ಛಲವಿದ್ದಲ್ಲಿ ಗೆಲುವಿದೆ.

ಶಂಕರ ಒಂದು ಸಣ್ಣ ಅಕೌಂಟಿಂಗ್ ಸಾಫ್ಟ್ವೇರ್  ಕಂಪನಿಯೊಂದರಲ್ಲಿ  ಕಸ್ಟಮರ್ ಸಪೋರ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.  ದಿನ ನಿತ್ಯದ ಕೆಲಸಗಳಿಗೆ ಇನ್ನಷ್ಟು ಜನರ  ಅವಶ್ಯಕತೆ ಇದ್ದದ್ದರಿಂದ ಕೆಲವು ಸಿಬ್ಬಂಧ್ಧಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಸಂಧರ್ಭದಲ್ಲಿಯೇ ಸತೀಶ್ ಅಲ್ಲಿಗೆ ಕೆಲಸ ಸೇರಿಕೊಂಡ ಅವನ ಜೊತೆಗೆ ಅವನ ಸಹೋದ್ಯೋಗಿಯಾಗಿದ್ದ ಬಾಲನನ್ನೂ ಒಂದೆರಡು ವಾರಗಳ ಅಂತರದಲ್ಲಿ ಅಲ್ಲಿಯೇ ಕೆಲಸಕ್ಕೆ ಸೇರಿಸಿದ. ಸತೀಶ್ ಬಿಎಸ್ಸಿ ಪದವೀಧರ ಆಗಷ್ಟೇ ಆವನಿಗೆ ಮದುವೆಯಾಗಿತ್ತು. ಬಾಲ ಬಿಕಾಂ ಪದವೀಧರ ಅವನಿಗಾಗಲೇ ಮದುವೆಯಾಗಿ ಒಬ್ಬ ಸಣ್ಣ ವಯಸ್ಸಿನ ಮಗನಿದ್ದ. ಇವರಿಬ್ಬರಿಗಿಂತಲೂ ಸಣ್ಣ ವಯಸ್ಸಿನವನಾಗಿದ್ದ ಶಂಕರನ ಜೊತೆ ಬಹಳ ಬೇಗ ಸ್ನೇಹ ಸಂಬಂಧ ಬೆಳೆದು, ಹೋಗಿ ಬನ್ನಿ ಇಂದ ಹೋಗೋ ಬಾರೋ ಎನ್ನುವಷ್ಟರ ಮಟ್ಟಿಗೆ ಸಲಿಗೆ ಆಯಿತು. ಕೆಲಸದ ಬಗ್ಗೆಯಾಗಲೀ ವಯಕ್ತಿಕ ವಿಷಯಗಳೇ ಆಗಲಿ ಒಬ್ಬರಿಗೊಬ್ಬರು ಹಂಚಿಕೊಂಡು ಸಮಸ್ಯೆಗಳನ್ನು ಬಗೆ ಹರಿಸುಕೊಳ್ಳುತ್ತಿದ್ದರು. ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರುವಷ್ಟು ಆತ್ಮೀಯತೆ ಬೆಳೆದಿತ್ತು.

ಕಂಪನಿ ಇನ್ನೂ ಚಿಕ್ಕದ್ದಾಗಿದ್ದರಿಂದ ಅಲ್ಲಿ ಕೊಡುತ್ತಿದ್ದ ಸಂಬಳ ಬಾಲ ಮತ್ತು ಸತೀಶನಿಗೆ ಸಾಲುತ್ತಿರಲಿಲ್ಲ. ಹಲವಾರು ಸಲ ನಿಗಧಿತ ಸಮಯಕ್ಕೆ ಸಂಬಳ ಕೊಡುತ್ತಿರಲಿಲ್ಲವಾದ್ದರಿಂದ ಸಂಸಾರಸ್ಥರಾಗಿದ್ದ ಅವರಿಬ್ಬರಿಗೆ ಬಹಳ ತೊಂದರೆಯಾಗುತ್ತಿತ್ತು. ಹಾಗಾಗಿ ಸತೀಶ ಸಂಜೆಯ ನಂತರ ಅಥವಾ ರಜೆದಿನಗಳಲ್ಲಿ  ಕೆಲವಾರು ಸಣ್ಣ ಸಣ್ಣ ವ್ಯಾಪಾರಸ್ಥರ ಲೆಕ್ಕಗಳನ್ನು ನೋಡಿಕೊಳ್ಳುತ್ತಿದ್ದರೆ, ಬಾಲ, ಗ್ರಾಫಿಕ್ ಡಿಜೈನಿಂಗನಲ್ಲಿ ಎತ್ತಿದ ಕೈ ಹಾಗಾಗಿ ಸಣ್ಣ ಪುಟ್ಟ ಗ್ರಾಫಿಕ್ ಮತ್ತು ಡಿಟಿಪಿ ಕೆಲಸಗಳನ್ನು ಮಾಡುತ್ತಾ ಹಾಗೂ ಹೀಗೂ ಜೀವನ ನಡೆಸುತ್ತಿದ್ದರು. ಬರು ಬರುತ್ತಾ ಸಂಬಳ ಸರಿಯಾಗಿ ಸಿಗದ ಕಾರಣ ಎಲ್ಲರೂ ಕಂಪನಿ ಬದಲಿಸುವ ನಿರ್ಧಾರಕ್ಕೆ ಬಂದರು.  ಅದೃಷ್ಟವೂ ಏನೋ ಎನ್ನುವಂತೆ ಸತೀಶ ಮತ್ತು ಬಾಲ ಇಬ್ಬರಿಗೂ ಮತ್ತೊಂದು ಕಂಪನಿಯಲ್ಲಿ ಒಳ್ಳೆಯ ಸಂಬಳದೊಂದಿಗೆ ಕೆಲಸ ಸಿಕ್ಕಿದ್ದರಿಂದ ಇಬ್ಬರೂ ಕಂಪನಿ ಬದಲಾಯಿಸಿದರೆ, ಅವರಿಬ್ಬರ ಹಾಗೆ ನಿರ್ಧಾರ ಧೈರ್ಯದ  ತೆಗೆದುಕೊಳ್ಳಲು ಸಾಧ್ಯಾವಾಗದ ಶಂಕರ ಅಲ್ಲಿಯೇ ಕೆಲಸ ಮುಂದುವರಿಸಿದ.

ಹೀಗೆ ಕೆಲವರು  ವರ್ಷಗಳು ಕಳೆದವು. ಸತೀಶನ ಮಗನ ನಾಮಕರಣಕ್ಕೆ  ಶಂಕರ ಹೋದರೆ, ಶಂಕರನ ಮದುವೆಗೆ ಬಾಲ ಮತ್ತು ಸತೀಶನ ಉಪಸ್ಥಿತಿಯಿತ್ತು. ಹಾಗೆಯೇ ಬಾಲನ ಮನೆಯ ಗೃಹಪ್ರವೇಶಕ್ಕೆ ಸತೀಶ ಮತ್ತು ಶಂಕರ ಸಂಸಾರ ಸಮೇತರಾಗಿ ಹಾಜರಾಗಿ, ಒಟ್ಟಿಗೆ ಕೆಲಸ ಮಾಡುತ್ತಿಲ್ಲವಾದರೂ ಗೆಳೆತನವನ್ನು ಇನ್ನೂ ಚೆನ್ನಾಗಿಯೇ ಮುಂದುವರಿಸಿಕೊಂಡು ಹೋಗುತ್ತಾ, ಒಬ್ಬರಿಗೊಬ್ಬರ  ಸುಖಃ ದುಃಖಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಮಧ್ಯದಲ್ಲಿ  ಬಾಲ ಮತ್ತು ಸತೀಶ ಇಬ್ಬರೂ ಎಷ್ಟುದಿನ ಹೀಗೆ ಮತ್ತೊಬ್ಬರ ಕೈಕೆಳೆಗೆ ದುಡಿಯುವುದು ಎಂದು ನಿರ್ಧರಿಸಿ, ಬಾಲ ತನ್ನ ದುಡಿಮೆಯಲ್ಲಿ ಉಳಿಸಿದ್ದ ಹಣದಲ್ಲಿ ನಗರದಿಂದ ಸ್ವಲ್ಪ ಹೊರವಲಯದಲ್ಲಿ ಕೃಷಿ ಜಮೀನನ್ನು ಖರೀದಿಸಿ, ಅಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದನು. ಅವನ ಜಮೀನಿನಲ್ಲಿಯೇ ಸಣ್ಣದೊಂದು ವಾಸಿಸಲು ಯೋಗ್ಯವಾದ ಮನೆಯೊಂದನ್ನು ಕಟ್ಟಿಸಿ ಅಲ್ಲಿ ಒಂದೆರಡು ಕೆಲಸಗಾರರನ್ನು ನೇಮಿಸಿ  ಆರಂಭದಲ್ಲಿ ವಾರಾಂತ್ಯಗಳಿಗೆ ಮೀಸಲಾಗಿದ್ದ ಅವನ ಕೃಷಿ,  ತನ್ನ  ಜಮೀನಿನ ಮಣ್ಣಿಗೆ ಸರಿಹೊಂದುವಂತಹ ತರಕಾರಿ ಬೆಳೆಗಳನ್ನು ಬೆಳೆಯುತ್ತಾ , ಜೊತೆ ಜೊತೆಗೆ ಹೂವು ಮತ್ತು ಹಣ್ಣುಗಳನ್ನು ಬೆಳೆಯುತ್ತಾ,  ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು  ತನ್ನ ಸತತ ಪರಿಶ್ರಮದಿಂದ ನಿಜವಾದ ಮಣ್ಣಿನ ಮಗನಾಗಿಯೇ ಮಾರ್ಪಾಟಾದನು. ಜೊತೆಗೆ ಒಂದೆರೆಡು ದನಕರುಗಳನ್ನು ಸಾಕಿ ಅದರಿಂದ ಉತ್ಪತ್ತಿಯಾಗುವ ಗೊಬ್ಬರದಿಂದಲೇ ತನ್ನ ಮನೆಗೆ ಬೇಕಾಗುವಷ್ಟು ಅಡುಗೆ ಅನಿಲವನ್ನು ತಯಾರಿಸಿಕೊಳ್ಳುವ ಮಟ್ಟಕ್ಕೆ ಬಂದು ಈಗ ಅದೇ ಯಂತ್ರವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಬೇಕಾದವರಿಗೆ ಅಳವಡಿಸುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಚಿಕ್ಕಂದಿನಿಂದಲೂ ಕಾರ್ ಬಗ್ಗೆ ಇದ್ದ ವ್ಯಾಮೋಹ ದಿಂದ ಬಗೆ ಬಗೆಯ ಕಾರ್ ಮಾಲಿಕರಾಗಿದ್ದಾರೆ. ಒಂದೆರಡು ಕಾರ್ಗಳನ್ನು ಓಲಾ-ಊಬರ್ ಟ್ಯಾಕ್ಸಿಗಳಾಗಿ ಪರಿವರ್ತಿಸಿ ಸಮಯ ಸಿಕ್ಕಾಗ ತಾವೇ ಓಲಾ ಕಾರ್ ಚಾಲಕರಾಗಿ ಆ ಕೆಲಸದ ಅನುಭವವನ್ನೂ ಸವಿಯುತ್ತಿದ್ದಾರೆ.

ಬಾಲನಿಂದ ಪ್ರೇರಿತನಾದ ಸತೀಶ ತಾನೂ ಇದ್ದ ಕೆಲಸವನ್ನು ತ್ಯಜಿಸಿ ತನಗೆ ಗೊತ್ತಿದ್ದ ಅಕೌಂಟಿಗ್ ಜೊತೆ  ಜೀವವಿಮೆ ಮತ್ತು ಕೆಲ ಮ್ಯೂಚ್ಯುಯಲ್ ಫಂಡ್ಗಳ ಏಜೆಂಟ್ ಆಗಿ ಸ್ವಾವಲಂಭಿಯಾಗಿ ಜೀವನ ನಡೆಸುತ್ತಿದ್ದಾಗಲೇ ಅದೆಲ್ಲಿಯೋ ಅಡಿಕೆ ತಟ್ಟೆಯ ವ್ಯಾಪಾರದಲ್ಲಿ ಒಳ್ಳೆಯ ಲಾಭವಿದೆ ಎಂದು ತಿಳಿದು, ತನ್ನ ಮಡದಿಯ ಹೆಸರಿನಲ್ಲಿ  ಸರಕಾರದ  ಸ್ತ್ರೀಶಕ್ತಿಯ ಅಡಿಯಲ್ಲಿ ಅಡಿಕೆ ತಟ್ಟೆಯನ್ನು ತಯಾರು ಮಾಡುವ ಸಣ್ಣ ಕಾರ್ಖಾನೆಯನ್ನು ಆರಂಭಿಸಿಯೇ ಬಿಟ್ಟ. ಮೊದಲೇ ಚುರುಕು ಬುದ್ಡಿಯ ಸತೀಶ ಸರ್ಕಾರದ ಎಲ್ಲಾ ರೀತಿಯ ಸೌಲಭ್ಯಗಳನ್ನೂ ಸದುಪಯೋಗ ಪಡಿಸಿಕೊಂಡು ಕೆಲವೇ ದಿನಗಳಲ್ಲಿ ಅತ್ಯುತ್ತಮ ಗುಣಮಟ್ಟದ ಅಡಿಕೆ ತಟ್ಟೆಯ ತಯಾರಕನಾದ.  ಇಂದು ಜಗತ್ತಿನಾದ್ಯಂತ ಆವರ ಅಡಿಕೆ ತಟ್ಟೆಗಳು ಮಾರಾಟವಾಗುತ್ತಿದೆ.  ಅಷ್ಟರಲ್ಲಿಯೇ ತನ್ನ ಪಿತ್ರಾರ್ಜಿತ ಆಸ್ತಿಯ ಪಾಲಿನಿಂದ ಬಂದ ಹಣದಲ್ಲಿ  ಮನೆಯೊಂದನ್ನು ಕಟ್ಟಿಸಿ ಕೆಳಗೆ ತನ್ನ ಅಡಿಕೆ ತಯಾರಿಕೆಯ ಕಾರ್ಖಾನೆ, ಮೊದಲ ಮಹಡಿಯನಲ್ಲಿ ತನ್ನ ಸರಕುಗಳ ದಾಸ್ತಾನು ಮತ್ತು ಎರಡನೆ ಮತ್ತು ಮೂರನೇ ಮಹಡಿಯಲ್ಲಿ ತನಗೆ  ವಾಸಿಸಲು ಯೋಗ್ಯವಾದಂತಹ ಭರ್ಜರಿಯಾಗಿ ಮನೆ ಕಟ್ಟಿಸಿ, ತನ್ನ ಕಾರ್ಖಾನೆಗೆ ಅವಶ್ಯಕವಿದ್ದ ವಿದ್ಯುತ್ ಪಡೆಯಲು ವಿದ್ಯುತ್ ಮಂಡಲಿಗೆ ಅರ್ಜಿಯನ್ನು ಗುಜರಾಯಿಸಿದನು. ಅಲ್ಲಿಂದ ಸತೀಶನ ಗ್ರಹಚಾರ ಕೆಡಲು ಶುರುವಾಯಿತು. ದಿನದಿಂದ ದಿನಕ್ಕೆ  ವಿದ್ಯುತ್ ಮಂಡಳಿಗೆ ಅಲೆಯುವುದೇ ಸತೀಶನ ಕೆಲಸವಾಗಿ ಹೋಯಿತು. ದಾಖಲೆಗಳೆಲ್ಲವೂ ಸರಿಯಿದ್ದರೂ, ಅದು ಸರಿಯಿಲ್ಲ, ಇದು ಸರಿಯಿಲ್ಲ, ಸಾಹೇಬರು ಇಲ್ಲಾ, ಒಂದು ವಾರ   ಬಿಟ್ಟು ಬನ್ನಿ ಹೀಗೆ ಹಾಗೆ ಎಂದು  ಎರಡು ಮೂರು ತಿಂಗಳು ಸತಾಯಿಸಿತೊಡಗಿದರು. ಇದರಿಂದ ಬೇಸತ್ತ ಸತೀಶ ನೇರವಾಗಿ ವಿದ್ಯುತ್ ಮಂಡಳಿಯ ಹಿರಿಯ ಅಧಿಕಾರಿಗಳಿಗೆ, ರಾಜ್ಯದ ಮುಖ್ಯಮಂತ್ರಿಗಳಿಗೆ,  ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಅವರಿಂದ ಉತ್ತರ ಬರುವಷ್ಟರಲ್ಲಿಯೇ ತನ್ನ ಮತ್ತೊಬ್ಬ ಸ್ನೇಹಿತನ ಸಲಹೆಯ ಮೇರೆಗೆ ಸೌರವಿದ್ಯುತ್ ಅಳವಡಿಸಿಕೊಳ್ಳುಲು ಮುಂದಾದನು. ಎರಡು ಮೂರು ತಿಂಗಳು ಕಾರ್ಖಾನೆ ನಡೆದಿರಲಿಲ್ಲ, ಮನೆ ಕಟ್ಟಿ ಕೈಯಲ್ಲಿ ಇದ್ದ ಹಣವೆಲ್ಲಾ ಖರ್ಚಾಗಿ ಸೌರವಿದ್ಯುತ್ಗೆ ಬೇಕಾದ ಹಣವನ್ನು ಹೊಂಚಲು ಹತ್ತಿದರಲ್ಲಿದ್ದ ಸಹಕಾರೀ ಬ್ಯಾಂಕ್ ಒಂದನ್ನು ಸಂಪರ್ಕಿಸಲು, ಅವರಿಂದಲೂ ಹೆಚ್ಚಿನ ಸಹಾಯ ದೊರಕದಿದ್ದಾಗ, ಹಾಗೂ ಹೀಗೂ ತನ್ನ  ಸ್ನೇಹಿತರ ಸಹಾಯದಿಂದ   ತನ್ನ  ಅಡಿಕೆ ತಟ್ಟೆಯ ಕಾರ್ಖಾನೆ ಮತ್ತು ಮನೆಗೆ ಅವಶ್ಯಕವಾಗುವುದಕ್ಕಿಂತ ಹೆಚ್ಚಿನ ವಿದ್ಯುತ್ತನ್ನು   ಸೌರಶಕ್ತಿಯ ಸಹಾಯದಿಂದಲೇ ಅಳವಡಿಸುಕೊಳ್ಳುವಷ್ಟರಲ್ಲಿಯೇ ವಿದ್ಯುತ್ ಮಂಡಳಿಗೆ  ಪ್ರಧಾನ ಮಂತ್ರಿಗಳ ಕಛೇರಿಯಿಂದ ಪತ್ರವೊಂದು ಬಂದು ಒಬ್ಬ ಮಹಿಳೆ ಸ್ವಂತ ಪರಿಶ್ರಮದಿಂದ ಗುಡಿಕೈಗಾರಿಕೆ ಆರಂಭಿಸಲು ಪ್ರಯತ್ನಿಸುತ್ತಿದ್ದರೆ, ಅದಕ್ಕೆ ಪೂರಕವಾಗಿ ಸಹಾಯ ಮಾಡುವ ಬದಲು ನಿರುತ್ಸಾಹ ತೋರುತ್ತಿರುವ ಮಂಡಳಿಗೆ ಛೀಮಾರಿ ಹಾಕಿ ಆದಷ್ಟು ಕೂಡಲೇ ಅಗತ್ಯವಿರುವಷ್ಟು  ವಿದ್ಯುತ್ ಸರಬರಾಜು ಮಾಡಲು ತಿಳಿಸುತ್ತಾರೆ.  ಪ್ರಧಾನ ಮಂತ್ರಿಗಳ ಕಛೇರಿಯಿಂದಲೇ ಪತ್ರ ಬಂದದನ್ನು  ನೋಡಿ ವಿದ್ಯುತ್ ಮಂಡಳಿಯ ಅಧಿಕಾರಿಗಳು ಎದ್ದೆನೋ ಬಿದ್ದೆನೋ ಎನ್ನುವಂತೆ ಸತೀಶನ ಮನೆಗೆ ಬಂದು ಅಗತ್ಯವಿರುವ ಎಲ್ಲಾ ಸಹಾಯಗಳನ್ನು ಮಾಡಲು ಸಿದ್ದರಿರುವುದಾಗಿ ತಿಳಿಸುತ್ತಾರೆ. ಆದರೆ ಸತೀಶ್ ದಂಪತಿಗಳು ಈಗಾಗಲೇ ಸೌರಶಕ್ತಿಯ ಮೇಲೆ ಬಹಳಷ್ಟು ಹಣ ವ್ಯಯಿಸಿದ್ದರಿಂದ ತಮ್ಮ ಕಾರ್ಖಾನೆ ಮತ್ತು ಮನೆಗೆ ಅವಶ್ಯಕವಾಗಿದ್ದಷ್ಟನ್ನು ಬಳೆಸಿಕೊಂಡು ಹೆಚ್ಚಿನ ವಿದ್ಯುತ್ತನ್ನು ವಿದ್ಯುತ್ ಮಂಡಳಿಗೆ ಹಿಂತಿರುಗಿ ಮಾರುವಂತಹ ಒಪ್ಪಂದಕ್ಕೆ ಬರುತ್ತಾರೆ.  ಸತೀಶ್ ದಂಪತಿಗಳು ಈ ಎಲ್ಲಾ ಸಮಸ್ಯೆಗಳಿಂದ ಆರಂಭದಲ್ಲಿ ಸ್ವಲ್ಪ ಹಣ ಮತ್ತು ಸಮಯವನ್ನು ಕಳೆದುಕೊಂಡರೂ , ಕೂಡಲೇ ಅದರಿಂದ ಸಾಕಷ್ಟು ಕಲಿತರು. ತಮ್ಮ ಮನೆಗೆ ಅಳವಡಿಸಿಕೊಂಡಿದ್ದ ಸೌರಶಕ್ತಿ ವಿದ್ಯುತ್ ಉಪಕರಣಗಳ ಪ್ರಯೋಜನವನ್ನು ತಮ್ಮೆಲ್ಲಾ ಬಂಧು ಮಿತ್ರರಿಗೂ ವಿವರಿಸಿ ಅವರಿಗೂ ಅದರಿಂದಾಗುವ ದೀರ್ಘಕಾಲದ ಲಾಭಗಳನ್ನು ಸವಿವರವಾಗಿ ಪಿಪಿಟಿ ಪ್ರೆಸೆಂಟೇಷನ್ ಮಾದರಿಯಲ್ಲಿ  ಪ್ರಚಾರ ಮಾಡಿ ಇಂದು ತಮ್ಮ ಅಡಿಕೆ ತಟ್ಟೆಯ ವ್ಯವಹಾರದೊಂದಿಗೆ ಸೌರವಿದ್ಯುತ್ ವ್ಯವಹಾರವನ್ನೂ ಜೊತೆ ಜೊತೆಗೆ ಯಶಸ್ವಿಯಾಗಿ ಮಾಡುತ್ತಿದ್ದಾರೆ.  ಯಾವ ಸಹಕಾರಿಬ್ಯಾಂಕ್ ಇವರಿಗೆ ಸಾಲವನ್ನು ಕೊಡಲು ಹಿಂದೇಟು ಹಾಕಿತ್ತೋ, ಇಂದು ಅದೇ ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ ಸತೀಶ್.  ಈಗ ಸತೀಶ್ ದಂಪತಿಗಳ ಮಗನೂ ತನ್ನ ವಿದ್ಯಾಭ್ಯಾಸ ಮುಗಿಸಿ ಅಡಿಕೆ ತಟ್ಟೆ ತಯಾರು ಮಾಡುವ ಯಂತ್ರದಲ್ಲಿ ಬಾರೀ ಮಾರ್ಪಾಡನ್ನು ಮಾಡಿ ಅತ್ಯಂತ ಸರಳ ಖರ್ಚಿನಲ್ಲಿ ಗ್ರಾಮೀಣ ಭಾಗಗಳಲ್ಲಿಯೂ, ಸೌರವಿದ್ಯುತ್ನಿಂದ ಸುಲಭವಾಗಿ ಅಳವಡಿಸಬಹುದಾದ ಯಂತ್ರವನ್ನು ಆವಿಷ್ಕರಿಸಿ ಅದರ ಪೇಟೆಂಟ್ ಕೂಡ ಪಡೆದು ತನ್ನ ಪೋಷಕರೊಂದಿಗೆ  ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರೆ, ಸತೀಶ್ ದಂಪತಿಗಳು ಗ್ರಾಮೀಣ ಭಾಗದ  ಯುವಕರಿಗೆ  ಅಡಿಕೆ ತಟ್ಟೆ ಮತ್ತು ಸಗಣಿ  ಅನಿಲ ಯಂತ್ರಗಳ  ತರಭೇತಿ ನೀಡಿ ಸ್ವಾವಲಂಭಿಯಾಗಿ ಬದುಕಲು ಪ್ರತೀ ತಿಂಗಳೂ ರಾಜ್ಯದ ಹಲವಾರು ಭಾಗಗಳಲ್ಲಿ ತರಬೇತಿ ನೀಡುತ್ತಿದ್ದಾರೆ.

ಶಂಕರನ ಸ್ನೇಹಿತರು ಧೈರ್ಯದಿಂದ  ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, ಅಂತಹ ಸಾಹಸಕ್ಕೆ ಕೈಹಾಕಲು ಭಯ ಪಟ್ಟ ಶಂಕರ ಇಂದಿಗೂ ಮತ್ತೊಂದು ಐಟಿ ಕಂಪನಿಯಲ್ಲಿ  ಉದ್ಯೋಗಿಯಾಗಿಯೇ ತಿಂಗಳ ಸಂಬಳ ಎಣಿಸುವ ಕಾರ್ಮಿಕನಾಗಿಯೇ ಉಳಿದಿದ್ದಾನೆ. ಅವನ ಸ್ನೇಹಿತರಾದ ಬಾಲ ಓದಿದ್ದು ಬಿಕಾಂ ಆದರೆ ಅದಕ್ಕೇ ಕಟ್ಟು ಬೀಳದೆ, ಸಪೋರ್ಟ್ ಇಂಜಿನಿಯರ್ ಡಿಟಿಪಿ ಆಪರೇಟರ್, ಸಾಫ್ಟ್ಬೇರ್ ಡೆಪೆಲಪರ್,  ಇಂದು ಉತ್ತಮ ಕೃಷಿಕ ಮತ್ತು ಕೆಲವು ಕಾರ್ ಮಾಲಿಕ. ಸತೀಶ್ ಓದಿದ್ದು ಬಿಎಸ್ಸಿ, ಕೆಲಸ ಆರಂಭಿಸಿದ್ದು ಅಕೌಂಟೆಂಟ್ , ಸಪೋರ್ಟ್ ಇಂಜಿನಿಯರ್,  ಈಗ ಇಡೀ  ಕುಟುಂಬವೇ ಯಶಸ್ವೀ ಉದ್ಯಮಿಗಳಾಗಿದ್ದಾರೆ ಮತ್ತು ನೂರಾರು ಗ್ರಾಮೀಣ ಪ್ರದೇಶದ ಜನರಿಗೆ ಆಶಾಕಿರಣವಾಗಿದ್ದಾರೆ.

ಇದೇ ರೀತಿ RTT (Ramesh Tours & Traves) ಮಾಲಿಕರದ್ದೂ ಒಂದು ಅದ್ಭುತ ಪಯಣ. ತಂದೆಯವರ ಪಾರಂಪರಿಕ ಕ್ಷೌರಿಕ ವೃತ್ತಿಯಿಂದ ಆರಂಭಿಸಿ, ತನ್ನ ತಾಯಿಯವರು ಮನೆಗೆಲಸ ಮಾಡುತ್ತಿದ್ದ ಮನೆಯ ಮಾಲಕಿಯ ಸಹಾಯದಿಂದ  ಮಾರುತಿ ಆಮ್ನಿ ಗಾಡಿಯನ್ನು ಖರೀದಿಸಿ ನಂತರ ಒಂದೊಂದೇ ಕಾರ್ ಖರೀದಿಸುತ್ತಾ ಇಂದು ಜಗತ್ತಿನ ಅತ್ಯಂತ ಪ್ರಸಿಧ್ಧವಾದ ನೂರಾರು ಕಾರ್ ಗಳ ಒಡೆಯರಾಗಿ ಬೆಂಗಳೂರಿಗೆ ಆಗಮಿಸುವ ಎಲ್ಲಾ ಗಣ್ಯಾತೀತ ವ್ಯಕ್ತಿಗಳಿಗೆ ಕೆಲವೊಂದು ಬಾರೀ  ಖುದ್ದಾಗಿ ತಾವೇ ವಾಹನ ಚಲಾಯಿಸುತ್ತಾ  ಸಮಯ ಸಿಕ್ಕಾಗಲೆಲ್ಲಾ ಕ್ಷೌರಿಕ ವೃತ್ತಿಯನ್ನೂ ಮುಂದುವರಿಸುತ್ತಿದ್ದಾರೆ.

ಈ ಮೇಲೆ ತಿಳಿಸಿದ ಎಲ್ಲಾ ನಿದರ್ಶನಗಳು ಕಾಲ್ಪನಿಕಕ್ಕೆ ಹೊರತಾಗಿ ನಿಜವಾದ ಸಾಧಕರ ಸಾಧನೆಯಾಗಿದೆ ಮತ್ತು ಅವರ ನಿತ್ಯದ  ಬದುಕಾಗಿದೆ. ಸುಮ್ಮನೆ ಕೆಲಸವಿಲ್ಲ, ಅಥವಾ ಮಾಡುತ್ತಿರುವ ಕೆಲಸದಲ್ಲಿ  ಸಂಬಳ ಸಾಲುತ್ತಿಲ್ಲ ಎಂದು ಯಾವುದೇ ಅಡ್ಡದಾರಿ ಹಿಡಿಯದೇ, ಸರ್ಕಾರವನ್ನು ತೆಗಳುತ್ತ ಕಾಲ ದೂಡದೇ, ಸರ್ಕಾರೀ ಸೌಲಭ್ಯಗಳನ್ನು ಸರಿಯಾಗಿ ಬಳೆಸಿಕೊಳ್ಳುತ್ತಾ ತಾವು ಪಡೆದ ಪದವಿಯ ಹೊರತಾಗಿ ಹೊಸ ಹೊಸಾ ದಾರಿಗಳನ್ನು ಕಂಡು ಕೊಳ್ಳುತ್ತಾ, ಧೈರ್ಯದಿಂದ ಎದುರಾಗಿದ್ದ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ  ತಮ್ಮ ಸ್ವಸಾಮರ್ಥ್ಯದಿಂದ ಸಾಧಕರಾಗಿದ್ದಲ್ಲದೆ ಹಲವಾರು ಯುವಕರಿಗೆ ಅನುಕರಣೀಯರಾಗಿದ್ದಾರೆ. ಛಲವೊಂದಿದ್ದರೆ ಗೆಲುವು ಸದಾ ನಮ್ಮದೇ ಎನ್ನುವುದಕ್ಕೆ  ಇಂತಹ ಸಾಧಕರೇ ನಿಜವಾದ ಉದಾಹರಣೆಯಲ್ಲವೇ?

ಏನಂತೀರೀ?

One thought on “ಛಲವಿದ್ದಲ್ಲಿ ಗೆಲುವಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s