ಇಂದಿನ ದಿನಗಳಲ್ಲಿ ಊಟ ಎಂದರೆ ಬಹುತೇಕವಾಗಿ ಒಂದು ಪ್ಲೇಟ್, ಎರಡು ಮೂರು ಪದಾರ್ಥಗಳು, ಮೊಬೈಲ್ ನೋಡುತ್ತಾ ತಿನ್ನುವುದು, ಮುಗಿದ ಕೂಡಲೇ ಎದ್ದು ಹೋಗುವುದು. ಆದರೆ ನಮ್ಮ ಹಿಂದಿನ ತಲೆಮಾರುಗಳಿಗೆ ಊಟವೆಂದರೆ ಕೇವಲ ಹಸಿವು ನೀಗಿಸುವ ಕ್ರಿಯೆಯಾಗಿರಲಿಲ್ಲ; ಅದು ಒಂದು ಸಂಸ್ಕಾರ, ಒಂದು ಶಿಸ್ತು, ಒಂದು ಅನುಭವ ಮತ್ತು ಮನೆಯವರ ಹಾಗೂ ಅತಿಥಿಗಳ ಮೇಲಿನ ಗೌರವದ ಅಭಿವ್ಯಕ್ತಿ.

ವಿಶೇಷವಾಗಿ ದಕ್ಷಿಣ ಭಾರತದ ಮದುವೆ, ಹಬ್ಬ, ಶುಭಕಾರ್ಯ ಅಥವಾ ದೊಡ್ಡ ಸಮಾರಂಭಗಳಲ್ಲಿ ಬಾಳೆ ಎಲೆಯ ಮೇಲೆ ಬಡಿಸುವ ಊಟಕ್ಕೆ ತನ್ನದೇ ಆದ ಒಂದು ಸುಂದರ ಕ್ರಮವಿದೆ. ಬಾಳೆ ಎಲೆಯ ಪ್ರತಿಯೊಂದು ಭಾಗಕ್ಕೂ ಒಂದು ಸ್ಥಾನ, ಪ್ರತಿಯೊಂದು ಪದಾರ್ಥಕ್ಕೂ ಒಂದು ಸಮಯ, ಪ್ರತಿಯೊಂದು ರುಚಿಗೂ ಒಂದು ಉದ್ದೇಶವಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಪ್ರದೇಶಗಳಲ್ಲಿ ಬಾಳೆ ಎಲೆಯ ಊಟ ಇಂದಿಗೂ ಪ್ರಮುಖ ಸಾಂಸ್ಕೃತಿಕ ಪರಂಪರೆಯಾಗಿದೆ
“ಊಟಕ್ಕೆ ಏನು ಮಾಡಿದ್ದೀರಿ?” ಎಂದು ಕೇಳಿದರೆ ಮನೆಯವರು ಪಟ್ಟಿ ಹೇಳುತ್ತಾರೆ. ಆದರೆ “ಊಟವನ್ನು ಹೇಗೆ ಬಡಿಸುತ್ತೀರಿ?” ಎಂದು ಕೇಳಿದರೆ ನಮ್ಮ ಹಿರಿಯರ ಬಳಿ ಅದಕ್ಕೊಂದು ಪ್ರತ್ಯೇಕ ಶಾಸ್ತ್ರವೇ ಇರುತ್ತದೆ! ಬಾಳೆ ಎಲೆಯನ್ನು ಹಾಸಿ, ಅದರ ಮೇಲೆ ಒಂದೊಂದೇ ಪದಾರ್ಥವನ್ನು ನಿಗದಿತ ಜಾಗದಲ್ಲಿ ಬಡಿಸಿ, ಕೊನೆಯಲ್ಲಿ ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತೊವ್ವೆ, ಹುಳಿ, ಮಜ್ಜಿಗೆ ಹುಳಿ, ಸಿಹಿ, ಬೊಂಡ, ಮೊಸರನ್ನ, ಮಜ್ಜಿಗೆ ಹೀಗೆ ಊಟ ಮುಗಿಸುವ ಸಂಪ್ರದಾಯವನ್ನು ನೋಡಿದರೆ ಅದು ಕೇವಲ ಆಹಾರ ಸೇವಿಸುವ ವಿಧಾನವಲ್ಲ ಎಂಬುದು ಅರ್ಥವಾಗುತ್ತದೆ. ಬಾಳೆ ಎಲೆಯ ಮೇಲಿನ ಊಟವೆಂದರೆ ರುಚಿ, ಆತಿಥ್ಯ, ಸಂಪ್ರದಾಯ ಮತ್ತು ಆಹಾರ ಸಂಸ್ಕೃತಿಯ ಸುಂದರ ಸಂಗಮ.
ಮೊದಲು ಬಾಳೆ ಎಲೆ… ಏಕೆ?
ಹಬ್ಬ, ಮದುವೆ, ಉಪನಯನ ಅಥವಾ ವಿಶೇಷ ಸಮಾರಂಭಗಳಲ್ಲಿ ಬಾಳೆ ಎಲೆಯನ್ನು ಊಟಕ್ಕೆ ಬಳಸುವುದು ದಕ್ಷಿಣ ಭಾರತದ ಬಹುಕಾಲದ ಸಂಪ್ರದಾಯ. ಎಲೆಯನ್ನು ಸಾಮಾನ್ಯವಾಗಿ ಸ್ವಚ್ಛವಾಗಿ ತೊಳೆದು ಬಾಳೆ ಎಲೆಯ ಅಗ್ರ ಊಟ ಮಾಡುವವರ ಎಡಭಾಗಗಕ್ಕೆ ಇರುವಂತೆ ಹಾಕಿ ಹಾಸಲಾಗುತ್ತದೆ. ಬಡಿಸುವವರು ಪ್ರತಿಯೊಂದು ಖಾದ್ಯಕ್ಕೂ ತನ್ನದೇ ಆದ ಜಾಗವನ್ನು ನೀಡುತ್ತಾರೆ. ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರ ಎಲೆಗೆ ಬಿದ್ದ ತಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಇದು ನೋಡಲು ಸುಂದರವಾಗಿರುವುದಷ್ಟೇ ಅಲ್ಲ—ಒಂದೇ ಎಲೆಯಲ್ಲಿ ಹಲವು ಬಣ್ಣ, ವಾಸನೆ, ರುಚಿ ಮತ್ತು ವಿನ್ಯಾಸಗಳ ಆಹಾರವನ್ನು ವ್ಯವಸ್ಥಿತವಾಗಿ ನೀಡುವ ಒಂದು ರೀತಿಯ ಸಾಂಪ್ರದಾಯಿಕ ‘ಫುಡ್ ಪ್ರೆಸೆಂಟೇಶನ್’.
ಎಲೆಯ ಎಡ ತುದಿಯಲ್ಲಿ ಶುರುವಾಗುವ ರುಚಿಯ ಪಯಣ
ಮೊದಲಿಗೆ ಎಲೆಯ ಎಡಭಾಗದಲ್ಲಿ ಉಪ್ಪು. ಅದರ ನಂತರ ಉಪ್ಪಿನಕಾಯಿ, ಕೋಸಂಬರಿ, ಪಲ್ಯಗಳು ಮತ್ತು ಗೊಜ್ಜು. ಒಂದೇ ಕಡೆ ನೋಡಿ— ಉಪ್ಪು → ಹುಳಿ → ಖಾರ → ಸಿಹಿ → ಮಸಾಲೆ → ತರಕಾರಿಗಳ ರುಚಿ ಹೀಗೆ ಹಲವು ಬಗೆಯ ರುಚಿಗಳು ಒಂದೇ ಎಲೆಯಲ್ಲಿ ಸಿದ್ಧವಾಗುತ್ತವೆ. ಕೋಸಂಬರಿಯ ತಾಜಾತನ, ಪಲ್ಯದ ಮಸಾಲೆ, ಉಪ್ಪಿನಕಾಯಿಯ ಖಾರ-ಹುಳಿ, ಗೊಜ್ಜಿನ ಗಾಢ ರುಚಿ—ಇವೆಲ್ಲವೂ ಊಟಕ್ಕೆ ವೈವಿಧ್ಯ ತರುತ್ತವೆ.
ಉಪ್ಪು ಉಪ್ಪಿನಕಾಯಿ ಎಡತುದಿಯಲ್ಲೇ ಏಕೆ?
ಉಪ್ಪಿಗಿಂತ ರುಚಿ ಬೇರೆ ಇಲ್ಲಾ ಎಂಬ ಗಾದೆ ಮಾತಿನಂತೆ ಉಪ್ಪು ಮತ್ತು ಉಪ್ಪಿನಕಾಯಿ ಊಟದ ಮೂಲ ರುಚಿಯ ಪ್ರತೀಕ. ಜೊತೆಗೆ ಪ್ರತಿಯೊಬ್ಬರ ರುಚಿಗೆ ತಕ್ಕಂತೆ ಬೇಕಾದಷ್ಟು ಉಪ್ಪನ್ನು ಸೇರಿಸಿಕೊಳ್ಳಲು ಪ್ರತ್ಯೇಕವಾಗಿ ಬಡಿಸಲಾಗುತ್ತದಲ್ಲದೇ ಉಪ್ಪು ಎಡ ತುದಿಯ ಮೂಲೆಯಲ್ಲಿರುವ ಕಾರಣ ಉಪ್ಪು ಬಡಿಸಿದ ಅಡುಗೆಯಲ್ಲಿ ಬೆರೆಯುವುದಿಲ್ಲ( ಮಿಕ್ಸ್ )ಆಗುವುದಿಲ್ಲ ಮತ್ತು ಬಲಗೈಯಿಂದ ದೂರವಿದ್ದು ಕಡಿಮೆ ಉಪ್ಪು/ಉಪ್ಪಿನ ಕಾಯಿಯನ್ನು ಸೇವಿಸುವ ಸುಂದರವಾದ ಪರಿಕಲ್ಪನೆಯಾಗಿದೆ.
ಬೇಳೆಗಳ ಕೋಸಂಬರಿ ಮಹತ್ವ!

ದಕ್ಷಿಣ ಭಾರತೀಯ ಊಟದಲ್ಲಿ ಕೋಸಂಬರಿ ಮತ್ತು ಪಲ್ಯಗಳನ್ನು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಊಟದ ಪೋಷಕಾಂಶಗಳ ಸಮತೋಲನವನ್ನು ಸಾಧಿಸಲು ಹಾಗೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಬಡಿಸಲಾಗುತ್ತದೆ. ಕೋಸಂಬರಿಯ ಮಹತ್ವ (ಹೆಸರುಬೇಳೆ-ಕ್ಯಾರೆಟ್ ಮತ್ತು ಕಡಲೇಬೇಳೆ-ಸೌತೇಕಾಯಿ)
• ಪ್ರೋಟೀನ್ ಅಂಶ: ನೆನೆಸಿದ ಹೆಸರುಬೇಳೆ ಮತ್ತು ಕಡಲೇಬೇಳೆಯಲ್ಲಿ ಸಸ್ಯಾಹಾರಿ ಪ್ರೋಟೀನ್ ಸಮೃದ್ಧವಾಗಿರುತ್ತದೆ.
• ದೇಹಕ್ಕೆ ತಂಪು: ಸೌತೇಕಾಯಿ ಮತ್ತು ಕ್ಯಾರೆಟ್‌ನಲ್ಲಿ ನೀರಿನಂಶ ಹೆಚ್ಚಿದ್ದು, ದಕ್ಷಿಣ ಭಾರತದ ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಡಲು ಇದು ಸಹಾಯ ಮಾಡುತ್ತದೆ.
• ಜೀರ್ಣಕ್ರಿಯೆಗೆ ಸಹಕಾರಿ: ಹಸಿ ತರಕಾರಿಗಳು ಮತ್ತು ನಿಂಬೆ ರಸದ ಬಳಕೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಚುರುಕುಗೊಳಿಸುತ್ತದೆ.
ವಿವಿಧ ತರಕಾರಿಗಳ ಪಲ್ಯದ ಮಹತ್ವ!
• ಪೋಷಕಾಂಶಗಳ ಸಮೃದ್ಧಿ: ವಿವಿಧ ತರಕಾರಿಗಳಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್‌ಗಳು, ಖನಿಜಗಳು ಮತ್ತು ನಾರಿನಾಂಶ (Fiber) ದೊರೆಯುತ್ತದೆ.
• ರುಚಿಯ ಸಮತೋಲನ (ಷಡ್ರಸ): ಆಯುರ್ವೇದದ ಪ್ರಕಾರ ಸಾಂಪ್ರದಾಯಿಕ ಊಟದಲ್ಲಿ ಸಿಹಿ, ಉಪ್ಪು, ಹುಳಿ, ಖಾರ, ಕಹಿ ಮತ್ತು ಒಗರು ಎಂಬ ಆರು ರುಚಿಗಳಿರಬೇಕು. ಪಲ್ಯಗಳು ಈ ಸಮತೋಲನವನ್ನು ಕಾಪಾಡುತ್ತವೆ.
• ಪೂರ್ಣ ಆಹಾರ: ಅನ್ನ ಮತ್ತು ಸಾರಿನ ಜೊತೆಗೆ ಪಲ್ಯ ಸೇರುವುದಕ್ಕಿಂದ ಊಟವು ಪೂರ್ಣಗೊಳ್ಳುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಂತರ ಚಿತ್ರಾನ್ನ… ಅದರ ಮೇಲೆ ಹಪ್ಪಳ, ಸಂಡಿಗೆ, ಬಾಳಕ
ಎಲೆಯ ಮತ್ತೊಂದು ಭಾಗದಲ್ಲಿ ಚಿತ್ರಾನ್ನ. ಅದರ ಮೇಲೆ ಅಥವಾ ಪಕ್ಕದಲ್ಲಿ ಹಪ್ಪಳ, ಸಂಡಿಗೆ ಮತ್ತು ಬಾಳಕ. ಇಲ್ಲಿ ಗಮನಿಸಬೇಕಾದದ್ದು ಒಂದು: ಮೃದುವಾದ ಅನ್ನದ ಜೊತೆ ಗರಿಗರಿಯಾದ ಪದಾರ್ಥ! ಚಿತ್ರಾನ್ನದ ಮೃದುತ್ವಕ್ಕೆ ಹಪ್ಪಳದ ಗರಿಗರಿ ಸೇರಿಕೊಂಡಾಗ ಊಟದ ಅನುಭವವೇ ಬದಲಾಗುತ್ತದೆ. ಇದು ಕೇವಲ ರುಚಿಯಲ್ಲ—ವಿವಿಧ texture ಅಥವಾ ಆಹಾರದ ವಿನ್ಯಾಸಗಳನ್ನು ಒಂದೇ ಊಟದಲ್ಲಿ ಅನುಭವಿಸುವ ಅವಕಾಶ.
ಸಾಂಪ್ರದಾಯಿಕ ಊಟದಲ್ಲಿ ಚಿತ್ರಾನ್ನದ ಮಹತ್ವ
ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ ಜೊತೆಗೆ ಗರಿಗರಿಯಾಗಿ ಹುರಿದ ಕಡಲೆಬೀಜ, ಮೆಣಸಿಕಾಯಿ, ಕರಿಬೇವಿನ ಜೊತೆ ಆಕರ್ಷಣೀಯವಾಗಿ ಕಾಣಿಸಲು ಅರಿಶಿನ ಸುವಾಸನೆ ಮತ್ತು ಜೀರ್ಣವಾಗುವಂತೆ ಹಿಂಗು ಹಾಕಿದ ಒಗ್ಗರಣೆಯನ್ನು ಬಿಸಿ ಬಿಸಿ ಅನ್ನದ ಮೇಲೆ ಲಿಂಬೆ ರಸ ಮತ್ತು ಉಪ್ಪನ್ನು ಬೆರೆಸಿ ತಯಾರಿಸುವ ಚಿತ್ರಾನ್ನ, ನೋಡಲು ಚೆನ್ನಾಗಿದ್ದು, ನಾಲಿಗೆಯ ಮೇಲೆ ರುಚಿಯಾಗಿರುವುದಲ್ಲದೇ, ಸುಲಭವಾಗಿ ಜೀರ್ಣವಾಗುವ ಗುಣ ಇರುವ ಕಾರಣ, ಎಲೆ ಕೊನೆಯಲ್ಲಿ ಚಿತ್ರಾನ್ನ ಬಡಿಸಲಾಗುತ್ತದೆ
ಮಧ್ಯದಲ್ಲಿ ಅನ್ನ… ಅದರ ಮೇಲೆ ತೊವ್ವೆ, ತುಪ್ಪ

ಈಗ ಬರುತ್ತದೆ ಊಟದ ಪ್ರಮುಖ ಹಂತ. ಬಾಳೆ ಎಲೆಯ ಮಧ್ಯಭಾಗದಲ್ಲಿ ಬಿಸಿಬಿಸಿ ಅನ್ನ. ಅದರ ಮೇಲೆ ತೊವ್ವೆ. ಮತ್ತು ಅದರ ಮೇಲೆ ಒಂದು ಚಮಚ ತುಪ್ಪ. ಅನ್ನಕ್ಕೆ ತೊವ್ವೆ ಸೇರಿಸಿ, ತುಪ್ಪದ ಸುವಾಸನೆಯೊಂದಿಗೆ ಕಲಸಿ ತಿನ್ನುವ ಆ ಮೊದಲ ತುತ್ತು…
ಸರಳವಾದರೂ ಅದ್ಭುತ!
ತೊವ್ವೆಯ ಬೇಳೆಯ ರುಚಿ, ತುಪ್ಪದ ಪರಿಮಳ ಮತ್ತು ಬಿಸಿಯಾದ ಅನ್ನ—ಇದು ದಕ್ಷಿಣ ಭಾರತೀಯ ಊಟದ ಅತ್ಯಂತ ಪರಿಚಿತ ಸಂಯೋಜನೆಗಳಲ್ಲಿ ಒಂದು. ಬೇಳೆ, ಧಾನ್ಯ ಮತ್ತು ಕೊಬ್ಬಿನ ಮೂಲವಾದ ತುಪ್ಪ ಒಂದೇ ತುತ್ತಿನಲ್ಲಿ ಸೇರುವುದರಿಂದ ರುಚಿ ಮಾತ್ರವಲ್ಲ, ಊಟದ ತೃಪ್ತಿಯೂ ಹೆಚ್ಚುತ್ತದೆ.
ಎಲೆಯ ಮೇಲೆ ಎಲ್ಲವನ್ನೂ ಬಡಿಸುವವರೆಗೂ ಊಟ ಶುರು ಮಾಡಬಾರದು?
“ಎಲ್ಲವನ್ನೂ ಬಡಿಸುವವರೆಗೆ ಊಟ ಮಾಡಬಾರದು” ಎಂಬುದು ಸಮಾರಂಭ, ಮದುವೆ, ಹಬ್ಬದ ಊಟ ಮತ್ತು ಕೆಲವು ಕುಟುಂಬ-ಸಮುದಾಯಗಳ ಊಟದ ಶಿಷ್ಟಾಚಾರ. ಆದರೆ ಇದರ ಹಿಂದೆ ಕೆಲವು ಸುಂದರವಾದ ಸಾಮಾಜಿಕ ಕಾರಣಗಳಿವೆ.
ಎಲ್ಲರೂ ಒಟ್ಟಿಗೆ ಊಟ ಆರಂಭಿಸುವುದು. ಅತಿಥಿಗೆ ಸಂಪೂರ್ಣ ಆತಿಥ್ಯ ಸಿಗುವವರೆಗೆ ಕಾಯುವುದು. ಬಡಿಸುವವರು ಪ್ರತಿಯೊಂದು ಪದಾರ್ಥವನ್ನೂ ಪ್ರತಿಯೊಬ್ಬರಿಗೂ ನೀಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು. ಎಲ್ಲದ್ದಕ್ಕಿಂತಲೂ ಮುಖ್ಯವಾಗಿ ಅಂದಿನ ಆಹಾರದಲ್ಲಿ ಮಾಡಲಾಗಿರುವ ಪದಾರ್ಥಗಳನ್ನು ಒಂದೊಂದಾಗಿ ಬಡಿಸುತ್ತಿದ್ದಂತೆಯೇ ಊಟಕ್ಕೆ ಕುಳಿತವರಿಗೇ ಅರಿವಿಲ್ಲದಂತೆ ಬಾಯಿಯಲ್ಲಿ ಲಾಲಾರಸ ಉತ್ಪತ್ತಿಯಾಗಿ ಅದು ಸ್ವಲ್ಪ ಹೆಚ್ಚಾಗಿ ಊಟವನ್ನು ಮಾಡಲು ಪ್ರೇರೇಪಿಸುವುದಲ್ಲದೇ, ಪಚನಕ್ರಿಯೆಗೂ ಸಹಕರಿಸುತ್ತದೆ. ಒಟ್ಟಿಗೆ ಊಟ ಆರಂಭಿಸುವುದು ಒಂದು ರೀತಿಯ ಸಾಮೂಹಿಕ ಶಿಸ್ತು ಆಗಿತ್ತು
ಊಟಕ್ಕೂ ಮುನ್ನ ಭೋಜನ ಮಂತ್ರ ಏಕೆ?
ನಮ್ಮ ಹಿರಿಯರು ಊಟ ಆರಂಭಿಸುವ ಮೊದಲು ದೇವರನ್ನು ನೆನೆಯುತ್ತಿದ್ದರು. ಕೆಲವು ಕುಟುಂಬಗಳಲ್ಲಿ “ಬ್ರಹ್ಮಾರ್ಪಣಂ…” ಮುಂತಾದ ಶ್ಲೋಕಗಳನ್ನು ಪಠಿಸುವ ಪದ್ಧತಿ ಇದೆ. ಅದರ ಮೂಲ ಸಂದೇಶ ಬಹಳ ಸರಳ: ನಾವು ತಿನ್ನುತ್ತಿರುವ ಆಹಾರ ನಮ್ಮ ಸ್ವಂತ ಸಂಪಾದನೆಯ ಫಲ ಮಾತ್ರವಲ್ಲ. ಪ್ರಕೃತಿ, ರೈತ, ಮಳೆ, ಮಣ್ಣು, ಸೂರ್ಯ, ನೀರು, ಅಡುಗೆ ಮಾಡಿದವರು—ಅನೇಕ ಜೀವಿಗಳ ಪರಿಶ್ರಮದ ಫಲ. ಆದ್ದರಿಂದ ಮೊದಲ ತುತ್ತಿನ ಮೊದಲು ಕೃತಜ್ಞತೆ. ಇದು ಆಹಾರವನ್ನು “ವಸ್ತು”ಯಿಂದ “ಪ್ರಸಾದ”ದ ಮಟ್ಟಕ್ಕೆ ಕೊಂಡೊಯ್ಯುವ ಮಾನಸಿಕ ಸಂಸ್ಕಾರ. ಮಂತ್ರ ಪಠಿಸುವುದು ಪ್ರತಿಯೊಂದು ಕುಟುಂಬದಲ್ಲೂ ಒಂದೇ ರೀತಿಯಾಗಿರಲಿಲ್ಲ. ಆದರೆ ಊಟದ ಮೊದಲು ದೇವರನ್ನು ನೆನೆದು, ಆಹಾರಕ್ಕೆ ಗೌರವ ಸಲ್ಲಿಸುವ ಸಂಪ್ರದಾಯ ಭಾರತೀಯ ಆಹಾರ ಸಂಸ್ಕೃತಿಯ ಬಹುಮುಖ್ಯ ಭಾಗವಾಗಿದೆ.
ಪಾಯಸದಿಂದಲೇ ಊಟವನ್ನು ಏಕೆ ಆರಂಭಿಸಬೇಕು?
ಊಟ ಆರಂಭಿಸುವಾಗ ಹಸಿವು ಹೆಚ್ಚಿರುತ್ತದೆ ಮತ್ತು ಜೀರ್ಣಾಂಗಗಳ ಶಕ್ತಿ (ಜಠರಾಗ್ನಿ) ಅತ್ಯಂತ ಪ್ರಬಲವಾಗಿರುತ್ತದೆ. ಈ ಸಮಯದಲ್ಲಿ ಸಿಹಿ ತಿನ್ನುವುದು ಜೀರ್ಣಕ್ರಿಯೆಯ ರಸಗಳನ್ನು ಮತ್ತು ಕಿಣ್ವಗಳನ್ನು ಸುಲಭವಾಗಿ ಸಕ್ರಿಯಗೊಳಿಸುತ್ತದೆ ಎನ್ನುವ ಕಾರಣದಿಂದಾಗಿ ಊಟವನ್ನು ಮೊದಲು ಪಾಯಸದಿಂದಲೇ ಆರಂಭಿಸುವ ಸಂಪ್ರದಾಯವಿದೆ.
ನಂತರ ಅನ್ನ-ಹುಳಿ
ತೊವ್ವೆ-ತುಪ್ಪದ ಸರಳ ಸವಿಯ ನಂತರ ನಾಲಿಗೆಯನ್ನು ಮತ್ತೊಂದು ರುಚಿಯ ಕಡೆಗೆ ಕರೆದೊಯ್ಯುವುದು ಅನ್ನ-ಹುಳಿ. ಹುಳಿ ಸಾಮಾನ್ಯವಾಗಿ ಬೇಳೆ, ತರಕಾರಿ, ಹುಣಸೆಹಣ್ಣು ಮತ್ತು ಮಸಾಲೆಗಳ ಸಂಯೋಜನೆಯಾಗಿರುವುದರಿಂದ, ತೊವ್ವೆಗಿಂತ ವಿಭಿನ್ನವಾದ ರುಚಿಯನ್ನು ನೀಡುತ್ತದೆ. ಮೊದಲು ಮೃದುವಾದ ತೊವ್ವೆ… ನಂತರ ಗಾಢವಾದ ಹುಳಿ!
ನಂತರ ಅನ್ನ-ಸಾರು
ಅನ್ನ-ಹುಳಿದ ಸವಿಯ ನಂತರ ಸಾರು ಸಾಮಾನ್ಯವಾಗಿ ಹುಳಿಗಿಂತ ತೆಳುವಾಗಿದ್ದು, ಹೆಚ್ಚು ದ್ರವ ಮತ್ತು ಹಗುರವಾದ ಮಸಾಲೆ ರುಚಿಯನ್ನು ಹೊಂದಿರುತ್ತದೆ. ಅನ್ನ–ಹುಳಿಯ ಗಟ್ಟಿಯಾದ ರುಚಿಯ ನಂತರ ಅನ್ನ–ಸಾರು ತಿಂದಾಗ ನಾಲಿಗೆಯ ರುಚಿ ಸ್ವಲ್ಪ ಬದಲಾಗುತ್ತದೆ. ಇದೇ ಸಾಂಪ್ರದಾಯಿಕ ಊಟದ ಸೊಗಸು. ಒಂದೇ ಪದಾರ್ಥವನ್ನು ನಿರಂತರವಾಗಿ ತಿನ್ನುವುದಕ್ಕಿಂತ ರುಚಿಯನ್ನು ಬದಲಾಯಿಸುತ್ತಾ ಊಟ ಮಾಡುವುದರಿಂದ ಊಟ ಹೆಚ್ಚು ಆಸಕ್ತಿದಾಯಕವಾಗುತ್ತದೆ.
ಹುಳಿ ಮೊದಲು ತಿಂದರೆ ಜೀರ್ಣವಾಗುತ್ತದೆ, ಸಾರು ನಂತರ ತಿಂದರೆ ಹೊಟ್ಟೆ ಶುದ್ಧವಾಗುತ್ತದೆ, ಅಥವಾ ಹುಳಿ ಮತ್ತು ಸಾರುಗಳಲ್ಲಿ ಇರುವ ಬೇಳೆ, ತರಕಾರಿ, ಮಸಾಲೆ, ದ್ರವ ಇತ್ಯಾದಿಗಳು ಪೌಷ್ಟಿಕಾಂಶ ನೀಡುತ್ತವೆ ಹಾಗಾಗಿ ಅನ್ನ–ಹುಳಿ ನಂತರ ಅನ್ನ–ಸಾರು ತಿನ್ನಲೇಬೇಕು ಎಂಬುದಕ್ಕೆ ವಿಶೇಷ ಜೀರ್ಣಕ್ರಿಯೆಯ ವೈಜ್ಞಾನಿಕ ನಿಯಮವಿದೆ ಎಂದು ಹೇಳಲು ಸಾಕಷ್ಟು ಆಧಾರವಿಲ್ಲ. ಆದರೂ ನಮ್ಮ ಹಿರಿಯರು ರೂಪಿಸಿದ ಈ ಕ್ರಮವನ್ನು ಆಹಾರದ ರುಚಿ, ವೈವಿಧ್ಯ, ಬಡಿಸುವ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಶಿಷ್ಟಾಚಾರದ ಸುಂದರ ಸಂಯೋಜನೆ ಎಂದು ನೋಡುವುದು ಹೆಚ್ಚು ಸೂಕ್ತ. ನಮ್ಮ ಸಾಂಪ್ರದಾಯಿಕ ಊಟದಲ್ಲಿ ಒಂದು ಪದಾರ್ಥವನ್ನು ಮಾತ್ರ ತಿನ್ನುವುದಿಲ್ಲ. ರುಚಿಯನ್ನು ಒಂದೊಂದೇ ಹಂತದಲ್ಲಿ ಬದಲಾಯಿಸುತ್ತಾ ಊಟವನ್ನು ಅನುಭವಿಸಲಾಗುತ್ತದೆ.
ಮಜ್ಜಿಗೆ ಹುಳಿ, ಖಾರದಿಂದ ಮೃದುವಾದ ರುಚಿಯತ್ತ
ಅದಾದ ನಂತರ ಬರುವ ಮಜ್ಜಿಗೆ ಹುಳಿ. ಮೊಸರು ಅಥವಾ ಮಜ್ಜಿಗೆ ಆಧಾರಿತ ಈ ಖಾದ್ಯಕ್ಕೆ ಸಾಮಾನ್ಯವಾಗಿ ಮಸಾಲೆ ಮತ್ತು ತರಕಾರಿಗಳ ಸೊಗಡು ಸೇರಿರುತ್ತದೆ. ಇಲ್ಲಿಗೆ ಬಂದಾಗ ಊಟದ ರುಚಿ ನಿಧಾನವಾಗಿ ಮೃದುವಾಗುತ್ತದೆ. ಹುಳಿಯ ಗಾಢ ರುಚಿಯಿಂದ ಮಜ್ಜಿಗೆಯ ಮೃದು ರುಚಿಯ ಕಡೆಗೆ ನಾಲಿಗೆ ಸಾಗುತ್ತದೆ.
ಮಧ್ಯದಲ್ಲಿ ಸಿಹಿಯ ಸರ್ಪ್ರೈಸ್!
ಇದಾದ ಮೇಲೆ ಸಿಹಿ ತಿಂಡಿ. ಕೆಲವು ಊಟಗಳಲ್ಲಿ ಪಾಯಸವನ್ನೂ ಈ ಸಂದರ್ಭದಲ್ಲಿ ಸವಿಯುತ್ತಾರೆ. ಸಿಹಿ ಬಂದಾಗ ಊಟದ ರುಚಿಯೇ ಬದಲಾಗುತ್ತದೆ. ಆದರೆ ಸಿಹಿಯ ನಂತರ ಮತ್ತೆ ಬೊಂಡದಂತಹ ಖಾರದ ಅಥವಾ ಕರಿದ ತಿಂಡಿ ಬಂದರೆ ಮತ್ತೊಮ್ಮೆ ರುಚಿಯ ಬದಲಾವಣೆ! ಅಂದರೆ ಒಂದೇ ಊಟದಲ್ಲಿ— ಮೃದುವು → ಖಾರ → ಹುಳಿ → ಸಿಹಿ → ಗರಿಗರಿ ಎಂಬ ರುಚಿ ಮತ್ತು ವಿನ್ಯಾಸದ ಪಯಣ.
ಕೊನೆಯ ಅಧ್ಯಾಯ ಮೊಸರನ್ನ ಮತ್ತು ಮಜ್ಜಿಗೆ
ಇಷ್ಟೆಲ್ಲಾ ಸವಿದ ನಂತರ ಮತ್ತೆ ಅನ್ನ ಮತ್ತು ಮೊಸರು. ಮೊಸರನ್ನದೊಂದಿಗೆ ಊಟ ನಿಧಾನವಾಗಿ ಸಮಾಪ್ತಿಯತ್ತ ಸಾಗುತ್ತದೆ. ಕೊನೆಯಲ್ಲಿ ಮಜ್ಜಿಗೆ. ಇದು ಊಟಕ್ಕೆ ಒಂದು ರೀತಿಯ ತಂಪಾದ ಮುಕ್ತಾಯ. ಮೊದಲಿಗೆ ಉಪ್ಪು ನಾಲಿಗೆಯನ್ನು ಎಬ್ಬಿಸಿದರೆ, ಕೊನೆಯಲ್ಲಿ ಮಜ್ಜಿಗೆ ಊಟವನ್ನು ತಂಪಾಗಿ ಮುಗಿಸುತ್ತದೆ.
ಹಾಗಾದರೆ ಇದರಲ್ಲಿರುವ “ವಿಜ್ಞಾನ”ವೇನು?

ಬಾಳೆ ಎಲೆಯ ಊಟದ ನಿಜವಾದ ಸೌಂದರ್ಯ
ಬಾಳೆ ಎಲೆಯನ್ನು ಆಹಾರ ಬಡಿಸಲು ಬಳಸುವುದು ಪರಿಸರದ ದೃಷ್ಟಿಯಿಂದಲೂ ಗಮನಾರ್ಹ. ಅದು ಬಳಸಿ ಬಿಸಾಡಬಹುದಾದ ಪ್ಲಾಸ್ಟಿಕ್ ಅಥವಾ ಕೃತಕ ತಟ್ಟೆಯ ಬದಲಿಗೆ ನೈಸರ್ಗಿಕ ಆಯ್ಕೆಯಾಗಿದೆ. ಬಿಸಿ ಆಹಾರವನ್ನು ಬಾಳೆ ಎಲೆಯ ಮೇಲೆ ಬಡಿಸಿದಾಗ ಎಲೆಯ ಸ್ವಾಭಾವಿಕ ಪರಿಮಳವೂ ಆಹಾರದ ಅನುಭವಕ್ಕೆ ಒಂದು ವಿಶಿಷ್ಟ ಸೊಗಡು ನೀಡಬಹುದು. ಹೀಗಾಗಿ ನಮ್ಮ ಹಿರಿಯರು ಪ್ಲಾಸ್ಟಿಕ್ ತಟ್ಟೆ, ಥರ್ಮಾಕೋಲ್ ಪ್ಲೇಟ್ ಮತ್ತು ಡಿಸ್ಪೋಸಬಲ್ ಸಂಸ್ಕೃತಿ ಬರುವ ಹಲವು ಶತಮಾನಗಳ ಮುಂಚೆಯೇ ಒಮ್ಮೆ ಬಳಸಿ ಮಣ್ಣಿಗೆ ಮರಳುವ ತಟ್ಟೆ ಬಳಸುತ್ತಿದ್ದರು! ಇನ್ನು ಹಳ್ಳಿಯ ಕಡೆ ಊಟ ಮುಗಿದ ನಂತರ ಬಾಳೆ ಎಲೆಯನ್ನು ಜಾನುವಾರಗಳಿಗೆ ಹಾಕಲಾಗುತ್ತದೆ.
ಇಂದಿನ ದಿನಗಳಲ್ಲಿ ನಾವು ಆಹಾರವನ್ನು ಕೆಲವೊಮ್ಮೆ ಕೇವಲ “Calories”, “Protein”, “Carbs” ಎಂದು ಲೆಕ್ಕ ಹಾಕುತ್ತೇವೆ. ಆದರೆ ನಮ್ಮ ಹಿರಿಯರಿಗೆ ಊಟವೆಂದರೆ ಅದಕ್ಕಿಂತ ದೊಡ್ಡ ವಿಷಯ. ಅನ್ನವನ್ನು ಗೌರವಿಸುವುದು. ಅಡುಗೆ ಮಾಡಿದವರನ್ನು ಗೌರವಿಸುವುದು. ಅತಿಥಿಯನ್ನು ಪ್ರೀತಿಯಿಂದ ಊಟಕ್ಕೆ ಕೂರಿಸುವುದು. ಒಟ್ಟಿಗೆ ಕುಳಿತು ಊಟ ಮಾಡುವುದು. ನಿಧಾನವಾಗಿ ಸವಿಯುವುದು. ಊಟ ಮಾಡುವವನಿಗಿಂತ ಬಡಿಸುವವರಿಗೂ ಅಷ್ಟೇ ಸಂಭ್ರಮ! ಸ್ವಲ್ಪ ಪಲ್ಯ ಹಾಕಲೇನಾ? ಹುಳಿ ಬೇಕಾ?” “ಸ್ವಲ್ಪ ಪಾಯಸ ಹಾಕಲಾ? ಮೊಸರು ಹಾಕಲಾ? ಎಂದು ಕೇಳುತ್ತಾ ಬಡಿಸುವ ಆತಿಥ್ಯವೇ ಒಂದು ಪ್ರತ್ಯೇಕ ಸಂಸ್ಕೃತಿ.
ಊಟ ಮುಗಿದ ಮೇಲೂ ಒಂದು ಸಂಪ್ರದಾಯ!
ಬಾಳೆ ಎಲೆಯ ಸಂಸ್ಕಾರ ಊಟ ಮುಗಿದ ಕೂಡಲೇ ಮುಗಿಯುವುದಿಲ್ಲ. ಕೆಲವು ದಕ್ಷಿಣ ಭಾರತೀಯ ಸಂಪ್ರದಾಯಗಳಲ್ಲಿ ಊಟ ಮುಗಿಸಿದ ನಂತರ ಎಲೆಯನ್ನು ನಿರ್ದಿಷ್ಟ ರೀತಿಯಲ್ಲಿ ಮಡಚುವುದು ಕೂಡ ಒಂದು ಸಂಕೇತವೆಂದು ಪರಿಗಣಿಸಲಾಗುತ್ತದೆ. ಶುಭ ಸಮಾರಂಭಗಳಲ್ಲಿ ಒಂದು ರೀತಿಯಲ್ಲಿ ಮತ್ತು ಅಂತ್ಯಕ್ರಿಯೆ/ಶ್ರಾದ್ಧದಂತಹ ಸಂದರ್ಭಗಳಲ್ಲಿ ಬೇರೆ ರೀತಿಯಲ್ಲಿ ಎಲೆ ಮಡಚುವ ಪದ್ಧತಿಯ ವಿವರಣೆಗಳು ಕಂಡುಬರುತ್ತವೆ. ಅಂದಿನ ಊಟ ರುಚಿಕರವಾಗಿದ್ದು ನಿಮಗಿಷ್ಟವಾಗಿದ್ದರೆ ಎಲೆಯನ್ನು ಮೇಲಿಂದ ಕೆಳಗೆ ಬರುವಂತೆಯೂ ಇನ್ನು ಊಟ ನಿಮಗೆ ಇಷ್ಟವಾಗದೇ ಇದ್ದಲ್ಲಿ ಕೆಳಗಿನಿಂದ ಮೇಲೆ ಬರುವಂತೆ ಮಡಚಬೇಕು ಎನುವ ನಿಯಮವಿದೆ, ಇದೇ ಪದ್ದತಿಯು ಶುಭ ಮತ್ತು ಅಶುಭ ಕಾರ್ಯಕ್ರಮಗಳಲ್ಲಿ ಪಾಲಿಸಲಾಗುತ್ತದೆ. ಇದರಿಂದ ಒಂದು ವಿಷಯ ಸ್ಪಷ್ಟ. ಎಲೆಯನ್ನು ಹೇಗೆ ಇಡಬೇಕು ಎಂಬುದರಿಂದ ಹಿಡಿದು, ಊಟವನ್ನು ಹೇಗೆ ಮುಗಿಸಬೇಕು ಎಂಬವರೆಗೂ ನಮ್ಮ ಊಟದ ಸಂಸ್ಕೃತಿಯಲ್ಲಿ ಸಂಕೇತಗಳಿದ್ದವು.
ಕೊನೆಯ ಮಾತು
ಇಂದು ಹೋಟೆಲ್‌ಗಳಲ್ಲಿ ಬಫೆ ವ್ಯವಸ್ಥೆ. ಮನೆಗಳಲ್ಲಿ ಡೈನಿಂಗ್ ಟೇಬಲ್. ಕೈಯಲ್ಲಿ ಮೊಬೈಲ್. ಮುಂದೆ ಟಿವಿ. ಆದರೆ ಒಂದು ಬಾಳೆ ಎಲೆ ಹಾಸಿ, ಕುಟುಂಬದವರು ಅಥವಾ ಬಂಧು-ಮಿತ್ರರು ಒಟ್ಟಿಗೆ ಕುಳಿತು ಊಟ ಮಾಡುವಾಗ… ಅದು ಕೇವಲ ಊಟವಾಗುವುದಿಲ್ಲ. ಅದು ಒಂದು ನೆನಪು. ಅದು ಒಂದು ಸಂಸ್ಕೃತಿ. ಅದು ಒಂದು ಆತಿಥ್ಯ. ಅದು ನಮ್ಮ ಹಿರಿಯರಿಂದ ನಮಗೆ ಬಂದ ಜೀವಂತ ಪರಂಪರೆ.
ಉಪ್ಪಿನಿಂದ ಆರಂಭಿಸಿ, ಪಲ್ಯ, ಗೊಜ್ಜು, ಚಿತ್ರಾನ್ನ, ಹಪ್ಪಳ, ಸಂಡಿಗೆಗಳ ಮೂಲಕ ಸಾಗುತ್ತಾ, ತೊವ್ವೆ–ತುಪ್ಪ, ಹುಳಿ, ಸಾರು, ಮಜ್ಜಿಗೆ ಹುಳಿ, ಸಿಹಿ, ಬೊಂಡವನ್ನು ದಾಟಿ ಕೊನೆಯಲ್ಲಿ ಮೊಸರನ್ನ ಮತ್ತು ಮಜ್ಜಿಗೆಯಲ್ಲಿ ಮುಗಿಯುವ ಈ ಸವಿಯ ಪಯಣ—ನಿಜಕ್ಕೂ ಒಂದು ಊಟವಲ್ಲ… ಅದೊಂದು ಯಜ್ಞ. ಒಂದು ಅನುಭವ. ಬಾಳೆ ಎಲೆಯ ಮೇಲೆ ಬಡಿಸಿದ ಊಟ ಮುಗಿದರೂ, ಅದರ ರುಚಿ ಮಾತ್ರ ನಾಲಿಗೆಯಲ್ಲಿ ಉಳಿಯುವುದಿಲ್ಲ. ನೆನಪಿನಲ್ಲೂ ಉಳಿಯುತ್ತದೆ ಅಲ್ವೇ?