ಬೆಂಗಳೂರಿನಲ್ಲಿ ಆಗ ತಾನೇ ಎಂಜಿನಿಯರಿಂಗ್ ಮುಗಿಸಿದ್ದ 22 ವರ್ಷದ ಆದಿತ್ಯನಿಗೆ ನೂರಾರು ಕನಸು. ತನ್ನ ಪದವಿ ಮುಗಿಯುತ್ತಿದ್ದಂತೆಯೇ ಕೈ ತುಂಬಾ ಸಂಬಳ. ಆ ಸಂಬಳದಲ್ಲಿ ಒಳ್ಳೊಳ್ಳೆ ಬಟ್ಟೆ, ಗಾಡಿಗಳನ್ನು ಖರೀಧಿಸಿ ಜೀವನವನ್ನು ಅತ್ಯಂತ ಸಂಭ್ರಮದಿಂದ ನಡೆಸಬಹುದು ಎಂಬ ಆಸೆ. ಆದಕ್ಕೆ ತಕ್ಕಂತೆ ಆತನ ಕೆಲವು ಗೆಳೆಯರು ಕ್ಯಾಂಪಸ್ ಸೆಲೆಕ್ಷನ್ ಆಗಿ, ತಿಂಗಳಿಗೆ ಸಾವಿರಾರು ರೂಪಾಯಿ ಸಂಬಳವನ್ನು ಎಣಿಸುತ್ತಿದ್ದದ್ದು ಅವನ ಕನಸಿಗೆ ಮತ್ತಷ್ಟು ಪುಷ್ಠಿಯನ್ನು ಕೊಟ್ಟಿತ್ತು. ಆದರೆ ಅವನು ಮಾಡುತ್ತಿದ್ದ ತಪ್ಪೆಂದರೆ, ಕಾಲೇಜಿನಲ್ಲಿ ಓದಿದ್ದ ಪಠ್ಯಕ್ಕಿಂತಲೂ ಕಂಪನಿಗಳಲ್ಲಿ ಮಾಡುವ ಕೆಲಸವೇ ಬೇರೆ ಅದಕ್ಕೆ ತಕ್ಕ ಕೌಶಲ್ಯ ಮತ್ತು ಹೊಸಾ ಹೊಸಾ ತಂತ್ರಜ್ಞಾನವನ್ನು ಆಧ್ಯಯನ ಮಾಡಬೇಕು ಎಂಬುದು ಗೋತ್ತಿದ್ದರೂ, ಕೆಲಸಕ್ಕೆ ತಾನು ಪ್ರಯತ್ನ ಪಡುವುದಕ್ಕಿಂತಲೂ ಕೆಲಸವೇ ನನ್ನನ್ನು ಹುಡುಕಿಕೊಂಡು ಬರಬೇಕು ಎಂಬ ಧೋರಣೆ. ಹಾಗಾಗಿಯೇ ಪದವಿ ಮುಗಿಸಿ ಒಂದು ವರ್ಷವಾದರೂ ಇನ್ನೂ ಕೆಲಸ ಸಿಕ್ಕಿರಲಿಲ್ಲ. ಕೆಲವು ಕಂಪನಿಗಳಿಗೆ ಸಂದರ್ಶನಗಳಿಗೆ ಹೋಗಿದ್ದ. ಆದರೆ ಪ್ರತಿ ಬಾರಿಯೂ ಒಂದೇ ಉತ್ತರ…
“We will get back to you.”
ಆದರೆ ಯಾರೂ ಹಿಂದಿರುಗಿ ಬರಲಿಲ್ಲ. ಸ್ನೇಹಿತರಲ್ಲಿ ಕೆಲವರು ವಿದೇಶಕ್ಕೆ ಹೋಗಿದ್ದರು. ಇನ್ನೂ ಕೆಲವರು ಒಳ್ಳೆಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣ ತೆರೆದರೆ ಎಲ್ಲರೂ ಯಶಸ್ವಿಗಳಂತೆ ಕಾಣುತ್ತಿದ್ದರು. ಯಾರೋ ಹೊಸ ಕಾರು ಖರೀದಿಸಿದ್ದರು. ಯಾರೋ ವಿದೇಶ ಪ್ರವಾಸದಲ್ಲಿದ್ದರು. ಯಾರೋ ತಮ್ಮ ಸ್ಟಾರ್ಟ್‌ಅಪ್ ಆರಂಭಿಸಿದ್ದರು. ಆದಿತ್ಯ ಮಾತ್ರ ತನ್ನ ಕೋಣೆಯೊಳಗೆ ಕುಳಿತು, “ನನ್ನ ಜೀವನದಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ?” ಎಂದು ತನ್ನನ್ನೇ ಪ್ರಶ್ನಿಸಿಕೊಳ್ಳುತ್ತಿದ್ದ. ಕ್ರಮೇಣ ಆತ ತನ್ನ ಮೇಲಿನ ನಂಬಿಕೆಯನ್ನೇ ಕಳೆದುಕೊಂಡ.
ನನಗೆ ಗಣೇಶನ ಮೇಲೆ ನಂಬಿಕೆ ಇದೆ…
ಆ ವರ್ಷ ಗೌರಿ–ಗಣೇಶ ಹಬ್ಬ ಬಂದಿತ್ತು. ತಾಯಿ ಮನೆಯ ಮುಂದೆ ಪುಟ್ಟ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದಳು. ಪ್ರತಿ ವರ್ಷವೂ ಮಾಡುವಂತೆ ಬೆಳಿಗ್ಗೆ ಪೂಜೆ ಮಾಡಿದಳು. ಆದರೆ ಆದಿತ್ಯ ಪೂಜೆಗೆ ಬರಲಿಲ್ಲ. ತಾಯಿ ಕರೆದಳು. ಆದಿತ್ಯ… ಬಾ ಮಗಾ. ಗಣೇಶನಿಗೆ ನಮಸ್ಕಾರ ಮಾಡು. ಅವನು ಕೋಪದಿಂದ, ಅಮ್ಮ, ನಮಸ್ಕಾರ ಮಾಡಿದರೆ ಕೆಲಸ ಸಿಗುತ್ತಾ? ಎಂದ.
ತಾಯಿ ಏನೂ ಹೇಳಲಿಲ್ಲ. ಸ್ವಲ್ಪ ಹೊತ್ತು ಮೌನವಾಗಿದ್ದಳು. ನಂತರ ನಿಧಾನವಾಗಿ ಹೇಳಿದಳು: ಕೆಲಸ ಸಿಗುವುದಿಲ್ಲ ಮಗಾ… ಆದರೆ ಕೆಲಸ ಹುಡುಕುವ ಶಕ್ತಿ ಸಿಗಬಹುದು. ಆ ಮಾತು ಆದಿತ್ಯನ ಮನಸ್ಸಿನಲ್ಲಿ ಉಳಿಯಿತು.
ಆ ರಾತ್ರಿ ನಡೆದದ್ದು
ಆ ರಾತ್ರಿ ವಿದ್ಯುತ್ ಹೋಗಿತ್ತು. ಮನೆಯಲ್ಲಿದ್ದವರು ಎಲ್ಲರೂ ಹೊರಗೆ ಕುಳಿತಿದ್ದರು. ಆದಿತ್ಯ ಮಾತ್ರ ಗಣೇಶನ ಮೂರ್ತಿಯ ಮುಂದೆ ಕುಳಿತಿದ್ದ. ಅವನ ಕಣ್ಣುಗಳಲ್ಲಿ ಕಣ್ಣೀರು.
ಗಣಪತಿ… ನನಗೆ ಒಂದು ಅವಕಾಶ ಕೊಡು. ನನ್ನ ಜೀವನ ಬದಲಾಗಲಿ. ನಾನು ಏನಾದರೂ ಸಾಧಿಸಬೇಕು. ಎಂದು ಹೇಳಿ ಕಣ್ಣು ಮುಚ್ಚಿದ. ಅಷ್ಟರಲ್ಲಿ ಹೊರಗೆ ಮಳೆ ಆರಂಭವಾಯಿತು. ಸ್ವಲ್ಪ ಹೊತ್ತಿನ ನಂತರ ಗಾಳಿ ಜೋರಾಯಿತು. ಮನೆಯ ಹೊರಗೆ ಇಟ್ಟಿದ್ದ ಗಣೇಶನ ಮಂಟಪದ ಒಂದು ಭಾಗ ಕುಸಿಯತೊಡಗಿತು. ಆದಿತ್ಯ ತಕ್ಷಣ ಎದ್ದು ಗಣೇಶನ ಮೂರ್ತಿಯನ್ನು ಒಳಗೆ ತೆಗೆದುಕೊಂಡು ಬಂದ. ಮೂರ್ತಿಯನ್ನು ಸುರಕ್ಷಿತವಾಗಿ ಇಟ್ಟು ಮತ್ತೆ ಕುಳಿತ. ಆ ಕ್ಷಣದಲ್ಲಿ ಅವನಿಗೆ ಒಂದು ವಿಚಾರ ಹೊಳೆಯಿತು. ಗಣೇಶನನ್ನೇ ನಾನು ಕಾಪಾಡಿದೆ ಎಂದುಕೊಂಡೆ. ಆದರೆ ನಿಜವಾಗಿ ಅವರು ನನ್ನನ್ನೇ ಎಬ್ಬಿಸಿದರೇ?
ಮರುದಿನ ಬೆಳಗ್ಗೆ…
ತಾಯಿ ಅವನಿಗೆ ಗಣೇಶನ ಕಥೆಯೊಂದನ್ನು ಹೇಳಿದಳು. ಗಣೇಶ ಮತ್ತು ಕಾರ್ತಿಕೇಯರ ನಡುವೆ ನಡೆದ ವಿಶ್ವಪ್ರದಕ್ಷಿಣೆಯ ಕಥೆ. ಯಾರು ಮೊದಲು ಮೂರು ಲೋಕಗಳನ್ನು ಸುತ್ತಿ ಬರುತ್ತಾರೋ ಅವರು ಶ್ರೇಷ್ಠ” ಎಂಬ ಸವಾಲು ಬಂದಾಗ ಕಾರ್ತಿಕೇಯ ತಮ್ಮ ವೇಗದ ವಾಹನದಲ್ಲಿ ಹೊರಟರು. ಗಣೇಶ ಮಾತ್ರ ತಮ್ಮ ತಂದೆ ಶಿವ ಮತ್ತು ತಾಯಿ ಪಾರ್ವತಿಯ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದರು. ಅವರ ಉತ್ತರ:ನನಗೆ ನನ್ನ ತಂದೆ–ತಾಯಿಯೇ ಮೂರು ಲೋಕಗಳು. ಕಥೆಯ ಸಾರವೇನು? ವೇಗಕ್ಕಿಂತ ವಿವೇಕ ದೊಡ್ಡದು.
ಆದಿತ್ಯನಿಗೆ ಉತ್ತರ ಸಿಕ್ಕಿತ್ತು
ಆದಿತ್ಯ ತನ್ನ ಬದುಕನ್ನು ಹಿಂದಿರುಗಿ ನೋಡಿದ. ಇಷ್ಟು ದಿನ ಅವನು ಏನು ಮಾಡಿದ್ದ? ಒಂದೇ ರೀತಿಯ ನೂರಾರು ಉದ್ಯೋಗಗಳಿಗೆ ಅರ್ಜಿ ಹಾಕಿದ್ದ. ಯಾರಾದರೂ ಕೆಲಸ ಕೊಡುತ್ತಾರೆ ಎಂದು ಕಾಯುತ್ತಿದ್ದ. ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿರಲಿಲ್ಲ. ಹೊಸ ತಂತ್ರಜ್ಞಾನ ಕಲಿತಿರಲಿಲ್ಲ. ಸಂದರ್ಶನದಲ್ಲಿ ವಿಫಲವಾದಾಗ ಕಾರಣ ಹುಡುಕಿರಲಿಲ್ಲ. ಅವನು ಅರ್ಥಮಾಡಿಕೊಂಡ ನಾನು ಕೆಲಸ ಹುಡುಕುತ್ತಿದ್ದೆ. ಆದರೆ ನನ್ನನ್ನು ಕೆಲಸಕ್ಕೆ ಯೋಗ್ಯನನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ. ಅದು ಅವನ ಜೀವನದ ಮೊದಲ ದೊಡ್ಡ ತಿರುವು.
ಮುಂದಿನ 100 ದಿನಗಳು
ಆದಿತ್ಯ ಒಂದು ನಿರ್ಧಾರ ತೆಗೆದುಕೊಂಡ. ಮುಂದಿನ 100 ದಿನ ನಾನು ಯಾರನ್ನೂ ದೂರುವುದಿಲ್ಲ. ಪ್ರತಿ ದಿನ ಬೆಳಿಗ್ಗೆ 5ಕ್ಕೆ ಎದ್ದ. ಎರಡು ಗಂಟೆ ಹೊಸ ತಂತ್ರಜ್ಞಾನ ಕಲಿತ. ಒಂದು ಗಂಟೆ ಇಂಗ್ಲಿಷ್ ಸಂವಹನ ಅಭ್ಯಾಸ ಮಾಡಿದ. ಪ್ರತಿದಿನ ಒಂದು Mock Interview. ವಾರಕ್ಕೆ ಕನಿಷ್ಠ ಐದು ಹೊಸ ಜನರೊಂದಿಗೆ ವೃತ್ತಿಪರ ಸಂಪರ್ಕ. ತನ್ನ ಹಳೆಯ Resume ಬದಲಿಸಿದ. LinkedIn ಪ್ರೊಫೈಲ್ ಸುಧಾರಿಸಿದ. ಸಣ್ಣ ಸಣ್ಣ Projectಗಳನ್ನು ನಿರ್ಮಿಸಿದ. ಮತ್ತು ಮುಖ್ಯವಾಗಿ… ನಾನು ಸಾಧ್ಯವಿಲ್ಲ ಎಂಬ ಪದವನ್ನು ತನ್ನ ಶಬ್ದಕೋಶದಿಂದ ತೆಗೆದುಹಾಕಿದ.
90ನೇ ದಿನ…
ಒಂದು ಬಹುರಾಷ್ಟ್ರೀಯ ಕಂಪನಿಯಿಂದ ಸಂದರ್ಶನಕ್ಕೆ ಕರೆ ಬಂತು. ಅವನು ಹೋದ. ಮೊದಲ ಸುತ್ತು ಪಾಸ್. ಎರಡನೇ ಸುತ್ತು ಪಾಸ್. ಮೂರನೇ ಸುತ್ತಿನಲ್ಲಿ ಒಂದು ಪ್ರಶ್ನೆ ಕೇಳಲಾಯಿತು. ನೀವು ಕಳೆದ ಒಂದು ವರ್ಷದಲ್ಲಿ ಏನು ಕಲಿತಿದ್ದೀರಿ? ಆದಿತ್ಯ ಕ್ಷಣಕಾಲ ಮೌನವಾಗಿದ್ದ.ನಂತರ ಹೇಳಿದ,
ಸರ್, ಕಳೆದ ಒಂದು ವರ್ಷದಲ್ಲಿ ನಾನು ಕೆಲಸ ಪಡೆಯಲಿಲ್ಲ. ಆದರೆ ಆ ಒಂದು ವರ್ಷ ನನಗೆ ನನ್ನನ್ನೇ ಕಂಡುಕೊಳ್ಳುವ ಅವಕಾಶ ಕೊಟ್ಟಿತು.
ಸಂದರ್ಶನ ಮಂಡಳಿ ಅವನ ಉತ್ತರವನ್ನು ಗಮನದಿಂದ ಕೇಳಿತು. ಅವನು ತನ್ನ ವಿಫಲತೆಗಳನ್ನು ಮುಚ್ಚಲಿಲ್ಲ. ಅವುಗಳಿಂದ ಕಲಿತ ಪಾಠಗಳನ್ನು ವಿವರಿಸಿದ. ಎರಡು ದಿನಗಳ ನಂತರ ಫೋನ್ ಬಂತು. Congratulations, you are selected.
ಆದಿತ್ಯನ ಮೊದಲ ಸಂಬಳ
ಮೊದಲ ಸಂಬಳ ಬಂದ ದಿನ. ತಾಯಿಯ ಕೈಗೆ ಒಂದು ಲಕೋಟೆ ಕೊಟ್ಟ. ತಾಯಿ ತೆರೆದಳು. ಅದರೊಳಗೆ ಒಂದು ಚಿಕ್ಕ ಗಣೇಶನ ಬೆಳ್ಳಿ ಮೂರ್ತಿ ಇತ್ತು. ತಾಯಿ ಆಶ್ಚರ್ಯದಿಂದ ನೋಡಿದಳು. ಆದಿತ್ಯ ಹೇಳಿದ: ಅಮ್ಮ, ಕೆಲಸ ಸಿಕ್ಕಿದ್ದು ಗಣೇಶನ ಕೃಪೆಯಿಂದ ಅಂತ ನಾನು ಹೇಳುವುದಿಲ್ಲ. ತಾಯಿ ಅವನ ಮುಖ ನೋಡಿದಳು. ಅವನು ಮುಂದುವರಿಸಿದ:
ಗಣೇಶ ನನ್ನ ಪರವಾಗಿ ಸಂದರ್ಶನಕ್ಕೆ ಹೋಗಲಿಲ್ಲ. ನನ್ನ ಬದಲು ಓದಲಿಲ್ಲ. ನನ್ನ Resume ಕೂಡ ಅವರು ಬರೆಯಲಿಲ್ಲ. ಸ್ವಲ್ಪ ನಗುತ್ತಾ ಹೇಳಿದ: ಆದರೆ, ನಾನು ಸೋತು ಕುಳಿತಿದ್ದಾಗ, ಮತ್ತೆ ಎದ್ದು ನಿಲ್ಲಲು ಬೇಕಾದ ಬುದ್ಧಿ ಕೊಟ್ಟದ್ದು ಅವರ ಕೃಪೆ. ತಾಯಿಯ ಕಣ್ಣುಗಳಲ್ಲಿ ನೀರು ತುಂಬಿತು.
ಕೆಲವು ವರ್ಷಗಳ ನಂತರ…
ಆದಿತ್ಯ ತನ್ನದೇ ಸಂಸ್ಥೆ ಆರಂಭಿಸಿದ. ಒಂದು ದಿನ ಅವನ ಬಳಿ ಕೆಲಸಕ್ಕಾಗಿ ಒಬ್ಬ ಯುವಕ ಬಂದ. ಅವನ ಮುಖದಲ್ಲಿ ಅದೇ ನಿರಾಶೆ. ಅದೇ ಭಯ. ಅದೇ ಪ್ರಶ್ನೆ. ಸರ್, ನನಗೆ ಕೆಲಸ ಸಿಗುತ್ತಿಲ್ಲ. ನನ್ನ ಅದೃಷ್ಟವೇ ಕೆಟ್ಟಿದೆ. ಆದಿತ್ಯ ಅವನನ್ನು ಕುಳಿತುಕೊಳ್ಳಲು ಹೇಳಿದ. ಮೇಜಿನ ಮೇಲಿದ್ದ ಗಣೇಶನ ಮೂರ್ತಿಯನ್ನು ತೋರಿಸಿ ಹೇಳಿದ: ಇವರನ್ನು ನೋಡು.
- ಗಣೇಶನಿಗೆ ದೊಡ್ಡ ತಲೆ ಏಕೆ ಗೊತ್ತಾ? ದೊಡ್ಡದಾಗಿ ಯೋಚಿಸು.
- ದೊಡ್ಡ ಕಿವಿಗಳು? ಹೆಚ್ಚು ಕೇಳು.
- ಚಿಕ್ಕ ಕಣ್ಣುಗಳು? ಗುರಿಯ ಮೇಲೆ ಗಮನವಿರಲಿ.
- ಉದ್ದವಾದ ಸೊಂಡಿಲು?” ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳು.
- ದೊಡ್ಡ ಹೊಟ್ಟೆ? ಜೀವನ ಕೊಡುವ ಒಳ್ಳೆಯದು–ಕೆಟ್ಟದ್ದನ್ನು ಜೀರ್ಣಿಸಿಕೊಳ್ಳಲು ಕಲಿಯು.
- ನಂತರ ಗಣೇಶನ ವಾಹನವಾದ ಪುಟ್ಟ ಮೂಷಿಕವನ್ನು ತೋರಿಸಿ ಹೇಳಿದ ದೊಡ್ಡವನಾಗಬೇಕೆಂದರೆ ಸಣ್ಣ ಕೆಲಸಗಳನ್ನು ತಿರಸ್ಕರಿಸಬೇಡ.
ಇಂದಿನ ಯುವಜನತೆಗೆ ಗಣೇಶನ ದೊಡ್ಡ ಸಂದೇಶ
ಇಂದು ಯುವಕರು ಎದುರಿಸುತ್ತಿರುವ ಸಮಸ್ಯೆಗಳು ಬೇರೆ. ಉದ್ಯೋಗದ ಸ್ಪರ್ಧೆ. ಒತ್ತಡ. ವಿಫಲತೆ. ಸಾಮಾಜಿಕ ಜಾಲತಾಣಗಳ ಹೋಲಿಕೆ. ತಕ್ಷಣ ಯಶಸ್ಸು ಬೇಕೆಂಬ ಆತುರ. ಆದರೆ ಗಣೇಶನ ಕಥೆಗಳು ಹೇಳುವ ಸಂದೇಶ ಮಾತ್ರ ಹಳೆಯದಾಗಿಲ್ಲ. ಬುದ್ಧಿ ಬಳಸು. ಸಮಸ್ಯೆಯನ್ನು ಹೆದರಬೇಡ. ವಿಫಲತೆಯಿಂದ ಕಲಿ. ಪರಿಸ್ಥಿತಿಗೆ ಹೊಂದಿಕೋ. ಕೇಳುವುದನ್ನು ಕಲಿಯು. ಗುರಿಯ ಮೇಲೆ ಗಮನವಿಡು. ಪ್ರಯತ್ನ ನಿಲ್ಲಿಸಬೇಡ.
ಮಹಾಭಾರತವನ್ನು ಬರೆಯುವಾಗ ಲೇಖನಿ ಮುರಿದಾಗ ಗಣೇಶನು ತನ್ನ ದಂತವನ್ನೇ ಮುರಿದು ಬರವಣಿಗೆಯನ್ನು ಮುಂದುವರಿಸಿದನೆಂಬ ಪ್ರಸಿದ್ಧ ಪೌರಾಣಿಕ ಕಥೆಯೂ ಇದೇ ಮನೋಭಾವವನ್ನು ಪ್ರತಿಬಿಂಬಿಸುತ್ತದೆ—ಸಾಧನೆಯಲ್ಲಿ ಅಡ್ಡಿ ಬಂದಾಗ ಗುರಿಯನ್ನು ಬಿಡಬಾರದು; ಹೊಸ ದಾರಿ ಕಂಡುಕೊಳ್ಳಬೇಕು.
ಹಾಗಾದರೆ ಗಣೇಶನ ಕೃಪೆ ಎಂದರೇನು?
ಗಣೇಶನ ಕೃಪೆ ಎಂದರೆ…
ನಮ್ಮ ಸಮಸ್ಯೆಗಳು ಮಾಯವಾಗುವುದು ಮಾತ್ರವಲ್ಲ. ಸಮಸ್ಯೆಯನ್ನು ಎದುರಿಸುವ ಧೈರ್ಯ ಬರುವುದು. ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಬುದ್ಧಿ ಬರುವುದು. ಬಿದ್ದಾಗ ಮತ್ತೆ ಎದ್ದು ನಿಲ್ಲುವ ಮನೋಬಲ ಬರುವುದು. ತಪ್ಪಾದಾಗ ಒಪ್ಪಿಕೊಳ್ಳುವ ವಿನಯ ಬರುವುದು. ಮುಚ್ಚಿದ ಬಾಗಿಲು ಕಂಡಾಗ ಹೊಸ ಬಾಗಿಲು ಹುಡುಕುವ ವಿವೇಕ ಬರುವುದು. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ…
ನನ್ನಿಂದ ಸಾಧ್ಯವಿಲ್ಲ ಎಂಬ ಮನಸ್ಸಿನ ಗೋಡೆಯನ್ನು ಒಡೆದು, ಒಮ್ಮೆ ಪ್ರಯತ್ನಿಸಿ ನೋಡೋಣ ಎಂಬ ಧೈರ್ಯ ಹುಟ್ಟುವುದು. ಅದೇ ನಿಜವಾದ ವಿಘ್ನವಿನಾಯಕನ ಕೃಪೆ.
ಈ ಗೌರಿ–ಗಣೇಶ ಹಬ್ಬದಂದು ಯುವಜನತೆಗೆ ಒಂದು ಮಾತು…
ಗಣೇಶನ ಮುಂದೆ ಕೈ ಮುಗಿದು ಕೇವಲ ನನ್ನ ಕಷ್ಟಗಳನ್ನು ತೆಗೆದುಹಾಕು ಎಂದು ಕೇಳಬೇಡಿ.
ಅದರ ಬದಲು ಹೀಗೆ ಕೇಳಿ:
“ಗಣಪತಿ, ಕಷ್ಟ ಬಂದಾಗ ಹೆದರದ ಬುದ್ಧಿ ಕೊಡು. ಸೋತಾಗ ಕುಗ್ಗದ ಮನಸ್ಸು ಕೊಡು.
ಗೆದ್ದಾಗ ಅಹಂಕಾರಪಡದ ವಿನಯ ಕೊಡು. ತಪ್ಪಾದಾಗ ತಿದ್ದಿಕೊಳ್ಳುವ ಜ್ಞಾನ ಕೊಡು.
ಮತ್ತು ನನ್ನ ಕನಸನ್ನು ನನಸು ಮಾಡುವಷ್ಟು ಪರಿಶ್ರಮಿಸುವ ಶಕ್ತಿ ಕೊಡು.”
ಏಕೆಂದರೆ…
ಗಣೇಶನು ದಾರಿಯಲ್ಲಿರುವ ಎಲ್ಲಾ ಕಲ್ಲುಗಳನ್ನು ತೆಗೆದುಹಾಕುತ್ತಾನೆ ಎಂಬುದಕ್ಕಿಂತ, ಕಲ್ಲುಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮುಂದೆ ಸಾಗುವ ಬುದ್ಧಿಯನ್ನು ನೀಡುತ್ತಾನೆ ಎಂಬ ನಂಬಿಕೆಯೇ ಹೆಚ್ಚು ಅರ್ಥಪೂರ್ಣ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ