ಶಿವಮೊಗ್ಗ ದಸರಾ ಅವಘಡ, ಅಂಬಾರಿ ಹೊತ್ತ ಆನೆ ದಿಕ್ಕಾಪಾಲು ಓಡಿದ್ದೇಕೆ?

ಇದು ಜಿಲ್ಲಾಡಳಿತದ ವೈಫಲ್ಯವೇ, ಮುನ್ನೆಚ್ಚರಿಕೆಯ ಕೊರತೆಯೇ?

ಶಿವಮೊಗ್ಗದ ದಸರಾ ಜಂಬೂಸವಾರಿಯಲ್ಲಿ 2026ರ ಅಕ್ಟೋಬರ್ 21ರಂದು ನಡೆದ ಘಟನೆ ದಸರಾ ಸಂಭ್ರಮದ ನಡುವೆ ಆತಂಕ ಮೂಡಿಸಿದೆ. ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಯನ್ನು ಹೊತ್ತಿದ್ದ ಸೋಮಣ್ಣ  ಎಂಬ ಆನೆ ಏಕಾಏಕಿ ದಿಕ್ಕಾಪಾಲಾಗಿ ಓಡಿದ ಪರಿಣಾಮ ಅಂಬಾರಿ ಮತ್ತು ಅದರೊಳಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಕೆಳಕ್ಕೆ ಬಿದ್ದು ಹಾಳಾಗಿರುವುದಲ್ಲದೇ, ದಾರಿಯಲ್ಲಿ ಆನೆಯ ಆಕ್ರೋಶಕ್ಕೆ  ಸಿಕ್ಕ ವಾಹನಗಳು ಸಹಾ ಜಖಂಗೊಂಡಿವೆ. ಆನೆಯನ್ನು ತಹಬದಿಗೆ ತರಲು ಪ್ರಯತ್ನಿಸಿದ ಮಾವುತನಿಗೂ ಸಹಾ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ  ಎಂಬುದು ಸ್ವಲ್ಪ ಸಮಾಧಾನಕರವಾದ ವಿಚಾರವಾಗಿದೆ.

ಮೈಸೂರು ದಸರಾಕ್ಕೆ ಎಲ್ಲರೂ ಹೋಗಲು ಸಾಧ್ಯವಾಗದು ಎಂಬ ಕಾರಣದಿಂದಿ ಕಳೆದ ಒಂದು ದಶಕಗಳಿಂದ ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಕೆಲವೆಡೆ ತಾಲ್ಲೂಕು ಮಟ್ಟದಲ್ಲಿಯೂ ಸ್ಥಳೀಯ ಆಡಳಿತ ವರ್ಗ, ವಿವಿಧ ಖಾಸಗೀ ಸಂಘಟನೆಗಳು ಮತ್ತು ಪ್ರಾಯೋಜಕರರ ಸಹಕಾರದಿಂದ ದಸರಾ ಮೆರವಣಿಗೆ ಆರಂಭವಾಗಿ ಬಹಳ ಸಡಗರ ಸಂಭ್ರಗಳಿಂದ ನಡೆಯುತ್ತಿದ್ದು, ಶಿವಮೊಗ್ಗದಲ್ಲಿ ಆದ ಈ ರೀತಿಯ ಅವಘಡದಿಂದಾಗಿ  ಜನರು ಆತಂಕದಿಂದ ದಿಕ್ಕಾಪಾಲಾಗಿ ಓಡಿ ಹೋಗಬೇಕಾದಂತಹ ಘಟನೆಯಿಂದಾಗಿ ಸಾರ್ವಜನಿಕ ಉತ್ಸವಗಳಲ್ಲಿ ಸುರಕ್ಷತಾ ವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬ ಪ್ರಶ್ನೆಯನ್ನು ಎತ್ತಿದೆ.

ಇದು ಕೇವಲ ಆನೆಯ ವರ್ತನೆಯಿಂದ ಸಂಭವಿಸಿದ ಅನಿರೀಕ್ಷಿತ ಅವಘಡವೇ? ಅಥವಾ ಆನೆಯನ್ನು ಆಯ್ಕೆ ಮಾಡುವುದರಿಂದ ಹಿಡಿದು ತಾಲೀಮು, ಮೆರವಣಿಗೆಯ ಮಾರ್ಗ, ಜನಸಂದಣಿ ನಿಯಂತ್ರಣ ಮತ್ತು ತುರ್ತು ಕಾರ್ಯಾಚರಣೆಯವರೆಗೆ ಯಾವುದಾದರೂ ಹಂತದಲ್ಲಿ ಲೋಪವಾಗಿದೆಯೇ? ಇವುಗಳಿಗೆ ಉತ್ತರ ಕಂಡುಕೊಳ್ಳಲು ಘಟನೆಗೆ ಸಂಬಂಧಿಸಿದ ಸಂಗತಿಗಳನ್ನು ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯ ಪ್ರಶ್ನೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕಾಗಿದೆ.

ಕೊನೆಯ ಕ್ಷಣದಲ್ಲಿ ಬದಲಾದ ಅಂಬಾರಿ ಹೊರುವ ಆನೆ

ತಿಳಿದು ಬಂದ ವರದಿಗಳ ಪ್ರಕಾರ, ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಸಾಗರ್ ಎಂಬ ಆನೆಗೆ ವಿಜಯದಶಮಿಯ ಒಂದೆರಡು ದಿನಗಳ ಹಿಂದೆ ಕಾಲುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಸೋಮಣ್ಣ ಎಂಬ ಆನೆಗೆ ಅಂಬಾರಿ ಹೊರಲು ಆಯ್ಕೆ ಮಾಡಲಾಯಿತು. ಸೋಮಣ್ಣ ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಪರಿಣಾಮ, ಮೆರವಣಿಗೆ ಆರಂಭವಾದ ಸ್ವಲ್ಪ ಸಮಯದಲ್ಲೇ ಆನೆ ಆತಂಕಗೊಂಡು ನಿಯಂತ್ರಣ ತಪ್ಪಿದಂತೆ ಓಡಿದೆ ಎನ್ನಲಾಗುತ್ತಿದೆ. ಆನೆಯ ಈ ರೀತಿಯ ವರ್ತನೆಗೆ ಅಂಬಾರಿಯ ಭಾರ, ಮೆರವಣಿಗೆಯ ವಾತಾವರಣ, ಜನರ ಕೂಗು, ವಾದ್ಯಗಳ ಶಬ್ದ ಮತ್ತು ಆನೆಯ ಹಿಂದಿನ ಅನುಭವಗಳನ್ನು ಪರಿಗಣಿಸಿ ಸಾಕಷ್ಟು ಸಿದ್ಧತೆ ನಡೆಸಲಾಗಿತ್ತೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.

ಅಂಬಾರಿ ಹೊರುವುದು ಸಾಮಾನ್ಯ ಮೆರವಣಿಗೆಯಲ್ಲಿ ಭಾಗವಹಿಸುವುದಕ್ಕೆ ಸಮಾನವಲ್ಲ. ಆನೆಯ ಬೆನ್ನಿನ ಮೇಲೆ ಭಾರವಾದ ಅಂಬಾರಿ, ಅದರ ಮೇಲೆ ಉತ್ಸವಮೂರ್ತಿ, ಸುತ್ತಲೂ ಜನಸಂದಣಿ, ನಿರಂತರ ವಾದ್ಯಗಳ ಶಬ್ದ ಮತ್ತು ನಿಯಂತ್ರಿತ ಮಾರ್ಗದಲ್ಲಿ ಸಾಗುವ ಒತ್ತಡ—ಇವೆಲ್ಲವನ್ನೂ ಆನೆ ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಪರಿಶೀಲಿಸುವುದು ಅಗತ್ಯ. ಹೊಸದಾಗಿ ಅಂಬಾರಿ ಹೊರುವ ಆನೆಗೆ ಸೂಕ್ತ ತರಬೇತಿ, ಹಂತ ಹಂತದ ಅಭ್ಯಾಸ ಮತ್ತು ಅನುಭವ ಹೊಂದಿದ ಮಾವುತರ ಮೇಲ್ವಿಚಾರಣೆ ಅತ್ಯಂತ ಮುಖ್ಯ.

ವಿವಿಧ ಮಾಧ್ಯಮಗಳ ವರದಿಗಳಂತೆ ಅಂಬಾರಿಯ ತೂಕದ ಸುಮಾರು ಬಂದ 450 ಕೆ.ಜಿ. ರಿಂದ 650 ಕೆ.ಜಿ. ಗಳಿದ್ದು, ಅದರ ಮೇಲೇ ದೇವಿಯ ವಿಗ್ರಹ, ಮಾವುತ ಇಂತಹ ಭಾರವಾದ ಅಂಬಾರಿಯನ್ನು ಹೊತ್ತು ಸಾಗುವ ಆನೆಗೆ ವಿಶೇಷ ಸಿದ್ಧತೆ ಮತ್ತು ಸುರಕ್ಷತಾ ಕ್ರಮಗಳು ಅಗತ್ಯ ಎಂಬುದರಲ್ಲಿ ಅನುಮಾನವಿಲ್ಲ. ಹಾಗಾಗಿಯೇ ಅನೆಗಳು ಎಷ್ಟೇ ಪಳಗಿದ್ದರೂ ಪ್ರತೀ ಬಾರಿ ಮೈಸೂರಿನ ದಸರಕ್ಕೂ ಒಂದು ತಿಂಗಳ ಮುಂಚೆಯೇ ಆನೆಗಳ ಮೇಲೆ ಸ್ವಲ್ಪ ಸ್ವಲ್ಪವೇ ಭಾರ ಹಾಕುತ್ತಾ, ಮೆರವಣಿಗೆ ನಡೆಯುವ ದಾರಿಯಲ್ಲೇ ಅವುಗಳಿಗೆ ತಾಲೀಮು ಕೊಡುವ ಪದ್ದತಿ ಇದೆ. ಅದೇ ರೀತಿಯಲ್ಲಿ ಕಡೆಯ ಕ್ಷಣಗಳಲ್ಲಿ ಅಂಬಾರಿ ಹೊರುವ ಆನೆಗೆ ಯಾವುದಾದರೂ ತೊಂದರೆ ಆದಲ್ಲಿ ಮತ್ತೊಂದು  ಆನೆಯನ್ನು ಸಹಾ ತರಭೇತಿ ಮಾಡಲಾಗಿರುತ್ತದೆ

ದೀರ್ಘಕಾಲದವರೆಗೆ ಮೈಸೂರಿನ ಅಂಬಾರಿ ಹೊರುತ್ತಿದ್ದ 61 ವರ್ಷ ವಯಸ್ಸಿನಲ್ಲಿ ಅಭಿಮನ್ಯು ಎಂಬ ಆನೆಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುವುದು ಕಷ್ಟ ಆಗಬಹುದು ಎಂದು 2026 ರಂದು ನಡೆದ ಮೈಸೂರು ದಸರಾ ಜಂಬೂ ಸವಾರಿಗೆ ಆರಂಭದಲ್ಲಿ ಧನಂಜಯ ಎಂ ಆನೆ ಮತ್ತು  ದಸರೆಯಲ್ಲಿ ಭಾಗವಹಿಸಿದ 18 ವರ್ಷಗಳ ಅನುಭವ ಹೊಂದಿರುವ ಪ್ರಶಾಂತ ಎಂಬ 54 ವರ್ಷ ವಯಸ್ಸಿನ ಅನೆಗೆ ಚಿನ್ನದ ಅಂಬಾರಿಯನ್ನು ಹೊರುವ ತಾಲೀಮು ನಡೆಸಿ ಅಂತಿಮವಾಗಿ ಅಕ್ಟೋಬರ್ 21, 2026 ರಂದು ನಡೆದ ಮೈಸೂರು ದಸರಾ ಜಂಬೂ ಸವಾರಿಯಲ್ಲಿ,  ಅಂಬಾರಿ ಹೊರುವ ಜವಾಬ್ದಾರಿ ಪ್ರಶಾಂತನಿಗೆ ವಹಿಸಿ  ಅತ್ಯಂತ ಯಶಸ್ವಿಯಾಗಿ ದಸರಾ ಉತ್ಸವ ನಡೆಸಲಾಗಿದೆ. ಮೀಸಲು ಅಂಬಾರಿ ಆನೆಯಾಗಿ ನಿಯೋಜಿಸಲಾಗಿದ್ದ ಧನಂಜಯ ನಿಶಾನೆ ಆನೆಯಾಗಿ ದರಾದಲ್ಲಿ ಭಾಗವಹಿಸಿ ದಸರಾ ಮೆರವಣಿಗೆಯ ಅನುಭವವನ್ನು ನೀಡಲಾಗಿದೆ.

ಶಿವಮೊಗ್ಗ ದಸರಾದಿಂದ ಬಂದ ಪ್ರಾಥಮಿಕ ವರದಿಗಳ ಪ್ರಕಾರ, ಸಾಗರ್ ಆನೆಗೆ  ಇದ್ದಕ್ಕಿದ್ದಂತೆಯೇ ಕಾಲು ನೋವು ಕಾಣಿಸಿಕೊಂಡಾಗ, ದಸರಾ ಮೆರವಣಿಗೆಯಲ್ಲಿ ಸೇರುವ ಭಾರೀ ಜನಸಂಖ್ಯೆಯ  ಜನಸಂದಣಿ ಮತ್ತು ಡೊಳ್ಳು, ಕಂಸಾಳೆ ಸೇರಿದಂತೆ ವಾದ್ಯಗಳ ಶಬ್ದ ಇವೆಲ್ಲದರ ಅರಿವೇ ಇಲ್ಲದ ಮೊದಲಬಾರಿಗೆ ಏಕಾಏಕಿ ಅಂಬಾರಿ ಹೊರುವ ಜವಾಬ್ಧಾರಿಯನ್ನು ಪಡೆದ ಸೋಮಣ್ಣನಿಗೆ ಇಂತಹ ವಾತಾವರಣದಿಂದಾಗಿ ಸಹಜವಾಗಿ ಗಾಬರಿಗೊಂಡಿರಬಹುದಾದ ಎಲ್ಲಾ ಲಕ್ಷಣಗಳಿದ್ದು, ಇದರ ಕುರಿತಾಗಿ ಸೂಕ್ತ ತನಿಖೆಯಿಂದಲೇ ನಿಜವಾದ ಕಾರಣಗಳು ದೃಢವಾಗಲಿದೆ.

ಅಂಬಾರಿ ಹೊರುವ ಸಾಗರನಿಗೆ ಇದ್ದಕ್ಕಿದ್ದಂತೆಯೇ ಕಾಲುನೋವು ಕಾಣಿಸಿಕೊಂಡಾಗ ಬೇರಾವುದೇ ಆನೆಗಳಿಗೆ ಸೂಕ್ತವಾದ ತಾಲೀಮು ಇಲ್ಲದೇ ಇದ್ದ ಕಾರಣ, ತುರ್ತು ಸಂದರ್ಭದಲ್ಲಿ ಮೆರವಣಿಗೆಯನ್ನು ಸ್ಥಗಿತಗೊಳಿಸುವ ಇಲ್ಲವೇ ಯಾವುದಾದರೂ ಲಾರಿ ಇಲ್ಲವೇ ಇತರೇ ವಾಹನಗಳ ಮೇಲೆ ಪರ್ಯಾಕವಾಗಿ ಅಂಬಾರಿಯನ್ನು ಹೊರುವ ಕ್ರಮಗಳ ಬಗ್ಗೆ ಸ್ಥಳೀಯ ಆಡಳಿತ ಮಂಡಳಿ ಯೋಚಿಸಿದ್ದಲ್ಲಿ, ಇಂತಹ ಅಪಸವ್ಯಗಳು ಮತ್ತು ಮುಜುಗೊರವನ್ನು ತಪ್ಪಿಸಬಹುದಿತ್ತು ಎನ್ನುವುದೇ ಬಹುತೇಕರ ಅನಿಸಿಕೆಯಾಗಿದೆ.

ಆರಂಭದಲ್ಲಿ ಸೋಮಣ್ಣ ಆತಂಕವನ್ನು ತೋರಿಸಿದ್ದನೇ?

ಸ್ಥಳೀಯ ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ ದಸರಾ ಮೆರವಣಿಗೆಗೆ ಆರಂಭಕ್ಕೂ ಮುನ್ನವೇ ಸೋಮಣ್ಣ ಆನೆ ಆತಂಕಗೊಂಡಿತ್ತು ಎನ್ನಲಾಗಿದ್ದು, ಕಡೇ ಕ್ಷಣದ ಈ ರೀತಿಯ ಆಂತಕಗಳನ್ನು ಮತ್ತು ಅದರ ಸೂಚನೆಗಳನ್ನು ಸ್ಥಳೀಯ ಅಡಳಿತ ಸಂಪೂರ್ನವಾಗಿ ನಿರ್ಲಕ್ಷಿಸಿದ ಪರಿಣಾಮ ಈ ರೀತಿಯಾಗಿದೆ ಎನ್ನುವು ಆರೋಪ ನಿಜವೇ ಎಂಬುದನ್ನು ದೃಶ್ಯಾವಳಿ, ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಹೇಳಿಕೆಗಳು ಮತ್ತು ಅಧಿಕೃತ ತನಿಖೆಯ ಮೂಲಕ ಜಿಲ್ಲಾಡಳಿತ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಉತ್ಸವ ಆಯೋಜಕರು ಪರಿಶೀಲಿಸಬೇಕಾಗಿದೆ.

ಆನೆಗಳು ಈ ರೀತಿಯಾಗಿ ಅನಿರೀಕ್ಷಿತವಾಗಿ ಬೆದರಬಹುದು ಎಂಬ ಕಾರಣಕ್ಕೆ ಪ್ರತಿಯೊಂದು ಅವಘಡವನ್ನೂ ಮುಂಚಿತವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಅನಿರೀಕ್ಷಿತ ಘಟನೆ ಸಂಭವಿಸಿದಾಗ ಸಾರ್ವಜನಿಕರಿಗೆ ಅಪಾಯ ಕಡಿಮೆ ಮಾಡುವ ವ್ಯವಸ್ಥೆ ಸಿದ್ಧವಾಗಿತ್ತೇ ಎಂಬುದೇ ಆಡಳಿತದ ಸಿದ್ಧತೆಯನ್ನು ಅಳೆಯುವ ಪ್ರಮುಖ ಮಾನದಂಡವಾಗಿದೆ. ಅಂಬಾರಿ ಕೆಳಗೆ ಬಿದ್ದಾಗ ಉತ್ಸವಮೂರ್ತಿಗೂ ಹಾನಿಯಾಗಿರುವ  ವರದಿಯು ಖಂಡಿತವಾಗಿಯೂ ನೂರಾರು ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯನ್ನುಂಟು ಮಾಡಿರುವುದಲ್ಲದೇ, ಈ ಘಟನೆಯ ಸಂಧರ್ಭದಲ್ಲಿ  ರಸ್ತೆ ಬದಿಯಲ್ಲ ನಿಲ್ಲಿಸಿದ್ದ ಅನೇಕ ಸಾರ್ವಜನಿಕರ ವಾಹನಗಳು ಜಖಂಗೊಂಡಿರುವುದಲ್ಲದೇ, ಮಾವುತನಿಗೂ ಗಾಯವಾಗಿರುವುದು ನಿಜಕ್ಕೂ ಬೇಸರದ ಸಂಗತಿಯಷ್ಟೇ ಅಲ್ಲದೇ ಮುಂದಿನ ಬಾರಿ  ಕೇವಲ ದಸರಾ ಆಷ್ಟೇ ಅಲ್ಲದೇ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆಗಳಿಗೆ ಅಮಾಯಕ ಆನೆಗಳನ್ನು ಬಳಸುವವರಿಗೆ ಎಚ್ಚರಿಕೆಯ ಘಂಟೆಯಾಗಿದೆ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply