ಕಟ್ಕೊಂಡವಳು ಕಡೇ ತನಕ, ಇಟ್ಕೊಂಡವಳು ಇರೋ ತನಕ!

ಹಣದ ಜಗಳಕ್ಕೆ ಅಂತ್ಯವಾದ ಆತ್ಮೀಯತೆ,  ಮಹಿಳೆಯ ಕೊಲೆ, ದೇಹದ ಭಾಗಗಳು ಕಾಲುವೆಯಲ್ಲಿ ಪತ್ತೆ

ಒಂದು ಕಾಲದಲ್ಲಿ ಆತ್ಮೀಯವಾಗಿದ್ದ ಸಂಬಂಧವೇ ಕೊನೆಗೆ ಭೀಕರ ಹತ್ಯೆಗೆ ಕಾರಣವಾಯಿತೇ? ಹಣಕಾಸಿನ ವಿಚಾರದಲ್ಲಿ ಆರಂಭವಾದ ಜಗಳ, ಸಂಬಂಧದ ಬಿಕ್ಕಟ್ಟು ಮತ್ತು ಮಗುವಿನ ವಿಚಾರದಲ್ಲಿನ ಮನಸ್ತಾಪ ಕೊನೆಗೆ 29 ವರ್ಷದ ಮಹಿಳೆಯೊಬ್ಬಳ ದಾರುಣ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ಸಮೀಪದ ಇಬ್ರಾಹಿಂ ಪಟ್ಟಣಂನಲ್ಲಿ ಬೆಳಕಿಗೆ ಬಂದಿದೆ.

ಕೂಲಿಂಗ್‌ ಕಾಲುವೆಯಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆಯಾದ ಬಳಿಕ ಆರಂಭವಾದ ತನಿಖೆ, ಆಕೆಯ ಕೈ ಮೇಲಿದ್ದ ವಿಶಿಷ್ಟ ಹಚ್ಚೆ (ಟ್ಯಾಟೂ) ಮೂಲಕ ಗುರುತು ಪತ್ತೆಹಚ್ಚಿ, ಬಳಿಕ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವ ಹಂತಕ್ಕೆ ತಲುಪಿದೆ. ಪೊಲೀಸರು ಸೆಪ್ಟೆಂಬರ್ 17ರಂದು ನಡೆದಿರುವುದಾಗಿ ಶಂಕಿಸಿರುವ ಈ ಘಟನೆ ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕಾಲುವೆಯಲ್ಲಿ ತೇಲಿಬಂದ ದೇಹದ ಭಾಗಗಳು

ಸೆಪ್ಟೆಂಬರ್ 18ರ ಸಂಜೆ, ವಿಜಯವಾಡದ ಸಮೀಪದ ಇಬ್ರಾಹಿಂ ಪಟ್ಟಣ ವ್ಯಾಪ್ತಿಯ NTTPS ಕೂಲಿಂಗ್ ವಾಟರ್ ಕಾಲುವೆಯಲ್ಲಿ ಮಹಿಳೆಯ ದೇಹದ ಒಂದು ಭಾಗ ಪತ್ತೆಯಾಯಿತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಮಹಿಳೆಯ ಗುರುತು ಪತ್ತೆಯಾಗದ ಕಾರಣ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಯಿತು. ಬಳಿಕ SDRF/NDRF ತಂಡಗಳ ನೆರವು, ಡ್ರೋನ್ ಕ್ಯಾಮೆರಾಗಳು ಹಾಗೂ ಕಾಲುವೆ ಸುತ್ತಮುತ್ತಲಿನ ಪರಿಶೀಲನೆಯ ಮೂಲಕ ದೇಹದ ಇತರ ಭಾಗಗಳನ್ನೂ ಪೊಲೀಸರು ಪತ್ತೆಹಚ್ಚಿದರು. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿಜಯವಾಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಮೃತಳ ಹೆಸರು, ವಿಳಾಸ ಅಥವಾ ಆಕೆಯನ್ನು ಗುರುತಿಸಲು ತಕ್ಷಣ ಯಾವುದೇ ದಾಖಲೆಗಳು ಸಿಕ್ಕಿರಲಿಲ್ಲ.

ಒಂದು ಸಣ್ಣ ಟ್ಯಾಟೂ… ಪೊಲೀಸರಿಗೆ ದೊಡ್ಡ ಸುಳಿವು

ತನಿಖೆಯ ವೇಳೆ ಮೃತಳ ದೇಹದ ಮೇಲಿದ್ದ ಗುರುತುಗಳು, ಬಟ್ಟೆ ಹಾಗೂ ಕೈ ಮೇಲಿನ ವಿಶೇಷ ಟ್ಯಾಟೂ ಗಮನಕ್ಕೆ ಬಂದಿತು. ಪೊಲೀಸರು ಈ ವಿವರಗಳನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಮೂಲಕ ಹಂಚಿಕೊಂಡರು.

ಈ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ, ಮೃತಳ ಸಂಬಂಧಿಕರು ಆಕೆಯ ಕೈ ಮೇಲಿದ್ದ ಟ್ಯಾಟೂ ಮತ್ತು ಇತರ ಗುರುತುಗಳನ್ನು ಗಮನಿಸಿ ಪೊಲೀಸರನ್ನು ಸಂಪರ್ಕಿಸಿದರು. ಹೀಗೆ ಮೃತಳು ಕಲ್ಯಾಣಿ ಅಲಿಯಾಸ್ ದುರ್ಗಾ, ವಯಸ್ಸು ಸುಮಾರು 29 ವರ್ಷ, ಮಂಗಳಗಿರಿಯಲ್ಲಿ ವಾಸಿಸುತ್ತಿದ್ದ ಮಹಿಳೆ ಎಂಬುದು ದೃಢಪಟ್ಟಿತು.  ಪೊಲೀಸರ ಅಧಿಕೃತ ವಿವರಗಳ ಪ್ರಕಾರ, ಕಲ್ಯಾಣಿ ಮೂಲತಃ ಏಲೂರು ಜಿಲ್ಲೆಯ ಚಿನ್ನ ತಾಡಿನಾಡ ಗ್ರಾಮದವಳು. ಮಂಗಳಗಿರಿಯಲ್ಲಿ ವಾಸಿಸುತ್ತಿದ್ದ ಆಕೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ವೈಯಕ್ತಿಕ ಮತ್ತು ಕುಟುಂಬದ ಸಮಸ್ಯೆಗಳ ಹಿನ್ನೆಲೆಯಲ್ಲಿ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮಾಂಸದ ಅಂಗಡಿ ಮಾಲೀಕನೊಂದಿಗೆ ಆತ್ಮೀಯತೆ

ತನಿಖೆ ಮುಂದುವರಿದಂತೆ ಕಲ್ಯಾಣಿಗೆ ವಿಜಯವಾಡದ ಭವಾನೀಪುರಂನಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದ ಶೇಖ್ ಶಫಿ ಎಂಬಾತನೊಂದಿಗೆ ಆತ್ಮೀಯ ಪರಿಚಯ ಮತ್ತು ಸಲುಗೆ ಇತ್ತು ಎಂಬುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರ ಪ್ರಕಾರ, ಇವರಿಬ್ಬರ  ನಡುವಿನ ಸಂಬಂಧ ಮತ್ತು ಹಣಕಾಸಿನ ಹಣಕಾಸಿನ ವಿಚಾರವಾಗಿ ಆಗಾಗ್ಗೆ ಮನಸ್ತಾಪ ಉಂಟಾಗುತ್ತಿತ್ತು. ಮಗುವಿನ ವಿಚಾರವೂ ಇವರ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿತ್ತು ಎನ್ನಲಾಗಿದೆ. ಪೊಲೀಸ್ ಹೇಳಿಕೆಯ ಪ್ರಕಾರ, ಕಲ್ಯಾಣಿಗೆ ಒಂದು ಮಗುವಿದ್ದು, ಆ ಮಗುವಿನ ವಿಚಾರವೂ ಶಫಿ ಮತ್ತು ಕಲ್ಯಾಣಿಯ ನಡುವಿನ ವಿವಾದದಲ್ಲಿ ಪ್ರಮುಖವಾಗಿತ್ತು.  ಇಲ್ಲಿಂದಲೇ ಈ ಪ್ರಕರಣದ ಕಥೆ ಮತ್ತೊಂದು ತಿರುವು ಪಡೆದುಕೊಂಡಿದೆ.

ಸೆಪ್ಟೆಂಬರ್ 17ರಂದು ಮನೆಗೆ ಕರೆಸಿಕೊಂಡಿದ್ದ ಶಫಿ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸೆಪ್ಟೆಂಬರ್ 17ರಂದು ಶಫಿ ಕಲ್ಯಾಣಿಯನ್ನು ಭವಾನೀಪುರಂನಲ್ಲಿರುವ ತನ್ನ ಮನೆಗೆ ಕರೆಸಿಕೊಂಡಿದ್ದ. ಅಲ್ಲಿ ಇಬ್ಬರ ನಡುವೆ ಹಣ ಮತ್ತು ಮಗುವಿನ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಶಫಿ ಚಾಕುವಿನಿಂದ ಕಲ್ಯಾಣಿಯ ಮೇಲೆ ದಾಳಿ ಮಾಡಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂಬುದು ಪೊಲೀಸರ ಆರೋಪ.

ಸಾಕ್ಷ್ಯ ನಾಶಪಡಿಸಲು ದೇಹದ ಭಾಗಗಳನ್ನು ಬೇರೆ ಬೇರೆ ಕಡೆ ಎಸೆದ ಆರೋಪ

ಹತ್ಯೆಯ ಬಳಿಕ ದೇಹವನ್ನು ಗುರುತಿಸಲು ಸಾಧ್ಯವಾಗದಂತೆ ಮಾಡಲು ಅದರ ಭಾಗಗಳನ್ನು ಬೇರ್ಪಡಿಸಿ ವಿವಿಧ ಪ್ರದೇಶಗಳಲ್ಲಿರುವ ಕೂಲಿಂಗ್ ಕಾಲುವೆಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಅಧಿಕೃತ ವಿವರಗಳ ಪ್ರಕಾರ, ಶಫಿಗೆ ಶೇಖ್ ಅಬ್ದುಲ್ಲಾ ಅಲಿಯಾಸ್ ದುರ್ಗಾರಾವ್ ಎಂಬಾತ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ದೇಹದ ಭಾಗಗಳನ್ನು ಬೈಕ್‌ನಲ್ಲಿ ಸಾಗಿಸಿ ಇಬ್ರಾಹಿಂಪಟ್ಟಣಂ, ತುಮ್ಮಲಪಾಲೆಂ ಹಾಗೂ ಗೊಲ್ಲಪೂಡಿ ಪ್ರದೇಶಗಳಲ್ಲಿನ ಕಾಲುವೆ ಭಾಗಗಳಲ್ಲಿ ಎಸೆಯಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.  ಕೆಲವು ಮಾಧ್ಯಮ ವರದಿಗಳಲ್ಲಿ ಈ ಪ್ರಕರಣದಲ್ಲಿ ಇತರ ವ್ಯಕ್ತಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ. ಆದರೆ ಯಾರು ಯಾವ ರೀತಿಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಪೊಲೀಸರು ಇನ್ನೂ ಸಂಪೂರ್ಣವಾಗಿ ಸ್ಪಷ್ಟಪಡಿಸಬೇಕಿದೆ.

ಟ್ಯಾಟೂದಿಂದ ಆರಂಭವಾದ ತನಿಖೆ… ತಂತ್ರಜ್ಞಾನದಿಂದ ಆರೋಪಿಯವರೆಗೆ

ಈ ಪ್ರಕರಣದಲ್ಲಿ ಗಮನ ಸೆಳೆದ ಮತ್ತೊಂದು ಅಂಶ ತನಿಖೆಯ ವಿಧಾನ. ಮೃತಳ ದೇಹದ ಮೇಲಿದ್ದ ಟ್ಯಾಟೂ ಮತ್ತು ಇತರ ಗುರುತುಗಳ ಆಧಾರದ ಮೇಲೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹರಡಿದರು. ಜೊತೆಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದರು. ಆಸ್ಪತ್ರೆಗಳು, ಡೆಂಟಲ್ ಆಸ್ಪತ್ರೆಗಳು, ಟ್ಯಾಟೂ ಕೇಂದ್ರಗಳು ಹಾಗೂ ಬ್ಯೂಟಿ ಪಾರ್ಲರ್‌ಗಳಲ್ಲಿಯೂ ಮಾಹಿತಿ ಸಂಗ್ರಹಿಸಿದರು. ಇದರ ಜೊತೆಗೆ ಕಾಲುವೆ ಸುತ್ತಮುತ್ತಲಿನ CCTV ದೃಶ್ಯಗಳು, ಟೋಲ್‌ಗೇಟ್‌ಗಳಲ್ಲಿ ದಾಖಲಾಗಿದ್ದ ವಾಹನಗಳ ಮಾಹಿತಿ ಮತ್ತು ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಲಾಯಿತು. ಈ ತಾಂತ್ರಿಕ ತನಿಖೆಯ ಮೂಲಕ ಶಫಿಯವರೆಗೆ ಪೊಲೀಸರು ತಲುಪಿದ್ದಾರೆ ಎಂದು ಅಧಿಕೃತ ಪೊಲೀಸ್ ವಿವರಗಳು ತಿಳಿಸುತ್ತವೆ.

ಶಫಿ ಬಂಧನ… ಮತ್ತೊಬ್ಬ ಆರೋಪಿ ನಾಪತ್ತೆ

ಪೊಲೀಸರು ಭವಾನೀಪುರಂನಲ್ಲಿರುವ ಶಫಿಯ ಮನೆಗೆ ತೆರಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ. ಪೊಲೀಸ್ ವಿವರಗಳ ಪ್ರಕಾರ, ಶಫಿಗೆ ಸಹಾಯ ಮಾಡಿದನೆಂದು ಆರೋಪಿಸಲಾಗಿರುವ ಶೇಖ್ ಅಬ್ದುಲ್ಲಾ ಅಲಿಯಾಸ್ ದುರ್ಗಾರಾವ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ ಎಂದು ತಿಳಿಸಲಾಗಿದೆ.  ಆದರೆ ತನಿಖೆಯ ಮುಂದಿನ ಹಂತದಲ್ಲಿ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ. ಹತ್ಯೆಗೆ ನಿಖರ ಕಾರಣವೇನು? ಹಣದ ವಿವಾದ ಎಷ್ಟು ಪ್ರಮುಖವಾಗಿತ್ತು? ಮಗುವಿನ ವಿಚಾರದ ಪಾತ್ರವೇನು? ದೇಹವನ್ನು ಸಾಗಿಸಲು ಮತ್ತಷ್ಟು ಮಂದಿ ನೆರವಾದರೇ? ಎಂಬ ಪ್ರಶ್ನೆಗಳಿಗೆ ತನಿಖೆಯೇ ಉತ್ತರ ನೀಡಬೇಕಿದೆ.

ಒಂದು ಸಂಬಂಧ… ಹಲವು ಪ್ರಶ್ನೆಗಳು

ಈ ಪ್ರಕರಣ ಕೇವಲ ಒಂದು ಕೊಲೆ ಪ್ರಕರಣವಲ್ಲ. ಸಂಬಂಧಗಳ ಸ್ವರೂಪ, ಹಣಕಾಸಿನ ವ್ಯವಹಾರಗಳು, ಕುಟುಂಬದ ಬಿಕ್ಕಟ್ಟು ಮತ್ತು ಭಿನ್ನಾಭಿಪ್ರಾಯಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಹಲವು ಪ್ರಶ್ನೆಗಳನ್ನು ಎತ್ತುತ್ತದೆ.

“ಕಟ್ಕೊಂಡವಳು ಕಡೇ ತನಕ… ಇಟ್ಕೊಂಡವಳು ಇರೋ ತನಕ…” ಎಂಬ ಜನಪ್ರಿಯ ಗಾದೆಯ ರೀತಿ  ಆತ್ಮೀಯತೆ ಇರುವ ಜಾಗದಲ್ಲಿ ನಂಬಿಕೆ ಇರುತ್ತದೆ. ಆದರೆ ಅದೇ ಸಂಬಂಧದಲ್ಲಿ ಹಣ, ಸ್ವಾರ್ಥ, ಕೋಪ ಮತ್ತು ಅಧಿಕಾರದ ಮನೋಭಾವ ಪ್ರವೇಶಿಸಿದಾಗ ಪರಿಸ್ಥಿತಿ ಎಷ್ಟು ಅಪಾಯಕಾರಿ ತಿರುವು ಪಡೆಯಬಹುದು ಎಂಬುದಕ್ಕೆ ಈ ಪ್ರಕರಣ ಒಂದು ಭೀಕರ ಉದಾಹರಣೆಯಾಗಿದೆ.

ಕೊನೆಯ ಪ್ರಶ್ನೆ

ಕಲ್ಯಾಣಿಯ ಜೀವನ ಕೊನೆಗೊಂಡಿದೆ. ಆದರೆ ಆಕೆಯ ಸಾವಿನ ಹಿಂದೆ ಅಡಗಿರುವ ನಿಜವಾದ ಕಾರಣಗಳು, ಸಂಬಂಧಗಳಲ್ಲಿನ ಬಿರುಕು, ಹಣದ ವಿವಾದ ಮತ್ತು ಆರೋಪಿಗಳ ಪಾತ್ರದ ಸಂಪೂರ್ಣ ಚಿತ್ರಣ ಇನ್ನೂ ತನಿಖೆಯಿಂದ ಹೊರಬರಬೇಕಿದೆ. ಒಂದು ಟ್ಯಾಟೂ ಮೃತಳ ಗುರುತನ್ನು ಪತ್ತೆಹಚ್ಚಿತು. ತಂತ್ರಜ್ಞಾನ ಆರೋಪಿಯವರೆಗೆ ಪೊಲೀಸರನ್ನು ಕರೆದೊಯ್ದಿತು. ಆದರೆ ಈ ಭೀಕರ ಕೃತ್ಯದ ಹಿಂದಿನ ಸಂಪೂರ್ಣ ಸತ್ಯವನ್ನು ನ್ಯಾಯಾಲಯದ ಮುಂದೆ ಸಾಕ್ಷ್ಯಾಧಾರಗಳೇ ಹೇಳಬೇಕಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply