ಕೆಲಸ

ಶಂಕರ ಮತ್ತು  ಹರಿ ಇಬ್ಬರೂ ಪ್ರಾಣ ಸ್ನೇಹಿತರು. ಒಂದು ರೀತಿಯ ಚೆಡ್ಡಿ ದೋಸ್ತು ಕುಚಿಕು ಗೆಳೆಯರು. ಇಬ್ಬರೂ ಒಂದೇ ಶಾಲೆ .  ಹರಿ ತಂದೆ ಮತ್ತು ಶಂಕರನ ತಂದೆ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಆವರಿಬ್ಬರ ಮನೆ ಒಂದೇ ಕಡೆ ಇದ್ದುದ್ದರಿಂದ ಅವರಿಬ್ಬರ ಒಡನಾಟ ಹೆಚ್ಚಾಗಿಯೇ ಇತ್ತು.   ಹರಿಯ ತಾತ ಮತ್ತು ಚಿಕ್ಕಪ್ಪ ಅಡುಗೆ  ವೃತ್ತಿಯಲ್ಲಿದ್ದು ಅವರ ಮನೆಯಲ್ಲಿ ಏನಾದಾರೂ ವಿಶೇಷ ಆಡುಗೆ ಮಾಡಿದ್ದಲ್ಲಿ ಅದರಲ್ಲಿ ಶಂಕರನಿಗೆ ಒಂದು ಪಾಲು ಇದ್ದೇ  ಇರುತ್ತಿತ್ತು ಅಂತಹ ಗೆಳೆತನ ಅವರಿಬ್ಬರದ್ದು.

ಹರಿ, ಶಂಕರನಿಗಿಂತ ಓದಿನಲ್ಲಿ ಚುರುಕು. ಸದಾ ಪುಸ್ತಕದ ಹುಳು. ಶಂಕರನ ಹೊರತಾಗಿ ಅವನಿಗೆ ಬೇರಾವ ಗೆಳೆಯರೂ ಇರರಲಿಲ್ಲ. ಒಟ್ಟಿನಲ್ಲಿ ತಾನಾಯ್ತು, ತನ್ನ ಪಾಡಾಯ್ತು ಎನ್ನುವಂತಹವನು.  ಶಾಲೆಯಲ್ಲಿ ಅವನೇ ಎಲ್ಲರಿಗಿಂತಲೂ ಮೊದಲು. ಶಂಕರನೋ ಓದಿನಲ್ಲಿ ಸುಮಾರು. ಆದರೆ ಆಟೋಟಗಳಲ್ಲಿ ಚುರುಕು.  ಸಾಮಾನ್ಯ  ತಿಳುವಳಿಕೆಯಲ್ಲಿ  ಬಹಳ ಚುರುಕು.  ಸ್ನೇಹಜೀವಿ, ಕಲ್ಲನ್ನೂ ಮಾತನಾಡಿಸಬಲ್ಲಂತಹ ಛಾತಿಯವ. ಸದಾ ಪರರ ಹಿತಕ್ಕಾಗಿಯೇ ಕಾಯುವವ. ಹೈಸ್ಕೂಲಿನ ತನಕ ಒಟ್ಟಿಗೇ ಒಂದೇ ತರಗತಿಯಲ್ಲಿ ಓದಿದವರು ಕಾಲೇಜಿನಲ್ಲಿ ಹರಿ ವಿಜ್ಣಾನ ವಿಷಯ ತೆಗೆದುಕೊಂಡು ಇಂಜಿನಿಯರ್ ಆಗಿ ಪ್ರತಿಷ್ಠಿತ ಕಂಪನಿಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಕೆಲಸ ಗಿಟ್ಟಿಸಿ ಮೊದಲನೇ  ತಿಂಗಳಿನಿಂದಲೇ  ಐದಂಕೆಯ ಸಂಬಳ ಪಡೆಯತೊಡಗಿದ. ಶಂಕರ ಕಾಮರ್ಸ್ ವಿಷಯ ತೆಗೆದುಕೊಂಡು ಬಿಕಾಂ ಮುಗಿಸಿ ಅಲ್ಲಿಲ್ಲಿ ಸಣ್ಣ ಪುಟ್ಟ ಕಡೆ ಕೆಲಸ ಮಾಡುತ್ತಿದ್ದ. ಪುರುಸೊತ್ತು ಇದ್ದಾಗಲೆಲ್ಲಾ ಹರಿಯವರ ಚಿಕ್ಕಪ್ಪನ ಜೊತೆ ಅಡುಗೆ ಕೆಲಸಕ್ಕೆ ಹೋಗುತ್ತಾ ಸರಿ ಸುಮಾರಾಗಿ ಅಡುಗೆ ಕೆಲಸವನ್ನೂ ಕಲಿತು ಅದರಲ್ಲಿ ಸಂಪಾದಿಸಿದ ಅಲ್ಪ ಸ್ವಲ್ಪ ಹಣವನ್ನು ಮನೆಗೂ ಕೊಡುತ್ತಾ ಜೀವನ ಸಾಗಿಸುತ್ತಿದ್ದ.

ಕೆಲಸದಲ್ಲಿ ಚುರುಕಾಗಿದ್ದ ಹರಿ ಬಲು ಬೇಗನೆ ಎತ್ತರದ ಹುದ್ದೆಗೆ ತಲುಪಿ ತನ್ನ ಗೆಳೆಯ ಶಂಕರನ ಆರ್ಥಿಕ ಪರಿಸ್ಥಿತಿ ನೋಡಲಾದರೆ ತನ್ನ  ಪ್ರಭಾವ ಬೀರಿ ತನ್ನದೇ ಕಛೇರಿಯ ಫೈನಾನ್ಸ್ ಡಿಪಾರ್ಟ್ಮೆಂಟ್ನಲ್ಲಿ  ಅಕೌಂಟೆಂಟ್ ಕೆಲಸ ಕೊಡಿಸಿ ಮತ್ತೆ  ಅವರಿಬ್ಬರೂ ಕಛೇರಿಗೆ ಒಟ್ಟಿಗೆ ಹೋಗಿ ಬರುವಂತವರಾದರು. ಇಬ್ಬರಿಗೂ ಮದುವೆಯಾಗಿ ಎರಡೆರಡು ಮಕ್ಕಳ ತಂದೆಯಾದರು.  ಆರ್ಥಿಕವಾಗಿ ಸಧೃಡನಾಗಿದ್ದ ಹರಿ, ತನ್ನ ಮಕ್ಕಳನ್ನು ಲಕ್ಷಾಂತರ ವಂತಿಕೆ ನೀಡಿ ನಗರದ ಅತ್ಯಂತ  ಪ್ರತಿಷ್ಠಿತ ಶಾಲೆಗೇ ಸೇರಿಸಿದ್ದ. ನಗರದ ಪ್ರತಿಷ್ಠಿತ ವ್ಯಕ್ತಿಗಳ ಮಕ್ಕಳೆಲ್ಲಾ ಅದೇ ಶಾಲೆಯಲ್ಲಿ ಓದುತ್ತಿದ್ದರು. ಆ ಶಾಲೆಯಲ್ಲಿ ತಮ್ಮ ಮಕ್ಕಳು ಓದುತ್ತಿದ್ದಾರೆ ಎಂದರೇನೇ ಪೋಷಕರಿಗೆ ಏನೋ ಒಂದು ಪ್ರತಿಷ್ಠೆ.  ಆ ಶಾಲೆಗೆ ಬರುವ ಮಕ್ಕಳೆಲ್ಲಾ ದೊಡ್ಡ ದೊಡ್ಡ  ಕಾರಿನಲ್ಲಿಯೇ ಓಡಾಟ ಹಾಗಾಗಿ ಹರಿ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ಕಂತಿನಲ್ಲಿ ಕೊಂಡಿದ್ದ ದುಬಾರಿ ಕಾರು ಅದನ್ನು ಚಲಾಯಿಸಲು ಚಾಲಕ. ಮಕ್ಕಳನ್ನು ಶಾಲೆಗೆ ಬಿಟ್ಟು ಮತ್ತು ಸಂಜೆ ಕರೆದುಕೊಂಡು ಬರುವ ಮಧ್ಯೆ ಸಿಗುವ ಸಮಯದಲ್ಲಿ ಹರಿಯ ಹೆಂಡತಿ ತನ್ನ ಗೆಳತಿಯರ ಮನೆಗೋ ಇಲ್ಲವೇ  ಶಾಪಿಂಗ್ ಮಾಡಲು ಕಾರನ್ನು ಉಪಯೋಗಿಸಿಕೊಳ್ಳುತ್ತಿದ್ದಳು. ದುಡ್ಡು ಹೆಚ್ಚಾದ ಮೇಲೆ ಹರಿ ತನ್ನ ಘನತೆಗೆ ತಕ್ಕಂತೆ ದೊಡ್ಡದಾದ ಅಪಾರ್ಟ್ಮೆಂಟ್ ಕಂತಿನಲ್ಲಿ ಕೊಂಡು  ಅತ್ಯಂತ ಅದ್ದೂರಿಯಿಂದ, ಮೋಜು ಮಸ್ತಿಯ ಜೀವನ ನಡೆಸುತ್ತಿದ್ದರು.

ಇತ್ತ ಶಂಕರ ತನ್ನ ತನಗೆ ಬರುತ್ತಿದ್ದ ಸಂಬಳದಲ್ಲಿ  ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಅವರ ಮದುವೆ ಮುಂಜಿಗಳಿಗೆ ಎಂದು ಸ್ವಲ್ಪ ಸ್ವಲ್ಪ ಕೂಡಿಡುತ್ತಾ, ತನ್ನ ಮನೆಯ ಹತ್ತಿದರಲ್ಲೇ ಇದ್ದ ಉತ್ತಮ ಶಾಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದ.   ಸಮಯದ ಅನುಕೂಲದಂತೆ ಶಂಕರನ ತಂದೆಯವರಾಗಲೀ ಅಥವಾ ಅವನ ಮಡದಿಯಾಗಲೀ ದ್ವಿಚಕ್ರ ವಾಹನದಲ್ಲಿ ಶಾಲೆಗೆ ಬಿಟ್ಟು ಬರುತ್ತಿದ್ದರು. ಇಬ್ಬರಿಗೂ ಪುರುಸೊತ್ತಿಲ್ಲದಿದ್ದರೆ ಮಕ್ಕಳೇ ಬಿಎಂಟಿಸಿ ಬಸ್ಸಿನಲ್ಲೇ ಶಾಲೆಗೆ ಹೋಗುತ್ತಾ ಮಧ್ಯಮ ವರ್ಗದ ಜನರಂತೆ ಸುಖಃ ಸಂತೋಷದಿಂದ ಜೀವನ ನಡೆಸುತ್ತಿದ್ದರು.

ಅದೊಂದು ದಿನ ಜಾಗತೀಕ ಮಟ್ಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಅವರ ಕಛೇರಿ ಅಚಾನಕ್ಕಾಗಿ ಮುಚ್ಚಿ ಹೋಯಿತು. ಕಛೇರಿಯಲ್ಲಿ ಕೆಲಸಮಾಡುತ್ತಿದ್ದ ಎಲ್ಲಾ ಉದ್ಯೋಗಿಗಳಿಗೂ ಒಂದು ತಿಂಗಳ ಸಂಬಳ ಕೊಟ್ಟು ಮನೆಗೆ ಕಳುಹಿಸಿಬಿಟ್ಟರು. ಹಾಗಾಗಿ ಶಂಕರ ಮತ್ತು ಹರಿ ಇಬ್ಬರೂ ನಿರುದ್ಯೋಗಿಗಳಾಗಿಬಿಟ್ಟರು. ಹರಿ, ತಾನು ಹೇಗೋ ವಿದ್ಯಾವಂತ, ತನಗೆ ಸಾಕಷ್ಟು ಅನುಭವವಿದೆ ಹಾಗಾಗಿ ಕೆಲಸ ಸಿಗುವುದು ಕಷ್ಟವಾಗದು ಎಂದು ಎಣಿಸಿ ತನಗೆ ಗೊತ್ತಿದ್ದ ಎಲ್ಲಾ ಸ್ನೇಹಿತರಿಗೂ ತನಗೆ ಯಾವುದಾದರೂ ಕೆಲಸ ಹುಡುಕಿಕೊಡಲು ತಿಳಿಸಿ, ಹಲವಾರು ಜಾಬ್ ಪೋರ್ಟಲ್ನಲ್ಲಿ ತನ್ನ ರೆಸ್ಯೂಮ್ ಪೋಸ್ಟ್ ಮಾಡಿ ಕೆಲವು ಜಾಬ್ ಕನ್ಸಲ್ಟೆನ್ಸಿ ಗಳಿಗೂ ತನ್ನ ರೆಸ್ಯೂಮ್ ಕಳುಹಿಸಿ ಅವರಿಂದ ಯಾವುದಾದರೂ ಕೆಲಸದ ಕರೆ ಬರಬಹುದೆಂದು ಎಣಿಸುತ್ತಾ ಮನೆಯಲ್ಲೇ ದಿನ ಕಳೆಯಲು ಶುರುಮಾಡಿದ. ಆರಂಭದ ಮೂರ್ನಾಲ್ಕು ವಾರ ಕಾಲ ಕಳೆದದ್ದು ತಿಳಿಯಲಿಲ್ಲ. ಆಮೇಲೆ ಮನೆಯಲ್ಲಿ ಉಳಿಯುವುದು ಕಷ್ಟವಾಗತೊಡಗಿತು.  ಜಾಗತೀಕ ಸಮಸ್ಯೆಯಿಂದಾಗಿ ಬಹುತೇಕ ಕಂಪನಿಗಳು ಮುಚ್ಚಿಹೋಗಿದ್ದರಿಂದ ಎಲ್ಲೂ ಯಾರೂ ಮೂರ್ನಲ್ಕು ತಿಂಗಳು  ಹರಿಯನ್ನು  ಕೆಲಸಕ್ಕೆ ಕರಿಯಲೇ ಇಲ್ಲ,  ಮನೆ ಸಾಲ, ಕಾರ್ ಸಾಲ, ಮಕ್ಕಳ ಐಶಾರಾಮ್ಯ  ಜೀವನದ ಶೈಲಿಯಿಂದಾಗಿ ಹಣ ನೀರಿನಂತೆ ಖರ್ಚಾಗತೊಡಗಿತು. ಕೂಡಿಟ್ಟ ಹಣ ಎಷ್ಟುದಿನ ತಾನೇ ಬಂದೀತು?  ಕೈಯಲ್ಲಿದ್ದ ಹಣ ಕಡಿಮೆಯಾಗ ತೊಡಗಿದಂತೆ ಹರಿಯ ಸಹನೆಯ ಕಟ್ಟೆಯೂ ಒಡೆಯತೊಡಗಿತು. ಸಣ್ಣ ಸಣ್ಣ ವಿಷಯಗಳಿಗೂ ತಾಳ್ಮೆ ಕಳೆದುಕೊಂಡು ಎಲ್ಲರ ಮೇಲೂ ರೇಗಾಡುತ್ತಿದ್ದ. ಅವನ ಈ ದುವರ್ತನೆ ಮಡದಿ ಮಕ್ಕಳಿಗೂ ಬೇಸರ ತರಿಸಿತ್ತು.

ಇತ್ತ ಶಂಕರನೂ ಸಹಾ ತನಗೆ ಗೊತ್ತಿದ್ದ ಎಲ್ಲಾ ಸ್ನೇಹಿತರಿಗೂ ಕರೆ ಮಾಡಿ ತನ್ನ ಕೆಲಸ ಹೋದದ್ದನ್ನು ತಿಳಿಸಿ ತನಗೆ ಸೂಕ್ತವಾದ ಕೆಲಸ ಇದ್ದಲ್ಲಿ ತಿಳಿಸಲು ಹೇಳಿ ಮನೆಯಲ್ಲಿ ಸುಮ್ಮನೆ ಕೂರದೆ, ಹರಿಯ ಚಿಕ್ಕಪ್ಪನ ಜೊತೆ ಆಡುಗೆ ಕೆಲಸಕ್ಕೆ ಹೋಗತೊಡಗಿದ. ಪತಿಯ ಕಷ್ಟವನ್ನು  ಅರ್ಥ ಮಾಡಿಕೊಂಡ ಮಡದಿ ತನ್ನ ಕೈಯಲ್ಲಿ ಆದಷ್ಟೂ ಮನೆಯ ಖರ್ಚನ್ನು ಕಡಿಮೆ ಮಾಡುತ್ತಾ  ಮನೆಯಲ್ಲೇ ತನಗೆ ಗೊತ್ತಿದ್ದ ಮೆಣಸಿನಪುಡಿ, ಹುಳಿಪುಡಿ, ಚಟ್ನಿಪುಡಿ, ಪುಳಿಯೋಗರೆ ಗೊಜ್ಜು, ತರತರಹದ ಉಪ್ಪಿನಕಾಯಿಗಳನ್ನು ಮಾಡಿ ತನಗೆ ಗೊತ್ತಿದ್ದವರೆಲ್ಲರಿಗೂ ಮಾರಿ ತನ್ನ ಕೈಯಲ್ಲಿ ಆಗುವಷ್ಟು ಸಂಪಾದಿಸತೊಡಗಿದಳು.  ಹರಿ ಚಿಕ್ಕಪ್ಪನಿಗೆ  ಶಂಕರ ಜೊತೆಗೂಡಿದ್ದು ಆನೆಯ ಬಲ ಬಂದಂತಾಗಿತ್ತು. ಹರಿಯ ಚಿಕ್ಕಪ್ಪ ಆಡುಗೆ ಮನೆಯ ಕೆಲಸದಲ್ಲಿ ತೊಡಗಿದರೆ, ಶಂಕರ ಹೊರಗಡೆಯ ಕೆಲಸ ನೋಡಿ ಕೊಳ್ಳತೊಡಗಿದ. ಮಾರುಕಟ್ಟೆಗೆ ಹೋಗಿ ಸಾಮನು ಸರಂಜಾಮುಗಳನ್ನು ತರುವುದು, ತರಕಾರಿ ಹಣ್ಣುಗಳನ್ನು ತರುವುದು, ಮಾಡಿದ ಅಡುಗೆಯನ್ನು ಸರಿಯಾದ ಸಮಯಕ್ಕೆ  ಸರಿಯಾದ ಜಾಗಕ್ಕೆ ತಲುಪಿಸಿ ಅದನ್ನು ವಿತರಿಸಿ ಬರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡತೊಡಗಿದ. ತನಗೆ ಪರಿಚಯ ಇದ್ದ ಎಲ್ಲರಿಗೂ ತನ್ನ ಅಡುಗೆ ಕಾಟ್ರಾಂಕ್ಟ್  ಬಗ್ಗೆ ತಿಳಿಸಿ ಅವರ ಮನೆಯ ಸಭೆ ಸಮಾರಂಭಗಳ ಅಡುಗೆ ಕೆಲಸ ಗಿಟ್ಟಿಸತೊಡಗಿ ಅಡುಗೆ ಕೆಲಸದಲ್ಲಿಯೇ ನಿರತನಾದ ಕಾರಣದಿಂದಾಗಿ ತನಗೆ ಕೆಲಸ ಹೋಗಿ ನಿರುದ್ಯೋಗಿಯಾಗಿರುವೆ ಎನ್ನುದನ್ನೇ ಮರೆತು ಹೋಗಿದ್ದ.  ಶುಚಿ ರುಚಿಯಾಗಿ ಎಲ್ಲರ ಕೈಗೆಟುಕುವಂತೆ ದುಬಾರಿಯಾಗದೆ ಕೆಲಸ ಮಾಡುತ್ತಿದ್ದರಿಂದ  ಅಡುಗೆ ಕೆಲಸಗಳೂ ಹೆಚ್ಚು ಹೆಚ್ಚಾಗಿ ಬರತೊಡಗಿದ ಕಾರಣ ಹರಿಯ ಚಿಕ್ಕಪ್ಪ ಮತ್ತು ಶಂಕರನ ಸಂಗಡಿಗರಿಗೆ ತಮ್ಮ ಗ್ರಾಹಕರನ್ನು ಸಂತೃಪ್ತಿ ಪಡಿಸುವುದೇ ಕಷ್ಟವಾಗತೊಡಗಿತು.

ಅದೊಂದು ದಿನ ಶಂಕರ ಯಾವುದೋ ಕೆಲಸದ ನಿಮ್ಮಿತ್ತ ಹೊರಗೆ ಹೋಗಿದ್ದಾಗ ಹರಿಯ ಮೊಬೈಲ್ನಿಂದ ಕರೆ ಬಂದಿತು. ಬಹಳ ದಿನಗಳ ನಂತರ ಹರಿಯ ಕರೆಯನ್ನು ಕೇಳಿ ಸಂತೋಷಗೊಂಡು ಕರೆಯನ್ನು ಸ್ವೀಕರಿಸಿ, ಹೇಳೋ ಹರಿ ಹೇಗಿದ್ದೀಯಾ? ಕೆಲಸ ಹೋದ ಮೇಲೆ ಪತ್ತೇನೇ  ಇಲ್ಲಾ? ಇಲ್ಲೇ ಇದ್ಯಾ ಇಲ್ಲಾ ಯಾವುದಾದರೂ ಊರಿಗೆ ಹೋಗಿಬಿಟ್ಯಾ?  ನಿನಗೆ ಬಿಡಪ್ಪಾ ಎಲ್ಲರೂ ಕರೆದು ಕೆಲಸ ಕೊಡ್ತಾರೆ ಅಂತಾ ಒಂದೇ ಸಮನೆ ಮಾತಾನಾಡತೊಡಗಿದರೆ ಅತ್ತ ಕಡೆಯಿಂದ ಮಾತೇ ಕೇಳಿಸದೆ ಬರೀ ಅಳುವ ಶಬ್ಧ ಕೇಳಿಬರುತ್ತಿತ್ತು.  ಹರಿ, ಹರಿ, ಏನಾಯ್ತೋ ? ಯಾಕೋ ಅಳ್ತಾ ಇದ್ಯಾ ಹೇಳೋ ಅಂತಾ ಜೋರಾಗಿ ಕೂಗಿದಾಗ, ಅತ್ತ ಕಡೆಯಿಂದ ಅಳು ನಿಲ್ಲಿಸಿ, ಅಣ್ಣಾ, ನಾನು ಹರಿಯ ಹೆಂಡತಿ ಮಾತನಾಡುತ್ತಿದ್ದೇನೆ. ನಮ್ಮ ಮನೆಯವರಿಗೆ ತುಂಬಾನೇ ಹುಷಾರಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದೇವೆ. ನನಗೆ ಕೈಕಾಲು ಆಡುತ್ತಿಲ್ಲ.  ಅದಕ್ಕೇ ನಿಮಗೆ ಕರೆ ಮಾಡಿದೆ ಎಂದರು.  ಆತ್ಮೀಯ ಗೆಳೆಯನಿಗೆ ಹುಶಾರಿಲ್ಲದ್ದನ್ನು ಕೇಳಿ ಆತಂಕ ಗೊಂಡ ಶಂಕರ ತನ್ನ ಸಹೋದ್ಯೋಗಿಗಳಿಗೆ  ಕೆಲಸ ನೋಡಿಕೊಳ್ಳಲು ತಿಳಿಸಿ, ಗೆಳೆಯನನ್ನು ಸೇರಿಸಿದ್ದ ಆಸ್ಪತ್ರೆಯ ಕಡೆಗೆ ಧಾವಿಸಿ ಹೋಗಿ ನೋಡಿದರೆ ಗೆಳೆಯನ್ನು ತುರ್ತುನಿಗಾ ಘಟಕದಲ್ಲಿ ಮೂಗಿಗೆ ಕೃತಕ ಉಸಿರಾಟ ಮುಖವಾಡ ಹಾಕಿದ್ದಾರೆ, ಕೈಗೆ ಡ್ರಿಪ್ಸ್ ಹಾಕಿದ್ದಾರೆ. ಪ್ರಜ್ಞೆ ಇಲ್ಲದೆ ಮಲಗಿದ್ದ ಕುಚಿಕು ಗೆಳೆಯನನ್ನು ನೋಡಿ ಶಂಕರನ ಕರುಳು ಚುರುಕ್ ಎಂದಿತು.  ಹೊರಗೆ ಬಂದು ಹರಿಯ ಹೆಂಡತಿಯವರ ಬಳಿ ಬಂದು ಹರಿಗೆ ಏನಾಯ್ತು ಎಂದು ವಿಚಾರಿಸಿದಾಗ ಅವರು ಹೇಳಿದ ವಿಷಯ ನಿಜಕ್ಕೂ ಆಶ್ಚರ್ಯ ತರುವಂತಿತ್ತು.

ಐದಾರು ತಿಂಗಳಿನಿಂದ ಕೆಲಸವಿಲ್ಲದ ಹರಿ ಆಕ್ಷರಶಃ ಕಂಗೆಟ್ಟಿದ್ದ. ಕೆಲಸ ಹೋಗಲಿ, ಕೆಲಸದ ಸಂದರ್ಶನವೂ ಸರಿಯಾಗಿ ಬರುತ್ತಿರಲಿಲ್ಲ. ಬಂದ ಒಂದೆರಡು ಸಂದರ್ಶನಗಳಲ್ಲಿ  ಇವನ ಅನುಭವ ಹೆಚ್ಚಾಗಿದೆ ಎಂದು ತಿರಸ್ಕರಿಸಿದರೆ ಇನ್ನು ಕೆಲವರು ಇವನ  ಕೆಲಸ ಕಳೆದು ಕೊಂಡ ಪರಿಸ್ಥಿತಿಯ ದುರ್ಲಾಭ ಪಡೆಯಲು ಅವನು ಅದಾಗಲೇ ಪಡೆಯುತ್ತಿದ್ದ ಸಂಬಳಕ್ಕಿಂತಲೂ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ಕೋರುತ್ತಿದ್ದರಿಂದ ಹರಿ ಬಹಳ ನೊಂದು ಖಿನ್ನತೆಗೆ ಒಳಗಾಗಿ ಇಂದು ಅಚಾನಕ್ಕಾಗಿ ಮನೆಯಲ್ಲಿ ಕುಸಿದು ಬಿದ್ದು ಲಘು ಹೃದಯಾಪಘಾತಕ್ಕೆ ಒಳಗಾಗಿದ್ದ.   ಕೆಲಸ ಇಲ್ಲದಿದ್ದ ಕಾರಣ  ಆರೋಗ್ಯ ವಿಮೆಯೂ ಇರಲಿಲ್ಲವಾದ್ದರಿಂದ ಶಂಕರನೇ ತನ್ನ ಬಳಿ ಇದ್ದ ದುಡ್ಡಿನಿಂದ ಆಸ್ಪತ್ರೆಯ ಬಿಲ್ ಕಟ್ಟಿ ಒಂದು ವಾರದ ನಂತರ ಹರಿಯನ್ನು ಮನೆಗೆ ಕರೆದು ತಂದಿದ್ದ.

ಹರಿ ಪುನಃ ಚೇತರಿಸಿಕೊಳ್ಳುವವರೆಗೂ ಶಂಕರ ಪ್ರತಿ ದಿನ ಹರಿಯ ಮನೆಗೆ ಬಂದು ಹೋಗಿ ಮಾಡುತ್ತಾ ಮನೆಯ ಎಲ್ಲಾ ಖರ್ಚುಗಳನ್ನು ನಿಭಾಯಿಸತೊಡಗಿದ್ದ. ದೇವರ ದಯೆಯೋ ಗೆಳೆಯನ ಆರೈಕೆಯ ಫಲದಿಂದಾಗಿ ಹರಿ ವೇಗವಾಗಿಯೇ ಚೇತರಿಸಿಕೊಂಡು ಮನೆಯ ಮುಂದೆ ವಾಕಿಂಗ್ ಮಾಡುವಷ್ಟು ಚೇತರಿಸಿಕೊಂಡ. ಗೆಳೆಯನ ಚೇತರಿಕೆ ನೋಡಿ ಖುಷಿಯಾದ ಶಂಕರ ಒಂದು ದಿನ ಹರಿಗೆ ತಮ್ಮ ಆಡುಗೆ ಮನೆಗೆ ಕರೆದು ಕೊಂಡು ಹೋಗಿ ತಮ್ಮ ಕೆಲಸವನ್ನು ತೋರಿಸಿ, ಸುಮ್ಮನೆ ಮನೆಯಲ್ಲಿ ಕುಳಿತು ಆರೋಗ್ಯ ಕೆಡಿಸಿಕೊಳ್ಳುವ ಬದಲು ಇಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ನೋಡಿ ಕೊಂಡರೆ ತಮಗೂ ಸಹಾಯವಾಗುತ್ತದೆ ಮತ್ತು ಹರಿಯ ಮನಸ್ಸಿಗೂ ಬೇಜಾರು ಕಳೆಯುತ್ತದೆ ಎಂದ.  ಶಂಕರನ ಮಾತನ್ನು ಕೇಳಿದ ಹರಿ, ಒಮ್ಮಿಂದೊಮ್ಮೆಲೆ ಗೆಳೆಯನ ಮೇಲೆ ಹೌಹಾರಿದ. ನಾನೇನು? ನನ್ನ ಅಂತಸ್ತೇನು? ನಾನು ನಿಮ್ಮ ಜೊತೆ ಅಡುಗೆ ಕೆಲಸ ಮಾಡುವುದಾ? ನನಗೆ ಆ ಕೆಲಸವೆಲ್ಲಾ ಇಷ್ಟಾ ಇಲ್ಲ. ಅದೇನಿದ್ದರೂ ನನ್ನ ತಾತ ಮತ್ತು ಚಿಕ್ಕಪ್ಪನ ಕಾಲಕ್ಕೇ ಇರಲಿ ಎಂದು ಕೂಗಾಡಿದ.

ಹರಿಯ ಕೂಗಾಟವನ್ನು ಕೇಳಿದ ಹರಿಯ ಚಿಕ್ಕಪ್ಪನವರೂ ಹೊರಗೆ ಬಂದು ಹರಿಯನ್ನು ತಮ್ಮ ಆಡಿಗೆ ಮನೆಯಲ್ಲಿ ನೋಡಿ ಖುಷಿಗೊಂಡು, ನೋಡು ಮಗು, ಯಾವುದೇ ಕೆಲಸದ ಬಗ್ಗೆ ತಾತ್ಸಾರ ಇರಬಾರದು.  ಶ್ರಧ್ಧೆಯಿಂದ ಮಾಡಬೇಕು. ಅಡುಗೆ ಕೆಲಸ ನಮ್ಮ ಕುಲ ಕಸುಬು. ಅಂದು ನಿಮ್ಮ ತಾತ ಅಡುಗೆ ಕೆಲಸ ಮಾಡಿ ನಿಮ್ಮ ತಂದೆಯವರನ್ನು ಓದಿಸಿ ಕೆಲಸಕ್ಕೆ ಸೇರಿಸಿದ್ದರಿಂದಲೇ ಅವರು ನಿನ್ನನ್ನು ಚೆನ್ನಾಗಿ ಓದಿಸಿ ಈ ಮಟ್ಟಕ್ಕೆ ತಂದಿದ್ದಾರೆ. ನೀನು ಮತ್ತು ಶಂಕರ ನಮ್ಮಂತೆ ಇದೇ ಅಡುಗೆ ಕೆಲಸ ಮಾಡಿಕೊಂಡೇ ಇರು ಎಂದು ಹೇಳುತ್ತಿಲ್ಲ. ಬೇರೆ ಕೆಲಸ ಸಿಗುವವರೆಗೂ ಇಲ್ಲಿಗೆ ಬಂದು ನಿನಗೆ ಏನು ಮಾಡಲು ಸಾಧ್ಯವೋ ಅದನ್ನು ಮಾಡು ನಿನಗೂ ಒಂದು ಬದಲಾವಣೆ ಇರುತ್ತದೆ ಮತ್ತು ಚಟುವಟಿಕೆಯಿಂದ ಇದ್ದರೆ ಆರೋಗ್ಯವೂ ಸುಧಾರಿಸುತ್ತದೆ ಎಂದರು.

ಗೆಳೆಯ ಮತ್ತು ಚಿಕ್ಕಪ್ಪನ ಮಾತನ್ನು ಅಷ್ಟು ಸುಲಭವಾಗಿ ತೆಗೆದು ಹಾಕಲು ಆಗದೆ  ಒಲ್ಲದ ಮನಸ್ಸಿನಿಂದಲೇ ಸರಿ ಸರಿ ನಾಳೆಯಿಂದಲೇ ಬರುತ್ತೇನೆ ಎಂದ.  ಹರಿ ಮನೆಗೆ ಬಂದು ಹೆಂಡತಿ ಮತ್ತು ಮಕ್ಕಳೊಂದಿಗೆ ತನ್ನ ಹೊಸ ಜವಾಬ್ಧಾರಿಯ ಬಗ್ಗೆ  ತಿಳಿಸಿದಾಗ ಅವರೆಲ್ಲರೂ ತಾತ್ಸಾರದಿಂದಲೇ ಏನೂ? ನೀವು ಅವರ ಜೊತೆ ಸೇರಿ ಆಡುಗೆ ಕೆಲಸ ಮಾಡ್ತೀರಾ? ಛೀ!! ನಮಗೆಲ್ಲಾ  ಅಸಹ್ಯ ಆಗುತ್ತದೆ. ದಯವಿಟ್ತು ಆ ಕೆಲಸ ಮಾಡಬೇಡಿ. ಬೇರೆಯವರಿಗೆ ಗೊತ್ತಾದರೆ ಗೇಲಿ ಮಾಡುತ್ತಾರೆ ಅಂತ ಹೇಳಿದರೂ, ಪ್ರಾಣ ಸ್ನೇಹಿತ ಮತ್ತು ಚಿಕ್ಕಪ್ಪನವರಿಗೆ ಮಾತು ಕೊಟ್ಟಿದ್ದೇನೆ. ಒಂದೆರಡು ವಾರ ನೋಡ್ತೀನಿ ಇಷ್ಟ ಆಗ್ದೇ ಹೋದ್ರೆ ಬಿಟ್ಟು ಬಿಡ್ತೀನಿ. ಅಷ್ಟರಲ್ಲಿ ಯಾವುದಾದರೂ ಕೆಲಸ ಸಿಕ್ಕಿಬಿಟ್ರೆ ಹೋಗ್ಬಿಡ್ತೀನಿ ಎಂದು ಹೇಳಿ ಮಾರನೆಯ ದಿನದಿಂದಲೇ ಹೊಸ ಕೆಲಸಕ್ಕೆ ಹೋಗ ತೋಡಗಿದ.

ಮೊದಲೆರಡು ದಿನ ಹೊಸ ಕೆಲಸ ಅವನಿಗೆ ರುಚಿಸಲಿಲ್ಲ. ದಿನ ಕಳೆದಂತೆ ಅವನು ಕೆಲಸಕ್ಕೆ ಹೊಂದಿಕೊಳ್ಳ ತೊಡಗಿದ. ಇವರು ಪ್ರತಿಯೊಂದಕ್ಕೂ ಕಷ್ಟ ಪಡುತ್ತಿದ್ದನ್ನು ನೋಡಿ ಮತ್ತು ಇವರ ಕೆಲಸವೆಲ್ಲ ಬಾಯಿ ಮಾತಿನಿಂದಲೇ ನಡೆಯುತ್ತಿತ್ತು ಯಾವುದೇ ಪ್ರಚಾರ ಮಾಡುತ್ತಿರದಿದ್ದನ್ನು ಸೂಕ್ಷ್ಮವಾಗಿ ಗಮನಿಸಿ  ಅವರ ಅಡುಗೆಗಳ ಒಳ್ಳೋಳ್ಳೆಯ ಫೋಟೋಗಳನ್ನು ತೆಗೆದು ಅದರ ವಿವರವನ್ನು  ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ ನಂತರ ಇವರದ್ದೇ ಆದ ಒಂದು  ಸಣ್ಣದಾದ ವೆಬ್ ಸೈಟ್ ಆರಂಭಿಸಿ ಇವರ  ಎಲ್ಲಾ ವಿವರಗಳನ್ನು  ಪ್ರಚಾರ ಮಾಡಿದ. ತನಗೆ ಗೊತ್ತಿದ್ದ ಒಂದೆರಡು ಕಛೇರಿಯ ತಿಂಡಿ  ಮತ್ತು  ಊಟದ ಕಂಟ್ರಾಕ್ಟ್ ಕೊಡಿಸಿದ. ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರದಿಂದ ಇವರಿಗೆ ಹೆಚ್ಚು ಹೆಚ್ಚು ಕೆಲಸಗಳು ಸಿಗತೊಡಗಿದವು. ಇವರ ಗುಂಪಿಗೆ ಇನ್ನಷ್ಟು ಜನರನ್ನು ಸೇರಿಸಿ ಕೊಂಡು ಸಣ್ಣದಾಗಿ ಮನೆಯಲ್ಲೇ ಮಾಡುತ್ತಿದ್ದ ಅಡುಗೆ ಕೆಲಸ ಈಗ  ದೊಡ್ಡದಾಗಿ ಒಂದು ಕಂಪನಿಯ ಹಾಗೆ ಮಾರ್ಪಾಟಾಯಿತು.  ಕಂಪನಿಗಳಿಗೆ ಆಹಾರ ಸರಬರಾಜು ಮಾಡುವುದಲ್ಲದೆ   ದಿನದಿಂದ ದಿನಕ್ಕೆ ಇವರಿಗೆ  ಮದುವೆ, ಮುಂಜಿ, ನಾಮಕರಣಗಳ ಜೊತೆಗೆ ದೊಡ್ದ ದೊಡ್ಡ  ಸಭೆ ಸಮಾರಂಭಗಳ ಕೆಲಸವೂ ಸಿಗತೊಡಗಿತು.

ಶಂಕರ ಒಳ್ಳೆಯ ಸಾಮಾನು ಸರಂಜಾಮುಗಳನ್ನು ತರುತ್ತಿದ್ದರೆ, ಹರಿಯ ಚಿಕ್ಕಪ್ಪನವರ ಸಾರಥ್ಯದಲ್ಲಿ  ಶುಚಿ ರುಚಿಯಾದ ಆಹಾರ ತಯಾರಾದರೆ, ಹರಿ ಅದನ್ನು ಕಾರ್ಪೋರೇಟ್ ಮಾದರಿಯಲ್ಲಿ ಎಲ್ಲರ ಮುಂದೆ ಪ್ರಸ್ತುತ ಪಡಿಸಿ ದೊಡ್ಡ  ಕೆಲಸಗಳನ್ನು ಗಿಟ್ಟಿಸಿ ಕೈ ತುಂಬಾ ಸಂಪಾದಿಸ ತೊಡಗಿದರು. ಮುಂದೆ ಹರಿ ಮತ್ತು ಶಂಕರನ ಮಕ್ಕಳು ಸಹ ಆಹಾರದ ವಿಷಯವಾಗಿಯೇ ಹೆಚ್ಚಿನ ವಿದ್ಯಾಬ್ಯಾಸ ಮಾಡಿ ತಮ್ಮ ತಂದೆಯರ ಜೊತೆಯಲ್ಲಿ ಕೆಲಸ ಮಾಡ ತೊಡಗಿದರು.    ಇವೆಲ್ಲದರೆ ಜೊತೆ, ಶಂಕರನ ಮನೆಯಲ್ಲಿ  ಸಣ್ಣದಾಗಿ ತಯಾರಾಗುತ್ತಿದ್ದ  ಸಿಧ್ಧ ಅಡುಗೆ ಪದಾರ್ಥಗಳು, ಚಟ್ನಿ ಪುಡಿ, ಹುಳಿ ಪುಡಿ, ಸಾರಿನಪುಡಿ, ಉಪ್ಪಿನ ಕಾಯಿ ಈಗ ದೊಡ್ದ ಮಟ್ಟದಲ್ಲಿ ಕಾರ್ಖಾನೆಯ ರೂಪದಲ್ಲಿ ತಯಾರಗ ತೊಡಗಿದವು. ಹರಿ ತನ್ನ  ವಿದೇಶಿ ಸಂಪರ್ಕದಿಂದ ತಮ್ಮ ಆಹಾರೋತ್ಪನ್ನಗಳನ್ನು ವಿದೇಶಗಳಿಗೂ ರಫ್ತುಮಾಡತೊಡಗಿ ಕೆಲವೇ ವರ್ಷಗಳೊಳಗೆ ದೇಶದಲ್ಲೇ ಅತೀ ದೊಡ್ಡ ಸಿದ್ದ ಆಹಾರ ಮತ್ತು ಅಡುಗೆ ಕಾಟ್ರಾಂಕ್ಟರ್ ಆಗಿ ಸಾವಿರಾರು ಕೆಲಸಗಾರರಿಗೆ ಕೆಲಸ ಕೊಟ್ಟು ಕೋಟ್ಯಾಂತರ ಹಣವನ್ನು ಸಂಪಾದಿಸಿ ನೆಮ್ಮದಿಯಿಂದ, ಆರೋಗ್ಯವಾಗಿ,ಸ್ವಾವಲಂಭಿಯಾಗಿ, ಪರೋಪಕಾರಿಯಾಗಿ ಸಾವಿರಾರು ಜನರ ಆಶ್ರಯದಾತರಾಗಿ ಸುಖವಾಗಿ ಜೀವನ ನಡೆಸುತ್ತಿದ್ದಾರೆ.  ಹರಿ ಮತ್ತು ಶಂಕರನ ತಂದೆಯರಿಂದ ಶುರುವಾದ ಗೆಳೆತನ, ಹರಿ ಮತ್ತು ಶಂಕರನಿಂದ ಮುಂದುವರೆದು ಈಗ ಹರಿಯ ದೊಡ್ಡ ಮಗನಿಗೆ ಶಂಕರನ ಮಗಳೊಂದಿಗೆ ಸಂಬಂಧ ಬೆಳೆಸಿ ಒಂದೇ ಕುಟುಂಬಸ್ತರಾಗಿದ್ದಾರೆ.

ನೆಮ್ಮದಿಯ ಜೀವನ ನಡೆಸಲು ವಿದ್ಯೆ ಅವಶ್ಯಕವಾದರೂ ವಿದ್ಯೆ ಕಲಿತ ಮೇಲೆ ಮಾಡುವ ಕೆಲಸದ ಮೇಲಿನ ಕೀಳರಿಮೆ ಇರಬಾರದು. ಹರಿಗೆ ವಿದ್ಯೆ ಇತ್ತು  ಅವನಿಗೆ ಜೀವನದಲ್ಲಿ ಎತ್ತರೆತ್ತರಕ್ಕೆ ಹೋಗುವ ಮಾರ್ಗ ಗೊತ್ತಿದ್ದರೂ ಸಮಸ್ಯೆಗಳು ಬಂದಾಗ ಅದನ್ನು ಬಗೆ ಹರಿಸುವ ಪರಿ ಗೊತ್ತಿರಲಿಲ್ಲ.  ಶಂಕರನಿಗೆ ವಿದ್ಯೆಗಿಂತ ಲೋಕ ಜ್ಞಾನ ಹೆಚ್ಚಾಗಿತ್ತು.  ಕೆಲಸದ ಮೇಲಿನ ಕೀಳರಿಮೆ ಇರಲಿಲ್ಲ ಮತ್ತು ಸಮಸ್ಯೆಗಳನ್ನು ಬಂದಾಗ ಅದನ್ನು  ಪರಿಹರಿಸುವ ಪರಿಜ್ಞಾನ ಇದ್ದ ಪರಿಣಮವಾಗಿಯೇ ಕೆಲಸ ಕಳೆದು ಕೊಂಡರೂ ಆಡುಗೆ ಕೆಲಸಕ್ಕೆ ಇಳಿಯುವ ಮೂಲಕ  ಅದೇ ಕೆಲಸವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಉದ್ದಾರವಾಗಿದ್ದಲ್ಲದೆ ತನ್ನ ಗೆಳೆಯನ ಕಣ್ಣನ್ನು ತೆರಿಸಿ ಅವನಿಗೆ ತನ್ನ ಕುಲ ಕಸುಬಿನ ಮೇಲಿದ್ದ ಕೀಳರಿಮೆಯನ್ನು ಹೋಗಾಲಾಡಿಸಿ ಇಂದು  ಅವನನ್ನು ಅದೇ ಕೆಲಸದ ಮೂಲಕ ಸಮಾಜದ ಪ್ರತಿಷ್ಟಿತ ವ್ಯಕ್ತಿಯನ್ನಾಗಿಸಿದ.

ಇಂದಿನ ಯುವಜನತೆ  ತನ್ನ ವಿದ್ಯೆಗೆ ತಕ್ಕಂತಹ ಕೆಲಸವೇ ಬೇಕು. ಆರಂಭದಿಂದಲೂ ಐದಂಕಿಯ ಸಂಬಳವೇ ಬೇಕು, ಐಶಾರಾಮೀ ಜೀವನವೇ ಇರಬೇಕು ಎಂದು ಕನಸು ಕಾಣುತ್ತಾ ನಿರುದ್ಯೋಗಿಯಾಗಿರುವ ಬದಲು.   ಇನ್ನೊಬ್ಬರ ಕೈಕೆಳಗೆ ಕೆಲಸ  ಮಾಡುತ್ತಾ ತಿಂಗಳ ಕೊನೆಯ ದಿನಂಕವರೆಗೂ ಕಾದು ಸಂಬಳ ಪಡೆದ ಮೂರ್ನಾಲ್ಕು ದಿನಗಳ ಒಳಗೇ  ಅದನ್ನು ಖರ್ಚು ಮಾಡಿಕೊಂಡು ಮುಂದಿನ ಸಂಬಳದವರೆಗೂ ಕಾಯುವ ಬದಲು ತಾವೇ  ತಮಗೆ ಗೊತ್ತಿರುವ ಕೆಲಸವನ್ನೇ ಶ್ರಧ್ಧೆಯಿಂದ ಮಾಡುತ್ತಾ  ಸ್ವಾವಲಂಭನೆಯಿಂದ ಮತ್ತಷ್ಟು ಜನರಿಗೆ ಆಶ್ರಯದಾತರಾಗಿ ನೆಮ್ಮದಿಯ ಜೀವನ ನಡೆಸ ಬಹುದಲ್ಲವೇ?

ಏನಂತೀರೀ?

3 thoughts on “ಕೆಲಸ

 1. ಚೆನ್ನಾಗಿದೆ. ಕತೆಯನ್ನು ಸ್ವಲ್ಪ ಮೊಟಕು ಮಾಡಬಹುದಿತ್ತೇನೋ.
  ಸಮಯ , ಸಂದರ್ಭಕ್ಕೆ ನಾವು ಹೊಂದಿಕೊಳ್ಳವುದು , (ಹಮ್ಮು ಬಿಮ್ಮುಗಳನ್ನು ಬಿಟ್ಟು ) ಅನಿವಾರ್ಯ ವೆಂಬುದನ್ನು ಕತೆಯಲ್ಲಿ ಹೇಳಿದ್ದೀರಿ.

  Liked by 1 person

  1. ಭಾವನೆಗಳನ್ನು ವ್ಯಕ್ತ ಪಡಿಸುವ ಸಮಯದಲ್ಲಿ ಕಥೆಗಳು ಕೆಲ ಸಮಯ ದೊಡ್ಡದಾಗಿ ಬಿಡುತ್ತವೆ. ನಿಮ್ಮ ಸಲಹೆಯನ್ನು ಮುಂದಿನ ಬರಹಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

   ಧನ್ಯವಾದಗಳು

   Liked by 2 people

   1. ನಮ್ಮ ನಿಮ್ಮ ಸ್ನೇಹ ಮುಂದುವರಿಯಲಿ.
    ನಾನೊಬ್ಬ ನಿವೃತ್ತ ಬ್ಯಾಂಕ್ ಅಧಿಕಾರಿ.ಈಗ ಆಪ್ತಸಲಹೆಗಾರನಾಗಿದ್ದೇನೆ.
    ಪ್ರಕಾಶ ನಡಹಳ್ಳಿ
    Psychological counsellor
    Blog ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ
    https://awareness56.wordpress.com

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s