ದೇವರ ಕೆಲಸವೂ ಸರ್ಕಾರೀ ಕೆಲಸವೇ!

ನಮ್ಮ ದೇಶದಲ್ಲಿ ಒಬ್ಬ ಹಿಂದೂ ಅನ್ಯಧರ್ಮಕ್ಕೆ ಮತಾಂತರವಾದರೆ, ಒಬ್ಬ ಹಿಂದೂವಿನ ಸಂಖ್ಯೆ ಕಡಿಮೆಯಾಗುವುದಿಲ್ಲ. ಬದಲಾಗಿ, ಒಬ್ಬ ಹಿಂದೂ ವಿರೋಧಿಯ ಸಂಖ್ಯೆ ಹೆಚ್ಚಾಗುತ್ತದೆ ಎಂದು ಮತಾಂತರದ ಕುರಿತಾಗಿ ದೂರದೃಷ್ಟಿಯನ್ನು ಹೊಂದಿದ್ದ ಸ್ವಾಮಿ ವಿವೇಕಾನಂದರು ನೂರು ವರ್ಷಗಳ ಹಿಂದೆಯೇ ಹೇಳಿದ್ದ ಮಾತು ಈಗ ಸತ್ಯ ಎನಿಸುತ್ತಿದೆ. ಮತಾಂತರವಾದವನು ತನ್ನ ಹೊಸ ಮತದ ನಿಷ್ಠೆಯನ್ನು ತೋರಿಸಿಕೊಳ್ಳುವ ಸಲುವಾಗಿ ತನ್ನ ಹಿಂದಿನ ಮತದ ವಿರುದ್ಧ ದೊಡ್ಡ ಶತ್ರುವಾಗಿ, ಆ ಮತವನ್ನು ತೀವ್ರತರವಾಗಿ ದ್ವೇಷಿಸುತ್ತಾನೆ. ಅದೇ ರೀತಿ, ನಮ್ಮ ದೇಶದಲ್ಲಿ ಹಿಂದೂಗಳಾಗಿಯೇ ಹುಟ್ಟಿದವರಿಗೆ ತಮ್ಮ ಧರ್ಮದ ಆಚರಣೆ, ನಂಬಿಕೆಗಳಿಗಿಂತಲೂ ಜಾತ್ಯತೀತರು ಎಂದು ತೋರಿಸಿಕೊಳ್ಳುವ ಹಪಾಹಪಿ. ಹಾಗಾಗಿಯೇ, ಹೆಜ್ಜೆ ಹೆಜ್ಜೆಗೂ ಹಿಂದೂ ಆಚರಣೆಗಳನ್ನು ಸಾರ್ವಜನಿಕವಾಗಿ ಟೀಕಿಸುತ್ತಲೇ ಬರುತ್ತಿದ್ದಾರೆ.

ವಿಜಯದಶಮಿ ಸಂದರ್ಭದಲ್ಲಿ ವಿಜಯಪುರ ಮತ್ತು ಉಡುಪಿಯ ಪೊಲೀಸ್ ಸಿಬ್ಬಂದಿ ಕೇಸರಿ ವಸ್ತ್ರ ಧರಿಸಿದ್ದ ಫೋಟೋಗಳು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದವು. ಕರ್ನಾಟಕವನ್ನು ಉತ್ತರ ಪ್ರದೇಶದಂತಹ ಜಂಗಲ್ ರಾಜ್ ಆಗಿ ಪರಿವರ್ತಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

2021ರ ಅಕ್ಟೋಬರ್ 14ರಂದು ತೆಗೆಯಲಾದ ಫೋಟೋಗಳಲ್ಲಿ ವಿಜಯಪುರದ ಎಸ್‌ಪಿ ಸೇರಿದಂತೆ ಪೊಲೀಸರು ಕೇಸರಿ ಶಾಲು ಧರಿಸಿದ್ದು, ಉಡುಪಿಯ ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ಕೇಸರಿ ಶರ್ಟ್, ಧೋತಿ ಹಾಗೂ ಸೀರೆಗಳನ್ನು ಧರಿಸಿರುವುದು ಕಂಡುಬಂದಿತ್ತು. ಈ ವಿಚಾರವಾಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಹಾಲಿ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ರಾಮಲಿಂಗಾ ರೆಡ್ಡಿಯವರು ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಟೀಕೆ ವ್ಯಕ್ತಪಡಿಸಿ, ರಾಜೀನಾಮೆಗೆ ಆಗ್ರಹಿಸಿದ್ದರು.

 

ಈಗ ಕೆ.ಆರ್.ಎಸ್. ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ, ಪೊಲೀಸ್ ಠಾಣೆಗಳಲ್ಲಿ ಮಾಡಲಾಗುವ ಆಯುಧ ಪೂಜೆಗೆ ಸರ್ಕಾರ ಹಣ ಕೊಡುತ್ತದೆಯೇ? ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ಹಿಂದೂ ವಿರೋಧಿಗಳ ಮನವನ್ನು ಗೆಲ್ಲಬಹುದು ಎಂಬ ಭ್ರಮಾಲೋಕದಲ್ಲಿರುವಂತಿದೆ. ಈ ರೀತಿಯ ನಕಲೀ ಜಾತ್ಯಾತೀತ ನಿಲುವನ್ನು ಹೊಂದಿರುವವರಿಗೆ ಬಹಳ ಹಿಂದೆಯೇ ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನ್ನು ತಿಳಿಸುವುದು, ಒಬ್ಬ ಹಿಂದೂವಾಗಿ ಮತ್ತು ಎಲ್ಲದಕ್ಕಿಂತಲೂ ದೇಶದ ಸತ್ಪ್ರಜೆಯ ಕರ್ತವ್ಯ ಎಂದು ಭಾವಿಸಿ ಈ ಲೇಖನ ಸಮರ್ಪಿಸುತ್ತಿದ್ದೇನೆ.

ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ ಮಾಡುವುದರಿಂದ ಜಾತ್ಯತೀತ ತತ್ವಕ್ಕೆ ಧಕ್ಕೆಯಾಗುವುದಿಲ್ಲ: ಹೈಕೋರ್ಟ್

ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಹೂ ಬಿಡುವುದನ್ನೂ, ಕೆಮ್ಮುವುದನ್ನೂ ಪ್ರಶ್ನಿಸಿ ನ್ಯಾಯಾಲಯಕ್ಕೆ ಎಡತಾಕಿ, ಅದು ಸರಿಯೇ ಎಂದು ಕೇಳುವ ಕೆಟ್ಟ ಸಂಪ್ರದಾಯ ರೂಢಿಯಲ್ಲಿದೆ. ಅಂತಹದ್ದೇ ಒಂದು ಪ್ರಕರಣದಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ ಅಥವಾ ಸರಸ್ವತೀ ಪೂಜೆ ನಡೆಸುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾದ ಚಟುವಟಿಕೆಯೇ? ಇಂತಹ ಪೂಜೆಗಳನ್ನು ನಿಷೇಧಿಸಬೇಕೇ? ಎಂಬ ಪ್ರಶ್ನೆಯ ವಿಚಾರವಾಗಿ ಮದ್ರಾಸ್ ಹೈಕೋರ್ಟ್‌ಗೆ ಎಡತಾಕಲಾಗಿತ್ತು.

ಈ ಅರ್ಜಿಗೆ ನ್ಯಾಯಾಲಯ ನೀಡಿರುವ ತೀರ್ಪು ಎಲ್ಲ ನಕಲಿ ಜಾತ್ಯತೀತರಿಗೂ ಕಪಾಳಮೋಕ್ಷ ಮಾಡಿದಂತಿದೆ. ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ ಅಥವಾ ಸರಸ್ವತೀ ಪೂಜೆ ನಡೆಸುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾದ ಚಟುವಟಿಕೆಯೇ? ಇಂತಹ ಪೂಜೆಗಳನ್ನು ನಿಷೇಧಿಸಬೇಕೇ? ಎಂಬ ಪ್ರಶ್ನೆಗೆ ಮದ್ರಾಸ್ ಹೈಕೋರ್ಟ್ ‘ಇಲ್ಲ’ ಎಂದು ತೀರ್ಪು ನೀಡಿದೆ.

ಕೆಲಸದ ಸ್ಥಳ ಮತ್ತು ಕೆಲಸಕ್ಕೆ ಬಳಸುವ ವಸ್ತುಗಳ ಬಗ್ಗೆ ಗೌರವ ತೋರಿಸುವುದರಿಂದ ಇತರರ ಭಾವನೆಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಅಥವಾ ಜಾತ್ಯತೀತ ತತ್ವಕ್ಕೆ ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗುವುದಿಲ್ಲ. ಆಯುಧ ಪೂಜೆ ಎಂದರೆ ವ್ಯಕ್ತಿಯು ತನ್ನ ವೃತ್ತಿ ಅಥವಾ ಉದ್ಯೋಗವನ್ನು ನಿರ್ವಹಿಸಲು ಬಳಸುವ ಸಾಧನಗಳ ಬಗ್ಗೆ ಪ್ರಾರ್ಥನೆ, ಭಕ್ತಿ ಅಥವಾ ಗೌರವವನ್ನು ವ್ಯಕ್ತಪಡಿಸುವುದಾಗಿದೆ. ನಿಜವಾದ ಅರ್ಥದಲ್ಲಿ ಆಯುಧ ಪೂಜೆಯು ಯಾವುದೇ ಒಂದು ಧರ್ಮದ ಮಿತಿಯನ್ನು ಮೀರುತ್ತದೆ ಎಂದು ನ್ಯಾಯಮೂರ್ತಿ ಆರ್. ಸುಧಾಕರ್ ಮತ್ತು ನ್ಯಾಯಮೂರ್ತಿ ಅರುಣಾ ಜಗದೀಶನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ಸರ್ಕಾರಿ ಕಚೇರಿಗಳ ಆವರಣದಲ್ಲಿ ನಡೆಯುವ ಎಲ್ಲ ರೀತಿಯ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠವು, ವ್ಯಕ್ತಿಯೊಬ್ಬರು ತಮ್ಮ ವೃತ್ತಿಗೆ ಸಂಬಂಧಿಸಿದ ಉಪಕರಣಗಳಿಗೆ ಗೌರವ ಸಲ್ಲಿಸುವುದನ್ನು ರಾಜ್ಯದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ಉಂಟುಮಾಡುವ ಕೃತ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ. ನ್ಯಾಯಪೀಠದ ಪರವಾಗಿ ತೀರ್ಪು ಬರೆದ ನ್ಯಾಯಮೂರ್ತಿ ಸುಧಾಕರ್ ಅವರು ಹೀಗೆ ಅಭಿಪ್ರಾಯಪಟ್ಟಿದ್ದಾರೆ:

ಧರ್ಮವನ್ನು ಪರಿಗಣಿಸದೆ, ಚಮ್ಮಾರರು, ನೇಕಾರರು, ರೈತರು, ಆಟೋರಿಕ್ಷಾ ಚಾಲಕರು, ರಿಕ್ಷಾ ಚಾಲಕರು, ಬಡಗಿಗಳು, ಅಂಗಡಿ ಮಾಲೀಕರು, ಲೆಕ್ಕಪರಿಶೋಧಕರು, ವಕೀಲರು, ವೈದ್ಯರು ಮುಂತಾದವರು ತಮ್ಮ ಜೀವನೋಪಾಯಕ್ಕಾಗಿ ಬಳಸುವ ವಸ್ತುಗಳಿಗೆ ಗೌರವ ಸಲ್ಲಿಸುತ್ತಾರೆ. ಇದೇ ಆಯುಧ ಪೂಜೆಯ ಮೂಲ ಆಶಯವಾಗಿದೆ. ಅದೇ ರೀತಿ, ಸರಸ್ವತೀ ಪೂಜೆಯು ಶಿಕ್ಷಣ, ಜ್ಞಾನ ಮತ್ತು ಅಕ್ಷರಗಳಿಗೆ ಗೌರವ ಸಲ್ಲಿಸುವುದಕ್ಕೆ ಸಂಬಂಧಿಸಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಆಯುಧ ಪೂಜೆ ಅಥವಾ ಸರಸ್ವತೀ ಪೂಜೆಯ ರಜೆಗೆ ಮುಂಚಿನ ಕೆಲಸದ ದಿನದ ಅಂತ್ಯದಲ್ಲಿ ಕಡತಗಳು ಮತ್ತು ದಾಖಲೆಗಳಿಗೆ ಗೌರವ ಸಲ್ಲಿಸುವ ಅಥವಾ ಪೂಜಿಸುವ ಪದ್ಧತಿಯನ್ನು ರಾಜ್ಯದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ಉಂಟುಮಾಡುವ ಸರ್ಕಾರದ ಧಾರ್ಮಿಕ ಚಟುವಟಿಕೆ ಎಂದು ಕರೆಯಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

ಆಯುಧ ಪೂಜೆ ಮತ್ತು ಸರಸ್ವತೀ ಪೂಜೆಗಳು ರಜಾದಿನಗಳಲ್ಲಿ ಬರುವುದರಿಂದ, ಸರ್ಕಾರಿ ಕಚೇರಿಗಳಲ್ಲಿ ಈ ಪೂಜೆಗಳನ್ನು ನಡೆಸುವುದು ಸ್ವತಃ ಸರ್ಕಾರವೇ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಗಮನಸೆಳೆದಿದೆ. ಸರ್ಕಾರಿ ಕಚೇರಿಗಳಲ್ಲಿ ವ್ಯಕ್ತಿಯೊಬ್ಬರು ತಾವು ನಿರ್ವಹಿಸುವ ಕೆಲಸಕ್ಕೆ ಸಂಬಂಧಿಸಿದ ಸಾಮಗ್ರಿಗಳು, ಪುಸ್ತಕಗಳು, ಕಡತಗಳು ಅಥವಾ ದಾಖಲೆಗಳಿಗೆ ಗೌರವ ಮತ್ತು ಭಕ್ತಿಯನ್ನು ತೋರಿಸಿದರೆ, ಅದು ಅವರ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುತ್ತದೆ. ಇದರಿಂದ ರಾಜ್ಯದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆಯಾಗುತ್ತದೆ ಎಂಬುದನ್ನು ತೋರಿಸುವ ಯಾವುದೇ ಅಂಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಅರ್ಜಿದಾರರು ಉಲ್ಲೇಖಿಸಿದ್ದ ಸರ್ಕಾರಿ ಆದೇಶ ಮತ್ತು ಸುತ್ತೋಲೆ

ಅರ್ಜಿದಾರರಾದ ಎಸ್.ಪಿ. ಮುತ್ತುರಾಮನ್ ಅವರು, ಸರ್ಕಾರಿ ಕಚೇರಿಗಳಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಕೋರುವ ಸಂದರ್ಭದಲ್ಲಿ 1993ರಲ್ಲಿ ಹೊರಡಿಸಲಾದ ಸರ್ಕಾರಿ ಆದೇಶ ಮತ್ತು 2010ರ ಏಪ್ರಿಲ್ 22ರ ಸುತ್ತೋಲೆಯನ್ನು ಉಲ್ಲೇಖಿಸಿದ್ದರು.

1993ರ ಡಿಸೆಂಬರ್‌ನಲ್ಲಿ ಹೊರಡಿಸಲಾದ ಸರ್ಕಾರಿ ಆದೇಶದ ಪ್ರಕಾರ, ಸರ್ಕಾರಿ ಕಚೇರಿ ಆವರಣದಲ್ಲಿ ಧಾರ್ಮಿಕ ಪೂಜೆ ಅಥವಾ ಪ್ರಾರ್ಥನೆಗಾಗಿ ಯಾವುದೇ ಹೊಸ ಕಟ್ಟಡ ಅಥವಾ ರಚನೆಯನ್ನು ನಿರ್ಮಿಸಲು ಅಥವಾ ಈಗಿರುವ ರಚನೆಯನ್ನು ವಿಸ್ತರಿಸಲು ಅನುಮತಿ ನೀಡಬಾರದು ಎಂದು ತಿಳಿಸಲಾಗಿತ್ತು.

2010ರ ಮಾರ್ಚ್‌ನಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠವೂ ಇದೇ ನಿಲುವನ್ನು ಪುನರುಚ್ಚರಿಸಿತ್ತು. ಹೈಕೋರ್ಟ್‌ನ ಆ ಆದೇಶದ ಹಿನ್ನೆಲೆಯಲ್ಲಿ ಸರ್ಕಾರವು 2010ರ ಏಪ್ರಿಲ್‌ನಲ್ಲಿ ಸುತ್ತೋಲೆಯನ್ನು ಹೊರಡಿಸಿತ್ತು.

ಆದರೆ, ಈ ಸರ್ಕಾರಿ ಆದೇಶ ಮತ್ತು ಸುತ್ತೋಲೆಯು ಸರ್ಕಾರಿ ಕಚೇರಿಗಳ ಸಂಕೀರ್ಣಗಳಲ್ಲಿ ಧಾರ್ಮಿಕ ಉದ್ದೇಶದ ಕಟ್ಟಡಗಳನ್ನು ನಿರ್ಮಿಸುವುದು ಅಥವಾ ಈಗಿರುವ ರಚನೆಗಳನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದ್ದಾಗಿದೆಯೇ ಹೊರತು, ವ್ಯಕ್ತಿಯೊಬ್ಬರು ತಮ್ಮ ಕೆಲಸದ ಸ್ಥಳ ಅಥವಾ ಕೆಲಸಕ್ಕೆ ಬಳಸುವ ಉಪಕರಣಗಳಿಗೆ ಪೂಜೆ ಸಲ್ಲಿಸುವ ಹಕ್ಕಿಗೆ ಸಂಬಂಧಿಸಿದ್ದಲ್ಲ ಎಂದು ನ್ಯಾಯಮೂರ್ತಿ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಭಾರತದ ಸಂವಿಧಾನದ 25ನೇ ವಿಧಿಯು ವ್ಯಕ್ತಿಯ ಆತ್ಮಸಾಕ್ಷಿಯ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಅರ್ಜಿದಾರರು ಕೋರಿರುವ ಪರಿಹಾರವನ್ನು ಒಪ್ಪಿಕೊಂಡರೆ, ವಿವಿಧ ಗುಂಪುಗಳ ನಡುವೆ ಸಾಮರಸ್ಯಕ್ಕೆ ಧಕ್ಕೆಯುಂಟಾಗುವ ಸಾಧ್ಯತೆಯಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತೀರ್ಪಿನ ಸಾರಾಂಶ

ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ ಅಥವಾ ಸರಸ್ವತೀ ಪೂಜೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಮ್ಮ ವೃತ್ತಿಗೆ ಸಂಬಂಧಿಸಿದ ಉಪಕರಣಗಳು, ಪುಸ್ತಕಗಳು, ಕಡತಗಳು ಮತ್ತು ದಾಖಲೆಗಳಿಗೆ ಗೌರವ ಸಲ್ಲಿಸುವುದನ್ನು ಮಾತ್ರ ಆಧರಿಸಿ, ಅದನ್ನು ಜಾತ್ಯತೀತ ತತ್ವಕ್ಕೆ ವಿರುದ್ಧವಾದ ಚಟುವಟಿಕೆ ಎಂದು ಪರಿಗಣಿಸಲಾಗುವುದಿಲ್ಲ. ಕಟ್ಟಡ ನಿರ್ಮಾಣ ಅಥವಾ ಧಾರ್ಮಿಕ ರಚನೆಗಳ ವಿಸ್ತರಣೆಗೆ ಸಂಬಂಧಿಸಿದ ನಿರ್ಬಂಧಗಳನ್ನು ವ್ಯಕ್ತಿಯ ವೈಯಕ್ತಿಕ ಧಾರ್ಮಿಕ ಆಚರಣೆಗಳಿಗೆ ಅನ್ವಯಿಸಲಾಗುವುದಿಲ್ಲ ಎಂಬುದು ಮದ್ರಾಸ್ ಹೈಕೋರ್ಟ್‌ನ ಈ ತೀರ್ಪಿನ ಪ್ರಮುಖ ಆಶಯವಾಗಿದೆ.

ಕೊನೆಯ ಮಾತು

ಹಾಗಾಗಿ, ಆಯುಧ ಪೂಜೆ, ಸರಸ್ವತೀ ಪೂಜೆಗಳು ಹಿಂದೂಗಳ ಧಾರ್ಮಿಕ ನಂಬಿಕೆಯಾಗಿದ್ದು, ಅದಕ್ಕೆ ತಗಲುವ ಖರ್ಚು ವೆಚ್ಚಗಳಿಗಾಗಿ ಸರ್ಕಾರದ ಮುಂದೆ ಕೈಯೊಡ್ಡಿ ಬೇಡುವ ಹೀನಾಯ ಪರಿಸ್ಥಿತಿ ಯಾವುದೇ ಹಿಂದೂಗಳಿಗೆ ಇನ್ನೂ ಬಂದಿಲ್ಲ ಮತ್ತು ಬರುವುದೂ ಇಲ್ಲ. ಸಾರ್ವಜನಿಕವಾಗಿ ಹಿಂದೂಗಳು ನಡೆಸುವ ಅಷ್ಟೂ ಸಭೆ ಮತ್ತು ಸಮಾರಂಭಗಳಿಗೆ ಹಿಂದೂಗಳೇ ಹಣ ಭರಿಸುತ್ತಾರೆ. ಅದೇ ರೀತಿಯಲ್ಲೇ, ಕಚೇರಿಯ ಮಟ್ಟದಲ್ಲಿ ನಡೆಸುವ ಸಮಾರಂಭಗಳ ಖರ್ಚನ್ನೂ ಅಲ್ಲಿನ ಸಿಬ್ಬಂದಿಗಳೇ ಭರಿಸುತ್ತಿದ್ದಾರೆ.

ಹಾಗೆ ನೋಡಿದರೆ, ಪೊಲೀಸ್ ಇಲಾಖೆಯ ಸಮರ್ಥ ನಿರ್ವಹಣೆಗೆ ಆಯುಧಗಳೇ ಪ್ರಮುಖ ಆಧಾರ. ಜನರ ರಕ್ಷಣೆಗೆ ಬಳಸುವ ಆಯುಧಗಳನ್ನು ಪೂಜಿಸುವುದು ಈ ನೆಲಮೂಲದ ಸಂಸ್ಕೃತಿ. ನೆಲಮೂಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಸರ್ಕಾರದ ಕರ್ತವ್ಯ. ಹಾಗಾಗಿ, ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರವೇ ಖರ್ಚು ಭರಿಸುವುದೂ ಸರ್ಕಾರದ ಹೊಣೆ ಆಗಬೇಕು ಎಂದರೂ ತಪ್ಪಾಗದು.

ಏಕೆಂದರೆ, ಆಯುಧ ಪೂಜೆ ಎನ್ನುವುದು ನಾಡಹಬ್ಬ ದಸರಾ ಹಬ್ಬದ ಒಂದು ಅವಿಭಾಜ್ಯ ಅಂಗ. ನಾಡಹಬ್ಬವನ್ನು ಸರ್ಕಾರವೇ ತನ್ನ ತೆಕ್ಕೆಗೆ ತೆಗೆದುಕೊಂಡು ತನಗೆ ಬೇಕಾದ ಹಾಗೆ ಆಚರಿಸಬಹುದಾದರೆ, ಅದೇ ನಾಡಹಬ್ಬದ ರಕ್ಷಣೆಗೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳಬಹುದಾದರೆ, ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆಯನ್ನೂ ಸರ್ಕಾರದ ಹಣದಲ್ಲೇ ನಡೆಸಿದರೆ ಏನು ತಪ್ಪು?

ಹಿಂದೂ ದೇವಾಲಯಗಳ ಹುಂಡಿಗಳಿಂದ ಸಂಗ್ರಹವಾಗುವ ಹಣವನ್ನು ಮಸೀದಿ ಮತ್ತು ಚರ್ಚುಗಳ ನಿರ್ವಹಣೆಗೆ ಖರ್ಚು ಮಾಡುವ ಮತ್ತು ಸರ್ಕಾರಿ ವೃತ್ತಿಯಲ್ಲಿರುವ ಅನ್ಯಮತೀಯರಿಗೆ ಕೆಲಸದ ಅವಧಿಯಲ್ಲಿಯೇ ಅವರವರ ಧಾರ್ಮಿಕ ರೀತಿ-ರಿವಾಜುಗಳಿಗೆ ಅನುಗುಣವಾಗಿ ಉಡುಪುಗಳನ್ನು ಧರಿಸುವ, ಪ್ರಾರ್ಥನೆ ಮಾಡುವ ಅವಕಾಶ ನೀಡುವ ಇದೇ ಸರ್ಕಾರ ಹಾಗೂ ಇಂತಹ ಅಪಸವ್ಯಗಳಿಗೆ ಒಂದು ಚೂರು ಚಕಾರವನ್ನೆತ್ತದ ಇದೇ ಜಾತ್ಯತೀತವಾದಿಗಳು, ವರ್ಷಕ್ಕೊಮ್ಮೆ ಸರ್ಕಾರಿ ಕಚೇರಿಗಳಲ್ಲಿ ರಾಮೋತ್ಸವ, ಗಣೇಶೋತ್ಸವ, ಸರಸ್ವತೀ ಪೂಜೆ, ಆಯುಧ ಪೂಜೆಗಳನ್ನು ನಡೆಸಿದರೆ ಮಾತ್ರ ಮೈಮೇಲೆ ಹುಳ ಬಿದ್ದಂತೆ ಆಡುವುದು ಸ್ಪಷ್ಟವಾಗಿ ಅವರ ಓಲೈಕೆ ರಾಜಕೀಯದ ಗೋಸುಂಬೆತನವನ್ನು ತೋರಿಸುತ್ತದೆ.

ಹಾಗಾಗಿ, ಹಿಂದೂಗಳೇ ಬಹುಸಂಖ್ಯಾತರಾಗಿರುವ ಈ ಹಿಂದೂಸ್ಥಾನದಲ್ಲಿ ಹಿಂದೂಗಳು ಸಾವಿರಾರು ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯಗಳನ್ನು ವಿರೋಧಿಸುವ ಹಕ್ಕು ಯಾವ ದೊಣ್ಣೆ ನಾಯಕರಿಗೂ ಇಲ್ಲ. ಆ ಖರ್ಚು ವೆಚ್ಚಗಳನ್ನು ಸರ್ಕಾರವೇ ಭರಿಸುವುದರಿಂದ ಯಾವುದೇ ತಪ್ಪಿಲ್ಲ!ಏಕೆಂದರೆ,

ಈ ಸರ್ಕಾರಗಳು ನಡೆಯುತ್ತಿರುವುದೇ, ಬಹುಸಂಖ್ಯಾತ ಹಿಂದೂಗಳು ಕಷ್ಟಪಟ್ಟು ಬೆವರು ಸುರಿಸಿ ದುಡಿದು ಕಟ್ಟುತ್ತಿರುವ ತೆರಿಗೆ ಮತ್ತು ತಮ್ಮ ಶ್ರದ್ಧಾಭಕ್ತಿಗಳಿಂದ ದೇವಾಲಯಗಳ ಹುಂಡಿಗಳಿಗೆ ಹಾಕುತ್ತಿರುವ ಕಾಣಿಕೆಯಿಂದಲೇ ಅಲ್ವೇ?

ಏನಂತೀರೀ?
ನಿಮ್ಮವನೇ, ಉಮಾಸುತ

Leave a Reply