2026ರ ಏಷ್ಯನ್ ಕ್ರೀಡಾಕೂಟದಲ್ಲಿ ಕನ್ನಡಿಗರ ಕೀರ್ತಿಪತಾಕೆ

24 ಕ್ರೀಡಾಪಟುಗಳ ಪೈಕಿ 8 ಮಂದಿ ಪದಕ ವಿಜೇತರು. 4 ಚಿನ್ನ, 3 ಬೆಳ್ಳಿ, 2 ಕಂಚು — ಕರ್ನಾಟಕದ ಕ್ರೀಡಾ ಶಕ್ತಿಗೆ ಮತ್ತೊಮ್ಮೆ ಸಾಕ್ಷಿ

ಜಪಾನ್‌ನ ಐಚಿ–ನಗೋಯಾದಲ್ಲಿ ನಡೆದ 20ನೇ ಏಷ್ಯನ್ ಕ್ರೀಡಾಕೂಟ 2026 ಭಾರತಕ್ಕೆ ನಿರೀಕ್ಷೆ–ನಿರಾಸೆಗಳ ನಡುವೆ ಕೊನೆಯ ಹಂತದಲ್ಲಿ ಭರ್ಜರಿ ಯಶಸ್ಸಿನೊಂದಿಗೆ ಮುಕ್ತಾಯಗೊಂಡಿದೆ. ಭಾರತ ಒಟ್ಟು 85 ಪದಕಗಳನ್ನು — 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚು — ಗೆದ್ದು ನಾಲ್ಕನೇ ಸ್ಥಾನ ಪಡೆದಿದೆ. 2022ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನ 106 ಪದಕಗಳಿಗೆ ಹೋಲಿಸಿದರೆ ಒಟ್ಟು ಪದಕಗಳ ಸಂಖ್ಯೆ ಕಡಿಮೆಯಾಗಿದ್ದರೂ, ಹಲವು ಕ್ರೀಡೆಗಳಲ್ಲಿ ಐತಿಹಾಸಿಕ ಸಾಧನೆಗಳು ದಾಖಲಾಗಿವೆ. ಈ ಯಶಸ್ಸಿನಲ್ಲಿ ಕರ್ನಾಟಕದ ಕ್ರೀಡಾಪಟುಗಳ ಕೊಡುಗೆ ಗಮನಾರ್ಹ.

ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ಕರ್ನಾಟಕದ 24 ಕ್ರೀಡಾಪಟುಗಳು (13 ಪುರುಷರು ಮತ್ತು 11 ಮಹಿಳೆಯರು) ಭಾಗವಹಿಸಿದ್ದು, ಅವರುಗಳಲ್ಲಿ ಎಂಟು ಮಂದಿ ಒಟ್ಟಿ 4 ಚಿನ್ನ, 3 ಬೆಳ್ಳಿ ಮತ್ತು 2 ಕಂಚು — ಒಟ್ಟು 9 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ತ್ರಿವರ್ಣಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿರುವುದು ನಿಜಕ್ಕೂ ಅನನ್ಯ ಮತ್ತು ಅದ್ಭುತವೇ ಸರಿ

 ಕರ್ನಾಟಕದ ಪದಕ ವಿಜೇತರು

ಕ್ರೀಡಾಪಟು ಕ್ರೀಡೆ ಸಾಧನೆ ಪದಕ
ಎಂ.ಆರ್. ಪೂವಮ್ಮ ಅಥ್ಲೆಟಿಕ್ಸ್ ಮಹಿಳೆಯರ 4×400 ಮೀ. ರಿಲೇ 🥇 ಚಿನ್ನ
ಎಂ.ಆರ್. ಪೂವಮ್ಮ ಅಥ್ಲೆಟಿಕ್ಸ್ ಮಿಶ್ರ 4×400 ಮೀ. ರಿಲೇ 🥈 ಬೆಳ್ಳಿ
ಶ್ರೇಯಾಂಕಾ ಪಾಟೀಲ್ ಕ್ರಿಕೆಟ್ ಮಹಿಳೆಯರ T20 ತಂಡ 🥇 ಚಿನ್ನ
ಮೊಹಿತ್ ಎಚ್.ಎಸ್. ಹಾಕಿ ಪುರುಷರ ಹಾಕಿ ತಂಡ 🥇 ಚಿನ್ನ
ಪ್ರಣವಿ ಶರತ್ ಅರಸ್ ಗಾಲ್ಫ್ ಮಹಿಳೆಯರ ವೈಯಕ್ತಿಕ 🥇 ಚಿನ್ನ
ಪ್ರಣವಿ ಅರಸ್, ಅದಿತಿ ಅಶೋಕ್ ಗಾಲ್ಫ್ ಮಹಿಳೆಯರ ತಂಡ 🥈 ಬೆಳ್ಳಿ
ತಿಲೋತ್ತಮಾ ಸೇನ್ ಶೂಟಿಂಗ್ 50m ರೈಫಲ್ 3P ತಂಡ 🥈 ಬೆಳ್ಳಿ
ಸ್ನೇಹಾ ಎಸ್.ಎಸ್. ಅಥ್ಲೆಟಿಕ್ಸ್ ಮಿಶ್ರ 4×100 ಮೀ. ರಿಲೇ 🥉 ಕಂಚು
ಆಯುಷ್ ಶೆಟ್ಟಿ ಬ್ಯಾಡ್ಮಿಂಟನ್ ಪುರುಷರ ತಂಡ 🥉 ಕಂಚು

ಪದಗಳನ್ನು ಗೆದ್ದ ಕ್ರೀಡಾಳುಗಳ ಪರಿಚಯ ಮತ್ತು ಸಾಧನೆ

ಎಂ.ಆರ್. ಪೂವಮ್ಮ, ಮತ್ತೆ ಏಷ್ಯಾದ ಟ್ರ್ಯಾಕ್‌ನಲ್ಲಿ ಚಿನ್ನದ ಓಟ

Imageಕರ್ನಾಟಕದ ಪಾಲಿಗೆ ಈ ಏಷ್ಯನ್ ಗೇಮ್ಸ್‌ನ ಅತ್ಯಂತ ಗಮನಾರ್ಹ ಹೆಸರುಗಳಲ್ಲಿ ಮೊದಲನೆಯದು ಮಚೆಟ್ಟಿರಾ ರಾಜು ಪೂವಮ್ಮ. ಕೊಡಗಿನ ಮೂಲದ ಪೂವಮ್ಮ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ದೀರ್ಘಕಾಲದಿಂದ ಪರಿಚಿತ ಹೆಸರು. 2026ರ ಏಷ್ಯನ್ ಗೇಮ್ಸ್‌ನಲ್ಲಿ ಅವರು ತಮ್ಮ ಅನುಭವವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಮಹಿಳೆಯರ 4×400 ಮೀಟರ್ ರಿಲೇ — ಚಿನ್ನ

ಕಿರಣ್ ಪಹಲ್, ಪ್ರಾಚಿ ಚೌಧರಿ, ಎಂ.ಆರ್. ಪೂವಮ್ಮ ಮತ್ತು ವಿಥ್ಯಾ ರಾಮರಾಜ್ ಅವರ ಭಾರತೀಯ ತಂಡ ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಚಿನ್ನ ಗೆದ್ದಿತು. ಇದು ಪೂವಮ್ಮ ಅವರ ವೃತ್ತಿಜೀವನಕ್ಕೆ ಮತ್ತೊಂದು ಮಹತ್ವದ ಅಧ್ಯಾಯ. 2022ರ ಹ್ಯಾಂಗ್‌ಝೌನಲ್ಲಿ ಭಾರತ ಬೆಳ್ಳಿಗೆ ತೃಪ್ತಿಪಟ್ಟಿದ್ದ ನಂತರ, ಈ ಬಾರಿ ಚಿನ್ನವನ್ನು ಮರಳಿ ಪಡೆಯುವ ಗುರಿಯೊಂದಿಗೆ ಭಾರತ ಕಣಕ್ಕಿಳಿದಿತ್ತು. ಅದು ಈ ತಂಡದ ಓಟದಲ್ಲಿ ನನಸಾಯಿತು.

ಮಿಶ್ರ 4×400 ಮೀಟರ್ — ಬೆಳ್ಳಿ

ಇದಕ್ಕೂ ಮೊದಲು ಪೂವಮ್ಮ ವಿಶಾಲ್ ಟಿ.ಕೆ., ವಿಥ್ಯಾ ರಾಮರಾಜ್ ಮತ್ತು ಮನು ಟಿ.ಎಸ್. ಅವರೊಂದಿಗೆ ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಗೆದ್ದಿದ್ದರು.

ಭಾರತ ತಂಡ 3:14.46 ಸಮಯದಲ್ಲಿ ಓಟ ಮುಗಿಸಿ ಬೆಳ್ಳಿ ಪಡೆದಿತು. ಬಹರೇನ್ 3:12.87 ಸಮಯದೊಂದಿಗೆ ಚಿನ್ನ ಗೆದ್ದಿತು. ಹೀಗಾಗಿ ಪೂವಮ್ಮ ಅವರ ವೈಯಕ್ತಿಕ ಏಷ್ಯನ್ ಗೇಮ್ಸ್ ಪದಕಗಳ ಖಾತೆಗೆ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಸೇರ್ಪಡೆಯಾಯಿತು. ಅವರ ಸಾಧನೆಯ ಮತ್ತೊಂದು ವಿಶೇಷತೆ ಎಂದರೆ, ಏಷ್ಯನ್ ಗೇಮ್ಸ್‌ನ ಹಿಂದಿನ ಆವೃತ್ತಿಗಳಲ್ಲೂ ಭಾರತದ ಚಿನ್ನದ ರಿಲೇ ತಂಡದ ಭಾಗವಾಗಿದ್ದ ಅನುಭವವನ್ನು ಅವರು ಈ ಬಾರಿಯ ಯುವ ಓಟಗಾರರೊಂದಿಗೆ ಹಂಚಿಕೊಂಡರು.

ಶ್ರೇಯಾಂಕಾ ಪಾಟೀಲ್,  ಬೆಂಗಳೂರಿನಿಂದ ಏಷ್ಯನ್ ಗೇಮ್ಸ್ ಚಿನ್ನದ ವೇದಿಕೆಗೆ

Image

ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯಂತ ಸಂತಸದ ಹೆಸರು ಶ್ರೇಯಾಂಕಾ ಪಾಟೀಲ್.

ಆರಂಭದಲ್ಲಿ ಅವರ ಭಾಗವಹಿಸುವಿಕೆಯೇ ಅನುಮಾನವಾಗಿತ್ತು. 2026ರ ಮಹಿಳಾ T20 ವಿಶ್ವಕಪ್‌ನಲ್ಲಿ ಗಾಯಗೊಂಡಿದ್ದ ಕಾರಣ ಏಷ್ಯನ್ ಗೇಮ್ಸ್ ತಂಡಕ್ಕೆ ಅವರನ್ನು ಫಿಟ್‌ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟು ಆಯ್ಕೆ ಮಾಡಲಾಗಿತ್ತು.  ಆದರೆ ಅವರು ಚೇತರಿಸಿಕೊಂಡು ಜಪಾನ್‌ಗೆ ತೆರಳಿ ಭಾರತ ಮಹಿಳಾ ತಂಡದ ಭಾಗವಾದರು. ಭಾರತ ಮಹಿಳಾ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿತು. ಹೀಗಾಗಿ ಶ್ರೇಯಾಂಕಾ ಪಾಟೀಲ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆಯಾಗಿದ್ದಾರೆ. ಕರ್ನಾಟಕದ ಕ್ರೀಡಾಪಟುಗಳ ಪದಕ ಪಟ್ಟಿಯಲ್ಲಿ ಇದು ಮತ್ತೊಂದು ಚಿನ್ನವನ್ನು ಸೇರಿಸಿತು.

ಇದು ಕೇವಲ ಒಂದು ಪದಕವಲ್ಲ. ಗಾಯದಿಂದ ಮರಳಿ ಬಂದು ದೊಡ್ಡ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಂಡದ ಭಾಗವಾಗಿರುವುದು ಅವರ ವೃತ್ತಿಜೀವನದ ಮಹತ್ವದ ಹಂತ.

ಪ್ರಣವಿ ಅರಸ್ — ಭಾರತೀಯ ಮಹಿಳಾ ಗಾಲ್ಫ್ ಇತಿಹಾಸದಲ್ಲಿ ಹೊಸ ಅಧ್ಯಾಯ

Image2026ರ ಏಷ್ಯನ್ ಗೇಮ್ಸ್‌ನ ಅತ್ಯಂತ ಐತಿಹಾಸಿಕ ಸಾಧನೆಗಳಲ್ಲಿ ಒಂದನ್ನು ಮೈಸೂರಿನ ಪ್ರಣವಿ ಶರತ್ ಅರಸ್ ಮಾಡಿದ್ದಾರೆ. 23 ವರ್ಷದ ಪ್ರಣವಿ ಮಹಿಳೆಯರ ವೈಯಕ್ತಿಕ ಗಾಲ್ಫ್‌ನಲ್ಲಿ ಏಷ್ಯನ್ ಗೇಮ್ಸ್ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು.

72 ಹೋಲ್‌ಗಳ ಹೋರಾಟ

ಫೈನಲ್ ಸುತ್ತಿನ ಆರಂಭದಲ್ಲೇ ಪ್ರಣವಿಗೆ ದೊಡ್ಡ ಸವಾಲು ಎದುರಾಯಿತು. ಮೂರನೇ ಹೋಲ್‌ನಲ್ಲಿ ಟ್ರಿಪಲ್ ಬೋಗಿ ಹೊಡೆದು ಅವರ ಮೂರು ಶಾಟ್‌ಗಳ ಮುನ್ನಡೆ ಕಳೆದುಹೋಯಿತು. ಆದರೆ ಅವರು ಕುಗ್ಗಲಿಲ್ಲ. ಮುಂದಿನ ಹೋಲ್‌ಗಳಲ್ಲಿ ಬರ್ಡಿಗಳನ್ನು ದಾಖಲಿಸಿ ಮತ್ತೆ ನಿಯಂತ್ರಣಕ್ಕೆ ಬಂದರು. ಅಂತಿಮ ಸುತ್ತಿನಲ್ಲಿ 70 ಸ್ಕೋರ್ ಮಾಡಿ, ನಾಲ್ಕು ಸುತ್ತುಗಳ ಒಟ್ಟು 15-under 265 ಸ್ಕೋರ್‌ನೊಂದಿಗೆ ಒಂದು ಶಾಟ್ ಅಂತರದಲ್ಲಿ ಚಿನ್ನ ಗೆದ್ದರು.

ತಂಡದಲ್ಲೂ ಬೆಳ್ಳಿ

ಪ್ರಣವಿ ಅವರ ವೈಯಕ್ತಿಕ ಚಿನ್ನದ ಜೊತೆಗೆ ಪ್ರಣವಿ ಉರ್ಸ್, ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರ ಭಾರತೀಯ ಮಹಿಳಾ ಗಾಲ್ಫ್ ತಂಡ ಬೆಳ್ಳಿ ಗೆದ್ದಿತು. ಭಾರತ ತಂಡ 14-under 546 ಸ್ಕೋರ್‌ನೊಂದಿಗೆ ಎರಡನೇ ಸ್ಥಾನ ಪಡೆದಿತು. ಚೀನಾ ಚಿನ್ನ ಗೆದ್ದಿತು.  ಹೀಗಾಗಿ ಪ್ರಣವಿ ಅವರ ಖಾತೆಗೆ ಚಿನ್ನ + ಬೆಳ್ಳಿ — ಎರಡು ಪದಕಗಳು.

ಅದಿತಿ ಅಶೋಕ್ — ಅನುಭವದ ಮತ್ತೊಂದು ಬೆಳ್ಳಿ

Asian Games 2026: ಅದಿತಿ ಅಶೋಕ್ ನೇತೃತ್ವದಲ್ಲಿ ಭಾರತದ 6 ಗಾಲ್ಫರ್‌ಗಳು ಕಣಕ್ಕೆ; ಪದಕದ ಮೇಲೆ ಕಣ್ಣು | Aditi Ashok to Captain India's 6-Member Golf Squad at Asian Games, Targets Gold Following 2023 Silver Medal ...

ಬೆಂಗಳೂರಿನ ಅದಿತಿ ಅಶೋಕ್ ಅವರಿಗೂ 2026ರ ಏಷ್ಯನ್ ಗೇಮ್ಸ್ ಮತ್ತೊಂದು ಪದಕವನ್ನು ತಂದಿತು. ಪ್ರಣವಿ ಅರಸ್  ಮತ್ತು ದೀಕ್ಷಾ ದಾಗರ್ ಅವರೊಂದಿಗೆ ಭಾರತ ಮಹಿಳಾ ಗಾಲ್ಫ್ ತಂಡದಲ್ಲಿ ಆಡಿದ ಅದಿತಿ ಬೆಳ್ಳಿ ಪದಕ ಗೆದ್ದರು.

ಅದಿತಿ ಈಗಾಗಲೇ ಏಷ್ಯನ್ ಗೇಮ್ಸ್ ಮಟ್ಟದಲ್ಲಿ ಪದಕ ಗೆದ್ದ ಅನುಭವ ಹೊಂದಿದ್ದರು. 2022ರ ಹ್ಯಾಂಗ್‌ಝೌನಲ್ಲಿ ಅವರು ವೈಯಕ್ತಿಕ ಬೆಳ್ಳಿ ಪಡೆದಿದ್ದರು. ಈ ಬಾರಿ ತಂಡದ ಬೆಳ್ಳಿ ಮೂಲಕ ಮತ್ತೆ ಭಾರತದ ಗಾಲ್ಫ್ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಫೈನಲ್ ಸುತ್ತಿನಲ್ಲಿ ಅದಿತಿ 67 ಸ್ಕೋರ್ ಮಾಡಿದ್ದು ಭಾರತದ ತಂಡದ ಬೆಳ್ಳಿ ಪದಕದ ಹೋರಾಟದಲ್ಲಿ ಬಹಳ ಮುಖ್ಯವಾಯಿತು.

ಮೊಹಿತ್ ಎಚ್.ಎಸ್.  ಏಷ್ಯನ್ ಚಾಂಪಿಯನ್ ಭಾರತೀಯ ಹಾಕಿ ತಂಡದ ಗೋಲ್‌ಕೀಪರ್

Achievement: ಹಾಸನದ ಮೋಹಿತ್ ಎಚ್.ಎಸ್.ಗೆ ವಿಶ್ವಕಪ್ ಟಿಕೆಟ್; ಭಾರತ ಹಾಕಿ ತಂಡಕ್ಕೆ ಆಯ್ಕೆ, 50 ವರ್ಷದ ಕನಸಿಗೆ ಕನ್ನಡಿಗನ ʼಕಾವಲು!ʼ | ಕ್ರೀಡಾ ಸುದ್ದಿ - News18 Kannada

ಕರ್ನಾಟಕದ ಮತ್ತೊಬ್ಬ ಚಿನ್ನದ ಪದಕ ವಿಜೇತ ಮೊಹಿತ್ ಎಚ್.ಎಸ್. ಅವರು ಭಾರತೀಯ ಪುರುಷರ ಹಾಕಿ ತಂಡದ ಗೋಲ್‌ಕೀಪರ್‌ಗಳಲ್ಲಿ ಒಬ್ಬರು. ಕ್ರೀಡಾಕೂಟದ ಅಂತಿಮ ದಿನ ಭಾರತ ಮಲೇಷ್ಯಾವನ್ನು 5–1ರಿಂದ ಸೋಲಿಸಿ ಪುರುಷರ ಹಾಕಿಯಲ್ಲಿ ಚಿನ್ನ ಗೆದ್ದಿತು.  ಈ ಗೆಲುವಿನ ಮೂಲಕ ಭಾರತ ಪುರುಷರ ಹಾಕಿಯಲ್ಲಿ ತನ್ನ ಏಷ್ಯನ್ ಗೇಮ್ಸ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡಿತು ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆಯನ್ನೂ ಖಚಿತಪಡಿಸಿಕೊಂಡಿತು. (

ತಿಲೋತ್ತಮಾ ಸೇನ್,  18ರ ಹರೆಯದಲ್ಲೇ ಏಷ್ಯನ್ ಗೇಮ್ಸ್ ಬೆಳ್ಳಿ

Vidarsa K Vinod

ಬೆಂಗಳೂರಿನ ಯುವ ಶೂಟರ್ ತಿಲೋತ್ತಮಾ ಸೇನ್ ಅವರ ಸಾಧನೆಯೂ ವಿಶೇಷ. ಮಹಿಳೆಯರ 50 ಮೀಟರ್ ರೈಫಲ್ 3 Positions ತಂಡದಲ್ಲಿ ತಿಲೋತ್ತಮಾ, ವಿದರ್ಶಾ ವಿನೋದ್ ಮತ್ತು ಆಶಿ ಚೌಕ್ಸಿ ಸೇರಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟರು. ಭಾರತ ತಂಡ ಒಟ್ಟು 1,763 ಅಂಕ ಗಳಿಸಿ ಎರಡನೇ ಸ್ಥಾನ ಪಡೆಯಿತು. ಚೀನಾ 1,773 ಅಂಕಗಳೊಂದಿಗೆ ಚಿನ್ನ ಗೆದ್ದಿತು.

ತಿಲೋತ್ತಮಾ ವೈಯಕ್ತಿಕ ಅರ್ಹತಾ ಸುತ್ತಿನಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿ 590 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು ವೈಯಕ್ತಿಕ ಫೈನಲ್‌ಗೂ ಅರ್ಹತೆ ಪಡೆದರು. ಅಂತಿಮವಾಗಿ ಅವರು ವೈಯಕ್ತಿಕ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದರು — ಕಂಚು ಕೇವಲ ಅಲ್ಪ ಅಂತರದಲ್ಲಿ ಕೈತಪ್ಪಿತು.

ಮತ್ತೊಂದು ಹೆಮ್ಮೆಯ ಸಂಗತಿಯಿಂದರೆ ಈಕೆ ನಮ್ಮ ರೇವಾ ವಿಶ್ವವಿದ್ಯಾಲಯದ ಪದವಿಯ ವಿದ್ಯಾರ್ಥಿನಿಯಾಗಿದ್ದಾರೆ. ಕೇವಲ 18ನೇ ವಯಸ್ಸಿನಲ್ಲೇ ಏಷ್ಯನ್ ಗೇಮ್ಸ್ ಪದಕ ಗೆದ್ದಿರುವುದು ಅವರ ಮುಂದಿನ ಪಯಣದ ಬಗ್ಗೆ ದೊಡ್ಡ ನಿರೀಕ್ಷೆ ಮೂಡಿಸಿದೆ. 

ಸ್ನೇಹಾ ಎಸ್.ಎಸ್. — ಮಲೆನಾಡಿನಿಂದ ಏಷ್ಯನ್ ಗೇಮ್ಸ್ ಪದಕದ ವೇದಿಕೆಗೆ

S.S. Sneha, a 4x100m relay silver medalist at the Asian Athletics Championship, outclassed the competition at the Sree Kanteerava Stadium, winning the 100m event at the Karnataka State Senior Athletic Meet in

ಕರ್ನಾಟಕದ ಗ್ರಾಮೀಣ ಪ್ರತಿಭೆ ಸ್ನೇಹಾ ಎಸ್.ಎಸ್. ಅವರ ಕಥೆ ಕ್ರೀಡಾ ಸಾಧನೆಯಷ್ಟೇ ಅಲ್ಲ, ಹೋರಾಟದ ಕಥೆಯೂ ಹೌದು. ಕೊಪ್ಪ ತಾಲೂಕಿನ ಶಾನುವಳ್ಳಿಯ ಸ್ನೇಹಾ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ತಂಡದ ಪರ ಓಡಿ ಕಂಚಿನ ಪದಕ ಗೆದ್ದರು. ಭಾರತ ಈ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಕೂಡ ನಿರ್ಮಿಸಿತು.

ಅವರ ಜೀವನದ ಮತ್ತೊಂದು ವಿಶೇಷ ಅಂಶವೆಂದರೆ, ಅಥ್ಲೆಟಿಕ್ಸ್ ತರಬೇತಿಯ ಜೊತೆಗೆ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ನೆರವಾಗಲು ತಂದೆಯೊಂದಿಗೆ ಅಡಿಕೆ ಕೊಯ್ಲಿನ ಕೆಲಸದಲ್ಲೂ ಕೈಜೋಡಿಸಿದ್ದರು. ನಂತರ ಆದಾಯ ತೆರಿಗೆ ಇಲಾಖೆಯಲ್ಲಿ ತೆರಿಗೆ ಸಹಾಯಕರಾಗಿ ಕೆಲಸ ಪಡೆದುಕೊಂಡು ತಮ್ಮ ಕ್ರೀಡಾ ತರಬೇತಿಯನ್ನು ಮುಂದುವರಿಸಿದರು.  ಹೀಗಾಗಿ ಸ್ನೇಹಾ ಅವರ ಕಂಚಿನ ಪದಕದ ಹಿಂದೆ ಕೇವಲ ಒಂದು ಓಟವಿಲ್ಲ — ಗ್ರಾಮೀಣ ಹಿನ್ನೆಲೆಯಿಂದ ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಗೆ ಬಂದ ಹೋರಾಟದ ಪಯಣವಿದೆ.

ಆಯುಷ್ ಶೆಟ್ಟಿ — ಬ್ಯಾಡ್ಮಿಂಟನ್ ತಂಡಕ್ಕೆ ಕಂಚು

Imageಮಂಗಳೂರಿನ ಯುವ ಬ್ಯಾಡ್ಮಿಂಟನ್ ತಾರೆ ಆಯುಷ್ ಶೆಟ್ಟಿ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡದೊಂದಿಗೆ ಕಂಚಿನ ಪದಕ ಗೆದ್ದರು.

ಭಾರತ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಜಪಾನ್‌ನ್ನು 3–0ರಿಂದ ಸೋಲಿಸಿ ಸೆಮಿಫೈನಲ್ ತಲುಪಿತು. ಚೀನಾದ ವಿರುದ್ಧ 1–3ರಿಂದ ಸೋತ ಬಳಿಕ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. ಆಯುಷ್ ವೈಯಕ್ತಿಕ ಪುರುಷರ ಸಿಂಗಲ್ಸ್‌ನಲ್ಲೂ ಆಡಿದರು. 32ರ ಸುತ್ತಿನಲ್ಲಿ ಕಜಕಸ್ತಾನದ ಆಟಗಾರನನ್ನು 21–7, 21–7ರಿಂದ ಸೋಲಿಸಿದರೂ, 16ರ ಸುತ್ತಿನಲ್ಲಿ ಚೈನೀಸ್ ತೈಪೆಯ ಚೌ ತಿಯನ್-ಚೆನ್ ವಿರುದ್ಧ ಮೂರು ಗೇಮ್‌ಗಳ ಹೋರಾಟದಲ್ಲಿ ಸೋತರು. ತಂಡದ ಕಂಚು ಅವರ ಏಷ್ಯನ್ ಗೇಮ್ಸ್ ಪದಕದ ಮೊದಲ ಗುರುತು.

ಪದಕ ಗೆಲ್ಲದಿದ್ದರೂ ಗಮನ ಸೆಳೆದ ಇತರ ಕನ್ನಡಿಗರು

ಕರ್ನಾಟಕದಿಂದ ಈ ಬಾರಿ ಪದಕ ಗೆಲ್ಲದಿದ್ದರೂ ಗಮನಾರ್ಹ ನಿರೀಕ್ಷೆ ಮೂಡಿಸಿದ್ದ ಇತರೇ ಕ್ರೀಡಾಪಟುಗಳು ಇದ್ದರು.

  • ಶ್ರೀಹರಿ ನಟರಾಜ್ : ಒಲಿಂಪಿಯನ್ ಹಾಗೂ ಭಾರತದ ಪ್ರಮುಖ ಈಜುಗಾರರಲ್ಲಿ ಒಬ್ಬರಾದ ಶ್ರೀಹರಿ ನಟರಾಜ್ ಮೂರನೇ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡರು. ಕರ್ನಾಟಕದ ಈಜು ಪರಂಪರೆಯ ಪ್ರಮುಖ ಮುಖವಾಗಿರುವ ಅವರು ರಾಷ್ಟ್ರೀಯ ಮಟ್ಟದಲ್ಲಿ ಹಲವು ವರ್ಷಗಳಿಂದ ಮುಂಚೂಣಿಯಲ್ಲಿದ್ದಾರೆ.
  • ಉನ್ನತಿ ಅಯ್ಯಪ್ಪ : ಅಥ್ಲೆಟಿಕ್ಸ್‌ನಲ್ಲಿ ಕರ್ನಾಟಕದ ಪ್ರಮುಖ ಯುವ ಪ್ರತಿಭೆಗಳಲ್ಲಿ ಒಬ್ಬರಾದ ಉನ್ನತಿ ಅಯ್ಯಪ್ಪ ರಿಲೇ ತಂಡಗಳ ಭಾಗವಾಗಿದ್ದರು.
  • ಸಿಂಧುಶ್ರೀ ಜಿ. : ಪೋಲ್ ವಾಲ್ಟ್‌ನಲ್ಲಿ 4.25 ಮೀಟರ್ ರಾಷ್ಟ್ರೀಯ ದಾಖಲೆ ಮಟ್ಟದ ಪ್ರದರ್ಶನ ನೀಡಿದ್ದ ಸಿಂಧುಶ್ರೀ ಅವರನ್ನು ಪದಕದ ನಿರೀಕ್ಷೆಯೊಂದಿಗೆ ಕಳುಹಿಸಲಾಗಿತ್ತು.
  • ಯಶಸ್ ಪಾಲಕ್ಷ : 400 ಮೀಟರ್ ಹರ್ಡಲ್ಸ್‌ನಲ್ಲಿ 49.00 ಸೆಕೆಂಡ್ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಕಣಕ್ಕಿಳಿದ ಯಶಸ್ ಕೂಡ ಕರ್ನಾಟಕದ ಪ್ರಮುಖ ಅಥ್ಲೆಟಿಕ್ಸ್ ಪ್ರತಿಭೆಯಾಗಿದ್ದರು.
  • ಅಕಾಷ್ ಮಣಿ, ಉತ್ಕರ್ಷ್ ಸಂತೋಷ್ ಪಾಟೀಲ್, ಧಕ್ಷನ್ ಶಶಿಕುಮಾರ್, ಅನೀಶ್ ಸುನಿಲ್ ಕುಮಾರ್ ಗೌಡ : ಈ ಐವರು ಕರ್ನಾಟಕ ಮೂಲದ ಈಜುಗಾರರ ತಂಡದ ಭಾಗವಾಗಿದ್ದರು.
  • ಯಶಸ್ವಿನಿ ಘೋರ್ಪಡೆ : ಬೆಂಗಳೂರಿನ ಯುವ ಟೇಬಲ್ ಟೆನಿಸ್ ಆಟಗಾರ್ತಿ ಯಶಸ್ವಿನಿ ಘೋರ್ಪಡೆ ರಾಷ್ಟ್ರೀಯ ಮಹಿಳಾ ಸಿಂಗಲ್ಸ್ ಚಾಂಪಿಯನ್ ಆಗಿ ಏಷ್ಯನ್ ಗೇಮ್ಸ್‌ಗೆ ತೆರಳಿದ್ದರು.
  • ಫೌವಾಡ್ ಮಿರ್ಜಾ : ಒಲಿಂಪಿಯನ್ ಈಕ್ವೆಸ್ಟ್ರಿಯನ್ ಫೌವಾಡ್ ಮಿರ್ಜಾ ಮತ್ತೆ ಏಷ್ಯನ್ ಗೇಮ್ಸ್ ವೇದಿಕೆಗೆ ಮರಳಿದರು. 2018ರ ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದ ಅವರ ಅನುಭವ ತಂಡಕ್ಕೆ ಪ್ರಮುಖವಾಗಿತ್ತು.
  • ಅಶ್ವಲ್ ರೈ : ಭಾರತೀಯ ಪುರುಷರ ವಾಲಿಬಾಲ್ ತಂಡದ ಅನುಭವಿ ಮಧ್ಯಮ ಬ್ಲಾಕರ್ ಅಶ್ವಲ್ ರೈ ಎರಡನೇ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡರು. 2022ರ ಹ್ಯಾಂಗ್‌ಝೌನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತದ ಐತಿಹಾಸಿಕ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

2026ರ ಏಷ್ಯನ್ ಗೇಮ್ಸ್‌ಗೆ ಕರ್ನಾಟಕದಿಂದ 24 ಮಂದಿ ಭಾರತೀಯ ತಂಡದ ಭಾಗವಾಗಿ ಟ್ರ್ಯಾಕ್‌ನಿಂದ ಗಾಲ್ಫ್ ಮೈದಾನದವರೆಗೆ, ಶೂಟಿಂಗ್ ರೇಂಜ್‌ನಿಂದ ಕ್ರಿಕೆಟ್ ಮೈದಾನದವರೆಗೆ, ಹಾಕಿ ಸ್ಟೇಡಿಯಂನಿಂದ ಬ್ಯಾಡ್ಮಿಂಟನ್ ಕೋರ್ಟ್‌ವರೆಗೆ ಕರ್ನಾಟಕದ ಕ್ರೀಡಾಪಟುಗಳ ತ್ರಿವರ್ಣ ಧ್ವಜ ಹಾರಿದೆ.

ಕರ್ನಾಟಕದ ಕ್ರೀಡಾ ಭವಿಷ್ಯಕ್ಕೆ 2026ರ ಸಂದೇಶ

ಇವರೆಲ್ಲರೂ ತಮ್ಮ ತಮ್ಮ ವಿಭಾಗದಲ್ಲಿ ಸಾಧನೆಗಳನ್ನು ಮಾಡಿ ಪದಗಳನ್ನು ಗೆಲ್ಲುವ ಮೂಲಕ ಏಷ್ಯನ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆಲ್ಲಬಲ್ಲ ಪ್ರತಿಭೆ ಕರ್ನಾಟಕದಲ್ಲಿದ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿರುವುದು ಅತ್ಯಂತ ಶ್ಲಾಘನೀಯ ಮತ್ತು ಇಂದಿನ ಯುವಜನತೆಗೆ ಪ್ರೇರಣಾದಾಯಿ.

ಕೊಡಗಿನ ಪೂವಮ್ಮ, ಮೈಸೂರಿನ ಪ್ರಣವಿ ಅರಸ್ , ಬೆಂಗಳೂರಿನ ಅದಿತಿ ಮತ್ತು ತಿಲೋತ್ತಮಾ, ಮಂಗಳೂರಿನ ಆಯುಷ್, ಗ್ರಾಮೀಣ ಹಿನ್ನೆಲೆಯ ಸ್ನೇಹಾ, ಬೆಂಗಳೂರಿನ ಶ್ರೇಯಾಂಕಾ — ಇವರ ಸಾಧನೆಗಳ ಹಿಂದೆ ವಿಭಿನ್ನ ಪರಿಸರಗಳಿವೆ.

  • ಯಾರಿಗೋ ಅತ್ಯುತ್ತಮ ತರಬೇತಿ ಸಿಕ್ಕಿದೆ.
  • ಯಾರೋ ಗಾಯದ ನಂತರ ಮರಳಿದ್ದಾರೆ.
  • ಯಾರೋ ಗ್ರಾಮೀಣ ಪರಿಸರದಿಂದ ಬಂದಿದ್ದಾರೆ.
  • ಯಾರೋ ಕುಟುಂಬದ ಆರ್ಥಿಕ ಸವಾಲುಗಳ ನಡುವೆ ಕ್ರೀಡೆಯನ್ನು ಮುಂದುವರಿಸಿದ್ದಾರೆ.
  • ಯಾರೋ ಈಗಾಗಲೇ ಅಂತಾರಾಷ್ಟ್ರೀಯ ಅನುಭವ ಹೊಂದಿದ್ದಾರೆ.
  • ಮತ್ತೆ ಕೆಲವರು ಮೊದಲ ಬಾರಿಗೆ ಏಷ್ಯನ್ ವೇದಿಕೆಯಲ್ಲಿ ಕಾಲಿಟ್ಟಿದ್ದಾರೆ.

ಆದರೆ ಇವರನ್ನು ಒಟ್ಟುಗೂಡಿಸುವ ಒಂದು ಸಂಗತಿಯಿದೆ

ಭಾರತದ ತ್ರಿವರ್ಣ ಧ್ವಜವನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಬೇಕು.

ಪೂವಮ್ಮ ಅವರ ರಿಲೇಯಲ್ಲಿ ಕೇಳಿಬಂದ ರಾಷ್ಟ್ರಗೀತೆ, ಪ್ರಣವಿ ಅರಸ್ ಅವರ ಐತಿಹಾಸಿಕ ಗಾಲ್ಫ್ ಚಿನ್ನ, ಶ್ರೇಯಾಂಕಾ ಪಾಟೀಲ್ ಅವರ ಕ್ರಿಕೆಟ್ ಚಿನ್ನ, ಮೊಹಿತ್ ಅವರ ಹಾಕಿ ಚಿನ್ನ, ತಿಲೋತ್ತಮಾ ಅವರ ರೈಫಲ್ ಬೆಳ್ಳಿ, ಸ್ನೇಹಾ ಅವರ ಮಿಂಚಿನ ಓಟ ಮತ್ತು ಆಯುಷ್ ಶೆಟ್ಟಿಯ ಬ್ಯಾಡ್ಮಿಂಟನ್ ಕಂಚು — ಇವೆಲ್ಲವೂ ಕರ್ನಾಟಕದ ಕ್ರೀಡಾ ಸಾಮರ್ಥ್ಯದ ವಿಭಿನ್ನ ಮುಖಗಳು.. ಅವರಲ್ಲಿ ಎಂಟು ಮಂದಿ ಪದಕದ ವೇದಿಕೆ ಏರಿದರು. ಒಟ್ಟು ಒಂಬತ್ತು ಪದಕಗಳು ಭಾರತದ ಖಾತೆಗೆ ಸೇರಿದವು. ಆದರೆ ಈ ಪದಕಗಳಿಗಿಂತಲೂ ದೊಡ್ಡ ಗೆಲುವು ಏನೆಂದರೆ — ಕರ್ನಾಟಕದ ಯುವ ಪೀಳಿಗೆಗೆ ನಾವು ಕೂಡ ಏಷ್ಯನ್ ಚಾಂಪಿಯನ್ ಆಗಬಹುದು ಎಂಬ ನಂಬಿಕೆ ಮೂಡಿರುವುದೇ ಕನ್ನಡಿಗರ ನಿಜವಾದ ಕೀರ್ತಿಪತಾಕೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply