ಶ್ರೀ ಅರುಣ್ ಯೋಗಿರಾಜ್, ಮೈಸೂರಿನ ಶಿಲೆಯಿಂದ ಅಯೋಧ್ಯೆಯ ರಾಮಲಲ್ಲನವರೆಗೆ…

ಐದು ತಲೆಮಾರುಗಳ ಶಿಲ್ಪ ಪರಂಪರೆಯನ್ನು ಹೊತ್ತು, ಕಲ್ಲಿಗೆ ಜೀವ ತುಂಬಿದ ಕಲಾವಿದನ ಅಪರೂಪದ ಪಯಣ

ಒಂದು ಕಲ್ಲನ್ನು ನೋಡಿದಾಗ ಸಾಮಾನ್ಯ ಕಣ್ಣಿಗೆ ಕಾಣುವುದು ಕೇವಲ ಕಲ್ಲು. ಆದರೆ ಶಿಲ್ಪಿಯ ಕಣ್ಣಿಗೆ ಅದೇ ಕಲ್ಲಿನೊಳಗೆ ಒಂದು ರೂಪ ಕಾಣಿಸುತ್ತದೆ. ಆ ರೂಪವನ್ನು ಹೊರಗೆ ತರಲು ಬೇಕಾಗಿರುವುದು ಕೇವಲ ಸುತ್ತಿಗೆ–ಉಳಿ ಅಲ್ಲ. ಶಿಲ್ಪಶಾಸ್ತ್ರದ ಜ್ಞಾನ, ಅನುಭವ, ಅಪಾರ ತಾಳ್ಮೆ, ಕಲ್ಲಿನ ಗುಣವನ್ನು ಅರಿಯುವ ಕಣ್ಣು, ಕೈಯಲ್ಲಿನ ನಿಖರತೆ ಮತ್ತು ಮನಸ್ಸಿನ ಏಕಾಗ್ರತೆ, ಇವೆಲ್ಲವೂ ಬೇಕು. ಅಂತಹ ಅಪರೂಪದ ಪರಂಪರೆಯಿಂದ ಬಂದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ

ಮೈಸೂರಿನ ಅಗ್ರಹಾರದಿಂದ ಆರಂಭವಾದ ಅವರ ಶಿಲ್ಪಯಾನ ಇಂದು ಅಯೋಧ್ಯೆಯ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತವಾಗಿರುವ 51 ಇಂಚಿನ ರಾಮಲಲ್ಲಾ ವಿಗ್ರಹದವರೆಗೆ ತಲುಪಿದೆ. ಅದಕ್ಕೂ ಮೊದಲು ಕೇದಾರನಾಥದ ಆದಿಶಂಕರಾಚಾರ್ಯರ 12 ಅಡಿ ಎತ್ತರದ ವಿಗ್ರಹ ಮತ್ತು ನವದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಭವ್ಯ ಪ್ರತಿಮೆ ಅವರ ಕಲಾ ಪಯಣದ ಪ್ರಮುಖ ಮೈಲುಗಲ್ಲುಗಳಾಗಿವೆ.

ಆದರೆ ಅರುಣ್ ಯೋಗಿರಾಜ್ ಅವರ ಕಥೆ ಕೇವಲ ರಾಮಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಎಂಬ ಒಂದೇ ಸಾಲಿನ ಕಥೆಯಲ್ಲ. ಅದರ ಹಿಂದೆ ಐದು ತಲೆಮಾರುಗಳ ಪರಂಪರೆ, ತಂದೆಯ ಪಾಠ, ಆರ್ಥಿಕ ಸಂಕಷ್ಟ, MBA ಶಿಕ್ಷಣ, ಖಾಸಗಿ ಉದ್ಯೋಗ, ಕ್ರೀಡಾ ಆಸಕ್ತಿ, ಕಠಿಣ ಪರಿಶ್ರಮ, ಹಲವು ಪರೀಕ್ಷೆಗಳು, ವಿಫಲವಾಗಬಹುದೆಂಬ ಆತಂಕ, ಕಣ್ಣಿಗೆ ಬಿದ್ದ ಕಲ್ಲಿನ ಹೊಡೆತ ಮತ್ತು ಕೊನೆಯ ಕ್ಷಣದವರೆಗೂ ಮುಂದುವರಿದ ನಂಬಿಕೆಯ ಕಥೆಯಿದೆ.

ಐದು ತಲೆಮಾರುಗಳ ಶಿಲ್ಪ ಪರಂಪರೆ

ಅರುಣ್ ಯೋಗಿರಾಜ್, ಶಿಲ್ಪಿಗಳಾದ ಶ್ರೀ ಬಿ.ಎಸ್. ಯೋಗಿರಾಜ್ ಶಿಲ್ಪಿ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಮುದ್ದು ಕುವರನಾಗಿ 1983ರಲ್ಲಿ ಮೈಸೂರಿನಲ್ಲಿ ಜನಿಸಿದರು. ಅವರು ಮೈಸೂರಿನ ಅಗ್ರಹಾರದ ಐದು ತಲೆಮಾರುಗಳ ಶಿಲ್ಪಿಗಳ ಕುಟುಂಬದಿಂದ ಬಂದವರು. ಅವರ ತಂದೆ ಯೋಗಿರಾಜ್ ಶಿಲ್ಪಿ ಮತ್ತು ತಾತ ಬಸವಣ್ಣ ಶಿಲ್ಪಿ ಕೂಡ ಪ್ರಸಿದ್ಧ ಶಿಲ್ಪಿಗಳು. ಹೀಗಾಗಿ ಅರುಣ್ ಅವರಿಗೆ ಶಿಲ್ಪಕಲೆ ಒಂದು ಉದ್ಯೋಗವಾಗಿ ನಂತರ ಬಂದದ್ದಲ್ಲ. ಅದು ಅದು ಒಂದು ರೀತಿಯಲ್ಲಿ ರಕ್ತಗತವಾಗಿ, ಅವರ ಕುಟುಂಬದ ಬದುಕಿನ ಭಾಗವಾಗಿಯೇ ಬೆಳೆದಿತ್ತು. ತಂದೆಯವರಿಂದಲೇ ಅವರು ಶಿಲ್ಪಶಾಸ್ತ್ರದ ಮೂಲಭೂತ ಅಂಶಗಳನ್ನು ಕಲಿತರು. ಯಾವ ಶಿಲೆಯನ್ನು ಆಯ್ಕೆ ಮಾಡಬೇಕು? ಕಲ್ಲಿನ ಸ್ವಭಾವವೇನು? ಯಾವ ಭಾಗದಲ್ಲಿ ಎಷ್ಟು ಒತ್ತಡ ಕೊಡಬೇಕು? ಉಳಿ–ಸುತ್ತಿಗೆಯನ್ನು ಹೇಗೆ ಬಳಸಬೇಕು? ಕೆಲವು ಶಿಲ್ಪೋಪಕರಣಗಳನ್ನು ಸ್ವತಃ ಹೇಗೆ ತಯಾರಿಸಿಕೊಳ್ಳಬೇಕು? ಇಂತಹ ಅನೇಕ ಸೂಕ್ಷ್ಮಗಳನ್ನು ತಂದೆಯವರಿಂದಲೇ ಕಲಿತರು.

ತಮ್ಮ ತಂದೆಗೆ ಈ ವಿದ್ಯೆಯನ್ನು ಕಲಿಸಿದ್ದು ಅವರ ತಂದೆ ಬಸವಣ್ಣ ಶಿಲ್ಪಿ. ಹೀಗಾಗಿ ಅರುಣ್ ಅವರ ಶಿಲ್ಪಕಲೆಯ ಹಿಂದೆ ಐದು ತಲೆಮಾರುಗಳ ಅನುಭವದ ಸರಪಳಿ ಇದೆ. ಅರುಣ್ ಅವರದೇ ಮಾತಿನಲ್ಲಿ ಹೇಳುವುದಾದರೆ, ಮೈಸೂರಿನ ಅರಸರ ಕಾಲದಲ್ಲಿ ಅವರ ತಾತನವರಿಂದಲೂ ಹಲವು ಶಿಲ್ಪಗಳು ಕೆತ್ತಲ್ಪಟ್ಟಿದ್ದವು. ಹಾಗಾಗಿ ಮೈಸೂರಿನ ಒಡೆಯರ್ ಪರಂಪರೆಯೊಂದಿಗೂ ತಮ್ಮ ಕುಟುಂಬದ ಶಿಲ್ಪ ಪರಂಪರೆಗೆ ಪರೋಕ್ಷವಾದ ನಂಟಿದೆ ಎಂಬ ಭಾವವನ್ನು ಅವರು ವ್ಯಕ್ತಪಡಿಸುತ್ತಾರೆ.

MBA ಓದಿದ ಶಿಲ್ಪಿ!

ಇಲ್ಲಿ ಅರುಣ್ ಯೋಗಿರಾಜ್ ಕೇವಲ ಸಾಂಪ್ರದಾಯಿಕ ಶಿಲ್ಪಕಲೆಯನ್ನಷ್ಟೇ ಕಲಿತವರಲ್ಲ. MBA ಶಿಕ್ಷಣವನ್ನೂ ಪೂರ್ಣಗೊಳಿಸಿದ್ದಾರೆ. ತಾಯಿಯ ಆಸೆಯಂತೆ ಸ್ಥಿರವಾದ ಉದ್ಯೋಗ ಪಡೆಯಬೇಕೆಂದು ಅವರು ಖಾಸಗಿ ಕಂಪನಿಯಲ್ಲಿ ಕೆಲಸಕ್ಕೂ ಸೇರಿದ್ದರು. ಆದರೆ ಕಚೇರಿಯ ಕೆಲಸಕ್ಕಿಂತ ಶಿಲೆಯ ಮುಂದೆ ನಿಂತು ಕೆಲಸ ಮಾಡುವುದೇ ತಮ್ಮ ನಿಜವಾದ ಬದುಕು ಎಂದು ಅವರಿಗೆ ನಿಧಾನವಾಗಿ ಅರಿವಾಯಿತು. 2008ರಿಂದ ಅವರು ಸಂಪೂರ್ಣವಾಗಿ ಶಿಲ್ಪಕಲೆಯಲ್ಲೇ ತೊಡಗಿಸಿಕೊಂಡರು. ಈ ನಿರ್ಧಾರ ಆರಂಭದಲ್ಲಿ ಸುಲಭವಾಗಿರಲಿಲ್ಲ. ಆದರೆ ಮುಂದೆ ಇದೇ ನಿರ್ಧಾರ ಅವರನ್ನು ದೇಶದ ಪ್ರಮುಖ ಶಿಲ್ಪಿಗಳ ಸಾಲಿಗೆ ತಂದು ನಿಲ್ಲಿಸಿತು.

ತಂದೆಯ ಅನಾರೋಗ್ಯ… ಜೀವನದಲ್ಲಿ ಮತ್ತೊಂದು ಪರೀಕ್ಷೆ

ತಂದೆ ತೀವ್ರ ಅನಾರೋಗ್ಯಕ್ಕೆ ಒಳಗಾದಾಗ ಕುಟುಂಬದ ಆದಾಯಕ್ಕೂ ಹೊಡೆತ ಬಂತು. ಆ ಸಂದರ್ಭದಲ್ಲಿ ಅರುಣ್ ಮನೆಯ ಜವಾಬ್ದಾರಿ ಹೊರುವ ಸಲುವಾಗಿ ಲೈಬ್ರರಿಯಲ್ಲಿ ಕೆಲಸ ಮಾಡಿದರು. ಅವರು ಉತ್ತಮ ವಾಲಿಬಾಲ್ ಆಟಗಾರರಾಗಿದ್ದು, ವಾಲಿಬಾಲ್ ತರಬೇತಿಯನ್ನೂ ನೀಡಿದ್ದರು. ತಂದೆಯವರ ವೃತ್ತಿಗೆ ಸಹಾಯ ಮಾಡುತ್ತಾ, ಅವರಿಂದ ಶಿಲ್ಪಕಲೆಯ ಇನ್ನಷ್ಟು ಸೂಕ್ಷ್ಮಗಳನ್ನು ಕಲಿತು, ಅದನ್ನೇ ತಮ್ಮ ಬದುಕಿನ ವೃತ್ತಿಯನ್ನಾಗಿ ಮುಂದುವರಿಸಲು ನಿರ್ಧರಿಸಿದರು. ತಮ್ಮ ಕೈಯಿಂದ ಹೊರಬರುವ ವಿಗ್ರಹಗಳು ಒಂದೊಂದಾಗಿ ಉತ್ತಮವಾಗತೊಡಗಿದವು. ಪರಿಶ್ರಮದ ಜೊತೆಗೆ ಅವರಲ್ಲಿ ಆತ್ಮವಿಶ್ವಾಸವೂ ಬೆಳೆಯಿತು.

ಕೇದಾರನಾಥದಿಂದ ಆರಂಭವಾದ ಉತ್ತರದ ಪಯಣ

2021ರಲ್ಲಿ ಅರುಣ್ ಅವರ ಜೀವನದಲ್ಲಿ ಎರಡು ಪ್ರಮುಖ ಅವಕಾಶಗಳು ಬಂದವು. ಒಂದು ಕೆಲಸ ಅವರಿಗೆ ನೇರವಾಗಿ ದೊರೆಯಬಹುದಾಗಿತ್ತು. ಮತ್ತೊಂದು ಅವಕಾಶದಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿ ಗೆಲ್ಲಬೇಕಾಗಿತ್ತು. ಅವರು ಎರಡನೆಯ ದಾರಿಯನ್ನು ಆಯ್ಕೆ ಮಾಡಿಕೊಂಡರು.

ಕೇದಾರನಾಥದಲ್ಲಿ ಪುನರ್ನಿರ್ಮಿಸಿದ ಶಂಕರಾಚಾರ್ಯ ಸಮಾಧಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು ಮತ್ತು 'ಆದಿ ಶಂಕರರು ಮಲಗಿದ್ದ ನಾಗರಿಕತೆಗೆ ಜೀವನವನ್ನು ತಂದರು ...

ದೇಶದ ವಿವಿಧ ಭಾಗಗಳಿಂದ ಶಿಲ್ಪಿಗಳನ್ನು ಕರೆಸಿ, ಸಣ್ಣ ಆದಿಶಂಕರಾಚಾರ್ಯರ ವಿಗ್ರಹವನ್ನು ಕೆತ್ತಿಸುವ ಪರೀಕ್ಷೆ ನಡೆಸಲಾಯಿತು. ಆ ಸ್ಪರ್ಧಾತ್ಮಕ ಆಯ್ಕೆ ಪ್ರಕ್ರಿಯೆಯಲ್ಲಿ ಅರುಣ್ ಆಯ್ಕೆಯಾದರು. ಅದರ ಫಲವಾಗಿ ಅವರಿಗೆ ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿಶಂಕರಾಚಾರ್ಯರ ವಿಗ್ರಹ ಕೆತ್ತುವ ಅವಕಾಶ ದೊರೆಯಿತು. ಈ ವಿಗ್ರಹ 2021ರಲ್ಲಿ ಅನಾವರಣಗೊಂಡಿತು. ಇದು ಅರುಣ್ ಯೋಗಿರಾಜ್ ಅವರ ಶಿಲ್ಪಯಾನವನ್ನು ಮೈಸೂರಿನ ಗಡಿಯಾಚೆಗೆ—ದಕ್ಷಿಣ ಭಾರತದಿಂದ ಉತ್ತರ ಭಾರತದವರೆಗೆ ಕೊಂಡೊಯ್ದ ಪ್ರಮುಖ ಹೆಜ್ಜೆಯಾಯಿತು.

ನಂತರ ಬಂದ ಇಂಡಿಯಾ ಗೇಟ್‌ನ ನೇತಾಜಿ

ಸುಭಾಸ್ ಚಂದ್ರ ಬೋಸ್ ಜಯಂತಿ 2022: ಇಂಡಿಯಾ ಗೇಟ್‌ನಲ್ಲಿ ನೇತಾಜಿ ಅವರ ಪ್ರತಿಮೆ ಸ್ಥಾಪನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು - ಚಿತ್ರಗಳು | ಟೈಮ್ಸ್ ನೌ

ಕೇದಾರನಾಥದ ಕೆಲಸ ಯಶಸ್ವಿಯಾದ ನಂತರ ಮತ್ತೊಂದು ಐತಿಹಾಸಿಕ ಅವಕಾಶ ಅವರ ಮುಂದೆ ಬಂತು. 2022ರಲ್ಲಿ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭವ್ಯ ಪ್ರತಿಮೆ ಕೆತ್ತುವ ಯೋಜನೆಗೆ ಅರುಣ್ ಯೋಗಿರಾಜ್ ನೇತೃತ್ವದ ಶಿಲ್ಪಿಗಳ ತಂಡ ಆಯ್ಕೆಯಾಯಿತು. ಈ ಪ್ರತಿಮೆ ಸಾಮಾನ್ಯ ಶಿಲ್ಪವಲ್ಲ.

28 ಅಡಿ ಎತ್ತರದ, 65 ಟನ್ ತೂಕದ ಈ ಪ್ರತಿಮೆಯನ್ನು 280 ಟನ್ ತೂಕದ ಏಕಶಿಲಾ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಯಿತು. ಈ ಬೃಹತ್ ಕಲ್ಲನ್ನು ಶಿಲ್ಪವಾಗಿ ಪರಿವರ್ತಿಸಲು ಸುಮಾರು 26,000 ಮಾನವ-ಗಂಟೆಗಳ ಶ್ರಮ ಬೇಕಾಯಿತು. ಸಾಂಪ್ರದಾಯಿಕ ಕೈಕೆತ್ತನೆ ವಿಧಾನಗಳ ಜೊತೆಗೆ ಆಧುನಿಕ ಉಪಕರಣಗಳನ್ನೂ ಬಳಸಲಾಯಿತು.  2022ರ ಸೆಪ್ಟೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರತಿಮೆಯನ್ನು ಅನಾವರಣಗೊಳಿಸಿದರು.  ಈ ಕೆಲಸ ಅರುಣ್ ಅವರ ವೃತ್ತಿಜೀವನಕ್ಕೆ ರಾಷ್ಟ್ರಮಟ್ಟದ ಗಮನವನ್ನು ತಂದುಕೊಟ್ಟಿತು.

ಆದರೆ ಅಯೋಧ್ಯೆಯ ಕರೆ ಇನ್ನೂ ದೊಡ್ಡದಾಗಿತ್ತು…

ಕೇದಾರನಾಥದ ಆದಿಶಂಕರಾಚಾರ್ಯ ಮತ್ತು ಇಂಡಿಯಾ ಗೇಟ್‌ನ ನೇತಾಜಿ ಪ್ರತಿಮೆಯ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಅರುಣ್ ಅವರ ಹೆಸರು ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಕೆತ್ತನೆಗೆ ನಡೆಯುತ್ತಿದ್ದ ಆಯ್ಕೆ ಪ್ರಕ್ರಿಯೆಯಲ್ಲೂ ಕಾಣಿಸಿಕೊಂಡಿತು. ರಾಮಲಲ್ಲಾ ವಿಗ್ರಹವನ್ನು ಕೆತ್ತಲು ದೇಶದ ಮೂವರು ಪ್ರಮುಖ ಶಿಲ್ಪಿಗಳನ್ನು ಆಯ್ಕೆ ಮಾಡಲಾಯಿತು:

  • ಅರುಣ್ ಯೋಗಿರಾಜ್ – ಮೈಸೂರು
  • ಜಿ.ಎಲ್. ಭಟ್ – ಬೆಂಗಳೂರು
  • ಸತ್ಯನಾರಾಯಣ ಪಾಂಡೆ – ರಾಜಸ್ಥಾನ

ಮೂರು ಶಿಲ್ಪಿಗಳಿಗೂ ಐದು ವರ್ಷದ ಬಾಲಕನ ರೂಪದಲ್ಲಿರುವ, 51 ಇಂಚು ಎತ್ತರದ ರಾಮಲಲ್ಲಾ ವಿಗ್ರಹ ಕೆತ್ತುವ ಜವಾಬ್ದಾರಿ ನೀಡಲಾಗಿತ್ತು.

ಒಂದು ಪರೀಕ್ಷೆ… ಒಂದು ಪ್ರಶ್ನೆ… ಮತ್ತು ಅರುಣ್ ಅವರ ವಿಭಿನ್ನ ಉತ್ತರ

ಅರುಣ್ ಯೋಗಿರಾಜ್ ಅವರ ನೆನಪಿನ ಪ್ರಕಾರ, ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಶ್ನೆಪತ್ರಿಕೆಗೆ ಉತ್ತರಿಸುವ ಸಂದರ್ಭವೂ ಇತ್ತು. ಅದರಲ್ಲೊಂದು ಪ್ರಶ್ನೆ—ರಾಮಲಲ್ಲಾ ವಿಗ್ರಹದ ಮಾದರಿ ಚಿತ್ರವನ್ನು ಬಿಡಿಸುವುದು. ಆದರೆ ಅರುಣ್ ಚಿತ್ರ ಬಿಡಿಸಲಿಲ್ಲ. ಅದರ ಬದಲು, ಅವಕಾಶ ಸಿಕ್ಕರೆ ಕಲ್ಲಿನ ಮೇಲೆಯೇ ಅದನ್ನು ತೋರಿಸಬಲ್ಲೆ ಎಂಬ ಅರ್ಥದಲ್ಲಿ ಉತ್ತರಿಸಿದರು. ಇದರಿಂದ ನನ್ನ ಆಯ್ಕೆಯ ಸಾಧ್ಯತೆಯೇ ಇಲ್ಲವೇನೋ ಎಂಬ ಭಾವನೆ ಅವರ ಮನಸ್ಸಿನಲ್ಲೂ ಮೂಡಿತ್ತು. ಆದರೆ ಅದೇ ವಿಭಿನ್ನ ನಿಲುವು ಅವರ ಶಿಲ್ಪದ ಮೇಲಿನ ಆತ್ಮವಿಶ್ವಾಸವನ್ನೂ ತೋರಿಸಿತು. ಕೊನೆಗೆ ಮೂವರು ಆಯ್ಕೆಯಾದರು. ಅವರಲ್ಲಿ ಅರುಣ್ ಯೋಗಿರಾಜ್ ಅವರೂ ಒಬ್ಬರು.

ಅಯೋಧ್ಯೆಯಲ್ಲಿ ಮೂರು ಶಿಲ್ಪಿಗಳು… ಮೂರು ಪ್ರತ್ಯೇಕ ಸ್ಟುಡಿಯೋಗಳು

ಆಯ್ಕೆಯಾದ ಮೂವರು ಶಿಲ್ಪಿಗಳಿಗೆ ಪ್ರತ್ಯೇಕ ಸ್ಟುಡಿಯೋಗಳನ್ನು ನೀಡಲಾಗಿತ್ತು. ಒಬ್ಬರು ಇನ್ನೊಬ್ಬರ ಕೆಲಸವನ್ನು ನೋಡುವ ಅವಕಾಶ ಇರಲಿಲ್ಲ. ಅಂದರೆ ಇದು ಕೇವಲ ಶಿಲ್ಪಕಲೆ ಅಲ್ಲ—ಒಂದು ರೀತಿಯಲ್ಲಿ ಮೌನ ಸ್ಪರ್ಧೆ ಕೂಡ ಆಗಿತ್ತು. ಅರುಣ್ ಮೈಸೂರಿನ ಕೃಷ್ಣ ಶಿಲೆ (Krishna Shila)ಯನ್ನು ಆಯ್ಕೆ ಮಾಡಿಕೊಂಡರು.

HD ಕೋಟೆ ಪ್ರದೇಶದ ಕೃಷ್ಣ ಶಿಲೆಯನ್ನು ಬಳಸಿಕೊಂಡು 51 ಇಂಚಿನ ಬಾಲರಾಮನ ವಿಗ್ರಹವನ್ನು ಕೆತ್ತಿದರು. ಈ ಶಿಲೆ ನೀರು ಮತ್ತು ಹಾಲಿನಂತಹ ದ್ರವ್ಯಗಳೊಂದಿಗೆ ಕಡಿಮೆ ಪ್ರತಿಕ್ರಿಯೆ ತೋರುವ ಗುಣದಿಂದಾಗಿ ವಿಗ್ರಹಕ್ಕೆ ಸೂಕ್ತವೆಂದು ಅರುಣ್ ವಿವರಿಸಿದ್ದರು. ಕರ್ನಾಟಕದಲ್ಲಿ ಇಂತಹ ಕಲ್ಲುಗಳನ್ನು ಶಿಲ್ಪಕಲೆಯಲ್ಲಿ ದೀರ್ಘಕಾಲದಿಂದ ಬಳಸಲಾಗುತ್ತಿದೆ.

ಆರು ತಿಂಗಳ ಪರಿಶ್ರಮ… ಮತ್ತೆ ಎಲ್ಲವನ್ನೂ ಆರಂಭಿಸಬೇಕಾದ ಆಘಾತ!

2023ರ ಜೂನ್ ವೇಳೆಗೆ ಕೆಲಸ ಆರಂಭವಾಯಿತು. ಅರುಣ್ ಮತ್ತು ಅವರ ತಂಡ ಹಲವು ತಿಂಗಳುಗಳ ಕಾಲ ಶ್ರಮಿಸಿದರು. ಆಗಾಗ ಅವರು ದಿನಕ್ಕೆ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೆಂದು ಅವರು ವಿವರಿಸಿದ್ದಾರೆ.  ಕೆಲಸದ ಸುಮಾರು 50–60 ಶೇಕಡಾ ಭಾಗ ಪೂರ್ಣಗೊಂಡಿತ್ತು. ಅಕ್ಟೋಬರ್‌ನಲ್ಲಿ ದೆಹಲಿಯಿಂದ ಅವರಿಗೆ ಕರೆ ಬಂತು. ಅರುಣ್ ಅಂದುಕೊಂಡಿದ್ದು, ಬಹುಶಃ ಈ ಕೆಲಸದ ಯಶಸ್ಸಿನಿಂದ ಮತ್ತೊಂದು ಹೊಸ ಅವಕಾಶ ಬಂದಿರಬಹುದು ಎಂದು. ಆದರೆ ಅವರಿಗೆ ಸಿಕ್ಕ ಸುದ್ದಿ ಸಂಪೂರ್ಣ ಬೇರೆ.

ನೀವು ಬಳಸುತ್ತಿರುವ ಶಿಲೆಯ ಗುಣಮಟ್ಟದ ಬಗ್ಗೆ ವರದಿ ಅನುಕೂಲಕರವಾಗಿಲ್ಲ. ಇದು ದೇಶದ ಅತ್ಯಂತ ಮಹತ್ವದ ಯೋಜನೆ. ಅಪಾಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೇರೆ ಶಿಲೆಯಲ್ಲಿ ಮತ್ತೆ ಕೆಲಸ ಆರಂಭಿಸಬೇಕು.

ಎಂದು ತಿಳಿಸಲಾಯಿತು. ಒಬ್ಬ ಶಿಲ್ಪಿಗೆ ಇದು ಎಷ್ಟು ದೊಡ್ಡ ಆಘಾತವಾಗಿರಬಹುದು? ತಿಂಗಳುಗಳ ಕಾಲ ಕೆತ್ತಿದ ಶಿಲೆಯನ್ನು ಬದಿಗಿಟ್ಟು, ಮತ್ತೆ ಮೊದಲಿನಿಂದ ಆರಂಭಿಸಬೇಕಾದ ಪರಿಸ್ಥಿತಿ! ಅರುಣ್ ಸ್ವತಃ ಹೇಳುವಂತೆ, ಅದು ಅವರ ಪಾಲಿಗೆ ಅತ್ಯಂತ ನಿರಾಶಾದಾಯಕ ಕ್ಷಣವಾಗಿತ್ತು. ಆದರೆ ಅಯೋಧ್ಯೆಯಲ್ಲೊಬ್ಬರು ಅವರಿಗೆ ನೀಡಿದ ಮಾತು ಮತ್ತೆ ಧೈರ್ಯ ತುಂಬಿತು. ಭಗವಂತ ನಿನ್ನನ್ನು ಪರೀಕ್ಷಿಸುತ್ತಿದ್ದಾನೆ. ನೀನು ನಿನ್ನ ಕೆಲಸ ಮಾಡು.

ಎರಡು ತಿಂಗಳು ಮಾತ್ರ… ಎದುರಿಗೆ ಇನ್ನಿಬ್ಬರು ಶಿಲ್ಪಿಗಳು!

ಹೊಸ ಶಿಲೆಯೊಂದಿಗೆ ಕೆಲಸ ಆರಂಭಿಸುವಾಗ ಅರುಣ್ ಅವರ ಮುಂದೆ ಮತ್ತೊಂದು ದೊಡ್ಡ ಸವಾಲಿತ್ತು. ಇನ್ನಿಬ್ಬರು ಶಿಲ್ಪಿಗಳು ಅವರಿಗಿಂತ ಸುಮಾರು ಆರು ತಿಂಗಳು ಮುಂದಿದ್ದರು. ಅರುಣ್ ಅವರ ಕೈಯಲ್ಲಿ ಉಳಿದಿದ್ದು ಕೇವಲ ಎರಡು ತಿಂಗಳು.

ಅಷ್ಟರಲ್ಲೇ ಮತ್ತೊಂದು ಘಟನೆ. ಶಿಲ್ಪ ಕೆತ್ತುವಾಗ ಕಲ್ಲಿನ ತುಂಡೊಂದು ಅವರ ಬಲ ಕಣ್ಣಿಗೆ ಬಡಿದಿತು. ವೈದ್ಯರು ಕಣ್ಣಿಗೆ ಸುಮಾರು ಒಂದು ವಾರ ಪಟ್ಟಿ ಕಟ್ಟಿಕೊಂಡು ವಿಶ್ರಾಂತಿ ಪಡೆಯಲು ಸಲಹೆ ನೀಡಿದರು. ಅಂದರೆ ಉಳಿದಿದ್ದ ಎರಡು ತಿಂಗಳಲ್ಲಿ ಮತ್ತೊಂದು ವಾರ ಕಡಿಮೆಯಾಯಿತು. ಆದರೂ ಅವರು ನಿಲ್ಲಲಿಲ್ಲ.

ನಾನು ಮಾಡುತ್ತಿಲ್ಲ… ನಾನು ಕೇವಲ ಒಂದು ಸಾಧನ

ಇದು ಅರುಣ್ ಯೋಗಿರಾಜ್ ಅವರ ಕಥೆಯ ಅತ್ಯಂತ ಆಧ್ಯಾತ್ಮಿಕ ಭಾಗ. ಒತ್ತಡ ಹೆಚ್ಚಾದಾಗ ಅವರು ತಮ್ಮ ಮನಸ್ಥಿತಿಯನ್ನೇ ಬದಲಿಸಿಕೊಂಡರು. ನಾನೇ ಮಾಡುತ್ತಿದ್ದೇನೆ ಎಂಬ ಭಾವವನ್ನು ಬಿಟ್ಟು, ನಾನು ಭಗವಂತನ ಕೈಯಲ್ಲಿರುವ ಒಂದು ಸಾಧನ. ಅವನು ನನ್ನ ಕೈಗಳ ಮೂಲಕ ತನ್ನ ಕೆಲಸ ಮಾಡಿಸುತ್ತಿದ್ದಾನೆ. ಎಂಬ ಭಾವನೆಯೊಂದಿಗೆ ಕೆಲಸ ಮುಂದುವರಿಸಿದರು. ಆ ಮನಸ್ಥಿತಿಯೇ ಅವರಿಗೆ ಕೊನೆಯ ಹಂತದಲ್ಲಿ ಅಪಾರ ಶಕ್ತಿ ನೀಡಿತು.

ರಾಮಲಲ್ಲಾ ಮುಖಕ್ಕಾಗಿ 1,200 ಮಕ್ಕಳ ಮುಖಗಳ ಅಧ್ಯಯನ!

ಅಯೋಧ್ಯೆ ಬಾಲ ರಾಮನ ವಿಗ್ರಹದಲ್ಲಿನ ವಿಶೇಷತೆಯೇನು ಗೊತ್ತೇ.?

ಬಾಲರಾಮನ ಮುಖವನ್ನು ರೂಪಿಸುವುದು ಅರುಣ್ ಅವರಿಗೆ ದೊಡ್ಡ ಸವಾಲಾಗಿತ್ತು. ರಾಮನ ಬಾಲರೂಪವನ್ನು ಚಿತ್ರಿಸುವ ಅಥವಾ ಶಿಲ್ಪಿಸುವ ಸಂದರ್ಭದಲ್ಲಿ ಕೇವಲ ಸುಂದರ ಮಗುವಿನ ಮುಖ ಸಾಕಾಗುವುದಿಲ್ಲ. ಅದರಲ್ಲಿ ಮಗುವಿನ ಮುಗ್ಧತೆ ಮತ್ತು ದೇವತ್ವ ಎರಡೂ ಒಂದೇ ಸಮಯದಲ್ಲಿ ಕಾಣಬೇಕು.

ಈ ಕಾರಣಕ್ಕಾಗಿ ಅರುಣ್ ಐದು ವರ್ಷದ ಮಕ್ಕಳ ಮುಖಭಾವ, ಕಣ್ಣು, ಮೂಗು, ತುಟಿ, ಕೆನ್ನೆ, ನಗು ಮುಂತಾದ ಸೂಕ್ಷ್ಮ ಲಕ್ಷಣಗಳನ್ನು ಅಧ್ಯಯನ ಮಾಡಿದರು. ಅವರು ಸುಮಾರು 1,200 ಮಕ್ಕಳ ಛಾಯಾಚಿತ್ರಗಳನ್ನು ಗಮನಿಸಿ, ಐದು ವರ್ಷದ ಮಗುವಿನ ಮುಖದ ಸ್ವಾಭಾವಿಕ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದರು.  ಶಿಲ್ಪಶಾಸ್ತ್ರದ ಪ್ರಮಾಣಗಳ ಜೊತೆಗೆ ಮಗುವಿನ ಸಹಜ ಮುಗ್ಧತೆಯನ್ನು ಸೇರಿಸುವ ಪ್ರಯತ್ನವೇ ಅಂತಿಮ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಮೂರು ಶಿಲ್ಪಿಗಳು… ಮೂವರು ಸಹಾಯಕರು… ಮತ್ತು ಮೂರು ಯುವಕರ ಮಾತು!

Ram Lalla At Ayodhya Ram Janmabhoomi Temple - Poster V - Posters

ಅರುಣ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಮೂವರು ಶಿಲ್ಪಿಗಳಿಗೂ ತಲಾ ಒಬ್ಬರಂತೆ ಯುವ ಸಹಾಯಕರು ಇದ್ದರು. ಅವರು ಸುಮಾರು 19ರಿಂದ 21 ವರ್ಷ ವಯಸ್ಸಿನವರು. ಊಟ, ತಿಂಡಿ, ಕಾಫಿ—ಯಾವುದೇ ಅಗತ್ಯವಿದ್ದರೂ ಶಿಲ್ಪಿಗಳಿಗೆ ನೆರವಾಗುತ್ತಿದ್ದರು. ಆದರೆ ಅರುಣ್ ಅವರ ಮನಸ್ಸಿನಲ್ಲೂ ಸಹಜವಾದ ಕುತೂಹಲವಿತ್ತು. ಇನ್ನಿಬ್ಬರು ಶಿಲ್ಪಿಗಳು ಹೇಗೆ ಮಾಡುತ್ತಿದ್ದಾರೆ? ಎಂದು ತಿಳಿದುಕೊಳ್ಳಲು ಅವರಿಗೆ ಸಾಧ್ಯವಿರಲಿಲ್ಲ.

ಒಂದು ದಿನ ಆ ಮೂವರು ಯುವಕರನ್ನೇ ಕೇಳಿದರು: ನಿಮಗೆ ಯಾವ ವಿಗ್ರಹ ಇಷ್ಟ? ಅವರು ಮೊದಲಿಗೆ ಮೂರು ವಿಗ್ರಹಗಳೂ ಚೆನ್ನಾಗಿವೆ ಎಂದರು. ಆಗ ಅರುಣ್ ಪ್ರಶ್ನೆಯನ್ನು ಬದಲಿಸಿದರು, ನಿಮ್ಮನ್ನೇ ನ್ಯಾಯಾಧೀಶರನ್ನಾಗಿ ಮಾಡಿದರೆ, ನೀವು ಯಾರ ವಿಗ್ರಹವನ್ನು ಆಯ್ಕೆ ಮಾಡುತ್ತೀರಿ? ಅವರ ಉತ್ತರ ಅರುಣ್ ಅವರಿಗೆ ಆತ್ಮವಿಶ್ವಾಸ ತುಂಬಿತು. ಸಾರ್… ನಿಮ್ಮ ವಿಗ್ರಹವೇ ಚೆನ್ನಾಗಿದೆ.

ಅರುಣ್ ತಕ್ಷಣವೇ, ನಾನು ಕೇಳಿದ್ದಕ್ಕೆ ಸುಳ್ಳು ಹೇಳಬೇಡಿ! ಎಂದು ಹೇಳಿದರು. ಆಗ ಆ ಯುವಕರು ಹೇಳಿದ ಮಾತು ಇನ್ನೂ ವಿಶೇಷ. ಸಾರ್… ನಿಮ್ಮ ಮೂರ್ತಿಯ ಜೊತೆ ನಾವು ಮಾತನಾಡಬಹುದು ಅನ್ನಿಸುತ್ತದೆ. ಒಬ್ಬ ಶಿಲ್ಪಿಗೆ ಅದಕ್ಕಿಂತ ದೊಡ್ಡ ಪ್ರಶಂಸೆ ಇನ್ನೇನು ಬೇಕು? ಮಗುವಿನ ಮುಖದಲ್ಲಿ ಕಾಣಬೇಕಾದ ಮುಗ್ಧತೆ, ಕಣ್ಣುಗಳಲ್ಲಿ ಕಾಣಬೇಕಾದ ಜೀವಂತಿಕೆ, ಮತ್ತು ಭಕ್ತನಿಗೆ ಎದುರು ನಿಂತಿರುವಂತೆ ಅನುಭವವಾಗಬೇಕಾದ ದೈವಿಕತೆ—ಇವೆಲ್ಲವೂ ಆ ಯುವಕರಿಗೆ ಆ ವಿಗ್ರಹದಲ್ಲಿ ಅನುಭವವಾಗಿದ್ದವು. ಅರುಣ್ ಅವರ ಪ್ರಕಾರ, ಆ ಯುವಕರ ಉತ್ಸಾಹ ಮತ್ತು ಧನಾತ್ಮಕ ಶಕ್ತಿಯೂ ಅಂತಿಮ ಶಿಲ್ಪದ ಸೃಷ್ಟಿಯಲ್ಲಿ ಒಂದು ರೀತಿಯಲ್ಲಿ ಪಾಲುಗೊಂಡಿತು.

2023ರ ಡಿಸೆಂಬರ್ 28… ಬಂದ ಆ ಒಂದು ಸುದ್ದಿ!

PM's address at the Pran-Pratishtha of Shree Ram Lalla at Ayodhya ji | Prime Minister of India

ತಿಂಗಳುಗಳ ಪರಿಶ್ರಮ, ಶಿಲೆ ಬದಲಾದ ಆಘಾತ, ಕಣ್ಣಿನ ಗಾಯ, ಸಮಯದ ಒತ್ತಡ—ಇವೆಲ್ಲವನ್ನೂ ದಾಟಿ ಕೊನೆಗೆ 2023ರ ಡಿಸೆಂಬರ್ 28ರಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ 15 ಸದಸ್ಯರಲ್ಲಿ 11 ಮಂದಿ ಅರುಣ್ ಅವರ ವಿಗ್ರಹವನ್ನು ಆಯ್ಕೆ ಮಾಡಿದ, ಸುದ್ದಿ ಅವರಿಗೆ ದೊರೆಯಿತು. ನಂತರ 2024ರ ಜನವರಿ 22ರಂದು ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಅದರ ಪ್ರಾಣಪ್ರತಿಷ್ಠೆ ನಡೆಯಿತು. ಹೀಗೆ ಮೈಸೂರಿನ ಕೃಷ್ಣ ಶಿಲೆಯಿಂದ ಕೆತ್ತಲ್ಪಟ್ಟ 51 ಇಂಚಿನ ಬಾಲರಾಮನ ವಿಗ್ರಹ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತವಾಯಿತು.

ಇದು ಕೇವಲ ಒಂದು ವಿಗ್ರಹವಲ್ಲ… ಒಂದು ಶಿಲ್ಪ ಪರಂಪರೆಯ ಸಾಧನೆ

ಅರುಣ್ ಯೋಗಿರಾಜ್ ಅವರ ಪ್ರಮುಖ ಕೃತಿಗಳನ್ನು ನೋಡಿದರೆ ಅವರ ಕಲೆಯ ವ್ಯಾಪ್ತಿ ಎಷ್ಟು ದೊಡ್ಡದು ಎಂಬುದು ಅರ್ಥವಾಗುತ್ತದೆ.

ಅವರ ಪ್ರಮುಖ ಶಿಲ್ಪಕೃತಿಗಳು

Meet Sculptor Arun Yogiraj, Whose Ram Lalla Idol Is Selected For Ayodhya Ram Mandir Consecration Ceremony

  • ಅಯೋಧ್ಯೆ: 51 ಇಂಚಿನ ರಾಮಲಲ್ಲಾ ವಿಗ್ರಹ
  • ಕೇದಾರನಾಥ: 12 ಅಡಿ ಎತ್ತರದ ಆದಿಶಂಕರಾಚಾರ್ಯರ ವಿಗ್ರಹ
  • ನವದೆಹಲಿ, ಇಂಡಿಯಾ ಗೇಟ್: 28 ಅಡಿ ಎತ್ತರದ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ
  • ಚುಂಚನಕಟ್ಟೆ, ಮೈಸೂರು ಜಿಲ್ಲೆ: 21 ಅಡಿ ಎತ್ತರದ ಹನುಮಂತನ ಪ್ರತಿಮೆ
  • ಮೈಸೂರು: 15 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಶಿಲ್ಪ
  • ಮೈಸೂರು: ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲಾ ಪ್ರತಿಮೆ
  • ನಂದಿ: 6 ಅಡಿ ಎತ್ತರದ ಏಕಶಿಲಾ ಪ್ರತಿಮೆ
  • ಬನಶಂಕರಿ ದೇವಿ: 6 ಅಡಿ ಎತ್ತರದ ಪ್ರತಿಮೆ
  • ಜಯಚಾಮರಾಜೇಂದ್ರ ಒಡೆಯರ್: 14.5 ಅಡಿ ಎತ್ತರದ ಬಿಳಿ ಅಮೃತಶಿಲಾ ಪ್ರತಿಮೆ, 2016
  • ನಾಲ್ವಡಿ ಕೃಷ್ಣರಾಜ ಒಡೆಯರ್: 5 ಅಡಿ ಎತ್ತರದ ಪ್ರತಿಮೆ

ಕೇದಾರನಾಥದ ಆದಿಶಂಕರಾಚಾರ್ಯರ ಪ್ರತಿಮೆ ಮತ್ತು ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳು ಅವರ ಪ್ರಮುಖ ಕೃತಿಗಳಲ್ಲಿ ಸೇರಿವೆ.

ಪ್ರಶಸ್ತಿಗಳೂ ಬಂದವು… ಆದರೆ ಪಯಣ ನಿಲ್ಲಲಿಲ್ಲ

ಅರುಣ್ ಯೋಗಿರಾಜ್ ಅವರ ಕಲಾ ಸಾಧನೆಗೆ ಹಲವು ಗೌರವಗಳು ಸಂದಿವೆ.

ಪ್ರಮುಖ ಪ್ರಶಸ್ತಿ–ಸನ್ಮಾನಗಳು

  • 2014: ಭಾರತ ಸರ್ಕಾರದ ದಕ್ಷಿಣ ವಲಯ ಯುವ ಕಲಾವಿದ ಪ್ರಶಸ್ತಿ
  • 2021: ಕರ್ನಾಟಕ ಸರ್ಕಾರದ ಜಕಣಾಚಾರಿ ಪ್ರಶಸ್ತಿ
  • ಶಿಲ್ಪ ಕೌಸ್ತುಭ ಸನ್ಮಾನ – ಶಿಲ್ಪಿಗಳ ಸಂಘ
  • ವಿವಿಧ ಕಲಾ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಂದ ಸನ್ಮಾನ
  • 2024: ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

2024ರ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅರುಣ್ ಯೋಗಿರಾಜ್ ಅವರನ್ನು ಶಿಲ್ಪಕಲೆ ವಿಭಾಗದಲ್ಲಿ ಆಯ್ಕೆ ಮಾಡಲಾಗಿತ್ತು.

ತಂದೆಯ ನೆನಪು… ಪ್ರತಿಯೊಂದು ಶಿಲ್ಪದಲ್ಲೂ

ಅರುಣ್ ಅವರ ಅಯೋಧ್ಯೆ ಪಯಣದಲ್ಲಿ ತಂದೆಯವರ ಪಾತ್ರವನ್ನು ಮರೆಯಲು ಸಾಧ್ಯವಿಲ್ಲ. ಅವರಿಗೆ ಶಿಲ್ಪಶಾಸ್ತ್ರದ ಮೊದಲ ಪಾಠ ಹೇಳಿಕೊಟ್ಟವರು ತಂದೆ. ಕಲ್ಲನ್ನು ಹೇಗೆ ನೋಡಬೇಕು ಎಂಬುದನ್ನು ಕಲಿಸಿದವರು ತಂದೆ. ಉಪಕರಣಗಳನ್ನು ಹೇಗೆ ಬಳಸಬೇಕು ಎಂಬುದನ್ನು ಕಲಿಸಿದವರು ತಂದೆ. ಶಿಲ್ಪಿಯ ಬದುಕು ಎಂದರೇನು ಎಂಬುದನ್ನು ತೋರಿಸಿದವರೂ ತಂದೆಯೇ. ರಾಮಲಲ್ಲಾ ವಿಗ್ರಹದ ಸೃಷ್ಟಿಯ ಸಂದರ್ಭದಲ್ಲಿ ತಂದೆಯ ನೆನಪು ಅರುಣ್ ಅವರೊಂದಿಗೆ ಇದ್ದೇ ಇತ್ತು. ಅವರ ತಂದೆ ಯೋಗಿರಾಜ್ ಶಿಲ್ಪಿ ಅವರು ನಿಧನರಾದದ್ದು 2021ರಲ್ಲಿ. ತಂದೆಯವರಿಗೂ ಜಕಣಾಚಾರಿ ಮತ್ತು ಕರ್ನಾಟಕ ರಾಜ್ಯೋತ್ಸವ ಸೇರಿದಂತೆ ಗೌರವಗಳು ಸಂದಿದ್ದವು.

ಮೈಸೂರಿನ ಶಿಲ್ಪಿ… ಭಾರತದ ಹೆಮ್ಮೆಯ ಕಲಾವಿದ

ನಾನು ಕೇವಲ ಒಂದು ಸಾಧನ…

ಅರುಣ್ ಯೋಗಿರಾಜ್ ಅವರ ಮಾತುಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಒಂದು ಭಾವನೆ ಇದೆ. ನಾನು ಮಾಡುತ್ತಿದ್ದೇನೆ ಎಂಬ ಅಹಂಕಾರಕ್ಕಿಂತ, ನನ್ನ ಕೈಗಳ ಮೂಲಕ ಒಂದು ದೊಡ್ಡ ಕೆಲಸ ನಡೆಯುತ್ತಿದೆ ಎಂಬ ವಿನಯ. ಅವರ ಅಯೋಧ್ಯೆ ಪಯಣವನ್ನು ಅವರು ತಮ್ಮದೇ ರೀತಿಯಲ್ಲಿ ವಿವರಿಸುವಾಗ ಕೊನೆಗೆ ದೇವರ ಅನುಗ್ರಹದ ಮಾತಿಗೆ ಬರುತ್ತಾರೆ.

ನಾನು ಭಗವಂತನ ಒಂದು ಸಾಧನ ಮಾತ್ರ. ಅವನು ನನ್ನ ಕೈಗಳ ಮೂಲಕ ತನ್ನ ಕೆಲಸ ಮಾಡಿಸುತ್ತಿದ್ದಾನೆ. ಈ ವಿಶೇಷ ಪಯಣಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಾನು ಅದೃಷ್ಟಶಾಲಿ. ಎಲ್ಲವೂ ಭಗವಂತನ ಕೃಪೆ. ಬಹುಶಃ ಇದೇ ಮಾತು ಅರುಣ್ ಯೋಗಿರಾಜ್ ಅವರ ಸಂಪೂರ್ಣ ಶಿಲ್ಪಯಾನದ ಸಾರವೂ ಹೌದು. ಏಕೆಂದರೆ ಅವರು ಕಲ್ಲನ್ನು ಮಾತ್ರ ಕೆತ್ತಿಲ್ಲ.

ಒಂದು ಕುಟುಂಬದ ಐದು ತಲೆಮಾರುಗಳ ಪರಂಪರೆಯನ್ನು ಮುಂದುವರಿಸಿದ್ದಾರೆ.
ಮೈಸೂರಿನ ಶಿಲ್ಪಕಲೆಯನ್ನು ದೇಶದ ಅತಿ ದೊಡ್ಡ ವೇದಿಕೆಗಳಿಗೆ ಕೊಂಡೊಯ್ದಿದ್ದಾರೆ.
ಮತ್ತು ಒಂದು ಕಲ್ಲಿನೊಳಗೆ ಅಡಗಿದ್ದ ಬಾಲರಾಮನ ರೂಪವನ್ನು ಕೋಟ್ಯಂತರ ಭಕ್ತರ ಕಣ್ಣೆದುರು ತಂದಿದ್ದಾರೆ.

ಅದಕ್ಕೇ ಅರುಣ್ ಯೋಗಿರಾಜ್ ಅವರ ಕಥೆ ಕೇವಲ ಒಬ್ಬ ಶಿಲ್ಪಿಯ ಯಶೋಗಾಥೆಯಲ್ಲ… ಪರಂಪರೆಯಿಂದ ಬಂದ ಕಲೆ, ಪರಿಶ್ರಮದಿಂದ ಪಡೆದ ಪರಿಪೂರ್ಣತೆ ಮತ್ತು ನಂಬಿಕೆಯಿಂದ ಸಾಧಿಸಿದ ಶಿಖರದ ಕಥೆ. ಹಾಗಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ

ಏನಂತೀರೀ?
ನಿಮ್ಮವನೇ ಶ್ರೀಮಂತ

Leave a Reply