ನಾನು ಸಣ್ಣವಯಸ್ಸಿನಲ್ಲಿ ನೆಲಮಂಗಲದಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ, ದಾರಿಯಲ್ಲಿ ನೋಡುತ್ತಿದ್ದ ಮಿಲಿಟರಿ ಹೋಟೆಲ್ ಅಥವಾ ಜನಪ್ರಿಯವಾಗಿ ಕರೆಯುವ ಹಿಂದೂ ಮಿಲ್ಟ್ರಿ ಹೋಟೆಲ್ ಎನ್ನುವುದು ನನಗೆ ಜಿಜ್ಞಾಸೆ ಮೂಡಿಸುತ್ತಿತ್ತು. ಇಲ್ಲೇನು ಸೈನಿಕರು ಇಲ್ಲ. ಈ ಪ್ರದೇಶವೇನೂ ಯುದ್ಧ ಅಥವಾ ಯಾವುದೇ ಕಾಳಗಕ್ಕೂ ಪ್ರಸಿದ್ಧಿ ಆಗಿಲ್ಲಾ. ಒಬ್ಬ ಸಸ್ಯಾಹಾರಿಯಾಗಿ ಈ Military Hotel ಏಕೆ? ಎಂಬ ಪ್ರಶ್ನೆಗೆ ಎರಡನೇ ತರಗತಿಯಲ್ಲಿ ನನ್ನ ಸಹಪಾಠಿಯಾದ ಮರಾಠಿ ಹುಡುಗ ಮುರಾರಿಯಿಂದ ಉತ್ತರ ಸಿಕ್ಕಿತ್ತು.
ಹಿಂದೂ ಮಿಲ್ಟ್ರಿ ಹೋಟೆಲ್ ಎನ್ನುವುದು ಸೇನೆಯ ಅಧಿಕೃತ ಕ್ಯಾಂಟೀನ್‌ಗಳಲ್ಲ. ಅವುಗಳು ಮುಖ್ಯವಾಗಿ ಮಾಂಸಾಹಾರ, ಪಲಾವ್/ಬಿರಿಯಾನಿ, ಮಟನ್ ಚಾಪ್, ಕೀಮಾ, ಕಾಲಿನ ಸೂಪ್, ರಾಗಿ ಮುದ್ದೆ ಮುಂತಾದ ಹೊಟ್ಟೆತುಂಬುವ ಸಾಂಪ್ರದಾಯಿಕ ಆಹಾರವನ್ನು ಸರಳ ವಾತಾವರಣದಲ್ಲಿ ನೀಡುತ್ತಿದ್ದ ಖಾಸಗಿ ಊಟದ ಮನೆಗಳು. ಈ ಪರಂಪರೆಯ ಹಿಂದೆ ಬೆಂಗಳೂರಿನ ಪೇಟೆ ಸಂಸ್ಕೃತಿ, ಮರಾಠರ ಸೈನಿಕ ವಲಸೆ, ಬ್ರಿಟಿಷರ ಕ್ಯಾಂಟೋನ್ಮೆಂಟ್, ದುಡಿಯುವ ವರ್ಗದ ಆಹಾರ ಅಗತ್ಯ ಮತ್ತು ಕರ್ನಾಟಕದ ನಾಟಿ ಮಾಂಸಾಹಾರ—ಇವೆಲ್ಲವೂ ಬೆರೆತಿರುವ ಒಂದು ಕುತೂಹಲಕಾರಿ ಇತಿಹಾಸವಿದ್ದು, ಅದರ ಸಂಪೂರ್ಣ ಇತಿಹಾಸವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ. ಬೆಂಗಳೂರು ಇತಿಹಾಸದ ಹಿಂದಿನ ಮಾಲಿಕೆಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಮಿಲ್ಟ್ರಿ ಹೋಟೆಲ್ ಎಂದರೇನು? ಹೆಸರಿನ ಹಿಂದೆ ಇರುವ ಕಥೆ ಏನು?
ಬಿರಿಯಾನಿ, ಮಟನ್ ಚಾಪ್, ಕೀಮಾ ಉಂಡೆ, ಪಾಯಾ, ಚಿಕನ್ ಫ್ರೈ, ಮಟನ್ ಪಲಾವ್, ರಾಗಿ ಮುದ್ದೆ… ಇಂದು ಬೆಂಗಳೂರಿನ ಯಾವುದೇ ಭಾಗಕ್ಕೆ ಹೋದರೂ ನೂರಾರು ಬಗೆಯ ಮಾಂಸಾಹಾರಿ ಹೋಟೆಲ್‌ಗಳು ಕಾಣಸಿಗುತ್ತವೆ. ನಾಟಿ ಊಟದಿಂದ ಹಿಡಿದು ಆಂಧ್ರ, ಚೆಟ್ಟಿನಾಡು, ಹೈದರಾಬಾದಿ, ಕೇರಳ, ಮಲಬಾರ್, ಮುಘಲಾಯಿ ಹಾಗೂ ಆಧುನಿಕ ಫೈನ್ ಡೈನಿಂಗ್‌ವರೆಗೆ ಮಾಂಸಾಹಾರದ ಜಗತ್ತು ಇಂದು ಬಹಳ ವಿಸ್ತಾರವಾಗಿದೆ.
ಆದರೆ ಇಂತಹ ವೈವಿಧ್ಯಮಯ ಮಾಂಸಾಹಾರಿ ಹೋಟೆಲ್‌ಗಳ ಕಾಲ ಬರುವುದಕ್ಕೂ ಬಹಳ ಹಿಂದೆಯೇ ಕರ್ನಾಟಕದ ನಗರ ಮತ್ತು ಪಟ್ಟಣಗಳ ಪೇಟೆ ಪ್ರದೇಶಗಳಲ್ಲಿ ಒಂದು ವಿಶೇಷ ರೀತಿಯ ಊಟದ ಮನೆಗಳು ಜನಪ್ರಿಯವಾಗಿದ್ದವು. ಅವುಗಳೇ ಮಿಲಿಟರಿ ಹೋಟೆಲ್. ಜನರ ಬಾಯಿಯಲ್ಲಿ ಅದು ಕ್ರಮೇಣ ಮಿಲ್ಟ್ರಿ ಹೋಟೆಲ್ ಎಂದಾಯಿತು. ಹೆಸರನ್ನು ಕೇಳಿದರೆ ಸೇನೆಯ ಕ್ಯಾಂಟೀನ್ ನೆನಪಾಗಬಹುದು. ಆದರೆ ಬಹುತೇಕ ಮಿಲಿಟರಿ ಹೋಟೆಲ್‌ಗಳಿಗೆ ಭಾರತೀಯ ಸೇನೆಯೊಂದಿಗೆ ನೇರ ಆಡಳಿತಾತ್ಮಕ ಸಂಬಂಧವೇ ಇರಲಿಲ್ಲ. ಇವು ಖಾಸಗಿ ಕುಟುಂಬಗಳು ನಡೆಸುತ್ತಿದ್ದ ಸಾಮಾನ್ಯ ಊಟದ ಮನೆಗಳು. ಆದರೆ ಅವುಗಳ ಆಹಾರ, ಗ್ರಾಹಕರು ಮತ್ತು ಆರಂಭಿಕ ಹಿನ್ನೆಲೆಯೊಂದಿಗೆ ಸೈನಿಕ ಜಗತ್ತಿಗೆ ಇದ್ದ ಸಂಬಂಧವೇ ಈ ಹೆಸರಿಗೆ ಕಾರಣವಾಗಿರಬಹುದು. ಕರ್ನಾಟಕದ ಆಹಾರ ಇತಿಹಾಸದಲ್ಲಿ ಮಿಲಿಟರಿ ಹೋಟೆಲ್‌ಗಳು ಒಂದು ವಿಶಿಷ್ಟ ಅಧ್ಯಾಯವಾಗಿರುವುದಕ್ಕೆ ಇದೇ ಕಾರಣ.
ಮಿಲಿಟರಿ ಹೋಟೆಲ್ ಎಂದರೆ ನಿಜಕ್ಕೂ ಏನು?
ಸರಳವಾಗಿ ಹೇಳುವುದಾದರೆ, ಸಾಂಪ್ರದಾಯಿಕವಾಗಿ ಮಾಂಸಾಹಾರ ಪ್ರಧಾನವಾಗಿದ್ದ, ಕಡಿಮೆ ಖರ್ಚಿನಲ್ಲಿ ಹೊಟ್ಟೆತುಂಬುವ ಊಟ ನೀಡುತ್ತಿದ್ದ ಹಳೆಯ ಶೈಲಿಯ ಖಾಸಗಿ ಊಟದ ಮನೆಗಳೇ ಮಿಲಿಟರಿ ಹೋಟೆಲ್‌ಗಳು. ಅವುಗಳಲ್ಲಿ ಸಾಮಾನ್ಯವಾಗಿ ದೊರೆಯುತ್ತಿದ್ದ ಆಹಾರ, ಮಟನ್ ಪಲಾವ್, ಬಿರಿಯಾನಿ, ಮಟನ್ ಚಾಪ್, ಮಟನ್ ಫ್ರೈ, ಮಟನ್ ಕೀಮಾ, ಕೀಮಾ ಉಂಡೆ, ಮಟನ್ ಲಿವರ್ ಫ್ರೈ, ಚಿಕನ್ ಫ್ರೈ, ಪೆಪ್ಪರ್ ಚಿಕನ್, ಕಾಲಿನ ಸೂಪ್ ಅಥವಾ ಪಾಯಾ, ಮೊಟ್ಟೆ, ರಾಗಿ ಮುದ್ದೆ, ಚಪಾತಿ ಕೆಲವೆಡೆ ಬೆಳಗಿನ ಇಡ್ಲಿ ಮತ್ತು ಮಾಂಸದ ಸಾರು ಇವುಗಳ ವಿಶೇಷತೆ ಎಂದರೆ ಆಡಂಬರವಿಲ್ಲದ ಅಡುಗೆ, ಗಟ್ಟಿಯಾದ ಮಸಾಲೆ, ಹೆಚ್ಚು ರುಚಿ, ಮಾಂಸದ ಸಮೃದ್ಧ ಬಳಕೆ ಮತ್ತು ತಕ್ಷಣ ಸಿಗುವ ಊಟ.

ಹಳೆಯ ಮಿಲಿಟರಿ ಹೋಟೆಲ್‌ಗಳಲ್ಲಿ ದೊಡ್ಡದಾದ ಅಲಂಕಾರಿಕ ಹಾಲ್‌ಗಳು, ಏರ್‌ಕಂಡೀಷನ್, ಬಫೆ ವ್ಯವಸ್ಥೆ ಅಥವಾ ಮೆನು ಕಾರ್ಡ್‌ಗಳಿರಲಿಲ್ಲ. ಕೆಲವು ಹೋಟೆಲ್‌ಗಳಲ್ಲಿ ಮರದ ಬೆಂಚು, ಉದ್ದನೆಯ ಮೇಜು, ಸ್ಟೀಲ್ ತಟ್ಟೆ ಮತ್ತು ಬಾಳೆ ಎಲೆ ಅಥವಾ ದೊಣ್ಣೆಯಲ್ಲಿ ಬರುವ ಊಟವೇ ವೈಭವವಾಗಿತ್ತು. ಕರ್ನಾಟಕ ಪ್ರವಾಸೋದ್ಯಮದ ದಾಖಲೆಗಳೂ ಮಿಲಿಟರಿ ಹೋಟೆಲ್‌ಗಳನ್ನು ಮುಖ್ಯವಾಗಿ ಮಾಂಸಾಹಾರ ಪ್ರಧಾನ, ಸರಳ ಹಾಗೂ ಪೌಷ್ಟಿಕ ಆಹಾರ ನೀಡುವ ಸಂಸ್ಥೆಗಳೆಂದು ವಿವರಿಸುತ್ತವೆ.
ಹಾಗಾದರೆ ಮಿಲಿಟರಿ ಎಂಬ ಹೆಸರು ಏಕೆ ಬಂತು?
ಇದಕ್ಕೆ ಒಂದೇ ಒಂದು ಖಚಿತವಾದ ಇತಿಹಾಸವಿಲ್ಲ. ಇದು ಮಿಲಿಟರಿ ಹೋಟೆಲ್‌ಗಳ ಇತಿಹಾಸದಲ್ಲಿರುವ ಅತ್ಯಂತ ಕುತೂಹಲಕಾರಿ ಸಂಗತಿ. ಹಲವು ಸ್ಥಳೀಯ ಕಥೆಗಳು, ಕುಟುಂಬಗಳ ನೆನಪುಗಳು ಮತ್ತು ಇತಿಹಾಸದ ವ್ಯಾಖ್ಯಾನಗಳು ಈ ಹೆಸರಿನ ಮೂಲದ ಬಗ್ಗೆ ವಿಭಿನ್ನ ಕಾರಣಗಳನ್ನು ಹೇಳುತ್ತವೆ.
ಒಂದು ಪ್ರಮುಖ ಸಿದ್ಧಾಂತ – ಸೈನಿಕರಿಗೆ ಊಟ

ಹಳೆಯ ಬೆಂಗಳೂರಿನಲ್ಲಿ ಬ್ರಿಟಿಷರ ಕ್ಯಾಂಟೋನ್ಮೆಂಟ್ ಮತ್ತು ಭಾರತೀಯ ಸೈನಿಕರ ಶಿಬಿರಗಳಿದ್ದವು. ಸೈನಿಕರ ಆಹಾರದಲ್ಲಿ ಮಾಂಸ ಪ್ರಮುಖವಾಗಿತ್ತು. ಸೈನಿಕರ ಮೆಸ್ಸಿನ ಆಹಾರದಿಂದ ಭಿನ್ನವಾದ, ಖಾರವಾದ ಹಾಗೂ ತಾಜಾ ಮಾಂಸಾಹಾರ ಬೇಕಾದಾಗ ಅವರು ಸಣ್ಣ ಊಟದ ಮನೆಗಳಿಗೆ ಬರುತ್ತಿದ್ದರು ಎಂಬುದು ಒಂದು ಪ್ರಮುಖ ವಿವರಣೆ. ಹೀಗಾಗಿ ಮಿಲಿಟರಿಯವರು ಊಟ ಮಾಡುವ ಹೋಟೆಲ್ → ಮಿಲಿಟರಿ ಹೋಟೆಲ್ ಎಂಬ ಹೆಸರು ಬಂದಿರಬಹುದು. ಹಳೆಯ ಮಿಲಿಟರಿ ಹೋಟೆಲ್‌ಗಳ ಕುರಿತು ಬರೆಯುವ ಹಲವು ಮೂಲಗಳು ಈ ಸಿದ್ಧಾಂತವನ್ನು ಉಲ್ಲೇಖಿಸುತ್ತವೆ.
ಹಿಂದೂ ಮಿಲಿಟರಿ ಹೋಟೆಲ್
ಹಳೆಯ ಬೆಂಗಳೂರಿನ ಕೆಲವು ಹೋಟೆಲ್‌ಗಳ ಹೆಸರಿನ ಮುಂದೆ ಹಿಂದೂ ಮಿಲಿಟರಿ ಹೋಟೆಲ್ (Hindu Military Hotel) ಎಂಬ ಪದವೂ ಕಾಣುತ್ತಿತ್ತು. ಇದರ ಹಿಂದೆ ಆ ಕಾಲದ ಸಾಮಾಜಿಕ-ಆಹಾರ ಪದ್ಧತಿಯ ಒಂದು ವಿಶೇಷ ಹಿನ್ನೆಲೆಯಿತ್ತು. ಮಾಂಸಾಹಾರ ನೀಡುತ್ತಿದ್ದರೂ ಗೋಮಾಂಸ ಮತ್ತು ಹಂದಿಮಾಂಸ ನೀಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಕೆಲವು ಹೋಟೆಲ್‌ಗಳು “Hindu” ಎಂಬ ಪದವನ್ನು ಬಳಸುತ್ತಿದ್ದವು. ಅಂದರೆ “Military” ಎಂಬುದು ಮಾಂಸಾಹಾರ ಅಥವಾ ಸೇನಾ ಗ್ರಾಹಕರೊಂದಿಗೆ ಸಂಬಂಧವನ್ನು ಸೂಚಿಸುತ್ತಿದ್ದರೆ, “Hindu” ಎಂಬುದು ಆಹಾರದ ನಿರ್ದಿಷ್ಟ ಮಿತಿಯನ್ನು ಸೂಚಿಸುವ ಗುರುತಾಗಿತ್ತು.
ಶಿವಾಜಿ ಮಿಲಿಟರಿ ಹೋಟೆಲ್ – ಮರಾಠ ಪರಂಪರೆಯ ಮತ್ತೊಂದು ಗುರುತು

ಬೆಂಗಳೂರಿನ ಮಿಲಿಟರಿ ಹೋಟೆಲ್‌ಗಳ ಇತಿಹಾಸದಲ್ಲಿ ಶಿವಾಜಿ ಮಿಲಿಟರಿ ಹೋಟೆಲ್ ಪ್ರಮುಖ ಹೆಸರು. ಈ ಹೋಟೆಲ್‌ನ ಕುಟುಂಬ ಪರಂಪರೆ ತನ್ನನ್ನು ಮರಾಠ ಸೈನಿಕ ಹಿನ್ನೆಲೆಯೊಂದಿಗೆ ಸಂಪರ್ಕಿಸುತ್ತದೆ. ಜನಪ್ರಿಯವಾಗಿರುವ ಮಾಹಿತಿಗಳ ಪ್ರಕಾರ 1638ರಲ್ಲಿ ಶಹಾಜಿ ಭೋಸಲೆ ಮತ್ತು ಬಿಜಾಪುರದ ಸೇನೆಯೊಂದಿಗೆ ಬೆಂಗಳೂರಿನ ಮೇಲೆ ನಡೆದ ರಾಜಕೀಯ-ಸೈನಿಕ ಬೆಳವಣಿಗೆಗಳ ನಂತರ ಬೆಂಗಳೂರಿನಲ್ಲಿ ಮರಾಠರ ಪ್ರಭಾವ ಮತ್ತು ವಾಸಸ್ಥಾನ ಹೆಚ್ಚಾಯಿತು. ಈ ಮರಾಠ ಕುಟುಂಬಗಳಲ್ಲಿ ಕೆಲವರು ಸೈನಿಕ ಹಿನ್ನೆಲೆಯವರಾಗಿದ್ದರು. ಅವರ ಆಹಾರ ಸಂಸ್ಕೃತಿಯಲ್ಲಿ ಮಾಂಸಾಹಾರಕ್ಕೆ ಪ್ರಮುಖ ಸ್ಥಾನವಿತ್ತು.
ಅವರಲ್ಲಿ ಕೆಲವರು ನಂತರ ಸೈನಿಕ ಜೀವನದಿಂದ ದೂರವಾಗಿ ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ಪೇಟೆ ಪ್ರದೇಶಗಳಲ್ಲಿ ನೆಲೆಸಿದರು. ಈ ಕುಟುಂಬಗಳು ತಮ್ಮ ಮನೆಮಾತಿನ ಮಾಂಸಾಹಾರಿ ಅಡುಗೆಯನ್ನು ಮಾರಾಟ ಮಾಡುವ ಸಣ್ಣ ಊಟದ ಮನೆಗಳನ್ನು ಆರಂಭಿಸಿದವು ಎಂಬುದು ಮಿಲಿಟರಿ ಹೋಟೆಲ್‌ಗಳ ಮೂಲದ ಜನಪ್ರಿಯ ಸಿದ್ಧಾಂತ ಇವರ ಆಹಾರದಲ್ಲಿ ಮರಾಠ ಶೈಲಿಯ ಮಸಾಲೆಯ ಪ್ರಭಾವ ಇಂದಿಗೂ ಕಾಣುತ್ತದೆ. ಮಾಂಸ + ಖಾರ ಮಸಾಲೆ + ಈರುಳ್ಳಿ + ಬೆಳ್ಳುಳ್ಳಿ + ಮೆಣಸಿನಕಾಯಿ + ಕೊತ್ತಂಬರಿ + ಜೀರಿಗೆ + ತುಪ್ಪ ಇವುಗಳಿಗೆ ಪ್ರಮುಖ ಸ್ಥಾನವಿತ್ತು. ಮಟನ್ ಮತ್ತು ಚಿಕನ್ ದೊಣ್ಣೆ ಬಿರಿಯಾನಿ, ಮಟನ್ ಡ್ರೈ, ಚಿಕನ್ ಕಲ್ಮಿ ಮುಂತಾದವು ಇವರ ಪ್ರಸಿದ್ಧ ಆಹಾರಗಳಲ್ಲಿ ಸೇರಿವೆ.

ಹೀಗಾಗಿ ಬೆಂಗಳೂರಿನ ಹಳೆಯ ಪೇಟೆ ಪ್ರದೇಶಗಳಲ್ಲಿ ಮರಾಠ ಕುಟುಂಬಗಳ ಮಾಂಸಾಹಾರಿ ಊಟದ ಮನೆಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಆದರೆ ಮಿಲಿಟರಿ ಹೋಟೆಲ್ ಎಂದರೆ ಮರಾಠರ ಹೋಟೆಲ್ ಎನ್ನುವಂತೆಯೇ ಭಾಸವಾಗುತ್ತದೆಯಾದರೂ ಅದೇ ಸರಿಯಾದ ಸಮೀಕರಣವಲ್ಲ. ಕಾಲಾನಂತರದಲ್ಲಿ ಬೆಂಗಳೂರಿನ ಮಿಲಿಟರಿ ಹೋಟೆಲ್ ಪರಂಪರೆ ಕಾಲಕ್ರಮೇಣ ಹಲವು ಸಮುದಾಯಗಳ ಕೈಗೆ ಹೋಗಿದೆ. ಗೌಡ್ರು, ನಾಯ್ಡು, ಇತರ ಸ್ಥಳೀಯ ಕುಟುಂಬಗಳು ನಡೆಸಿದ ಮಾಂಸಾಹಾರಿ ಊಟದ ಮನೆಗಳೂ ಮಿಲಿಟರಿ ಹೋಟೆಲ್ ಎಂಬ ಹೆಸರನ್ನು ಬಳಸಿಕೊಂಡಿವೆ. ಅಂದರೆ ಮರಾಠರ ಪ್ರಭಾವ ಪ್ರಮುಖವಾದರೂ, ಈ ಸಂಪ್ರದಾಯವನ್ನು ಮರಾಠ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಲಾಗುವುದಿಲ್ಲ
ಬೆಂಗಳೂರಿನ ಪೇಟೆ ಪ್ರದೇಶವೇ ಮಿಲಿಟರಿ ಹೋಟೆಲ್‌ಗಳಿಗೆ ಏಕೆ ಸೂಕ್ತವಾಗಿತ್ತು?

ಹಳೆಯ ಬೆಂಗಳೂರು ಎರಡು ಪ್ರಮುಖ ಸಾಂಸ್ಕೃತಿಕ ಜಗತ್ತುಗಳಾಗಿ ಬೆಳೆದಿತ್ತು. ಒಂದೆಡೆ ಪೇಟೆ. ಮತ್ತೊಂದೆಡೆ ಕ್ಯಾಂಟೋನ್ಮೆಂಟ್. ಪೇಟೆಯಲ್ಲಿ ವ್ಯಾಪಾರಿಗಳು, ಕಾರ್ಮಿಕರು, ಕುಶಲಕರ್ಮಿಗಳು, ಸಣ್ಣ ವ್ಯಾಪಾರಿಗಳು ಮತ್ತು ದೂರದ ಊರುಗಳಿಂದ ಉದ್ಯೋಗಕ್ಕಾಗಿ ಬಂದವರು ಇದ್ದರು. ಕ್ಯಾಂಟೋನ್ಮೆಂಟ್‌ನಲ್ಲಿ ಬ್ರಿಟಿಷರು, ಭಾರತೀಯ ಸೈನಿಕರು, ಸರ್ಕಾರಿ ನೌಕರರು ಮತ್ತು ವಿವಿಧ ವೃತ್ತಿಯ ಜನರಿದ್ದರು. ಇವರ ನಡುವೆ ಆಹಾರ ಸಂಸ್ಕೃತಿಯ ವಿನಿಮಯ ನಡೆಯಿತು. ಅದಕ್ಕಾಗಿಯೇ ಹಳೆಯ ಮಿಲಿಟರಿ ಹೋಟೆಲ್‌ಗಳು ಕಾಟನ್‌ಪೇಟೆ, ಅಕ್ಕಿಪೇಟೆ, ಚಿಕ್ಕಪೇಟೆ, ಕಲಾಸಿಪಾಳ್ಯ, ಮಲ್ಲೇಶ್ವರಂ ಮುಂತಾದ ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಂಡವು. ಇವುಗಳಿಗೆ ಒಂದು ದೊಡ್ಡ ಅನುಕೂಲವಿತ್ತು: ಗ್ರಾಹಕರಿಗೆ ದುಬಾರಿ ಊಟ ಬೇಡ. ಬೇಗ ಸಿಗುವ, ಖಾರವಾಗಿರುವ, ಮಾಂಸ ಇರುವ, ಹೊಟ್ಟೆ ತುಂಬಿಸುವ ಊಟ ಬೇಕಿತ್ತು. ಮಿಲಿಟರಿ ಹೋಟೆಲ್ ಅದನ್ನು ಪೂರೈಸಿತು.
ಎಸ್.ಜಿ. ರಾವ್ ಮಿಲಿಟರಿ ಹೋಟೆಲ್ – ಶತಮಾನ ದಾಟಿದ ರುಚಿ
ಬೆಂಗಳೂರಿನ ಅತ್ಯಂತ ಹಳೆಯ ಮಿಲಿಟರಿ ಹೋಟೆಲ್‌ಗಳ ಬಗ್ಗೆ ಮಾತನಾಡುವಾಗ ಶ್ರೀ ಗೋವಿಂದ ರಾವ್ ಮಿಲಿಟರಿ ಹೋಟೆಲ್, ಅಂದರೆ SG Rao Military Hotel, ಹೆಸರು ತಪ್ಪದೆ ಬರುತ್ತದೆ. ಕಾಟನ್‌ಪೇಟೆ–ಅಕ್ಕಿಪೇಟೆ ಪ್ರದೇಶದಲ್ಲಿರುವ ಈ ಸಂಸ್ಥೆಯ ಇತಿಹಾಸ 1908ರಷ್ಟು ಹಿಂದಕ್ಕೆ ಹೋಗುತ್ತದೆ ಎಂದು ಕುಟುಂಬದವರು ಮತ್ತು ಹಲವು ವರದಿಗಳು ಹೇಳುತ್ತವೆ. ಗೋವಿಂದ ರಾವ್ ಅವರು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮಾರುಳವಾಡಿ ಗ್ರಾಮದ ಕಡೆಯಿಂದ ಹಳೆಯ ಬೆಂಗಳೂರಿನ ಪೇಟೆ ಪ್ರದೇಶಕ್ಕೆ ಬಂದಿದ್ದರು ಎನ್ನಲಾಗಿದೆ. ಅಡುಗೆಯಲ್ಲಿ ಪರಿಣತರಾಗಿದ್ದ ಅವರು ಮೊದಲು ಇತರ ಊಟದ ಮನೆಗಳಲ್ಲಿ ಕೆಲಸ ಮಾಡಿದರು. ನಂತರ ತಮ್ಮದೇ ಆಹಾರಮನೆ ಆರಂಭಿಸಿದರು.
1908ರಲ್ಲಿ ಅಕ್ಕಿಪೇಟೆಯ ಹಳೆಯ ಪ್ರದೇಶದಲ್ಲಿ ಕೆಲವು ಬೆಂಚುಗಳು ಮತ್ತು ಮೇಜುಗಳೊಂದಿಗೆ, ಒಂದು ಸರಳವಾದ ಛಾವಣಿಯಡಿ ಆರಂಭವಾದ ಹೋಟೆಲ್ ನಂತರ ಜನಪ್ರಿಯವಾಯಿತು. ಇಂದು ಆ ಸಂಸ್ಥೆಯು ಅನೇಕ ತಲೆಮಾರುಗಳನ್ನು ದಾಟಿದೆ. ಇದರ ಮತ್ತೊಂದು ವಿಶೇಷವೆಂದರೆ ಬೆಳಗ್ಗಿನ ಜಾವವೇ ಅಡುಗೆ ಆರಂಭವಾಗುವುದು. ಕೆಲವು ವರದಿಗಳ ಪ್ರಕಾರ ಅಡುಗೆ ಸಿಬ್ಬಂದಿ ಬೆಳಗಿನ 3 ಗಂಟೆಯಲ್ಲೇ ಕೆಲಸ ಆರಂಭಿಸಿ, ಸುಮಾರು 6 ಗಂಟೆಯಿಂದಲೇ ಗ್ರಾಹಕರಿಗೆ ಆಹಾರ ನೀಡುವ ಪರಂಪರೆಯನ್ನು ಮುಂದುವರಿಸಿದ್ದಾರೆ.
ಇಲ್ಲಿ ಬೆಳಗಿನ ತಿಂಡಿಗೆ ಇಡ್ಲಿ ಮಾತ್ರವಲ್ಲ— ಮಟನ್ ಲೆಗ್ ಸೂಪ್, ಪಲಾವ್, ಮಟನ್ ಅಥವಾ ಚಿಕನ್ ಪಲಾವ್ ಮುಂತಾದವುಗಳೂ ಸಿಗುತ್ತವೆ. ಮಧ್ಯಾಹ್ನಕ್ಕೆ, ಖೀಮಾ ಉಂಡೆ, ಮಟನ್ ಲಿವರ್ ಫ್ರೈ, ಚಿಕನ್ ಪೆಪ್ಪರ್ ಡ್ರೈ, ಚಿಲ್ಲಿ ಚಿಕನ್ ಹೀಗೆ ಹಲವು ಖಾದ್ಯಗಳು. ಇಲ್ಲಿನ ಪಲಾವ್‌ನ ಮತ್ತೊಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ ಅನ್ನವನ್ನು ಮಾಂಸದೊಂದಿಗೆ ಬೇಯಿಸುವ ಬದಲು ಮಾಂಸದ ಸ್ಟಾಕ್‌ನಲ್ಲಿ ಬೇಯಿಸುವ ವಿಧಾನ ಎಂದು ವರದಿಯಾಗಿದೆ. ಇಂದಿಗೂ ಬೆಂಗಳೂರಿನ ಪೇಟೆಯ ಹಳೆಯ ರುಚಿಯನ್ನು ಹುಡುಕುವವರಿಗೆ ಈ ಹೋಟೆಲ್ ಒಂದು ಪ್ರಮುಖ ತಾಣ. ಎಸ್.ಜಿ.ರಾವ್ ಮಿಲಿಟರಿ ಹೋಟೆಲ್
ಶಿವಾಜಿ ಮಿಲಿಟರಿ ಹೋಟೆಲ್ – ದೊನ್ನೆ ಬಿರಿಯಾನಿಯ ದಂತಕಥೆ
ಬೆಂಗಳೂರಿನ ಮಿಲಿಟರಿ ಹೋಟೆಲ್‌ಗಳ ಪಟ್ಟಿಯಲ್ಲಿ ಬಹುಶಃ ಅತ್ಯಂತ ಜನಪ್ರಿಯ ಹೆಸರು ಶಿವಾಜಿ ಮಿಲಿಟರಿ ಹೋಟೆಲ್. ಜಯನಗರದ 8ನೇ ಬ್ಲಾಕ್‌ನಲ್ಲಿರುವ ಈ ಹೋಟೆಲ್ ಇಂದಿಗೂ ದೊನ್ನೆ ಬಿರಿಯಾನಿಯ ಅಭಿಮಾನಿಗಳ ಪ್ರಮುಖ ತಾಣವಾಗಿದೆ. ಕೆಲವು ದಾಖಲೆಗಳು ಮತ್ತು ಕುಟುಂಬದವರ ಹೇಳಿಕೆಯ ಪ್ರಕಾರ 1908ರಲ್ಲಿ ಎಸ್. ಮನ್ನಾಜಿ ರಾವ್ ಅವರು ಇದರ ಪರಂಪರೆಯನ್ನು ಆರಂಭಿಸಿದ್ದರು. ಮತ್ತೊಂದು ದಾಖಲೆಗಳಲ್ಲಿ ಪ್ರಸ್ತುತ ಸಂಸ್ಥೆಯ ಆರಂಭವನ್ನು 1924 ಎಂದು ಉಲ್ಲೇಖಿಸಲಾಗಿದೆ. ಅಂದರೆ, ಶಿವಾಜಿ ಮಿಲಿಟರಿ ಹೋಟೆಲ್‌ಗೆ ಶತಮಾನಕ್ಕಿಂತಲೂ ಹಳೆಯ ಪರಂಪರೆ ಇದೆ. ಮರಾಠಾ ಶೈಲಿಯ ಅಡುಗೆಯೇ ಇದರ ವಿಶೇಷತೆ. ಇಲ್ಲಿನ ಅತ್ಯಂತ ಪ್ರಸಿದ್ಧ ಖಾದ್ಯ
ದೊನ್ನೆ ಬಿರಿಯಾನಿ!
ಚಿಕ್ಕ ಗಾತ್ರದ ಅಕ್ಕಿ, ಮಸಾಲೆ, ಮಾಂಸ, ಕೊತ್ತಂಬರಿ, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಸೇರಿದಂತೆ ವಿವಿಧ ಪದಾರ್ಥಗಳ ಸಂಯೋಜನೆಯಿಂದ ತಯಾರಾಗುವ ಈ ಬಿರಿಯಾನಿಯನ್ನು ಸಾಂಪ್ರದಾಯಿಕವಾಗಿ ಕಟ್ಟಿಗೆಯ ಬೆಂಕಿಯಲ್ಲಿ ಬೇಯಿಸಿ, ನಂತರ ಬಾಳೆ ಎಲೆಗಳಿಂದ ತಯಾರಿಸಿದ ದೊನ್ನೆಯಲ್ಲಿ ಬಡಿಸುವುದು ಇದರ ವಿಶೇಷ. ಮಟನ್ ದೊನ್ನೆ ಬಿರಿಯಾನಿ, ಚಿಕನ್ ದೊನ್ನೆ ಬಿರಿಯಾನಿ, ಚಿಕನ್ ಲೆಗ್, ಮಟನ್ ಡ್ರೈ, ಮಟನ್ ಫ್ರೈ, ಪೆಪ್ಪರ್ ಚಿಕನ್, ಚಿಲ್ಲಿ ಚಿಕನ್, ಇವೆಲ್ಲವೂ ಈ ಹೋಟೆಲ್‌ನ ಜನಪ್ರಿಯ ಖಾದ್ಯಗಳ ಪಟ್ಟಿಯಲ್ಲಿವೆ. ಕುಟುಂಬದವರು ಪೀಳಿಗೆಯಿಂದ ಪೀಳಿಗೆಗೆ ರೆಸಿಪಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಕೆಲವು ವರದಿಗಳ ಪ್ರಕಾರ ಮುಖ್ಯ ಅಡುಗೆಯ ರಹಸ್ಯವನ್ನು ಕುಟುಂಬದ ಕೆಲವೇ ಸದಸ್ಯರು ತಿಳಿದುಕೊಂಡಿದ್ದರು. ಹಳೆಯ ಸ್ಥಳದಿಂದ ನಂತರ ಜಯನಗರಕ್ಕೆ ಸ್ಥಳಾಂತರಗೊಂಡರೂ, ರುಚಿಯಲ್ಲಿ ದೊಡ್ಡ ಬದಲಾವಣೆ ಮಾಡದೆ ಪರಂಪರೆಯನ್ನು ಉಳಿಸಿಕೊಂಡಿರುವುದು ಇದರ ವಿಶೇಷತೆ. ಇಂದಿನ ಪೀಳಿಗೆಯ ಯುವಕರು, ಕುಟುಂಬಗಳು ಮತ್ತು ಹಳೆಯ ಗ್ರಾಹಕರು—ಎಲ್ಲರೂ ಇಲ್ಲಿ ಒಂದೇ ಸಾಲಿನಲ್ಲಿ ಕುಳಿತು ಊಟ ಮಾಡುತ್ತಾರೆ.
ರಂಗಣ್ಣ ಮಿಲಿಟರಿ ಹೋಟೆಲ್ – ಕುಸ್ತಿಪಟುವಿನ ಹೆಸರಿನ ಹೋಟೆಲ್!
ರಂಗಣ್ಣ ಮಿಲಿಟರಿ ಹೋಟೆಲ್ ಕೂಡ ಬೆಂಗಳೂರಿನ ಪ್ರಮುಖ ಹಳೆಯ ಮಿಲಿಟರಿ ಹೋಟೆಲ್‌ಗಳಲ್ಲಿ ಒಂದು. ಇದರ ಆರಂಭವನ್ನು 1962ಕ್ಕೆ ಸೇರಿಸುವ ದಾಖಲೆಗಳಿವೆ. ಹೋಟೆಲ್‌ಗೆ ಹೆಸರು ಬಂದಿರುವ ರಂಗಣ್ಣ, ಅಂದಿನ ಪ್ರದೇಶದಲ್ಲಿ ಪ್ರಸಿದ್ಧ ಕುಸ್ತಿಪಟುವಾಗಿದ್ದರು ಎಂದು ಆಹಾರ ಬರಹಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಸಿಗುವ ಕೆಲವು ವಿಶಿಷ್ಟ ಖಾದ್ಯಗಳು, ಮಟನ್ ಖೀಮಾ ಬಾಲ್ಸ್, ಮಟನ್ ಗುರ್ಡಾ, ತಲೆ ಮಾಂಸ, ಪಾಯಾ, ಚಿಕನ್ ಬಿರಿಯಾನಿ, ರಾಗಿ ಮುದ್ದೆ, ವಿವಿಧ ಮಟನ್ ಗ್ರೇವಿಗಳು ವಿಶೇಷವಾಗಿ ಖೀಮಾ ಬಾಲ್ಸ್ ಇಲ್ಲಿನ ಗುರುತಿನ ಖಾದ್ಯಗಳಲ್ಲಿ ಒಂದು. ಪಾಯಾ ಅಥವಾ ಕಾಲಿನ ಮಾಂಸದ ಸೂಪ್ ಅನ್ನು ಬೆಳಗಿನ ಉಪಹಾರದೊಂದಿಗೆ ತಿನ್ನುವ ಸಂಸ್ಕೃತಿಯೂ ಈ ಮಿಲಿಟರಿ ಹೋಟೆಲ್‌ಗಳ ವಿಶಿಷ್ಟತೆಯಾಗಿದೆ. ಇಂದು ರಂಗಣ್ಣ ಮಿಲಿಟರಿ ಹೋಟೆಲ್ ಜಯನಗರದ ಕೃಷ್ಣರಾಜೇಂದ್ರ ರಸ್ತೆಯಲ್ಲಿದೆ.
ಎನ್.ವಿ. ನಾಯ್ಡು ಮಿಲಿಟರಿ ಹೋಟೆಲ್ – ಪೇಟೆಯ ಕಿರಿದಾದ ಜಾಗದಲ್ಲಿ ದೊಡ್ಡ ರುಚಿ

ಸಿಟಿ ಮಾರ್ಕೆಟ್ ಮತ್ತು ಕಲಾಸಿಪಾಳ್ಯ ಪ್ರದೇಶದ ಹಳೆಯ ಮಿಲಿಟರಿ ಹೋಟೆಲ್‌ಗಳಲ್ಲಿ ಎನ್.ವಿ. ನಾಯ್ಡು ಮಿಲಿಟರಿ ಹೋಟೆಲ್ ಕೂಡ ಪ್ರಮುಖ ಹೆಸರು. ಕಿರಿದಾದ ಜಾಗ, ಕಲ್ಲಿನ ಮೇಜು-ಬೆಂಚುಗಳು, ಸರಳ ವಾತಾವರಣ—ಇವೆಲ್ಲವೂ ಈ ರೀತಿಯ ಹಳೆಯ ಹೋಟೆಲ್‌ಗಳ ವಿಶಿಷ್ಟ ಗುರುತು. ಇಲ್ಲಿ ಮಟನ್ ಬಿರಿಯಾನಿ ಮತ್ತು ಚಿಕನ್ ಫ್ರೈ ಜನಪ್ರಿಯವಾಗಿವೆ ಎಂದು ಹಳೆಯ ಆಹಾರ ಮಾರ್ಗದರ್ಶಿಗಳು ದಾಖಲಿಸಿವೆ. ಇಂತಹ ಹೋಟೆಲ್‌ಗಳಲ್ಲಿ ಊಟ ಮಾಡುವ ಅನುಭವವೇ ಒಂದು ರೀತಿಯಲ್ಲಿ ಹಳೆಯ ಬೆಂಗಳೂರಿನ ಪೇಟೆ ಜೀವನವನ್ನು ಅನುಭವಿಸಿದಂತಿರುತ್ತದೆ.
ಗೌಡ್ರು, ಚಂದು ಮತ್ತು ಇತರ ಪೇಟೆ ಪರಂಪರೆಗಳು
ಬೆಂಗಳೂರಿನ ಮಿಲಿಟರಿ ಹೋಟೆಲ್ ಸಂಸ್ಕೃತಿ ಕೇವಲ ಮೂರು-ನಾಲ್ಕು ಹೆಸರುಗಳಿಗೆ ಸೀಮಿತವಾಗಿಲ್ಲ. ಗೌಡ್ರುಸ್ ಮಿಲಿಟರಿ ಹೋಟೆಲ್, ಚಂದುಸ್ ಮಿಲಿಟರಿ ಹೋಟೆಲ್, ರಾಜಣ್ಣ ಮಿಲಿಟರಿ ಹೋಟೆಲ್, ಶಿವಣ್ಣ ಮಿಲಿಟರಿ ಹೋಟೆಲ್, ನಾಯ್ಡು ಮಿಲಿಟರಿ ಹೋಟೆಲ್ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಇಂತಹ ಆಹಾರಮನೆಗಳು ಬೆಳೆದಿವೆ. ಹಳೆಯ ವರದಿಗಳಲ್ಲಿ ಗೌಡ್ರುಸ್ ಇಂದಿರಾನಗರದಲ್ಲೂ, ಚಂದುಸ್ ಮಲ್ಲೇಶ್ವರದಲ್ಲೂ ತಮ್ಮದೇ ಆದ ಗ್ರಾಹಕ ವಲಯ ಹೊಂದಿದ್ದವು ಎಂದು ಉಲ್ಲೇಖಿಸಲಾಗಿದೆ. ಇವುಗಳೆಲ್ಲವೂ ಒಂದೇ ರೀತಿಯ ಆಹಾರ ನೀಡುವುದಿಲ್ಲ. ಪ್ರತಿಯೊಂದು ಹೋಟೆಲ್‌ಗೂ ತನ್ನದೇ ಆದ ಮಸಾಲೆ, ಮಾಂಸ ಬೇಯಿಸುವ ವಿಧಾನ ಮತ್ತು ಪಲಾವ್ ಅಥವಾ ಬಿರಿಯಾನಿಯ ರುಚಿ ಇರುತ್ತದೆ. ಅದೇ ಬೆಂಗಳೂರಿನ ಮಿಲಿಟರಿ ಹೋಟೆಲ್ ಸಂಸ್ಕೃತಿಯ ಸೊಗಸು.
ಮಿಲಿಟರಿ ಹೋಟೆಲ್ ಸೋಮವಾರ ರಜೆ!.
ಹಳೆಯ ಮಿಲಿಟರಿ ಹೋಟೆಲ್‌ಗಳ ಮತ್ತೊಂದು ಕುತೂಹಲಕಾರಿ ಸಂಪ್ರದಾಯವೆಂದರೆ ಸೋಮವಾರ ರಜೆ. ನಗರದ ಅನೇಕ ಹಳೆಯ ಮಿಲಿಟರಿ ಹೋಟೆಲ್‌ಗಳು ಸೋಮವಾರ ಮುಚ್ಚಿರುತ್ತಿದ್ದವು. ಇದಕ್ಕೆ ಧಾರ್ಮಿಕ ಕಾರಣಗಳೂ ಇದ್ದವು ಎಂದು ದಾಖಲಾಗಿದೆ. ಆದರೆ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಗ್ರಾಹಕರ ದಟ್ಟಣೆ ಹೆಚ್ಚಾಗುವುದು ಸಾಮಾನ್ಯವಾಗಿತ್ತು.
ಬ್ರಿಟಿಷ್ ಸೈನಿಕರು ಮತ್ತು ಬೆಳಗಿನ 6 ಗಂಟೆಯ ಊಟ
ಮಿಲಿಟರಿ ಹೋಟೆಲ್‌ಗಳ ಇನ್ನೊಂದು ವಿಶೇಷತೆ ಅವು ಬೇಗ ತೆರೆಯುತ್ತಿದ್ದವು. ಇಂದಿನ ಹೋಟೆಲ್‌ಗಳು ಬೆಳಗ್ಗೆ 8 ಅಥವಾ 9 ಗಂಟೆಗೆ ತೆರೆಯುವ ಕಾಲಕ್ಕಿಂತ ಬಹಳ ಹಿಂದೆಯೇ ಕೆಲವು ಮಿಲಿಟರಿ ಹೋಟೆಲ್‌ಗಳಲ್ಲಿ ಅಡುಗೆ ಶುರುವಾಗುತ್ತಿತ್ತು. SG Rao ಕುಟುಂಬದ ನೆನಪುಗಳ ಪ್ರಕಾರ, ಬ್ರಿಟಿಷ್ ಸೈನಿಕರು ಬೆಳಗ್ಗೆಯೇ ತಮ್ಮ ದಿನಚರಿ ಆರಂಭಿಸುತ್ತಿದ್ದರಿಂದ ಅವರು ಬೆಳಗ್ಗೆ 6 ಗಂಟೆಯ ವೇಳೆಗೆ ಊಟಕ್ಕಾಗಿ ಇಂತಹ ಸ್ಥಳಗಳಿಗೆ ಬರುತ್ತಿದ್ದರು. ಇಡ್ಲಿ, ಪಾಯಾ, ಪಲಾವ್, ಬಿರಿಯಾನಿ ಮುಂತಾದ ಆಹಾರಗಳು ಅವರ ಗಮನ ಸೆಳೆದವು. ಹೀಗೆ ಸೈನಿಕರ ಓಡಾಟ ಹೆಚ್ಚಾದಂತೆ ಜನರು ಆ ಊಟದ ಮನೆಯನ್ನು ಮಿಲಿಟರಿ ಹೋಟೆಲ್ ಎಂದು ಕರೆಯಲು ಆರಂಭಿಸಿದರು ಎಂಬ ಕುಟುಂಬದ ವಿವರಣೆಯೂ ಇದೆ.
ಮಿಲಿಟರಿ ಹೋಟೆಲ್‌ಗಳ ಆಹಾರ ಇಷ್ಟು ಖಾರವಾಗಿರುವುದೇಕೆ?
ಇದರಲ್ಲೂ ಇತಿಹಾಸವಿದೆ. ಮರಾಠ ಮತ್ತು ದಕ್ಷಿಣ ಭಾರತದ ಗ್ರಾಮೀಣ ಮಾಂಸಾಹಾರಿ ಅಡುಗೆಗಳಲ್ಲಿ ಖಾರ ಮಸಾಲೆಗೆ ವಿಶೇಷ ಸ್ಥಾನವಿದೆ. ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕೊತ್ತಂಬರಿ, ಜೀರಿಗೆ, ಕಾಳುಮೆಣಸು, ಲವಂಗ, ದಾಲ್ಚಿನ್ನಿ, ಬೆಳ್ಳುಳ್ಳಿ, ಶುಂಠಿ, ಈರುಳ್ಳಿ ಮತ್ತು ತುಪ್ಪದ ಸಂಯೋಜನೆಯಿಂದ ತಯಾರಾಗುವ ಗಟ್ಟಿಯಾದ ಮಸಾಲೆ ಮಾಂಸಕ್ಕೆ ವಿಶಿಷ್ಟ ರುಚಿ ನೀಡುತ್ತದೆ. ಇದು ಇಂದಿನ ಕೆಲವು ರೆಸ್ಟೋರೆಂಟ್‌ಗಳ “ಮೈಲ್ಡ್” ಗ್ರೇವಿಯಂತಲ್ಲ. ಮಿಲಿಟರಿ ಹೋಟೆಲ್‌ನ ಆಹಾರ ನಾಲಿಗೆಗೆ ಸವಾಲು ಹಾಕುವಷ್ಟು ಖಾರವಾಗಿರಬೇಕು; ಹೊಟ್ಟೆ ತುಂಬುವಷ್ಟು ಪ್ರಮಾಣದಲ್ಲಿರಬೇಕು; ಕೆಲಸ ಮಾಡುವ ಮನುಷ್ಯನಿಗೆ ಶಕ್ತಿ ನೀಡಬೇಕು. ಅದರಲ್ಲೇ ಅದರ ಜನಪ್ರಿಯತೆಯ ಒಂದು ರಹಸ್ಯವಿದೆ.
ದೊನ್ನೆ ಬಿರಿಯಾನಿ ಹೇಗೆ ವಿಶೇಷವಾಯಿತು?
ಮಿಲಿಟರಿ ಹೋಟೆಲ್‌ಗಳ ಪ್ರಮುಖ ಕೊಡುಗೆಗಳಲ್ಲಿ ಒಂದು ದೊನ್ನೆ ಬಿರಿಯಾನಿ/ಪಲಾವ್ ಸಂಸ್ಕೃತಿ. ದೊಣ್ಣೆ ಎಂದರೆ ಎಲೆಗಳಿಂದ ತಯಾರಿಸಿದ ಸಣ್ಣ ಬಟ್ಟಲಿನಂತಹ ಪಾತ್ರೆ. ಇದರಲ್ಲಿ ಬಿರಿಯಾನಿ ಅಥವಾ ಪಲಾವ್ ನೀಡುವುದು ಹಳೆಯ ಪೇಟೆ ಊಟದ ಸಂಸ್ಕೃತಿಯ ಭಾಗ. ಇದರ ಅಡುಗೆ ವಿಧಾನವೂ ವಿಶಿಷ್ಟ. ಕೆಲವು ಹಳೆಯ ಹೋಟೆಲ್‌ಗಳಲ್ಲಿ ಸಣ್ಣ ಧಾನ್ಯಗಳ ಅಕ್ಕಿಯನ್ನು ಮಾಂಸದ ಸ್ಟಾಕ್, ಮಸಾಲೆ ಮತ್ತು ತುಪ್ಪದೊಂದಿಗೆ ಬೇಯಿಸಿ ಅದರೊಂದಿಗೆ ಮಾಂಸವನ್ನು ನೀಡಲಾಗುತ್ತಿತ್ತು. ಕೆಲವು ಕಡೆಗಳಲ್ಲಿ ಮರದ ಬೆಂಕಿ ಅಥವಾ ಕಲ್ಲಿದ್ದಲಿನ ಉರಿಯಲ್ಲಿ ಅಡುಗೆ ಮಾಡುವ ಪದ್ಧತಿಯೂ ಮುಂದುವರಿದಿದೆ.
ಬೆಂಗಳೂರಿನಿಂದ ಕರ್ನಾಟಕದ ಇತರ ಭಾಗಗಳಿಗೆ
ಬೆಂಗಳೂರಿನಲ್ಲಿ ಈ ಪರಂಪರೆ ಅತ್ಯಂತ ಪ್ರಸಿದ್ಧವಾದರೂ, ಮಾಂಸಾಹಾರಿ ಊಟದ ಮನೆಗಳ ಇಂತಹ ಸಂಸ್ಕೃತಿ ಕರ್ನಾಟಕದ ಬೇರೆ ನಗರಗಳಲ್ಲೂ ವಿವಿಧ ಹೆಸರುಗಳಲ್ಲಿ ಕಾಣಿಸಿಕೊಂಡಿದೆ. ಮೈಸೂರು, ತುಮಕೂರು, ಕೋಲಾರ, ಮಂಡ್ಯ, ರಾಮನಗರ, ಚಿತ್ರದುರ್ಗ, ಶಿವಮೊಗ್ಗ, ಹಾಸನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸ್ಥಳೀಯ ಮಾಂಸಾಹಾರಿ ಊಟದ ಮನೆಗಳು ತಮ್ಮದೇ ಆದ ಹೆಸರು ಮತ್ತು ಶೈಲಿಯಲ್ಲಿ ಬೆಳೆದಿವೆ. ಆದರೆ “ಮಿಲಿಟರಿ ಹೋಟೆಲ್” ಎಂಬ ಪದಕ್ಕೆ ಅತ್ಯಂತ ಗಾಢವಾದ ನಗರ ಸಂಸ್ಕೃತಿಯ ಗುರುತು ಬೆಂಗಳೂರಿನಲ್ಲೇ ರೂಪುಗೊಂಡಿದೆ.
ರಾಗಿ ಮುದ್ದೆ ಮತ್ತು ಮಟನ್ ಸಾರು – ಬೆಂಗಳೂರಿನ ದೇಶಿ ಕಾಂಬಿನೇಷನ್
ಇಂದಿನ ಫಾಸ್ಟ್ ಫುಡ್ ಸಂಸ್ಕೃತಿಯಲ್ಲಿ ಬರ್ಗರ್, ಪಿಜ್ಜಾ, ಫ್ರೈಡ್ ಚಿಕನ್ ಎಷ್ಟೇ ಜನಪ್ರಿಯವಾಗಿದ್ದರೂ, ಹಳೆಯ ಬೆಂಗಳೂರಿನ ಆಹಾರ ಸಂಸ್ಕೃತಿಯಲ್ಲಿ ರಾಗಿ ಮುದ್ದೆ + ಮಟನ್ ಸಾರುಗೆ ಇರುವ ಸ್ಥಾನವೇ ಬೇರೆ. ರಾಗಿ ಮುದ್ದೆ ಕರ್ನಾಟಕದ ಗ್ರಾಮೀಣ ಆಹಾರ ಪರಂಪರೆಯ ಪ್ರತಿನಿಧಿ. ಮಟನ್ ಸಾರು ಅಥವಾ ಮಟನ್ ಗ್ರೇವಿ ನಗರ-ಪೇಟೆಯ ಮಾಂಸಾಹಾರಿ ಅಡುಗೆಯ ಪ್ರತಿನಿಧಿ. ಈ ಎರಡರ ಸಂಯೋಜನೆಯೇ ಒಂದು ರೀತಿಯಲ್ಲಿ ನಗರ ಮತ್ತು ಗ್ರಾಮೀಣ ಕರ್ನಾಟಕದ ಆಹಾರ ಸಂಸ್ಕೃತಿಯ ಸಂಗಮ.
ಇಂದಿನ ಫುಡ್‌ಚೈನ್‌ಗಳ ಯುಗದಲ್ಲೂ ಮಿಲ್ಟ್ರಿ ಹೋಟೆಲ್ ಏಕೆ ಉಳಿದಿದೆ?
ಇಂದು ಒಂದು ಕಡೆ ಪಿಜ್ಜಾ, ಬರ್ಗರ್, ಕಬಾಬ್, ಅಫ್ಘಾನಿ, ಅರೇಬಿಕ್, ಚೆಟ್ಟಿನಾಡು, ಹೈದರಾಬಾದಿ ಬಿರಿಯಾನಿ, ಆಂಧ್ರ ಊಟ ಮುಂತಾದ ನೂರಾರು ಆಯ್ಕೆಗಳಿವೆ. ಆದರೂ ಜನರು ಹಳೆಯ ಮಿಲಿಟರಿ ಹೋಟೆಲ್ ಹುಡುಕಿಕೊಂಡು ಹೋಗುತ್ತಾರೆ. ಏಕೆ? ರುಚಿಗಾಗಿ. ಆದರೆ ಅದಕ್ಕಿಂತ ಮುಖ್ಯವಾಗಿ— ನೆನಪಿಗಾಗಿ.
ಅಜ್ಜ ಊಟ ಮಾಡುತ್ತಿದ್ದ ಜಾಗ. ತಂದೆ ಸ್ನೇಹಿತರೊಂದಿಗೆ ಬಿರಿಯಾನಿ ತಿನ್ನುತ್ತಿದ್ದ ಹೋಟೆಲ್. ವಿದ್ಯಾರ್ಥಿಯಾಗಿದ್ದಾಗ ಮೊದಲ ಬಾರಿಗೆ ಮಟನ್ ಪಲಾವ್ ತಿಂದ ಜಾಗ. ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಾಗ ಕಡಿಮೆ ಹಣದಲ್ಲಿ ಹೊಟ್ಟೆ ತುಂಬಿಸಿಕೊಂಡ ಊಟದ ಮನೆ. ಇವೆಲ್ಲವೂ ಮಿಲಿಟರಿ ಹೋಟೆಲ್‌ಗಳನ್ನು ಕೇವಲ “ರೆಸ್ಟೋರೆಂಟ್” ಆಗಿರದಂತೆ ಮಾಡಿವೆ. ಅವು ಒಂದು ನಗರದ ಸ್ಮೃತಿ ಭಂಡಾರಗಳಾಗಿವೆ.
ಕೊನೆಯ ಮಾತು
ಇಂದು ಬೆಂಗಳೂರಿನ ಪ್ರತಿಯೊಂದು ಬಡಾವಣೆಯಲ್ಲೂ ದೊಡ್ಡದೊಡ್ಡ ಮಾಂಸಾಹಾರಿ ಹೋಟೆಲ್‌ಗಳು, ಬಿರಿಯಾನಿ ಸೆಂಟರ್‌ಗಳು ಮತ್ತು ಫುಡ್‌ಚೈನ್‌ಗಳು ಕಾಣುತ್ತವೆ. ಆದರೆ ಇವೆಲ್ಲಕ್ಕೂ ಮುನ್ನ ನಗರದ ಪೇಟೆಯ ಸಣ್ಣ ಗಲ್ಲಿಗಳಲ್ಲಿ ಕೆಲವು ಮರದ ಬೆಂಚುಗಳ ನಡುವೆ, ದೊಡ್ಡ ಪಾತ್ರೆಯಲ್ಲಿ ಕುದಿಯುತ್ತಿದ್ದ ಮಾಂಸದ ಸಾರು, ಒಲೆಯ ಮೇಲಿನ ಪಲಾವ್ ಮತ್ತು ಬಾಳೆ ಎಲೆಯ ಮೇಲೆ ಬರುವ ಬಿಸಿ ರಾಗಿ ಮುದ್ದೆಯೊಂದಿಗೆ ಒಂದು ವಿಭಿನ್ನ ಆಹಾರ ಸಂಸ್ಕೃತಿ ಬದುಕುತ್ತಿತ್ತು.
ಅದು ಮಿಲ್ಟ್ರಿ ಹೋಟೆಲ್ ಸಂಸ್ಕೃತಿ.
ಇದರ ಇತಿಹಾಸದಲ್ಲಿ ಮರಾಠರ ಪಾತ್ರ ಮಹತ್ವದ್ದಾಗಿರಬಹುದು. ಸೈನಿಕರ ಪಾತ್ರವೂ ಇರಬಹುದು. ಬ್ರಿಟಿಷ್ ಕ್ಯಾಂಟೋನ್ಮೆಂಟ್‌ಗಳ ಪ್ರಭಾವವೂ ಇರಬಹುದು. ಆದರೆ ಕಾಲಕ್ರಮೇಣ ಅದು ಯಾವ ಒಂದು ಸಮುದಾಯಕ್ಕೂ ಸೇರದ ಬೆಂಗಳೂರಿನ ಸ್ವಂತ ಆಹಾರ ಪರಂಪರೆಯಾಗಿ ರೂಪುಗೊಂಡಿತು.
ಅದರಲ್ಲೇ ಮಿಲಿಟರಿ ಹೋಟೆಲ್‌ಗಳ ನಿಜವಾದ ವೈಶಿಷ್ಟ್ಯ ಅಡಗಿದೆ.
ಹೆಸರಿನಲ್ಲಿ ಮಿಲಿಟರಿ ಇದ್ದರೂ, ಅದರ ಆತ್ಮದಲ್ಲಿ ಇರುವುದು ಸೇನೆಯಲ್ಲ. ಬೆಂಗಳೂರಿನ ಪೇಟೆ, ಅದರ ಜನ, ಅವರ ಹಸಿವು ಮತ್ತು ತಲೆಮಾರುಗಳಿಂದ ಸಾಗಿಬಂದ ಮಾಂಸಾಹಾರದ ರುಚಿ. ಬಹುಶಃ ಅದಕ್ಕಾಗಿಯೇ ಒಂದು ಶತಮಾನ ಕಳೆದರೂ, ಮಾಸಾಂಹಾರಿಗಳು ಮಿಲ್ಟ್ರಿ ಹೋಟೆಲ್‌ಗೆ ಹೋಗೋಣ ಎಂಬ ಮಾತು ಬೆಂಗಳೂರಿನ ಆಹಾರ ಸಂಸ್ಕೃತಿಯಲ್ಲಿ ಇನ್ನೂ ವಿಶೇಷ ಅರ್ಥವನ್ನು ಹೊಂದಿದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಉತ್ತಮ ಲೇಖನ, ಆದರೆ ತುಂಬಾ ಜಾಸ್ತಿ ವಿವರಣೆ ಆಯಿತು
ಲೇಖನದ ಗುಣಮಟ್ಟ ಚೆನ್ನಾಗಿ ಇರಬೇಕು ಎಂದಲ್ಲಿ ಹೆಚ್ಚಿನ ಮತ್ತು ಉತ್ತಮವಾದ ಮಾಹಿತಿ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ.
ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ಧನ್ಯವಾದಗಳು