ಸಾಧಾರಣವಾಗಿ ನಮ್ಮ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಬರುವುದೇ ಶ್ರಾವಣ ಮಾಸದಲ್ಲಿ. ಹೇಳೀ ಕೇಳಿ ಶ್ರಾವಣ ಮಾಸ ಭಾರತೀಯರಿಗೆ ಸಾಲು ಸಾಲು ಹಬ್ಬಗಳ ಸಂಭ್ರಮದ ಮಾಸ. ನಮ್ಮ ಭಾರತೀಯರು ತಮ್ಮ ಪ್ರತಿಯೊಂದು ಹಕ್ಕುಗಳಿಗೂ ಸಂವಿಧಾನವನ್ನು ಉಲ್ಲೇಖಿಸುವವರು, ಅದೇಕೋ ಏನೋ ಸ್ವಾತಂತ್ಯ್ರೋತ್ಸವ ಮತ್ತು ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ತಮ್ಮ ಸಂಪ್ರದಾಯದ ಭಾಗವಾಗಿ ಮಾಡಿಕೊಳ್ಳದೇ ಇರುವುದು ಸೋಜಿಗವೇ ಸರಿ. ಬಹುತೇಕರು ಸ್ವಾತ್ರಂತ್ರ್ಯೋತ್ಸವದಂದು ಸಿಕ್ಕ ರಜೆಯನ್ನು ಮಜಾ ಮಾಡಲು ಬಯಸುವವರೇ ಹೆಚ್ಚು. ಈ ರಾಷ್ಟ್ರೀಯ ಹಬ್ಬಗಳು ವಾರಾಂತ್ಯದ ಹಿಂದು ಇಲ್ಲವೇ ಮುಂದೆ ಬಂದರಂತೂ ಕೇಳುವುದೇ ಬೇಡ. ಅದರ ಜೊತೆಗೆ ಒಂದೆರಡು ವಯಕ್ತಿಕ ರಜೆಗಳನ್ನು ಹಾಕಿ ಮೋಜು ಮಸ್ತಿ ಮಾಡಲು ಹೋರಟೇ ಬಿಡುವುದು ನಿಜಕ್ಕೂ ಬ್ರಿಟೀಷರ ವಿರುದ್ಧ ನಿಸ್ವಾರ್ಥವಾಗಿ ಮನೆ ಮಠ ಬಿಟ್ಟು ತ್ಯಾಗ, ಬಲಿದಾನ ಗೈದಾ ಲಕ್ಷಾಂತರ ಸ್ವಾತ್ರಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನ ಎಂದೇ ಭಾವಿಸಬೇಕು. ಇನ್ನು ಸರ್ಕಾರೀ ನೌಕರರು ಮತ್ತು ಇನ್ನೂ ಕೆಲವು ಧುರೀಣರು ಕಾಟಾಚಾರಕ್ಕೆಂದು ತಮ್ಮ ತಮ್ಮ ಕಛೇರಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅಚರಿಸಿದರೇ, ಎಲ್ಲೋ ಅಲ್ಲಿ ಇಲ್ಲಿ ಕೆಲವೊಬ್ಬ ಹಿರಿಯರುಗಳು ಮಾತ್ರವೇ ದೂರದರ್ಶನದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ, ಪಥಸಂಚಲನ ಮತ್ತು ವಿವಿಧ ಕವಾಯುತುಗಳನ್ನು ನೋಡಿ ಸಂಭ್ರಮಿಸುತ್ತಾರೆ.
ಈ ಬಾರಿ ಪ್ರಪಂಚಾದ್ಯಂತ ಕೂರೋನಾ ಎಂಬ ಮಹಾಮಾರಿ ಆವರಿಸಿರುವ ಕಾರಣ ಬಹುತೇಕರು ಹೊರಗೆಲ್ಲೂ ಹೋಗದೇ ಟಿವಿಗಳ ಮುಂದೆಯೇ ಸ್ವಾತ್ರಂತ್ರ್ಯೋತ್ಸವವನ್ನು ವೀಕ್ಷಿಸಿದರೆ, ಬೆಂಗಳೂರಿನ ದೊಡ್ಡಬೊಮ್ಮಸಂದ್ರದ ಆದರ್ಶ ಕಲಾಕುಂಜ ಎಂಬ ಸಂಗೀತ ಮತ್ತು ನೃತ್ಯಕಲೆಯನ್ನು ಕಲಿಸಿಕೊಡುವ ಲಲಿತಕಲಾ ಶಾಲೆಯ ಅಕ್ಕ ಪಕ್ಕ ಇರುವ ಪುಟ್ಟ ಪುಟ್ಟ ಮಕ್ಕಳೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸಿ, ಚಪ್ಪಾಳೆ ತಟ್ಟಿ ಸಂಭ್ರಮಿಸಿ, ದೀಪ ಬೆಳಗಿ, ಒಕ್ಕೊರಲಿನಿಂದ ರಾಷ್ಟ್ರಗೀತೆಯನ್ನು ಹಾಡಿ ತಮ್ಮ ಎರಡೂ ಕೈಗಳನ್ನೆತ್ತಿ ಜೋರಾಗಿ ಭಾರತ್ ಮಾತಾ ಕೀ ಜೈ ಮತ್ತು ವಂದೇ.. ಮಾತರಮ್ ಎಂದು ಹೇಳುತ್ತಿರುವ ದೃಶ್ಯ ನೋಡಿ ಮನಸ್ಸಂತೋಷವಾಯಿತು.
ಇಂದಿನ ಪುಟ್ಟ ಪುಟ್ಟ ಮಕ್ಕಳೇ, ದೇಶದ ನಾಳಿನ ಪ್ರಜ್ಞಾವಂತ ಪ್ರಜೆಗಳು. ಅಂತಹ ಮಕ್ಕಳಿಗೆ ಚಿಕ್ಕಂದಿನಿಂದಲೇ ದೇಶಭಕ್ತಿಯನ್ನು ಈ ರೀತಿಯಲ್ಲಿ ತುಂಬುವಂತಾದರೇ, ಆ ಮಕ್ಕಳು ಬೆಳೆದು ದೊಡ್ಡವರದ ಮೇಲೆ ಖಂಡಿತವಾಗಿಯೂ ಸತ್ರ್ಪಜೆಗಳಾಗುವುದರಲ್ಲಿ ಸಂದೇಹವೇ ಇಲ್ಲ. ಇಂತಹ ಮಹತ್ಕಾರ್ಯವನ್ನು ಮಾಡಿದ ಆದರ್ಶ ಕಲಾಕುಂಜದ ನಿರ್ವಾಹಕಿ ಶ್ರೀಮತಿ ಲಕ್ಷ್ಮೀ ಆನಂದ್ ಮತ್ತು ಅವರ ಇಡೀ ಕುಟುಂಬ ನಿಜಕ್ಕೂ ಅಭಿನಂದನಾರ್ಹರು ಮತ್ತು ಅವರ ಈ ಶ್ಲಾಘನೀಯವಾದ ಕೆಲಸ ಅನುಕರಣೀಯವೂ ಹೌದು.
ದೇಶಾದ್ಯಂತ ಇರುವ ಇಂತಹ ಲಲಿತಕಲಾ ಕೇಂದ್ರಗಳು ಕಲೆಯೊಂದಿಗೆ ಈ ರೀತಿಯಾಗಿ ದೇಶಭಕ್ತಿಯ ಸಂಸ್ಕಾರವನ್ನೂ ತುಂಬುವಂತಾದರೇ, ಭವಿಷ್ಯದಲ್ಲಿ ನಮ್ಮ ದೇಶ ಸುಭದ್ರವಾಗಿ ಮತ್ತು ಸಂವೃದ್ಧವಾಗಿ ವಿಶ್ವಕ್ಕೇ ಗುರುವಾಗಿ ಇರುವುದರಲ್ಲಿ ಸಂದೇಹವೇ ಇಲ್ಲ.
ಏನಂತೀರೀ?