಿತರಿಂದ ಸಾಮಾನ್ಯ ಜನರ ಹೃದಯಕ್ಕೆ ತಂದರು.

ಆದ್ದರಿಂದಲೇ ಅವರು ಕೇವಲ ಕವಿಯಲ್ಲ, ಭಾರತೀಯ ಭಕ್ತಿ ಚಳವಳಿಯ ಮಹಾನ್ ದಾರ್ಶನಿಕ, ಸಮಾಜ ಸುಧಾರಕ ಮತ್ತು ಶಾಶ್ವತ ಸಾಂಸ್ಕೃತಿಕ ದೀಪಸ್ತಂಭ.

ಇಂದಿಗೂ ಉತ್ತರ ಭಾರತದಲ್ಲಿ ಮನೆಮನೆಗಳಲ್ಲಿ ಕೇಳಿಬರುವ ರಾಮನಾಮ, ಹನುಮಾನ್ ಚಾಲೀಸಾ ಮತ್ತು ರಾಮಲೀಲೆಗಳ ಹಿಂದೆ ತುಳಸೀದಾಸರ ಅಮೋಘ ಸೇವೆ ಅಡಗಿದೆ. ಅವರ ಸಾಹಿತ್ಯವು ಧರ್ಮವನ್ನು ಮಾತ್ರವಲ್ಲ, ಮಾನವೀಯತೆ, ಕರುಣೆ, ನೈತಿಕತೆ ಮತ್ತು ಸಾಂಸ್ಕೃತಿಕ ಏಕತೆಯನ್ನು ಸಾರುವ ಅಮೂಲ್ಯ ನಿಧಿಯಾಗಿದೆ ಎಂದರೂ ಅತಿಶಯವಾಗದು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply