ಕರ್ನಾಟಕದ ರಾಜಕೀಯದಲ್ಲಿ ಭಾಷೆ, ಧರ್ಮ ಮತ್ತು ಸಾಂಸ್ಕೃತಿಕ ಗುರುತಿನ ವಿಚಾರಗಳು ಬಹಳ ಸೂಕ್ಷ್ಮವಾದವು. ರಾಜ್ಯಾದ್ಯಂತ ಬಹಳ ಸಡಗರ ಸಂಭ್ರಮಗಳಿಂದ ನವೆಂಬರ್ ತಿಂಗಳಾದ್ಯಂತ ಆಚರಿಸಲಾಗುವ ಕನ್ನಡ ರಾಜ್ಯೋತ್ಸವದ ಹೊತ್ತಿನಲ್ಲಿಯೇ, ಸರ್ಕಾರದ ವತಿಯಿಂದ ಜನರ ತೆರಿಗೆಯ ಹಣದಲ್ಲಿ, ಅದೂ ರಾಜ್ಯದ ಅಧಿಕಾರದ ಶಕ್ತಿಕೇಂದ್ರವಾದ ವಿಧಾನಸೌಧದ ಆವರಣದಲ್ಲಿ ಮೊದಲ ಬಾರಿಗೆ ನವೆಂಬರ್ 9ರಂದು ಉರ್ದು ಹಬ್ಬ ಆಯೋಜಿಸಲು ಸರ್ಕಾರ ಮುಂದಾಗಿರುವುದು ಸಹಜವಾಗಿಯೇ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಅವರು ಸೆಪ್ಟೆಂಬರ್ 30ರಂದು ಕರ್ನಾಟಕ ಪರ್ವ 2026ರ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಉರ್ದು ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಕಲಾಪ್ರಕಾರಗಳನ್ನು ಎಲ್ಲ ಸಮುದಾಯಗಳಿಗೂ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದ್ದಾರೆ. ಇದು ವಿಧಾನಸೌಧದಲ್ಲಿ ಸರ್ಕಾರದ ಆಶ್ರಯದಲ್ಲಿ ನಡೆಯಲಿರುವ ಮೊದಲ ಉರ್ದು ಹಬ್ಬ ಎಂದು ತಿಳಿಸಿದ್ದಾರೆ.
ಖಾದರ್ ಅವರು ಈ ರೀತಿ ಘೋಷಿಸುತ್ತಿದ್ದಂತೆಯೇ ಸಹಜವಾಗಿ ಇದರ ಪರ ಮತ್ತು ವಿರೋಧವಾದ ಚರ್ಚೆಗಳು ಆರಂಭವಾಗಿವೆ. ಈ ಕಾರ್ಯಕ್ರಮವನ್ನು ವಿರೋಧಿಸುವವರು, ಇದರಿಂದ ಕನ್ನಡಿಗರಿಗೆ ಒಂದು ನಯಾಪೈಸೆಯ ಲಾಭವಿಲ್ಲ. ಕೇವಲ ದಕ್ಷಿಣ ಕನ್ನಡಕ್ಕೆ ಮಾತ್ರವೇ ಸೀಮಿತವಾಗಿರುವ ಮತ್ತು ತಮ್ಮ ಸಮುದಾಯದಲ್ಲಿ ಮಾನ್ಯತೆಯೇ ಇಲ್ಲದ ಖಾದರ್ ಅವರು ತಮ್ಮ ಸ್ವಪ್ರತಿಷ್ಠೆಗಾಗಿ ಹಾಗೂ ಮುಂದಿನ ಚುನಾವಣೆಯಲ್ಲಿಯೂ ಅಲ್ಪಸಂಖ್ಯಾತರ ಓಲೈಕೆ ಮಾಡುವ ಮೂಲಕ ತಮ್ಮ ಮತಗಳನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಖಂಡನಾರ್ಹ ಎಂದಿದ್ದಾರೆ.
ಇದಕ್ಕೆ ಪ್ರತಿಯಾಗಿ, ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವವರು, ಉರ್ದು ಏನೂ ಹೊರಗಿನ ಭಾಷೆಯಲ್ಲ. ಅದು ಭಾರತದಲ್ಲಿಯೇ ಬೆಳೆದ ಭಾಷೆ. ಕನ್ನಡ ಭಾಷೆಯಂತೆಯೇ ಭಾರತದ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸೇರಿರುವ 22 ಭಾಷೆಗಳಲ್ಲಿ ಒಂದಾಗಿದೆ. ಹಾಗಾಗಿ ಉರ್ದು ಭಾಷೆಯನ್ನು ಆಚರಿಸುವುದೇ ಸ್ವತಃ ಸಂವಿಧಾನವಿರೋಧಿ ಅಥವಾ ಅಸಹಜ ಸಂಗತಿ ಎಂದು ಹೇಳಲು ಆಧಾರವಿಲ್ಲ. ಅದೂ ಅಲ್ಲದೆ, ಉರ್ದು ಕೇವಲ ಧಾರ್ಮಿಕ ಭಾಷೆಯೂ ಅಲ್ಲ. ಉರ್ದು ಸಾಹಿತ್ಯದಲ್ಲಿ ಮುಸ್ಲಿಮರಷ್ಟೇ ಅಲ್ಲದೆ ಹಲವು ಹಿನ್ನೆಲೆಯ ಕವಿಗಳು, ಲೇಖಕರು ಮತ್ತು ಸಾಹಿತಿಗಳ ಕೊಡುಗೆಯಿದೆ. ನವೆಂಬರ್ 9ರಂದು ಉರ್ದು ದಿನ ಆಚರಿಸುವ ಪರಂಪರೆ ಸಾಮಾನ್ಯವಾಗಿ ಕವಿ-ತತ್ವಜ್ಞಾನಿ ಅಲ್ಲಾಮಾ ಇಕ್ಬಾಲ್ ಅವರ ಜನ್ಮದಿನದೊಂದಿಗೆ ಸಂಪರ್ಕ ಹೊಂದಿದೆ. ಹೀಗಾಗಿ ಉರ್ದು ಎಂದರೆ ಮುಸ್ಲಿಮರು ಎಂಬ ಸರಳ ಸಮೀಕರಣವೂ ಭಾಷೆಯ ಇತಿಹಾಸಕ್ಕೆ ನ್ಯಾಯ ಮಾಡುವುದಿಲ್ಲ ಎಂಬ ಸಮರ್ಥನೆಯನ್ನು ಮುಂದಿಡುತ್ತಿದ್ದಾರೆ.

ಆದರೆ ಇಲ್ಲಿನ ಪ್ರಶ್ನೆ ಉರ್ದು ಭಾಷೆಯದ್ದಲ್ಲ ಅಥವಾ ಮುಸ್ಲಿಮರ ವಿರುದ್ಧವಾಗಿಯೂ ಅಲ್ಲ. ಆ ಕಾರ್ಯಕ್ರಮ ನಡೆಸಲು ಮುಂದಾಗಿರುವ ಸಮಯ, ಸ್ಥಳ ಮತ್ತು ಸ್ವರೂಪವೇ ಪ್ರಸ್ತುತ ವಿವಾದದ ಕೇಂದ್ರಬಿಂದುವಾಗಿದೆ. ವಿಧಾನಸೌಧ ಎಂದರೆ ಕೇವಲ ಮತ್ತೊಂದು ಸರ್ಕಾರಿ ಕಟ್ಟಡವಲ್ಲ. ಅದು ಕರ್ನಾಟಕದ ವಿಧಾನಮಂಡಲದ ಕಟ್ಟಡ. ರಾಜ್ಯದ ಆಡಳಿತ, ಕಾನೂನು ರಚನೆ ಮತ್ತು ಪ್ರಜಾಪ್ರಭುತ್ವದ ಸಂಕೇತ. ಆದ್ದರಿಂದ ಅಲ್ಲಿ ಸರ್ಕಾರ ರಾಜ್ಯದ ಅಧಿಕೃತ ಭಾಷೆಯ ಹೊರತಾಗಿ ಯಾವುದೇ ನಿರ್ದಿಷ್ಟ ಭಾಷೆ ಅಥವಾ ಸಮುದಾಯದ ಹೆಸರಿನಲ್ಲಿ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದಾಗ, ಅದರ ಸಾರ್ವಜನಿಕ ನೀತಿ ಮತ್ತು ರಾಜಕೀಯ ಸಂದೇಶದ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ.
ಹಾಗಾಗಿಯೇ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯಲಿರುವ ಉರ್ದು ಹಬ್ಬವನ್ನು ಕೈಬಿಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ. ಅವರ ಆಕ್ಷೇಪದ ಕೇಂದ್ರವೂ ಇದೇ—ವಿಧಾನಸೌಧದಂತಹ ಸಾಂವಿಧಾನಿಕ ಮಹತ್ವದ ಸ್ಥಳದಲ್ಲಿ ನಿರ್ದಿಷ್ಟ ಭಾಷಾ ಕಾರ್ಯಕ್ರಮ ನಡೆಸುವ ಸೂಕ್ತತೆ.
ಇನ್ನು ಓಲೈಕೆ ವಿಚಾರ
ಸುರೇಶ್ ಕುಮಾರ್ ಅವರ ಹೇಳಿಕೆಗೆ ವಿರುದ್ಧವಾಗಿ, ಒಂದು ಭಾಷಾಧಾರಿತ ಸರ್ಕಾರಿ ಕಾರ್ಯಕ್ರಮವನ್ನು ಮತಬ್ಯಾಂಕ್ ರಾಜಕಾರಣ ಅಥವಾ ಮುಸ್ಲಿಮರ ಓಲೈಕೆ ಎಂದು ಕರೆಯಲಾಗದು ಎಂದು ಕೆಲವರು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಉತ್ತರ ಭಾರತದ ಕೆಲವು ಬೆರಳೆಣಿಕೆಯ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿಯೂ ಉರ್ದು ಭಾಷೆ ಎಂದರೆ ಮುಸ್ಲಿಮರ ಭಾಷೆ ಎಂದೇ ಪ್ರಸಿದ್ಧವಾಗಿದೆ. ಕರ್ನಾಟಕದಲ್ಲಿ ಕೆಲವು ಸ್ಥಳೀಯ ಪ್ರಾದೇಶಿಕ ಭಾಷೆಗಳನ್ನು ಹೊರತುಪಡಿಸಿದರೆ, ಕರ್ನಾಟಕದ ಬಹುತೇಕ ಮುಸ್ಲಿಮರು ಆಡುವ ಭಾಷೆ ಉರ್ದು ಆಗಿರುವುದರಿಂದಲೇ, ಈ ಕಾರ್ಯಕ್ರಮ ಕರ್ನಾಟಕದಲ್ಲಿ ಕೇವಲ ಭಾಷಾ ಕಾರ್ಯಕ್ರಮವಾಗಿರದೆ, ಭಾಷೆಯ ಮೂಲಕ ಮುಸ್ಲಿಮರ ಓಲೈಕೆಯಾಗಿದೆ ಎಂದು ಜನರು ಹೇಳುತ್ತಿರುವುದರಲ್ಲಿ ತಪ್ಪಿಲ್ಲ ಎಂದೆನಿಸುತ್ತಿದೆ.
ಹಾಗೆ ನೋಡಿದರೆ, ಕಾಂಗ್ರೆಸ್ ಸರ್ಕಾರದಿಂದ ಈ ರೀತಿಯ ಮುಸ್ಲಿಮರ ಓಲೈಕೆ ಇದೇ ಮೊದಲೂ ಅಲ್ಲ, ಕಡೆಯೂ ಅಲ್ಲ ಎನ್ನುವುದಕ್ಕೆ ಈ ಹಿಂದಿನ ಉದಾಹರಣೆಯನ್ನು ನೆನಪಿಸಿಕೊಳ್ಳಬಹುದು.
ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿದ್ದಾಗ, ಮುಸ್ಲಿಮರಲ್ಲಿ ಅಲ್ಲಾಹನ ಹೊರತಾಗಿ ಯಾವುದೇ ವ್ಯಕ್ತಿಯನ್ನು ಪೂಜಿಸುವುದು ಹರಾಮ್ ಎನ್ನುವ ನಿಯಮವಿದ್ದರೂ, ಮುಸ್ಲಿಮರು ಯಾರೂ ಸಹ ಕೇಳದೇ ಇದ್ದರೂ, ಕೇವಲ ಮುಸ್ಲಿಮರ ಮತಗಳನ್ನು ಕ್ರೋಢೀಕರಿಸುವ ಸಲುವಾಗಿ ಸರ್ಕಾರಿ ವತಿಯಿಂದ ಟಿಪ್ಪು ಜಯಂತಿಯನ್ನು ಆಚರಿಸಿದ್ದು ಸಹ ಇದೇ ರೀತಿಯ ಆಕ್ಷೇಪಗಳಿಗೆ ಕಾರಣವಾಗಿತ್ತು. ಮುಂದೆ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರು ಸರ್ಕಾರದ ವತಿಯಿಂದ ಟಿಪ್ಪು ಜಯಂತಿಯ ಆಚರಣೆಯನ್ನು ರದ್ದುಪಡಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದ್ದರೆ ಆಕ್ಷೇಪಣೆ ಇಲ್ಲವೇ? ಆದರೆ ಇದು ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರಿ ಕಾರ್ಯಕ್ರಮ.
ಸಾಮಾನ್ಯವಾಗಿ ಇಂತಹ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸಬೇಕಾದರೆ ಸಾಕಷ್ಟು ಹಣ ಖರ್ಚಾಗುತ್ತದೆ. ಹಾಗಾದರೆ:
- ಕಾರ್ಯಕ್ರಮಕ್ಕೆ ಎಷ್ಟು ಹಣ ಖರ್ಚಾಗುತ್ತದೆ?
- ಯಾವ ಇಲಾಖೆಯ ಬಜೆಟ್‌ನಿಂದ ಹಣ ಬರುತ್ತದೆ?
- ಕಾರ್ಯಕ್ರಮದ ಉದ್ದೇಶವೇನು?
- ಆಯೋಜನೆಯ ವ್ಯಾಪ್ತಿ ಎಷ್ಟು?
- ಎಲ್ಲ ಸಮುದಾಯಗಳಿಗೂ ಮುಕ್ತವಾಗಿದೆಯೇ?
- ಕನ್ನಡ ಭಾಷೆಗೆ ಸಮಾನ ಅಥವಾ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆಯೇ?
- ಇದೇ ರೀತಿಯ ಇತರ ಭಾಷೆಗಳಿಗೂ ಸರ್ಕಾರ ಅವಕಾಶ ನೀಡುತ್ತದೆಯೇ?
- ಕಾರ್ಯಕ್ರಮದ ಆಯ್ಕೆಗೆ ಸ್ಪಷ್ಟ ಆಡಳಿತಾತ್ಮಕ ಮಾನದಂಡವಿದೆಯೇ?
ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸದೇ ಹೋದಲ್ಲಿ, ಇದು ಮುಸ್ಲಿಮರ ಮತಗಳ ಓಲೈಕೆಗಾಗಿ ಮಾಡಲಾಗುತ್ತಿದೆ ಎಂಬ ಅನುಮಾನ ಮತ್ತಷ್ಟು ಬಲಗೊಳ್ಳುತ್ತದೆ.
ಹೋದಲ್ಲೆಲ್ಲ ಕೈಯಲ್ಲೊಂದು ಕೆಂಪು ಬಣ್ಣದ ಸಂವಿಧಾನದ ಪುಸ್ತಕ ಹಿಡಿದು, ತಾವೇ ಈ ದೇಶದ ಪ್ರಜಾಪ್ರಭುತ್ವದ ರಕ್ಷಕರು ಎಂದು ತೋರಿಸಿಕೊಳ್ಳುವ ಕಾಂಗ್ರೆಸ್ಸಿಗರಿಗೆ ಈ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದಂತೆಯೇ ಸಹಜವಾಗಿ ಅವರಿಂದ ಬರುವ ಉತ್ತರ, ನೀವು ಸಂಘ ಪರಿವಾರದವರು, ಕೋಮುವಾದಿಗಳು. ಪ್ರಜಾಪ್ರಭುತ್ವದಲ್ಲಿ ಸರ್ಕಾರವನ್ನು ಪ್ರಶ್ನಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಎಲ್ಲರಿಗೂ ವಾಕ್‌ಸ್ವಾತಂತ್ರ್ಯವಿದೆ. ಅದು ಸೈದ್ಧಾಂತಿಕ ವಿರೋಧಾಭಾಸವಾಗಿದ್ದರೂ, ಪ್ರಜೆಗಳು ಕೇಳುವ ಪ್ರಶ್ನೆಗಳಿಗೆ ಸರ್ಕಾರ ಪಾರದರ್ಶಕವಾಗಿ ಉತ್ತರಿಸಬೇಕು.
ಈ ಕಾರ್ಯಕ್ರಮ ನಿಜವಾಗಿಯೂ ಭಾಷೆಯ ಕುರಿತಾಗಿದ್ದಲ್ಲಿ, ವಿಧಾನಸೌಧದಲ್ಲೇ ಏಕೆ?
ಕರ್ನಾಟಕದಲ್ಲಿ ನೂರಾರು ಸಭಾಂಗಣಗಳು, ಸಾಂಸ್ಕೃತಿಕ ಕೇಂದ್ರಗಳು ಮತ್ತು ವಿಶ್ವವಿದ್ಯಾಲಯಗಳಿವೆ. ಹಾಗಾದರೆ ವಿಧಾನಸೌಧದ ಮೆಟ್ಟಿಲುಗಳೇ ಏಕೆ? ಹೇಳಿ ಕೇಳಿ ನವೆಂಬರ್ ತಿಂಗಳು ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವದ ಮಾಸ. ಇಂತಹ ಸಂದರ್ಭದಲ್ಲಿ ನವೆಂಬರ್ 9ರಂದು ರಾಜ್ಯದ ಶಕ್ತಿಕೇಂದ್ರದಲ್ಲಿ ಉರ್ದು ಕಾರ್ಯಕ್ರಮ ನಡೆಸುವುದರಿಂದ ರಾಜ್ಯಕ್ಕೆ ಮತ್ತು ಕನ್ನಡಕ್ಕೆ ಯಾವ ರೀತಿಯಲ್ಲಿ ಪ್ರಯೋಜನವಾಗುತ್ತದೆ? ಇಂತಹ ಕನ್ನಡೇತರ ಕಾರ್ಯಕ್ರಮಗಳಿಂದ ಕನ್ನಡದ ಕಾರ್ಯಕ್ರಮಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದಿಲ್ಲವೇ ಎಂಬುದನ್ನೂ ಸರ್ಕಾರ ಸ್ಪಷ್ಟಪಡಿಸಬಹುದು. ಇದು ಉರ್ದು ವಿರೋಧವಲ್ಲ; ಸರ್ಕಾರದ ಆದ್ಯತೆಗಳ ಬಗ್ಗೆ ಕೇಳುವ ಪ್ರಶ್ನೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಪ್ರಕರಣವೇ ಇತ್ಯರ್ಥವಾಗಿಲ್ಲ!
2024ರ ಫೆಬ್ರವರಿ 27ರಂದು ಕಾಂಗ್ರೆಸ್‌ನ ರಾಜ್ಯಸಭಾ ಅಭ್ಯರ್ಥಿ ಸೈಯದ್ ನಾಸಿರ್ ಹುಸೇನ್ ಗೆದ್ದ ನಂತರ, ವಿಧಾನಸೌಧದ ಆವರಣದಲ್ಲಿ ಅವರ ಬೆಂಬಲಿಗರು “Pakistan Zindabad” ಎಂಬ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ವಿವಿಧ ವಾಹಿನಿಗಳಲ್ಲಿ ವರದಿಗಳು ಪ್ರಸಾರವಾಗಿದ್ದವು.
ಆರಂಭದಲ್ಲಿ ಪ್ರಸ್ತುತ ಗೃಹ ಸಚಿವ ಪ್ರಿಯಾಂಕ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು, ಅವರು “Pakistan Zindabad” ಎಂದು ಕೂಗಿಲ್ಲ; “Nasir Saab Zindabad” ಎಂದು ಕೂಗಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು. ನಂತರ ಧ್ವನಿ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ (FSL) ಪರೀಕ್ಷೆಗೆ ಕಳುಹಿಸಲಾಯಿತು. ತನಿಖೆಯ ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದರು. ಆದರೆ ಆ ಪ್ರಕರಣದ ಅಂತಿಮ ಸ್ಥಿತಿ ಏನು ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂಬ ಆಕ್ಷೇಪವಿದೆ.
ಈ ಹಿನ್ನೆಲೆಯಲ್ಲಿ, ಜಮೀರ್ ಅಹ್ಮದ್ ಅವರೇ ಹೇಳುವಂತೆ ಅವರ ಸಮುದಾಯದವರು ಅನಕ್ಷರಸ್ಥರು ಎಂದಾದರೆ, ಅಂತಹವರಿಂದ ಮತ್ತೊಮ್ಮೆ ಇದೇ ರೀತಿಯ ಪ್ರಕರಣ ನಡೆಯುವುದಿಲ್ಲ ಎಂದು ಹೇಗೆ ನಂಬುವುದು ಎಂಬ ಪ್ರಶ್ನೆಯನ್ನೂ ಕೆಲವರು ಮುಂದಿಡುತ್ತಿದ್ದಾರೆ.
ಉರ್ದು ಹಬ್ಬವನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ
ಅಚ್ಚರಿಯ ವಿಷಯವೆಂದರೆ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಯೋಜಿಸಲು ಸರ್ಕಾರ ಮುಂದಾಗಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಆಕ್ಷೇಪಿಸಿದೆ. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ಸರ್ಕಾರದ ಅಪ್ರಬುದ್ಧ ಹಾಗೂ ಅವಿವೇಕದ ನಡೆ ಎಂದು ಟೀಕಿಸಿದ್ದಾರೆ.
“ಇದು ದುರಹಂಕಾರ ಅಲ್ಲವೇ? ಏನು ಮಾಡಿದರೂ ನಡೆಯುತ್ತದೆ ಎನ್ನುವ ಅಹಂ ಯಾಕೆ? ಅಧಿಕಪ್ರಸಂಗದ ನಿರ್ಧಾರಗಳನ್ನು ಕೈಗೊಳ್ಳುವ ಬದಲು ಇರುವ ಸಾವಿರ ಕೆಲಸಗಳನ್ನು ಮಾಡಿ ಮುಗಿಸಬಹುದು. ಕರವೇ ಈ ನಿರ್ಣಯವನ್ನು ತೀವ್ರವಾಗಿ ಖಂಡಿಸುತ್ತದೆ. ಈ ಕಾರ್ಯಕ್ರಮ ನಡೆಯುವುದಕ್ಕೆ ಅವಕಾಶ ನೀಡುವುದಿಲ್ಲ.
ಸರ್ಕಾರ ಇಷ್ಟೊಂದು ಫ್ರೀ ಇದೆಯಾ? ಮಾಡೋದಕ್ಕೆ ಸಾವಿರ ಕೆಲಸಗಳಿವೆ. ಅದನ್ನು ಮಾಡಲಿ. ಅದನ್ನು ಬಿಟ್ಟು ಉರ್ದು ಹಬ್ಬವಂತೆ! ಸ್ಪಷ್ಟವಾಗಿ ಹೇಳುವುದಾದರೆ, ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು, ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದು. ಹಿಂದೆ ಉರ್ದು ವಾರ್ತೆ ಸಂಬಂಧ ನಡೆದ ಕೋಮುಗಲಭೆಯನ್ನು ಸರ್ಕಾರ ಮರೆತಿದೆಯೇ? ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದು ಎಂದರೆ ಇದೇ ಅಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
ನೀವು ಉರ್ದು ಹಬ್ಬ ಮಾಡಲು ಬಿಟ್ಟರೆ ನಂತರ ಹಿಂದಿ ಹಬ್ಬ ಮಾಡಲು ಪರ್ಮಿಷನ್ ಕೇಳುತ್ತಾರೆ. ಆಮೇಲೆ ತೆಲುಗು, ತಮಿಳು, ಮರಾಠಿ—ಎಲ್ಲ ಭಾಷೆಗಳ ಹಬ್ಬವನ್ನೂ ಮಾಡುತ್ತಾರೆ. ಕನ್ನಡಿಗರನ್ನು ಮಾರಿಬಿಡುತ್ತಾರೆ. ಈ ಹುಚ್ಚಾಟವನ್ನು ಮುಖ್ಯಮಂತ್ರಿ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಚಳಿ ಬಿಡಿಸಬೇಕಾಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಬೆಂಬಲಿಗರೆಂದು ಗುರುತಿಸಲ್ಪಡುವ ನಾರಾಯಣಗೌಡರಿಗೇ ಈ ಉತ್ಸವ ಇಷ್ಟೊಂದು ಬೇಸರ ತಂದಿದ್ದರೆ, ಇನ್ನು ಸಾಮಾನ್ಯ ಕನ್ನಡಿಗರಿಗೆ ಎಷ್ಟರಮಟ್ಟಿಗೆ ಅಸಮಾಧಾನ ಉಂಟಾಗಿರಬಹುದು ಎಂಬುದನ್ನು ಊಹಿಸಬಹುದು. ಹಾಗಾಗಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗುವ ಮುನ್ನವೇ ಖಾದರ್ ಅವರು ಈ ಕೂಡಲೇ ಈ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವನ್ನು ರದ್ದುಗೊಳಿಸಲಿ ಎಂಬುದು ಕಾರ್ಯಕ್ರಮವನ್ನು ವಿರೋಧಿಸುವವರ ಆಗ್ರಹವಾಗಿದೆ.
ಗಣೇಶೋತ್ಸವಕ್ಕೆ ವಿಘ್ನಗಳು, ಉರ್ದು ಹಬ್ಬಕ್ಕೆ ಸರ್ಕಾರಿ ಪ್ರೋತ್ಸಾಹವೇ?
ವರ್ಷಕ್ಕೊಮ್ಮೆ ತಮ್ಮ ಸ್ವಂತ ಖರ್ಚಿನಲ್ಲಿ ಈ ರಾಜ್ಯದ ಬಹುಸಂಖ್ಯಾತ ಹಿಂದೂಗಳು ಗಣೇಶೋತ್ಸವ ಆಚರಿಸಲು ಮುಂದಾದಾಗ, ಆ ರಸ್ತೆಯಲ್ಲಿ ಹೋಗಬೇಡಿ, ಈ ರಸ್ತೆಯಲ್ಲಿ ಹೋಗಬೇಡಿ”, “ಇಷ್ಟೇ ಎತ್ತರದ ಗಣೇಶ ಮೂರ್ತಿ ಕೂರಿಸಿ”, “ಡಿಜೆ ಬೇಡ, ಡ್ಯಾನ್ಸ್ ಬೇಡ” ಎನ್ನುವುದಲ್ಲದೆ, ಗಣೇಶ ಮೂರ್ತಿ ಕೂರಿಸಲು ವಿವಿಧ ಇಲಾಖೆಗಳ ಅನುಮತಿಯನ್ನೂ ಪಡೆಯಬೇಕಾಗುತ್ತದೆ.
ಹೀಗೆ ವಿಘ್ನವಿನಾಯಕನ ಆಚರಣೆಗೆ ನೂರಾರು ವಿಘ್ನಗಳನ್ನು ಒಡ್ಡುವ ಈ ಕಾಂಗ್ರೆಸ್ ಸರ್ಕಾರ, ಈಗ ಯಾವುದೇ ಮುಸ್ಲಿಮರಾಗಲೀ ಅಥವಾ ಉರ್ದು ಅಭಿಮಾನಿಗಳಾಗಲೀ ಕೇಳದೇ ಇದ್ದರೂ, ಸರ್ಕಾರಿ ಖರ್ಚಿನಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ದಿನವನ್ನು ಆಚರಿಸಲು ಮುಂದಾಗಿರುವುದು ಸ್ಪಷ್ಟವಾಗಿ ಓಲೈಕೆ ರಾಜಕಾರಣವಾಗಿದೆ ಎನ್ನುವುದು ಕಾರ್ಯಕ್ರಮವನ್ನು ವಿರೋಧಿಸುವವರ ಅಭಿಪ್ರಾಯವಾಗಿದೆ.
ಕಳೆದ ವರ್ಷ ಹಿಂದೂಗಳ ಶ್ರದ್ಧೆಯ ದಸರಾ ಹಬ್ಬವನ್ನು ಅದು ಹಿಂದೂಗಳ ಹಬ್ಬವಲ್ಲ, ನಾಡಹಬ್ಬ ಎಂದು ಹೇಳಿ, ಕನ್ನಡ ತಾಯಿ ಭುವನೇಶ್ವರಿಯನ್ನು ಮತ್ತು ಹಿಂದೂ ಮಾತೆಯರ ಸೌಭಾಗ್ಯದ ಸಂಕೇತವಾದ ಅರಿಶಿನ-ಕುಂಕುಮವನ್ನೇ ಸಾರ್ವಜನಿಕವಾಗಿ ಅವಮಾನಿಸಿದ ಭಾನು ಮುಷ್ತಾಕ್ ಅವರಿಂದ ಉದ್ಘಾಟನೆ ಮಾಡಿಸಿ ಹಿಂದೂಗಳಿಗೆ ಅವಮಾನ ಮಾಡಿದ್ದ ಈ ಸರ್ಕಾರ, ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಎಂಬ ಟೀಕೆಯೂ ಕೇಳಿಬರುತ್ತಿದೆ.
ಸರ್ಕಾರದ ವತಿಯಿಂದ ಈ ಬಾರಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರಂಭಿಸುವ ಉರ್ದು ಹಬ್ಬವನ್ನು ಮುಂದಿನ ವರ್ಷಗಳಲ್ಲಿ ವಿಧಾನಸೌಧದ ಒಳಗೇ ಪ್ರತಿವರ್ಷವೂ ನಡೆಸಲು ಸರ್ಕಾರ ಮುಂದಾಗಬಹುದು ಎಂಬ ಆತಂಕವನ್ನೂ ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಆ ಹಣದ ಬಳಕೆ, ಫಲಾನುಭವಿಗಳು ಮತ್ತು ಕಾರ್ಯಕ್ರಮಗಳ ಉದ್ದೇಶಗಳ ಬಗ್ಗೆ ಪಾರದರ್ಶಕತೆ ಇರಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
ಈ ಕಾಂಗ್ರೆಸ್ ಸರ್ಕಾರ ನಿಜವಾಗಿಯೂ ಜಾತ್ಯತೀತ ಸರ್ಕಾರವಾಗಿದ್ದಲ್ಲಿ, ಈ ಕೂಡಲೇ ಉರ್ದು ಹಬ್ಬದ ಆಚರಣೆಯನ್ನು ನಿಲ್ಲಿಸುವುದು ಸೂಕ್ತವಾಗಿದೆ ಎಂದು ಕನ್ನಡಿಗರು ಕೇಳುವುದರಲ್ಲಿ ಸತ್ಯವಿದೆ ಎಂದೆನಿಸುತ್ತಿದೆಯಲ್ಲವೇ?