ಗಮಕವು ಕರ್ನಾಟಕದ ವಿಶಿಷ್ಟವಾದ ಸಾಂಪ್ರದಾಯಿಕ ಕಲೆಗಳಲ್ಲಿ ಒಂದಾಗಿದ್ದು, ಕನ್ನಡದ ಪುರಾತನ ಕಾವ್ಯಗಳು, ಮಹಾಕಾವ್ಯಗಳು ಮತ್ತು ಸಾಹಿತ್ಯ ಕೃತಿಗಳನ್ನು ರಾಗಬದ್ಧವಾಗಿ, ಭಾವಪೂರ್ಣವಾಗಿ ಹಾಡಿ ಓದುವ ಕಲೆಯಾಗಿದೆ. ಇದರಲ್ಲಿ ಗಮಕಿಯು ಕಾವ್ಯದ ಸಾಲುಗಳನ್ನು ನಿರ್ದಿಷ್ಟ ರಾಗ ಮತ್ತು ಲಯದಲ್ಲಿ ಪ್ರಸ್ತುತಪಡಿಸಿದರೆ, ವ್ಯಾಖ್ಯಾನಕಾರರು ಅದರ ಅರ್ಥ, ಒಳಭಾವ, ಹಿನ್ನೆಲೆ ಹಾಗೂ ಸಾಹಿತ್ಯಿಕ ಸೌಂದರ್ಯವನ್ನು ಸರಳವಾಗಿ ವಿವರಿಸುತ್ತಾರೆ.
ಕುಮಾರವ್ಯಾಸ ಭಾರತದಂತಹ ಮಹಾಕಾವ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಗಮಕ ಕಲೆ ಮಹತ್ವದ ಪಾತ್ರ ವಹಿಸಿದೆ. ಸಂಗೀತದ ಮಾಧುರ್ಯ, ಕಾವ್ಯದ ಸೌಂದರ್ಯ ಮತ್ತು ಅರ್ಥವಿವರಣೆಯ ಮೂಲಕ ಸಾಹಿತ್ಯವನ್ನು ಆಸಕ್ತಿದಾಯಕವಾಗಿ ಪರಿಚಯಿಸುವುದು ಈ ಕಲೆಯ ವಿಶೇಷತೆ. ಇದು ಕೇವಲ ಮನರಂಜನೆಯ ಕಲೆಯಾಗಿರದೆ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಮೂಲ್ಯ ಕಲಾಪ್ರಕಾರವೇ ಗಮಕ. ಕನ್ನಡ ನಾಡಿನಲ್ಲಿ ಗಮಕ ಕಲೆಯನ್ನು ಮನೆಮನೆಗೂ ತಲುಪಿಸಿದ ಅಪರೂಪದ ಕಲಾವಿದೆಯರಲ್ಲಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರ ಹೆಸರು ಚಿರಸ್ಥಾಯಿಯಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.
ಸಂಗೀತವೇ ಉಸಿರಾಗಿದ್ದ ಮನೆತನ

ಗಂಗಮ್ಮ ಕೇಶವಮೂರ್ತಿ ಅವರು 1940ರ ಏಪ್ರಿಲ್ 12ರಂದು ಹಾಸನದಲ್ಲಿ ಸಂಗೀತಮಯ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ವೆಂಕಟರಾಮಯ್ಯ ಅಧ್ಯಾಪಕರಾಗಿದ್ದು, ಶಾಲೆಯಲ್ಲಿ ಪದ್ಯಗಳನ್ನು ಸ್ವರಬದ್ಧವಾಗಿ ಹಾಡಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದರು. ಸಂಗೀತ ಮತ್ತು ಗಮಕ ಕಲೆಯ ಮೇಲಿನ ಅವರ ಅಪಾರ ಪ್ರೀತಿ ಮಗಳ ಮನಸ್ಸಿನಲ್ಲೂ ಬಾಲ್ಯದಲ್ಲೇ ಬೀಜ ಬಿತ್ತಿತು. ತಾಯಿ ಸೋಮನಾಯಕಮ್ಮ ಅವರು ಸೋಬಾನೆ ಪದ, ತುಳಸಿಪದ, ದೇವರನಾಮ ಸೇರಿದಂತೆ ಅನೇಕ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಿದ್ದರು. ಅವರ ಅದ್ಭುತ ಜ್ಞಾಪಕಶಕ್ತಿಯಿಂದ ಸುಮಾರು 2,000ಕ್ಕೂ ಹೆಚ್ಚು ಪದ್ಯಗಳನ್ನು ಪುಸ್ತಕ ನೋಡದೆ ಹಾಡುತ್ತಿದ್ದರು ಎಂಬುದು ಆಶ್ಚರ್ಯಕರ ಸಂಗತಿ. ಈ ಸಂಗೀತದ ವಾತಾವರಣದಲ್ಲೇ ಬೆಳೆದ ಗಂಗಮ್ಮ ಅವರಿಗೆ ಸಂಗೀತದ ಮೇಲಿನ ಆಸಕ್ತಿ ಸಹಜವಾಗಿಯೇ ಬೆಳೆಯಿತು.
ತಂದೆಯೇ ಮೊದಲ ಗುರು

ಗಂಗಮ್ಮನವರು ಸಂಗೀತವನ್ನು ತಮ್ಮ ತಂದೆಯವರಲ್ಲೇ ಅಭ್ಯಾಸ ಮಾಡಿ ಸೀನಿಯರ್ ಗ್ರೇಡ್ ಸಂಗೀತ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆದರೆ ಅವರ ಜೀವನವನ್ನು ಸಂಪೂರ್ಣವಾಗಿ ಬದಲಿಸಿದ ಕಲೆಯೆಂದರೆ ಗಮಕ. ಮದುವೆಯ ನಂತರ ಆರಂಭವಾದ ನಿಜವಾದ ಸಾಧನೆಯ ಪಯಣ. ಎಸ್ಎಸ್ಎಲ್ಸಿ ಮುಗಿದ ಕೂಡಲೇ ಅವರ ವಿವಾಹವಾಗಿ ಬೆಂಗಳೂರಿಗೆ ಬಂದರು. ಹೊಸ ಊರು… ಹೊಸ ಮನೆ… ಸಮಯ ಕಳೆಯುವುದೇ ಕಷ್ಟ. ಆಗ ಅವರ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. ನನ್ನ ಜೀವನದಲ್ಲಿ ನಾನು ಏನಾದರೂ ಸಾಧಿಸಬೇಕು. ಬಾಲ್ಯದಿಂದ ಕಲಿತಿದ್ದ ಸಂಗೀತವೇ ಅವರಿಗೆ ಹೊಸ ದಾರಿ ತೋರಿಸಿತು. ಗಮಕ ಕಲೆಯನ್ನು ಇನ್ನಷ್ಟು ಆಳವಾಗಿ ಕಲಿಯಬೇಕೆಂದು ತೀರ್ಮಾನಿಸಿದರು.
ಆದರೆ ಆ ಕಾಲದಲ್ಲಿ ಗಮಕ ಕಲಿಸಲು ನಿರ್ದಿಷ್ಟ ಗುರುಗಳನ್ನು ಹುಡುಕುವುದು ಸುಲಭದ ಕೆಲಸವಾಗಿರಲಿಲ್ಲ. ಯಾರು ಚೆನ್ನಾಗಿ ಹಾಡುತ್ತಾರೆ ಎಂದು ತಿಳಿಯುತ್ತಿತ್ತೋ ಅವರನ್ನೇ ಹುಡುಕಿಕೊಂಡು ಹೋಗಿ ಕಲಿಯುತ್ತಿದ್ದರು.
ಮಹಾನ್ ಗುರುಗಳ ಸಾನ್ನಿಧ್ಯ
ಗಂಗಮ್ಮ ಕೇಶವಮೂರ್ತಿ ಅವರು ಕನ್ನಡದ ಪ್ರಸಿದ್ಧ ಗಮಕಿಗಳಾದ
- ಎಂ. ರಾಘವೇಂದ್ರರಾವ್
- ನಂ. ಅಶ್ವತ್ಥನಾರಾಯಣ
- ಬಿ.ಎಸ್.ಎಸ್. ಕೌಶಿಕ್
- ಸತ್ಯವತಿ ಕೇಶವಮೂರ್ತಿ
ಅವರ ಬಳಿ ಗಮಕ ಕಲಿತರು. ಹರಿಹರದ ಪೇಟೆ ರಾಮಚಂದ್ರಾಚಾರ್ ಅವರಿಂದ ಸಾಹಿತ್ಯಾಭ್ಯಾಸ ಮಾಡಿ ಗಮಕಕ್ಕೆ ಅಗತ್ಯವಾದ ಕಾವ್ಯಜ್ಞಾನವನ್ನು ಸಂಪಾದಿಸಿದರು.
ನಿಮ್ಮ ಧ್ವನಿ ಗಮಕಕ್ಕೆ ಹುಟ್ಟಿದ್ದು
ಶಾಸ್ತ್ರೀಯ ಸಂಗೀತ ಅಭ್ಯಾಸದ ಸಮಯದಲ್ಲಿ ಅನೇಕ ಹಿರಿಯರು ಒಂದು ಮಾತು ಹೇಳುತ್ತಿದ್ದರು. ನಿಮ್ಮ ಧ್ವನಿ ಗಮಕಕ್ಕೆ ಹೆಚ್ಚು ಸೂಕ್ತವಾಗಿದೆ. ನೀವು ಗಮಕವನ್ನೇ ಮುಂದುವರಿಸಿ. ಆ ಸಲಹೆಯೇ ಅವರ ಬದುಕಿನ ದಿಕ್ಕನ್ನು ಬದಲಿಸಿತು. ನಂತರ ಅವರು ಸಂಪೂರ್ಣವಾಗಿ ಗಮಕ ಕಲೆಯನ್ನೇ ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡರು.
ಹತ್ತನೇ ವಯಸ್ಸಿನಲ್ಲೇ ವೇದಿಕೆ ಪ್ರವೇಶ
ಗಂಗಮ್ಮನವರು ಕೇವಲ ಹತ್ತು ವರ್ಷದ ಬಾಲಕಿಯಾಗಿದ್ದಾಗಲೇ ಸಾರ್ವಜನಿಕವಾಗಿ ಹಾಡಲು ಆರಂಭಿಸಿದರು. ನಂತರದ ಐದು ದಶಕಗಳಲ್ಲಿ ಅವರು ನೀಡಿರುವ ಗಮಕ ಕಾರ್ಯಕ್ರಮಗಳ ಸಂಖ್ಯೆ ಸಾವಿರಗಳನ್ನು ಮೀರಿದೆ. ಕರ್ನಾಟಕದ ಮೂಲೆಮೂಲೆಗಳಲ್ಲಿ ಮಾತ್ರವಲ್ಲದೆ ಹೊರರಾಜ್ಯಗಳಲ್ಲಿಯೂ ಗಮಕದ ಕಂಪನ್ನು ಹರಡಿದರು.
ಆಕಾಶವಾಣಿಯ ಜನಪ್ರಿಯ ಧ್ವನಿ 1960ರಿಂದಲೇ ಆಕಾಶವಾಣಿಯಲ್ಲಿ
- ಗಮಕ ವಾಚನ
- ಭಾವಗೀತೆ
- ದೇವರನಾಮ
- ಕಾವ್ಯ ಗಾಯನ
ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದಾರೆ. ಅವರ ಧ್ವನಿಯನ್ನು ಕೇಳಿಯೇ ಗಮಕ ಕಲೆಯ ಮೇಲೆ ಆಸಕ್ತಿ ಬೆಳೆಸಿಕೊಂಡ ಅನೇಕ ಶ್ರೋತರು ಇಂದಿಗೂ ಇದ್ದಾರೆ.
ಲಕ್ಷ್ಮೀಶ ಗಮಕ ಪಾಠಶಾಲೆ, ಗಮಕದ ವಿಶ್ವವಿದ್ಯಾಲಯ
ಬೆಂಗಳೂರುಗೆ ಬಂದ ನಂತರ ಅವರು ಸ್ಥಾಪಿಸಿದ ಲಕ್ಷ್ಮೀಶ ಗಮಕ ಪಾಠಶಾಲೆ ಕನ್ನಡ ಗಮಕ ಇತಿಹಾಸದಲ್ಲಿ ಒಂದು ಮಹತ್ವದ ಅಧ್ಯಾಯವಾಗಿದೆ. ಈ ಪಾಠಶಾಲೆಯ ಮೂಲಕ ನೂರಾರು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಗಮಕ ಆಸಕ್ತರಿಗೆ ವ್ಯವಸ್ಥಿತ ತರಬೇತಿ ನೀಡಿದರು. ಪ್ರತಿ ವಾರ ನಡೆಯುವ ಸಮಗ್ರ ಕಾವ್ಯ ವಾಚನ ಮಾಲೆ ಕಾರ್ಯಕ್ರಮಗಳಲ್ಲಿ ಅನೇಕ ಮಹಾಕಾವ್ಯಗಳ ವಾಚನ ಮತ್ತು ವ್ಯಾಖ್ಯಾನಗಳನ್ನು ನಡೆಸುವ ಮೂಲಕ ಹೊಸ ತಲೆಮಾರಿಗೆ ಗಮಕದ ಸವಿಯನ್ನು ಪರಿಚಯಿಸಿದರು.
ಶಿಷ್ಯರನ್ನು ಕಲಾವಿದರನ್ನಾಗಿಸಿದ ಗಂಡು ಗಮಕಿ ಗುರು
ಗಂಗಮ್ಮನವರು ಕೇವಲ ಗಾಯಕಿಯಲ್ಲ. ಅವರು ಅದ್ಭುತ ಗುರು. ಅವರ ಶಿಷ್ಯರಲ್ಲಿ ಅನೇಕರು ಇಂದು ರಾಜ್ಯದ ಪ್ರಮುಖ ಗಮಕಿಗಳಾಗಿ ಹೊರಹೊಮ್ಮಿದ್ದಾರೆ. ಗಮಕ ಪರೀಕ್ಷೆಗಳ ಪರೀಕ್ಷಕರಾಗಿ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸಂಚಾಲಕರಾಗಿ ಅವರು ಮಹತ್ವದ ಸೇವೆ ಸಲ್ಲಿಸಿದ್ದಾರೆ. ಪ್ರಸಿದ್ಧ ಗಮಕಿ ಎಂ. ರಾಘವೇಂದ್ರರಾವ್ ಅವರು ಗಂಗಮ್ಮನವರ ಧೈರ್ಯಶಾಲಿ ಗಾಯನ, ಸ್ಪಷ್ಟ ಉಚ್ಚಾರಣೆ ಮತ್ತು ಪ್ರಬಲ ಕಂಠಶಕ್ತಿಯನ್ನು ನೋಡಿ ಅವರಿಗೆ
- ಗಂಡು ಗಮಕಿ
- ಸವ್ಯಸಾಚಿ
- ಕ್ಯಾಪ್ಟನ್
ಎಂಬ ವಿಶೇಷ ಬಿರುದುಗಳನ್ನು ನೀಡಿ ಗೌರವಿಸಿದ್ದರು. ಇದು ಗಂಗಮ್ಮನವರ ಗಾಯನ ಸಾಮರ್ಥ್ಯಕ್ಕೆ ದೊರೆತ ಅಪರೂಪದ ಮೆಚ್ಚುಗೆಯಾಗಿದೆ.
ಗಮಕ ಕಲೆಯನ್ನು ಸಮಸ್ತ ಕನ್ನಡಿಗರ ಮನ-ಮನೆಗಳಿಗೆ ತಲುಪಿಸುವ ಮಹತ್ಕಾರ್ಯದಲ್ಲಿ ಭಾಗಿ
ಈ ಇಳಿವಯಸ್ಸಿನಲ್ಲಿಯೂ ಗಂಗಮ್ಮನವರು ಪ್ರತಿದಿನ ಮುಂಜಾನೆ 2:30 ಅಥವಾ 3 ಗಂಟೆಗೇ ತಮ್ಮ ದಿನಚರಿಯನ್ನು ಆರಂಭಿಸುತ್ತಾರೆ. ಗಮಕ ಕಲೆಯ ಉಳಿವು ಮತ್ತು ಬೆಳವಣಿಗೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಅವರ ಆಸಕ್ತಿ, ಪರಿಶ್ರಮ ಹಾಗೂ ಸಮರ್ಪಣಾಭಾವ ನಿಜಕ್ಕೂ ಮೆಚ್ಚುವಂತಹದ್ದು.
ಇಂದಿಗೂ ನಾಡಿನ ವಿವಿಧ ಭಾಗಗಳಲ್ಲಿರುವ ಉದಯೋನ್ಮುಖ ಹಾಗೂ ಪ್ರತಿಭಾವಂತ ಗಮಕ ವಾಚನಕಾರರು ಮತ್ತು ವ್ಯಾಖ್ಯಾನಕಾರರನ್ನು ಗುರುತಿಸಿ, ಅವರಿಂದ ನಾಡಿನ ಅಮೂಲ್ಯ ಕಾವ್ಯಗಳನ್ನು ವಾಚನ ಮತ್ತು ವ್ಯಾಖ್ಯಾನ ಮಾಡಿಸುತ್ತಾರೆ. ಆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಕಲಿಸಿ, ಸಂಪಾದಿಸಿ ಆನ್ಲೈನ್ ವೇದಿಕೆಗಳಲ್ಲಿ ಪ್ರಕಟಿಸುವ ಮೂಲಕ ಗಮಕ ಕಲೆಯನ್ನು ಸಮಸ್ತ ಕನ್ನಡಿಗರ ಮನ-ಮನೆಗಳಿಗೆ ತಲುಪಿಸುವ ಮಹತ್ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ವಯಸ್ಸನ್ನೂ ಲೆಕ್ಕಿಸದೆ ಕನ್ನಡದ ಸಾಹಿತ್ಯಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಅವರು ಮಾಡುತ್ತಿರುವ ಈ ನಿಸ್ವಾರ್ಥ ಸೇವೆ ನಿಜಕ್ಕೂ ಅದ್ಭುತ, ಅನುಕರಣೀಯ ಮತ್ತು ಅನನ್ಯವೇ ಸರಿ!
ಗಮಕವೆಂದರೆ ಅಭಿನಯವೂ ಹೌದು

ಗಂಗಮ್ಮನವರು ಗಮಕದ ಬಗ್ಗೆ ಹೇಳುವ ಮಾತು ಬಹಳ ಅರ್ಥಪೂರ್ಣ. ಗಮಕದಲ್ಲಿ ಒಂದರಿಂದ ಮೂರು ಪಾತ್ರಗಳಿರುತ್ತವೆ. ಆ ಪಾತ್ರಗಳೇ ನಾವಾಗಬೇಕು. ಅವುಗಳನ್ನು ಕೇವಲ ಹಾಡಿದರೆ ಸಾಲದು, ಬದುಕಬೇಕು. ಅವರು ಹೇಳುವಂತೆ, ಯಾವ ಪಾತ್ರವಾಗಲಿ ಮನಸ್ಸಿನಿಂದ ಅನುಭವಿಸಿದಾಗ ಮಾತ್ರ ಶ್ರೋತೃಗಳ ಮನಸ್ಸಿಗೂ ತಲುಪುತ್ತದೆ. ಅದಕ್ಕೆ ನಿರಂತರ ಓದು, ಸಾಹಿತ್ಯದ ಅರಿವು ಮತ್ತು ಜೀವನಾನುಭವ ಅಗತ್ಯ.
ಇಂದಿನ ಯುವಜನತೆಗೆ ಅವರು ಹೇಳುವ ಸಂದೇಶ
ಗಂಗಮ್ಮನವರಿಗೆ ಇಂದಿನ ಮಕ್ಕಳ ಬಗ್ಗೆ ಒಂದು ನೋವಿದೆ. ಅವರು ಹೇಳುತ್ತಾರೆ. ಟಿವಿ, ಮೊಬೈಲ್ ಬಂದ ನಂತರ ಓದುವ ಅಭ್ಯಾಸ ಕಡಿಮೆಯಾಗಿದೆ. ಓದದಿದ್ದರೆ ಸಾಹಿತ್ಯದ ಆಳ ತಿಳಿಯುವುದಿಲ್ಲ. ಸಾಹಿತ್ಯ ತಿಳಿಯದಿದ್ದರೆ ಗಮಕವೂ ಸಾಧ್ಯವಿಲ್ಲ
ಗಮಕ ಉಳಿಯಬೇಕಾದರೆ ಏನು ಮಾಡಬೇಕು?
ಗಂಗಮ್ಮನವರ ಅಭಿಪ್ರಾಯದಲ್ಲಿ, ಗಮಕ ಉಳಿಯಬೇಕಾದರೆ
- ಶಾಲೆಗಳಲ್ಲೇ ಪದ್ಯಗಳನ್ನು ಗಮಕದ ಶೈಲಿಯಲ್ಲಿ ಹೇಳುವ ಅಭ್ಯಾಸ ಆರಂಭವಾಗಬೇಕು.
- ಮಕ್ಕಳಿಗೆ ಸಾಹಿತ್ಯದ ಆಸಕ್ತಿ ಬೆಳೆಸಬೇಕು.
- ಗಮಕವನ್ನು ಕೇವಲ ವೇದಿಕೆ ಕಲೆಯಾಗಿ ಅಲ್ಲ, ಬದುಕಿನ ಮೌಲ್ಯ ಕಲಿಸುವ ಮಾಧ್ಯಮವಾಗಿ ಪರಿಚಯಿಸಬೇಕು.
ಆಧುನಿಕ ಕಾವ್ಯಕ್ಕೂ ಗಮಕ ಸಾಧ್ಯವೇ?
ಈ ಪ್ರಶ್ನೆಗೆ ಗಂಗಮ್ಮನವರು ನೀಡುವ ಉತ್ತರ ತುಂಬ ಕುತೂಹಲಕಾರಿಯಾಗಿದೆ. ಅವರು ಹೇಳುತ್ತಾರೆ, “ನಾನು ಹಳಗನ್ನಡ, ನಡುಗನ್ನಡ ಮಾತ್ರವಲ್ಲ, ಆಧುನಿಕ ಕನ್ನಡ ಕವನಗಳನ್ನೂ ಗಮಕದಲ್ಲಿ ಹಾಡುವ ಪ್ರಯೋಗ ಮಾಡಿದ್ದೇನೆ. ಆದರೂ ಅವರಿಗೆ ಅತ್ಯಂತ ಪ್ರಿಯವಾದ ಕವಿ ಎಂದರೆ ಕುಮಾರವ್ಯಾಸ. ಅವರ ನಡುಗನ್ನಡದ ಸೊಗಸು ಗಮಕಕ್ಕೆ ಅತ್ಯಂತ ಹೊಂದಿಕೆಯಾಗುತ್ತದೆ ಎಂದು ಅವರು ಹೇಳುತ್ತಾರೆ.
ಗಮಕ ಎಂದರೆ ಕೇವಲ ಹಾಡಲ್ಲ
ಗಂಗಮ್ಮ ಕೇಶವಮೂರ್ತಿ ಅವರ ಮಾತಿನಲ್ಲಿ, ಸಂಗೀತ ಮತ್ತು ಸಾಹಿತ್ಯ ಮುಪ್ಪರಿಗೊಂಡ ರಸಪಾಕವೇ ಕಥಾಕೀರ್ತನ ಮತ್ತು ಗಮಕ. ಇದು ಮನುಷ್ಯನ ಮನಸ್ಸನ್ನು ಬದಲಾಯಿಸುವ ಶಕ್ತಿ ಹೊಂದಿದೆ.
ಪ್ರಮುಖ ಪ್ರಶಸ್ತಿಗಳು ಮತ್ತು ಗೌರವಗಳು

ಗಂಗಮ್ಮ ಕೇಶವಮೂರ್ತಿ ಅವರಿಗೆ ಸಂದ ಪ್ರಮುಖ ಗೌರವಗಳು:
- ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ
- ಗಮಕ ಕಲಾರತ್ನ ಬಿರುದು
- ಕುಮಾರವ್ಯಾಸ ಪ್ರಶಸ್ತಿ
- ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ
- ಕಾವ್ಯಗಾನ ಕೋಗಿಲೆ ಪ್ರಶಸ್ತಿ
- ಗಮಕ ವಾಚನ ಕಲಾವತಂಸೆ ಗೌರವ
- ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆಯಾಗಿ ಸೇವೆ
- 2013ರ ಬೆಂಗಳೂರು ಗಮಕ ಕಲಾ ಸಮ್ಮೇಳನದ ಅಧ್ಯಕ್ಷತೆ
ಇವುಗಳ ಜೊತೆಗೆ ಅನೇಕ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ಒಂದು ಜೀವನ… ಒಂದು ಧ್ಯೇಯ… ಒಂದು ಪರಂಪರೆ
ಇಂದು ಗಮಕ ಕಲೆಯ ಬಗ್ಗೆ ಮಾತನಾಡುವಾಗ ಗಂಗಮ್ಮ ಕೇಶವಮೂರ್ತಿ ಅವರ ಹೆಸರನ್ನು ಪ್ರಸ್ತಾಪಿಸದೇ ಮುಂದೆ ಸಾಗಲು ಸಾಧ್ಯವಿಲ್ಲ.
ತಂದೆಯಿಂದ ಕಲಿತ ಸಂಗೀತವನ್ನು, ಗುರುಗಳಿಂದ ಕಲಿತ ಗಮಕವನ್ನು, ತಮ್ಮ ಪರಿಶ್ರಮದಿಂದ ಸಾಧನೆಯಾಗಿ ರೂಪಿಸಿಕೊಂಡ ಅವರು ನೂರಾರು ಶಿಷ್ಯರನ್ನು ರೂಪಿಸಿ, ಸಾವಿರಾರು ವೇದಿಕೆಗಳ ಮೂಲಕ ಕನ್ನಡ ಕಾವ್ಯದ ಸೌಂದರ್ಯವನ್ನು ಜನಮನಗಳಿಗೆ ತಲುಪಿಸಿದರು.

ಗಮಕವೆಂದರೆ ಕೇವಲ ಹಾಡಲ್ಲ. ಅದು ಕಾವ್ಯದ ಆತ್ಮಕ್ಕೆ ಸ್ವರ ತುಂಬುವ ಸಾಧನೆ. ಗಮಕ ಹಾಡುವವರು ಪಾತ್ರವನ್ನು ಓದುವುದಿಲ್ಲ, ಬದುಕುತ್ತಾರೆ. ಈ ಮಾತಿಗೆ ಜೀವಂತ ಉದಾಹರಣೆಯಾಗಿ ನಿಂತವರೇ ವಿದುಷಿ ಗಂಗಮ್ಮ ಕೇಶವಮೂರ್ತಯವರು ಎಂದರೂ ಅತಿಶಯವಾಗದು. ಅವರು ಕೇವಲ ಒಬ್ಬ ಗಾಯಕಿಯಷ್ಟೇ ಅಲ್ಲದೇ, ಕನ್ನಡದ ಕಾವ್ಯ ಪರಂಪರೆಯನ್ನು ಸ್ವರದ ಮೂಲಕ ಜೀವಂತವಾಗಿರಿಸಿದ ಅಪರೂಪದ ಸಾಧಕಿಯಾಗಿದ್ದಾರೆ. ತಮ್ಮ ಸಾವಿರಾರು ಕಾರ್ಯಕ್ರಮಗಳು, ನೂರಾರು ಶಿಷ್ಯರು, ಆಕಾಶವಾಣಿ ಮೂಲಕ ದಶಕಗಳ ಸೇವೆ, ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆಯಾಗಿ ಸಲ್ಲಿಸಿದ ಅಮೂಲ್ಯ ಕೊಡುಗೆ—ಇವೆಲ್ಲವೂ ಅವರನ್ನು ಕೇವಲ ಕನ್ನಡದ ಗಮಕ ಲೋಕದ ಅಪ್ರತಿಮ ಸಾಧಕಿಯಾಗಿ ಗುರುತಿಸುವುದಷ್ಟೇ ಅಲ್ಲದೇ ನಮ್ಮ ಹೆಮ್ಮೆಯ ಕನ್ನಡದ ಕಲಿಗಳಾಗಿಸಿದೆ ಎಂದರೂ ತಪ್ಪಾಗದು ಅಲ್ವೇ?
ಏನಂತೀರೀ?
ನಿಮ್ಮವನೇ ಶ್ರೀಮಂತ
ಇದೀಗ ಕಣ್ಣಿಗೆ ಬಿತ್ತು
Captain Gamaki Gangamma ಅವರ ಸಾಧನಾವಲೋಕನ ಸೊಗಸಾಗಿದೆ .