
ಒಬ್ಬ ಶಿಷ್ಯನು ತನ್ನ ಗುರುಕುಲದಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಮನೆಗೆ ಹಿಂದಿರುಗುವ ಮುನ್ನ ತನ್ನ ಗುರುಗಳ ಬಳಿಗೆ ಬಂದು ಭಕ್ತಿಯಿಂದ ನಮಸ್ಕರಿಸಿದ. “ಗುರುಗಳೇ, ನಿಮ್ಮಿಂದ ನಾನು ವಿದ್ಯೆಯನ್ನು ಕಲಿತುಕೊಂಡಿದ್ದೇನೆ. ನನ್ನ ವಿದ್ಯಾಭ್ಯಾಸವೂ ಪೂರ್ಣಗೊಂಡಿದೆ. ನಿಮಗೆ ನಾನು ಗುರುದಕ್ಷಿಣೆಯಾಗಿ ಏನು ಕೊಡಲಿ?” ಎಂದು ವಿನಯದಿಂದ ಕೇಳಿದ. ಗುರುಗಳು ಕ್ಷಣಕಾಲ ಯೋಚಿಸಿ, “ಮಗು, ನಾನು ಕೇಳುವ ಗುರುದಕ್ಷಿಣೆಯನ್ನು ನೀನು ಕೊಡಲು ಸಾಧ್ಯವೇ?” ಎಂದು ಪ್ರಶ್ನಿಸಿದರು. “ಗುರುಗಳೇ, ನನ್ನಿಂದ ಸಾಧ್ಯವಾದರೆ ಖಂಡಿತವಾಗಿಯೂ ಕೊಡುತ್ತೇನೆ,” ಎಂದು ಶಿಷ್ಯ ಉತ್ತರಿಸಿದ. ಆಗ ಗುರುಗಳು ಮುಗುಳ್ನಗುತ್ತಾ ಹೇಳಿದರು:
“ನಾನು ನಿನ್ನ ಬಳಿ ಕೇಳುವ ಗುರುದಕ್ಷಿಣೆ ನಿನ್ನ ಸಾಮರ್ಥ್ಯಕ್ಕೆ ಮೀರಿದ್ದಲ್ಲ. ನಿನ್ನೊಳಗೇ ಇರುವ ಒಂದು ವಸ್ತುವನ್ನು ನನಗೆ ನೀಡಬೇಕು. ಯಾರಿಗೂ ಯಾವ ರೀತಿಯಲ್ಲೂ ಉಪಯೋಗಕ್ಕೆ ಬಾರದ ಯಾವುದಾದರೂ ಒಂದು ವಸ್ತುವನ್ನು ತಂದುಕೊಡು. ಅದೇ ನನಗೆ ನೀನು ನೀಡಬೇಕಾದ ಗುರುದಕ್ಷಿಣೆ.” ಶಿಷ್ಯನಿಗೆ ತುಂಬಾ ಸಂತೋಷವಾಯಿತು. “ಇದೇನು ಕಷ್ಟದ ಕೆಲಸವಲ್ಲ. ಉಪಯೋಗಕ್ಕೆ ಬಾರದ ವಸ್ತುಗಳು ಬೇಕಾದಷ್ಟಿವೆ,” ಎಂದುಕೊಂಡು ಆಶ್ರಮದ ಸುತ್ತಮುತ್ತ ಹುಡುಕಲು ಹೊರಟ.
ಹರಿದ ಬಟ್ಟೆಯೂ ಉಪಯುಕ್ತವೇ!

ಸ್ವಲ್ಪ ದೂರ ಹೋದಾಗ ಒಂದು ಮರದ ಕೊಂಬೆಯ ಮೇಲೆ ಹರಿದು, ಕೊಳಕಾಗಿದ್ದ ಹಳೆಯ ಬಟ್ಟೆಯೊಂದು ಕಾಣಿಸಿತು. “ಇದಕ್ಕಿಂತ ಉಪಯೋಗಕ್ಕೆ ಬಾರದ ವಸ್ತು ಇನ್ನೇನಿರಬಹುದು?” ಎಂದುಕೊಂಡ ಶಿಷ್ಯ ಅದನ್ನು ತೆಗೆದುಕೊಂಡು ಗುರುಗಳ ಬಳಿಗೆ ಬಂದ. “ಗುರುಗಳೇ, ನೀವು ಕೇಳಿದಂತೆ ಯಾರಿಗೂ ಉಪಯೋಗಕ್ಕೆ ಬಾರದ ವಸ್ತುವನ್ನು ತಂದಿದ್ದೇನೆ. ಇದನ್ನು ಸ್ವೀಕರಿಸಿ,” ಎಂದ.
ಗುರುಗಳು ಆ ಬಟ್ಟೆಯನ್ನು ಕೈಗೆತ್ತಿಕೊಂಡು ನೋಡಿದರು. “ಮಗು, ಇದನ್ನು ಉಪಯೋಗಕ್ಕೆ ಬರುವುದಿಲ್ಲ ಎಂದು ಹೇಗೆ ಹೇಳುತ್ತೀಯ? ಚೆನ್ನಾಗಿ ತೊಳೆದು ಒಣಗಿಸಿದರೆ ಇದರಿಂದ ದೀಪದ ಬತ್ತಿ ಮಾಡಬಹುದು. ನೆಲ ಒರೆಸಬಹುದು. ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಇನ್ನೂ ಹಲವು ರೀತಿಯಲ್ಲಿ ಉಪಯೋಗಿಸಬಹುದು. ಹೀಗಿರುವಾಗ ಇದು ಹೇಗೆ ಅನುಪಯುಕ್ತ?” ಎಂದರು.
ಶಿಷ್ಯನಿಗೆ ಆಶ್ಚರ್ಯವಾಯಿತು. “ಸರಿ, ಇದಕ್ಕಿಂತ ಉಪಯೋಗಕ್ಕೆ ಬಾರದ ವಸ್ತುವನ್ನು ಹುಡುಕುತ್ತೇನೆ,” ಎಂದು ಮತ್ತೆ ಹೊರಟ.
ಕಾಡು ಗಿಡವೂ ಅಮೂಲ್ಯವೇ!

ಸ್ವಲ್ಪ ದೂರದಲ್ಲಿ ಹಿತ್ತಲಿನ ಒಂದು ಮೂಲೆಯಲ್ಲಿ ಹುಲುಸಾಗಿ ಬೆಳೆದಿದ್ದ ಕಾಡು ಗಿಡವೊಂದು ಅವನ ಕಣ್ಣಿಗೆ ಬಿತ್ತು. “ಇದು ಯಾರಿಗೂ ಉಪಯೋಗವಾಗುವುದಿಲ್ಲ,” ಎಂದುಕೊಂಡು ಆ ಗಿಡವನ್ನು ಕಿತ್ತು ಗುರುಗಳ ಬಳಿಗೆ ತಂದ. “ಗುರುಗಳೇ, ಈ ಗಿಡ ಯಾರಿಗೂ ಬೇಡ. ಇದೇ ನೀವು ಕೇಳಿದ ವಸ್ತು,” ಎಂದ.
ಗುರುಗಳು ಗಿಡವನ್ನು ಗಮನಿಸಿ, “ಮಗು, ಇದು ಸಾಮಾನ್ಯ ಕಾಡು ಗಿಡವಲ್ಲ. ಇದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ. ಇಂತಹ ಸಸ್ಯಗಳು ಮನುಷ್ಯನ ಆರೋಗ್ಯಕ್ಕೆ ಉಪಕಾರಿಯಾಗುತ್ತವೆ. ನಮಗೆ ತಿಳಿಯದಿರುವುದರಿಂದ ಮಾತ್ರ ಯಾವುದಾದರೂ ವಸ್ತು ಅನುಪಯುಕ್ತವಾಗುವುದಿಲ್ಲ,” ಎಂದರು. ಶಿಷ್ಯ ಮತ್ತಷ್ಟು ಗೊಂದಲಕ್ಕೊಳಗಾದ.
ಅನುಪಯುಕ್ತವೆಂದು ಕಂಡ ಪ್ರತಿಯೊಂದರಲ್ಲೂ ಉಪಯೋಗ!

ಆತ ಮತ್ತೆ ಊರಿನ ಕಡೆಗೆ ಹೊರಟ. ರಸ್ತೆಯ ಬದಿಯಲ್ಲಿ ಬಿದ್ದಿದ್ದ ಕಸವನ್ನು ತಂದ. ಗುರುಗಳು ಅದರಲ್ಲಿಯೂ ಯಾವುದಾದರೂ ಉಪಯೋಗವನ್ನು ತಿಳಿಸಿದರು.
ಮುರಿದ ಬುಟ್ಟಿ ತಂದ. ಅದರ ಕೆಲವು ಭಾಗಗಳನ್ನು ಬೇರೆ ಕೆಲಸಗಳಿಗೆ ಬಳಸಬಹುದು ಎಂದರು.
ಮುರಿದ ಛತ್ರಿ ತಂದ. ಅದರ ಕಡ್ಡಿಗಳು ಮತ್ತಿತರ ಭಾಗಗಳನ್ನು ಉಪಯೋಗಿಸಬಹುದು ಎಂದರು.
ತುಂಡಾಗಿ ಬಿದ್ದಿದ್ದ ಹಲಗೆಯನ್ನು ತಂದ. ಅದರಿಂದಲೂ ಬೇರೆ ಕೆಲಸಗಳನ್ನು ಮಾಡಬಹುದು ಎಂದರು.
ಹೀಗೆ ಶಿಷ್ಯ ಏನೇ ತಂದರೂ ಗುರುಗಳು ಅದರಲ್ಲಿರುವ ಯಾವುದಾದರೂ ಉಪಯೋಗವನ್ನು ತೋರಿಸುತ್ತಲೇ ಇದ್ದರು.
ಈಗ ಶಿಷ್ಯನಿಗೆ ನಿಜವಾದ ಪ್ರಶ್ನೆ ಎದುರಾಯಿತು. “ಗುರುಗಳಿಗೆ ಬೇಕಾಗಿರುವುದು ನಿಜವಾಗಿ ಏನು?” “ಯಾರಿಗೂ ಯಾವತ್ತಿಗೂ ಉಪಯೋಗಕ್ಕೆ ಬಾರದ ವಸ್ತು ಎಂದರೆ ಯಾವುದು?” ಎಂಬ ಪ್ರಶ್ನೆ ಅವನನ್ನು ಕಾಡತೊಡಗಿತು.
ಸಾಧುವಿನ ಭೇಟಿ

ಹುಡುಕುತ್ತಾ, ಯೋಚಿಸುತ್ತಾ ಸಾಗುತ್ತಿದ್ದ ಶಿಷ್ಯನಿಗೆ ದಾರಿಯಲ್ಲಿ ಒಬ್ಬ ಸಾಧು ಎದುರಾದರು. ಶಿಷ್ಯನ ಬಾಡಿದ ಮುಖವನ್ನು ಕಂಡ ಸಾಧು, “ಮಗು, ಏಕೆ ಇಷ್ಟು ಚಿಂತೆಯಲ್ಲಿದ್ದೀಯ? ಏನಾಯಿತು?” ಎಂದು ಕೇಳಿದರು. ಶಿಷ್ಯ ತನ್ನ ಗುರುಗಳು ಹೇಳಿದ ಮಾತಿನಿಂದ ಹಿಡಿದು, ತಾನು ತಂದ ಪ್ರತಿಯೊಂದು ವಸ್ತುವಿನ ಕಥೆಯವರೆಗೂ ಎಲ್ಲವನ್ನೂ ವಿವರಿಸಿದ. ಸಾಧು ಎಲ್ಲವನ್ನೂ ಕೇಳಿ ಮುಗುಳ್ನಗುತ್ತಾ, “ಅಯ್ಯೋ! ಇಷ್ಟು ಸರಳವಾದ ವಿಷಯವೂ ನಿನಗೆ ಅರ್ಥವಾಗಲಿಲ್ಲವೇ?” ಎಂದರು.
ಶಿಷ್ಯ ಆಶ್ಚರ್ಯದಿಂದ ಅವರ ಮುಖ ನೋಡಿದ. “ನಿನ್ನ ಗುರುಗಳು ನಿನಗೆ ಇಷ್ಟು ಅಮೂಲ್ಯವಾದ ವಿದ್ಯೆಯನ್ನು ಕಲಿಸಿದ್ದಾರೆ. ಅವರ ಮಾತಿನ ಅರ್ಥವನ್ನು ಈಗಲೂ ಗ್ರಹಿಸಲಿಲ್ಲವೇ?” ಎಂದು ಸಾಧು ಕೇಳಿದರು. ಶಿಷ್ಯ ತನ್ನ ವಿದ್ಯೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಲು ಆರಂಭಿಸಿದ. “ನಾನು ಗುರುಕುಲದಲ್ಲಿ ವೇದ, ತರ್ಕ, ವ್ಯಾಕರಣ, ಸ್ತೋತ್ರಗಳು ಸೇರಿದಂತೆ ಅನೇಕ ವಿದ್ಯೆಗಳನ್ನು ಕಲಿತಿದ್ದೇನೆ. ಗುರುಗಳು ಹೇಳಿಕೊಟ್ಟ ಪಾಠಗಳನ್ನು ನಾನು ಬೇಗ ಕಲಿಯುತ್ತಿದ್ದೆ. ಎಲ್ಲರಿಗಿಂತ ನಾನೇ ಬುದ್ಧಿವಂತ. ಯಾವುದೇ ಪ್ರಶ್ನೆ ಕೇಳಿದರೂ ಉತ್ತರಿಸಬಲ್ಲೆ. ನಾನು ಕಲಿಯಬೇಕಾದ ಎಲ್ಲವನ್ನೂ ಕಲಿತಿದ್ದೇನೆ,” ಎಂದು ತನ್ನ ಪಾಂಡಿತ್ಯವನ್ನು ವಿವರಿಸುತ್ತಾ ಹೋದ.
ಸಾಧು ಮುಗುಳ್ನಕ್ಕು,
“ಸಾಕು… ಸಾಕು… ನಿನ್ನ ಪ್ರವರವನ್ನು!” ಎಂದರು. ನಂತರ ಕೇಳಿದರು “ಈಗ ಅರ್ಥವಾಯಿತೇ?” ಶಿಷ್ಯ ಮೌನವಾಗಿ ಸಾಧುವಿನತ್ತ ನೋಡಿದ.
ನಿಜವಾದ ಅನುಪಯುಕ್ತ ವಸ್ತು
ಸಾಧು ಹೇಳಿದರು: “ನೀನು ಇದುವರೆಗೆ ಹುಡುಕಿದ ಯಾವ ವಸ್ತುವೂ ನಿಜವಾಗಿ ಅನುಪಯುಕ್ತವಲ್ಲ.
ಹರಿದ ಬಟ್ಟೆಯಲ್ಲೂ ಉಪಯೋಗವಿದೆ. ಕಾಡು ಗಿಡದಲ್ಲೂ ಉಪಯೋಗವಿದೆ. ಮುರಿದ ಬುಟ್ಟಿಯಲ್ಲೂ ಉಪಯೋಗವಿದೆ. ಮುರಿದ ಛತ್ರಿಯಲ್ಲೂ ಉಪಯೋಗವಿದೆ. ಹಲಗೆಯ ತುಂಡಿನಲ್ಲೂ ಉಪಯೋಗವಿದೆ.
ಆದರೆ ಮನುಷ್ಯನೊಳಗೆ ಒಂದು ವಸ್ತು ಮಾತ್ರ ಇದೆ — ಅದು ಯಾರಿಗೂ ಉಪಯೋಗಕ್ಕೆ ಬರುವುದಿಲ್ಲ. ಅದೇನು ಗೊತ್ತೇ?
ಅಹಂಕಾರ. ‘ನಾನೇ ಬುದ್ಧಿವಂತ.’ ‘ನನಗೆ ಎಲ್ಲವೂ ಗೊತ್ತು.’ ‘ನನ್ನಷ್ಟು ವಿದ್ಯಾವಂತರು ಯಾರೂ ಇಲ್ಲ.’ ನಾನೇ ಎಲ್ಲರಿಗಿಂತ ಶ್ರೇಷ್ಠ.’ ಎಂಬ ಭಾವನೆಯೇ ಅಹಂಕಾರ.
ಅಹಂಕಾರವಿರುವ ವ್ಯಕ್ತಿಗೆ ತನ್ನ ತಪ್ಪು ಕಾಣುವುದಿಲ್ಲ. ಇತರರಿಂದ ಕಲಿಯುವ ಮನಸ್ಸಿರುವುದಿಲ್ಲ. ತನ್ನ ಜ್ಞಾನವನ್ನು ಬೆಳೆಸಿಕೊಳ್ಳುವ ಬದಲು, ತನ್ನ ಜ್ಞಾನವನ್ನೇ ಪ್ರದರ್ಶಿಸುವ ಮನಸ್ಸಾಗುತ್ತದೆ. ಅಂತಹ ಅಹಂಕಾರದಿಂದ ಸ್ವತಃ ಅವನಿಗೂ ಪ್ರಯೋಜನವಿಲ್ಲ; ಅವನ ಸುತ್ತಲಿರುವವರಿಗೂ ನೆಮ್ಮದಿಯಿಲ್ಲ. ಹೀಗಾಗಿ ನಿನ್ನ ಗುರುಗಳು ಕೇಳಿದ ಗುರುದಕ್ಷಿಣೆ ಬೇರೆ ಯಾವುದೂ ಅಲ್ಲ.
ನಿನ್ನೊಳಗಿರುವ ಈ ಅಹಂಕಾರವನ್ನು ಅವರಿಗೆ ಗುರುದಕ್ಷಿಣೆಯಾಗಿ ಅರ್ಪಿಸು.”
ಶಿಷ್ಯನಿಗೆ ಜ್ಞಾನೋದಯ

ಸಾಧುವಿನ ಮಾತು ಕೇಳುತ್ತಿದ್ದಂತೆ ಶಿಷ್ಯನಿಗೆ ಎಲ್ಲವೂ ಅರ್ಥವಾಯಿತು. ತಾನು ಕಲಿತ ವಿದ್ಯೆಯ ಬಗ್ಗೆ ಹೆಮ್ಮೆಪಡುತ್ತಿದ್ದ. ತನ್ನ ಬುದ್ಧಿವಂತಿಕೆಯ ಬಗ್ಗೆ ಗರ್ವಪಡುತ್ತಿದ್ದ. “ನನಗೆ ಎಲ್ಲವೂ ಗೊತ್ತು” ಎಂಬ ಭಾವನೆ ತನ್ನೊಳಗೆ ಬೆಳೆದಿರುವುದನ್ನು ಅವನು ಗಮನಿಸಿರಲಿಲ್ಲ.
ಅದೇ ತನ್ನ ಗುರುಗಳು ಕೇಳಿದ “ಯಾರಿಗೂ ಉಪಯೋಗಕ್ಕೆ ಬಾರದ ವಸ್ತು” ಎಂಬುದು ಅವನಿಗೆ ಅರಿವಾಯಿತು. ಶಿಷ್ಯ ತಡಮಾಡದೆ ಗುರುಗಳ ಬಳಿಗೆ ಓಡಿಹೋದ. ಗುರುಗಳ ಮುಂದೆ ತಲೆಬಾಗಿ ನಮಸ್ಕರಿಸಿ, “ಗುರುಗಳೇ, ಈಗ ನನಗೆ ನೀವು ಕೇಳಿದ ಗುರುದಕ್ಷಿಣೆ ಅರ್ಥವಾಗಿದೆ.
ಯಾರಿಗೂ ಉಪಯೋಗಕ್ಕೆ ಬಾರದ ವಸ್ತು ನನ್ನೊಳಗೇ ಇತ್ತು — ಅದು ನನ್ನ ಅಹಂಕಾರ.
ನನ್ನಲ್ಲಿರುವ ಈ ಅಹಂಕಾರವನ್ನು ನಿಮ್ಮ ಪಾದಗಳಿಗೆ ಗುರುದಕ್ಷಿಣೆಯಾಗಿ ಅರ್ಪಿಸುತ್ತೇನೆ,” ಎಂದು ಹೇಳಿದ. ಗುರುಗಳು ಶಿಷ್ಯನನ್ನು ಮೇಲೆತ್ತಿ, ಪ್ರೀತಿಯಿಂದ ಅವನ ತಲೆಯ ಮೇಲೆ ಕೈಯಿಟ್ಟರು.
“ಮಗು, ಇಂದು ನೀನು ನಿಜವಾದ ವಿದ್ಯೆಯನ್ನು ಕಲಿತೆ. ವಿದ್ಯೆ ಎಂದರೆ ಕೇವಲ ವೇದ, ಶಾಸ್ತ್ರ, ತರ್ಕ ಮತ್ತು ವ್ಯಾಕರಣವನ್ನು ಕಲಿಯುವುದಲ್ಲ.
ವಿದ್ಯೆಯ ನಿಜವಾದ ಫಲ ವಿನಯ.
ನಿನ್ನ ಅಹಂಕಾರವನ್ನು ಬಿಟ್ಟಿರುವ ನೀನು ಈಗ ಜಗತ್ತಿನ ಯಾವುದೇ ಮೂಲೆಗೆ ಹೋದರೂ ಚೆನ್ನಾಗಿ ಬದುಕಬಲ್ಲೆ. ಅಹಂಕಾರ ಇರುವವರೆಗೆ ನಿನಗೆ ಶಾಂತಿ ಇರುವುದಿಲ್ಲ. ನಿನ್ನೊಂದಿಗೆ ಬದುಕುವವರಿಗೂ ನೆಮ್ಮದಿ ಇರುವುದಿಲ್ಲ. ಆದ್ದರಿಂದ ಅಹಂಕಾರವನ್ನು ಎಂದಿಗೂ ನಿನ್ನ ಮನಸ್ಸಿನಲ್ಲಿ ನೆಲೆಗೊಳ್ಳಲು ಬಿಡಬೇಡ,” ಎಂದು ಆಶೀರ್ವದಿಸಿ ಶಿಷ್ಯನನ್ನು ಬೀಳ್ಕೊಟ್ಟರು. ಆ ದಿನ ಶಿಷ್ಯನು ಗುರುಕುಲದಿಂದ ಕೇವಲ ವಿದ್ಯೆಯನ್ನು ಮಾತ್ರ ತೆಗೆದುಕೊಂಡು ಹೋಗಲಿಲ್ಲ. ವಿದ್ಯೆಯ ನಿಜವಾದ ಅರ್ಥವನ್ನೂ ತನ್ನೊಂದಿಗೆ ಕೊಂಡೊಯ್ದ.
ಕಥೆಯ ನೀತಿ
ನಾವು ಎಷ್ಟೇ ವಿದ್ಯಾವಂತರಾಗಿದ್ದರೂ, ಎಷ್ಟೇ ಜ್ಞಾನವನ್ನು ಹೊಂದಿದ್ದರೂ, ನಮ್ಮೊಳಗೆ ವಿನಯವಿಲ್ಲದಿದ್ದರೆ ಆ ಜ್ಞಾನ ಅಪೂರ್ಣ. ನಿಜವಾದ ವಿದ್ಯೆ ನಮ್ಮನ್ನು ಇತರರಿಗಿಂತ ಶ್ರೇಷ್ಠರೆಂದು ಭಾವಿಸುವಂತೆ ಮಾಡಬಾರದು; ಇತರರಿಂದಲೂ ಕಲಿಯುವಷ್ಟು ವಿನಯಶೀಲರನ್ನಾಗಿ ಮಾಡಬೇಕು. ನಮ್ಮಲ್ಲಿರುವ ಜ್ಞಾನ ಹೆಚ್ಚಾದಂತೆ ನಮ್ಮ ವಿನಯವೂ ಹೆಚ್ಚಾಗಬೇಕು.
ಇದನ್ನೇ ಸುಂದರವಾಗಿ ಸಾರುವ ಪ್ರಸಿದ್ಧ ಸುಭಾಷಿತ:
ವಿದ್ಯಾ ದದಾತಿ ವಿನಯಂ ವಿನಯಾದ್ ಯಾತಿ ಪಾತ್ರತಾಂ ।
ಪಾತ್ರತ್ವಾತ್ ಧನಮಾಪ್ನೋತಿ ಧನಾದ್ ಧರ್ಮಂ ತತಃ ಸುಖಮ್ ॥
ಅರ್ಥ:
ವಿದ್ಯೆಯು ವಿನಯವನ್ನು ನೀಡುತ್ತದೆ. ವಿನಯದಿಂದ ಮನುಷ್ಯನು ಯೋಗ್ಯತೆಯನ್ನು ಪಡೆಯುತ್ತಾನೆ.
ಯೋಗ್ಯತೆಯಿಂದ ಸಂಪತ್ತು ದೊರೆಯುತ್ತದೆ. ಸಂಪತ್ತನ್ನು ಸತ್ಕಾರ್ಯಗಳಿಗೆ ಬಳಸಿದಾಗ ಧರ್ಮವು ಬೆಳೆಯುತ್ತದೆ.
ಧರ್ಮದಿಂದ ನಿಜವಾದ ಸಂತೋಷ ಮತ್ತು ನೆಮ್ಮದಿ ದೊರೆಯುತ್ತದೆ.
ಕೊನೆಯ ಸಂದೇಶ:
ವಿದ್ಯೆ → ವಿನಯ → ಯೋಗ್ಯತೆ → ಸಂಪತ್ತು → ಧರ್ಮ → ಸುಖ ಹೀಗಾಗಿ, ವಿದ್ಯೆ ಹೆಚ್ಚಾದಂತೆ ಅಹಂಕಾರ ಕಡಿಮೆಯಾಗಬೇಕು; ವಿನಯ ಹೆಚ್ಚಾಗಬೇಕು.
ಏಕೆಂದರೆ ಜ್ಞಾನದಿಂದ ದೊಡ್ಡವನಾಗುವುದು ಸುಲಭ ಜ್ಞಾನವಿದ್ದೂ ವಿನಯದಿಂದ ಬದುಕುವುದು ನಿಜವಾದ ದೊಡ್ಡತನ ಆಗುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ