ಮಕ್ಕಳನ್ನು ಬೆಳೆಸುವಲ್ಲಿ ಎಡುವುತ್ತಿದೆಯೇ ಇಂದಿನ ಸಮಾಜ?

ಒಂದು ಕಾಲದಲ್ಲಿ ಶಾಲೆಯಲ್ಲಿ ತಪ್ಪು ಮಾಡಿದಾಗ ಶಿಕ್ಷಕರಿಂದ ಶಿಕ್ಷೆ ಅನುಭವಿಸುವುದು ಮಕ್ಕಳ ಜೀವನದ ಸಹಜ ಭಾಗವೆಂಬ ಭಾವನೆ ಇತ್ತು. ಪೋಷಕರೂ ಸಹ ತಮ್ಮ ಮಗ ಅಥವಾ ಮಗಳು ಸರಿಯಾಗಿ ಓದದಿದ್ದರೆ, “ಸ್ವಲ್ಪ ಗದರಿಸಿ, ಬುದ್ಧಿ ಹೇಳಿ” ಎಂದು ಶಿಕ್ಷಕರಲ್ಲಿ ಹೇಳಿ ಬರುತ್ತಿದ್ದರು. ಶಿಕ್ಷಕರಿಂದ ಹೊಡೆತ ಬಿದ್ದರೂ ಬಹುತೇಕ ಮಕ್ಕಳು ಅದನ್ನು ತಮ್ಮ ತಪ್ಪಿಗೆ ಸಿಕ್ಕ ಶಿಕ್ಷೆಯೆಂದು ಸ್ವೀಕರಿಸುತ್ತಿದ್ದರು. ಕೆಲವೊಮ್ಮೆ ಕೊನೆಯ ಬೆಂಚಿನ ಹುಡುಗರು ಪದೇಪದೇ ಶಿಕ್ಷೆ ಅನುಭವಿಸುತ್ತಾ ಅದಕ್ಕೂ ಒಗ್ಗಿಕೊಂಡಿರುತ್ತಿದ್ದರು.

ಆದರೆ ಕಾಲ ಬದಲಾಗಿದೆ. ಮಕ್ಕಳ ಹಕ್ಕುಗಳು, ಅವರ ಗೌರವ, ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷೆ ಹಾಗೂ ಅವಮಾನಕಾರಿ ಮಾನಸಿಕ ಶಿಕ್ಷೆಯನ್ನು ತಡೆಯುವ ಕಾನೂನುಗಳು ಜಾರಿಯಲ್ಲಿವೆ. ಶಿಕ್ಷಕರು ಮಕ್ಕಳನ್ನು ಹೊಡೆಯುವುದು, ಹೆದರಿಸುವುದು ಅಥವಾ ಅವಮಾನಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.

ಆದರೆ ಇದೇ ಸಂದರ್ಭದಲ್ಲಿ ಮತ್ತೊಂದು ಪ್ರಶ್ನೆಯೂ ನಮ್ಮ ಮುಂದೆ ನಿಂತಿದೆ—ಮಕ್ಕಳನ್ನು ದೈಹಿಕ ಶಿಕ್ಷೆಯಿಂದ ರಕ್ಷಿಸುವುದರ ಜೊತೆಗೆ, ಜೀವನದ ಕಷ್ಟ, ನಿರಾಕರಣೆ, ಟೀಕೆ, ಸೋಲು ಮತ್ತು ಶಿಸ್ತನ್ನು ಸ್ವೀಕರಿಸುವಷ್ಟು ಮಾನಸಿಕವಾಗಿ ಗಟ್ಟಿಯಾಗಿಸುವ ಜವಾಬ್ದಾರಿ ಯಾರದ್ದು? ಮಕ್ಕಳನ್ನು ಬೆಳೆಸುವಲ್ಲಿ ಎಡುವುತ್ತಿದೆಯೇ ಇಂದಿನ ಸಮಾಜ?

ಇಂದಿನ ಮಕ್ಕಳಲ್ಲಿ ಅನೇಕರು ತುಂಬಾ ಕಾಳಜಿ ಮತ್ತು ಸೌಲಭ್ಯಗಳ ನಡುವೆ ಬೆಳೆಯುತ್ತಿದ್ದಾರೆ. ಅವರು ಕೇಳಿದ್ದೆಲ್ಲವೂ ಸಿಗುವ ಪರಿಸ್ಥಿತಿ ನಿರ್ಮಾಣವಾದಾಗ, ಸಣ್ಣ ನಿರಾಕರಣೆಯನ್ನೂ ಸಹಿಸಿಕೊಳ್ಳುವುದು ಕಷ್ಟವಾಗಬಹುದು. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ, ಆಟದಲ್ಲಿ ಸೋತರೆ, ಶಿಕ್ಷಕರು ತಪ್ಪನ್ನು ಸೂಚಿಸಿದರೆ ಅಥವಾ ಪೋಷಕರು ಯಾವುದಾದರೂ ಬೇಡಿಕೆಗೆ ‘ಇಲ್ಲ’ ಎಂದರೆ ಕೆಲ ಮಕ್ಕಳು ತೀವ್ರವಾಗಿ ಪ್ರತಿಕ್ರಿಯಿಸುವುದನ್ನು ನಾವು ಕಾಣುತ್ತೇವೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಕ್ಕಳನ್ನು ಕಠಿಣವಾಗಿ ಬೆಳೆಸುವುದು ಮತ್ತು ಮಕ್ಕಳನ್ನು ಕಠಿಣಗೊಳಿಸುವುದು ಎರಡೂ ಒಂದೇ ಅಲ್ಲ.ಹೊಡೆಯುವುದು, ಬೈಯುವುದು ಅಥವಾ ಅವಮಾನಿಸುವುದು ಮಕ್ಕಳಲ್ಲಿ ಶಿಸ್ತು ಬೆಳೆಸುವುದಿಲ್ಲ; ಬದಲಿಗೆ ಭಯ ಮತ್ತು ಅಸುರಕ್ಷತೆಯನ್ನು ಬೆಳೆಸಬಹುದು. ಆದರೆ ಪ್ರೀತಿ, ಸ್ಪಷ್ಟವಾದ ನಿಯಮಗಳು, ಜವಾಬ್ದಾರಿ ಮತ್ತು ತಪ್ಪುಗಳಿಂದ ಕಲಿಯುವ ಅವಕಾಶ ನೀಡುವುದು ಮಕ್ಕಳಲ್ಲಿ ನಿಜವಾದ ಆತ್ಮಸ್ಥೈರ್ಯವನ್ನು ಬೆಳೆಸುತ್ತದೆ.

ಶಿಕ್ಷಕಿಯ ಹೊಡೆತಕ್ಕೆ 6 ವರ್ಷದ ಬಾಲಕ ಸಾವು ವಿಶಾಖಪಟ್ಟಣಂನಲ್ಲಿ ದಾರುಣ ಘಟನೆ

ವಿಶಾಖಪಟ್ಟಣಂನ ಒನ್ ಟೌನ್ ಪ್ರದೇಶದ ಖಾಸಗಿ ಶಾಲೆಯಲ್ಲಿ 6 ವರ್ಷದ ಪ್ರಣಯ್ ತೇಜ ಮೃತಪಟ್ಟಿರುವ ಘಟನೆ ಆತಂಕ ಮೂಡಿಸಿದೆ. ಮನೆಕೆಲಸ ಪೂರ್ಣಗೊಳಿಸದ ಕಾರಣ ಶಿಕ್ಷಕಿಯೊಬ್ಬರು ಬಾಲಕನನ್ನು ಕೋಲಿನಿಂದ ಹೊಡೆದಿದ್ದು, ಬಳಿಕ ಆತ ಕುಸಿದು ಬಿದ್ದಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಬಾಲಕನನ್ನು ಕೂಡಲೇ ಕಿಂಗ್ ಜಾರ್ಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಕುಟುಂಬದ ಪ್ರಕಾರ, ಪ್ರಣಯ್ ಹಿಂದಿನ ರಾತ್ರಿ ಆರೋಗ್ಯವಾಗಿದ್ದು, ಬೆಳಗ್ಗೆಯೂ ಯಾವುದೇ ಅಸ್ವಸ್ಥತೆಯ ಲಕ್ಷಣಗಳಿರಲಿಲ್ಲ. ಪರೀಕ್ಷೆಗಳು ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಆತ ಸ್ವತಃ ಶಾಲೆಗೆ ಹೋಗಲು ಒತ್ತಾಯಿಸಿದ್ದ ಎಂದು ತಂದೆ ತಿಳಿಸಿದ್ದಾರೆ.

ಶಾಲೆಯಿಂದ ನೇರವಾಗಿ ಕುಟುಂಬಕ್ಕೆ ಮಾಹಿತಿ ನೀಡದೆ, ಸ್ಥಳೀಯ ವ್ಯಕ್ತಿಯೊಬ್ಬರಿಂದ ವಿಷಯ ತಿಳಿಯಿತು ಎನ್ನುವುದು ಕುಟುಂಬದ ಆರೋಪ. ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಶಿಕ್ಷಕಿ ಬಾಲಕನಿಗೆ ಕೋಲಿನಿಂದ ಹೊಡೆಯುತ್ತಿರುವುದು ಮತ್ತು ಕೆಲವೇ ಕ್ಷಣಗಳಲ್ಲಿ ಆತ ಶಿಕ್ಷಕಿಯ ಮಡಿಲಲ್ಲಿ ಕುಸಿದು ಬೀಳುತ್ತಿರುವುದು ಕಂಡುಬಂದಿದೆ ಎಂದು ಕುಟುಂಬ ಹೇಳಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  ಶಾಲೆಯಲ್ಲಿ ಇತರ ಮಕ್ಕಳಿಗೂ ದೈಹಿಕ ಶಿಕ್ಷೆ ನೀಡಲಾಗುತ್ತಿತ್ತು ಎಂಬ ಆರೋಪವನ್ನೂ ಕುಟುಂಬ ಮಾಡಿದೆ. ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಮನೆಕೆಲಸ ಮಾಡದ ಮಗುವಿಗೆ ಶಿಕ್ಷೆ ನೀಡುವ ನೆಪದಲ್ಲಿ ಅದರ ಜೀವವೇ ಕಳೆದುಹೋದರೆ, ಅದು ಶಿಕ್ಷಣವಲ್ಲ—ಅದು ಎಚ್ಚರಿಕೆಯ ಗಂಟೆ. ಶಾಲೆ ಮಕ್ಕಳಲ್ಲಿ ಭಯ ಹುಟ್ಟಿಸುವ ಸ್ಥಳವಲ್ಲ; ಜ್ಞಾನ, ಶಿಸ್ತು, ಆತ್ಮವಿಶ್ವಾಸ ಮತ್ತು ಮಾನವೀಯತೆ ಬೆಳೆಸುವ ಸ್ಥಳವಾಗಬೇಕು.

ಮೊಬೈಲ್‌ಗಾಗಿ ಜಗಳ: ಒಂದೇ ಕುಟುಂಬದ ಮೂವರ ದಾರುಣ ಅಂತ್ಯ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖವಾಡ್ಯಾ ಗುಡ್ಡದಲ್ಲಿ ಮೊಬೈಲ್‌ ಫೋನ್‌ ವಿಚಾರವಾಗಿ ಆರಂಭವಾದ ಕುಟುಂಬದ ಜಗಳ ದುರಂತದಲ್ಲಿ ಅಂತ್ಯಗೊಂಡಿದೆ. 19 ವರ್ಷದ ಕುನಾಲ್ ಚಾಂದಗುಡೆ ಹೊಸ ಮೊಬೈಲ್‌ ಬೇಕೆಂದು ಪೋಷಕರೊಂದಿಗೆ ಜಗಳವಾಡಿದ ಬಳಿಕ ಗುಡ್ಡದ ತುದಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾನೆ. ಬೆಳಗ್ಗೆ ಸುಮಾರು 10 ಗಂಟೆಗೆ ಸ್ಥಳಕ್ಕೆ ಬಂದ ತಂದೆ ಮುರಳೀಧರ್ ಚಾಂದಗುಡೆ (48) ಮತ್ತು ತಾಯಿ ಸಂಗೀತಾ, ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಕುನಾಲ್‌ನನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸೇಫ್ಟಿ ನೆಟ್ ಅಳವಡಿಸುವ ಪ್ರಯತ್ನವೂ ನಡೆದಿತ್ತು. ಆದರೆ ಕುನಾಲ್ ಗುಡ್ಡದ ಅಂಚಿನಲ್ಲಿ ನಿರಂತರವಾಗಿ ಸ್ಥಳ ಬದಲಿಸುತ್ತಿದ್ದರಿಂದ ಅದು ಸಾಧ್ಯವಾಗಲಿಲ್ಲ.

ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ, ತಂದೆ ಮಗನನ್ನು ಸಮಾಧಾನಪಡಿಸಲು ಹತ್ತಿರ ಹೋದಾಗ ಕುನಾಲ್ ಕೆಳಗೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಮುರಳೀಧರ್ ಕೂಡ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಕಣ್ಣೆದುರೇ ಪತಿ ಮತ್ತು ಮಗ ಬಿದ್ದಿದ್ದನ್ನು ಕಂಡ ಸಂಗೀತಾ ಕೂಡ ತೀವ್ರ ಆಘಾತದಲ್ಲಿ ಗುಡ್ಡದಿಂದ ಹಾರಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗೆ ಕೇವಲ ಒಂದು ಮೊಬೈಲ್‌ ಫೋನ್‌ ವಿಚಾರದಿಂದ ಆರಂಭವಾದ ಜಗಳದಲ್ಲಿ 19 ವರ್ಷದ ಕುನಾಲ್, 48 ವರ್ಷದ ತಂದೆ ಮುರಳೀಧರ್ ಮತ್ತು ತಾಯಿ ಸಂಗೀತಾ—ಮೂವರೂ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಕ್ಷಣದ ಕೋಪ, ಒಂದು ಹಠ, ಒಂದು ತಪ್ಪು ನಿರ್ಧಾರ… ಇಡೀ ಕುಟುಂಬದ ಬದುಕನ್ನೇ ಕಸಿದುಕೊಳ್ಳಬಹುದು ಎಂಬುದಕ್ಕೆ ಈ ಘಟನೆ ಕಹಿ ಎಚ್ಚರಿಕೆಯಾಗಿದೆ. ಮಕ್ಕಳಿಗೆ ಎಲ್ಲವನ್ನೂ ಸುಲಭವಾಗಿ ಒದಗಿಸುವುದಕ್ಕಿಂತ, ಎಲ್ಲ ಪರಿಸ್ಥಿತಿಗಳನ್ನೂ ಸಮತೋಲನದಿಂದ ಎದುರಿಸುವ ಸಾಮರ್ಥ್ಯವನ್ನು ಕಲಿಸುವುದು ಮುಖ್ಯ.

ಇದೇ ಸಂದರ್ಭದಲ್ಲಿ ಪೋಷಕರ ಪಾತ್ರವೂ ಬಹಳ ಮಹತ್ವದ್ದು. ಮಕ್ಕಳಿಗೆ ಪ್ರತಿಯೊಂದು ತಪ್ಪಿಗೂ ಶಿಕ್ಷೆ ನೀಡುವುದಕ್ಕಿಂತ, ತಪ್ಪಿನ ಪರಿಣಾಮವನ್ನು ಅರ್ಥಮಾಡಿಕೊಳ್ಳುವಂತೆ ಮಾಡಬೇಕು. ಅವರು ಸೋಲನ್ನು ಎದುರಿಸಬೇಕು, ಟೀಕೆಯನ್ನು ಕೇಳಬೇಕು, ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಮತ್ತು ಅಗತ್ಯವಿದ್ದಾಗ ‘ಇಲ್ಲ’ ಎಂಬ ಉತ್ತರವನ್ನು ಸ್ವೀಕರಿಸಬೇಕು.

ಇಂದಿನ ಮಗುವಿಗೆ ಉತ್ತಮ ಶಾಲೆ, ತಂತ್ರಜ್ಞಾನ, ಉತ್ತಮ ಆಹಾರ, ಆಟಿಕೆಗಳು ಮತ್ತು ಅನೇಕ ಅವಕಾಶಗಳು ಸಿಗುತ್ತಿವೆ. ಆದರೆ ಜೀವನದಲ್ಲಿ ಎಲ್ಲವೂ ತನ್ನ ಇಷ್ಟದಂತೆ ನಡೆಯುವುದಿಲ್ಲ ಎಂಬ ಸತ್ಯವನ್ನೂ ಅದು ಕಲಿಯಬೇಕು. ಸ್ನೇಹಿತ ಗೆಲ್ಲಬಹುದು, ತಾನು ಸೋಲಬಹುದು. ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಅಂಕ ಬರದೇ ಇರಬಹುದು. ಶಿಕ್ಷಕರು ತಪ್ಪನ್ನು ತೋರಿಸಬಹುದು. ಪೋಷಕರು ಕೆಲವು ಬೇಡಿಕೆಗಳನ್ನು ನಿರಾಕರಿಸಬಹುದು. ಇವೆಲ್ಲವೂ ಜೀವನದ ಸಹಜ ಭಾಗಗಳು.

ಆದರೆ ಇಂತಹ ಸಂದರ್ಭಗಳಲ್ಲಿ ಮಗುವಿಗೆ “ನೀನು ಸೋತಿರುವೆ ಎಂದರೆ ನೀನು ಸೋತ ವ್ಯಕ್ತಿ ಎಂದಲ್ಲ.  ತಪ್ಪು ಮಾಡಿರುವೆ ಎಂದರೆ ನೀನು ಕೆಟ್ಟವನು ಎಂದಲ್ಲ. ತಪ್ಪಿನಿಂದ ಕಲಿತು ಮತ್ತೆ ಪ್ರಯತ್ನಿಸು” ಎಂಬ ಮನೋಭಾವವನ್ನು ಕಲಿಸಬೇಕು.

ಶಿಸ್ತು ಎಂದರೆ ಹೊಡೆತವಲ್ಲ.
ಪ್ರೀತಿ ಎಂದರೆ ಪ್ರತಿಯೊಂದು ಬೇಡಿಕೆಯನ್ನೂ ಪೂರೈಸುವುದಲ್ಲ.
ಸ್ವಾತಂತ್ರ್ಯ ಎಂದರೆ ನಿಯಮಗಳಿಲ್ಲದಿರುವುದಲ್ಲ.
ಮಕ್ಕಳ ರಕ್ಷಣೆ ಎಂದರೆ ಅವರನ್ನು ಜೀವನದ ಪ್ರತಿಯೊಂದು ಸಣ್ಣ ಕಷ್ಟದಿಂದಲೂ ದೂರವಿಡುವುದಲ್ಲ.

ಮಕ್ಕಳನ್ನು ಕಷ್ಟದಿಂದ ಸಂಪೂರ್ಣವಾಗಿ ದೂರವಿಡುವ ಬದಲು, ಕಷ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಬೇಕು.

ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಮಿತಿಗಳನ್ನು ಕಲಿಸಬೇಕು; ಆದರೆ ಆ ಮಿತಿಗಳನ್ನು ಪ್ರೀತಿ ಮತ್ತು ಗೌರವದೊಂದಿಗೆ ಕಲಿಸಬೇಕು. ತಪ್ಪು ಮಾಡಿದಾಗ ಅದರ ಪರಿಣಾಮವನ್ನು ಅರ್ಥಮಾಡಿಸಬೇಕು; ಆದರೆ ಅವಮಾನಿಸಬಾರದು. ಟೀಕಿಸಬೇಕಾದರೆ ವ್ಯಕ್ತಿತ್ವವನ್ನು ಅಲ್ಲ, ತಪ್ಪಾದ ವರ್ತನೆಯನ್ನು ಟೀಕಿಸಬೇಕು.

ಇಂದಿನ ಮಕ್ಕಳಿಗೆ ಅತ್ಯಂತ ಅಗತ್ಯವಾಗಿರುವ ಶಿಕ್ಷಣ ಬಹುಶಃ ಪಠ್ಯಪುಸ್ತಕಗಳ ಹೊರಗಿದೆ—ಸಹನೆ, ಸೋಲನ್ನು ಸ್ವೀಕರಿಸುವ ಮನೋಭಾವ, ಟೀಕೆಯನ್ನು ಕೇಳುವ ಸಾಮರ್ಥ್ಯ, ನಿರಾಕರಣೆಯನ್ನು ಸಹಿಸುವ ಶಕ್ತಿ, ತಪ್ಪನ್ನು ಒಪ್ಪಿಕೊಳ್ಳುವ ಧೈರ್ಯ ಮತ್ತು ಮತ್ತೆ ಎದ್ದು ನಿಲ್ಲುವ ಆತ್ಮವಿಶ್ವಾಸ.

ಆದರೆ ಈ ಗುಣಗಳನ್ನು ಬೆಳೆಸುವ ಹೆಸರಿನಲ್ಲಿ ದೈಹಿಕ ಶಿಕ್ಷೆಗೆ ಯಾವುದೇ ಸ್ಥಾನವಿಲ್ಲ. ಪ್ರಣಯ್ ತೇಜನಂತಹ ದಾರುಣ ಘಟನೆಗಳು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ವಿಧಾನಗಳ ಬಗ್ಗೆ ಸಮಾಜ ಮತ್ತೊಮ್ಮೆ ಗಂಭೀರವಾಗಿ ಚಿಂತಿಸುವಂತೆ ಮಾಡುತ್ತವೆ.

  • ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕು ಮೊಬೈಲ್‌ ಫೋನ್‌ ಅಲ್ಲ.
  • ಶಿಕ್ಷಕರ ಕೈಯಲ್ಲಿ ಕೋಲು ಅಲ್ಲ.
  • ಮಕ್ಕಳ ಮನಸ್ಸಿನಲ್ಲಿ ಪ್ರಶ್ನೆಗಳಿರಬೇಕು.  ಭಯವಲ್ಲ.
  • ಶಾಲೆಯಲ್ಲಿ ಶಿಸ್ತು ಇರಬೇಕು. ಆದರೆ ಅದು ಮಾನವೀಯತೆಯೊಂದಿಗೆ ಇರಬೇಕು.
  • ಮಕ್ಕಳ ಮೇಲೆ ಪ್ರೀತಿ ಇರಬೇಕು ಆದರೆ ಅದು ಅತಿಯಾದ ವ್ಯಾಮೋಹವಾಗಿರಬಾರದು

ಮಕ್ಕಳನ್ನು ಕೇವಲ ಯಶಸ್ಸನ್ನು ಸ್ವೀಕರಿಸುವವರನ್ನಾಗಿ ಅಲ್ಲ, ಸೋಲು-ಟೀಕೆ-ನಿರಾಕರಣೆಗಳನ್ನೂ ಸಮಚಿತ್ತದಿಂದ ಎದುರಿಸಿ, ಮತ್ತೆ ಪ್ರಯತ್ನಿಸುವಷ್ಟು ಗಟ್ಟಿಮುಟ್ಟಾದ ವ್ಯಕ್ತಿಗಳನ್ನಾಗಿ ಬೆಳೆಸುವುದು ಇಂದಿನ ಪೋಷಕರು ಮತ್ತು ಶಿಕ್ಷಕರ ದೊಡ್ಡ ಜವಾಬ್ದಾರಿಯಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply