ಇಲ್ಲೇ ಸ್ವರ್ಗ ಇಲ್ಲೇ ನರಕ

ಅದೊಂದು  ಬೆಳಿಗ್ಗೆ ಶಂಕರ ತನ್ನ ಕಛೇರಿಯಲ್ಲಿ  ಸಭೆಯೊಂದರಲ್ಲಿ ತುರ್ತಾಗಿ ಭಾಗವಹಿಸಲೇ ಬೇಕಾಗಿದ್ದ ಕಾರಣ ಮನೆಯಿಂದ  ಸ್ವಲ್ಪ ಬೇಗನೇ ಹೊರಟು, ತುಸು ಲಗು ಬಗನೇ ಕಾರ್ ಓಡಿಸುತ್ತಿದ್ದ.  ಅವರ ಕಾರಿನ ಸ್ವಲ್ಪ ಮುಂದೆ ಒಬ್ಬ ವಯಸ್ಕರೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆಯೇ  ಗಾಡಿ ನೆಲಕ್ಕೆ  ಜೋರಾಗಿ ಅಪ್ಪಳಿಸಿದ ಶಬ್ಧ ಕೇಳಿದೊಡನೆ ಶಂಕರ ದಢಾರ್ ಎಂದು ಕಾರ್ ನಿಲ್ಲಿಸಿದ. ವೃಧ್ಧರ  ಗಾಡಿಯೇನೋ ಸ್ವಲ್ಪ ದೂರದಲ್ಲಿ ರಸ್ತೆಯ ಮೇಲೆ ಬಿದ್ದಿತ್ತು. ಆದರೆ ಗಾಡಿ ಚಾಲನೆ ಮಾಡುತ್ತಿದ್ದ ವಯಸ್ಕರು ಒಂದು ಕ್ಷಣ ಕಾಣಲಿಲ್ಲವಾದರೂ, ಕೆಲವೇ ಕ್ಷಣದಲ್ಲಿ ಅಯ್ಯೋ,  ಅಮ್ಮಾ ಎನ್ನುವ ರೋದನ ಕೇಳಿ ಬಂತು.

ಶಂಕರಿನಿಗೋ ಪ್ರಾಣ ಸಂಕಟ. ಈಗಾಗಲೇ ಕಛೇರಿಗೆ ಹೋಗಲು ತಡವಾಗುತ್ತಿದೆ. ಆದರೆ ಕಣ್ಣ ಮುಂದೆ ನಡೆದ ಅವಘಡವನ್ನು ಮೀರಿ ಹೋಗಲು ಮನಸ್ಸಾಗದೆ ಮಾನವೀಯತೆ ದೃಷ್ಟಿಯಿಂದ ಕಾರ್ ತುಸು ಪಕ್ಕದಲ್ಲಿ ನಿಲ್ಲಿಸಿ, ಆಕ್ರಂದನ ಕೇಳಿ ಬರುತ್ತಿದ್ದ ಸ್ಥಳಕ್ಕೆ ಧಾವಿಸಿ ನೋಡಿದರೆ,  ಹಿಂದಿನ ದಿನವಷ್ಟೇ, ಯಾವುದೋ ಕೇಬಲ್ ಹಾಕಲು ಅಗೆದಿದ್ದ ಗುಂಡಿಯೊಳಗೆ ಬಿದ್ದು ಬಿಟ್ಟಿದ್ದಾರೆ.  ಶಂಕರ ಕೂಡಲೇ  ಅಲ್ಲಿಯೇ ಪಕ್ಕದಲ್ಲಿ ಕೆಲಸಗಾರರು ಇಟ್ಟು ಹೋಗಿದ್ದ ಏಣಿಯನ್ನು ಹಳ್ಳದೊಳಗೆ ಇಟ್ಟು ಸರ ಸರನೆ ಇಳಿದು ಮತ್ತೊಬ್ಬರ ಸಹಾಯದಿಂದ ಬಿದ್ದವರನ್ನು ಮೇಲಕ್ಕೆ ನಿಧಾನವಾಗಿ ತಂದು ಕುಳ್ಳರಿಸಿ ತನ್ನ ಕಾರಿನಲ್ಲಿದ್ದ ನೀರನ್ನು ಕುಡಿಸಿ ಅವರ ಮೈ ಕೈಗೆ ಆಗಿದ್ದ ಗಾಯಗಳನ್ನೆಲ್ಲಾ  ತನ್ನ ಕರ್ಚೀಫ್ನಲ್ಲಿ ಒರೆಸುತ್ತಿರುವಾಗಲೇ ಪೋಲೀಸರು ಬಂದು  108 ಆಂಬ್ಯುಲೆನ್ಸ್ಗೆ ಕರೆ ಮಾಡಿ ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಇಷ್ಟರ ಮಧ್ಯದಲ್ಲಿ, ಗುರುತಿಲ್ಲದ ಪರಿಚಯವಿಲ್ಲದ ವ್ಯಕ್ತಿಗೆ ಇಷ್ಟೋಂದು ಆಸ್ತೆ ವಹಿಸಿ ಸಹಾಯ ಮಾಡುತ್ತಿದ್ದನ್ನು  ಗಮನಿಸಿದ ಆ ವೃಧ್ಧರು, ಶಂಕರನಿಗೆ,  ನೀನು ಯಾರ ಮಗನೋ ಕಾಣೆ, ದೇವರ ಬಂದಹಾಗೆ ಬಂದು ನನಗೆ ಸಹಾಯ ಮಾಡಿದೆ. ನಿನ್ನನ್ನು ದೇವರು ಚೆನ್ನಾಗಿ ಇಟ್ಟಿರಲಿ ಎಂದಾಗ, ಅಯ್ಯೋ ಬಿಡಿ ರಾಯರೇ,  ಮನುಷ್ಯ ಮನುಷ್ಯರಿಗೆ ಸಹಾಯಾಮಾಡದೇ ಇರಲಾಗುತ್ತದೆಯೇ? ಮಾನವೀಯತೆಯ ದೃಷ್ಟಿಯಿಂದ ನನ್ನ ಜಾಗದಲ್ಲಿ ಬೇರೆಯವರು ಯಾರಿದ್ದರೂ ಸಹಾಯ ಮಾಡುತ್ತಿದ್ದರು ಎಂದಾಗ, ನೀನು ಹೇಳಿದ್ದು ಸರಿಯಾದರೂ ಎಲ್ಲರಿಗೂ ಅಂತಹ ಮನಸ್ಸು ಇರುವುದಿಲ್ಲ. ಎಲ್ಲರೂ ಮೊಬೈಲ್ನಲ್ಲಿ  ವಿಡಿಯೋ ತೆಗೆಯುವುದರಲ್ಲೇ ಮಗ್ನರಾಗಿರುತ್ತಾರೆ. ನಿನ್ನಂತೆ ಸಹಾಯ ಮಾಡುವವರು ಬಹಳ ವಿರಳ ಎಂದು, ನೀನು ಇಂದು  ಮಾಡಿದ್ದು , ಮುಂದೆ ನಿನ್ನ ಮಕ್ಕಳನ್ನು ಕಾಪಾಡುತ್ತದೆ ಎಂದು ಹಾರೈಸಿದರು. ಅಷ್ಟರಲ್ಲಾಗಲೇ  ಆಂಬ್ಯುಲೆನ್ಸ್ ಬಂದು ಅವರನ್ನು ಕರೆದು ಕೊಂಡು ಹೋಯಿತು. ಶಂಕರನೂ ತನ್ನ ಬಾಸ್ ಅವರಿಗೆ  ಬಹಳ ತುರ್ತು ಕೆಲದಿಂದಾಗಿ ಇಂದಿನ ಮೀಟಿಂಗ್ ಬರಲು ತುಸು ಹೊತ್ತಾಗ ಬಹುದು ಅದಕ್ಕೆ ಕ್ಷಮೆ ಇರಲಿ ಎಂಬ ಸಂದೇಶ ರವಾನಿಸಿ ಲಗು ಬಗನೆ ಕಛೇರಿಯತ್ತ ಹೊರಟ.

ಒಳ್ಳೆಯ ಕೆಲಸ ಮಾಡುವವರಿಗೆ  ದೇವರ ಬೆಂಬಲ ಸದಾ ಕಾಲವೂ ಇರುತ್ತದೆ ಎನ್ನುವುದಕ್ಕೆ ಪುರಾವೆ ಎನ್ನುವಂತೆ,  ಅಂದಿನ ಮೀಟಿಂಗ್ಗೆ  ಹೊರಗಿನಿಂದ ಬರಬೇಕಿದ್ದವರೂ  ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡು ಕಛೇರಿಗೆ ಬರುವಷ್ಟರಲ್ಲಿ  ಶಂಕರನೂ ಕಛೇರಿಗೆ ತಲುಪಿ ಯವುದೇ ಆಭಾಸವಾಗದಂತೆ ಯಶಸ್ವಿಯಾಗಿ  ಮೀಟಿಂಗ್ ಮುಗಿಸಿ ಎಲ್ಲರ ಮೆಚ್ಚುಗೆಗೂ ಪಾತ್ರನಾಗಿ ನಂತರ ಊಟದ ಸಮಯದಲ್ಲಿ ನಡೆದದ್ದೆಲ್ಲವನ್ನೂ ತನ್ನ ಸಹೋದ್ಯೋಗಿಗಳಿಗೆ ಸವಿರವಾಗಿ ವಿವರಿಸಿದ್ದ.

ಕಛೇರಿಯನ್ನು ಮುಗಿಸಿ ಸಂಜೆ ಮನೆಯ ಗೇಟ್ ಬಳಿ ಬಂದು ಎಂದಿನಂತೆಯೇ ಗೇಟ್ ತೆಗೆಯಲು ಹಾರ್ನ್ ಮಾಡಿದ. ಹಾರ್ನ್ ಮಾಡಿದ ಒಂದೆರಡು ನಿಮಿಷಗಳಲ್ಲಿಯೇ ಮಗ ಓಡಿ ಬಂದು ಗೇಟ್ ತೆಗೆದು ಆ ಎರಡು ನಿಮಿಷಗಳಲ್ಲಿಯೇ ಇಡೀ ದಿನದ ವರದಿಯನ್ನು ಒದಗಿಸುತ್ತಿದ್ದ  ಮಗ  ಇಂದು ಬರಲೇ ಇಲ್ಲ.   ಮೂರ್ನಾಲ್ಕು ಬಾರಿ ಹಾರ್ನ್ ಮಾಡಿದಾಗ ಶಂಕರನ ಮಡದಿ ಒಳಗಿನಿಂದ ಬಂದು ಗೇಟ್ ತೆಗೆದಳು. ಮಕ್ಕಳು ಬಹುಶಃ ಊಟ ಮಾಡುತ್ತಿರಬೇಕೆಂದು ಭಾವಿಸಿದ ಶಂಕರ ಕಾರ್ ನಿಲ್ಲಿಸಿ ತನ್ನ ಲ್ಯಾಪ್ಟಾಪ್ ಬ್ಯಾಗ್ ಮತ್ತು ಊಟದ ಡಬ್ಬಿಯನ್ನು ತೆಗೆದುಕೊಂಡು ಮನೆ ಪ್ರವೇಶಿಸಿ, ಎಲ್ಲಮ್ಮಾ ನಿನ್ನ ಮಗ? ಸದ್ದೇ ಇಲ್ಲಾ? ಊಟ ಮಾಡ್ತಾ ಇದ್ದಾನಾ? ಎಂದು ತನ್ನ ಕೋಣೆಯತ್ತ ಕಣ್ಣು ಹಾಯಿಸಿದರೆ ಟಿವಿ ಮಾತ್ರ ಸದ್ದು ಮಾಡುತ್ತಿತ್ತು .ಆದರೆ, ಅಲ್ಲೆಲ್ಲೂ ಮಗನ ಪತ್ತೆಯೇ ಇರಲಿಲ್ಲ. ಅಯ್ಯೋ ಅವನ ಬಗ್ಗೆ ಏನು ಹೇಳೋದು?  ಅದೊಂದು ದೊಡ್ಡ ಕಥೆ. ಅಲ್ನೋಡಿ ಹೋಗಿ ಅವನ ರೂಮಿನಲ್ಲಿ ಮಲಗಿದ್ದಾನೆ.  ಕೈಕಾಲು ಮುಖ ತೊಳೆದುಕೊಂಡು ಬಟ್ಟೆ ಬದಲಾಯಿಸಿ ಬನ್ನಿ ಎಲ್ಲವನ್ನೂ ಹೇಳುತ್ತೇನೆ ಎಂದಾಗ, ಗಾಭರಿಯಾದ  ಶಂಕರ, ಅಯ್ಯೋ ರಾಮಾ!! ಏನಾಯ್ತಮ್ಮಾ? ಎಂದು ಬಚ್ಚಲು ಮನೆಗೆ ಹೋಗಿ ದಡಬಡನೆ ಕೈಕಾಲು ತೊಳೆದುಕೊಂದು ಮಗನ ಕೋಣೆಯತ್ತ ಧಾವಿಸಿ ಬಂದು ನೋಡಿದರೆ,  ಮಗನ ತಲೆ, ಕೈ ಮತ್ತು ಕಾಲುಗಳಿಗೆ ಪೆಟ್ಟಾಗಿ ಔಷಧಿಯ ಪಟ್ಟಿ ಕಟ್ಟಿದೆ. ಮಗ ಸುಮ್ಮನೆ ಮಲಗಿದ್ದಾನೆ.

ಏನಾಯ್ತಮ್ಮಾ? ಹೇಗಾಯ್ತಮ್ಮಾ? ಯಾಕೆ ನನಗೇನು ಹೇಳಲೇ ಇಲ್ವಲ್ಲಾ? ಎಂದು  ಒಂದೇ ಉಸಿರಿನಿಂದ ಮಡದಿಯತ್ತ ಕೇಳಲು, ಮಗು ಮಧ್ಯಾಹ್ನ ಶಾಲೆಯಿಂದ  ಮನೆಗೆ ಬರಲು ಬಸ್ ಕಾಯ್ತಾ ಇದ್ದಾಗ ಯಾರೋ ನಾಲ್ಕೈದು ಹುಡುಗರು ಬೈಕ್ನಲ್ಲಿ ಒಬ್ಬರಿಗೊಬ್ಬರು ಚೇಸ್ ಮಾಡುವ ಭರದಲ್ಲಿ ನಮ್ಮ ಮಗನಿಗೆ ಗುದ್ದಿ ತಪ್ಪಿಸಿಕೊಂಡು ಹೋಗಿದ್ದಾರೆ. ಸದ್ಯ  ಬಸ್ಗೆ ಕಾಯುತ್ತಿದ್ದ  ಯಾರೋ  ಪುಣ್ಯಾತ್ಮರು ಇವನನ್ನು ಅಲ್ಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ಚಿಕಿತ್ಸೆ ಮಾಡಿಸಿ ಆಟೋದಲ್ಲಿ ಮನೆಯವರೆಗೂ ಕರೆದು ಕೊಂಡು ಬಿಟ್ಟು ಹೋದ್ರು.  ನೀವು ಕೂಡ ಇಂದು ಆಫೀಸಿನಲ್ಲಿ ಏನೋ ಇಂಪಾರ್ಟೆಂಟ್ ಮೀಟಿಂಗ್ನಲ್ಲಿ ಇದ್ರಿ. ಗಾಯಾನೂ ಹೆಚ್ಚಾಗಿರಲಿಲ್ಲವಾದ್ದ ಕಾರಣ ಸುಮ್ಮನೆ ನಿಮಗೆ ಗಾಭರಿ ಮಾಡುವುದು ಬೇಡ ಎಂದು ಹೇಳಲಿಲ್ಲ. ಮಾತ್ರೆಗಳನ್ನೆಲ್ಲಾ ಕೊಟ್ಟಿದ್ದಾರೆ ಒಂದೆರಡು ದಿನ  ಮನೆಯಲ್ಲೇ ಇದ್ರೆ ಸುಧಾರಿಸಿಕೊಂಡು ಬಿಡ್ತಾನೆ. ಚಿಕಿತ್ಸೆಗಾದ ದುಡ್ಡು ಅವರಿಗೆ ಕೊಡಲು ಹೋದಾಗ, ಅಯ್ಯೋ ಇವನೂ ಕೂಡ  ನನ್ನ  ಮೊಮ್ಮಗನಂತೆ, ಸದ್ಯ ದೇವರ ದಯೆ ಕೇವಲ ತರಚು ಗಾಯಗಳಾಗಿವೆ.  ಖರ್ಚೇನೂ ಹೆಚ್ಚಾಗಿಲ್ಲ.  ನೀವೇನು  ಕೊಡಬೇಕಿಲ್ಲ ಎಂದು ಎಲ್ಲಿಗೋ ತುರ್ತಾಗಿ ಹೋಗಬೇಕಾಗಿದ್ದರಿಂದ ಮನೆಯ ಒಳಗೂ ಬಾರದೇ, ಬಂದ ಆಟೋವಿನಲ್ಲಿಯೇ  ಹಿಂದಿರುಗಿ ಹೋರಟೇ ಹೋದರು ಎಂದಳು. ನೀನೇನಾದ್ರೂ ಅವರ ನಂಬರ್ ತೆಗೆದುಕೊಂಡೆಯಾ? ಅವರಿಗೆ ಕರೆ ಮಾಡಿ ಧನ್ಯವಾದಗಳನ್ನು ಹೇಳಬಹುದಿತ್ತು ಎಂದರೆ, ಇಲ್ಲಾರೀ  ಆ ಗಾಬರಿಯಲ್ಲಿ ಅದು ನನಗೆ ಹೊಳೆಯಲೇ ಇಲ್ಲ. ಒಟ್ಟಿನಲ್ಲಿ ದೇವರ ಹಾಗೆ ಬಂದು ನನ್ನ ಮಗನನ್ನು ಕಾಪಾಡಿದ ಅವರನ್ನು ಮತ್ತು ಅವರ ಕುಟುಂಬದವರನ್ನು ಆ ದೇವರು ಚೆನ್ನಾಗಿ ಇಟ್ಟಿರಲಿ ಎಂದಳು ಹಾರೈಸಿದಳು ಮಡದಿ.

ಮಡದಿಯ ಮಾತನ್ನು ಕೇಳುತ್ತಿದ್ದ ಶಂಕರ, ಇಂದು ಬೆಳೆಗ್ಗೆಯೇ ಆ ವೃದ್ದರು ನೀನು ಇಂದು  ಮಾಡಿದ್ದು , ಮುಂದೆ ನಿನ್ನ ಮಕ್ಕಳನ್ನು ಕಾಪಾಡುತ್ತದೆ ಎಂಬ ಹಾರೈಕೆಯ  ಫಲ ಇಷ್ಟು ಬೇಗ ಫಲಿಸುತ್ತದೆ ಎಂದು ಎಣಿಸಿರಲಿಲ್ಲ ಎಂದು ತನ್ನಷ್ಟಕ್ಕೆ ತಾನೇ ಗೊಣಕಿಕೊಂಡ.   ಅದೇ ಸಮಯದಲ್ಲಿ ಮನೆಯ ಮತ್ತೊಂದು ಕೋಣೆಯಿಂದ  ಟಿವಿಯಲ್ಲಿ ಅಂಬರೀಶ್ ಅಭಿನಯದ ನಾಗರಹೊಳೆ ಸಿನಿಮಾದ   ಇಲ್ಲೇ ಸ್ವರ್ಗ ಇಲ್ಲೇ ನರಕ ಬೇರೆ ಇಲ್ಲಾ ಸುಳ್ಳು. ಹುಟ್ಟು ಸಾವು ಎರಡರ ಮಧ್ಯೆ ಮೂರು ದಿನದ ಬಾಳು*  ಎಂಬ ಹಾಡು  ಕೇಳಿ ಬರುತ್ತಿತ್ತು.  ಇದಕ್ಕೇ ಹೇಳುವುದಲ್ಲವೇ, ನಾವು  ಮಾಡಿಡ ಪಾಪ ಮತ್ತು  ಪುಣ್ಯಗಳ  ಫಲಗಳನ್ನು ಇಲ್ಲೇ ಅನುಭವಿಸುತ್ತೇವೆ ಅಂತ.

ಏನಂತೀರೀ?

2 thoughts on “ಇಲ್ಲೇ ಸ್ವರ್ಗ ಇಲ್ಲೇ ನರಕ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s