ಆದರ್ಶ ಕಲಾಕುಂಜ ಲಲಿತಕಲಾ ಶಾಲೆಯ ಸ್ವಾತಂತ್ಯ್ರೋತ್ಸವದ ಸಂಭ್ರಮ

ಸಾಧಾರಣವಾಗಿ ನಮ್ಮ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಬರುವುದೇ ಶ್ರಾವಣ ಮಾಸದಲ್ಲಿ. ಹೇಳೀ ಕೇಳಿ ಶ್ರಾವಣ ಮಾಸ ಭಾರತೀಯರಿಗೆ ಸಾಲು ಸಾಲು ಹಬ್ಬಗಳ ಸಂಭ್ರಮದ ಮಾಸ. ನಮ್ಮ ಭಾರತೀಯರು ತಮ್ಮ ಪ್ರತಿಯೊಂದು ಹಕ್ಕುಗಳಿಗೂ ಸಂವಿಧಾನವನ್ನು ಉಲ್ಲೇಖಿಸುವವರು, ಅದೇಕೋ ಏನೋ ಸ್ವಾತಂತ್ಯ್ರೋತ್ಸವ ಮತ್ತು ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ತಮ್ಮ ಸಂಪ್ರದಾಯದ ಭಾಗವಾಗಿ ಮಾಡಿಕೊಳ್ಳದೇ ಇರುವುದು ಸೋಜಿಗವೇ ಸರಿ. ಬಹುತೇಕರು ಸ್ವಾತ್ರಂತ್ರ್ಯೋತ್ಸವದಂದು ಸಿಕ್ಕ ರಜೆಯನ್ನು ಮಜಾ ಮಾಡಲು ಬಯಸುವವರೇ ಹೆಚ್ಚು. ಈ ರಾಷ್ಟ್ರೀಯ ಹಬ್ಬಗಳು ವಾರಾಂತ್ಯದ ಹಿಂದು ಇಲ್ಲವೇ ಮುಂದೆ ಬಂದರಂತೂ ಕೇಳುವುದೇ ಬೇಡ. ಅದರ ಜೊತೆಗೆ ಒಂದೆರಡು ವಯಕ್ತಿಕ ರಜೆಗಳನ್ನು ಹಾಕಿ ಮೋಜು ಮಸ್ತಿ ಮಾಡಲು ಹೋರಟೇ ಬಿಡುವುದು ನಿಜಕ್ಕೂ ಬ್ರಿಟೀಷರ ವಿರುದ್ಧ ನಿಸ್ವಾರ್ಥವಾಗಿ ಮನೆ ಮಠ ಬಿಟ್ಟು  ತ್ಯಾಗ, ಬಲಿದಾನ ಗೈದಾ ಲಕ್ಷಾಂತರ ಸ್ವಾತ್ರಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ ಎಂದೇ ಭಾವಿಸಬೇಕು. ಇನ್ನು ಸರ್ಕಾರೀ ನೌಕರರು ಮತ್ತು ಇನ್ನೂ ಕೆಲವು ಧುರೀಣರು ಕಾಟಾಚಾರಕ್ಕೆಂದು ತಮ್ಮ ತಮ್ಮ ಕಛೇರಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅಚರಿಸಿದರೇ, ಎಲ್ಲೋ ಅಲ್ಲಿ ಇಲ್ಲಿ ಕೆಲವೊಬ್ಬ  ಹಿರಿಯರುಗಳು ಮಾತ್ರವೇ ದೂರದರ್ಶನದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ, ಪಥಸಂಚಲನ ಮತ್ತು ವಿವಿಧ ಕವಾಯುತುಗಳನ್ನು ನೋಡಿ ಸಂಭ್ರಮಿಸುತ್ತಾರೆ.

ಈ ಬಾರಿ ಪ್ರಪಂಚಾದ್ಯಂತ ಕೂರೋನಾ  ಎಂಬ ಮಹಾಮಾರಿ ಆವರಿಸಿರುವ ಕಾರಣ ಬಹುತೇಕರು ಹೊರಗೆಲ್ಲೂ ಹೋಗದೇ ಟಿವಿಗಳ ಮುಂದೆಯೇ ಸ್ವಾತ್ರಂತ್ರ್ಯೋತ್ಸವವನ್ನು ವೀಕ್ಷಿಸಿದರೆ, ಬೆಂಗಳೂರಿನ ದೊಡ್ಡಬೊಮ್ಮಸಂದ್ರದ ಆದರ್ಶ ಕಲಾಕುಂಜ ಎಂಬ ಸಂಗೀತ ಮತ್ತು ನೃತ್ಯಕಲೆಯನ್ನು ಕಲಿಸಿಕೊಡುವ ಲಲಿತಕಲಾ ಶಾಲೆಯ ಅಕ್ಕ ಪಕ್ಕ ಇರುವ ಪುಟ್ಟ ಪುಟ್ಟ ಮಕ್ಕಳೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿ,  ದೀಪ ಬೆಳಗಿ, ಒಕ್ಕೊರಲಿನಿಂದ ರಾಷ್ಟ್ರಗೀತೆಯನ್ನು ಹಾಡಿ ತಮ್ಮ ಎರಡೂ ಕೈಗಳನ್ನೆತ್ತಿ ಜೋರಾಗಿ ಭಾರತ್ ಮಾತಾ ಕೀ ಜೈ ಮತ್ತು ವಂದೇ.. ಮಾತರಮ್ ಎಂದು ಹೇಳುತ್ತಿರುವ ದೃಶ್ಯ ನೋಡಿ ಮನಸ್ಸಂತೋಷವಾಯಿತು.

ಇಂದಿನ ಪುಟ್ಟ ಪುಟ್ಟ ಮಕ್ಕಳೇ, ದೇಶದ ನಾಳಿನ ಪ್ರಜ್ಞಾವಂತ ಪ್ರಜೆಗಳು. ಅಂತಹ ಮಕ್ಕಳಿಗೆ ಚಿಕ್ಕಂದಿನಿಂದಲೇ ದೇಶಭಕ್ತಿಯನ್ನು ಈ ರೀತಿಯಲ್ಲಿ  ತುಂಬುವಂತಾದರೇ, ಆ ಮಕ್ಕಳು ಬೆಳೆದು ದೊಡ್ಡವರದ ಮೇಲೆ ಖಂಡಿತವಾಗಿಯೂ ಸತ್ರ್ಪಜೆಗಳಾಗುವುದರಲ್ಲಿ ಸಂದೇಹವೇ ಇಲ್ಲ. ಇಂತಹ ಮಹತ್ಕಾರ್ಯವನ್ನು ಮಾಡಿದ ಆದರ್ಶ ಕಲಾಕುಂಜದ ನಿರ್ವಾಹಕಿ  ಶ್ರೀಮತಿ ಲಕ್ಷ್ಮೀ ಆನಂದ್ ಮತ್ತು ಅವರ ಇಡೀ ಕುಟುಂಬ ನಿಜಕ್ಕೂ ಅಭಿನಂದನಾರ್ಹರು ಮತ್ತು ಅವರ ಈ ಶ್ಲಾಘನೀಯವಾದ ಕೆಲಸ ಅನುಕರಣೀಯವೂ ಹೌದು.

ದೇಶಾದ್ಯಂತ ಇರುವ ಇಂತಹ ಲಲಿತಕಲಾ ಕೇಂದ್ರಗಳು ಕಲೆಯೊಂದಿಗೆ ಈ ರೀತಿಯಾಗಿ  ದೇಶಭಕ್ತಿಯ ಸಂಸ್ಕಾರವನ್ನೂ ತುಂಬುವಂತಾದರೇ, ಭವಿಷ್ಯದಲ್ಲಿ ನಮ್ಮ ದೇಶ ಸುಭದ್ರವಾಗಿ ಮತ್ತು ಸಂವೃದ್ಧವಾಗಿ ವಿಶ್ವಕ್ಕೇ ಗುರುವಾಗಿ  ಇರುವುದರಲ್ಲಿ ಸಂದೇಹವೇ ಇಲ್ಲ.

ಏನಂತೀರೀ?

ಅರ್ಥಪೂರ್ಣ ಸ್ವಾತಂತ್ರ್ಯೋತ್ಸವದ ಆಚರಣೆ

ಆಗಸ್ಟ್ 15, 1947ರಂದು ಬ್ರಿಟಿಷರ ದಾಸ್ಯದಿಂದ ಹೊರಬಂದು ಭಾರತ ಸ್ವಾತಂತ್ರ್ಯ ಪಡೆದ ನಂತರ ಪ್ರತೀ ವರ್ಷವೂ ಸಡಗರ ಸಂಭ್ರಮಗಳಿಂದ ಸರ್ಕಾರದ ವತಿಯಿಂದ, ಸಂಘಸಂಸ್ಥೆಗಳು ಮತ್ತು ಶಾಲಾಕಾಲೇಜುಗಳಲ್ಲಿ ಸ್ವಾತಂತ್ರ್ಯೋತ್ಸವನ್ನು ಆಚರಿಸಿಕೊಂಡು ಬರುವುದು ವಾಡಿಕೆ. ಬೆಳ್ಳಂಬೆಳ್ಳಿಗೆ ಎಲ್ಲರೂ ಹತ್ತಿರದ ಮೈದಾಗಳಿಗೆ ಹೋಗಿ ನಮ್ಮ ತ್ರಿವರ್ಣಧ್ವಜವನ್ನು ಹಾರಿಸಿ, ಎತ್ತರದ ಧ್ವನಿಯಲ್ಲಿ ಜನಗಣಮನ ರಾಷ್ಟ್ರಗೀತೆಯನ್ನು ಹಾಡಿ ಬೋಲೋ…. ಭಾರತ್ ಮಾತಾ ಕೀ… ಜೈ ಎಂದು ನಾಭಿ ಹರಿಯುವಂತೆ ಘೋಷಣೆ ಕೂಗುವ ಸಂತೋಷವನ್ನು ಹೇಳುವುದಕ್ಕಿಂದ ಅನುಭವಿಸಿವರಿಗೇ ಗೊತ್ತು ಅದರ ಗಮ್ಮತ್ತು. ಧ್ವಜಾರೋಹಣದ ನಂತರ ವಂದಿಮಾಗದರಿಂದ ದೇಶಭಕ್ತಿಯನ್ನು ಬಡಿದೆಬ್ಬಿಸುವ ಭಾಷಣ ಇಡೀ ದಿನವೆಲ್ಲಾ ಮನಸ್ಸಿನಲ್ಲಿಯೇ ರಂಗಣಿಸುತ್ತಿದ್ದವು.

ದುರಾದೃಷ್ಟವಷಾತ್ ಪ್ರಪಂಚಾದ್ಯಂತ ಕೂರೋನಾ ಎಂಬ ಮಹಾಮಾರಿ ವಕ್ಕರಿಸಿ ಇಡೀ ಜಗತ್ತನ್ನೇ ಲಾಕ್ ಡೌನ್ ಮಾಡಿರುವ ಕಾರಣ, ಸಾಮಾಜಿಕ ಅಂತರವನ್ನು ಕಾಪಾಡುವುವ ನಿಟ್ಟಿನಲ್ಲಿ ಎಲ್ಲಾ ಉತ್ಸವಗಳೂ ಸಾಂಕೇತಿಕವಾಗಿ ಆಚರಣೆಯಾಗುತ್ತಿರುವ ಸಂದರ್ಭದಲ್ಲಿ ಹುಣಸೂರು ತಾಲ್ಲೂಕ್ಕಿನ ಚಿಲ್ಕುಂದ ಗ್ರಾಮದ ಬಾಲಕಿ ಪ್ರಜ್ಞಾ ಬೇಸಿಗೆ ರಜೆಗೆಂದು ಗಂಗಾವತಿಯಲ್ಲಿರುವ ಅಜ್ಜಿಯ ಮನೆಗೆ ಬಂದು ಊರಿಗೆ ಮರಳಲಾಗದೇ ಅಜ್ಜಿಯ ಮನೆಯಿಂದಲೇ Online ಮೂಲಕ ಅಭ್ಯಾಸ ನಡೆಸುತ್ತಿದ್ದಾಳೆ.

ಈ ಬಾರಿ ಸಂಭ್ರಮದಿಂದ 74ನೇ ಸ್ವಾತ್ರಂತ್ಯ್ರ ದಿನಾಚರಣೆಯನ್ನು ಆಚರಿಸಲು ಆಗದೇ ಹೋದ್ದಕ್ಕೆ ಸುಮ್ಮನೇ ಪರಿತಪಿಸಿಕೊಂಡು ಕೂರದೇ, ತನ್ನ ಅಮ್ಮ, ಅಜ್ಜಿ ಮತ್ತು ಅಜ್ಜನ ಜೊತೆ ಮನೆಯಲ್ಲಿಯೇ ಸಡಗರ ಸಂಭ್ರಮಗಳಿಂದ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಸ್ವಾತ್ರಂತ್ಯ್ರ ದಿನಾಚರಣೆಯನ್ನು ಆಚರಣೆ ಮಾಡಿರುವುದು ನಿಜಕ್ಕೂ ಅಭಿನಂದನೀಯ ಮತ್ತು ಅನುಕರಣೀಯವೇ ಸರಿ.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಇಂತಹ ದೇಶಭಕ್ತ ಸಂಸ್ಕಾರವಂತ ಮಕ್ಕಳನ್ನು ಹೆಡೆದ ತಾಯಿ ತಂದೆಯರೂ ಮತ್ತು ಅವರಿಗೆ ವಿದ್ಯೆಯನ್ನು ಕಲಿಸಿಕೊಟ್ಟ ಶಿಕ್ಷಕರು ಮತ್ತು ಸಂಸ್ಕಾರವನ್ನು ಕಲಿಸಿಕೊಟ್ಟ ಅವರ ಸಮಸ್ತ ಕುಟುಂಬದವರು ನಿಜಕ್ಕೂ ಧನ್ಯರು. ಇಂತಹ ಮಕ್ಕಳ ಸಂಖ್ಯೆ ಅಗಣಿತವಾದಲ್ಲಿ ನಮ್ಮ ಭಾರತ ದೇಶ ಅತೀ ಶೀಘ್ರದಲ್ಲಿಯೇ ಮತ್ತೊಮ್ಮೆ ವಿಶ್ವಗುರುವಾಗುವುದರಲ್ಲಿ ಸಂದೇಶವೇ ಇಲ್ಲ

ಏನಂತೀರೀ?

73ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

ಈ ಬಾರಿಯ ಆಗಶ್ಟ್ 15, 2019 ಒಂದು ರೀತಿಯ ಅಪರೂಪದ ದಿನ. ನಾಡಿಗೆ 73ನೇ  ಸ್ವಾತಂತ್ರ್ಯ ದಿನಾಚರಣೆ, ಕೆಚ್ಚದೆಯ ಸೇನಾನಿ ಸಂಗೊಳ್ಳಿ ರಾಯಣ್ಣನ ಜನ್ಮದಿನದ ಸಡಗರವಾದರೇ  ಇನ್ನು ಮನೆಗಳಲ್ಲಿ ನಾರಿಯರಿಗೆ   ರಕ್ಷಾಬಂಧನದ  ಸಂಭ್ರಮ,  ಬಹುತೇಕ ನರರಿಗೆ ನೂಲುಹುಣ್ಣಿಯ ಆಚರಣೆ.  ಅಂಗಡಿಯಲ್ಲಿ ಒಂದೆಡೆ ನೂರಾರು ತ್ರಿವರ್ಣ ಧ್ವಜದ ಭರಾಟೆಯಾದರೆ ಮತ್ತೊಂದೆಡೆ ಸಾವಿರಾರು ರಾಖಿಗಳ  ಸರಮಾಲೆ ಮತ್ತೊಂದೆಡೆ ಸದ್ದಿಲ್ಲದೆ ಕೆಲವಾರು ಜನಿವಾರಗಳ ಮಾರಾಟ. ಒಟ್ಟಿನಲ್ಲಿ ಎಲ್ಲರಿಗೂ ಕೊಂಡಾಟವೇ ಕೊಂಡಾಟ.

ಮೂರ್ನಾಲ್ಕು  ದಿನಗಳಿಂದ  ಆರೋಗ್ಯ ಸರಿಯಿಲ್ಲದೇ  ಗೃಹಬಂಧನದಲ್ಲಿಯೇ ಇದ್ದ ನನಗೆ ಇಂದು ಬೆಳಿಗ್ಗೆ ಒಂದು ರೀತಿಯ ಬಿಡುಗಡೆಯ ಅನುಭವ. ಬೆಳ್ಳಂಬೆಳಿಗ್ಗೆ ಸ್ನಾನ ಸಂಧ್ಯಾವಂದೆನೆಗಳನ್ನು ಮುಗಿಸಿ, ಗಣವೇಶಧಾರಿಯಾಗಿ ರಕ್ಷಾಬಂಧನದ ಕಾರ್ಯಕ್ರಮದಲ್ಲಿ ಭಾಗವಹಿಸಿ  ಒಂದು ಕಾಲದಲ್ಲಿ ವಿಶ್ವಗುರುವಾಗಿದ್ದ ನಮ್ಮ ದೇಶ ಇಂದು ನಾನಾ ಕಾರಣಗಳಿಂದಾಗಿ  ಹಿಂದುಳಿದಿರುವ ಸಂದರ್ಭದಲ್ಲಿ ಮತ್ತೊಮ್ಮೆ ನಮ್ಮ ದೇಶವನ್ನು ಪರಮ ವೈಭದವದ ಸ್ಥಿತಿಗೆ ಕೊಂಡೊಯ್ಯುವ ನಮ್ಮ ಪ್ರಕ್ರಿಯೆಯಲ್ಲಿ  ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿ  ಪರಿಸವನ್ನೂ ಉಳಿಸೋಣ ಮತ್ತು ಬೆಳೆಸೋಣ ಎಂದು ಸಂಕಲ್ಪ ತೊಟ್ಟು ಕೇಸರೀ ಕಂಕಣವನ್ನು(ರಕ್ಷೆ) ಕಟ್ಟಿಕೊಂಡು ಭಾರತ್ ಮಾತಾ ಕೀ ಜೈ ಎಂದು  ಒಕ್ಕೊರಲಿನ ಘೋಷಣೆ ಕೂಗಿ ಪರಸ್ಪರ ಸಿಹಿ ಹಂಚಿಕೊಳ್ಳುವುದರ ಮೂಲಕ ಆರಂಭವಾಯಿತು.

ಕೆಲವೇ ನಿಮಿಷಗಳಲ್ಲಿ ಗಣವೇಶ ಕಳಚಿ ಕೇಸರಿ ಅಂಗಿ ಹಸಿರು ಚೆಡ್ಡಿ  ಅದರ ಮೇಲೊಂದು ಬಿಳಿ ವಸ್ತ್ರ ಧರಿಸಿ ನಮ್ಮ ತ್ರಿವರ್ಣ ಧ್ವಜದ ಹಾಗೆ ವೇಶಧಾರಿಯಾಗಿ ವಿದ್ಯಾರಣ್ಯಪುರದ ಸುವರ್ಣ ಮಹೋತ್ಸವ ಕ್ರೀಡಾಂಗನದಲ್ಲಿ ತ್ರಿಧಾರ ಸಂಸ್ಥೆಯ ಆಶ್ರಯದಲ್ಲಿ ನಡೆದ ನಮ್ಮ ದೇಶದ  73ನೇ  ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಿರಂಗದ ಆರೋಹಣ ಅದರ ಜೊತೆಯಲ್ಲಿಯೇ ನೆರೆದಿದ್ದ ಎಲ್ಲಾ ದೇಶ ಭಕ್ತ ಬಂಧುಗಳಿಂದ  ಒಕ್ಕೊರಲಿನ ಜನಗಣಮನ.

ಬ್ರಿಟಿಷರ ವಿರುದ್ಧ ನೂರಾರು ದೇಶಭಕ್ತರ ತ್ಯಾಗ ಮತ್ತು ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ದೇಶದ ಸುರಕ್ಷತೆಯ ಬಗ್ಗೆ  ಯೋಚಿಸುವುದರ ಜೊತೆಗೆ ಜನರ ಆರೋಗ್ಯದಿಂದಿರಲು  ಪರಿಸರ ಮತ್ತು ಸ್ವಚ್ಚತೆಯ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕು. ದೇಶ ಎಂದರೆ ಕೇವಲ ನೆಲ ಜಲವಲ್ಲ. ಅಲ್ಲಿಯ ಭಾಷೆ, ಸಂಸ್ಕೃತಿ, ಅಚಾರ ವಿಚಾರಗಳ ಸಮ್ಮಿಳನ. ಹಾಗಾಗಿಯೇ ಒಂದು ಕಾಲದಲ್ಲಿ ಭಾರತ ವಿಶ್ವಗುರುವಾಗಿತ್ತು. ನಮ್ಮ ಜನ  ಸ್ವಾಭೀಮಾನದಿಂದ ಕೊಂಚ ವಿಚಲಿತರಾಗುತ್ತಿದ್ದಂತೆಯೇ   ನಿರಂತರ ವಿದೇಶೀ ಧಾಳಿಗೆ ತುತ್ತಾಗಿ ನಮ್ಮ ತನವನ್ನೇ ಮರೆತಿದ್ದವು ಈಗ ಮತ್ತೊಮ್ಮೆ ನಮ್ಮ ತನವನ್ನು ಜಾಗೃತಗೊಳಿಸಿ ಮತ್ತೊಮ್ಮೆ ಭಾರತವನ್ನು ವಿಶ್ವಗುರುವನ್ನಾಗಿ ಮಾಡಬೇಕೆಂದು ಅತ್ಯಂತ ಸರಳವಾಗಿ ಮತ್ತು ಆಷ್ಟೇ ಕಠು ನುಡಿಯಲ್ಲಿ  ಕಾರ್ಯಕ್ರಮದ ವಕ್ತಾರರಾದ ಶ್ರೀ ಅರುಣ್ ಕುಮಾರ್ ಅವರು ಕರೆ ಕೊಟ್ಟರು.

ಇನ್ನು  ನಿವೃತ್ತ ಕಲೋನೆಲ್ ಶ್ರೀ ಪಿ.ವಿ ಹರಿಯವರು ತಮ್ಮ ಚಿಕ್ಕ ಮತ್ತು ಚೊಕ್ಕದಾದ ಹಿತ ನುಡಿಗಳಲ್ಲಿ ಸಾಧನೆ ಇಲ್ಲದೆ ಸತ್ತರೆ ಸಾವಿಗೇ ಅವಮಾನ. ಅದೇ ರೀತಿ ಆದರ್ಶವಿಲ್ಲದೇ ಬದುಕಿದರೇ ಅದು ಆದರ್ಶಕ್ಕೇ ಅವಮಾನ. ಇಂದಿನ ಯುವಜನತೆ ಜೀವನದಲ್ಲಿ  ಗೊತ್ತು ಗುರಿಯ ಆದರ್ಶವಿಲ್ಲದೇ ಸಾಧನೆಯೇ ಮಾಡದೇ ಕಳೆಯುವ ಬದಲು ಸೈನ್ಯಕ್ಕೆ ಸೇರಿ. ಶಿಸ್ತಿನ ಸಿಪಾಯಿಗಳಾಗಿ. ದೇಶ ಸೇವೆ ಈಶಸೇವೆ. ಹಾಗಾಗಿ ಎಲ್ಲಾ ಪೋಷಕರು ತಮ್ಮ ತಮ್ಮ ಮಕ್ಕಳು ಕೇವಲ ಡಾಕ್ಟ್ರರ್ ಇಂಜಿನೀಯರ್ ಮಾಡುವ ಬದಲು ಅವರನ್ನು ದೇಶ ರಕ್ಷಣೆಗಾಗಿ ಕಡ್ಡಾಯ ಪೂರ್ವಕವಾಗಿ ಕಳುಹಿಸಬೇಕೆಂದು ಆಗ್ರಹಿಸಿದರು.

ಎಲ್ಲಕ್ಕಿಂತಲೂ ಅತೀ ಹೆಚ್ಚಿನ ಮೆಚ್ಚುಗೆ  ಪಾತ್ರವಾಗಿದ್ದು  ಕೊಡಗಿನ ಒಂದು ಕುಗ್ರಾಮದಲ್ಲಿ ಜನಿಸಿ, ಕನ್ನಡ ಮಾಢ್ಯಮದಲ್ಲಿಯೇ ತನ್ನ ವಿದ್ಯಾಭ್ಯಾಸ ಮುಗಿಸಿ. ತನ್ನ ಸ್ವಸಾಮಥ್ಯದಿಂದಲೇ  ಸ್ಪರ್ಥೆಯ ಅಂತಿಮ ಕ್ಷಣದಲ್ಲಿ ದೈಹಿಕವಾಗಿ ಎಷ್ಟೇ ನೋವುಂಡರೂ, ತನ್ನ ಪೋಷಕರಿಗೆ ಮತ್ತು ತನ್ನ ಗುರುಗಳಿಗೆ ಕೊಟ್ಟ ಮಾತಿನಂತೆ 200ಮೀ ಓಟದಲ್ಲಿ ಸ್ವರ್ಣ ಪದಕಗಳಿಸಿ ಪಾಕೀಸ್ಥಾನದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಕ್ಕೆ ಹೆಮ್ಮೆಯನ್ನು ತಂದ ಅರ್ಜುನ ಪ್ರಶಸ್ತಿ ವಿಜೇತ, ಶ್ರೀ ಅರ್ಜುನ್ ದೇವಯ್ಯನವರ ಹಿತ ವಚನ ಮತ್ತು ಅವರು ಬೋಧಿಸಿದ  ಪ್ರಮಾಣ ವಚನ.

ಎಲ್ಲರೂ ಕಂಡಿತವಾಗಿಯೂ ನಮ್ಮ ನಮ್ಮ ಮಾತೃಭಾಷೆಗಳನ್ನು ಕಲಿಯಲೇ ಬೇಕು ಆದರೆ ಅದರ ಜೊತೆ ಜೊತೆಯಲ್ಲಿ ನಾವು ಭಾರತದ ಇತರೇ ರಾಜ್ಯಗಳು ಮತ್ತು ವಿದೇಶಗಳಿಗೆ ಹೋದಾಗ ನಮ್ಮ ತನ ನಮ್ಮ ಸಂಸ್ಕೃತಿಗಳನ್ನು ಇತರೊಂದಿಗೆ ವ್ಯಕ್ತ ಪಡಿಸಲು ಎಲ್ಲಾ ಭಾಷೆಗಳನ್ನು ಕಲಿಯಲೇ ಬೇಕು ಅದೇ ರೀತಿ ಇಂದಿನ ಬಹುತೇಕರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಬಳಕೆಯಲ್ಲಿಯೇ ಕಳೆಯುತ್ತಿರುವುದು ನಿಜಕ್ಕೂ ವಿಷಾಧನೀಯ.  ಮೊಬೈಲ್ ಜೀವವವಲ್ಲ ಮತ್ತು ಜೀವನದ ಅವಿಭಾಗ್ಯ ಅಂಗವಂತೂ ಅಲ್ಲವೇ ಅಲ್ಲ. ಮೊಬೈಲ್ ಒಂದು ಸಂಪರ್ಕ ಸಾಧನ ಮತ್ತು ಅದನ್ನು ಅಗತ್ಯವಿದ್ದಾಗ ಮಾತ್ರ ಬಳಸಿ ಎಂದು ಕಿವಿಮಾತು ಹೇಳಿ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೆರೆದಿದ್ದವರೆಲ್ಲರಿಗೂ ಬೋಧಿಸಿದರು.

ಮಹಿಳಾ ಸಮಾನತೆ

ಭಾರತದ ಪ್ರಜೆಯಾದ ನಾನು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಹಾಗೂ ಸಹೋದರತೆಯ ಸಂಕೇತವಾದ “ರಕ್ಷಾ ಬಂಧನ”ದಿನವಾದ ಇಂದು, ಮಹಿಳೆಯರನ್ನು ಸಮಾನ ದೃಷ್ಟಿ ಯಲ್ಲಿ ಪರಿಗಣಿಸಿ,ಸಮಾಜದ ಪ್ರತಿಯೊಂದು ವಲಯದಲ್ಲಿಯೂ ಉತ್ತಮ ಸ್ಥಾನ ನೀಡಿ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿ ಮಹಿಳೆಯರ ಸಮಾನತೆಯನ್ನು ಎತ್ತಿ ಹಿಡಿಯುತ್ತೇನೆಂದು  ಪ್ರತಿಜ್ಞೆ ಮಾಡುತ್ತೇನೆ.

ಪ್ಲಾಸ್ಟಿಕ್ ಮುಕ್ತ ಸ್ವಚ್ಫ ಭಾರತ

ಭಾರತದ ಪ್ರಜೆಯಾದ ನಾನು,     ಪ್ಲಾಸ್ಟಿಕನ್ನು  ಬಳಸೋದಿಲ್ಲ , ಪ್ಲಾಸ್ಟಿಕ್ಕನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ ಮತ್ತು ಪ್ಲಾಸ್ಟಿಕ್ ಸಾರ್ವಜನಿಕ ಸ್ಥಳದಲ್ಲಿ ಬಿದ್ದಿರುವುದನ್ನು ಕಂಡರೆ ಅದನ್ನು  ತ್ಯಾಜ್ಯ ಸಂಗ್ರಹಾಲಯಕ್ಕೆ ಕಳುಹಿಸುತ್ತೇನೆ. ನನ್ನ ನೆರೆಹೊರೆಯವರಿಗೂ ಪ್ಲಾಸ್ಟಿಕ್ ಬದಲಿ ವಸ್ತುಗಳನ್ನು ಬಳಸುವ ಬಗ್ಗೆ ಮನವರಿಕೆ ಮಾಡಿಸುವುದರ ಮೂಲಕ ನಮ್ಮ ಪರಿಸರವನ್ನು  ಸ್ವಚ್ಚವಾಗಿಡಲು ನನ್ನ ಸಂಪೂರ್ಣ ಪ್ರಯತ್ನವನ್ನು ಮಾಡುತ್ತೇನೆಂದು  ತಾಯಿ ಭಾರತಾಂಭೆಯ ಸಮ್ಮುಖದಲ್ಲಿ , ರಾಷ್ಟ್ರ ಧ್ವಜದ ನೆರಳಿನಲ್ಲಿ ನಿಂತು ಪ್ಲಾಸ್ಟಿಕ್ ಮುಕ್ತ ಭಾರತದ ಮೂಲಕ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ   ಪ್ರತಿಜ್ಞೆಯನ್ನು ಈ ಪುಣ್ಯ ದಿನದಂದು ಮಾಡುತ್ತೇನೆ.

ಮಹಿಳೆಯರ ಸುರಕ್ಷತೆ

ಭಾರತದ ಪ್ರಜೆಯಾದ ನಾನು  ಸಹೋದರತೆಯ ಸಂಕೇತವಾದ “ರಕ್ಷಾ ಬಂಧನ”ದಿನವಾದ ಇಂದು, ಮಹಿಳೆಯರನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳುತ್ತೇನೆ , ಮಹಿಳೆಯರ ಶಿಕ್ಷಣ ,ಆರೋಗ್ಯ , ಆರ್ಥಿಕ, ಸಾಮಾಜಿಕ  ಸ್ಥಿತಿಗತಿಗಳ ಸುಧಾರಣೆಗೆ ಶ್ರಮಿಸುತ್ತೇನೆ, ಭಾರತದ ಸಂವಿಧಾನ ಮಹಿಳೆಯರಿಗೆ ನೀಡಿರುವ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗದ ರೀತಿಯಲ್ಲಿ  ನಡೆದುಕೊಳ್ಳುತ್ತೇನೆ. ಯಾವುದೇ ಸ್ಥಳಗಳಲ್ಲಿ ಮಹಿಳೆಯರಿಗೆ, ಅವರ ಹಕ್ಕುಗಳಿಗೆ ಚ್ಯುತಿಯಾಗುವಂತಹ  ಘಟನೆಗಳು ನಡೆದರೆ ಆ ಘಟನೆಯನ್ನು ಖಂಡಿಸುತ್ತೇನೆ. ಈ ಮೂಲಕ ಮಹಿಳೆಯ ಸುರಕ್ಷತೆಗೆ ಶಪಥ ಮಾಡುತ್ತೇನೆ.

ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ ಅಂದರೆ ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು  ವಾಸಿಸುತ್ತಾರೆ ಎನ್ನುವ ಸಂಸ್ಕೃತಿ ಹೊಂದಿರುವ ನಮ್ಮ ನಾಡಿನಲ್ಲಿ ಅದರಲ್ಲೂ ವಿಶೇಷವಾಗಿ ರಕ್ಷಾಬಂಧನದಂದು ಮಹಿಳೆಯರಿಗೆ ಸಮಾನತೆ ಮತ್ತು ಸುರಕ್ಶತೆ ವಹಿಸಿರುವುದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ಭಾರತದ ಮೂಲಕ ಸ್ವಚ್ಛ ಭಾರತದ ಕನಸನ್ನು ನನಸು ಮಾಡುವ ಪ್ರತಿಜ್ಞೆ ನಿಜಕ್ಕೂ ಅರ್ಥಪೂರ್ಣವಾಗಿತ್ತು.  ಕಾರ್ಯಕ್ರಮಕ್ಕೆ ಬಂದವರೆಲ್ಲರಿಗೂ ರಕ್ಷೆಯನ್ನು ವಿತರಿಸಿ ಪರಸ್ಪರ ಪರಿಚಯ ಮಾಡಿಕೊಂಡು ರಕ್ಷೆಯನ್ನು ಕಟ್ಟಿಸಿದ್ದು ಹೆಚ್ಚಿನ ಮಹತ್ವ ಪಡೆಯಿತು. ಪ್ರೇಕ್ಷಕರು ಕೂರಲು ವ್ಯರಸ್ಥೆ ಮಾಡಿದ್ದ ಆಸನದ ಸುತ್ತಾಲೂ ನೂರಾರು ದೇಶಭಕ್ತರ ಮತ್ತು ಸಾಧಕರ ಕಿರುಪರಿಚಯದ ಪ್ರದರ್ಶನ ನಿಜಕ್ಕೂ ಅಪರೂಪದ ಮತ್ತು ಅನನ್ಯವಾದ ಕಾರ್ಯವಾಗಿತ್ತು. ಇಂದಿನ ಕಾಲದಲ್ಲಿ ದೇಸಕ್ಕಾಗಿ ಬಲಿದಾನ ಮಾಡಿದವರ ಬಗ್ಗೆ ಒಂದೇ ಸ್ಥಳದಲ್ಲಿ ಪರಿಚಯಮಾಡಿಸಿದ್ದದ್ದು ನಿಜಕ್ಕೂ ಅಭಿನಂದನೀಯ ಮತ್ತು ಅನುಕರಣೀಯ.

ಶ್ರೀಮತಿ ಶೃತಿ ಕೀರ್ತಿ ಸುಬ್ರಹ್ಮಣ್ಯರವರ ಕಂಚಿನ ತಂಠದ ವಂದೇಮಾತರಂ ನೊಂದಿಗೆ  ಮೊದಲ ಹಂತದ ಕಾರ್ಯಕ್ರಮ ಮುಕ್ತಾಯವಾಗಿ ಶ್ರೀಮತಿ ಆಶಾರವರ ಲಘು ಯೋಗ ವ್ಯಾಯಾಮದೊಂದಿಗೆ ದೇಹವನ್ನು ಸಡಿಲ ಮಾಡಿಕೊಂಡು ಇಂದಿನ ಕಾರ್ಯಕ್ರಮದ ಪ್ರಮುಖ ಆಕರ್ಶಣೆಯಾಗಿದ್ದ ದೇಶಕ್ಕಾಗಿ ಓಟಕ್ಕೆ ಎಲ್ಲರೂ ಸಿದ್ಧರಾದರು.   ಆಬಾಲ ವೃದ್ಧರಾಗಿ ಅವರ ಶಕ್ತಾನುಸಾರ 1  ಮತ್ತು 5 ಕಿ,ಮೀ ಓಟವನ್ನು ಮುಗಿಸಿ ಪುನಃ ಮೈದಾನಕ್ಕೆ ಬರುತ್ತಿದ್ದಂತೆಯೇ  ಓಟದಲ್ಲಿ ಭಾಗವಹಿಸಿದಕ್ಕೆ ಪ್ರಮಾಣ ಪತ್ರ  ಕೊಡುವುದರ ಜೊತೆಗೆ  ದಣಿದವರಿಗೆ ನೀರು ಕೊತೆಗೆ  ರುಚಿ ರುಚಿಯಾದ  ಪ್ರಸಕ್ತ ಹಮಾಮಾನಕ್ಕೆ ತಕ್ಕುದಾದ ಬಿಸಿ ಬಿಸಿಯಾದ ಉಪಹಾರವನ್ನು  ಹಸನ್ಮುಖರಾದ ಸ್ವಯಂಸೇವಕು ಅಚ್ಚುಕಟ್ಟಾಗಿ  ಎಲ್ಲರಿಗೂ ಪರಿಸರ ಸ್ನೇಹಿ ಅಡಿಕೆ ತಟ್ಟೆಗಳಲ್ಲಿ ಬಡಿಸಿ ಕೊಟ್ಟು ಎಲ್ಲರ ಮೆಚ್ಚಿಗೆಗೆ ಪಾತ್ರರಾದರು. ಇನ್ನು ಬಳೆಸಿದ ಲೋಟ ಮತ್ತು ತಟ್ಟೆಗಳನ್ನು ನಿಗಧಿತ ಜಾಗಗಳಲ್ಲಿಯೇ ಸ್ವಯಂಪ್ರೇರಿತರಾಗಿ ಹಾಕಿದ್ದು  ಇಂದಿನ ಪ್ರತಿಜ್ಞಾ ಬೋಧನೆಗೆ ಅನ್ವರ್ಧದಂತಿತ್ತು,

ಒಂದು ಕಡೆ ಹೊಟ್ಟೆಗೆ ಆಹಾರ ಹೊಗುತ್ತಿದ್ದರೆ ವೇದಿಕೆಯ ಮೇಲೆ ಮನಸ್ಸಿಗೆ ಮುದ ನೀಡುವಂತಹ ಸ್ಥಳೀಯ ಪ್ರತಿಭೆಗಳಿಂದಲೇ ಬಗೆ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು  ಮಾಡಿದ ಕೆಳದಿ ಚೆನ್ನಮ್ಮನ ನಾಟಕ, ಬಾಲಕಿಯರ ಭರತ ನಾಟ್ಯ, ಬಾಲಕರ  ಸಾಮೂಹಿಕ ತಬಲ ವಾದನ ಕೊತೆಗೆ ವಿವಿಧ ದೇಶ ಭಕ್ತರ ವೇಶ ಭೂಷಣ ಪ್ರದರ್ಶನ ಹೀಗೆ ಇನ್ನೂ ಅನೇಕ ಸಾಂಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಮನಸೂರೆ ಗೊಂಡಿತು.

ಧೃಢ ಸಂಕಲ್ಪದಿಂದ ಯಾವುದೇ ಒಳ್ಳೆಯ ಕಾರ್ಯಕ್ರಮ ಮಾಡಿದರೆ ಕೇವಲ ಜನಾ ಎನೂ ಜಾನಾರ್ಧನನೂ ಮೆಚ್ಚುತ್ತಾನೆ ಎನ್ನುವುದಕ್ಕೆ ಸಾಕ್ಷಿಯಾಗಿ ಎಷ್ಟೇ ದಟ್ಟವಾದ ಮೂಡವಿದ್ದರೂ  ಕಾರ್ಯಕ್ರಮ ಚೆನ್ನಾಗಿ ನಡೆಯುತ್ತಿದ್ದಾಗ  ಪ್ರೇಕ್ಷಕರು ಚಪ್ಪಾಳೆ ತಟ್ತುತ್ತಿದ್ದಾರೆ ಅದ್ದಕ್ಕೆ ಸ್ಪಂದಿಸುವಂತೆ ಮೇಘರಾಜನೂ  ಆಗ್ಗಿಂದ್ದಾಗೆ ಕಣ್ಣಾ ಮುಚ್ಚಾಲೆ ಯಾಡುತ್ತಾ ಒಂದು ಚೂರೂ ಮಳೆ ಸುರಿಸದೇ,  ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ಅತ್ಯಂತ ಯಶಸ್ವಿಯಾಗಿ  ನಡೆದು, ಇಂತಹ ಕಾರ್ಯಕ್ರಮಗಳನ್ನು ಇನ್ನೂ  ಹೆಚ್ಚಾಗಿ ಮಾಡುವ ಹುಮ್ಮಸ್ಸನ್ನು ಆಯೋಗಕರಲ್ಲಿ ತುಂಬಿತು ಎಂದರೆ ನಿಜಕ್ಕೂ ಅತಿಶಯೋಕ್ತಿಯೇನಲ್ಲ.

ಈ ಬಾರಿಯ  ಸ್ವಾತಂತ್ರ್ಯ ದಿನಾಚರಣೆ ಗುರುವಾರ ಬಂದಿದ್ದರಿಂದ, ಶುಕ್ರವಾರ ಒಂದು ದಿನ ರಜೆ ಹಾಕಿ, ಶನಿವಾರ ಮತ್ತು ಭಾನುವಾರದ ಜೊತೆ ನಾಲ್ಕು ದಿನಗಳ ರಜೆಯನ್ನು ಮಜಾ ಮಾಡುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ  ಈ ರೀತಿಯಾಗಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ  ಖಂಡಿತವಾಗಿಯೂ ಎಲ್ಲರಲ್ಲೂ ದೇಶ ಪ್ರೇಮವನ್ನು ಜಾಗೃತ ಗೊಳಿಸಬಹುತಲ್ಲವೇ?

ಏನಂತೀರೀ?

ID