ಏಳು ದಶಕಗಳಿಗೂ ಹೆಚ್ಚು ಕಾಲ ತೆಲುಗು, ತಮಿಳು, ಕನ್ನಡ, ಮಲಯಾಳಂ ಚಿತ್ರರಂಗದಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದ ಸಾಹುಕಾರ್ ಜಾನಕಿ ಅವರು ತಮ್ಮ 94 ವರ್ಷಗಳ ವಯಸ್ಸಿನಲ್ಲಿ ನಿಧನ

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದು ಕಾಲದ ಸಾಕ್ಷಿಯಾಗಿ, ವಿಭಿನ್ನ ಭಾಷೆಗಳ ಪ್ರೇಕ್ಷಕರ ಮನ ಗೆದ್ದ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ಆಗಸ್ಟ್ 21, 2026ರಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ನಟರ ಸಂಘದ ಅಧ್ಯಕ್ಷ ನಾಸರ್ ಅವರು ಅವರು ಶುಕ್ರವಾರ ಮಧ್ಯಾಹ್ನ 1.59ಕ್ಕೆ ಕೊನೆಯುಸಿರೆಳೆದಿರುವುದನ್ನು ದೃಢಪಡಿಸಿದ್ದಾರೆ. ಸಾಹುಕಾರ್ ಜಾನಕಿ ಅವರ ನಿಧನವನ್ನು ಕೇವಲ ಮತ್ತೊಬ್ಬ ಹಿರಿಯ ನಟಿಯ ಅಗಲಿಕೆ ಎಂದು ನೋಡುವಂತಿಲ್ಲ. ಇದು ದಕ್ಷಿಣ ಭಾರತದ ಚಿತ್ರರಂಗದ ಏಳು ದಶಕಗಳಿಗೂ ಹೆಚ್ಚು ಕಾಲದ ಒಂದು ಅದ್ಭುತ ಪಯಣಕ್ಕೆ ತೆರೆ ಬಿದ್ದ ಕ್ಷಣ.
15ನೇ ವಯಸ್ಸಿನಲ್ಲಿ ಮದುವೆ… ನಂತರ ಜೀವನವೇ ಬದಲಾಯಿತು!
ಸಾಹುಕಾರ್ ಜಾನಕಿ ಅವರ ನಿಜನಾಮ ಸಂಕರಮಂಚಿ ಜಾನಕಿ. 1931ರ ಡಿಸೆಂಬರ್ 12ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ಜೀವನದ ಕಠಿಣ ಮುಖವನ್ನು ಕಂಡವರು. ಅವರಿಗೆ ಕೇವಲ 15ನೇ ವಯಸ್ಸಿನಲ್ಲೇ ಮದುವೆ ಮಾಡಲಾಯಿತು. ಮದುವೆಯ ನಂತರ ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಎದುರಾಯಿತು. ಪತಿ ಕೆಲಸ ತೊರೆದ ನಂತರ ಕುಟುಂಬದ ಜವಾಬ್ದಾರಿ ಹೆಚ್ಚಾಯಿತು. ಒಂದು ಮಗುವಿನ ತಾಯಿಯಾಗಿದ್ದ ಜಾನಕಿ, ಜೀವನ ಸಾಗಿಸಲು ಉದ್ಯೋಗದ ಹುಡುಕಾಟದಲ್ಲಿದ್ದರು. ಅಲ್ಲಿಂದಲೇ ಅವರ ಜೀವನದ ಅತ್ಯಂತ ಮಹತ್ವದ ತಿರುವು ಆರಂಭವಾಯಿತು. ಚಿತ್ರರಂಗಕ್ಕೆ ಬರುವ ಕನಸು ಮೊದಲಿನಿಂದಲೂ ಅವರದ್ದಾಗಿರಲಿಲ್ಲ. ಆದರೆ ಪರಿಸ್ಥಿತಿ ಅವರನ್ನು ಸಿನಿಮಾದತ್ತ ಕರೆದೊಯ್ದಿತು.
ಕೇವಲ ₹2,500… ಆದರೆ ಅದೇ ಹಣ ಕುಟುಂಬಕ್ಕೆ ದೊಡ್ಡ ಆಸರೆ!

1950ರಲ್ಲಿ ಎಲ್.ವಿ. ಪ್ರಸಾದ್ ನಿರ್ದೇಶನದ ತೆಲುಗು ಚಿತ್ರ ‘Shavukaru’ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿ ಎನ್.ಟಿ. ರಾಮಾರಾವ್ ಅವರೊಂದಿಗೆ ನಟಿಸಿದರು. ಆ ಚಿತ್ರಕ್ಕೆ ಅವರಿಗೆ ದೊರೆತ ಸಂಭಾವನೆ ₹2,500. ಇಂದಿನ ಕಾಲದಲ್ಲಿ ₹2,500 ಸಣ್ಣ ಮೊತ್ತದಂತೆ ಕಾಣಬಹುದು. ಆದರೆ ಅಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಆ ಹಣ ಜಾನಕಿ ಅವರ ಕುಟುಂಬಕ್ಕೆ ಬಹುದೊಡ್ಡ ಆಸರೆಯಾಗಿತ್ತು. ಒಂದು ಮೂಲದ ಪ್ರಕಾರ, ಆ ಸಂಭಾವನೆಯಿಂದ ಅವರು ತಮ್ಮ ಮಗುವಿಗೆ ಅಗತ್ಯವಾದ ಬಟ್ಟೆ ಹಾಗೂ ಆಹಾರವನ್ನೂ ಖರೀದಿಸಿದ್ದರು.
ಅಷ್ಟೇ ಅಲ್ಲ, ‘Shavukaru’ ಚಿತ್ರದ ಹೆಸರೇ ಮುಂದೆ ಅವರ ಹೆಸರಿನ ಭಾಗವಾಗಿ ‘ಸಾಹುಕಾರ್ ಜಾನಕಿ’ ಎಂಬ ಹೆಸರನ್ನು ಜನಪ್ರಿಯಗೊಳಿಸಿತು. ಒಬ್ಬ ಮಹಿಳೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಿನಿಮಾಗೆ ಕಾಲಿಟ್ಟರು. ಆದರೆ ನಂತರ ಸಿನಿಮಾವೇ ಅವರ ಬದುಕಿನ ಭಾಷೆಯಾಯಿತು. ನಾಯಕಿಯಿಂದ ಪೋಷಕ ನಟಿಯವರೆಗೆ… ಆದರೆ ಪ್ರತಿಭೆಗೆ ಎಂದೂ ವಯಸ್ಸಾಗಲಿಲ್ಲ
ಸಾಹುಕಾರ್ ಜಾನಕಿ ಅವರ ವೃತ್ತಿಜೀವನದ ವಿಶೇಷತೆ ಎಂದರೆ ಅವರು ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾಗಲಿಲ್ಲ. 1950ರ ದಶಕದಲ್ಲಿ ನಾಯಕಿಯಾಗಿ ಮಿಂಚಿದ ಅವರು, ನಂತರ ಪೋಷಕ ಪಾತ್ರಗಳು, ತಾಯಿ, ಅಜ್ಜಿ, ಗಂಭೀರ ವ್ಯಕ್ತಿತ್ವದ ಮಹಿಳೆ, ಹಾಸ್ಯಪಾತ್ರ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡರು. ಅವರ ವೃತ್ತಿಜೀವನ ಏಳು ದಶಕಗಳಿಗೂ ಹೆಚ್ಚು ಕಾಲ ಮುಂದುವರಿಯಿತು. ವಿವಿಧ ಮೂಲಗಳ ಪ್ರಕಾರ ಅವರು ಸುಮಾರು 400 ಚಿತ್ರಗಳಲ್ಲಿನಟಿಸಿದ್ದಾರೆ. ಜೊತೆಗೆ ನೂರಾರು ರಂಗಪ್ರದರ್ಶನಗಳಲ್ಲೂ ಭಾಗವಹಿಸಿದ್ದರು. ಇದು ಸಾಮಾನ್ಯ ಸಾಧನೆಯಲ್ಲ. ಒಂದು ಪೀಳಿಗೆಯ ನಾಯಕಿಯಾಗಿ ಆರಂಭಿಸಿ, ಮುಂದಿನ ಪೀಳಿಗೆಯ ನಾಯಕರ ತಾಯಿಯಾಗಿ, ನಂತರ ಮತ್ತೊಂದು ಪೀಳಿಗೆಯ ಕಲಾವಿದರ ಅಜ್ಜಿಯಾಗಿ ನಟಿಸುವ ಅವಕಾಶ ಪಡೆದ ಅಪರೂಪದ ನಟಿಯರಲ್ಲಿ ಅವರು ಒಬ್ಬರು.
ನಾಲ್ಕು ಭಾಷೆಗಳಲ್ಲಿ ಮನೆಮಾತಾದ ನಟಿ
ಸಾಹುಕಾರ್ ಜಾನಕಿ ಅವರ ಮತ್ತೊಂದು ದೊಡ್ಡ ಹೆಗ್ಗಳಿಕೆ ಎಂದರೆ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರರಂಗದಲ್ಲಿ ಅವರು ಸಕ್ರಿಯರಾಗಿದ್ದರು. ಹಿಂದಿ ಚಿತ್ರಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ ‘Shavukaru’, ‘Rojulu Marayi’, ‘Kanyasulkam’ ಮುಂತಾದ ಚಿತ್ರಗಳು ಅವರಿಗೆ ಖ್ಯಾತಿ ತಂದುಕೊಟ್ಟರೆ, ತಮಿಳಿನಲ್ಲಿ ಕೆ. ಬಾಲಚಂದರ್ ಅವರೊಂದಿಗೆ ಮಾಡಿದ ಚಿತ್ರಗಳು ಅವರ ನಟನಾ ಸಾಮರ್ಥ್ಯದ ಮತ್ತೊಂದು ಮುಖವನ್ನು ತೋರಿಸಿವೆ. ‘Neerkumizhi’, ‘Edhir Neechal’, ‘Iru Kodugal’, ‘Uyarndha Manithan’, ‘Kaviya Thalaivi’, ‘Thillu Mullu’ ಮುಂತಾದ ಚಿತ್ರಗಳು ಅವರ ವೃತ್ತಿಜೀವನದ ಪ್ರಮುಖ ಮೈಲುಗಲ್ಲುಗಳಾಗಿವೆ.
ಕನ್ನಡಿಗರಿಗೆ ಸಾಹುಕಾರ್ ಜಾನಕಿ ಎಂದರೆ…

ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೂ ಸಾಹುಕಾರ್ ಜಾನಕಿ ಅಪರಿಚಿತರಲ್ಲ. 1959ರಲ್ಲಿ ಬಿಡುಗಡೆಯಾದ ‘ಮಹಿಷಾಸುರ ಮರ್ಧಿನಿ’ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಅವರು ನಟಿಸಿದ್ದರು. ಈ ಚಿತ್ರವನ್ನು ಕನ್ನಡದ ಆರಂಭಿಕ ಪ್ಯಾನ್-ಇಂಡಿಯಾ ಚಿತ್ರಗಳಲ್ಲೊಂದೆಂದು ಗುರುತಿಸಲಾಗುತ್ತದೆ. ನಂತರ ಕನ್ನಡದಲ್ಲಿ ಅವರು ಹಲವು ಚಿತ್ರಗಳಲ್ಲಿ ಅಭಿನಯಿಸಿದರು. ಡಾ. ರಾಜ್‌ಕುಮಾರ್ ಅವರ ಕೊನೆಯ ಚಿತ್ರವಾದ ಶಬ್ದವೇಧಿ’ (2000)ಯಲ್ಲೂ ಸಾಹುಕಾರ್ ಜಾನಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅವರು ರಾಜ್‌ಕುಮಾರ್ ಅವರ ತಾಯಿಯ ಪಾತ್ರ ನಿರ್ವಹಿಸಿದ್ದರು. ಅಂದರೆ ಕನ್ನಡ ಚಿತ್ರರಂಗದ ಎರಡು ವಿಭಿನ್ನ ಯುಗಗಳಿಗೆ ಅವರು ಸಾಕ್ಷಿಯಾಗಿದ್ದರು ಒಂದೆಡೆ 1950ರ ದಶಕದ ರಾಜ್‌ಕುಮಾರ್ ಅವರ ಆರಂಭಿಕ ಕಾಲ, ಮತ್ತೊಂದೆಡೆ 2000ರ ದಶಕದ ಅವರ ಕೊನೆಯ ಚಿತ್ರ. ಇದಕ್ಕಿಂತ ದೊಡ್ಡ ಚಿತ್ರರಂಗದ ಪಯಣದ ಸಾಕ್ಷಿ ಬೇಕೇ?
ಕೆ. ಬಾಲಚಂದರ್ ಅವರ ಮೆಚ್ಚಿನ ನಟಿಯರಲ್ಲಿ ಸಾಹುಕಾರ್ ಜಾನಕಿ ಒಬ್ಬರು

ಸಾಹುಕಾರ್ ಜಾನಕಿ ಅವರ ನಟನಾ ಸಾಮರ್ಥ್ಯವನ್ನು ವಿಭಿನ್ನವಾಗಿ ಬಳಸಿಕೊಂಡ ನಿರ್ದೇಶಕರಲ್ಲಿ ಕೆ. ಬಾಲಚಂದರ್ ಪ್ರಮುಖರು. ಸಾಮಾನ್ಯ ನಾಯಕಿ ಪಾತ್ರಗಳಾಚೆಗೆ ಹೋಗಿ, ಮಧ್ಯಮ ವರ್ಗದ ಮಹಿಳೆಯರ ಬದುಕು, ಕುಟುಂಬದ ಸಂಘರ್ಷ, ಸಂಬಂಧಗಳ ಸಂಕೀರ್ಣತೆ ಹಾಗೂ ಸಾಮಾಜಿಕ ವಾಸ್ತವಗಳನ್ನು ತೋರಿಸುವ ಪಾತ್ರಗಳನ್ನು ಅವರು ಜಾನಕಿ ಅವರಿಗೆ ನೀಡಿದರು. ‘Neerkumizhi’, ‘Edhir Neechal’, ‘Iru Kodugal’, ‘Kaviya Thalaivi’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ ಗಮನ ಸೆಳೆಯಿತು. ಅವರ ಅಭಿನಯದ ದೊಡ್ಡ ಶಕ್ತಿ ಏನೆಂದರೆ ಅವರು ಪಾತ್ರವನ್ನು ಅಭಿನಯಿಸುತ್ತಿದ್ದಾರೆ ಎಂಬ ಭಾವನೆ ಮೂಡದಂತೆ ಪಾತ್ರವಾಗಿಬಿಡುತ್ತಿದ್ದರು.
ಕೇವಲ ಸಿನಿಮಾವಲ್ಲ… ರಂಗಭೂಮಿ ಮತ್ತು ರೇಡಿಯೋದಲ್ಲೂ ಸಾಧನೆ
ಸಾಹುಕಾರ್ ಜಾನಕಿ ಅವರ ಕಲಾ ಪಯಣ ಕೇವಲ ಬೆಳ್ಳಿತೆರೆಗೆ ಸೀಮಿತವಾಗಿರಲಿಲ್ಲ. ಅವರು ತಮ್ಮ ಆರಂಭಿಕ ದಿನಗಳಲ್ಲಿ ರೇಡಿಯೋ ಕಲಾವಿದೆಯಾಗಿ ಕೆಲಸ ಮಾಡಿದ್ದರು. ನಂತರ ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ವಿವಿಧ ಮೂಲಗಳ ಪ್ರಕಾರ ಅವರು 300ಕ್ಕೂ ಹೆಚ್ಚು ರಂಗಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಇದು ಅವರ ಕಲೆಯ ವ್ಯಾಪ್ತಿಯನ್ನು ತೋರಿಸುತ್ತದೆ. ಅಂದಿನ ಕಾಲದಲ್ಲಿ ಸಿನಿಮಾ, ರಂಗಭೂಮಿ ಮತ್ತು ರೇಡಿಯೋ—ಮೂರು ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ.
ಪ್ರಶಸ್ತಿಗಳ ಸರಮಾಲೆ
ಸಾಹುಕಾರ್ ಜಾನಕಿ ಅವರ ಪ್ರತಿಭೆಯನ್ನು ಹಲವು ಪ್ರಶಸ್ತಿಗಳು ಗುರುತಿಸಿವೆ. ಅವರಿಗೆ ತಮಿಳುನಾಡಿನ ಕಲೈಮಾಮಣಿ ಸೇರಿದಂತೆ ಹಲವು ಗೌರವಗಳು ದೊರೆತಿವೆ. ‘Iru Kodugal’ ಚಿತ್ರದ ಅಭಿನಯಕ್ಕಾಗಿ ತಮಿಳುನಾಡು ರಾಜ್ಯ ಪ್ರಶಸ್ತಿಯೂ ಲಭಿಸಿತ್ತು. ತೆಲುಗು ಚಿತ್ರರಂಗದಲ್ಲಿ ಎರಡು ನಂದಿ ಪ್ರಶಸ್ತಿಗಳನ್ನೂ ಪಡೆದಿದ್ದರು. 2013ರಲ್ಲಿ ಅವರಿಗೆ SIIMA Lifetime Achievement Award ನೀಡಿ ಗೌರವಿಸಲಾಯಿತು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನೂಅವರು ಪಡೆದಿದ್ದಾರೆ. ಆದರೆ ಅವರ ಪ್ರಶಸ್ತಿಗಳ ಪಟ್ಟಿಯಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದದ್ದು—
ಪದ್ಮಶ್ರೀ — 2022

ಭಾರತ ಸರ್ಕಾರವು 2022ರಲ್ಲಿ ಸಾಹುಕಾರ್ ಜಾನಕಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಇದು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ಅಂದರೆ ಚಿತ್ರರಂಗದಲ್ಲಿ ಅವರು ಮಾಡಿದ ದೀರ್ಘಕಾಲದ ಸೇವೆಗೆ ದೇಶವೇ ಅಧಿಕೃತವಾಗಿ ಗೌರವ ಸಲ್ಲಿಸಿತು.
94ನೇ ವಯಸ್ಸಿನವರೆಗೂ ನೆನಪಿನಲ್ಲಿ ಉಳಿದ ಹೆಸರು
ಇಂದಿನ ಸಿನಿಮಾ ಪ್ರೇಕ್ಷಕರಿಗೆ ಸಾಹುಕಾರ್ ಜಾನಕಿ ಎಂದರೆ ಬಹುಶಃ ಅಜ್ಜಿ ಅಥವಾ ತಾಯಿಯ ಪಾತ್ರಗಳಲ್ಲಿ ಕಾಣಿಸಿಕೊಂಡ ಹಿರಿಯ ನಟಿ. ಆದರೆ ಅವರ ಪಯಣವನ್ನು ಹಿಂದಕ್ಕೆ ನೋಡಿದರೆ…
ಅವರು ಕೇವಲ ಅಜ್ಜಿ ಪಾತ್ರ ಮಾಡಿದ ನಟಿಯಲ್ಲ.

ಅವರು ಒಂದು ಕಾಲದಲ್ಲಿ ನಾಯಕಿಯಾಗಿದ್ದರು. ಅವರು ದೊಡ್ಡ ತಾರೆಯರೊಂದಿಗೆ ನಟಿಸಿದ್ದರು. ಅವರು ಕೆ. ಬಾಲಚಂದರ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದರು. ಅವರು ಡಾ. ರಾಜ್‌ಕುಮಾರ್, ಎನ್.ಟಿ. ರಾಮಾರಾವ್, ಅಕ್ಕಿನೇನಿ ನಾಗೇಶ್ವರರಾವ್, ಶಿವಾಜಿ ಗಣೇಶನ್, ಎಂ.ಜಿ.ಆರ್. ಸೇರಿದಂತೆ ದಕ್ಷಿಣ ಭಾರತದ ಹಲವು ದಿಗ್ಗಜ ಕಲಾವಿದರೊಂದಿಗೆ ತೆರೆ ಹಂಚಿಕೊಂಡಿದ್ದರು.
ಮತ್ತು ಮುಖ್ಯವಾಗಿ
ಒಬ್ಬ ಮಹಿಳೆ ಕುಟುಂಬದ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಿನಿಮಾಗೆ ಬಂದರೆ, ಆಕೆ ಮುಂದೆ ನಾಲ್ಕು ಭಾಷೆಗಳ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿಕೊಳ್ಳಬಹುದು ಎಂಬುದನ್ನು ಸಾಹುಕಾರ್ ಜಾನಕಿ ಸಾಬೀತುಪಡಿಸಿದರು. ಒಂದು ಪೀಳಿಗೆಯ ಅಂತ್ಯವಲ್ಲ… ಒಂದು ಯುಗದ ನೆನಪು
ಸಾಹುಕಾರ್ ಜಾನಕಿ ಅವರ ನಿಧನದೊಂದಿಗೆ ದಕ್ಷಿಣ ಭಾರತದ ಚಿತ್ರರಂಗದ ಅತ್ಯಂತ ದೀರ್ಘಕಾಲದ ಕಲಾ ಪಯಣಗಳಲ್ಲಿ ಒಂದಕ್ಕೆ ಅಂತ್ಯವಾಗಿದೆ. ಅವರು ಸಿನಿಮಾ ಆರಂಭಿಸಿದಾಗ ಇಂದಿನಂತೆ ಬಣ್ಣದ ಚಿತ್ರಗಳ ಸಾಮ್ರಾಜ್ಯ ಇರಲಿಲ್ಲ. ಡಿಜಿಟಲ್ ಕ್ಯಾಮೆರಾಗಳಿರಲಿಲ್ಲ. ಸಾಮಾಜಿಕ ಜಾಲತಾಣಗಳಿರಲಿಲ್ಲ. ಸ್ಟಾರ್‌ಗಳ ಪ್ರಚಾರಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ.
ಆದರೂ…
ಒಳ್ಳೆಯ ಅಭಿನಯಕ್ಕೆ ಪ್ರೇಕ್ಷಕರ ಹೃದಯದಲ್ಲಿ ಜಾಗ ಸಿಗುತ್ತಿತ್ತು. ಅದೇ ಜಾಗವನ್ನು ಸಾಹುಕಾರ್ ಜಾನಕಿ ತಮ್ಮ ಪ್ರತಿಭೆಯಿಂದ ಗಳಿಸಿದ್ದರು. ಅವರ ಹೆಸರು ಕೇವಲ ಒಂದು ನಟಿಯ ಹೆಸರಾಗಿ ಉಳಿಯುವುದಿಲ್ಲ. ಅದು ದಕ್ಷಿಣ ಭಾರತದ ಸಿನಿಮಾ ಇತಿಹಾಸದ ಒಂದು ಅಧ್ಯಾಯವಾಗಿ ಉಳಿಯುತ್ತದೆ. 94 ವರ್ಷಗಳ ಬದುಕು… ಏಳು ದಶಕಗಳಿಗೂ ಹೆಚ್ಚು ಕಾಲದ ಕಲಾ ಪಯಣ… ಸುಮಾರು 400 ಚಿತ್ರಗಳು… ನಾಲ್ಕಕ್ಕೂ ಹೆಚ್ಚು ಭಾಷೆಗಳ ಪ್ರೇಕ್ಷಕರ ಪ್ರೀತಿ… ಮತ್ತು ದೇಶದ ಪದ್ಮಶ್ರೀ ಗೌರವ.
ಸಾಹುಕಾರ್ ಜಾನಕಿ ಅವರು ತೆರೆಯ ಮೇಲಿಂದ ಮರೆಯಾಗಿದ್ದಾರೆ. ಆದರೆ ಅವರು ಅಭಿನಯಿಸಿದ ಪಾತ್ರಗಳು, ಅವರು ಬಿಟ್ಟುಹೋದ ನೆನಪುಗಳು ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಎಂದಿಗೂ ಮರೆಯಾಗುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೂ ನೀವು ಪ್ರಾರ್ಥಿಸೋಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ