ಮಗಳ ಮದುವೆಯ ಸಂಭ್ರಮದ ಮನೆಯಲ್ಲಿ ವಿಧಿಯ ಕ್ರೂರ ಆಟ!

ಮಗಳ ಮದುವೆಯ ಸಂಭ್ರಮದಲ್ಲಿ ತಂದೆಯ ಸಾವು..! ಮಗಳ ಬಾಳಿನಲ್ಲಿ ಕತ್ತಲು ಕವಿಯಬಾರದೆಂದು ಸಾವಿನ ಸುದ್ದಿಯನ್ನೇ ಮರೆಮಾಚಿದ ಕುಟುಂಬ!

ಮಗಳ ಮದುವೆ ಎಂದರೆ ಪ್ರತಿಯೊಬ್ಬ ತಂದೆಯ ಬದುಕಿನ ಅತ್ಯಂತ ಮಹತ್ವದ ಕ್ಷಣ. ಮಗಳನ್ನು ಮದುವೆ ಮಂಟಪದಲ್ಲಿ ಕುಳ್ಳಿರಿಸಿ, ಆಕೆಯ ಹೊಸ ಬದುಕಿಗೆ ಆಶೀರ್ವದಿಸಿ, ಕಣ್ಣೀರಿನೊಂದಿಗೆ ಗಂಡನ ಮನೆಗೆ ಕಳುಹಿಸುವ ಕನಸು ಪ್ರತಿಯೊಬ್ಬ ತಂದೆಯ ಮನಸ್ಸಿನಲ್ಲಿರುತ್ತದೆ. ಆದರೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಈ ಘಟನೆ ಮಾತ್ರ ತಂದೆ–ಮಗಳ ಸಂಬಂಧದ ಆಳವನ್ನು ನೆನಪಿಸುವುದರ ಜೊತೆಗೆ ಮನಸ್ಸನ್ನು ಕಲಕುತ್ತದೆ. ಮಗಳ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ತಂದೆ ಹಠಾತ್ತನೆ ಸಾವನ್ನಪ್ಪಿದರು. ಆದರೆ ಮಗಳ ಮದುವೆ ನಿಂತುಹೋಗಬಾರದು, ಆಕೆಯ ಸಂತೋಷಕ್ಕೆ ತಂದೆಯ ಸಾವಿನ ಸುದ್ದಿ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಕುಟುಂಬದವರು ಆ ಭೀಕರ ಸತ್ಯವನ್ನೇ ಮರೆಮಾಚಿದ ಹೃದ್ಯಯವಿದ್ರಾವಕ ಪ್ರಸಂಗ ಇದೋ ನಿಮಗಾಗಿ

ಸಂಭ್ರಮದ ಮನೆಯಲ್ಲಿ ವಿಧಿಯ ಕ್ರೂರ ಆಟ!

ರಾಜಸ್ಥಾನದ ಉದಯಪುರ ಜಿಲ್ಲೆಯ ಋಷಭದೇವ್ ಉಪವಿಭಾಗದ ಪಟಿಯಾರ್ (ಭೂಧರ್) ಗ್ರಾಮದಲ್ಲಿ 2026ರ ನವೆಂಬರ್ 20ರಂದು ಈ ಹೃದಯವಿದ್ರಾವಕ ಘಟನೆ ನಡೆದಿದೆ. ಅಹಮದಾಬಾದ್‌ನ ಖಾಸಗಿ ಕಂಪನಿಯೊಂದರಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ 51 ವರ್ಷದ ಶಂಕರ್‌ಲಾಲ್ ಮೇಘವಾಲ್ ತಮ್ಮ 26 ವರ್ಷದ ಮಗಳು ಪ್ರಿಯಾಂಕಾಳ ಮದುವೆಯನ್ನು ಬಹಳ ಸಂಭ್ರಮದಿಂದ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಮನೆಯ ಹಿರಿಯ ಮಗಳ ಮದುವೆ ಎಂಬ ಕಾರಣಕ್ಕೆ ಕುಟುಂಬದಲ್ಲಿ ಸಂತೋಷ ಮನೆಮಾಡಿತ್ತು. ಬಂಧುಗಳು, ಸ್ನೇಹಿತರು, ಗ್ರಾಮಸ್ಥರು ಆಗಮಿಸಿದ್ದರು. ಮನೆಯಲ್ಲಿ ಮದುವೆಯ ಚಪ್ಪರ ಹಾಕಲಾಗಿತ್ತು. ಮಂಗಳವಾದ್ಯ, ಹಾಡು, ನೃತ್ಯಗಳೊಂದಿಗೆ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ನಡೆಯುತ್ತಿದ್ದವು.

ರಾಜಸ್ಥಾನದ ಕೆಲವು ಭಾಗಗಳಲ್ಲಿ ಮದುವೆಗೂ ಮುನ್ನ ವಧುವಿನ ಗೌರವಾರ್ಥವಾಗಿ ನಡೆಯುವ ಮೆರವಣಿಗೆಯನ್ನು ‘ಬಿಂದೋಲಿ’ ಎಂದು ಕರೆಯುತ್ತಾರೆ. ಈ ಸಂಪ್ರದಾಯದಂತೆ ಪ್ರಿಯಾಂಕಾಳ ಬಿಂದೋಲಿ ಮೆರವಣಿಗೆ ಹೊರಟಿತ್ತು. ಮಗಳ ಮದುವೆಯ ಸಂತೋಷದಲ್ಲಿ ಶಂಕರ್‌ಲಾಲ್ ಕೂಡ ಬಂಧುಗಳು ಮತ್ತು ಗ್ರಾಮಸ್ಥರೊಂದಿಗೆ ಹಾಡುತ್ತಾ, ಕುಣಿಯುತ್ತಾ ಸಂಭ್ರಮದಲ್ಲಿ ಭಾಗವಹಿಸಿದ್ದರು. ಆದರೆ ಯಾರಿಗೂ ತಿಳಿದಿರಲಿಲ್ಲ, ಆ ಸಂಭ್ರಮದ ಕ್ಷಣಗಳೇ ಅವರ ಬದುಕಿನ ಕೊನೆಯ ಸಂಭ್ರಮವಾಗಲಿವೆ ಎಂದು!

ಹಠಾತ್ ಎದೆನೋವು… ಆಸ್ಪತ್ರೆಗೆ ಧಾವಿಸಿದ ಕುಟುಂಬ!

ಮೆರವಣಿಗೆಯ ಸಂಭ್ರಮ ಮುಗಿದ ಸುಮಾರು ಒಂದು ಗಂಟೆಯ ನಂತರ ಶಂಕರ್‌ಲಾಲ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಕೆಲವೇ ಕ್ಷಣಗಳಲ್ಲಿ ಅವರ ಆರೋಗ್ಯ ಹದಗೆಟ್ಟು ಕುಸಿದುಬಿದ್ದರು. ತಕ್ಷಣವೇ ಅವರ ಇಬ್ಬರು ಪುತ್ರರಾದ ದಿಲೀಪ್ ಮತ್ತು ಉಮೇಶ್ ಸೇರಿದಂತೆ ಕುಟುಂಬದವರು ಅವರನ್ನು ಋಷಭದೇವ್ ಆಸ್ಪತ್ರೆಗೆ ಕರೆದೊಯ್ದರು. ಅವರ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಉದಯಪುರದ ಮಹಾರಾಣಾ ಭೂಪಾಲ್ (ಎಂ.ಬಿ.) ಆಸ್ಪತ್ರೆಗೆ ಕಳುಹಿಸಿದರು.

ಆದರೆ ವಿಧಿಯ ನಿರ್ಧಾರವೇ ಬೇರೆಯಾಗಿತ್ತು. ಉದಯಪುರದ ಆಸ್ಪತ್ರೆಗೆ ತಲುಪುವಷ್ಟರಲ್ಲಿ ವೈದ್ಯರು ಶಂಕರ್‌ಲಾಲ್ ಮೃತಪಟ್ಟಿರುವುದಾಗಿ ಘೋಷಿಸಿದರು. ಮಗಳ ಮದುವೆಯ ಸಂಭ್ರಮದಲ್ಲಿ ಕುಣಿದು ಕುಪ್ಪಳಿಸಿದ್ದ ತಂದೆ ಇನ್ನು ಈ ಜಗತ್ತಿನಲ್ಲಿ ಇಲ್ಲ ಎಂಬ ಕಹಿಸತ್ಯ ಕುಟುಂಬದವರನ್ನು ದಿಕ್ಕೆಟ್ಟಿಸಿತು. ಒಂದು ಕಡೆ ತಂದೆಯನ್ನು ಕಳೆದುಕೊಂಡ ದುಃಖ. ಮತ್ತೊಂದು ಕಡೆ ಮರುದಿನವೇ ನಡೆಯಬೇಕಿದ್ದ ಮಗಳ ಮದುವೆ. ಏನು ಮಾಡಬೇಕು ಎಂಬುದೇ ಕುಟುಂಬದವರಿಗೆ ತಿಳಿಯದಂತಹ ಪರಿಸ್ಥಿತಿ ಎದುರಾಗಿತ್ತು.

ತಾಯಿಗೂ ಮಗಳಿಗೂ ಸಾವಿನ ಸುದ್ದಿ ತಿಳಿಸಲಿಲ್ಲ!

ಶಂಕರ್‌ಲಾಲ್ ಅವರ ಮೃತದೇಹವನ್ನು ಉದಯಪುರದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಯಿತು. . ಈ ಸಂದರ್ಭದಲ್ಲಿ ತಂದೆಯ ಸಾವಿನ ಸುದ್ದಿ ತಿಳಿಸಿದರೆ ಮಗಳು ಆಘಾತದಿಂದ ಕುಸಿದುಬೀಳಬಹುದು. ಮದುವೆಯೇ ನಿಂತುಹೋಗಬಹುದು. ತಾಯಿಯೂ ಈ ದುಃಖವನ್ನು ತಡೆದುಕೊಳ್ಳಲು ಸಾಧ್ಯವಾಗದಿರಬಹುದು ಎಂಬ ಆತಂಕ ಕುಟುಂಬದವರನ್ನು ಕಾಡಿತು. ಕೊನೆಗೆ ಶಂಕರ್‌ಲಾಲ್ ಅವರ ಇಬ್ಬರು ಪುತ್ರರು ಮತ್ತು ಕುಟುಂಬದ ಹಿರಿಯರು ಸೇರಿ ಅತ್ಯಂತ ಕಠಿಣ ನಿರ್ಧಾರವೊಂದನ್ನು ಕೈಗೊಂಡರು. ತಂದೆಯ ಸಾವಿನ ಸುದ್ದಿಯನ್ನು ತಾಯಿ ಮತ್ತು ಸಹೋದರಿ ಪ್ರಿಯಾಂಕಾಳಿಗೆ ತಕ್ಷಣ ತಿಳಿಸಬಾರದು ಎಂದು ತೀರ್ಮಾನಿಸಿದರು.

ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ, ಸದ್ಯ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ತಾಯಿ ಮತ್ತು ಮಗಳಿಗೆ ತಿಳಿಸಿದರು. ತಂದೆಯ ಮೃತದೇಹ ಆಸ್ಪತ್ರೆಯ ಶವಾಗಾರದಲ್ಲಿದ್ದರೂ, ಮನೆಯಲ್ಲಿ ಮಾತ್ರ ತಂದೆ ಇನ್ನೂ ಬದುಕಿದ್ದಾರೆ, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಭರವಸೆಯ ವಾತಾವರಣವನ್ನು ಸೃಷ್ಟಿಸಬೇಕಾದ ಅನಿವಾರ್ಯತೆ ಮಕ್ಕಳಿಗೆ ಎದುರಾಗಿತ್ತು. ಇದು ತಮ್ಮ ತಂದೆಯ ಸಾವಿನ ನೋವನ್ನು ಹೃದಯದಲ್ಲಿಟ್ಟುಕೊಂಡು, ತಾಯಿ ಮತ್ತು ಸಹೋದರಿಗೆ ಆಘಾತವಾಗದಂತೆ ನೋಡಿಕೊಳ್ಳಬೇಕಾದ ಅಸಹನೀಯ ಮಾನಸಿಕ ಹೋರಾಟವಾಗಿತ್ತು.

ವರನ ಮನೆಯವರ ಸಹಕಾರದಿಂದ ರಾತ್ರಿಯೇ ಮದುವೆ!

ಈ ದುರಂತದ ವಿಷಯವನ್ನು ವರನ ಮನೆಯವರಿಗೂ ತಿಳಿಸಲಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವರ ಮತ್ತು ಅವರ ಕುಟುಂಬದವರು ವಧುವಿನ ಮನೆಯವರ ನಿರ್ಧಾರಕ್ಕೆ ಸಹಕರಿಸಿದರು. ವರನು ತನ್ನ ಕುಟುಂಬದ ಸುಮಾರು 15ರಿಂದ 20 ಮಂದಿ ಆಪ್ತರೊಂದಿಗೆ ಸುಮಾರು 25 ಕಿಲೋಮೀಟರ್ ದೂರದ ಚನಾವಾಡಾ ಗ್ರಾಮದಿಂದ ವಧುವಿನ ಮನೆಗೆ ಬಂದರು ಎಂದು ವರದಿಗಳು ತಿಳಿಸಿವೆ.

ನವೆಂಬರ್ 21ರಂದು ಮಧ್ಯಾಹ್ನ ನಡೆಯಬೇಕಿದ್ದ ಮದುವೆಯ ಶಾಸ್ತ್ರಗಳನ್ನು ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಅದೇ ರಾತ್ರಿ ಸರಳವಾಗಿ ನೆರವೇರಿಸಲು ನಿರ್ಧರಿಸಲಾಯಿತು. ರಾತ್ರಿ ಸುಮಾರು 3 ಗಂಟೆಯ ವೇಳೆಗೆ ಪ್ರಿಯಾಂಕಾಳ ವಿವಾಹದ ಶಾಸ್ತ್ರಗಳು ಪೂರ್ಣಗೊಂಡವು. ತಂದೆಯ ಸಾವಿನ ಸುದ್ದಿಯನ್ನು ತಿಳಿಯದ ಪ್ರಿಯಾಂಕಾ ತನ್ನ ಬದುಕಿನ ಹೊಸ ಅಧ್ಯಾಯಕ್ಕೆ ಕಾಲಿಟ್ಟಳು. ಆದರೆ ಆಕೆಯ ತಂದೆ ಮಾತ್ರ ಆ ಮದುವೆಯನ್ನು ಕಣ್ಣಾರೆ ನೋಡುವ ಭಾಗ್ಯವನ್ನೇ ಕಳೆದುಕೊಂಡಿದ್ದರು. ಒಂದು ಕಡೆ ಮಗಳ ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ತಂದೆಯ ಮೃತದೇಹ ಆಸ್ಪತ್ರೆಯ ಶವಾಗಾರದಲ್ಲಿತ್ತು. ಕುಟುಂಬದವರು ಹೊರಗೆ ಧೈರ್ಯದಿಂದ ವರ್ತಿಸುತ್ತಿದ್ದರೂ ಒಳಗೊಳಗೆ ದುಃಖದಿಂದ ನಲುಗುತ್ತಿದ್ದರು.

ಮಗಳ ಬೀಳ್ಕೊಡುಗೆಯ ನಂತರ ಸತ್ಯ ತಿಳಿಸಿದ ಕುಟುಂಬ!

ಮಗಳ ಮದುವೆಯ ಶಾಸ್ತ್ರಗಳು ಪೂರ್ಣಗೊಂಡವು. ಪ್ರಿಯಾಂಕಾಳನ್ನು ಗಂಡನ ಮನೆಗೆ ಬೀಳ್ಕೊಡುವ ಸಮಯವೂ ಬಂತು. ಮಗಳ ಬೀಳ್ಕೊಡುಗೆಯವರೆಗೂ ಕುಟುಂಬದವರು ತಮ್ಮ ನೋವನ್ನು ತಡೆದುಕೊಂಡರು. ಮಗಳ ಹೊಸ ಜೀವನಕ್ಕೆ ಅಡ್ಡಿಯಾಗಬಾರದು ಎಂಬ ಕಾರಣಕ್ಕೆ ಇಷ್ಟೊತ್ತೂ ಮುಚ್ಚಿಟ್ಟಿದ್ದ ಸತ್ಯವನ್ನು ಕೊನೆಗೆ ಆಕೆಗೆ ತಿಳಿಸಲಾಯಿತು. ತನ್ನ ತಂದೆ ಇನ್ನು ಬದುಕಿಲ್ಲ ಎಂಬ ಸುದ್ದಿ ತಿಳಿದಾಗ ಪ್ರಿಯಾಂಕಾ ಮತ್ತು ಆಕೆಯ ತಾಯಿಯ ಮನಸ್ಸಿನ ಮೇಲೆ ಎಂತಹ ಆಘಾತ ಉಂಟಾಗಿರಬಹುದು ಎಂಬುದನ್ನು ಊಹಿಸುವುದೂ ಕಷ್ಟ. ತಾನು ಹೊಸ ಬದುಕಿಗೆ ಕಾಲಿಡುವ ಸಮಯದಲ್ಲೇ ತಂದೆಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇನೆ ಎಂಬ ವಾಸ್ತವವನ್ನು ಒಪ್ಪಿಕೊಳ್ಳುವುದು ಸುಲಭವಾಗಿರಲಿಲ್ಲ.

ಮಗಳ ಬೀಳ್ಕೊಡುಗೆಯ ನಂತರ ಶಂಕರ್‌ಲಾಲ್ ಅವರ ಮೃತದೇಹವನ್ನು ಗ್ರಾಮಕ್ಕೆ ತಂದು ನವೆಂಬರ್ 21ರಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬದವರು ಮತ್ತು ಗ್ರಾಮಸ್ಥರು ದುಃಖದ ನಡುವೆ ಅವರಿಗೆ ಅಂತಿಮ ವಿದಾಯ ಹೇಳಿದರು. ಶಂಕರ್‌ಲಾಲ್ ಅವರಿಗೆ ಪ್ರಿಯಾಂಕಾ ಸೇರಿದಂತೆ ಮೂವರು ಮಕ್ಕಳಿದ್ದರು. ಇಬ್ಬರು ಪುತ್ರರಾದ ದಿಲೀಪ್ ಮತ್ತು ಉಮೇಶ್ ತಂದೆಯ ಸಾವಿನ ಆಘಾತದ ನಡುವೆಯೂ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು ಮಗಳ ಮದುವೆ ನೆರವೇರಿಸಲು ಪ್ರಯತ್ನಿಸಿದರು.

ಇದೇ ರೀತಿಯ ಪ್ರಸಂಗ ಹಿಂದೆಯೂ ನಡೆದಿತ್ತು

ಈ ರೀತಿಯ ಪ್ರಸಂಗ ಇದೇ ಮೊದಲು ಅಲ್ಲಾ ಮತ್ತು ಕೊನೆಯೂ ಅಲ್ಲ. ಕೆಲವು ವರ್ಷಗಳ ಹಿಂದೆ ನನ್ನ ಸ್ನೇಹಿತರ ಮದುವೆಯಲ್ಲೂ ಇದೇ ರೀತಿಯಾಗಿತ್ತು, ಮದುವೆಯ ಹಿಂದಿನ ದಿನ ಆರತಕ್ಷತೆಯಂದು ಮದುಮಗನ ತಂದೆ ಇದ್ದಕ್ಕಿದ್ದಂತೆಯೇ ಎದೆ ನೋವು ಎಂದು ಕುಸಿದುಬಿದ್ದಾಗ, ಹೆಚ್ಚಿನ ಚಿಕಿತ್ಸೆಗೆಂದು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮದುವೆಗೆಂದು ಸಾವಿರಾರು ಜನರು ಬಂದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಇಂತಹ ಸಂಧರ್ಭದಲ್ಲಿ ಈ ಸಾವಿನ ವಿಷಯ ತಿಳಿಸಿ ಮದುವೆ ನಿಲ್ಲುವಂತಾದರೆ ಎಲ್ಲರಿಗೂ ನಷ್ಟ ಎಂದು ತಿಳಿದ ಮದುಮಗನ ಅಣ್ಣಂದಿರು, ದೊಡ್ಡ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರ ಸ್ನೇಹಿತನ ಸಹಾಯದಿಂದ ತಮ್ಮ ತಂದೆಯವರ ಶವರನ್ನು ಅಲ್ಲಿನ ಶವಾಗಾದಲ್ಲಿರಿಸಿ, ಭಾರವಾದ ಹೃದಯದಿಂದ ಮದುವೆಮನೆಗೆ ಹಿಂದಿರುಗಿ ಅಪ್ಪನಿಗೆ ಸ್ವಲ್ಪ ಪ್ರಮಾಣದ ಹೃದಯಾಘಾತವಾಗಿರುವ ಪರಿಣಾಮ ಅವರನ್ನು ಆಸ್ಪತ್ರೆಯ ICUನಲ್ಲಿ ಇರಿಸಲಾಗಿದ್ದು, ನಮ್ಮ ಗೆಳೆಯ ಎಲ್ಲವನ್ನೂ ನೋಡಿ ಕೊಳ್ಳುತ್ತಿದ್ದಾನೆ ಎಂದು ಮಾರನೆಯ ದಿನ ಮದುವೆ ಎಲ್ಲವೂ ಮುಗಿದು ಹೆಣ್ಣು ಒಪ್ಪಿಸಿಕೊಳ್ಳುವ ಶಾಸ್ತ್ರ ಮುಗಿದ ನಂತರ ಮನೆಯವರಿಗೆಲ್ಲರಿಗೂ ತಂದೆಯವರ ಅಕಾಲಿಕ ಅಗಲಿಕೆಯ ವಿಚಾರ ತಿಳಿಸಿದಾಗ, ಸಂಭ್ರಮ ಸಡಗರದಲ್ಲಿದ್ದ ಮನೆ ಒಂದೇ ಕ್ಷಣದಲ್ಲಿ ನೀರವ ಮೌನಕ್ಕೆ ಜಾರಿದ್ದ ಪ್ರಸಂಗ ನೆನಪಾಯಿತು

ಅಯ್ಯೋ ಮನೆಗೆ ಬರುವಾಗಲೇ ನನ್ನ ಗಂಡನನ್ನು ನುಂಗಿರುವ ಇಂತಹ ಸೊಸೆ ಬೇಡ ಎಂದು ಆ ಕ್ಷಣದಲ್ಲಿಯೇ ಪ್ರತಿಭಟಿಸಿದ್ದ ನನ್ನ ಸ್ನೇಹಿತನ ತಾಯಿ ಅದೇ ವಿಷಯವನ್ನು ಬಹಳ ದಿನಗಳವರೆಗೂ ಮುಂದುವರೆಸಿಕೊಂಡು ಹೋಗಿದ್ದರು, ನಂತರದ ದಿನಗಳಲ್ಲಿ ಮನೆಗೆ ಬಂದ ಸೊಸೆ ತನ್ನ ನಡೆ ನುಡಿ ಮತ್ತು ಸಂಸ್ಕಾರಗಳಿಂದ ಪರಿಸ್ಥಿತಿಯನ್ನು ತಿಳಿಸಿಗೊಳಿಸಿದಾಗ, ಹಣೆ ಬರಹ ಮತ್ತು ವಿಧಿ ಬರಹಕ್ಕೆ ಹೊಣೆಯಾಗುವವರು ಯಾರು ಎಂಬುದನ್ನು ಅರಿತ ನನ್ನ ಸ್ನೇಹಿತನ ತಾಯಿಯವರೂ ಸಹಾ ಮಗ ಸೊಸೆ ಮತ್ತು ಮೊಮ್ಮಕ್ಕಳನ್ನು ಒಪ್ಪಿ ಅಪ್ಪಿಕೊಂಡು ಈಗ ಎಲ್ಲವೂ ಸುಗಮವಾಗಿದೆ

ತಂದೆಯ ಕನಸು ನನಸಾಯಿತು… ಆದರೆ ಅದನ್ನು ನೋಡುವ ತಂದೆಯೇ ಇರಲಿಲ್ಲ!

ಪ್ರತಿಯೊಬ್ಬ ತಂದೆಯೂ ತನ್ನ ಮಗಳ ಮದುವೆಯ ದಿನವನ್ನು ಜೀವನದ ಅತ್ಯಂತ ಸಂತೋಷದ ದಿನವೆಂದು ಭಾವಿಸುತ್ತಾನೆ. ಮಗಳಿಗೆ ಒಳ್ಳೆಯ ಸಂಗಾತಿ ಸಿಗಬೇಕು, ಆಕೆ ಸುಖವಾಗಿ ಸಂಸಾರ ಮಾಡಬೇಕು, ಹೊಸ ಮನೆಯಲ್ಲೂ ಗೌರವ ಮತ್ತು ಪ್ರೀತಿ ದೊರೆಯಬೇಕು ಎಂಬುದು ತಂದೆಯ ಹಾರೈಕೆ. ಮಗಳ ಮದುವೆಯ ಸಿದ್ಧತೆಗಳಲ್ಲಿ ತಂದೆ ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿರುತ್ತಾನೆ. ಮದುವೆಯ ಸೀರೆ, ಒಡವೆ, ಅತಿಥಿಗಳ ಆತಿಥ್ಯ, ಮದುವೆಯ ಶಾಸ್ತ್ರಗಳು, ಮಗಳ ಬೀಳ್ಕೊಡುಗೆ ಹೀಗೆ ಪ್ರತಿಯೊಂದು ಹಂತದಲ್ಲೂ ತಂದೆಯ ಮನಸ್ಸು ತೊಡಗಿಸಿಕೊಂಡಿರುತ್ತದೆ.ತಮ್ಮ ಆರ್ಥಿಕ ಪರಿಸ್ಥಿತಿ ಹೇಗಿರುತ್ತದೆ ಎಂದುದನ್ನು ಮರೆತು ತಮ್ಮ ಶಕ್ತಿ ಮೀರಿ ಮದುವೆ ಚೆನ್ನಾಗಿ ನಡೆಯ ಬೇಕು ಎಂದು ಮಗಳ ಮದುವೆಗಾಗಿ ಸಾಲಾ ಸೋಲ ಮಾಡಿರುತ್ತಾರೆ

ಶಂಕರ್‌ಲಾಲ್ ಕೂಡ ತಮ್ಮ ಮಗಳ ಮದುವೆಯನ್ನು ಸಂಭ್ರಮದಿಂದ ನೆರವೇರಿಸುವ ಕನಸು ಕಂಡಿದ್ದರು. ಮಗಳ ಬಿಂದೋಲಿಯಲ್ಲಿ ಕುಣಿದು ಸಂತೋಷಪಟ್ಟಿದ್ದರು. ಆದರೆ ಮಗಳ ಮದುವೆಯ ಶಾಸ್ತ್ರಗಳು ಪೂರ್ಣಗೊಂಡಾಗ, ಆಕೆಯನ್ನು ಆಶೀರ್ವದಿಸಲು ತಂದೆಯೇ ಇರಲಿಲ್ಲ. ಮಗಳ ಬದುಕಿನ ಹೊಸ ಅಧ್ಯಾಯ ಆರಂಭವಾಯಿತು. ಆದರೆ ಆ ಅಧ್ಯಾಯದ ಮೊದಲ ಪುಟದಲ್ಲೇ ತಂದೆಯ ಅನುಪಸ್ಥಿತಿಯ ನೋವು ಶಾಶ್ವತವಾಗಿ ಉಳಿಯಿತು.

ಈ ಘಟನೆಯ ಹಿಂದಿರಬಹುದಾದ ಆಘಾತಕಾರಿ ವಿಚಾರಗಳು

ಈ ಘಟನೆ ಜೀವನದ ಅನಿಶ್ಚಿತತೆಯನ್ನು ನೆನಪಿಸುತ್ತದೆ. ಯಾರಿಗೆ ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವೇ ಕ್ಷಣಗಳ ಹಿಂದೆ ಸಂತೋಷದಿಂದ ನಗುತ್ತಿದ್ದ ವ್ಯಕ್ತಿ ಮುಂದಿನ ಕ್ಷಣ ನಮ್ಮೊಂದಿಗಿರುತ್ತಾರೆಯೇ ಎಂಬುದಕ್ಕೂ ಖಾತರಿಯಿಲ್ಲ. ಮದುವೆ, ಹುಟ್ಟುಹಬ್ಬ, ಹಬ್ಬ, ಕುಟುಂಬದ ಸಮಾರಂಭಗಳು ಇಂತಹ ಸಂದರ್ಭಗಳಲ್ಲಿ ನಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುವ ಕ್ಷಣಗಳೇ ಜೀವನದ ಅಮೂಲ್ಯ ಸಂಪತ್ತು. ಹಣ, ಆಸ್ತಿ, ಸ್ಥಾನಮಾನಗಳಿಗಿಂತ ಕುಟುಂಬದವರೊಂದಿಗೆ ಹಂಚಿಕೊಳ್ಳುವ ಪ್ರೀತಿ ಮತ್ತು ಸಮಯವೇ ಹೆಚ್ಚು ಮುಖ್ಯ.

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಕ್ಕಳು ಮದುವೆ ಆಗುವುದಕ್ಕೆ ಹಿಂದೇಟು ಹಾಕುತ್ತಾರೆ, ಹೆಣ್ಣು ಮತ್ತು ಗಂಡು ಎಂಬ ಬೇಧವಿಲ್ಲದೇ ವಯಸ್ಸು ೨೮-೩೦ ಆದರೂ ನಾವಿನ್ನೂ ನಮ್ಮ ಜೀವನದಲ್ಲಿ ನೆಲೆ ಕಂಡುಕೊಂಡಿಲ್ಲ ಎಂದು ಗೊಣಗುಟ್ಟತ್ತಲೇ ಇರುತ್ತಾರೆ. ಆದರೆ ಅತ್ತ ತಂದೆ ತಾಯಿಯರಿಗೆ ಮತ್ತು ಅಜ್ಜಾ ಅಜ್ಜಿಯರಿಗೆ ತಾವು ಬದುಕಿರುವಾಗಲೇ ತಮ್ಮ ಕಣ್ಣ ಮುಂದೆಯೇ ಮಕ್ಕಳ ಮದುವೆ ಅಗಬೇಕೆಂದು ಪರಿಪಾಠಲು ಮಾಡುವುದರಿಂದಲೂ ಪೋಷಕರಿಗೆ ಅನಗತ್ಯವಾದ ಒತ್ತಡ ಅಗುವುದೂ ಉಂಟು. ಅದೇ ರೀತಿಯಲ್ಲಿ ಕೆಲವೊಮ್ಮೆ ಮದುವೆಯನ್ನು ತಮ್ಮ ಕೈಮೀರಿ ಸಾವಿರಾರು ಜನರನ್ನು ಕರೆದು ಅದ್ದೂರಿಯಾಗಿ ನಡೆಸಬೇಕು ಎಂಬ ಹಪಾಹಪಿಯಲ್ಲಿ ಸಾಲಾ ಸೋಲ ಮಾಡುವುದರಿಂದಲೂ ಪೋಷಕರಿಗೆ ಒತ್ತಡ ಬಂದು ಹಠಾತ್ ಎದೆನೋವು, ಉಸಿರಾಟದ ತೊಂದರೆ, ಅತಿಯಾದ ಬೆವರು, ತಲೆಸುತ್ತು ಬಂದು ಜೀವನಕ್ಕೂ ಕುತ್ತು ಬರಬಹುದು.

ತಂದೆ–ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಂದೆ ಬದುಕಿರುವಾಗ ಅವರ ಪ್ರೀತಿಯನ್ನು ಅರಿತುಕೊಳ್ಳೋಣ, ಅವರೊಂದಿಗೆ ಸಮಯ ಕಳೆಯೋಣ. ಏಕೆಂದರೆ ಕೆಲವು ಬೀಳ್ಕೊಡುಗೆಗಳು ಮತ್ತೆಂದೂ ಭೇಟಿಯಾಗದ ವಿದಾಯಗಳಾಗಿರುತ್ತವೆ. ಮಗಳ ಮದುವೆಯನ್ನು ನೋಡಬೇಕೆಂಬ ತಂದೆಯ ಕನಸು ನನಸಾಯಿತು. ಆದರೆ ಆ ಕನಸು ನನಸಾದ ಕ್ಷಣವನ್ನು ಕಣ್ಣಾರೆ ನೋಡಲು ತಂದೆಯೇ ಇರಲಿಲ್ಲ. ಹಾಗಾಗಿ ತಮ್ಮ ವಯಕ್ತಿಕ ಸ್ವಾರ್ಥಗಳನ್ನು ಬದಿಗಿಟ್ಟು ಕುಟುಂಬದ ಹಿತದೃಷ್ಟಿಯಿಂದ ಸರಳವಾಗಿ ಆದರೆ ಅಷ್ಟೇ ಶಾಸ್ತ್ರೋಕ್ತವಾಗಿ ಮದುವೆ ಆಗುವುದು ಉತ್ತಮ ಅಲ್ವೇ?

ಏನಂತೀರೀ?
ನಿಮ್ಮವನೇ ಶ್ರೀಮಂತ

Leave a Reply