ಸಾಲು ಸಾಲು ರಜೆಗಳು ಮುಗಿದ ನಂತರ, ಮತ್ತೆ ಕ್ರಿಸ್ಮಸ್ ರಜೆಯ ಸಮಯದಲ್ಲಿ ಎಲ್ಲಿಗೆ ಪ್ರವಾಸ ಹೋಗಬಹುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಅದ್ಭುತವಾದ ಪ್ರವಾಸಿ ತಾಣವನ್ನು ಪರಿಚಯಿಸುತ್ತೇನೆ. ಅದು ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ ಪ್ರಕೃತಿಯ ಸ್ವರ್ಗ – ಅಸ್ಸಾಂ ಮತ್ತು ಮೇಘಾಲಯ!
ಮನೆಯಲ್ಲಿ ಎಲ್ಲರೂ ದೇಶದ ಬಹುತೇಕ ಪ್ರಮುಖ ಪ್ರವಾಸಿ ತಾಣಗಳನ್ನೆಲ್ಲ ಸುತ್ತಿ ಬಂದಿದ್ದೇವೆ. ಇನ್ನು ವಿದೇಶ ಪ್ರವಾಸವೊಂದೇ ಬಾಕಿ ಎಂದು ಮಾತನಾಡುತ್ತಿದ್ದರೆ, ಮಡದಿ ಮಾತ್ರ, “ಅಯ್ಯೋ! ನಮ್ಮ ದೇಶದಲ್ಲಿಯೇ ನೋಡಬೇಕಾದ ಅದೆಷ್ಟೋ ಅದ್ಭುತ ಸ್ಥಳಗಳಿವೆ. ಮೊದಲು ಭಾರತವನ್ನು ಸರಿಯಾಗಿ ನೋಡೋಣ. ಆಮೇಲೆ ವಿದೇಶದ ಮಾತು” ಎಂದು ತಮ್ಮ ಎಂದಿನ ದೇಶಪ್ರೇಮದ ವಾದ ಮಂಡಿಸಿದರು.
ಅಂತೂ ಈ ಬಾರಿ ಭಾರತದ ಈಶಾನ್ಯ ರಾಜ್ಯಗಳಾದ ‘ಸೆವೆನ್ ಸಿಸ್ಟರ್ಸ್ ಸ್ಟೇಟ್ಸ್’ (Seven Sister States) ಪ್ರವಾಸ ಕೈಗೊಳ್ಳುವ ನಿರ್ಧಾರಕ್ಕೆ ಬಂದೆವು.
ಮೊದಲಿಗೆ 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಕಾಮಾಕ್ಯ ದೇವಿಯ ದರ್ಶನ, ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಉಮಾನಂದ ದೇವಾಲಯ, ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಹೀಗೆ ಅಸ್ಸಾಂನ ಪ್ರಮುಖ ಸ್ಥಳಗಳನ್ನು ನೋಡೋಣ. ನಂತರ ಮೇಘಾಲಯದ ರಾಜಧಾನಿ ಶಿಲ್ಲಾಂಗ್, ಉಮಿಯಂ ಸರೋವರ, ಎಲಿಫೆಂಟ್ ಫಾಲ್ಸ್, ಚಿರಾಪುಂಜಿ, ಮಾವ್ಸ್ಮೈ ಗುಹೆ, ಸೆವೆನ್ ಸಿಸ್ಟರ್ಸ್ ಫಾಲ್ಸ್, ನೋಹ್ಕಲಿಕೈ ಜಲಪಾತ ಹಾಗೂ ದಾವ್ಕಿಯ ಉಮಂಗೋಟ್ ನದಿಯ ಸೌಂದರ್ಯವನ್ನು ಸವಿಯೋಣ ಎಂಬ ನಿರ್ಧಾರವಾಯಿತು. ಹೀಗೆ ನಮ್ಮ ಪ್ರವಾಸದ ಪಟ್ಟಿಗೆ ಅಂತಿಮ ಮುದ್ರೆ ಬಿದ್ದಿದ್ದೇ ತಡ, ಅಕ್ಟೋಬರ್ 29ರಿಂದ ನವೆಂಬರ್ 4ರವರೆಗೆ ಏಳು ದಿನಗಳ ಅಸ್ಸಾಂ–ಮೇಘಾಲಯ ಪ್ರವಾಸಕ್ಕೆ ಮಲ್ಲಿಕಾರ್ಜುನ ಟ್ರಾವೆಲ್ಸ್ನಲ್ಲಿ ಟಿಕೆಟ್ ಬುಕ್ ಮಾಡಿಯೇ ಬಿಟ್ಟೆವು!
ಮೋಡಗಳ ರಾಜ್ಯದತ್ತ ನಮ್ಮ ಮೊದಲ ಹೆಜ್ಜೆ!
ಅಕ್ಟೋಬರ್ 29: ಬೆಂಗಳೂರು – ಗುವಾಹಟಿ – ಕಾಮಾಕ್ಯ ದೇವಿ ದರ್ಶನ
ಅಕ್ಟೋಬರ್ 29, ಗುರುವಾರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿ, ಬಿಸಿಬಿಸಿಯಾದ ಇಡ್ಲಿ ತಿಂದು ವಿಮಾನವೇರಿದೆವು. ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲಿಯೇ ಪ್ರಯಾಣದ ಆಯಾಸದಿಂದ ಕಣ್ಣುಗಳು ಮುಚ್ಚಿಕೊಂಡು ಸಣ್ಣಗೆ ನಿದ್ದೆಗೆ ಜಾರಿದ್ದೆವು. ಇದ್ದಕ್ಕಿದ್ದಂತೆ ವಿಮಾನ ಅಲುಗಾಡಿದ ಅನುಭವವಾಗಿ ಕಣ್ಣು ಬಿಟ್ಟಾಗ, ವಿಮಾನ ಮೋಡಗಳ ಸಾಗರದ ಮಧ್ಯೆ ಹಾರುತ್ತಿತ್ತು.
ಕಿಟಕಿಯಿಂದ ಹೊರಗೆ ನೋಡಿದರೆ, ಎಲ್ಲಿ ನೋಡಿದರೂ ಬಿಳಿಬಿಳಿಯಾದ ಹತ್ತಿಯ ರಾಶಿಗಳಂತೆ ಹರಡಿಕೊಂಡಿದ್ದ ಮೋಡಗಳು! ಚಿಕ್ಕವರಿದ್ದಾಗ ಸಿನಿಮಾಗಳಲ್ಲಿ ನಾರದ ಮಹರ್ಷಿಗಳು ಮತ್ತು ದೇವಾನುದೇವತೆಗಳು ಮೋಡಗಳ ಮೇಲೆ ಕುಳಿತು ಸಂಚರಿಸುವ ದೃಶ್ಯಗಳನ್ನು ನೋಡುತ್ತಿದ್ದ ನೆನಪುಗಳು ಮರುಕಳಿಸಿದವು. ಆ ಮೋಡಗಳ ಮೇಲೆ ನಾವೂ ಒಂದು ಡೈವ್ ಹಾಕಿದರೆ ಹೇಗಿರಬಹುದು ಎಂಬ ಕಲ್ಪನೆಯಲ್ಲೇ ಮೈಮರೆತಿದ್ದೆವು. ಅಷ್ಟರಲ್ಲಿ ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿಯ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದಿತ್ತು.
ವಿಮಾನ ನಿಲ್ದಾಣದಲ್ಲಿ ಮಲ್ಲಿಕಾರ್ಜುನ ಟ್ರಾವೆಲ್ಸ್ನ ಪ್ರತಿನಿಧಿಗಳು ಅಸ್ಸಾಂನ ಸಾಂಪ್ರದಾಯಿಕ ಶಾಲು ಹೊದಿಸಿ ನಮ್ಮೆಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಭೂರಿ ಭೋಜನದ ವ್ಯವಸ್ಥೆ ಮಾಡಿ, ನೇರವಾಗಿ ನಮ್ಮ ಮೊದಲ ಆಧ್ಯಾತ್ಮಿಕ ತಾಣವಾದ ಕಾಮಾಕ್ಯ ದೇವಾಲಯದತ್ತ ಕರೆದೊಯ್ದರು.
ಗುವಾಹಟಿಯ ನೀಲಾಚಲ ಬೆಟ್ಟದ ಮೇಲಿರುವ ಕಾಮಾಕ್ಯ ದೇವಾಲಯವು ಭಾರತದ ಅತ್ಯಂತ ಪ್ರಮುಖ ಶಕ್ತಿ ಆರಾಧನಾ ಕೇಂದ್ರಗಳಲ್ಲಿ ಒಂದು. 51 ಶಕ್ತಿ ಪೀಠಗಳಲ್ಲಿ ಪ್ರಮುಖವಾದ ಈ ದೇವಾಲಯಕ್ಕೆ ದೇಶದ ನಾನಾ ಭಾಗಗಳಿಂದ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ.

ಸಾಮಾನ್ಯವಾಗಿ ದೇವಾಲಯಗಳಲ್ಲಿ ದೇವಿಯ ಮೂರ್ತಿ ಅಥವಾ ವಿಗ್ರಹದ ದರ್ಶನ ಮಾಡುತ್ತೇವೆ. ಆದರೆ ಕಾಮಾಕ್ಯ ದೇವಾಲಯದ ವಿಶೇಷವೇ ಬೇರೆ. ಇಲ್ಲಿ ದೇವಿಯ ಯೋನಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಗರ್ಭಗುಡಿಯೊಳಗೆ ಭೂಮಿಯ ಆಳದಲ್ಲಿರುವ ನೈಸರ್ಗಿಕ ಶಿಲಾ ರೂಪಕ್ಕೆ ನಿರಂತರವಾಗಿ ನೀರು ಒಸರುತ್ತಿರುತ್ತದೆ. ಅದನ್ನೇ ಮಾತೆ ಕಾಮಾಕ್ಯ ದೇವಿಯ ಪವಿತ್ರ ಸ್ವರೂಪವೆಂದು ಆರಾಧಿಸಲಾಗುತ್ತದೆ. ಇದು ಸ್ತ್ರೀಶಕ್ತಿ, ಸೃಷ್ಟಿ ಮತ್ತು ಪ್ರಕೃತಿಯ ಫಲವತ್ತತೆಯನ್ನು ಸಂಕೇತಿಸುವ ವಿಶಿಷ್ಟ ಆರಾಧನಾ ಪರಂಪರೆ.
ದೇವಾಲಯದ ಪೌರಾಣಿಕ ಹಿನ್ನೆಲೆಯ ಪ್ರಕಾರ, ದಕ್ಷಯಾಗದ ಸಂದರ್ಭದಲ್ಲಿ ಸತಿ ದೇವಿಯ ದೇಹವನ್ನು ಹೊತ್ತು ಶಿವನು ಸಂಚರಿಸುತ್ತಿದ್ದಾಗ, ವಿಷ್ಣುವಿನ ಸುದರ್ಶನ ಚಕ್ರದಿಂದ ದೇಹದ ವಿವಿಧ ಭಾಗಗಳು ಭೂಮಿಯ ವಿವಿಧ ಸ್ಥಳಗಳಲ್ಲಿ ಬಿದ್ದವು. ಅವುಗಳಲ್ಲಿ ದೇವಿಯ ಯೋನಿ ಭಾಗ ಬಿದ್ದ ಸ್ಥಳವೇ ಕಾಮಾಕ್ಯ ಶಕ್ತಿಪೀಠ ಎಂದು ನಂಬಲಾಗಿದೆ. ನಾವು ದೇವಾಲಯ ತಲುಪುವಷ್ಟರಲ್ಲಿ ಸಂಜೆ ಸುಮಾರು 3 ಗಂಟೆಯಾಗಿತ್ತು. ಆಗಲೇ ಸಾವಿರಾರು ಭಕ್ತರು ದರ್ಶನಕ್ಕಾಗಿ ಸರದಿಯ ಸಾಲಿನಲ್ಲಿ ನಿಂತಿದ್ದರು. ವಿಶೇಷ ದರ್ಶನದ ಟಿಕೆಟ್ ಪಡೆದು ನಾವೂ ಸರದಿಯಲ್ಲಿ ನಿಂತೆವು.
ಸುಮಾರು ಎರಡು ಮೂರು ಗಂಟೆಗಳ ಕಾಯುವಿಕೆಯ ನಂತರ ಅಂತೂ ದೇವಿಯ ಗರ್ಭಗುಡಿಗೆ ಪ್ರವೇಶಿಸುವ ಅವಕಾಶ ದೊರೆಯಿತು. ಮೆಟ್ಟಿಲುಗಳನ್ನು ಇಳಿದು ಕೆಳಭಾಗದಲ್ಲಿರುವ ಪವಿತ್ರ ಗರ್ಭಗುಡಿಗೆ ಹೋಗಿ, ತಣ್ಣನೆಯ ನೀರಿನಿಂದ ಕೂಡಿದ ದೇವಿಯ ಸ್ವರೂಪವನ್ನು ಸ್ಪರ್ಶಿಸಿ ದರ್ಶನ ಪಡೆದ ಕ್ಷಣ ನಿಜಕ್ಕೂ ಅವಿಸ್ಮರಣೀಯ. ದೀರ್ಘಕಾಲದ ಪ್ರಯಾಣ, ಸರದಿಯ ಸಾಲಿನಲ್ಲಿ ನಿಂತ ಆಯಾಸ ಎಲ್ಲವೂ ಆ ಕ್ಷಣದ ಭಕ್ತಿಭಾವದ ಮುಂದೆ ಗೌಣವಾಗಿತ್ತು. ದರ್ಶನ ಮುಗಿಸಿ ಹೊರಬಂದಾಗ ಮನಸ್ಸಿನಲ್ಲಿ ಒಂದು ರೀತಿಯ ನೆಮ್ಮದಿ ಮತ್ತು ತೃಪ್ತಿ. ರಾತ್ರಿ ಹೋಟೆಲ್ಗೆ ಹಿಂದಿರುಗಿ ಬಿಸಿಬಿಸಿಯಾದ ಊಟ ಮುಗಿಸಿ ಮಲಗಿದ್ದೇ ತಡ, ನಿದ್ದಾದೇವಿಯೂ ನಮ್ಮನ್ನು ಆವರಿಸಿಬಿಟ್ಟಳು!
ಬ್ರಹ್ಮಪುತ್ರ ನದಿಯ ಮಧ್ಯೆ ದೇವರ ದರ್ಶನ!
ಅಕ್ಟೋಬರ್ 30: ಉಮಾನಂದ ದ್ವೀಪ – ನವಗ್ರಹ ದೇವಾಲಯ – ಶಿಲ್ಲಾಂಗ್ ಪಯಣ
ಮರುದಿನ ಬೆಳಿಗ್ಗೆ ನಮ್ಮ ಪಯಣ ಗುವಾಹಟಿಯ ಅತ್ಯಂತ ವಿಶಿಷ್ಟವಾದ ಪ್ರವಾಸಿ ತಾಣವಾದ ಉಮಾನಂದ ದ್ವೀಪದತ್ತ ಸಾಗಿತು.
ನಮ್ಮ ದೇಶದ ಬಹುತೇಕ ಪ್ರಮುಖ ನದಿಗಳಿಗೆ ಗಂಗಾ, ಯಮುನಾ, ಸರಸ್ವತಿ, ಕಾವೇರಿ, ಕೃಷ್ಣಾ, ಗೋದಾವರಿ ಹೀಗೆ ಸ್ತ್ರೀಲಿಂಗದ ಹೆಸರುಗಳಿದ್ದರೆ, ಅಪರೂಪಕ್ಕೆ ಗಂಡು ಹೆಸರನ್ನು ಹೊಂದಿರುವ ನದಿ ಬ್ರಹ್ಮಪುತ್ರ! ಅಂತಹ ಬೃಹತ್ ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಪುಟ್ಟ ದ್ವೀಪವೇ ಉಮಾನಂದ ದ್ವೀಪ. ಇದನ್ನು ಜಗತ್ತಿನ ಅತ್ಯಂತ ಚಿಕ್ಕ ಜನವಸತಿ ಹೊಂದಿರುವ ನದಿ ದ್ವೀಪಗಳಲ್ಲಿ ಒಂದೆಂದೂ ಗುರುತಿಸಲಾಗುತ್ತದೆ.
ಈ ದ್ವೀಪಕ್ಕೆ ದೋಣಿ ಅಥವಾ ಕ್ರೂಸ್ ಮೂಲಕವೇ ಹೋಗಬೇಕು. ನಾವು ದೋಣಿ ವಿಹಾರದ ಮೂಲಕ ದ್ವೀಪ ತಲುಪಿದೆವು. ನದಿಯ ವಿಶಾಲತೆ, ತಣ್ಣನೆಯ ಗಾಳಿ ಮತ್ತು ಸುತ್ತಲೂ ಕಾಣುವ ಬೆಟ್ಟಗಳ ದೃಶ್ಯ ಮನಸ್ಸಿಗೆ ಮುದ ನೀಡಿತು. ದ್ವೀಪದಲ್ಲಿರುವ ಉಮಾನಂದ ದೇವಾಲಯಕ್ಕೆ ಹೋಗಲು ಸುಮಾರು 120ರಿಂದ 150 ಮೆಟ್ಟಿಲುಗಳನ್ನು ಹತ್ತಬೇಕಾಯಿತು. ದಾರಿಯುದ್ದಕ್ಕೂ ಸಣ್ಣಪುಟ್ಟ ದೇವಾಲಯಗಳು, ಸ್ವಚ್ಛವಾದ ಪರಿಸರ ಹಾಗೂ ಸುಂದರವಾದ ಕಲ್ಲಿನ ಕಟ್ಟಡಗಳು ಕಾಣಸಿಗುತ್ತವೆ.
ಇಲ್ಲಿನ ದೇವಾಲಯದಲ್ಲಿ ಹನುಮಂತ, ಈಶ್ವರ, ವೈದ್ಯನಾಥೇಶ್ವರ, ಗಣೇಶ ಸೇರಿದಂತೆ ವಿವಿಧ ದೇವರುಗಳ ದರ್ಶನ ಪಡೆದೆವು. ನಂತರ ಮತ್ತೊಮ್ಮೆ ಸರದಿಯಲ್ಲಿ ನಿಂತು ಮಹಾವಿಷ್ಣು ಮತ್ತು ಉಮಾನಂದ ದೇವರ ದರ್ಶನ ಮಾಡಿದೆವು. ಉಮಾನಂದ ದೇವಾಲಯವು ಶಿವನಿಗೆ ಸಮರ್ಪಿತವಾಗಿದ್ದು, ಇಲ್ಲಿನ ಭೈರವ ರೂಪದ ಶಿವನನ್ನು ಉಮಾನಂದ ಎಂದು ಆರಾಧಿಸಲಾಗುತ್ತದೆ. ಪೌರಾಣಿಕ ನಂಬಿಕೆಯ ಪ್ರಕಾರ, ಶಿವನು ಇಲ್ಲಿ ಉಮೆಯೊಂದಿಗೆ ನೆಲೆಸಿದ್ದಾನೆ. ಕಾಮದೇವನನ್ನು ಶಿವನು ತನ್ನ ಮೂರನೇ ಕಣ್ಣಿನಿಂದ ದಹಿಸಿದ ಸ್ಥಳವೂ ಇದೇ ಎಂದು ಸ್ಥಳೀಯ ಪುರಾಣಗಳಲ್ಲಿ ಹೇಳಲಾಗುತ್ತದೆ.
ದೇವಾಲಯದ ಆಧ್ಯಾತ್ಮಿಕ ವಾತಾವರಣ ಮತ್ತು ಬ್ರಹ್ಮಪುತ್ರ ನದಿಯ ಮಧ್ಯದಲ್ಲಿರುವ ಅದರ ಭೌಗೋಳಿಕ ಸೌಂದರ್ಯ ಎರಡೂ ಸೇರಿ ವಿಶಿಷ್ಟ ಅನುಭವ ನೀಡಿದವು. ದರ್ಶನ ಮುಗಿಸಿ ಹೊರಬಂದ ನಂತರ ಅನ್ನಪೂರ್ಣೇಶ್ವರಿ ದೇವಿಯ ದರ್ಶನವನ್ನೂ ಪಡೆದು, ಸ್ವಲ್ಪ ಹೊತ್ತು ಕಲ್ಲಿನ ಬೆಂಚಿನ ಮೇಲೆ ಕುಳಿತು ತಣ್ಣನೆಯ ಗಾಳಿಯನ್ನು ಆಸ್ವಾದಿಸಿದೆವು. ನಂತರ ಮತ್ತೆ ಮೆಟ್ಟಿಲುಗಳನ್ನು ಇಳಿದು ಬಂದು ಅಲ್ಲಿನ ಸ್ಥಳೀಯ ಅಂಗಡಿಗಳಲ್ಲಿ ಸಿಗುತ್ತಿದ್ದ ವಿವಿಧ ಹಣ್ಣುಗಳ ಪಾನಕ, ಕತ್ತರಿಸಿದ ಕಲ್ಲಂಗಡಿ, ಸೇಬು, ಸೀಬೆಹಣ್ಣು ಮತ್ತು ಅನಾನಸ್ ಹಣ್ಣುಗಳನ್ನು ಸವಿದು, ದೋಣಿಯ ಮೂಲಕ ಗುವಾಹಟಿಗೆ ಹಿಂದಿರುಗಿದೆವು.
ನವಗ್ರಹ ದೇವಾಲಯ: ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆಯ ಸಂಗಮ
ನಮ್ಮ ಮುಂದಿನ ಭೇಟಿ ಗುವಾಹಟಿಯ ಚಿತ್ರಾಚಲ ಬೆಟ್ಟದ ಮೇಲಿರುವ ನವಗ್ರಹ ದೇವಾಲಯಕ್ಕೆ. ಪ್ರಾಚೀನ ಕಾಲದಲ್ಲಿ ಗುವಾಹಟಿಯನ್ನು ಪ್ರಾಗ್ಜ್ಯೋತಿಷಪುರ ಎಂದು ಕರೆಯಲಾಗುತ್ತಿತ್ತು. ಪ್ರಾಗ್ಜ್ಯೋತಿಷ ಎಂಬ ಹೆಸರೇ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದೊಂದಿಗೆ ಈ ಪ್ರದೇಶ ಹೊಂದಿದ್ದ ಐತಿಹಾಸಿಕ ಸಂಬಂಧವನ್ನು ನೆನಪಿಸುತ್ತದೆ.
ನವಗ್ರಹ ದೇವಾಲಯವು ವೈದಿಕ ಜ್ಯೋತಿಷ್ಯದಲ್ಲಿ ಉಲ್ಲೇಖಿಸಿರುವ ಒಂಬತ್ತು ಗ್ರಹಗಳಿಗೆ ಸಮರ್ಪಿತವಾಗಿದೆ. ಇಲ್ಲಿನ ಗರ್ಭಗುಡಿಯೊಳಗೆ ಒಂಬತ್ತು ಪ್ರತ್ಯೇಕ ಶಿವಲಿಂಗಗಳಿದ್ದು, ಅವು ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳನ್ನು ಪ್ರತಿನಿಧಿಸುತ್ತವೆ. ಪ್ರತಿಯೊಂದು ಶಿವಲಿಂಗಕ್ಕೂ ಆಯಾ ಗ್ರಹಕ್ಕೆ ಸಂಬಂಧಿಸಿದ ಬಣ್ಣದ ವಸ್ತ್ರಗಳನ್ನು ಹೊದಿಸಲಾಗಿದೆ. ಮಧ್ಯಭಾಗದಲ್ಲಿರುವ ಲಿಂಗವು ಸೂರ್ಯನನ್ನು ಪ್ರತಿನಿಧಿಸುತ್ತದೆ. ಒಂಬತ್ತು ಗ್ರಹಗಳಿಗೂ ಪ್ರತ್ಯೇಕವಾಗಿ ಪೂಜೆ ಸಲ್ಲಿಸುವ ಈ ದೇವಾಲಯವು ಜ್ಯೋತಿಷ್ಯ ಮತ್ತು ಧಾರ್ಮಿಕ ಆಚರಣೆಗಳ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ.
ದೇವಾಲಯದ ದರ್ಶನ ಮುಗಿಸಿ ಹೊರಬರುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಹೊಟ್ಟೆಯೂ ತನ್ನ ಕರ್ತವ್ಯವನ್ನು ನೆನಪಿಸತೊಡಗಿತ್ತು! ಹೋಟೆಲ್ನಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಅಲ್ಲಿನ ರಸ್ತೆಗಳು ಕಿರಿದಾಗಿರುವ ಕಾರಣ 12 ಆಸನಗಳ ಟೆಂಪೋ ಟ್ರಾವೆಲರ್ಗಳಲ್ಲಿ ನಮ್ಮ ಮುಂದಿನ ಗಮ್ಯಸ್ಥಾನವಾದ ಮೇಘಾಲಯದ ರಾಜಧಾನಿ ಶಿಲ್ಲಾಂಗ್ನತ್ತ ಹೊರಟೆವು.
ಮಳೆ, ಬೆಟ್ಟಗಳು ಮತ್ತು ಬಿಸಿಬಿಸಿ ಅಸ್ಸಾಂ ಟೀ!
ಅಕ್ಟೋಬರ್ ಕೊನೆಯ ವಾರವಾಗಿದ್ದರಿಂದ ಮಳೆಗಾಲ ಬಹುತೇಕ ಮುಗಿದಿತ್ತು. ಆದರೂ ದಾರಿಯುದ್ದಕ್ಕೂ ಸಣ್ಣದಾಗಿ ಮಳೆ ಸುರಿಯುತ್ತಲೇ ಇತ್ತು. ಬೆಟ್ಟಗಳ ನಡುವಿನ ರಸ್ತೆಗಳು, ಹಸಿರಿನಿಂದ ಕಂಗೊಳಿಸುತ್ತಿದ್ದ ಮರಗಳು, ಅಲ್ಲಲ್ಲಿ ಕಾಣುತ್ತಿದ್ದ ಸಣ್ಣ ಜಲಪಾತಗಳು, ಮಂಜಿನಿಂದ ಆವೃತವಾಗಿದ್ದ ಕಣಿವೆಗಳು ಹೀಗೆ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಸಾಗುತ್ತಿದ್ದೆವು. ಮಧ್ಯದಲ್ಲಿ ವಾಹನ ನಿಲ್ಲಿಸಿ ಬಿಸಿಬಿಸಿಯಾಗಿ ಹಬೆ ಬರುತ್ತಿದ್ದ ಅಸ್ಸಾಂ ಟೀ ಕುಡಿದೆವು. ಅಸ್ಸಾಂ ಚಹಾದ ಘಮಲು ಮತ್ತು ತಣ್ಣನೆಯ ವಾತಾವರಣದ ನಡುವೆ ಆ ಚಹಾ ಕುಡಿಯುವುದೇ ಒಂದು ವಿಶೇಷ ಅನುಭವ!
ಹೀಗೆ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ರಾತ್ರಿ ಸುಮಾರು 8 ಗಂಟೆಗೆ ಶಿಲ್ಲಾಂಗ್ ತಲುಪಿದೆವು. ಹೋಟೆಲ್ಗೆ ಹೋಗಿ ಕೈಕಾಲು ತೊಳೆದುಕೊಂಡು, ಬಿಸಿಬಿಸಿಯಾದ ಊಟ ಮುಗಿಸಿ ಹಾಸಿಗೆಗೆ ಬಿದ್ದಿದ್ದೇ ತಡ, ನಿದ್ದೆ ಯಾವಾಗ ಬಂತೋ ಗೊತ್ತೇ ಆಗಲಿಲ್ಲ. ಪ್ರವಾಸದ ನಿಜವಾದ ಸುಖವೇ ಅದು ಅಲ್ವಾ? ಹಗಲಿಡೀ ಸುತ್ತಾಟ, ರಾತ್ರಿ ಹೊಟ್ಟೆತುಂಬ ಊಟ, ನಂತರ ಆರಾಮದಾಯಕ ನಿದ್ದೆ!
ಮೇಘಾಲಯದ ಸೌಂದರ್ಯ. ಪ್ರಕೃತಿಯೇ ನಿರ್ಮಿಸಿದ ಅದ್ಭುತಗಳು!
ಅಕ್ಟೋಬರ್ 31: ಶಿಲ್ಲಾಂಗ್ – ಎಲಿಫೆಂಟ್ ಫಾಲ್ಸ್ – ದಾವ್ಕಿ – ಮಾವ್ಲಿನ್ನಾಂಗ್

ಮರುದಿನ ಬೆಳಿಗ್ಗೆ ಕಣ್ಣು ಬಿಟ್ಟಾಗ ಹೊರಗೆ ಆಗಲೇ ಬೆಳಕಾಗಿತ್ತು. ಅಯ್ಯೋ ರಾಮಾ! ಇಷ್ಟು ತಡವಾಗಿ ಎದ್ದೆನಾ ಎಂದು ಗಡಿಯಾರ ನೋಡಿದರೆ ಸಮಯ ಕೇವಲ 5:30! ಈಶಾನ್ಯ ಭಾರತದಲ್ಲಿ ಸೂರ್ಯೋದಯ ಬಹಳ ಬೇಗ ಆಗುವುದರಿಂದ ಬೆಳಿಗ್ಗೆ 5 ಗಂಟೆಗೇ ಸಾಕಷ್ಟು ಬೆಳಕಿರುತ್ತದೆ. ನಮ್ಮ ಬೆಂಗಳೂರಿನ ಸಮಯಕ್ಕೆ ಹೋಲಿಸಿದರೆ ಇದು ಸ್ವಲ್ಪ ವಿಚಿತ್ರ ಅನುಭವವೇ ಸರಿ. ಅಷ್ಟರಲ್ಲಿ ಬಾಗಿಲಿನ ಕರೆಗಂಟೆ ಡಣ್ ಎಂದು ಮೊಳಗಿತು. ಬಾಗಿಲು ತೆರೆದರೆ, ಟೂರ್ ಮ್ಯಾನೇಜರ್ ಮತ್ತು ಅಡುಗೆಯ ಹುಡುಗ ಎರಡು ಕೆಟಲ್ಗಳನ್ನು ಹಿಡಿದುಕೊಂಡು ನಿಂತಿದ್ದರು.
“ಸಾರ್, ಬೆಡ್ ಕಾಫಿ ಬೇಕಾ? ಸಕ್ಕರೆ ಹಾಕಿ ಕೊಡಲಾ ಅಥವಾ ಸಕ್ಕರೆ ಇಲ್ಲದೆ ಕೊಡಲಾ?” ಎಂಬ ಪ್ರಶ್ನೆ! ಅಬ್ಬಾ! ಪ್ರವಾಸದಲ್ಲಿ ಇಂತಹ ಆತಿಥ್ಯ ಸಿಕ್ಕರೆ ಇನ್ನೇನು ಬೇಕು ಹೇಳಿ? ಮನೆಯಲ್ಲಿಯೂ ಇಷ್ಟು ಬೇಗ ಬೆಡ್ ಕಾಫಿ ಕುಡಿಯುವ ಅಭ್ಯಾಸವಿಲ್ಲದ ನಮಗೆ ಇದು ವಿಶೇಷವೇ ಆಗಿತ್ತು. ಬೇಗಬೇಗನೆ ಸಿದ್ಧವಾಗಿ ತಿಂಡಿ ಮುಗಿಸಿ ಮತ್ತೆ ಟೆಂಪೋ ಟ್ರಾವೆಲರ್ ಹತ್ತಿದೆವು.
ಎಲಿಫೆಂಟ್ ಫಾಲ್ಸ್: ಮೂರು ಹಂತಗಳಲ್ಲಿ ಧುಮ್ಮಿಕ್ಕುವ ಜಲಪಾತ
ಶಿಲ್ಲಾಂಗ್ನಿಂದ ಸುಮಾರು 10ರಿಂದ 12 ಕಿಲೋಮೀಟರ್ ದೂರದಲ್ಲಿರುವ ಎಲಿಫೆಂಟ್ ಫಾಲ್ಸ್ ನಮ್ಮ ಮೊದಲ ಪ್ರವಾಸಿ ತಾಣ. ಈ ಜಲಪಾತಕ್ಕೆ ಮೂರು ಹಂತಗಳಿದ್ದು, ಹಂತ ಹಂತವಾಗಿ ಬಂಡೆಗಳ ಮಧ್ಯೆ ನೀರು ಧುಮ್ಮಿಕ್ಕಿ ಹರಿಯುತ್ತದೆ. ಇಲ್ಲಿನ ವಿಶೇಷವೆಂದರೆ ಜಲಪಾತದ ಬಳಿ ತಲುಪುವ ಮುನ್ನ ಪ್ರವಾಸಿಗರಿಗೆ ಮೇಘಾಲಯದ ಸಾಂಪ್ರದಾಯಿಕ ಖಾಸಿ ಉಡುಪುಗಳನ್ನು ಬಾಡಿಗೆಗೆ ನೀಡುತ್ತಾರೆ. ತಲಾ ಸುಮಾರು 100 ರೂಪಾಯಿಗಳಷ್ಟು ನೀಡಿ ಆ ಉಡುಪುಗಳನ್ನು ಧರಿಸಿ ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡೆವು.

ನಮ್ಮ ಸಾಮಾನ್ಯ ಉಡುಪಿನ ಬದಲು ಅಲ್ಲಿನ ಸಾಂಪ್ರದಾಯಿಕ ಉಡುಪು ಧರಿಸಿದಾಗ ನಾವೇ ಮೇಘಾಲಯದ ಸ್ಥಳೀಯ ನಿವಾಸಿಗಳಂತೆ ಕಾಣುತ್ತಿದ್ದೆವು! ಜಲಪಾತದ ಮೂರು ಹಂತಗಳನ್ನು ವೀಕ್ಷಿಸಿ, ಫೋಟೋಗಳನ್ನು ತೆಗೆಸಿಕೊಂಡು ಅಲ್ಲಿಂದ ಭಾರತದ ಅತ್ಯಂತ ಪ್ರಸಿದ್ಧ ನದಿ ತಾಣಗಳಲ್ಲಿ ಒಂದಾದ ದಾವ್ಕಿಯತ್ತ ಹೊರಟೆವು.
ದಾವ್ಕಿಯ ಉಮಂಗೋಟ್ ನದಿ: ನೀರಿನ ಮೇಲೆಯೇ ದೋಣಿ ತೇಲುತ್ತಿದೆಯೋ ಎಂಬ ಭ್ರಮೆ!

ಭಾರತ ಮತ್ತು ಬಾಂಗ್ಲಾದೇಶದ ಗಡಿಯ ಸಮೀಪವಿರುವ ದಾವ್ಕಿಯ ಉಮಂಗೋಟ್ ನದಿ ತನ್ನ ಅಸಾಧಾರಣ ಪಾರದರ್ಶಕ ನೀರಿಗಾಗಿ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಈ ನದಿಯ ನೀರು ಎಷ್ಟು ಸ್ವಚ್ಛ ಮತ್ತು ಪಾರದರ್ಶಕವಾಗಿರುತ್ತದೆ ಎಂದರೆ, ದೋಣಿ ನೀರಿನ ಮೇಲೆ ತೇಲುತ್ತಿದೆಯೋ ಅಥವಾ ಗಾಳಿಯಲ್ಲಿ ತೇಲುತ್ತಿದೆಯೋ ಎಂಬ ಭ್ರಮೆ ಮೂಡುತ್ತದೆ. ನಾವು ದಾವ್ಕಿ ತಲುಪುವಷ್ಟರಲ್ಲಿ ಸುಮಾರು 11 ಗಂಟೆಯಾಗಿತ್ತು.
ಆದರೆ ಹಿಂದಿನ ದಿನ ಶಿಲ್ಲಾಂಗ್ನಲ್ಲಿ ಸುರಿದ ಮಳೆ ಮತ್ತು ಉಮಂಗೋಟ್ ನದಿಗೆ ಅಡ್ಡಲಾಗಿ ನಡೆಯುತ್ತಿದ್ದ ಸೇತುವೆ ನಿರ್ಮಾಣ ಕಾಮಗಾರಿಯ ಪರಿಣಾಮವಾಗಿ ನೀರು ನಾವು ನಿರೀಕ್ಷಿಸಿದಷ್ಟು ಪಾರದರ್ಶಕವಾಗಿರಲಿಲ್ಲ. ಇದರಿಂದ ಸ್ವಲ್ಪ ನಿರಾಸೆಯಾದರೂ, ದೋಣಿ ವಿಹಾರ ಮಾತ್ರ ಅತ್ಯಂತ ಮನೋಹರವಾಗಿತ್ತು. ನದಿಯ ಮಧ್ಯದಲ್ಲಿ ದೋಣಿಯಲ್ಲಿ ಕುಳಿತು ಸುತ್ತಲಿನ ಬೆಟ್ಟಗಳು, ಹಸಿರಿನಿಂದ ಕೂಡಿದ ಪ್ರಕೃತಿ ಮತ್ತು ಗಡಿಯಾಚೆ ಕಾಣುತ್ತಿದ್ದ ಬಾಂಗ್ಲಾದೇಶದ ಪ್ರದೇಶಗಳನ್ನು ನೋಡುವುದೇ ಒಂದು ವಿಶಿಷ್ಟ ಅನುಭವ.
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಅಂತರಾಷ್ಟ್ರೀಯ ಗಡಿಯು ಈ ಪ್ರದೇಶದಲ್ಲಿ ನದಿಯ ಮೂಲಕ ಹಾದುಹೋಗುತ್ತದೆ. ಗಡಿಯ ಎರಡೂ ಬದಿಗಳಲ್ಲಿ ಭದ್ರತಾ ಸಿಬ್ಬಂದಿಯ ಕಣ್ಗಾವಲು ಇರುತ್ತದೆ. ನದಿಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸ್ಥಳೀಯ ಜನರು ತೋರಿಸುವ ಕಾಳಜಿಯೂ ಮೆಚ್ಚುವಂತದ್ದು. ಸಾಮಾನ್ಯವಾಗಿ ಹುಟ್ಟು ಹಾಕುವ ದೋಣಿಗಳಲ್ಲಿ ನದಿ ವಿಹಾರ ಮಾಡುವುದರಿಂದ ನೀರಿನ ಸ್ವಚ್ಛತೆ ಮತ್ತು ಪರಿಸರಕ್ಕೆ ತೊಂದರೆ ಕಡಿಮೆಯಾಗುತ್ತದೆ. ನದಿಯ ದಡದಲ್ಲಿ ಕುಳಿತು ಆ ಪ್ರಶಾಂತ ವಾತಾವರಣವನ್ನು ಸವಿಯುತ್ತಿದ್ದಾಗ, ನಮ್ಮ ದೇಶದ ಪ್ರಕೃತಿ ಸಂಪತ್ತನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂಬ ಭಾವನೆ ಮೂಡಿತು.
ಮಾವ್ಲಿನ್ನಾಂಗ್: ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಖ್ಯಾತಿ!
ದಾವ್ಕಿಯಿಂದ ಊಟ ಮುಗಿಸಿ, ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮವೆಂಬ ಹೆಗ್ಗಳಿಕೆ ಪಡೆದಿರುವ ಮಾವ್ಲಿನ್ನಾಂಗ್ ಗ್ರಾಮದತ್ತ ನಮ್ಮ ಪಯಣ ಮುಂದುವರಿಯಿತು. ಈ ಗ್ರಾಮದ ವಿಶೇಷವೆಂದರೆ ಕೇವಲ ಸ್ವಚ್ಛತೆಯಲ್ಲ. ಇಲ್ಲಿನ ಜನರು ಪರಿಸರವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಿದ್ದಾರೆ. ಪ್ರತಿಯೊಂದು ಮನೆಯ ಸುತ್ತಲೂ ಹೂವಿನ ಗಿಡಗಳು, ಸ್ವಚ್ಛವಾದ ರಸ್ತೆಗಳು, ಕಸ ಹಾಕಲು ಬಿದಿರಿನ ಬುಟ್ಟಿಗಳು ಮತ್ತು ಅಚ್ಚುಕಟ್ಟಾದ ಪರಿಸರ ಕಾಣಸಿಗುತ್ತದೆ. ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಜೀವಂತ ಬೇರುಗಳಿಂದ ನಿರ್ಮಿಸಲಾದ ನೈಸರ್ಗಿಕ ಸೇತುವೆ (Living Root Bridge).
ರಬ್ಬರ್ ಜಾತಿಗೆ ಸೇರಿದ ಮರಗಳ ಬೇರುಗಳನ್ನು ನದಿಯ ಮೇಲೆ ನಿರ್ದಿಷ್ಟ ದಿಕ್ಕಿನಲ್ಲಿ ಬೆಳೆಸಿ, ವರ್ಷಗಳ ಕಾಲ ಅವುಗಳನ್ನು ಹೆಣೆದು ನೈಸರ್ಗಿಕ ಸೇತುವೆಯನ್ನಾಗಿ ರೂಪಿಸುತ್ತಾರೆ. ಮನುಷ್ಯನ ಕೈಚಳಕ ಮತ್ತು ಪ್ರಕೃತಿಯ ಸಹಜ ಬೆಳವಣಿಗೆ ಒಟ್ಟಿಗೆ ಸೇರಿದ ಅದ್ಭುತ ತಂತ್ರಜ್ಞಾನವಿದು. ಸಿಮೆಂಟ್, ಕಬ್ಬಿಣ, ಕಾಂಕ್ರೀಟ್ ಯಾವುದೂ ಇಲ್ಲದೆ ಮರದ ಬೇರುಗಳಿಂದಲೇ ಸೇತುವೆ ನಿರ್ಮಿಸಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಮಾವ್ಲಿನ್ನಾಂಗ್ ಗ್ರಾಮವನ್ನು ನೋಡಿದಾಗ ಒಂದು ವಿಚಾರ ಗಮನಕ್ಕೆ ಬಂದಿತು. ನಾವು ಓದಿದಂತೆ ಗ್ರಾಮ ಸ್ವಚ್ಛವಾಗಿರುವುದು ನಿಜ. ಆದರೆ ಪ್ರವಾಸೋದ್ಯಮದ ಬೆಳವಣಿಗೆಯಿಂದಾಗಿ ಈಗ ಅದು ಸಾಮಾನ್ಯ ಹಳ್ಳಿಗಿಂತ ಪ್ರವಾಸಿ ವಾಣಿಜ್ಯ ಕೇಂದ್ರದ ಸ್ವರೂಪವನ್ನೂ ಪಡೆದುಕೊಂಡಿದೆ. ಬಹುತೇಕ ಪ್ರತಿಯೊಂದು ಸೇವೆಗೂ ಪ್ರವಾಸಿಗರು ಹಣ ಪಾವತಿಸಬೇಕಾಗುತ್ತದೆ. ಇದು ಅಲ್ಲಿನ ಜನರ ಜೀವನೋಪಾಯಕ್ಕೆ ಸಹಕಾರಿಯಾಗಿದ್ದರೂ, ಒಂದು ಕಾಲದಲ್ಲಿ ಸಹಜವಾದ ಗ್ರಾಮೀಣ ಬದುಕಿನ ಭಾಗವಾಗಿದ್ದ ಸ್ವಚ್ಛತೆ ಇಂದು ಪ್ರವಾಸೋದ್ಯಮದ ಆಕರ್ಷಣೆಯಾಗಿರುವುದನ್ನು ಕಂಡು ಅಚ್ಚರಿಯ ಜೊತೆಗೆ ಸ್ವಲ್ಪ ಬೇಸರವೂ ಆಯಿತು. ಆದರೂ, ತಮ್ಮ ಗ್ರಾಮವನ್ನು ಇಷ್ಟೊಂದು ಸ್ವಚ್ಛವಾಗಿ ಇಟ್ಟುಕೊಂಡಿರುವ ಅಲ್ಲಿನ ಜನರ ಶಿಸ್ತನ್ನು ಮೆಚ್ಚಲೇಬೇಕು.
ಮೇಘಾಲಯದ ಮಡಿಲಿನಲ್ಲಿ ಪ್ರಕೃತಿಯ ಕಣ್ಣಾಮುಚ್ಚಾಲೆ!
ನವೆಂಬರ್ 1: ಚಿರಾಪುಂಜಿ – ನೋಹ್ಕಲಿಕೈ – ಮಾವ್ಸ್ಮೈ ಗುಹೆ – ಸೆವೆನ್ ಸಿಸ್ಟರ್ಸ್ ಫಾಲ್ಸ್

ಮರುದಿನ ನಮ್ಮ ಪ್ರವಾಸದ ಅತ್ಯಂತ ಕುತೂಹಲಕಾರಿ ಭಾಗ ಆರಂಭವಾಯಿತು. ಜಗತ್ತಿನಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದಾದ ಚಿರಾಪುಂಜಿ ಅಥವಾ ಸ್ಥಳೀಯವಾಗಿ ಸೋಹ್ರಾ ಎಂದು ಕರೆಯಲ್ಪಡುವ ಪ್ರದೇಶದತ್ತ ಹೊರಟೆವು.
ಮೇಘಾಲಯ ಎಂದರೆ ಮೋಡಗಳ ಮನೆ ಎಂದೇ ಅರ್ಥ. ಅದರ ಹೆಸರಿಗೆ ತಕ್ಕಂತೆ ದಾರಿಯುದ್ದಕ್ಕೂ ಮೋಡಗಳು ಬೆಟ್ಟಗಳ ಮೇಲೆ ಹರಡಿಕೊಂಡಿದ್ದವು. ಮಳೆ, ಚಳಿ, ಗಾಳಿ ಯಾವುದಕ್ಕೂ ಸಿದ್ಧರಾಗಿರಬೇಕು ಎಂದು ಛತ್ರಿ, ಸ್ವೆಟರ್ ಎಲ್ಲವನ್ನೂ ತೆಗೆದುಕೊಂಡು ಹೊರಟಿದ್ದೆವು.
ನೋಹ್ಕಲಿಕೈ ಜಲಪಾತ: ಮೋಡಗಳ ಹಿಂದೆ ಅಡಗಿದ್ದ ಪ್ರಕೃತಿಯ ಸೌಂದರ್ಯ!
ನಮ್ಮ ಮೊದಲ ಭೇಟಿ ನೋಹ್ಕಲಿಕೈ ಜಲಪಾತಕ್ಕೆ. ಸುಮಾರು 1,115 ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತವು ಭಾರತದ ಅತಿ ಎತ್ತರದ ಏಕಧಾರೆ ಜಲಪಾತಗಳಲ್ಲಿ ಪ್ರಮುಖವಾದದ್ದು. ಇದರ ಹೆಸರು ಮತ್ತು ಹಿನ್ನೆಲೆಯಲ್ಲಿಯೂ ಒಂದು ದುಃಖದ ಸ್ಥಳೀಯ ಜನಪದ ಕಥೆಯಿದೆ. ಸ್ಥಳೀಯ ಖಾಸಿ ಭಾಷೆಯಲ್ಲಿ ‘ಕಾ’ ಎಂದರೆ ಹೆಣ್ಣು ಮತ್ತು ‘ಲಿಕೈ’ ಎಂಬುದು ಮಹಿಳೆಯ ಹೆಸರನ್ನು ಸೂಚಿಸುತ್ತದೆ. ತನ್ನ ಪುಟ್ಟ ಮಗಳನ್ನು ಕಳೆದುಕೊಂಡ ದುಃಖದಲ್ಲಿ ಒಬ್ಬ ಮಹಿಳೆ ಜಲಪಾತದ ಮೇಲಿನಿಂದ ಹಾರಿ ಪ್ರಾಣ ಕಳೆದುಕೊಂಡಳು ಎಂಬ ದುರಂತ ಕಥೆಯೊಂದಿಗೆ ಈ ಜಲಪಾತದ ಹೆಸರು ತಳುಕು ಹಾಕಿಕೊಂಡಿದೆ.
ನಾವು ಅಲ್ಲಿಗೆ ಹೋದಾಗ ಮೇಘಾಲಯದ ಹೆಸರಿಗೆ ತಕ್ಕಂತೆ ಇಡೀ ಕಣಿವೆಯೇ ದಟ್ಟವಾದ ಮೋಡಗಳಿಂದ ಆವೃತವಾಗಿತ್ತು. ಜಲಪಾತದ ನೀರು ಧುಮ್ಮಿಕ್ಕುವ ಸದ್ದು ಕೇಳಿಸುತ್ತಿತ್ತಾದರೂ, ಕಣ್ಣಿಗೆ ಮಾತ್ರ ಕಾಣುತ್ತಿರಲಿಲ್ಲ! ಅಯ್ಯೋ! ಇಷ್ಟು ದೂರ ಬಂದು ಜಲಪಾತವನ್ನು ನೋಡಲು ಸಾಧ್ಯವಾಗಲಿಲ್ಲವಲ್ಲಾ ಎಂದು ಎಲ್ಲರೂ ನಿರಾಸೆಗೊಂಡೆವು. ನಮ್ಮ ಮುಖಗಳನ್ನು ನೋಡಿದ ಮೇಘರಾಜನಿಗೇನಾಯಿತೋ ಗೊತ್ತಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ನೋಡನೋಡುತ್ತಿದ್ದಂತೆ ಮೋಡಗಳು ನಿಧಾನವಾಗಿ ಸರಿಯತೊಡಗಿದವು. ಅಷ್ಟೇ! ಮೋಡಗಳ ಪರದೆಯ ಹಿಂದೆ ಅಡಗಿದ್ದ ಅದ್ಭುತ ಜಲಪಾತ ನಮ್ಮ ಕಣ್ಣೆದುರು ಪ್ರತ್ಯಕ್ಷವಾಯಿತು.
“ಓ ಗಂಗೇ! ಇಳಿದು ಬಾ, ಇಳಿದು ಬಾ!” ಎನ್ನುವಂತೆ ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದ ಬಿಳಿಯ ನೀರಿನ ಧಾರೆ, ಅದರ ಸುತ್ತಲಿನ ಹಸಿರು ಬೆಟ್ಟಗಳು, ಕೆಳಭಾಗದಲ್ಲಿ ಕಾಣುತ್ತಿದ್ದ ನೀಲಿ-ಹಸಿರು ಬಣ್ಣದ ಜಲರಾಶಿ – ಆ ದೃಶ್ಯವನ್ನು ಪದಗಳಲ್ಲಿ ವರ್ಣಿಸುವುದೇ ಕಷ್ಟ. ನಾವು ಫೋಟೋ ತೆಗೆದುಕೊಳ್ಳುವಷ್ಟರಲ್ಲಿ ಮತ್ತೆ ಮೋಡಗಳು ಬಂದು ಜಲಪಾತವನ್ನು ಮುಚ್ಚಿಕೊಂಡವು! ಪ್ರಕೃತಿಯೇ ನಮ್ಮೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಂತಿತ್ತು. ಪ್ರಕೃತಿಯ ಮುಂದೆ ಮನುಷ್ಯನ ಆಟ ನಡೆಯುವುದಿಲ್ಲ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?
ಮಾವ್ಸ್ಮೈ ಗುಹೆ: ಭೂಮಿಯ ಒಡಲೊಳಗಿನ ಅದ್ಭುತ ಲೋಕ!
ಅಲ್ಲಿಂದ ನಮ್ಮ ಪಯಣ ಮಾವ್ಸ್ಮೈ ಗುಹೆಯತ್ತ ಸಾಗಿತು. ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಲ್ಲಿರುವ ಈ ನೈಸರ್ಗಿಕ ಸುಣ್ಣದ ಕಲ್ಲಿನ ಗುಹೆಯು ಲಕ್ಷಾಂತರ ವರ್ಷಗಳಿಂದ ನೀರಿನ ಸವೆತ ಮತ್ತು ಖನಿಜಗಳ ನಿಕ್ಷೇಪದಿಂದ ರೂಪುಗೊಂಡಿದೆ. ಗುಹೆಯ ಒಳಭಾಗದಲ್ಲಿ ಎಲ್ಲೆಡೆ ಕಲ್ಲಿನ ವಿಚಿತ್ರ ಆಕಾರಗಳು, ಮೇಲ್ಛಾವಣಿಯಿಂದ ಜಿನುಗುವ ನೀರಿನ ಹನಿಗಳು, ಅಲ್ಲಲ್ಲಿ ಕಿರಿದಾದ ಹಾದಿಗಳು ಮತ್ತು ನೈಸರ್ಗಿಕವಾಗಿ ರೂಪುಗೊಂಡ ಕಲ್ಲಿನ ರಚನೆಗಳು ಕಾಣಸಿಗುತ್ತವೆ. ಕೆಲವು ಕಡೆ ನೇರವಾಗಿ ನಿಂತು ಹೋಗಲು ಸಾಧ್ಯವಾಗುವುದಿಲ್ಲ. ಬಾಗಿ, ಕುಳಿತು, ಕೆಲವೆಡೆ ದೇಹವನ್ನು ತಗ್ಗಿಸಿಕೊಂಡು ಸಾಗಬೇಕಾಗುತ್ತದೆ.
ಕೆಲವು ಹಾದಿಗಳು ಎಷ್ಟು ಕಿರಿದಾಗಿವೆಯೆಂದರೆ, ಮುಂದೆ ಹೋಗುವವರು ಮತ್ತು ಹಿಂದೆ ಬರುವವರು ಪರಸ್ಪರ ದಾಟಲು ಸ್ವಲ್ಪ ಕಷ್ಟವೇ ಸರಿ. ನಮ್ಮ ಉತ್ತರ ಕನ್ನಡದ ಯಾಣದ ಬೃಹತ್ ಕಲ್ಲಿನ ರಚನೆಗಳು ನೆನಪಾದರೂ, ಇಲ್ಲಿ ಕಲ್ಲಿನ ಬೆಟ್ಟದ ಒಳಗೇ ಪ್ರವೇಶಿಸಿ ಅದರ ನೈಸರ್ಗಿಕ ವಿನ್ಯಾಸವನ್ನು ನೋಡುವ ಅನುಭವವೇ ಬೇರೆ.
ಗುಹೆಯೊಳಗಿನ ತೇವಾಂಶ, ತಣ್ಣನೆಯ ವಾತಾವರಣ ಮತ್ತು ಕಲ್ಲಿನ ಗೋಡೆಗಳಿಂದ ಜಿನುಗುತ್ತಿದ್ದ ನೀರಿನ ಹನಿಗಳ ನಡುವೆ ಸಾಗುವಾಗ ಮೈ ಜುಮ್ಮೆನ್ನಿಸುತ್ತಿತ್ತು. ಪ್ರಕೃತಿ ಲಕ್ಷಾಂತರ ವರ್ಷಗಳ ಕಾಲ ತಾಳ್ಮೆಯಿಂದ ನಿರ್ಮಿಸಿರುವ ಇಂತಹ ಅದ್ಭುತಗಳನ್ನು ನೋಡಿದಾಗ ಮನುಷ್ಯನ ತಾಂತ್ರಿಕ ಸಾಧನೆಗಳಿಗಿಂತಲೂ ಪ್ರಕೃತಿಯ ಸೃಜನಶೀಲತೆ ಎಷ್ಟೋ ದೊಡ್ಡದು ಎನಿಸುತ್ತದೆ.
ಕಾ ಖೋಹ್ ರಾಮ್ಹಾಹ್: ಬೃಹತ್ ಏಕಶಿಲೆಯ ವಿಸ್ಮಯ!
ಅಲ್ಲಿಯೇ ಮಧ್ಯಾಹ್ನದ ಊಟ ಮುಗಿಸಿ, ಸ್ವಲ್ಪ ವಿಶ್ರಾಂತಿ ಪಡೆದು ನಮ್ಮ ಮುಂದಿನ ತಾಣವಾದ ಕಾ ಖೋಹ್ ರಾಮ್ಹಾಹ್ (Ka Khoh Ramhah) ಅಥವಾ ಪಿಲ್ಲರ್ ರಾಕ್ನತ್ತ ಹೊರಟೆವು. ಮೇಘಾಲಯದ ಈ ಭಾಗದಲ್ಲಿ ನೆಲೆಗೊಂಡಿರುವ ಬೃಹತ್ ನೈಸರ್ಗಿಕ ಏಕಶಿಲೆಯು ಸುಮಾರು 200 ಅಡಿ ಎತ್ತರದವರೆಗೆ ಎದ್ದು ನಿಂತಿರುವಂತೆ ಕಾಣುತ್ತದೆ. ಇದರ ಆಕಾರವು ಬೃಹತ್ ಶಿವಲಿಂಗವನ್ನು ನೆನಪಿಸುವುದರಿಂದ ಸ್ಥಳೀಯರು ಇದನ್ನು ಶಿವಜೀ ರಾಕ್ ಎಂದೂ ಕರೆಯುತ್ತಾರೆ.
ಈ ಬೃಹತ್ ಕಲ್ಲಿನ ರಚನೆಗೆ ಸಂಬಂಧಿಸಿದಂತೆ ಸ್ಥಳೀಯ ಜನಪದ ಕಥೆಗಳು ಮತ್ತು ಪೌರಾಣಿಕ ನಂಬಿಕೆಗಳೂ ಇವೆ. ನಮ್ಮ ಪುರಾಣಗಳಲ್ಲಿ ಬರುವ ಬಕಾಸುರನಂತಹ ದೈತ್ಯರ ಕಥೆಗಳು ನೆನಪಾಗುವಷ್ಟು ಬೃಹತ್ ಆಕಾರ ಹೊಂದಿದೆ. ಅದರ ಪಕ್ಕದಲ್ಲಿಯೇ ಇದ್ದ ಸಣ್ಣ ಜಲಪಾತವನ್ನೂ ವೀಕ್ಷಿಸಿ, ಒಂದಷ್ಟು ಫೋಟೋಗಳನ್ನು ತೆಗೆಸಿಕೊಂಡೆವು.
ಸೆವೆನ್ ಸಿಸ್ಟರ್ಸ್ ಫಾಲ್ಸ್: ಏಳು ಸಹೋದರಿ ರಾಜ್ಯಗಳ ಪ್ರತೀಕ!
ನಂತರ ನಮ್ಮ ಪಯಣ ಮೇಘಾಲಯದ ಅತ್ಯಂತ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಸೆವೆನ್ ಸಿಸ್ಟರ್ಸ್ ಫಾಲ್ಸ್ನತ್ತ ಸಾಗಿತು. ಇದನ್ನು ನೋಹ್ಸ್ನ್ಗಿಥಿಯಾಂಗ್ ಜಲಪಾತ ಎಂದೂ ಕರೆಯುತ್ತಾರೆ. ಸುಮಾರು 1,033 ಅಡಿ ಎತ್ತರದಿಂದ ಏಳು ಪ್ರತ್ಯೇಕ ಜಲಧಾರೆಗಳಾಗಿ ಧುಮ್ಮಿಕ್ಕುವ ಈ ಜಲಪಾತವು ಈಶಾನ್ಯ ಭಾರತದ ಏಳು ಸಹೋದರಿ ರಾಜ್ಯಗಳನ್ನು ಪ್ರತಿನಿಧಿಸುತ್ತದೆ ಎಂಬ ಕಾರಣದಿಂದ ಸೆವೆನ್ ಸಿಸ್ಟರ್ಸ್ ಫಾಲ್ಸ್ ಎಂಬ ಹೆಸರು ಪಡೆದಿದೆ.
ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ – ಇವೇ ಆ ಏಳು ಸಹೋದರಿ ರಾಜ್ಯಗಳು. ಜಲಪಾತದ ವಿಶಾಲತೆ ಮತ್ತು ಏಳು ಪ್ರತ್ಯೇಕ ಧಾರೆಗಳು ಒಂದೇ ಕಣಿವೆಯಲ್ಲಿ ಧುಮ್ಮಿಕ್ಕುವ ದೃಶ್ಯ ನಿಜಕ್ಕೂ ಅದ್ಭುತವಾಗಿರುತ್ತದೆ. ಆದರೆ ನಮ್ಮ ದುರದೃಷ್ಟಕ್ಕೆ ಆ ದಿನವೂ ವಿಪರೀತ ಮೋಡ ಕವಿದ ವಾತಾವರಣವಿತ್ತು. ಜಲಪಾತದ ಸೌಂದರ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಮಳೆಗಾಲದಲ್ಲಿ ಜೂನ್ನಿಂದ ಸೆಪ್ಟೆಂಬರ್ವರೆಗೆ ಈ ಜಲಪಾತ ತನ್ನ ಪೂರ್ಣ ಸೌಂದರ್ಯದಲ್ಲಿ ಹರಿಯುತ್ತದೆ. ಮಳೆಗಾಲ ಮುಗಿದ ನಂತರ ನೀರಿನ ಹರಿವು ಕಡಿಮೆಯಾಗುವುದರಿಂದ ಅದರ ಏಳು ಧಾರೆಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಪ್ರಕೃತಿಯ ಈ ಕಣ್ಣಾಮುಚ್ಚಾಲೆಯಿಂದ ಸ್ವಲ್ಪ ನಿರಾಸೆಯಾದರೂ, ಮೇಘಾಲಯದ ಮೋಡಗಳ ನಡುವೆ ಕಳೆದ ಆ ದಿನದ ಅನುಭವ ಮಾತ್ರ ಮರೆಯಲಾಗದು. ಅಂದು ರಾತ್ರಿ ಮತ್ತೆ ಶಿಲ್ಲಾಂಗ್ಗೆ ಹಿಂದಿರುಗಿ ಹೋಟೆಲ್ನಲ್ಲಿ ತಂಗಿದೆವು.
ಅಸ್ಸಾಂನ ಸಾಂಸ್ಕೃತಿಕ ವೈಭವ ಮತ್ತು ಕಾಜಿರಂಗದ ವನ್ಯಜೀವಿ ಲೋಕ!
ನವೆಂಬರ್ 2: ಶಿಲ್ಲಾಂಗ್ನಿಂದ ಕಾಜಿರಂಗಕ್ಕೆ ಪಯಣ

ಮರುದಿನ ಬೆಳಿಗ್ಗೆ ತಿಂಡಿ ಮುಗಿಸಿ, ಶಿಲ್ಲಾಂಗ್ನಿಂದ ಅಸ್ಸಾಂನ ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದತ್ತ ನಮ್ಮ ಪ್ರಯಾಣ ಆರಂಭವಾಯಿತು. ಮೇಘಾಲಯದ ಬೆಟ್ಟಗುಡ್ಡಗಳು, ಹಸಿರು ಕಾಡುಗಳು ಮತ್ತು ಮೋಡಗಳ ಸೌಂದರ್ಯವನ್ನು ಹಿಂದೆ ಬಿಟ್ಟು ಮತ್ತೆ ಅಸ್ಸಾಂನ ವಿಶಾಲ ಬಯಲು ಪ್ರದೇಶಗಳತ್ತ ಸಾಗುತ್ತಿದ್ದೆವು. ದೀರ್ಘ ಪ್ರಯಾಣದ ನಂತರ ತಡರಾತ್ರಿ ಕಾಜಿರಂಗ ತಲುಪಿದೆವು. ನಾವು ಅಲ್ಲಿಗೆ ತಲುಪುವಷ್ಟರಲ್ಲಿ ಮಲ್ಲಿಕಾರ್ಜುನ ಟ್ರಾವೆಲ್ಸ್ನವರು ಸ್ಥಳೀಯ ಜನಪದ ಕಲಾವಿದರಿಂದ ಅಸ್ಸಾಂನ ಪ್ರಸಿದ್ಧ ಬಿಹು ನೃತ್ಯ ಪ್ರದರ್ಶನವನ್ನು ಏರ್ಪಡಿಸಿದ್ದರು. ಇಡೀ ಪ್ರವಾಸಕ್ಕೆ ಕಳಶಪ್ರಾಯದಂತಿದ್ದದ್ದು ಈ ಕಾರ್ಯಕ್ರಮವೇ ಎಂದರೂ ತಪ್ಪಾಗಲಾರದು.
ಬಿಹು ನೃತ್ಯ: ಅಸ್ಸಾಂನ ಮಣ್ಣಿನ ಸೊಗಡು!
ಅಸ್ಸಾಂ ಎಂದಾಕ್ಷಣ ನೆನಪಾಗುವುದು ಬಿಹು ಹಬ್ಬ ಮತ್ತು ಬಿಹು ನೃತ್ಯ. ಬಿಹು ಕೇವಲ ಒಂದು ನೃತ್ಯವಲ್ಲ. ಅದು ಅಸ್ಸಾಂನ ಜನಜೀವನ, ಕೃಷಿ ಸಂಸ್ಕೃತಿ, ಪ್ರೀತಿ, ಸಂತೋಷ ಮತ್ತು ಪ್ರಕೃತಿಯೊಂದಿಗಿನ ಸಂಬಂಧವನ್ನು ಪ್ರತಿಬಿಂಬಿಸುವ ಜನಪದ ಪರಂಪರೆ. ಅಸ್ಸಾಂನಲ್ಲಿ ರೊಂಗಾಲಿ ಬಿಹು, ಭೋಗಾಲಿ ಬಿಹು ಮತ್ತು ಕಂಗಾಲಿ ಬಿಹು ಎಂಬ ಮೂರು ಪ್ರಮುಖ ಬಿಹು ಹಬ್ಬಗಳಿವೆ. ಇವುಗಳಲ್ಲಿ ರೊಂಗಾಲಿ ಬಿಹು ಅಸ್ಸಾಂನ ಹೊಸ ವರ್ಷ ಮತ್ತು ವಸಂತ ಋತುವಿನ ಆಗಮನವನ್ನು ಸಂಭ್ರಮಿಸುವ ಪ್ರಮುಖ ಹಬ್ಬವಾಗಿದೆ. ಬಿಹು ನೃತ್ಯದಲ್ಲಿ ಯುವಕ-ಯುವತಿಯರು ಸಾಂಪ್ರದಾಯಿಕ ಉಡುಪು ಧರಿಸಿ, ಪೆಪಾ, ಢೋಲ್, ಗೊಗೊನಾ ಮತ್ತು ತಾಳಗಳಂತಹ ವಾದ್ಯಗಳ ಲಯಕ್ಕೆ ತಕ್ಕಂತೆ ಕುಣಿಯುತ್ತಾರೆ. ನಮ್ಮ ಕರ್ನಾಟಕದ ಸುಗ್ಗಿ ಕುಣಿತ ಮತ್ತು ಇತರ ಜನಪದ ನೃತ್ಯಗಳನ್ನು ನೆನಪಿಸುವಂತಹ ಈ ನೃತ್ಯ ನಿಜಕ್ಕೂ ಮನಸ್ಸಿಗೆ ಮುದ ನೀಡಿತು.
ಸುಮಾರು ಒಂದು ಗಂಟೆ ಕಾಲ ನಡೆದ ಪ್ರದರ್ಶನದ ನಂತರ ನಮ್ಮನ್ನೂ ವೇದಿಕೆಗೆ ಕರೆದು ಬಿಹು ನೃತ್ಯ ಮಾಡಿಸಿದರು. ನಮಗೆಲ್ಲರಿಗೂ ಅದೊಂದು ಹೊಸ ಅನುಭವ! ನೃತ್ಯದ ಹಿನ್ನೆಲೆ, ಬಳಸುವ ವಾದ್ಯಗಳು, ಅವುಗಳ ವಿಶೇಷತೆ ಮತ್ತು ಅಸ್ಸಾಂನ ಕೃಷಿ ಸಂಸ್ಕೃತಿಯಲ್ಲಿ ಬಿಹುವಿನ ಮಹತ್ವವನ್ನೂ ಕಲಾವಿದರು ವಿವರಿಸಿದರು. ಒಂದು ಪ್ರದೇಶದ ಸಂಸ್ಕೃತಿಯನ್ನು ಪುಸ್ತಕಗಳಲ್ಲಿ ಓದುವುದಕ್ಕಿಂತ ಅಲ್ಲಿನ ಜನರೊಂದಿಗೆ ಬೆರೆತು, ಅವರ ನೃತ್ಯ ಮತ್ತು ಸಂಗೀತವನ್ನು ಅನುಭವಿಸಿದಾಗಲೇ ಅದರ ನಿಜವಾದ ಸೊಗಡು ಅರ್ಥವಾಗುತ್ತದೆ ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ.
ನವೆಂಬರ್ 3: ಕಾಜಿರಂಗ ರಾಷ್ಟ್ರೀಯ ಉದ್ಯಾನವನ – ಏಕಶೃಂಗ ಖಡ್ಗಮೃಗಗಳ ನಾಡು!
ಮರುದಿನ ಬೆಳಿಗ್ಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಫಾರಿಗೆ ಸಿದ್ಧರಾದೆವು. ಕಾಜಿರಂಗ ಎಂದಾಕ್ಷಣ ವಿಶ್ವಪ್ರಸಿದ್ಧವಾದ ಏಕಶೃಂಗ ಖಡ್ಗಮೃಗ (One-horned Rhinoceros) ನೆನಪಾಗುತ್ತದೆ. ಅಸ್ಸಾಂನ ಬ್ರಹ್ಮಪುತ್ರ ನದಿ ಕಣಿವೆಯಲ್ಲಿರುವ ಈ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಭಾರತದ ವನ್ಯಜೀವಿ ಸಂರಕ್ಷಣೆಯ ಹೆಮ್ಮೆಯ ಕೇಂದ್ರಗಳಲ್ಲಿ ಒಂದಾಗಿದೆ.
ಇಲ್ಲಿನ ವಿಶಾಲವಾದ ಹುಲ್ಲುಗಾವಲುಗಳು, ಜೌಗು ಪ್ರದೇಶಗಳು, ಕಾಡುಗಳು ಮತ್ತು ಜಲಮೂಲಗಳು ನೂರಾರು ಬಗೆಯ ಪ್ರಾಣಿ-ಪಕ್ಷಿಗಳಿಗೆ ಆಶ್ರಯ ನೀಡಿವೆ. ವಿಶೇಷವಾಗಿ ಭಾರತೀಯ ಏಕಶೃಂಗ ಖಡ್ಗಮೃಗಗಳ ಸಂರಕ್ಷಣೆಯಲ್ಲಿ ಕಾಜಿರಂಗದ ಪಾತ್ರ ಅತ್ಯಂತ ಮಹತ್ವದ್ದು. ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೇ ಎದ್ದು ಕೆಲವರು ತಮ್ಮ ಸ್ವಂತ ಖರ್ಚಿನಲ್ಲಿ ಆನೆ ಸವಾರಿಯ ಮೂಲಕ ಉದ್ಯಾನವನವನ್ನು ವೀಕ್ಷಿಸಲು ಹೊರಟರು. ಆನೆ ಸವಾರಿಯ ಮೂಲಕ ಕಾಡಿನ ಒಳಭಾಗಕ್ಕೆ ತೆರಳಿ ಖಡ್ಗಮೃಗಗಳು ಮತ್ತು ಇತರ ವನ್ಯಜೀವಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು.
ಉಳಿದವರು ಜೀಪ್ ಸಫಾರಿಗೆ ತೆರಳಿದೆವು. ಸುಮಾರು 29 ಕಿಲೋಮೀಟರ್ಗಳಷ್ಟು ದೂರದ ಸಫಾರಿಯಲ್ಲಿ ಅಲ್ಲಲ್ಲಿ ಕಾಡಾನೆಗಳು, ಜಿಂಕೆಗಳು, ಸಾರಂಗಗಳು, ಆಮೆಗಳು ಮತ್ತು ನೀರಿನ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಖಡ್ಗಮೃಗಗಳು ಕಾಣಸಿಕ್ಕವು. ಕೆಲವು ಪ್ರಾಣಿಗಳು ದೂರದಲ್ಲಿ ಆಹಾರ ಹುಡುಕುತ್ತಿದ್ದರೆ, ಇನ್ನೂ ಕೆಲವು ನೀರಿನಲ್ಲಿ ಮೈಮರೆತು ನಿಂತಿದ್ದವು. ಕಾಡಿನಲ್ಲಿ ಪ್ರಾಣಿಗಳು ಯಾವಾಗ, ಎಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ. ಅದೃಷ್ಟವಿದ್ದರೆ ಹುಲಿ, ಚಿರತೆಗಳಂತಹ ಅಪರೂಪದ ಪ್ರಾಣಿಗಳ ದರ್ಶನವೂ ಆಗಬಹುದು. ನಮಗೆ ಮಾತ್ರ ಹುಲಿ ಅಥವಾ ಚಿರತೆಯನ್ನು ನೋಡುವ ಅವಕಾಶ ಸಿಗಲಿಲ್ಲ.
ಕೆಲವರು ಹತ್ತಿರದಿಂದ ಖಡ್ಗಮೃಗಗಳನ್ನು ನೋಡಿದ ಅನುಭವವನ್ನು ಹಂಚಿಕೊಂಡಾಗ ನಮಗೆ ಸ್ವಲ್ಪ ಅಸೂಯೆಯೂ ಆಯಿತು! ಆದರೂ, ಕಾಂಕ್ರೀಟ್ ಕಟ್ಟಡಗಳು ಮತ್ತು ವಾಹನಗಳ ನಡುವೆ ಬದುಕುವ ನಮಗೆ ಇಂತಹ ವಿಶಾಲವಾದ ನೈಸರ್ಗಿಕ ವನ್ಯಜೀವಿ ಲೋಕವನ್ನು ನೋಡುವುದೇ ದೊಡ್ಡ ಅನುಭವ. ವನ್ಯಜೀವಿಗಳ ಸಂರಕ್ಷಣೆ ಎಷ್ಟು ಮುಖ್ಯ ಮತ್ತು ಪ್ರಕೃತಿಯ ಸಮತೋಲನ ಕಾಪಾಡಿಕೊಳ್ಳುವುದು ಮನುಷ್ಯನ ಜವಾಬ್ದಾರಿ ಎಂಬುದನ್ನು ಕಾಜಿರಂಗ ನಮಗೆ ಮತ್ತೊಮ್ಮೆ ನೆನಪಿಸಿತು.
ಅಸ್ಸಾಂನ ಸಾಂಸ್ಕೃತಿಕ ಇತಿಹಾಸದ ಪರಿಚಯ!
ನವೆಂಬರ್ 4: ಗುವಾಹಟಿ – ಕಲಾಕ್ಷೇತ್ರ – ಭೂಪೇನ್ ಹಜಾರಿಕಾ – ವಸಿಷ್ಠ ಆಶ್ರಮ
ಕಾಜಿರಂಗದ ವನ್ಯಜೀವಿ ಲೋಕಕ್ಕೆ ವಿದಾಯ ಹೇಳಿ, ಸುಮಾರು ಏಳೆಂಟು ಗಂಟೆಗಳ ಪ್ರಯಾಣದ ನಂತರ ಮತ್ತೆ ಗುವಾಹಟಿಗೆ ಹಿಂದಿರುಗಿದೆವು. ನಮ್ಮ ಏಳು ದಿನಗಳ ಪ್ರವಾಸದ ಕೊನೆಯ ದಿನವಾಗಿದ್ದರಿಂದ ಬೆಳಿಗ್ಗೆ ತಿಂಡಿ ಮುಗಿಸಿ ಅಸ್ಸಾಂನ ಕಲೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಪರಿಚಯಿಸುವ ಪ್ರಮುಖ ತಾಣವಾದ ಶ್ರೀಮಂತ ಶಂಕರದೇವ ಕಲಾಕ್ಷೇತ್ರಕ್ಕೆ ಭೇಟಿ ನೀಡಿದೆವು.
ಕಲಾಕ್ಷೇತ್ರ: ಅಸ್ಸಾಂನ ಕಲೆ ಮತ್ತು ಸಂಸ್ಕೃತಿಯ ಕನ್ನಡಿ!
ಅಸ್ಸಾಂನ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವ ಉದ್ದೇಶದಿಂದ ನಿರ್ಮಿಸಲಾದ ಕಲಾಕ್ಷೇತ್ರವು ಪ್ರವಾಸಿಗರು ತಪ್ಪದೇ ನೋಡಬೇಕಾದ ಸ್ಥಳ. ಇಲ್ಲಿ ಅಸ್ಸಾಂನ ವಿವಿಧ ಬುಡಕಟ್ಟು ಸಮುದಾಯಗಳ ಜೀವನಶೈಲಿ, ಸಾಂಪ್ರದಾಯಿಕ ಉಡುಗೆ-ತೊಡುಗೆಗಳು, ಆಭರಣಗಳು, ಕೃಷಿ ಉಪಕರಣಗಳು, ಪಾತ್ರೆ ಪಡಗಗಳು, ಆಯುಧಗಳು, ಸಂಗೀತ ವಾದ್ಯಗಳು ಮತ್ತು ಜನಪದ ಕಲೆಗಳನ್ನು ಪರಿಚಯಿಸುವ ಪ್ರದರ್ಶನಗಳಿವೆ. ಅಸ್ಸಾಂ ಎಂದರೆ ಕೇವಲ ಚಹಾ ತೋಟಗಳು ಮತ್ತು ಖಡ್ಗಮೃಗಗಳ ನಾಡಲ್ಲ. ಅದು ವಿವಿಧ ಜನಾಂಗಗಳು, ಭಾಷೆಗಳು, ಸಂಸ್ಕೃತಿಗಳು ಮತ್ತು ವಿಶಿಷ್ಟ ಜೀವನಶೈಲಿಗಳ ಸಂಗಮವೂ ಹೌದು ಎಂಬುದು ಇಲ್ಲಿ ನಮಗೆ ಮನದಟ್ಟಾಯಿತು.
ಡಾ. ಭೂಪೇನ್ ಹಜಾರಿಕಾ: ಸಂಗೀತದ ಮೂಲಕ ಅಸ್ಸಾಂನ ಆತ್ಮವನ್ನು ಪರಿಚಯಿಸಿದ ಮಹಾನ್ ಕಲಾವಿದ!
ಕಲಾಕ್ಷೇತ್ರದ ಭೇಟಿಯ ಸಂದರ್ಭದಲ್ಲಿ ಅಸ್ಸಾಂನ ಹೆಮ್ಮೆಯ ಪುತ್ರ, ಭಾರತರತ್ನ ಪುರಸ್ಕೃತ ಡಾ. ಭೂಪೇನ್ ಹಜಾರಿಕಾ ಅವರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ಸಂಗ್ರಹಾಲಯವನ್ನೂ ವೀಕ್ಷಿಸಿದೆವು. ಭೂಪೇನ್ ಹಜಾರಿಕಾ ಅವರು ಕೇವಲ ಹಿನ್ನೆಲೆ ಗಾಯಕರಾಗಿರಲಿಲ್ಲ. ಅವರು ಗೀತರಚನೆಕಾರ, ಸಂಗೀತ ನಿರ್ದೇಶಕ, ಕವಿ, ಚಲನಚಿತ್ರ ನಿರ್ಮಾಪಕ ಮತ್ತು ಬಹುಮುಖ ಪ್ರತಿಭೆಯ ಕಲಾವಿದರಾಗಿದ್ದರು. ತಮ್ಮ ಹಾಡುಗಳ ಮೂಲಕ ಅಸ್ಸಾಂನ ಜನಜೀವನ, ನದಿ, ಪ್ರಕೃತಿ, ಪ್ರೀತಿ, ನೋವು, ಮಾನವೀಯತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಜಗತ್ತಿಗೆ ಪರಿಚಯಿಸಿದವರು. ಅವರನ್ನು ಅಸ್ಸಾಂನ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಯಬಹುದು.
ಅವರ ಜೀವನದಲ್ಲಿ ಬಳಸಿದ್ದ ವಸ್ತುಗಳು, ಪ್ರಶಸ್ತಿ ಪುರಸ್ಕಾರಗಳು, ಪ್ರಮುಖ ಗಣ್ಯರೊಂದಿಗೆ ತೆಗೆಸಿಕೊಂಡ ಛಾಯಾಚಿತ್ರಗಳು ಮತ್ತು ಅವರ ಸಂಗೀತ ಸಾಧನೆಗಳನ್ನು ದಾಖಲಿಸಿರುವ ಸಂಗ್ರಹಾಲಯವನ್ನು ನೋಡಿದಾಗ ಅವರ ವ್ಯಕ್ತಿತ್ವದ ವಿಶಾಲತೆ ಅರಿವಾಗುತ್ತದೆ. ಒಬ್ಬ ಕಲಾವಿದ ತನ್ನ ನೆಲದ ಭಾಷೆ ಮತ್ತು ಸಂಸ್ಕೃತಿಯನ್ನು ಸಂಗೀತದ ಮೂಲಕ ಎಷ್ಟರಮಟ್ಟಿಗೆ ಜಗತ್ತಿಗೆ ಪರಿಚಯಿಸಬಹುದು ಎಂಬುದಕ್ಕೆ ಭೂಪೇನ್ ಹಜಾರಿಕಾ ಅವರೇ ಅತ್ಯುತ್ತಮ ಉದಾಹರಣೆ.
ವಸಿಷ್ಠ ಆಶ್ರಮ: ಸಪ್ತರ್ಷಿಗಳಲ್ಲಿ ಒಬ್ಬರಾದ ವಸಿಷ್ಠ ಮಹರ್ಷಿಗಳ ತಪೋಭೂಮಿ!
ಅಲ್ಲಿಂದ ನಮ್ಮ ಮುಂದಿನ ಭೇಟಿ ಗುವಾಹಟಿಯ ಹೊರವಲಯದಲ್ಲಿರುವ ವಸಿಷ್ಠ ಆಶ್ರಮಕ್ಕೆ. ನಮ್ಮ ಸನಾತನ ಧರ್ಮದ ಸಪ್ತರ್ಷಿಗಳಲ್ಲಿ ಒಬ್ಬರಾದ ವಸಿಷ್ಠ ಮಹರ್ಷಿಗಳ ಹೆಸರನ್ನು ಕೇಳದವರಿಲ್ಲ. ರಾಮಾಯಣದಲ್ಲಿ ಶ್ರೀರಾಮನಿಗೆ ಮಾರ್ಗದರ್ಶನ ನೀಡಿದ ಮಹಾನ್ ಋಷಿಗಳಲ್ಲಿ ವಸಿಷ್ಠರೂ ಒಬ್ಬರು.
ಗುವಾಹಟಿಯ ಸಂಧ್ಯಾಚಲ ಬೆಟ್ಟಗಳ ತಪ್ಪಲಿನಲ್ಲಿ, ಗರ್ಭಂಗ ಮೀಸಲು ಅರಣ್ಯದ ಸಮೀಪದಲ್ಲಿರುವ ಈ ಆಶ್ರಮವು ಆಧ್ಯಾತ್ಮಿಕ ಮತ್ತು ಪೌರಾಣಿಕ ಮಹತ್ವ ಹೊಂದಿದೆ. ಸ್ಥಳೀಯ ಪುರಾಣಗಳ ಪ್ರಕಾರ ವಸಿಷ್ಠ ಮಹರ್ಷಿಗಳು ಇಲ್ಲಿ ತಪಸ್ಸು ಮತ್ತು ಧ್ಯಾನ ಮಾಡಿದ್ದರು ಎಂದು ನಂಬಲಾಗಿದೆ. ಆಶ್ರಮದ ಸಮೀಪವೇ ಸಂಧ್ಯಾ, ಲಲಿತಾ ಮತ್ತು ಕಾಂತಾ ಎಂಬ ಮೂರು ಪವಿತ್ರ ಹೊಳೆಗಳು ಸಂಗಮವಾಗುತ್ತವೆ. ಇವು ಮೇಘಾಲಯದ ಬೆಟ್ಟ ಪ್ರದೇಶಗಳಿಂದ ಹರಿದು ಬರುವ ನೀರಿನ ಹರಿವುಗಳಾಗಿವೆ. ಈ ಮೂರು ಹೊಳೆಗಳಲ್ಲಿ ಸ್ನಾನ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ.
ನಮಗೆ ಸ್ನಾನ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಠ ನೀರಿನಲ್ಲಿ ಕಾಲು ತೊಳೆದುಕೊಂಡು, ಪವಿತ್ರ ಜಲವನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡೆವು. ನಂತರ ಆಶ್ರಮದ ಒಳಭಾಗದಲ್ಲಿರುವ ವಸಿಷ್ಠ ಮಹರ್ಷಿಗಳ ತಪೋಸ್ಥಳ ಮತ್ತು ಬಂಡೆಗಳ ನಡುವಿನ ನೈಸರ್ಗಿಕ ಗುಹೆ ಪ್ರದೇಶವನ್ನು ವೀಕ್ಷಿಸಿದೆವು. ಪ್ರಕೃತಿಯ ಮಧ್ಯೆ ಹರಿಯುವ ನೀರಿನ ಸದ್ದು, ಹಸಿರಿನಿಂದ ಕೂಡಿದ ಪರಿಸರ ಮತ್ತು ಆಶ್ರಮದ ಪ್ರಶಾಂತ ವಾತಾವರಣ ಮನಸ್ಸಿಗೆ ವಿಶೇಷ ನೆಮ್ಮದಿ ನೀಡಿತು. ಇಂತಹ ಸ್ಥಳಗಳಲ್ಲಿ ಸ್ವಲ್ಪ ಕಾಲ ಕುಳಿತು ಧ್ಯಾನ ಮಾಡಿದರೆ ಮನಸ್ಸಿನ ಒತ್ತಡವೆಲ್ಲವೂ ದೂರವಾಗಬಹುದು ಎನಿಸುತ್ತದೆ.
ಏಳು ದಿನಗಳ ಪ್ರವಾಸಕ್ಕೆ ಮಂಗಳಕರ ವಿದಾಯ!
ವಸಿಷ್ಠ ಆಶ್ರಮದ ಭೇಟಿಯ ನಂತರ ಗುವಾಹಟಿಯ ಸ್ಥಳೀಯ ಮಾರುಕಟ್ಟೆಗೆ ತೆರಳಿ ಒಂದಷ್ಟು ಖರೀದಿ ಮಾಡಿದೆವು. ಅಲ್ಲಿನ ವಿಶೇಷ ವಸ್ತುಗಳು, ಅಸ್ಸಾಂನ ಚಹಾ ಮತ್ತು ನೆನಪಿಗಾಗಿ ಕೆಲವು ಉಡುಗೊರೆಗಳನ್ನು ಕೊಂಡುಕೊಂಡೆವು. ನಂತರ ಊಟೋಪಚಾರ ಮುಗಿಸಿ, ರಾತ್ರಿ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂದಿರುಗುವ ವಿಮಾನವೇರಿದೆವು. ಹೀಗೆ ಏಳು ದಿನಗಳ ಅಸ್ಸಾಂ–ಮೇಘಾಲಯ ಪ್ರವಾಸ ಸುಸಂಪನ್ನವಾಯಿತು.
ಒಂದು ಕಡೆ ಶಕ್ತಿಪೀಠಗಳ ಆಧ್ಯಾತ್ಮಿಕ ಅನುಭವ, ಮತ್ತೊಂದು ಕಡೆ ಬ್ರಹ್ಮಪುತ್ರ ನದಿಯ ವಿಶಾಲತೆ, ಇನ್ನೊಂದೆಡೆ ಮೇಘಾಲಯದ ಮೋಡಗಳ ನಡುವೆ ಅಡಗಿದ್ದ ಜಲಪಾತಗಳು, ನೈಸರ್ಗಿಕ ಗುಹೆಗಳು, ಜೀವಂತ ಬೇರುಗಳ ಸೇತುವೆಗಳು, ಕೊನೆಯಲ್ಲಿ ಕಾಜಿರಂಗದ ವನ್ಯಜೀವಿ ಲೋಕ – ಒಂದೇ ಪ್ರವಾಸದಲ್ಲಿ ಇಷ್ಟೊಂದು ವೈವಿಧ್ಯಮಯ ಅನುಭವಗಳು ದೊರೆತದ್ದು ನಿಜಕ್ಕೂ ನಮ್ಮ ಅದೃಷ್ಟವೇ ಸರಿ.
ಮಲ್ಲಿಕಾರ್ಜುನ ಟ್ರಾವೆಲ್ಸ್ಗೆ ಒಂದು ಮೆಚ್ಚುಗೆಯ ಮಾತು!

ಒಂದು ಪ್ರವಾಸ ಯಶಸ್ವಿಯಾಗಬೇಕಾದರೆ ಕೇವಲ ಪ್ರವಾಸಿ ತಾಣಗಳನ್ನು ನೋಡುವುದಷ್ಟೇ ಸಾಕಾಗುವುದಿಲ್ಲ. ಸರಿಯಾದ ಸಮಯದಲ್ಲಿ ವಾಹನ, ಉತ್ತಮ ವಸತಿ, ಶುಚಿಯಾದ ಊಟ, ಸ್ಥಳೀಯ ಮಾರ್ಗದರ್ಶಕರು ಮತ್ತು ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಪ್ರವಾಸದ ಯೋಜನೆ ಎಲ್ಲವೂ ಸಮರ್ಪಕವಾಗಿರಬೇಕು.
ಈ ಎಲ್ಲಾ ವಿಚಾರಗಳಲ್ಲಿ ಮಲ್ಲಿಕಾರ್ಜುನ ಟ್ರಾವೆಲ್ಸ್ನ ವ್ಯವಸ್ಥೆ ಮೆಚ್ಚುವಂತಿತ್ತು. ನಿಗದಿತ ಪ್ರವಾಸದ ಯೋಜನೆಯಂತೆ ಬಹುತೇಕ ಎಲ್ಲ ಸ್ಥಳಗಳನ್ನೂ ತೋರಿಸಿದ್ದಲ್ಲದೆ, ವಸತಿ ಮತ್ತು ಸಾರಿಗೆ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ವಿಶೇಷವಾಗಿ ನಮ್ಮ ದಕ್ಷಿಣ ಭಾರತೀಯ ಆಹಾರ ಪದ್ಧತಿಗೆ ಅನುಗುಣವಾಗಿ ಅತ್ಯಂತ ಶುಚಿಯಾದ ಮತ್ತು ರುಚಿಯಾದ ಊಟದ ವ್ಯವಸ್ಥೆ ಮಾಡಿದ್ದು ಪ್ರಶಂಸನೀಯ.
ಅಲ್ಲಿನ ಚಳಿ, ಮಳೆ ಮತ್ತು ದೀರ್ಘ ಪ್ರಯಾಣದ ನಡುವೆಯೂ ಊಟದ ವಿಚಾರದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದು ಪ್ರವಾಸದ ಆಯಾಸವನ್ನು ಕಡಿಮೆ ಮಾಡಿತು. ಪ್ರವಾಸದ ಮಧ್ಯೆ ಸ್ಥಳೀಯ ಬಿಹು ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಈ ಪ್ರವಾಸದ ವಿಶೇಷ ಆಕರ್ಷಣೆಗಳಲ್ಲಿ ಒಂದಾಯಿತು. ಒಟ್ಟಿನಲ್ಲಿ ಪ್ರವಾಸವನ್ನು ಪ್ರಯಾಸವಿಲ್ಲದೆ, ಆನಂದದಾಯಕವಾಗಿ ಮುಗಿಸಲು ನೆರವಾದ ಮಲ್ಲಿಕಾರ್ಜುನ ಟ್ರಾವೆಲ್ಸ್ ತಂಡಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
ಪ್ರವಾಸದಿಂದ ಕಲಿತ ಪಾಠ: ವಿದೇಶ ನೋಡುವ ಮುನ್ನ ನಮ್ಮ ಭಾರತವನ್ನು ನೋಡೋಣ!
ಈ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ ನಂತರ ಮನಸ್ಸಿನಲ್ಲಿ ಹಲವು ಆಲೋಚನೆಗಳು ಮೂಡಿದವು. ನಾವು ವಿದೇಶ ಪ್ರವಾಸದ ಬಗ್ಗೆ ಎಷ್ಟೊಂದು ಆಸಕ್ತಿ ತೋರಿಸುತ್ತೇವೆ! ಯುರೋಪ್, ಅಮೆರಿಕಾ, ಸಿಂಗಾಪುರ, ದುಬೈ, ಥೈಲ್ಯಾಂಡ್ ಹೀಗೆ ಬೇರೆ ಬೇರೆ ದೇಶಗಳಿಗೆ ಹೋಗುವ ಕನಸು ಕಾಣುತ್ತೇವೆ. ಆದರೆ ನಮ್ಮದೇ ದೇಶದಲ್ಲಿ ನೋಡಬೇಕಾದ ಅದೆಷ್ಟೋ ಅದ್ಭುತ ಪ್ರವಾಸಿ ತಾಣಗಳಿವೆ ಎಂಬುದನ್ನು ಮರೆತುಬಿಡುತ್ತೇವೆ.
ನಮ್ಮ ಭಾರತದಲ್ಲಿ ಹಿಮಾಲಯದ ಹಿಮಚ್ಛಾದಿತ ಪರ್ವತಗಳಿವೆ. ರಾಜಸ್ಥಾನದ ವಿಶಾಲ ಮರುಭೂಮಿಗಳಿವೆ. ಕೇರಳದ ಹಿನ್ನೀರಿನ ಸೌಂದರ್ಯವಿದೆ. ಈಶಾನ್ಯ ಭಾರತದ ಮೋಡಗಳ ರಾಜ್ಯಗಳಿವೆ. ಪಶ್ಚಿಮ ಘಟ್ಟಗಳ ಹಸಿರು ಕಾಡುಗಳಿವೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯಗಳಿವೆ. ಬೌದ್ಧ, ಜೈನ, ಸಿಖ್ ಮತ್ತು ಇತರ ಧರ್ಮಗಳ ಪವಿತ್ರ ತಾಣಗಳಿವೆ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ, ಉಡುಗೆ-ತೊಡುಗೆ, ಆಚರಣೆ ಮತ್ತು ಜೀವನಶೈಲಿಗಳಿವೆ.
ಅಸ್ಸಾಂನಲ್ಲಿ ಬಿಹು ನೃತ್ಯವನ್ನು ನೋಡಿದಾಗ ನಮ್ಮ ಕರ್ನಾಟಕದ ಸುಗ್ಗಿ ಕುಣಿತ ನೆನಪಾಯಿತು. ಮೇಘಾಲಯದ ಜೀವಂತ ಬೇರುಗಳ ಸೇತುವೆಯನ್ನು ನೋಡಿದಾಗ ಪ್ರಕೃತಿಯೊಂದಿಗೆ ಬದುಕುವ ಅಲ್ಲಿನ ಜನರ ಬುದ್ಧಿವಂತಿಕೆ ಅರ್ಥವಾಯಿತು. ಕಾಮಾಕ್ಯ ದೇವಿಯ ದರ್ಶನ ಪಡೆದಾಗ ನಮ್ಮ ಶಕ್ತಿ ಆರಾಧನಾ ಪರಂಪರೆಯ ವೈಶಿಷ್ಟ್ಯ ನೆನಪಾಯಿತು. ಕಾಜಿರಂಗದಲ್ಲಿ ವನ್ಯಜೀವಿಗಳನ್ನು ನೋಡಿದಾಗ ಪರಿಸರ ಸಂರಕ್ಷಣೆಯ ಮಹತ್ವ ಅರಿವಾಯಿತು. ಇವೆಲ್ಲವೂ ಕೇವಲ ಪ್ರವಾಸದ ನೆನಪುಗಳಲ್ಲ. ನಮ್ಮ ದೇಶದ ವೈವಿಧ್ಯತೆಯನ್ನು ಅರಿತುಕೊಳ್ಳುವ ಪಾಠಗಳೂ ಹೌದು.
ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಹಿರಿಯರ ಮಾತು ಎಷ್ಟು ಅರ್ಥಪೂರ್ಣ ಅಲ್ಲವೇ?
ಮೊದಲು ನಮ್ಮ ದೇಶವನ್ನು ಸುತ್ತೋಣ. ನಮ್ಮ ದೇಶದ ಇತಿಹಾಸ, ಪೌರಾಣಿಕ ಹಿನ್ನೆಲೆ, ಸಂಸ್ಕೃತಿ, ಪರಂಪರೆ ಮತ್ತು ಅಲ್ಲಿನ ಜನರ ಜೀವನಶೈಲಿಯನ್ನು ಅರಿತುಕೊಳ್ಳೋಣ. ಆಗಲೇ ಏಕ ಭಾರತ, ಶ್ರೇಷ್ಠ ಭಾರತ ಎಂಬ ಘೋಷಣೆಯ ನಿಜವಾದ ಅರ್ಥ ನಮಗೆ ತಿಳಿಯುತ್ತದೆ.
ಇದು ಕೇವಲ ಟ್ರೈಲರ್ ಅಷ್ಟೇ!
ನಾವು ಈ ಏಳು ದಿನಗಳಲ್ಲಿ ಕಂಡದ್ದು ಅಸ್ಸಾಂ ಮತ್ತು ಮೇಘಾಲಯದ ಕೆಲವು ಪ್ರಮುಖ ಪ್ರವಾಸಿ ತಾಣಗಳನ್ನು ಮಾತ್ರ. ಅಲ್ಲಿನ ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಇತಿಹಾಸವಿದೆ. ಪ್ರತಿಯೊಂದು ದೇವಾಲಯಕ್ಕೂ ಪೌರಾಣಿಕ ಹಿನ್ನೆಲೆಯಿದೆ. ಪ್ರತಿಯೊಂದು ಬೆಟ್ಟ, ನದಿ, ಜಲಪಾತ ಮತ್ತು ಗುಹೆಗೂ ತನ್ನದೇ ಆದ ವೈಶಿಷ್ಟ್ಯವಿದೆ.
ವಿಶೇಷವಾಗಿ ಮೇಘಾಲಯದ ಮೋಡಗಳ ಕಣ್ಣಾಮುಚ್ಚಾಲೆ, ಉಮಂಗೋಟ್ ನದಿಯ ಪಾರದರ್ಶಕತೆ, ಮಾವ್ಲಿನ್ನಾಂಗ್ನ ಸ್ವಚ್ಛತೆ, ಚಿರಾಪುಂಜಿಯ ಜಲಪಾತಗಳು ಮತ್ತು ಕಾಜಿರಂಗದ ವನ್ಯಜೀವಿ ಲೋಕದ ಬಗ್ಗೆ ಇನ್ನಷ್ಟು ವಿವರವಾದ ಲೇಖನಗಳು ಹಾಗೂ ವಿಡಿಯೋಗಳನ್ನು ಆದಷ್ಟು ಶೀಘ್ರದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಎಷ್ಟೇ ಓದಿದರೂ, ಮೊಬೈಲ್ನಲ್ಲಿ ಎಷ್ಟೇ ವಿಡಿಯೋಗಳನ್ನು ನೋಡಿದರೂ ಅವೆಲ್ಲವೂ ಊಟದ ಜೊತೆಯಲ್ಲಿರುವ ಉಪ್ಪಿನಕಾಯಿಯಷ್ಟೇ!
ಖುದ್ದಾಗಿ ಅಲ್ಲಿಗೆ ಹೋಗಿ, ಅಲ್ಲಿನ ತಣ್ಣನೆಯ ಗಾಳಿಯನ್ನು ಉಸಿರಾಡಿ, ಮೋಡಗಳ ನಡುವೆ ಪ್ರಯಾಣಿಸಿ, ಜಲಪಾತದ ನೀರಿನ ಸಿಂಚನವನ್ನು ಅನುಭವಿಸಿ, ಸ್ಥಳೀಯ ಜನರೊಂದಿಗೆ ಬೆರೆತು ಅವರ ಸಂಸ್ಕೃತಿಯನ್ನು ಅರಿತಾಗಲೇ ಪ್ರವಾಸದ ನಿಜವಾದ ಮಜಾ ತಿಳಿಯುತ್ತದೆ. ಪ್ರಕೃತಿಯ ಸೌಂದರ್ಯವನ್ನು ಕಣ್ಣಾರೆ ಕಂಡು, ಮನಸ್ಸಿನಲ್ಲಿ ತುಂಬಿಕೊಂಡು, ಜೀವನಪೂರ್ತಿ ಮರೆಯಲಾಗದ ನೆನಪುಗಳನ್ನು ಹೊತ್ತು ತರುವುದು ಪ್ರವಾಸದ ನಿಜವಾದ ಉದ್ದೇಶವಲ್ಲವೇ? ಹಾಗಾದರೆ ಹೇಳಿ… ಮುಂದಿನ ಪ್ರವಾಸ ಎಲ್ಲಿಗೆ ಹೋಗೋಣ? ನಿಮ್ಮ ಅಭಿಪ್ರಾಯ, ಸಲಹೆ ಮತ್ತು ಅನಿಸಿಕೆಗಳನ್ನು ತಪ್ಪದೇ ತಿಳಿಸ್ತೀರೀ ಅಲ್ವೇ?
ಏನಂತೀರೀ?
ನಿಮ್ಮವನೇ ಶ್ರೀಮಂತ