ಕರ್ನಾಟಕದ ರಾಜಕೀಯದಲ್ಲಿ ಈಗ ಕೇಳಿಬರುತ್ತಿರುವ ಸ್ಟಿಂಗ್ ಆಪರೇಷನ್, ಹನಿಟ್ರ್ಯಾಪ್ ಮತ್ತು ವಿಡಿಯೋ ಸೋರಿಕೆಗಳ ವಿವಾದಗಳು ಇದೇ ಆತಂಕವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿವೆ. ರಾಜಕೀಯ ಎದುರಾಳಿಯನ್ನು ಮಣಿಸಲು ಇಂತಹ ತಂತ್ರಗಳನ್ನು ಬಳಸಲಾಗುತ್ತಿದೆಯೇ? ಅಥವಾ ಕೆಲವು ಪ್ರಕರಣಗಳಲ್ಲಿ ನಿಜವಾಗಿಯೂ ಸಾರ್ವಜನಿಕ ಹಿತಾಸಕ್ತಿಯ ಸಂಗತಿಗಳನ್ನು ಬಯಲಿಗೆಳೆಯುವ ಪ್ರಯತ್ನ ನಡೆಯುತ್ತಿದೆಯೇ? ಆರೋಪಗಳ ಹಿಂದೆ ಯಾರಿದ್ದಾರೆ? ಸತ್ಯ ಯಾವುದು, ರಾಜಕೀಯ ಪ್ರಚಾರ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು, ಒಂದು ಸಂಗತಿಯನ್ನು ಮರೆಯಬಾರದು. ಆರೋಪವೇ ಅಪರಾಧದ ಸಾಕ್ಷಿಯಲ್ಲ; ವೈರಲ್ ಆಗುವ ವಿಡಿಯೋವೇ ಸತ್ಯದ ಪ್ರಮಾಣಪತ್ರವಲ್ಲ.
ಸ್ಟಿಂಗ್ ಆಪರೇಷನ್, ಜನಹಿತದ ತನಿಖೆಯೋ, ರಾಜಕೀಯ ಸೇಡಿನ ಅಸ್ತ್ರವೋ?
ಸ್ಟಿಂಗ್ ಆಪರೇಷನ್ ಎಂಬುದು ಮೂಲತಃ ಗುಪ್ತವಾಗಿ ಮಾಹಿತಿ ಅಥವಾ ಸಾಕ್ಷ್ಯ ಸಂಗ್ರಹಿಸಿ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಅಕ್ರಮಗಳನ್ನು ಬಯಲಿಗೆಳೆಯುವ ವಿಧಾನ. ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಲಂಚದ ಬೇಡಿಕೆ ಅಥವಾ ಸಾರ್ವಜನಿಕ ಹುದ್ದೆಯಲ್ಲಿರುವವರ ಅಕ್ರಮಗಳನ್ನು ಸಾಕ್ಷ್ಯಸಹಿತ ಬಹಿರಂಗಪಡಿಸುವುದಕ್ಕೆ ಇದು ಕೆಲವೊಮ್ಮೆ ಉಪಯುಕ್ತವಾಗಬಹುದು.
ಆದರೆ ಅದೇ ವಿಧಾನವನ್ನು ವ್ಯಕ್ತಿಯ ಖಾಸಗಿ ಬದುಕಿನೊಳಗೆ ಪ್ರವೇಶಿಸಲು, ಆಮಿಷವೊಡ್ಡಿ ಸನ್ನಿವೇಶ ಸೃಷ್ಟಿಸಲು, ಸಂಭಾಷಣೆಗಳನ್ನು ಸಂದರ್ಭದಿಂದ ಬೇರ್ಪಡಿಸಿ ಪ್ರಸಾರ ಮಾಡಲು ಅಥವಾ ರಾಜಕೀಯ ಒತ್ತಡ ಹೇರಲು ಬಳಸಿದರೆ, ಅದರ ಉದ್ದೇಶದ ಬಗ್ಗೆಯೇ ಪ್ರಶ್ನೆಗಳು ಉದ್ಭವಿಸುತ್ತವೆ. ಜನಪ್ರತಿನಿಧಿಗಳ ಸಾರ್ವಜನಿಕ ಕರ್ತವ್ಯಗಳ ಬಗ್ಗೆ ಪ್ರಶ್ನಿಸುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಅವರ ಖಾಸಗಿ ಬದುಕಿನ ಪ್ರತಿಯೊಂದು ಸಂಗತಿಯೂ ಸಾರ್ವಜನಿಕ ಚರ್ಚೆಯ ವಸ್ತುವಾಗಬೇಕೆಂದಿಲ್ಲ. ಸಾರ್ವಜನಿಕ ಹಿತಾಸಕ್ತಿಗೂ ಕೇವಲ ಜನರ ಕುತೂಹಲ ಕೆರಳಿಸುವುದಕ್ಕೂ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ.
ಒಂದು ವಿಡಿಯೋ ಬಹಿರಂಗಪಡಿಸುವ ಮೊದಲು ಅದರ ಮೂಲ, ನೈಜತೆ, ಸಂಪಾದನೆಗೊಂಡಿದೆಯೇ, ಅದರಲ್ಲಿರುವ ಆರೋಪಗಳಿಗೆ ಸ್ವತಂತ್ರ ಸಾಕ್ಷ್ಯವಿದೆಯೇ ಮತ್ತು ಅದನ್ನು ಪ್ರಸಾರ ಮಾಡುವುದರಿಂದ ನಿಜವಾಗಿಯೂ ಸಾರ್ವಜನಿಕ ಹಿತಾಸಕ್ತಿಗೆ ಪ್ರಯೋಜನವಿದೆಯೇ ಎಂಬುದನ್ನು ಪರಿಶೀಲಿಸಬೇಕು. ಈ ಮಾನದಂಡಗಳನ್ನು ಬದಿಗಿಟ್ಟು, ಮೊದಲು ವಿಡಿಯೋ ಹರಿಬಿಟ್ಟು ನಂತರ ಅದರ ಸತ್ಯಾಸತ್ಯತೆ ಚರ್ಚಿಸುವ ಪ್ರವೃತ್ತಿ ಬೆಳೆದರೆ, ಅದು ತನಿಖಾ ಪತ್ರಿಕೋದ್ಯಮವಲ್ಲ. ವ್ಯಕ್ತಿಯ ಗೌರವ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕಿಗೆ ಧಕ್ಕೆ ತರುವ ಸಾಧನವಾಗಬಹುದು.
ಸಿದ್ದರಾಮಯ್ಯ ಅವರ ವಿಡಿಯೋ ವಿವಾದ. ಕರ್ನಾಟಕ ರಾಜಕೀಯದಲ್ಲಿ ಹೊಸ ಸಂಚಲನ

ಇದೇ ಸಂದರ್ಭದಲ್ಲಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಪ್ರಕರಣದ ಹಿಂದೆ ರಾಜಕೀಯ ಉದ್ದೇಶಗಳಿವೆ ಎಂದು ಆರೋಪಿಸಿ ತನಿಖೆಗೆ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನೂ ಸ್ಟಿಂಗ್ ಆಪರೇಷನ್ ಮೂಲಕ ಸಿಲುಕಿಸಲು ಪ್ರಯತ್ನ ನಡೆದಿತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ವಿವಿಧ ರಾಜಕೀಯ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಈ ಬೆಳವಣಿಗೆಗಳು ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ರಾಜಕೀಯದಲ್ಲಿ ನಿಜವಾಗಿಯೂ ಅಕ್ರಮಗಳನ್ನು ಬಯಲಿಗೆಳೆಯುವ ಪ್ರಯತ್ನ ನಡೆಯುತ್ತಿದೆಯೇ? ಅಥವಾ ಪಕ್ಷಗಳ ನಡುವಿನ ಅಧಿಕಾರದ ಹೋರಾಟದಲ್ಲಿ ವ್ಯಕ್ತಿಗಳ ಗೌರವವನ್ನೇ ಅಸ್ತ್ರವನ್ನಾಗಿ ಮಾಡಲಾಗುತ್ತಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಆರೋಪಗಳಿಗಿಂತಲೂ ತನಿಖೆ ಮತ್ತು ಸಾಕ್ಷ್ಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕು.
ಕರ್ನಾಟಕ ರಾಜಕೀಯದ ಹಿಂದಿನ ಸಿಡಿ ಮತ್ತು ಹನಿಟ್ರ್ಯಾಪ್ ವಿವಾದಗಳು
ಕರ್ನಾಟಕ ರಾಜಕೀಯಕ್ಕೆ ವಿಡಿಯೋ ವಿವಾದಗಳು ಹೊಸದಲ್ಲ. ಕಳೆದ ಹಲವು ವರ್ಷಗಳಲ್ಲಿ ರಹಸ್ಯವಾಗಿ ಚಿತ್ರೀಕರಿಸಿದ ದೃಶ್ಯಗಳು, ಆಡಿಯೋ ದಾಖಲೆಗಳು ಮತ್ತು ಸಿಡಿಗಳ ಸುತ್ತ ಅನೇಕ ರಾಜಕೀಯ ಬಿರುಗಾಳಿಗಳು ಎದ್ದಿವೆ. 2019ರಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಹನಿಟ್ರ್ಯಾಪ್ ಆರೋಪಗಳು ಮತ್ತು ವಿಡಿಯೋ ವಿವಾದ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದವು. ಆ ಪ್ರಕರಣದಲ್ಲಿ ರಾಜೀನಾಮೆ, ತನಿಖೆ ಮತ್ತು ಕಾನೂನು ಹೋರಾಟಗಳೂ ನಡೆದವು.
ಇಂತಹ ಪ್ರಕರಣಗಳಿಂದ ಸ್ಪಷ್ಟವಾಗುವ ಸಂಗತಿಯೆಂದರೆ, ವಿಡಿಯೋ ಅಥವಾ ಸಿಡಿ ಬಹಿರಂಗವಾದ ಕ್ಷಣದಿಂದಲೇ ರಾಜಕೀಯ ಪರಿಣಾಮಗಳು ಆರಂಭವಾಗುತ್ತವೆ. ಆದರೆ ಅದರಲ್ಲಿರುವ ಆರೋಪಗಳ ಸತ್ಯಾಸತ್ಯತೆ ನಿರ್ಧಾರವಾಗಲು ತನಿಖೆ, ಸಾಕ್ಷ್ಯ ಮತ್ತು ಕಾನೂನು ಪ್ರಕ್ರಿಯೆಗಳು ಅಗತ್ಯವಾಗುತ್ತವೆ. ಇಂದು ತಂತ್ರಜ್ಞಾನ ಮತ್ತಷ್ಟು ಮುಂದುವರಿದಿದೆ. ವಿಡಿಯೋಗಳನ್ನು ಸಂಪಾದಿಸುವುದು, ದೃಶ್ಯಗಳನ್ನು ಸಂದರ್ಭದಿಂದ ಬೇರ್ಪಡಿಸುವುದು, ಕೃತಕ ಬುದ್ಧಿಮತ್ತೆಯ ಮೂಲಕ ನಕಲಿ ದೃಶ್ಯಗಳನ್ನು ಸೃಷ್ಟಿಸುವುದು ಮತ್ತು ಕ್ಷಣಾರ್ಧದಲ್ಲಿ ಲಕ್ಷಾಂತರ ಜನರಿಗೆ ತಲುಪಿಸುವುದು ಸಾಧ್ಯವಾಗಿದೆ. ಹೀಗಾಗಿ ವಿಡಿಯೋ ಒಂದನ್ನು ಕಂಡ ತಕ್ಷಣ ಅದನ್ನು ಸತ್ಯವೆಂದು ಒಪ್ಪಿಕೊಳ್ಳುವ ಬದಲು ಅದರ ಮೂಲ ಮತ್ತು ನೈಜತೆಯನ್ನು ಪರಿಶೀಲಿಸುವುದು ಹಿಂದೆಂದಿಗಿಂತಲೂ ಮುಖ್ಯವಾಗಿದೆ.
ಕರ್ನಾಟಕ ನಿಜವಾಗಿಯೂ ಸಿಡಿ ಫ್ಯಾಕ್ಟರಿಗಳ ತವರೇ?
ಕರ್ನಾಟಕ ಸಿಡಿ ಫ್ಯಾಕ್ಟರಿಗಳ ತವರು ಎನ್ನುವುದು ರಾಜಕೀಯದಲ್ಲಿ ಬಳಕೆಯಾಗುತ್ತಿರುವ ವ್ಯಂಗ್ಯಾತ್ಮಕ ನುಡಿ. ಕರ್ನಾಟಕದಲ್ಲಿ ಸಿಡಿ, ವಿಡಿಯೋ ಸೋರಿಕೆ ಮತ್ತು ಹನಿಟ್ರ್ಯಾಪ್ ಆರೋಪಗಳು ಪದೇಪದೇ ರಾಜಕೀಯ ಚರ್ಚೆಗೆ ಬರುತ್ತಿರುವುದರಿಂದ ಈ ಪದ ಬಳಕೆಯಲ್ಲಿದೆ. 2021ರ ಮಾರ್ಚ್ನಲ್ಲಿ ಬಿಜೆಪಿ ಸರ್ಕಾರದ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಖಾಸಗಿ ವಿಡಿಯೋ ಬಹಿರಂಗವದಾಗ, ರಾಜ್ಯ ರಾಜಕೀಯದಲ್ಲಿ ಸಿಡಿ ವಿವಾದ ದೊಡ್ಡ ಸುದ್ದಿಯಾಯಿತು. ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಾಗ, ತಮ್ಮ ವಿರುದ್ಧ ರಾಜಕೀಯ ಸಂಚು ನಡೆದಿದೆ ಎಂದು ಆರೋಪಿಸಿದ ಸಂಧರ್ಭದಲ್ಲಿ, ವಿಧಾನಸಭೆಯಲ್ಲಿಯೇ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಸಿಡಿ ಫ್ಯಾಕ್ಟರಿ ಎಂಬ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಂಡಿದ್ದರು.
2025ರ ಹನಿಟ್ರ್ಯಾಪ್ ಆರೋಪ 2026ರಲ್ಲಿ ಸ್ಟಿಂಗ್ ಆಪರೇಷನ್ ವಿವಾದ
2025ರ ಮಾರ್ಚ್ನಲ್ಲಿ ಅಂದಿನ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ವಿಧಾನಸಭೆಯಲ್ಲಿ ಸುಮಾರು 48 ರಾಜಕಾರಣಿಗಳು ಹನಿಟ್ರ್ಯಾಪ್ಗೆ ಒಳಗಾಗಿದ್ದಾರೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಲ್ಲದೇ, ತಮ್ಮನ್ನೂ ಅಂತಹ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿತ್ತು ಎಂಬ ಹೇಳಿಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿತ್ತು.
2026ರ ಅಕ್ಟೋಬರ್ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ಆರೋಪ-ಪ್ರತ್ಯಾರೋಪಗಳಲ್ಲಿಯೂ ಸ್ಟಿಂಗ್ ಆಪರೇಷನ್ ವಿಚಾರ ಮುನ್ನೆಲೆಗೆ ಬಂದಿದೆ. ಶಿವಕುಮಾರ್ ತಮ್ಮ ವಿರುದ್ಧವೂ ಇಂತಹ ಪ್ರಯತ್ನ ನಡೆದಿತ್ತು ಎಂದು ಹೇಳಿಕೆ ನೀಡುತಿದ್ದಂತೆಯೇ, ಕುಮಾರಸ್ವಾಮಿ ಅವರು ನೇರವಾಗಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಹೇಳದೋ ಹೋದರೂ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ರಾಜಕೀಯ ಪ್ರಯತ್ನಕ್ಕೆ ಸ್ಟಿಂಗ್ ಆಪರೇಷನ್ ಬಳಸಲಾಗಿದೆ ಎಂದು ಆರೋಪಿಸುಅ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಈ ರೀತಿಯ ಕುಕೃತ್ಯದ ಹಿಂದಿನ ರೂವಾರಿ ಎಂಬ ಆರೋಪ ಮಾಡಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ, ಈ ಹಿಂದೆ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿ ಮತ್ತು ಅವರ ಸಹಚರರು ಆ ಪ್ರಕರಣದ ನಂತರ ಶಿವಕುಮಾರ್ ಅವರ ಜೊತೆ ಕಾಣಿಸಿಕೊಂಡಿದ್ದು ಗಮನಾರ್ಹವಾಗಿದೆ
ಬಿಸಿ ಬಿಸಿ ದೋಸೆಯಂತೆ ಸಾರ್ವಜನಿಕವಾಗಿ ಹರಿದಾಡಿದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್
ಏಪ್ರಿಲ್ 26, 2024ರಂದು ನಿಗಧಿಯಾಗಿದ್ದ ಹಾಸನ ಲೋಕಸಭಾ ಚುನಾವಣೆಯ ಎರಡು ದಿನಗಳ ಮುನ್ನ, ಹಾಸನದ ಅಂದಿನ ಸಾಂಸದರಾಗಿದ್ದ ಪ್ರಜ್ವಲ್ ರೇವಣ್ಣ ಅವರು ಹಲವು ಮಹಿಳೆಯರೊಂದಿಗೆ ನಡೆಸಿದ ಲೈಂಗಿಕ ಕ್ರಿಯೆಗಳ ದೃಶ್ಯಗಳಿರುವಂತಹ ಸಿಡಿ ಮತ್ತು ಪೆನ್ ಡ್ರೈವ್ ಗಳನ್ನು ಹಾಸನ, ಮಂಡ್ಯ ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಮತ್ತು ಪಾರ್ಕ್ಗಳಲ್ಲಿ ಸಾವಿರಾರು ಸಂಖ್ಯೆಯನ್ನು ವ್ಯಾಪಕವಾಗಿ ಹಂಚಲಾಗಿದ್ದಲ್ಲದೇ, ಅದೇ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವ ಮೂಲಕ ಪಜ್ವಲ್ ರೇವಣ್ಣನವರ ಖಾಸಗೀ ಬದಕನ್ನು ಬಟಾಬಯಲು ಮಾಡುವ ಮೂಲಕ ಅವರು ಸೋಲನ್ನು ಅನುಭವಿಸುವಂತಾಗಿ, ಪ್ರಜ್ವಲ್ ಹಲವು ನಾಟಕೀಯ ಘಟನೆಗಳ ನಂತರ ಬಂಧನೆಕ್ಕೊಳಗಾಗಿ ಈ ಕುರಿತಾಗಿ ವಿಚಾರಣೆ ನಡೆಯುತ್ತಿರುವುದೂ ಇಲ್ಲಿ ಗಮನಾರ್ಹ
ರಾಜಕಾರಣಿಗಳ ಖಾಸಗಿ ಬದುಕು ಜನರ ಚರ್ಚೆಯ ವಿಷಯವಾಗಬೇಕೇ?
ಸಾರ್ವಜನಿಕ ಹುದ್ದೆಯಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅಥವಾ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆ, ಅವರ ವಿರುದ್ಧ ತನಿಖೆ ನಡೆಯಬೇಕು. ಅವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಕಾನೂನಿಗಿಂತ ಮೇಲಲ್ಲ. ಆದರೆ ರಾಜಕಾರಣಿ ಎಂಬ ಕಾರಣಕ್ಕೆ ವ್ಯಕ್ತಿಯ ಖಾಸಗಿತನದ ಹಕ್ಕು ಸಂಪೂರ್ಣವಾಗಿ ಕಳೆದುಹೋಗುವುದಿಲ್ಲ. ಅವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ ಆರೋಪಗಳು ಸಾರ್ವಜನಿಕ ಹಿತಾಸಕ್ತಿಗೆ ನೇರವಾಗಿ ಸಂಬಂಧಿಸಿವೆಯೇ ಎಂಬುದನ್ನು ಪರಿಶೀಲಿಸಬೇಕು.
ಇಲ್ಲಿ ಮೂರು ಸಂಗತಿಗಳನ್ನು ಪ್ರತ್ಯೇಕವಾಗಿ ನೋಡಬೇಕು:
- ಸಾರ್ವಜನಿಕ ಹಿತಾಸಕ್ತಿ: ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಅಥವಾ ಅಪರಾಧಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ ಸಾಕ್ಷ್ಯಗಳನ್ನು ಜವಾಬ್ದಾರಿಯುತವಾಗಿ ಬಹಿರಂಗಪಡಿಸುವುದು.
- ವೈಯಕ್ತಿಕ ತೇಜೋವಧೆ: ಆರೋಪಗಳನ್ನು ಪರಿಶೀಲಿಸದೆ, ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ವಿಷಯಗಳನ್ನು ಹರಡುವುದು.
- ರಾಜಕೀಯ ಒತ್ತಡ: ವಿಡಿಯೋ ಅಥವಾ ಸಿಡಿ ಬಿಡುಗಡೆ ಮಾಡುವ ಬೆದರಿಕೆಯನ್ನು ಬಳಸಿಕೊಂಡು ವ್ಯಕ್ತಿಯ ಮೇಲೆ ಒತ್ತಡ ಹೇರುವುದು ಅಥವಾ ರಾಜಕೀಯ ನಿರ್ಧಾರಗಳನ್ನು ಪ್ರಭಾವಿಸುವುದು.
ಈ ಮೂರರ ನಡುವಿನ ವ್ಯತ್ಯಾಸವನ್ನು ಅರಿಯದೆ ಹೋದರೆ, ನಿಜವಾದ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪ್ರಯತ್ನಗಳ ವಿಶ್ವಾಸಾರ್ಹತೆಯೂ ಕುಸಿಯಬಹುದು.
ಸಾಮಾಜಿಕ ಜಾಲತಾಣಗಳು, ನ್ಯಾಯಾಲಯಕ್ಕಿಂತ ಮೊದಲೇ ತೀರ್ಪು ನೀಡುವ ವೇದಿಕೆಗಳೇ?
ಇಂದಿನ ಡಿಜಿಟಲ್ ಯುಗದಲ್ಲಿ ಒಂದು ವಿಡಿಯೋ ಹರಡಲು ಕೆಲವೇ ನಿಮಿಷಗಳು ಸಾಕು. ಆದರೆ ಅದು ನಿಜವೇ, ಸಂಪಾದಿತವೇ, ಅದರಲ್ಲಿರುವ ವ್ಯಕ್ತಿಗಳ ಗುರುತು ಸರಿಯೇ ಎಂಬುದನ್ನು ಪರಿಶೀಲಿಸಲು ದಿನಗಳು ಅಥವಾ ತಿಂಗಳುಗಳೇ ಬೇಕಾಗಬಹುದು. ಈ ನಡುವೆ ವ್ಯಕ್ತಿಯ ಗೌರವಕ್ಕೆ ಆಗುವ ಹಾನಿ, ಕುಟುಂಬ ಅನುಭವಿಸುವ ಮಾನಸಿಕ ಒತ್ತಡ ಮತ್ತು ಸಾರ್ವಜನಿಕ ಜೀವನದಲ್ಲಿ ಉಂಟಾಗುವ ಪರಿಣಾಮಗಳನ್ನು ಸುಲಭವಾಗಿ ಸರಿಪಡಿಸಲು ಸಾಧ್ಯವಿಲ್ಲ.
ವಿಶೇಷವಾಗಿ, ಲೈಂಗಿಕ ಆರೋಪಗಳು ಅಥವಾ ಅಪ್ರಾಪ್ತರಿಗೆ ಸಂಬಂಧಿಸಿದ ವಿಚಾರಗಳಿದ್ದರೆ, ಅತ್ಯಂತ ಎಚ್ಚರಿಕೆ ಅಗತ್ಯ. ಸಂಬಂಧಪಟ್ಟ ವ್ಯಕ್ತಿಗಳ ಗುರುತು ಬಹಿರಂಗಪಡಿಸುವುದು, ಖಾಸಗಿ ದೃಶ್ಯಗಳನ್ನು ಹಂಚಿಕೊಳ್ಳುವುದು ಅಥವಾ ದೃಢೀಕರಿಸದ ಆರೋಪಗಳನ್ನು ಸತ್ಯವೆಂದು ಪ್ರಸಾರ ಮಾಡುವುದು ಗಂಭೀರ ಕಾನೂನು ಮತ್ತು ನೈತಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಒಂದು ವಿಡಿಯೋ ವೈರಲ್ ಆಯಿತು ಎಂಬ ಕಾರಣಕ್ಕೆ ಅದನ್ನು ಹಂಚಿಕೊಳ್ಳುವುದು ನಮ್ಮ ಜವಾಬ್ದಾರಿಯಿಂದ ಮುಕ್ತಗೊಳಿಸುವುದಿಲ್ಲ. ಸಾಮಾಜಿಕ ಜಾಲತಾಣದ ಬಳಕೆದಾರರೂ ಮಾಹಿತಿ ಹಂಚುವಾಗ ವಿವೇಚನೆ ಮತ್ತು ಜವಾಬ್ದಾರಿಯನ್ನು ಪಾಲಿಸಬೇಕು.
ಸ್ಟಿಂಗ್ ಆಪರೇಷನ್ ವಿವಾದಕ್ಕೆ ಹೊಸ ತಿರುವು: ಫೋಟೊ ಬಿಡುಗಡೆ ಮಾಡಿ ರಾಜಕೀಯ ಷಡ್ಯಂತ್ರದ ಆರೋಪ ಮಾಡಿದ ಎಚ್.ಡಿ. ಕುಮಾರಸ್ವಾಮಿ!
ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ವಿವಾದಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೊಸ ತಿರುವು ನೀಡಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಿದ ವ್ಯಕ್ತಿಯ ಫೋಟೊವನ್ನು ಬಿಡುಗಡೆ ಮಾಡುವ ಮೂಲಕ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಕುಮಾರಸ್ವಾಮಿ, ಬಾಗೇಪಲ್ಲಿಯ ಮೂಲದ ಪ್ರಶಾಂತ್ ಎಂಬಾತನ ಫೋಟೊವನ್ನು ಬಿಡುಗಡೆ ಮಾಡಿದ್ದಾರೆ.
ಸುರ್ಜೇವಾಲಾ ಜೊತೆಗಿನ ಫೋಟೊ ಬಿಡುಗಡೆ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ರೌಡಿಶೀಟರ್ ಎಂದು ಗುರುತಿಸಲಾದ ಪ್ರಶಾಂತ್ ನಿಂತಿರುವ ಫೋಟೊವನ್ನು ಬಿಡುಗಡೆ ಮಾಡಿದ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ರಾಜಕೀಯ ಷಡ್ಯಂತ್ರದ ಆರೋಪ ಮಾಡಿದ್ದಾರೆ. ಸುರ್ಜೇವಾಲಾ ಅವರೊಂದಿಗೆ ಪ್ರಶಾಂತ್ ಆತ್ಮೀಯವಾಗಿ ಹೆಗಲ ಮೇಲೆ ಕೈ ಹಾಕಿಕೊಂಡಿರುವ ಫೋಟೊವನ್ನು ಪ್ರದರ್ಶಿಸಿದ ಕುಮಾರಸ್ವಾಮಿ, ಈ ವ್ಯಕ್ತಿಯನ್ನು ವಶಕ್ಕೆ ಪಡೆದು ಬೆದರಿಸುವ ಮೂಲಕ ತಮ್ಮ ಹೆಸರನ್ನು ಹೇಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
‘ನಿಜವಾದ 420ಗಳು ವಿಧಾನಸೌಧದ ಒಳಗಿದ್ದಾರೆ’
ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ನಿಜವಾದ 420ಗಳು ವಿಧಾನಸೌಧದ ಒಳಗಿದ್ದಾರೆ. ಆದರೆ ನಮ್ಮನ್ನು ತನಿಖೆ ಮಾಡುತ್ತಾರಂತೆ! ಅಧಿಕಾರ ಇದೆ ಎಂಬ ಕಾರಣಕ್ಕೆ ಅದನ್ನು ಹೇಗೆ ಬೇಕಾದರೂ ದುರುಪಯೋಗಪಡಿಸಿಕೊಳ್ಳುವುದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು
ಕರ್ನಾಟಕವು ಸಾಹಿತ್ಯ, ಕಲೆ, ಶಿಕ್ಷಣ, ವಿಜ್ಞಾನ ಮತ್ತು ಪ್ರಜಾಪ್ರಭುತ್ವದ ಚರ್ಚೆಗಳಿಗೆ ಮಹತ್ವ ನೀಡಿದ ನಾಡು. ಇಂತಹ ರಾಜ್ಯದ ರಾಜಕೀಯ ಚರ್ಚೆಗಳು ಜನರ ಸಮಸ್ಯೆಗಳು, ಉದ್ಯೋಗ, ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯ ಮತ್ತು ಅಭಿವೃದ್ಧಿಯ ಬದಲಿಗೆ ಪರಸ್ಪರದ ಖಾಸಗಿ ಬದುಕಿನ ಆರೋಪಗಳ ಸುತ್ತಲೇ ಸುತ್ತುತ್ತಿದ್ದರೆ, ಅದು ಆರೋಗ್ಯಕರ ಬೆಳವಣಿಗೆಯಲ್ಲ.
ಯಾವುದೇ ಪಕ್ಷದ ನಾಯಕನ ವಿರುದ್ಧ ಆರೋಪ ಬಂದರೂ ಅದನ್ನು ತನಿಖೆ ಮಾಡಬೇಕು. ತಪ್ಪು ಸಾಬೀತಾದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಆರೋಪ ಸುಳ್ಳಾಗಿದ್ದರೆ, ಅದನ್ನು ಹರಡಿದವರ ಹೊಣೆಗಾರಿಕೆಯನ್ನೂ ನಿರ್ಧರಿಸಬೇಕು. ಒಂದು ಪಕ್ಷದ ನಾಯಕನ ವಿರುದ್ಧ ಆರೋಪ ಬಂದಾಗ ಅದನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುವುದು, ತಮ್ಮ ಪಕ್ಷದ ನಾಯಕನ ವಿರುದ್ಧ ಆರೋಪ ಬಂದಾಗ ಮಾತ್ರ ಖಾಸಗಿತನದ ಹಕ್ಕನ್ನು ಮುಂದಿಡುವುದು ದ್ವಂದ್ವ ನೀತಿಯಾಗಿದೆ. ನ್ಯಾಯ ಮತ್ತು ನೈತಿಕತೆ ಪಕ್ಷಾತೀತವಾಗಿರಬೇಕು.
ಅದೇ ರೀತಿ, ಮಾಧ್ಯಮಗಳು ಕೂಡ ಸಂಚಲನ ಸೃಷ್ಟಿಸುವ ಶೀರ್ಷಿಕೆಗಳಿಗಿಂತ ಪರಿಶೀಲಿತ ಮಾಹಿತಿಗೆ ಆದ್ಯತೆ ನೀಡಬೇಕು. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಯಾರನ್ನೂ ಅಪರಾಧಿ ಎಂದು ಘೋಷಿಸುವ ಪ್ರವೃತ್ತಿಗೆ ಕಡಿವಾಣ ಬೀಳಬೇಕು.
ಕೊನೆಯ ಮಾತು. ರಾಜಕೀಯದಲ್ಲಿ ಗೆಲ್ಲಬೇಕಿರುವುದು ಸತ್ಯವೇ ಹೊರತು ಕೆಸರಲ್ಲ!
ಪ್ರಜಾಪ್ರಭುತ್ವದಲ್ಲಿ ರಾಜಕೀಯ ವಿರೋಧ ಅನಿವಾರ್ಯ. ಟೀಕೆ, ಪ್ರತಿಭಟನೆ, ತನಿಖೆ ಮತ್ತು ಭಿನ್ನಾಭಿಪ್ರಾಯಗಳಿಗೆ ಮಹತ್ವವಿದೆ. ಆದರೆ ಅವುಗಳೆಲ್ಲವೂ ಸತ್ಯ, ಸಾಕ್ಷ್ಯ ಮತ್ತು ಜವಾಬ್ದಾರಿಯುತ ನಡವಳಿಕೆಯ ಆಧಾರದ ಮೇಲೆ ನಡೆಯಬೇಕು. ರಾಜಕೀಯ ಎದುರಾಳಿಯನ್ನು ಸೋಲಿಸಲು ಅವರ ವೈಯಕ್ತಿಕ ಬದುಕಿನ ಬಗ್ಗೆ ಆರೋಪಗಳನ್ನು ಹರಡುವುದು, ವಿಡಿಯೋಗಳ ಮೂಲಕ ಬೆದರಿಸುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುವುದು ಸಾಮಾನ್ಯ ತಂತ್ರವಾಗಿ ಬೆಳೆದರೆ, ನಾಳೆ ಇದೇ ವಿಧಾನ ಯಾರ ವಿರುದ್ಧವೂ ಬಳಸಲ್ಪಡಬಹುದು. ಆಗ ರಾಜಕಾರಣಿಗಳಷ್ಟೇ ಅಲ್ಲ, ಸಾಮಾನ್ಯ ನಾಗರಿಕರೂ ಅಸುರಕ್ಷತೆಯನ್ನು ಎದುರಿಸಬೇಕಾಗುತ್ತದೆ.
ಸಿದ್ದರಾಮಯ್ಯ ಅವರ ವಿರುದ್ಧದ ಇತ್ತೀಚಿನ ವಿಡಿಯೋ ವಿವಾದದಲ್ಲಿಯೂ ಅಂತಿಮವಾಗಿ ನಿರ್ಧರಿಸಬೇಕಾದದ್ದು ಆರೋಪಗಳ ಸತ್ಯಾಸತ್ಯತೆ, ಅವುಗಳ ಮೂಲ ಮತ್ತು ಅವುಗಳ ಹಿಂದೆ ಇರುವ ಉದ್ದೇಶ. ರಾಜಕೀಯ ನಾಯಕರು ಪರಸ್ಪರ ಆರೋಪಿಸುವುದಕ್ಕಿಂತ ನಿಷ್ಪಕ್ಷಪಾತ ತನಿಖೆಗೆ ಸಹಕರಿಸುವುದು ಮುಖ್ಯ. ರಾಜಕೀಯದಲ್ಲಿ ಎದುರಾಳಿಯನ್ನು ಸೋಲಿಸುವುದೇ ಗುರಿಯಾಗಬಾರದು; ಸತ್ಯವನ್ನು ಹೊರತರುವುದೇ ಗುರಿಯಾಗಬೇಕು. ವ್ಯಕ್ತಿತ್ವ ಹರಣದಿಂದ ಅಧಿಕಾರ ಸಿಗಬಹುದು, ರಾಜಕೀಯ ಲಾಭವೂ ದೊರೆಯಬಹುದು. ಆದರೆ ಅದರಿಂದ ಪ್ರಜಾಪ್ರಭುತ್ವಕ್ಕೆ ಆಗುವ ಹಾನಿಯನ್ನು ಸರಿಪಡಿಸುವುದು ಸುಲಭವಲ್ಲ.
ಕರ್ನಾಟಕದ ರಾಜಕೀಯ ಪಕ್ಷಗಳು ಮತ್ತು ನಾಯಕರು ಈ ಬೆಳವಣಿಗೆಗಳಿಂದ ಪಾಠ ಕಲಿಯಬೇಕಾದ ಸಮಯ ಬಂದಿದೆ. ಜನರ ವಿಶ್ವಾಸವನ್ನು ಗಳಿಸುವುದು ಕೆಸರು ಎರಚುವುದರಿಂದಲ್ಲ. ಬದಲಾಗಿ ಉತ್ತಮ ಜನಪರ ಕೆಲಸ, ಪಾರದರ್ಶಕತೆ ಮತ್ತು ನೈತಿಕ ನಡವಳಿಕೆಯಿಂದ ಮಾತ್ರ ಸಾಧ್ಯ ಅಲ್ವೇ?