ನಾವು ಹೋಗುವ ಹಾದಿಯಲ್ಲಿ ಅಡೆ ತಡೆಗಳು ಬಂದರೆ, ಹೆಚ್ಚಿನವರು, ಛೇ ನಮಗೇ ಹೀಗಾಗ ಬೇಕೆ? ಎಂದು ಅದರ ಬಗ್ಗೆ ಕೊರಗುತ್ತಲೇ ಸಮಯ ಕಳೆದುಬಿಡುತ್ತಾರೆ. ಇನ್ನೂ ಕೆಲವರು, ಈ ಮಾರ್ಗವೇ ಬೇಡ ಎಂದು ಮತ್ತೊಂದು ಮಾರ್ಗವನ್ನು ಅನುಸರಿಸಿ ಗುರಿ ಮುಟ್ಟುತ್ತಾರೆ. ಆದರೆ ಕೆಲವೇ ಕೆಲವು ಮಂದಿ ಮಾತ್ರಾ ನಿಸ್ವಾರ್ಥವಾಗಿ ತಮ್ಮ ಜೀವನದ ಹಂಗು ತೊರೆದು ಕಷ್ಟ ಪಟ್ಟು ಎಲ್ಲಾ ವೈರುಧ್ಯಗಳ ವಿರುದ್ಧ ಹೋರಾಡಿ ಆ ಹಾದಿಯಲ್ಲಿದ್ದ ಎಲ್ಲಾ ಅಡ ತಡೆಗಳನ್ನು ಬದಿಗೆ ಸರಿಸಿ ಉಳಿದವರಿಗೆ ಹಾದಿಯನ್ನು ಸುಗಮಗೊಳಿ ಸಂಭ್ರಮದ ನಗೆ ಚೆಲ್ಲುತ್ತಾರೆ. ಈ ಮೇಲೆ ತಿಳಿಸಿದ ಮೂವರ ಪೈಕಿ ಮೂರನೇ ವ್ಯಕ್ತಿತ್ವದ ಗುಣವುಳ್ಳವನೇ ನಮ್ಮ ಇಂದಿನ ಕಥಾ ನಾಯಕ ಸತೀಶ್ ಭಕ್ಷಿ.
ಅರೇ ಇದೇನು ಹೆಸರೇ ವಿಚಿತ್ರವಾಗಿದೆಯಲ್ಲಾ? ಸತೀಶ್ ಎನ್ನುವ ಹಿಂದೂ ಹೆಸರಿನ ಜೊತೆ ಪರ್ಷಿಯನ್/ಉರ್ದು ಪದ ಭಕ್ಷಿ ಪದ ಹೇಗೆ? ಎಂಬ ಕುತೂಹಲ ನನಗೂ ಸಹಾ ಆತನನ್ನು ಸುಮಾರು 28 ವರ್ಷಗಳ ಮುಂಚೆ ಭೇಟಿಯಾದಾಗ ಕಾಡಿ, ಹೇಗಪ್ಪಾ ಕೇಳುವುದು ಎಂದು ಸಂಕೋಚ ಪಟ್ಟುಕೊಂಡು ಸುಮಾರು ಒಂದು ವಾರಗಳ ನಂತರ ಸ್ವಲ್ಪ ಪರಿಚಯವಾದ ನಂತರ ಕೇಳಿದಾಗ, ಓ ಅದಾ!! ಎಂದು ಎಂದಿನಂತೆಯೇ ಜೋರಾಗಿ ನಗುತ್ತಾ, ಬಕ್ಷಿ ಎನ್ನುವುದು ಮೂಲತಃ ಪರ್ಷಿಯನ್ ಭಾಷೆಯಂದ ಬಂದಿದ್ದು, ಮೊಘಲರ ಆಳ್ವಿಕೆಯ ಕಾಲದಲ್ಲಿ ಅರಮನೆಯಲ್ಲಿ ಹಣಕಾಸು ಇಲಾಖೆಯಲ್ಲಿ ಕೆಲಸ ಮಾಡುತ್ತಾ, ಅರಮನೆಯ ಸಕಲ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುವ ಅದರಲ್ಲು ವಿಶೇಷವಾಗಿ ಅರಮನೆಯ ಸಿಬ್ಬಂಧಿ ಮತ್ತು ಸೈನಿಕರಿಗೆ ವೇತನ/ಹಣವನ್ನು ವಿತರಿಸುವ ಜವಾಬ್ದಾರಿಯುತ ಅಧಿಕಾರಿಗಳಿಗೆ ಭಕ್ಷಿ ಎಂದು ಕರೆಯುತ್ತಾರೆ. ತಮ್ಮ ಮುತ್ತಾತನವರು ಅರಮನೆಯಲ್ಲಿ ಅಂತಹ ಕೆಲಸ ಮಾಡುತ್ತಿದ್ದರಿಂದ ಭಕ್ಷಿ ಎನ್ನುವುದು ನಮ್ಮ ಮನೆತನದ ಹೆಸರಾಗಿದೆ ಎಂದು ಹೇಳಿದಾಗ, ಹೊಸಾ ವಿಷಯವನ್ನು ತಿಳಿದು ಸಂತೋಷವಾಗಿತ್ತು.
ಸತೀಶ್ ಭಕ್ಷಿ, 1963 ರ ನವೆಂಬರ್ ತಿಂಗಳಿನಲ್ಲಿ ಸಂಪ್ರದಾಯಸ್ಥರ ಮನೆತನದಲ್ಲಿ ಕಡೆಯ (ಮೂರನೇ) ಮಗನಾಗಿ ಜನಿಸುತ್ತಾನೆ. ಮನೆ ಮಾತು ತಮಿಳಾದರೂ ನಮ್ಮ ಸತೀಶ್ ಭಕ್ಷಿ ಅಪ್ಪಟ್ಟ ಕನ್ನಡಿಗ. ಚಿಕ್ಕಂದಿನಿಂದಲೂ ಆಟ ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದು, ಓದಿನಷ್ಟೇ ಇತರೇ ವಿಷಯಗಳಲ್ಲಿ ಅತ್ಯಂತ ಬುದ್ಧಿವಂತನಾಗಿರುತ್ತಾನೆ. ಸಾಧಾರಣ ಎತ್ತರದ, ಸಾಧಾರಣ ಮೈಕಟ್ಟಿನ ಭಕ್ಷಿ ಬಿಎಸ್ಸಿ ಮುಗಿಸಿದ ನಂತರ ಜೀವನೋಪಾಯಕ್ಕಾಗಿ ಖಾಸಗೀ ಕಂಪನಿಯೊಂದರಲ್ಲಿ ಮತ್ತದೇ ತಮ್ಮ ಪೂರ್ವಿಕರಂತೆ ಹಣಕಾಸು ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡು account department ನಲ್ಲಿ P&L, AR, AP, Balance sheet ಎಲ್ಲವೂ ಆತನಿಗೆ ನೀರು ಕುಡಿದಂತಾಗಿ ತನ್ನ ಕಛೇರಿಯ ಹಣಕಾಸು ವಿಭಾಗದಲ್ಲಿ ಎಂತಹ ಕಠಿಣ ಸಮಸ್ಯೆಗಳನ್ನು ಸಹಾ ಸುಲಭವಾಗಿ ಪರಿಹರಿಸಬಲ್ಲಷ್ಟು ಸಮರ್ಥನಾಗುತ್ತಾನೆ. ಕಾನೂನುಗಳಲ್ಲಿ ಇರುವ ನೂನ್ಯತೆಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಅದರ ಮೂಲಕ ಕಾನೂನಾತ್ಮಕವಾಗಿಯೇ ಲೆಕ್ಕಾಚಾರವನ್ನು ಮಾಡುತ್ತಿದ್ದನೇ ಹೊರತು ಎಂದಿಗೂ ಸಹಾ ರಾಮನ ಲೆಖ್ಖ ಕೃಷ್ಣನ ಲೆಖ್ಖವನ್ನು ಬರೆಯಲೇ ಇಲ್ಲ. ಆ ರೀತಿ ಕೃಷ್ಣನ ಲೆಖ್ಖ ಬರೆದುಕೊಡಿ ಎಂದವರಿಂದ ಮುಲಾಜಿಲ್ಲದೇ ದೂರ ಸರಿಯುತ್ತಿದ್ದಂತಹ ವ್ಯಕ್ತಿ ನಮ್ಮ ಭಕ್ಷಿ.
90ರ ದಶಕದಲ್ಲಿ ಆಗ ತಾನೇ ಕಂಪ್ಯೂಟರ್ ಗಳು ಕಛೇರಿಗಳಲ್ಲಿ ಕಾಣಿಸಿಕೊಂಡಾಗ, ಕೂಡಲೇ ಅಂದಿನ ಕಾಲದ programming toolಗಳಾದ DBase, Clipperಗಳನ್ನು ಕಲಿತು, ತಕ್ಕ ಮಟ್ಟಿಗೆ programmer ಆಗಿ ತನ್ನ ಹಣಕಾಸು ವಿಭಾಗದ ಅನುಭವವನ್ನು ಬಳಸಿಕೊಂಡು ಸಣ್ಣ ಪುಟ್ಟ ಕಛೇರಿಗಳಿಗೆ ಹಣಕಾಸು ವಿಭಾಗಕ್ಕೆ ತಕ್ಕಂತಂಹ tool ಬರೆದಿದ್ದಲ್ಲದೇ, ಜೊತೆಗೆ ಸಣ್ಣ ಪುಟ್ಟ ಕಂಪನಿಗಳ ವಾರ್ಷಿಕ ಅಕೌಂಟ್ಸ್ ಮಾಡಿಕೊಡುತ್ತಾ ನೋಡ ನೋಡುತ್ತಿದ್ದಂತೆಯೇ ಅಗಾಧವಾಗಿ ಬೆಳೆದು ಬಿಡುತ್ತಾನೆ. ಅದೇ ಸಮಯದಲ್ಲಿಯೇ ಹಲಸೂರು ಪ್ರಾಂತ್ಯದಲ್ಲಿ ಆರಂಭವಾಗಿದ್ದ Proland ಎಂಬ ಕಂಪನಿ ಸೇರಿಕೊಂಡು ಅಲ್ಲಿಯೂ ಸಹಾ programmer ಆಗಿ ಸರಿ ಸುಮಾರು 1995-96ರ ಸಮಯದಲ್ಲಿ ನಾನು ಕೆಲಸ ಮಾಡುತ್ತಿದ್ದ CitaDel ಕಂಪನಿಯಲ್ಲಿ ನಮ್ಮ Flash ಎಂಬ account packageಗೆ customer support ಆಗಿ ಮತ್ತಿಬ್ಬರು Proland ಸಹೋದ್ಯೋಗಿಗಳೊಂದಿಗೆ ನನ್ನ ತಂಡವನ್ನು ಸೇರಿ ಕೊಳ್ಳುತ್ತಾನೆ.
ಆ ಸಮಯದಲ್ಲಿ ನಾವೆಲ್ಲರೂ 22-24ರ ಆಸುಪಾಸಿನವರಾಗಿದ್ದರೆ, ನಮ್ಮ ತಂಡವನ್ನು ಸೇರಿಕೊಂಡ ಭಕ್ಷಿ ಮತ್ತು ಬಾಲ ಅದಾಗಲೇ 30ರ ಆಸುಪಾಸಿನ ವಯಸ್ಸಿನವರಾಗಿದ್ದು ಅದಾಗಲೇ ಗೃಹಸ್ಥರಾಗಿದ್ದರೂ ಆತ್ಮೀಯತೆಯಿಂದ ಏಕವಚನದಲ್ಲಿ ಸಂಭಾಷಿಸುವಷ್ಟು ಸಲಿಗೆಯಿಂದ ಬೆರೆಯುತ್ತಾರೆ. customer support ಎಂದರೆ customers ಬಳಿ ಸ್ವಲ್ಪ ತಗ್ಗಿ ಬಗ್ಗಿ ಅವರು ಹೇಳಿದ್ದಕ್ಕೆಲ್ಲಾ ಒಪ್ಪಿಕೊಂಡು ಮಾಡಲಾಗದೇ ನಾವೆಲ್ಲರೂ ಪರಿಪಾಟಲು ಪಡುತ್ತಿದ್ದರೆ, ಭಕ್ಷಿ ಮಾತ್ರಾ ಏಕ್ ಮಾರ್ ದೋ ತುಕುಡಾ ಎನ್ನುವಂತಹ ಮನಸ್ಥಿತಿಯ ನೇರ ಮತ್ತು ದಿಟ್ಟತನದಿಂದ ಆರಂಭದಲ್ಲಿ ಆತನ ವಾಚಾಳಿತನ ಅನೇಕರಿಗೆ ಮುಜುಗರ ಎನಿಸುವಂತಾಗುತ್ತಿದ್ದರೂ, ನಂತರದ ದಿನಗಳಲ್ಲಿ ಆತನ ಅನುಭವ ಮತ್ತು ಆತನ ಕೆಲಸ ಕಾರ್ಯ ವೈಖರಿಯ ಅರಿವಾದವರು, ನಮಗೆ ಭಕ್ಷಿಯೇ ಬೇಕು ಎನ್ನುವಷ್ಟರ ಮಟ್ಟಿಗೆ ಮನ್ನಣೆ ಗಳಿಸಿದ್ದ. ನಮ್ಮ ಕಂಪನಿಯಲ್ಲಿ ಸಂಬಳ ಕೊಡುವುದು ಅಚೀಚೆಯಾಗುತ್ತಿದ್ದಾಗ, ನಾವುಗಳು ಕೇಳಲು ಮುಜುಗರ ಪಟ್ಟುಕೊಳ್ಳುತ್ತಿದ್ದರೆ, ಭಕ್ಷಿ ಮಾತ್ರಾ, ನೋಡಿ ನಮಗೆ ಮದುವೆ ಆಗಿದೆ. ಸಂಸಾರ ಇದೆ. ಅದಕ್ಕೆ ತಕ್ಕಂತೆ commitments ಕೂಡಾ ಇದೆ. ನೀವು ಹೀಗೆಲ್ಲಾ ಸಂಬಳ ಕೊಡುವುದು ತಡ ಮಾಡಿದರೆ ನಾನು ಬೇರೆ ಕೆಲಸ ನೋಡಿ ಕೊಳ್ಳಬೇಕಾಗುತ್ತದೆ ಎಂದು ನೀಡಿದ ಎಚ್ಚರಿಕೆಯ ಮಾತುಗಳಿಗೆ ನಮ್ಮ ಕಂಪನಿಯವರು ಬಗ್ಗದೇ ಹೋದಾಗ, ಮುಲಾಜಿಲ್ಲದೇ ಕೆಲಸವನ್ನು ಬದಲಿಸಿದ ದಿಟ್ಟತನದ ಭೂಪ ನಮ್ಮ ಭಕ್ಷಿ. ಅಲ್ಲಿಂದ ಸಣ್ಣ ಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡಿ ನಂತರ Icode ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆಯ ಸಂಬಳಕ್ಕೆ ಸೇರಿಕೊಂಡು ನಮ್ಮೆಲ್ಲರನ್ನೂ ಹುಬ್ಬೇರಿಸಿದ್ದ.
ಅರೇ ರೀತಿಯ ಅನುಭವ ಎಲ್ಲರಿಗೂ ಆಗಿರುತ್ತದೆ ಇದರಲ್ಲೇನೂ ಮಹಾ? ಇಂತಹವರ ಲೇಖನವೇಕೇ? ಎಂದು ನಿಮ್ಮ ಮನಸ್ಸಿನಲ್ಲಿ ಮೂಡಿದರೆ, ಇದುವರೆವಿಗೂ ನಾವು ನೋಡಿದ್ದು ಭಕ್ಷಿ 1.0 ಆತನ ಸಂತಸದ ದಿನಗಳು ಆದರೆ, ಪ್ರಪಂಚಾದ್ಯಂತ rescission ನೆಪದಲ್ಲಿ ಅನೇಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದಾಗ ಭಕ್ಷಿ ಸಹಾ ಕೆಲಸ ಕಳೆದು ಕೊಂಡ ನಂತರ, ಅದಾಗಲೇ ನಡುವಯಸ್ಸಿನಾಗಿದ್ದ ಭಕ್ಷಿಗೆ ಸೂಕ್ತವಾದ ಕೆಲಸ ಸಿಗದೇ ಹೋದಾಗ, ಜೀವನೋಪಾಯಕ್ಕಾಗಿ ಭಕ್ಷಿ 2.0 ಎಂಬ ಸಾಹಸಮಯ ಜೀವನ ಆರಂಭವಾಗುತ್ತದೆ. ತನ್ನ ಅಸಹಾಯಕತೆಯನ್ನು ಯಾರದ್ದೋ ಬಳಿ ಹೇಳಿಕೊಳ್ಳುವುದು ದೊಡ್ಡ ತಪ್ಪು. ಅಲ್ಲದೇ ಅವರಿಂದ ಸಹಾಯವನ್ನು ಬೇಡುವುದು ಮತ್ತೊಂದು ತಪ್ಪು. ಹಾಗಾಗಿ ನಮಗೆ ನಾವೇ ಸ್ವಾಭಿಮಾನಿ ಸ್ವಾವಲಂಭಿಗಳಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಮತ್ತೆ ತನಗೆ ಗೊತ್ತಿರುವ ಅಕೌಂಟೆಂಟ್ ಕಲಸವನ್ನು ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ನರ್ಸಿಂಗ್ ಹೋಮ್ ಗಳಿಗೆ ಪಾರ್ಟ್ ಟೈ ಮೂಲಕ ಮಾಡಿಕೊಡಲು ಆರಂಭಿಸಿ ನಂತರ ಜೀವ ವಿಮಾನಿಗಮದ ಪರೀಕ್ಷೆಗಳನ್ನು ಮುಗಿಸಿ LIC & Mutual Funds agent ಆಗಿ ಪರಿಚಯವಿದ್ದವರನ್ನೆಲ್ಲಾ ಮಾತಾನಾಡಿಸಿ, ಜೀವವಿಮೆ ಹೇಗೆ ಅತ್ಯಗತ್ಯ ಎಂಬುದನ್ನು ಎಳೆ ಎಳೆಯಾಗಿ ತಿಳಿಸಿ, ಮೊದಲೇ ಟೆಕ್ಕಿಆಗಿದ್ದ ಕಾರಣ, ಇತರೇ ಏಜಂಟರಂತೆ ಬಾಯಿ ಮಾತಿನಲ್ಲಿ ಹೇಳದೇ ಎಲ್ಲದಕ್ಕೂ ಸವಿವರವಾದ PPT presentation ಜೊತೆಗೆ ಸಂದರ್ಭಕ್ಕೆ ತಕ್ಕಂತ ವೀಡಿಯೋಗಳೊಂದಿಗೆ ವಿವರಿಸುತ್ತಿದ್ದದ್ದಲ್ಲದೇ, ಒಂದಲ್ಲಾ ಹತ್ತು ಬಾರಿ ತಿಳಿಸಿ ಕಡೆಗೂ ಒಂದು ಪಾಲಿಸಿ ಮಾಡಿಸಿಯೇ ಬಿಡುತ್ತಿದ್ದ ಭಕ್ಷಿ. ಹೀಗೆ ಭಕ್ಷಿಯ ಮೋಡಿಗೆ ಒಳಗಾಗಿ ನಾನೂ ಸಹಾ LIC Policy ಮಾಡಿಸಿದ್ದಲ್ಲದೇ, ಇದೇ ಭಕ್ಷಿಯಿಂದಾಗಿಯೇ Mutual Funds ನನಗೆ ಪರಿಚಯವಾಗಿ ಸಣ್ಣದಾಗಿ SIP ಮೂಲಕ ಹೂಡಿಕೆ ಮಾಡಿದ್ದು ಕೆಲವು ವರ್ಷಗಳ ನಂತರ ತುರ್ತಾಗಿ ಹಣ ಬೇಕಾದಾಗ ಅದೇ ಹಣ ಸಹಾಯಕ್ಕೆ ಬಂದಾಗ ಭಕ್ಷಿಯನ್ನು ಮನೆಯವರೆಲ್ಲರೂ ಮನಸಾರೆ ಹೊಗಳಿದ್ದು ಇಂದಿಗೂ ಹಚ್ಚ ಹಸಿರಾಗಿಯೇ ಇದೆ.
LIC & Mutual Funds Agency ಆರಂಭದಲ್ಲಿ ತಕ್ಕ ಮಟ್ಟಿಗೆ ಆದಾಯ ತಂದರೂ ಕಡೆಗೆ ಭಕ್ಷಿ ಬಂದರೆ/ಕರೆ ಮಾಡಿದರೆ ಪಾಲಿಸಿ ತೆಗೋ ಎಂದು ತಲೆ ತಿನ್ನುತ್ತಾನಪ್ಪಾ ಎಂದು ಬಂಧು ಮಿತ್ರರು ಅಂದು ಕೊಳ್ಳುವುದನ್ನು ಗಮನಿಸಿ ಭಕ್ಷಿ ಕಣ್ಣು ಹಾಕಿದ್ದೇ ಅಡಿಕೆ ಪಟ್ಟೆಯಿಂದ ತಟ್ಟೆ ಮಾಡುವ ವ್ಯಾಪಾರ. ತನ್ನದೇ ಆದ ನಮ್ಮನೆ ಇಂಡಸ್ಟ್ರೀಸ್ ಎಂಬ ಕಂಪನಿಯನ್ನು ತನ್ನ ಮಡದಿಯ ಹೆಸರಿನಲ್ಲಿ ಆರಂಭಿಸಿ ಆಕೆಯನ್ನು ಯಶಸ್ವಿ ಮಹಿಳಾ ಉದ್ಯಮಿಯನ್ನಾಗಿಸಿದ ಕೀರ್ತಿ ನಮ್ಮ ಭಕ್ಷಿಯದ್ದು. ನಮ್ಮನೆ ಇಂಡಷ್ಟ್ರೀಸ್ ಕುರಿತಾದ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ ಅರೇ ಅಡಿಕೆ ಗಿಡಗಳೇ ಇಲ್ಲದ ಬೆಂಗಳೂರಿನಲ್ಲಿ ಕಾರ್ಖಾನೆ ಮಾಡಿದ್ದೀಯಲ್ಲಾ? ಎಂದು ಮೂಗು ಮುರಿಯುವರೇ ನಂತರದ ದಿನಗಳಲ್ಲಿ ಬಾಯಿಯ ಮೇಲೆ ಬೆರಳಿಡುವಂತೆ ನೆಲಮಂಗಲ, ತುಮಕೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಹೋಗಿ ಅಡಿಕೆ ಹಾಳೆಗಳನ್ನು ಸಂಗ್ರಹಿಸಿ ಅಂದದ ಚಂದದ ವಿವಿಧ ಆಕಾರದ ಅಡಿಕೆ ತಟ್ಟೆಗಳು ದೊನ್ನೆ ಮುಂತಾದವುಗಳನ್ನು ಯಶಸ್ವಿಯಾಗಿ ತಯಾರಿಸಿದ್ದಲ್ಲದೇ, ತನ್ನ ವಯಕ್ತಿಕ ಪರಿಚಯದಿಂದ ಕೆಲವೊಮ್ಮೆ ಹೊರದೇಶಗಳಿಗೂ ರಫ್ತು ಮಾಡುವುದರಲ್ಲಿ ಸಫಲನಾದ. ಅಡಿಕೆ ತಟ್ಟೆಗಳನ್ನು ತಯಾರಿಸಲು ಬಳಸುತ್ತಿದ್ದ ಯಂತ್ರಗಳಲ್ಲಿದ್ದ ಲೋಪದೋಷಗಳು ಮತ್ತು ನ್ಯೂನತೆಗಳನ್ನು ಸರಿಪಡಿಸಿದ್ದಲ್ಲದೇ ವಿವಿಧ ಆಕಾರದ ತಟ್ಟೆಗಳನ್ನು ಬಳಸಲು ಪದೇ ಪದೇ ಡೈಗಳನ್ನು ಬದಲಿಸುವ ಬದಲು ಒಂದೇ ಯಂತ್ರದಲ್ಲಿ ಸುಲಭವಾಗಿ ವಿವಿಧ ಆಕಾರದ ತಟ್ಟೆಗಳನ್ನು ತಯಾರಿಸಬಹುದಾದಂತಹ ತನ್ನದೇ ಆದ ಹೊಸಾ ಯಂತ್ರವನ್ನು ಆವಿಷ್ಕರಿಸಿದ ಹೆಗ್ಗಳಿಕೆ ನಮ್ಮ ಸತೀಶ್ ಭಕ್ಷಿಯದು.
ಕಷ್ಟ ಪಟ್ಟು ದುಡಿದು ಕೂಡಿಟ್ಟ ಹಣದಲ್ಲಿ ರಾಜರಾಜೇಶ್ವರಿ ನಗರವನ್ನೂ ದಾಟಿ, ಬನಶಂಕರಿ 6ನೇ ಹಂತದಲ್ಲಿ ಕೆಳಗೆ ಅಡಿಕೆ ತಟ್ಟೆ ತಯಾರಿಸುವ ಅಂಗಡಿ, ಅದರ ಮೇಲೆ ಮೂರಂತಸ್ಥಿನ ಕಟ್ಟಡವನ್ನು ಕಟ್ಟಿದ್ದಲ್ಲದೇ ಇರುವ ಜಾಗದಲ್ಲೇ ತನ್ನದೇ ಕಲ್ಪನೆಯಿಂದ ಸುಲಭವಾಗಿ ಎರಡು ಮೂರು ಜನರು ಹೋಗಬಹುದಾದಂತಹ ಸಣ್ಣದಾದ ಹೈಡ್ರಾಲಿಕ್ ಲಿಫ್ಟ್ ಅಳವಡಿಸಿ ಗೃಹಪ್ರವೇಶಕ್ಕೆ ನಮ್ಮನ್ನೆಲ್ಲಾ ಕರೆದಾಗ, ಅರೇ ಏನೋ ಭಕ್ಷಿ, ನನ್ನ ಮಗಳು ಸಣ್ಣ ವಯಸ್ಸಿನಲ್ಲಿ ಭಕ್ಷಿ ಎಂದು ಹೇಳಲು ಬಾರದೇ ಪಕ್ಷಿ ಅಂಕಲ್ ಅಂತಾ ಕರೆಯುತ್ತಿದ್ದದ್ದಕ್ಕೆ ಅನ್ವರ್ಥವಾಗಿ ಇಂತಹ ಕಾಡಿನಲ್ಲಿ ಮನೆ ಮಾಡಿದ್ದೀಯಾ? ಅಂದರೆ, ಈಗ ಕಾಡು ಇರಬಹುದು. ಇನ್ನು ಸ್ವಲ್ಪ ವರ್ಷಗಳ ನಂತರ ಬಂದು ನೋಡು ಹೇಗಾಗಿರುತ್ತದೆ? ಎಂದು ಅಂದು ಹೇಳಿದ್ದದ್ದು ಇಂದು ಅಕ್ಷರಶಃ ನಿಜವಾಗಿದೆ.
ಮನೆಯ ಬಳಕೆಗೆ ವಿದ್ಯುತ್ ಕೊಟ್ಟ ವಿದ್ಯುತ್ ನಿಗಮ ಅವನ ಅಡಿಕೆ ತಟ್ಟೆ ಮಾಡಲು ವಾಣಿಜ್ಯ ವಿದ್ಯುತ್ ಕೊಡಲು ತಿಂಗಳಾನುಗಟ್ಟಲೆ ಸತಾಯಿಸಿದಾಗ, ಕಛೇರಿಗಳಿಗೆ ಅಲೆದು ಅಲೆದೂ ಸುಸ್ತಾಗಿ ಕಡೆಗೆ ನೇರವಾಗಿ ಪ್ರಧಾನ ಮಂತ್ರಿಗಳ ಕಛೇರಿಗೆ ದೂರನ್ನು ದಾಖಲಿಸಿ, ನೀವು ವಿದ್ಯುತ್ ಕೊಡದೇ ಹೋದರೇನಂತೇ, ನಾನೇ ನಿಮಗೆ ವಿದ್ಯುತ್ ಕೊಡ್ತುತ್ತೇನೆ ಎಂದು 2010ರಲ್ಲೇ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ತನ್ನ ಮನೆಯ ಮೇಲೆ ಸೌರಶಕ್ತಿಯ ವಿದ್ಯುತ್ ತಯಾರಿಕೆಯನ್ನು ಆರಂಭಿಸಿ ಕೇವಲ ತನ್ನ ಅಡಿಕೆ ತಟ್ಟೆ ತಯಾರಿಕೆಗಲ್ಲದೇ, ಇಡೀ ಮನೆಗೂ ಸಾಕಾಗುವಷ್ಟು ವಿದ್ಯುತ್ ತಯಾರಿಸಿದ್ದಲ್ಲದೇ ಹೆಚ್ಚಿನ ವಿದ್ಯುತ್ತನ್ನು ವಿದ್ಯುತ್ ನಿಗಮಕ್ಕೆ ಕೊಟ್ಟಂತಹ ಧೀಶಕ್ತಿಯನ್ನು ಹೊಂದಿದ್ದಂತಹ ವ್ಯಕ್ತಿ ನಮ್ಮ ಭಕ್ಷಿ. ಈ ಸಾಹಸಕ್ಕೆ ಪ್ರಧಾನ ಮಂತ್ರಿ ಕಛೇರಿಯ ಆದಿಯಾಗಿ ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರಗಳೂ ಲಭಿಸಿವೆ.
ದಿಗ್ವಿಜಯ ಟಿವಿಯಲ್ಲಿ ಭಕ್ಷಿಯ ಸಂದರ್ಶನ
ವಿದ್ಯೆ ಯಾರದ್ದೇ ಸ್ವತ್ತಲ್ಲ. ಅದನ್ನು ಮತ್ತೊಬ್ಬರಿಗೆ ಹೇಳಿಕೊಟ್ಟಾಗಲೇ ತಾನು ಕಲಿತ ವಿದ್ಯೆಗೆ ಸಾರ್ಥಕತೆ ದೊರೆಯುತ್ತದೆ ಎನ್ನುವ ಮನೋಭಾವನೆಯ ಬಕ್ಷಿ ತಮ್ಮ ಎಲ್ಲಾ ಅನುಭವಗಳನ್ನೂ ಮತ್ತೆ PPT presentationಗಳ ರೂಪದಲ್ಲಿ ತನ್ನದೇ ಆದ ಪಠ್ಯಕ್ರಮವನ್ನು ತಯಾರಿಸಿ ಕಡಿಮೆ ದರದಲ್ಲಿ ಅಡಿಕೆ ತಟ್ಟೆ ತಯಾರಿಕೆ, ಸೌರವಿದ್ಯುತ್ ತಯಾರಿಕೆಯ ಕಾರ್ಯಾಗಾರಗಳನ್ನು ನಡೆಸಿ ಗ್ರಾಮೀಣ ಭಾಗದ ನೂರಾರು ಜನರಿಗೆ ಸ್ವಾವಲಂಭಿಗಳಾಗಿ ತಮ್ಮ ಕಾಲ ಮೇಲೆ ನಿಲ್ಲುವಂತಾಗಲು ಭಕ್ಷಿ ಸಹಕರಿಸಿದ್ದನ್ನು ಮರೆಯಲು ಸಾಧ್ಯವೇ ಇಲ್ಲ. ಭಕ್ಷಿಯಿಂದ ಅಡಿಕೆ ತಟ್ಟೆ ಮಾಡುವ ವಿದ್ಯೆಯನ್ನು ಕಲಿತು ದೂರದ ಪಶ್ಚಿಮ ಬಂಗಾಲದಲ್ಲೂ ತನ್ನದೇ ಆದ ಕಾರ್ಖಾನೆಯನ್ನು ಆರಂಭಿಸಿದ್ದ ಪೋಟೋವನ್ನು ನಮಗೆಲ್ಲರಿಗೂ ತೋರಿಸಿ ಸಂಭ್ರಮ ಪಟ್ಟಿದ್ದ ನಮ್ಮ ಭಕ್ಷಿ.
ವ್ಯಾಪಾರಂ ದ್ರೋಹ ಚಿಂತನಂ ಎನ್ನುತ್ತಾರೆ. ಆದರೆ ಸುಳ್ಳು ಮೋಸ ಧಗವನ್ನು ಎಂದಿಗೂ ಮಾಡಲು ಬಯಸದಿದ್ದ ಭಕ್ಷಿ, ವ್ಯಾಪಾರದಿಂದ ಲಾಭಕ್ಕಿಂತ ನಷ್ಟ ಅನುಭವಿಸಿದ್ದೇ ಹೆಚ್ಚು. ಅಡಿಕೆ ತಟ್ಟೆ ತಯಾರಿಸಲು ಬೇಕಾದ ಕೆಲಸಗಾರರು ದೊರೆಯದೇ, ಕಚ್ಚಾ ವಸ್ತುಗಳ ಬೆಲೆಯೂ ಸಹಾ ಹೆಚ್ಚಾದ ಕಾರಣ, ತನ್ನ ಉದ್ಯಮವನ್ನು ಮುಂದುವರೆಸಲಾಗದೇ, ಸೌರ ವಿದ್ಯುತ್ ಅಳವಡಿಕೆಯನ್ನೇ ಪ್ರಮುಖ ವ್ಯಾಪಾರ ಮಾಡಿಕೊಂಡು ಪರಿಚಯವಿದ್ದ ಹತ್ತಾರು ಮನೆಗಳಿಗೆ ಮತ್ತು ತೋಟಗಳಿಗೆ ಸೌರವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರೂ ಬರುತ್ತಿದ್ದ ಆದಾಯ ರಾವಣನ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯಂತಾದಾಗ, ಬಹಳ ಇಷ್ಟದಿಂದ ಖರೀಧಿಸಿದ್ದ ನಿವೇಶನವನ್ನು ತನ್ನ ಪರಿಚಯದವರಿಗೆ ಮಾರಿ ಸಾಲ ತೀರಿಸಲು ಪ್ರಯತ್ನಿಸಿದ್ದ. ಹಾಗೆ ತನ್ನ ಸ್ನೇಹಿತನಿಗೇ ತನ್ನ ಸ್ವಯಾರ್ಜಿತವಾದ ನಿವೇಶನವನ್ನು ಮಾರುವಾಗಲೂ, ಮುಂದೆ ತನ್ನ ಕುಟುಂಬದಿಂದ ಯಾವುದೇ ರೀತಿಯಾದ ತೊಂದರೆಯಾಗದಿರಲಿ ತಾನೇ ಸ್ವಪ್ರೇರಣೆಯಿಂದ ತನ್ನ ಮಡದಿ ಮತ್ತು ಮಗನೊಂದಿಗೆ ನಿವೇಶನವನ್ನು ನೊಂದಣಿ ಮಾಡಿಸಿಕೊಟ್ಟಂತಹ, ಇರುವೆಗೂ ಸಹಾ ತನ್ನಿಂದ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಂತಹ ನಿಸ್ವಾರ್ಥ ವ್ಯಕ್ತಿ ನಮ್ಮ ಭಕ್ಷಿ.
ಕರೋನಾ ಮೊದಲನೆಯ ಅಲೆಯ ಸಮಯದಲ್ಲಿ ನಾನು ಕೆಲಸವನ್ನು ಕಳೆದುಕೊಂಡು ಕರೋನಾಗೆ ತುತ್ತಾಗಿ ಕೈಯ್ಯಲ್ಲಿ ಕಾಸಿಲ್ಲದೆ ವಿಮೆಯನ್ನು ಕಟ್ಟದಿರುವ ಸಂಗತಿ ಆತನಿಗೆ ಗೊತ್ತಾಗಿ, ಅರೇ ಇಷ್ಟು ವರ್ಷದಲ್ಲಿ ಒಮ್ಮೆಯೂ ಈ ರೀತಿಯಾಗಿ ಮಾಡಿಲ್ಲದಿರುವಾಗ ಈ ಬಾರಿ ಏಕೆ ವಿಮೆಯನ್ನು ಕಟ್ಟಿಲ್ಲ? ಎಂದು ನನಗೆ ಕರೆ ಮಾಡಿ ನನ್ನ ವಿಷಯವನ್ನು ತಿಳಿದ ಕೂಡಲೇ, ದೂರದ ಮೈಸೂರಿನಲ್ಲಿದ್ದ ತನ್ನ ಪರಿಚಯಸ್ಥ ವೈದ್ಯರಿಗೆ ಕರೆ ಮಾಡಿ ಅವರಿಂದ ಸೂಕ್ತವಾದ ಔಷಧಿಯನ್ನು ತಂದುಕೊಟ್ಟಿದ್ದಲ್ಲದೇ ತನ್ನ ಮನೆಯಲ್ಲೇ ಸಂಗ್ರಹಿಸಿದ ಪೆಟ್ಟಿಗೆ ಜೇನಿನ ಶುದ್ಧ ಜೇನುತುಪ್ಪವನ್ನು ತಂದುಕೊಟ್ಟು ಶೀಘ್ರವಾಗಿ ಗುಣಮುಖನಾಗು ಎಂದು ಹೃದಯ ಪೂರ್ವಕವಾಗಿ ಹರಸಿ ಹೋಗಿದ್ದ. ಅದಾದ ಕೆಲ ದಿನಗಳ ನಂತರ ನನ್ನನ್ನು ಕಾಡೀ ಬೇಡೀ ನನ್ನ ರೆಸ್ಯೂಮೆ ಪಡೆದುಕೊಂಡು ತನಗೆ ಗೊತ್ತಿದ್ದ ಎಲ್ಲರಿಗೂ ಕಳುಹಿಸಿ, ನನ್ನ ಗೆಳೆಯನಿಗೆ ನಿಮ್ಮಲ್ಲೇನಾದರೂ ಕೆಲಸ ಇದ್ದರೆ ಕೊಡಿಸಿ ಎಂದು ನನ್ನ ಪರವಾಗಿ ಬೇಡಿಕೊಂಡಿದ್ದನ್ನು ನನ್ನ ಜೀವನ ಪರ್ಯಂತ ಮರೆಯಲು ಸಾಧ್ಯವೇ ಇಲ್ಲ. ನಂತರ ಕೆಲಸ ಸಿಗುವವರೆಗೂ ವಾರಕ್ಕೊಮ್ಮೆ ಇಲ್ಲವೇ ೧೫ ದಿನಗಳಿಗೊಮ್ಮೆ ಕರೆ ಮಾಡಿ ಕೆಲಸದ ವಿಷಯ ಏನಾಯ್ತು? ಎಂದು ಸತತವಾಗಿ ವಿಚಾರಿಸುತ್ತಿದ್ದಂತಹ ಸ್ನೇಹ ಜೀವಿ ನಮ್ಮ ಭಕ್ಷಿ.
ಒಮ್ಮೆ ಕರೆ ಮಾಡಿದರೆ ಗಂಟೆಗಟ್ಟಲೆ ಮಾತಾನಾಡುತ್ತಾನೆ ಎಂದು ಅನೇಕ ಬಾರಿ ಆತನ ಕರೆಗಳನ್ನು ಸ್ವೀಕರಿಸದೇ ಹೋದರೂ ಅದಕ್ಕೆ ಕೊಂಚವೂ ಬೇಸರಿಸಿಕೊಳ್ಳದೇ ಮತ್ತೆ ಕರೆ ಮಾಡುತ್ತಿದ್ದಂತಹ ನಮ್ಮ ಸತೀಶ್ ಭಕ್ಷಿಯ ಕರೆ ಸ್ವೀಕರಿಸಲು ನಾನು ಈಗ ಸಿದ್ದನಿದ್ದರೂ, ಕರೆ ಮಾಡಲು ನಮ್ಮ ಭಕ್ಷಿಯೇ ಇಲ್ಲ. ತುಂಬಾ ಒಳ್ಳೆಯವರನ್ನು ಭಗವಂತ ಬೇಗನೆ ಕರೆದುಕೊಳ್ಳುತ್ತಾನಂತೆ ಎನ್ನುವಂತೆ ಇನ್ನೂ 60ಕ್ಕೆ ಒಂದು ವರ್ಷ ಇರುವಾಗಲೇ, ತನ್ನ ಪ್ರೀತಿಯ ಮಗನ ಮದುವೆಯನ್ನೂ ನೋಡದೇ ಮೊನ್ನೆ 22.01.23 ಭಾನುವಾರ ಮಧ್ಯಾಹ್ನ ಮನೆಯಲ್ಲೇ ನಮ್ಮೆಲ್ಲರನ್ನು ಅಕಾಲಿಕವಾಗಿ ಅಗಲಿದ್ದಾನೆ ನಮ್ಮ ಭಕ್ಷಿ.
ಭಾನುವಾರ ತಡರಾತ್ರಿ ಮತ್ತೊಬ್ಬ ಸ್ನೇಹಿತ ಕರೆ ಮಾಡಿ ವಿಷಯ ಗೊತ್ತಾಯ್ತಾ? ಭಕ್ಷಿ ಹೋಗ್ಬಿಟ್ಟಾ ಎಂದಾಗ, ಹೇ ಸುಳ್ಳು ಹೇಳ್ತಾ ಇಲ್ಲಾ ತಾನೇ? ಎಂದು ಕೇಳಿ, ಖಾತರಿ ಪಡಿಸಿಕೊಳ್ಳುವ ಸಲುವಾಗಿ ಕೂಡಲೇ ಭಕ್ಷಿಯ ಮಗನಿಗೆ ಕರೆ ಮಾಡಿದರೆ, ನಾನು ಎತ್ತು ಆಡಿಸಿದ ಆ ಮಗು, ಅಂಕಲ್ ಅಪ್ಪಾ ಹೋಗ್ಬಿಟ್ರೂ ಎಂದಾಗ, ನನ್ನ ಒಡಹುಟ್ಟಿದವನನ್ನು ಕಳೆದುಕೊಂಡಷ್ಟೇ ದುಖಃವಾಗಿ ಅವನನ್ನು ಹಾಗೇ ಸಂತೈಸಿ, ಮಾರನೇ ದಿನ ಅವರ ಮನಗೆ ಹೋದಾಗ, ಕಾಲು ಮಡಿಸಿಕೊಂಡು, ಮೈತುಂಬಾ ಹೂವಿನ ಹಾರ, ತುಳಸೀ ಹಾರ ಹಾಕಿಸಿಕೊಂಡು ಗುಬ್ಬಚ್ಚಿಯಂತಾಗಿ ನಿರ್ಜೀವವಾಗಿ ಮಲಗಿದ್ದ ಭಕ್ಷಿಯನ್ನು ನೋಡಿದಾಗ ಪಟ ಪಟನೇ ಅರಳು ಹುರಿದಂತೆ ಮಾತನಾಡುತ್ತಾ, ತನಗೇ ಅರಿವಿಲ್ಲದಂತೆ ಎದುರಿಗಿದ್ದವರನ್ನು ತನ್ನ ಕೈಯಿಂದ ಪ್ರೀತಿಯಿಂದ ಹೊಡೆಯುತ್ತಾ, ಜೋರಾಗಿ ನಗುತ್ತಿದ್ದ ಭಕ್ಷಿ ಇವನೇನಾ ಎನಿಸಿದ್ದಂತೂ ಸುಳ್ಳಲ್ಲ.
ನಿಜ ಹೇಳಬೇಕೆಂದರೆ ಒಮ್ಮೆ ಯಾವುದೇ ಲೇಖನ ಬರೆಯಲು ಕುಳಿತನೆಂದರೆ,ಅದು ಮುಗಿಯುವ ವರೆಗೂ ಏಳದ ನಾನು, ಬಹಳ ದುಖಃದಿಂದಾಗಿ ಈ ಲೇಖನ ಬರೆಯಲು ಎರಡು ದಿನಗಳನ್ನು ತೆಗೆದುಕೊಂಡಿದ್ದೇನೆ. ಸತ್ಯವಾಗಿಯೂ ಕಣ್ಣೀರು ಸುರಿಸುತ್ತಲೇ ನಮ್ಮೆಲ್ಲರನ್ನೂ ಅಗಲಿದ ನಮ್ಮ ಪ್ರೀತಿಯ ಸ್ನೇಹಿತ ಸತೀಶ್ ಭಕ್ಷಿಗೆ ಆಶ್ರುತರ್ಪಣದ ಮೂಲಕ ಈ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇನೆ. ಯಾವುದೇ ದುಶ್ಚಟಗಳು ಇಲ್ಲದಿದ್ದ, ಇತ್ತೀಚೆಗೆ ಹೊರಗಿನ ಪದಾರ್ಥಗಳನ್ನು ಸೇವಿಸದೇ ಇರುತ್ತಿದ್ದಂತಹ ವ್ಯಕ್ತಿಯೇ ಈ ರೀತಿ ಅಕಾಲಿಕವಾಗಿ ನಿಧನವಾದಾಗ, ಬದುಕು ಎಷ್ಟು ಅನಿಶ್ಚಿತ ಎಂದೆನಿಸುತ್ತದೆ ಅಲ್ಲವೇ?
ಹಾಗಾಗಿ ಮೊನ್ನೇ ಯಾರೋ, ನೆನ್ನೆ ಭಕ್ಷಿ, ನಾಳೆ ನಾವು ಇರುತ್ತೇವೆಯೋ ಇಲ್ಲವೋ ನಮಗೇ ಗೊತ್ತಿಲ್ಲವಾದ್ದರಿಂದ,ಆದಷ್ಟು ನಮ್ಮ ಆಪ್ತ ಬಂಧು ಮಿತ್ರರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರೋಣ. ಅವರೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳೋಣ. ಅಗತ್ಯ ಬಂದಾಗ ಆ ಕ್ಷಣದಲ್ಲೇ ಕೈಲಾದ ಮಟ್ಟಿಗೆ ಸಹಾಯ ಮಾಡೋಣ. ಮತ್ತೊಬ್ಬರಿಗೆ ನಮ್ಮ ಉಪಸ್ಥಿತಿಗಿಂತ, ಅನುಪಸ್ಥಿತಿ ಕಾಡುತ್ತದೆ ಎನ್ನುವಂತಾದಲ್ಲಿ ನಾವು ಜೀವನದಲ್ಲಿ ಏನನ್ನೋ ಸಾಧಿಸಿದಂತೆ. ಅದೇ ರೀತಿ ನಮ್ಮ ಸತೀಶ್ ಭಕ್ಷಿಯ ಉಪಸ್ಥಿತಿ ಇನ್ನು ಮುಂದೆ ನಮ್ಮೊಂದಿಗೆ ಇಲ್ಲದಿದ್ದರೂ, ನಿಶ್ಚಿತವಾಗಿಯೂ ಆತನ ಅನುಪಸ್ಥಿತಿ ವಯಕ್ತಿಕವಾಗಿ ನನಗೆ ಕಾಡುತ್ತಲೇ ಇರುತ್ತದೆ ಎಂದರೆ ಆತನೂ ಸಹಾ ಒಬ್ಬ ಸಾಧಕನೇ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ
ಭಕ್ಷಿ ನನ್ನ ನಿನ್ನ ನಡುವೆ ವಯಸ್ಸಿನಲ್ಲಿ ಸಾಕಷ್ಟು ಅಂತರವಿದ್ದರೂ ನನ್ನ ನಿನ್ನ ನಡುವೆ ಇದ್ದ ಪ್ರೀತಿಯ ಸಲುಗೆ ಮತ್ತು ಆಪ್ಯಾಯಮಾನದಿಂದಾಗಿ ಇಡೀ ಲೇಖನದಲ್ಲಿ ನಿನ್ನನ್ನು ಏಕವಚನದಲ್ಲೇ ಸಂಬೋಧಿಸಿರುವುದಕ್ಕಾಗಿ ಕ್ಷಮೆ ಇರಲಿ.
ತುಂಬಾ ಚನ್ನಾಗಿ ಅವರ ಸ್ಭಭಾವ ಗುಣ ಮಾಡಿದ ಸಾಧಿಸಿದ ಕೆಲಸಗಳನ್ನು ತಿಳಿಸಿದ್ದಿರ ಅವರ ಮರಣಾನಂತರ ಇದನ್ನೇಲ್ಲಾ ತಿಳಿದುಕೊಂಡದ್ದು ಖೇದವಿದೆ
ಅವರಿರುವಾಗ ತಿಳಿದಿದ್ದರೆ ಇನ್ನೂ ಚನ್ನಾಗಿರುತ್ತಿತ್ತು
ಬಹಳ ಕೆಲಸಗಳನ್ನು ಚಿಕ್ಕವಯಸ್ಸಿನಲ್ಲೇ ಮಾಡಿ ದಣಿದಿದ್ದೀಯಾ ಬಾ ಎಂದು ದೇವರು ಬೇಗ ಕರೆದೊಯ್ಯುದರೋ ಏನೋ
ಅವರ ಆತ್ಮ ಶಾಂತಿ ಹೊಂದಲಿ
ಸುಮಿತ್ತಾ ಅಯ್ಯಂಗಾರ್ ..
LikeLike