ಶಂಕರ ಆಗಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದ. ಬೇಸಿಗೆಯ ರಜೆಯಲ್ಲಿ ಸುಮ್ಮನೆ ಮನೆಯ ಬಳಿ ಹುಡುಗರೊಂದಿಗೆ ಬಿಸಿಲಿನಲ್ಲಿ ಬೀದಿ ಸುತ್ತುವ ಬದಲು, ಬೇಸಿಗೆ ರಜೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳಲು ಅವನ ತಾಯಿ ಅವನನ್ನು ಮಂಗಳೂರಿನ ಸಮೀಪದ ವೇದಶಿಬಿರಕ್ಕೆ ಕಳುಹಿಸಿದರು. ನಾಲ್ಕುವಾರಗಳ ಉಚಿತ ವೇದಶಿಬಿರ. ಬೆಳಿಗ್ಗೆ 4.45ಕ್ಕೇ ಎಲ್ಲರೂ ಎದ್ದು ಕಡ್ಡಾಯವಾಗಿ ತಣ್ಣೀರಿನ ಸ್ನಾನ ಮಾಡಿ 5:30 ಕ್ಕೆಲ್ಲಾ ನಿತ್ಯಪೂಜೆಯಿಂದ ಆರಂಭವಾಗುವ ದಿನಚರಿ ಯೋಗಾಭ್ಯಾಸ, ವೇದಾಧ್ಯಯನ, ಸಂಸ್ಕೃತ ಪಾಠ, ತಿಂಡಿ, ಊಟಗಳ ಜೊತೆ ರಾತ್ರಿ 10 ಘಂಟೆಗೆ ಅನೌಪಚಾರಿಕದೊಂದಿಗೆ ದಿನ ಮುಕ್ತಾಯವಾಗುತ್ತಿತ್ತು. ಆರಂಭದಲ್ಲಿ ಎಲ್ಲಾ ಶಿಬಿರಾರ್ಥಿಗಳಿಗೆ ಹೊಂದಿಕೊಳ್ಳಲು ಕಷ್ಟವಾದರೂ ಬಲುಬೇಗನೆ ಎಲ್ಲರೂ ಒಗ್ಗಿಕೊಂಡು ಶಿಬಿರವನ್ನು ಆನಂದಿಸ ತೊಡಗಿದರು.

ಶಿಬಿರಕ್ಕೆ ಐದಾರು ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದ ಶಿಬಿರಾರ್ಥಿಗಳಿಗೆ ಬಟ್ಟೆ ಒಗೆದುಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ಮನೆಯಲ್ಲಾದರೆ ಅಮ್ಮನೋ, ಅಕ್ಕನೂ ಇಲ್ಲವೇ ಮನೆಗೆಲಸದವರು ಬಟ್ಟೆ ಒಗೆಯುತ್ತಿದ್ದರೆ, ಇಲ್ಲಿ ತಾವೇ ಒಗೆಯಬೇಕಾಗಿದ್ದರಿಂದ ಅಭ್ಯಾಸವಿಲ್ಲದೆ ಇಷ್ಟಪಡುತ್ತಿದ್ದರು.ಆದರೆ, ಪವನ್ ಎಂಬ ಹುಡುಗ ಮಾತ್ರ ಪ್ರತಿದಿನವೂ ತಾನು ಉಟ್ಟ ಬಟ್ಟೆಯನ್ನಲ್ಲದೆ ಮಲಗುತ್ತಿದ್ದ ಜಮಖಾನ ಮತ್ತು ಹೊದಿಗೆಗಳನ್ನೂ ಬೆಳಿಗ್ಗೆ ಸ್ನಾನ ಮಾಡುವಾಗಲೇ ನೆನಸಿಟ್ಟು ಮಧ್ಯಾಹ್ನದ ಬಿಡುವಿನ ಸಮಯದಲ್ಲಿ ಒಗೆದು ಶುಭ್ರ ಮಾಡಿಕೊಳ್ಳುತ್ತಿದ್ದದ್ದು ಎಲ್ಲರಿಗೂ ಸೋಜಿಗವೆನಿಸಿತ್ತು. ಅದೊಮ್ಮೆ ಶಂಕರ ಮತ್ತು ಅವನ ಸ್ನೇಹಿತರು ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಪವನ್ ನೀನೇಕೆ ಪ್ರತಿದಿನವೂ ಹಾಸಿಗೆ ಹೊದಿಕೆಗಳ ಸಹಿತ ಉಟ್ಟ ಬಟ್ಟೆಗಳನ್ನು ಒಗೆಯುತ್ತೀಯಾ? ಎಂದು ಕೇಳಿದಾಗ, ನಮ್ಮ ಮನೆಯಲ್ಲಿ ತುಂಬಾ ಮಡಿ ಹಾಗಾಗಿ ನಮ್ಮ ಅಮ್ಮ ಪ್ರತಿದಿನ ಎಲ್ಲಾ ಬಟ್ಟೆಗಳನ್ನು ಒಗೆದುಕೊಂಡು ಮಡಿ ಮಾಡೇ ಹಾಕಿಕೊಳ್ಳಲು ಹೇಳಿದ್ದಾರೆ ಎಂದಾಗ ಕೆಲವು ಸಂಪ್ರದಾಯಸ್ಥರ ಮನೆಗಳಲ್ಲಿ ಇರಬಹುದಾದ ಈ ರೀತಿಯ ಸತ್ಸಂಪ್ರದಾಯಗಳನ್ನು ಆಡಿಕೊಳ್ಳಬಾರದು. ಮೇಲಾಗಿ ಅದರಿಂದ ಇತರರಿಗೇನೂ ತೊಂದರೆ ಇಲ್ಲದ ಕಾರಣ ಯಾರೂ ಕೂಡಾ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರಲಿಲ್ಲ.
ಪ್ರತಿದಿನ ಮುಂಜಾನೆ ಸರಿಯಾಗಿ 4.45 ಕ್ಕೆ ಪ್ರಬಂಧಕರು ಸೀಟಿ ಹಾಕಿದ ಕೂಡಲೇ ಎಲ್ಲರೂ ಏಳುವ ಪದ್ದತಿ ರೂಢಿಯಾಗಿತ್ತು . ಅಂದೇಕೂ ಎಲ್ಲಾ ಶಿಬಿರಾರ್ಥಿಗಳು ಎದ್ದರೂ ಪವನ್ ಎದ್ದೇ ಇರಲಿಲ್ಲ. ಪವನ್ ಇನ್ನೂ ಯಾಕೆ ಎದ್ದಿಲ್ಲ ಎಂದು ಅವನ ಹತ್ತಿರ ಹೋಗಿ ಎಬ್ಬಿಸಲು ಹೋದ ಶಂಕರಿನಿಗೆ ಒಂದು ಕ್ಷಣ ಗಾಭರಿ ಮತ್ತು ದಿಗ್ಭ್ರಮೆ. ಛೇ| ಛೇ!! ಇದೇನು ಹೀಗಾಗಿದೆಯಲ್ಲಾ!! ಇಷ್ಟು ದೊಡ್ಡ ಹುಡುಗ ಈ ರೀತಿ ಮಾಡಿಕೊಳ್ಳಬಹುದಾ? ಬೇರೆ ಯಾರಿಗಾದರೂ ಈ ವಿಷಯ ಗೊತ್ತಾದರೆ ಏನಂದುಕೊಂಡಾರು? ಪಾಪ ಅವನಿಗೆ ಎಷ್ತು ಬೇಸರವಾಗಬಹುದು? ಎಂದೆಣಿಸಿ, ಮೆಲ್ಲನೆ ಪವನ, ಏಳೋ ಆಗಲಿ ಸೀಟಿ ಹೊಡೆದು ಐದು ಹತ್ತು ನಿಮಿಷಗಳಾಗಿವೆ. ಎಲ್ಲಾರೂ ಎದ್ದಾಗಿದೆ. ಇಂದೇನಾಯ್ತು ನಿನಗೆ? ಎಂದು ಮೈ ಮುಟ್ಟಿ ಎಬ್ಬಿಸಿದರೆ, ಥಟ್ ಎಂದು ಗಾಬರಿಯಿಂದ ಎದ್ದ ಪವನನಿಗೆ ಕಣ್ಣ ಮುಂದಿದ್ದ ಶಂಕರನನ್ನು ನೋಡಿ ಒಂದು ಕ್ಷಣ ಮೌನಿಯಾದ. ತನ್ನೆಲ್ಲಾ ಗುಟ್ಟೆಲ್ಲಾ ಇಂದು ಇವನ ಮುಂದೆ ರಟ್ಟಾಯಿತಲ್ಲಾ, ಎನ್ನುವ ದುಗುಡ. ಕಣ್ಣಲ್ಲಿ ಕಣ್ಣಿಟ್ಟು ನೋಡಲು ಆಗದೆ ಸುಮ್ಮನೆ ತಲೆ ತಗ್ಗಿಸಿ ಕೊಂಡ. ಇದನ್ನೆಲ್ಲಾ ಗಮನಿಸಿದ ಶಂಕರ ಸರಿ ಬೇಗ ಏದ್ದೇಳು, ನಾನು ಏನನ್ನೂ ನೋಡಲಿಲ್ಲ, ನಾನು ಇದನ್ನು ಯಾರ ಬಳಿಯೂ ಹೇಳುವುದಿಲ್ಲಾ ಎಂದಾಗ ಪವನನಿಗೆ ಸ್ವಲ್ಪ ನೆಮ್ಮದಿ.
ಇಬ್ಬರೂ ಒಟ್ಟಿಗೆ ಹಾಸಿಗೆ ಬಟ್ಟೆಗಳ ಸಮೇತ ಸ್ನಾನ ಮಾಡುತ್ತಿರುವಾಗ ಶಂಕರ ತಲೆಗೆ ಸ್ನಾನ ಮಾಡುತ್ತಿರುವುದನ್ನು ನೋಡಿದ ಪವನ, ಯಾಕೋ ಶಂಕರ ನೆನ್ನೆ ತಾನೇ ತಲೆಗೆ ಸ್ನಾನ ಮಾಡಿದ್ದೆ. ಇವತ್ತೂ ಕೂಡ ತಲೆಗೆ ಸ್ನಾನ ಮಾಡ್ತಾ ಇದ್ದೀಯಲ್ಲಾ ? ಏನು ಸಮಾಚಾರ ಎಂದಾಗ. ಶಂಕರ ಮೆಲ್ಲಗೆ ಪವನ ಬಳಿ ಹೋಗಿ ಇನ್ನೇನಪ್ಪಾ ಮಾಡೋದು, ಪವನನ ಮೂತ್ರದ ಮಡಿ ಬಟ್ಟೆಗಳನ್ನು ಮುಟ್ಟಿ ಪಾವನನಾದ ಮೇಲೆ ಶುಚಿರ್ಭೂತನಾಗಬೇಕಲ್ಲವೇ ಎಂದಾಗ ಸಣ್ಣಗೆ ಹುಸಿ ಕೋಪ ತೋರಿಸುತ್ತಾ, ನಾನು ಪ್ರತೀ ದಿನ ರಾತ್ರಿ ಮಲಗಿರುವಾಗ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸಿ ಕೊಳ್ಳುವ ವಿಷಯ ಯಾರ ಬಳಿಯೂ ಹೇಳುವುದಿಲ್ಲ ಎಂದು ಭಾಷೆ ಕೊಡು ಎಂದಾಗ. ಸರಿ ಆಯ್ತೋ ಬಿಡು ಮಾರಾಯ.. ನಾನಂತೂ ಯಾರ ಬಳಿಯೂ ಹೇಳುವುದಿಲ್ಲ ನೀನಾಗಿ ನೀನೇ ಬಾಯಿ ಬಿಟ್ಟರೆ ನಾನದಕ್ಕೆ ಜವಾಬ್ಧಾರನಲ್ಲ ಎಂದಾಗ, ಹೋಗೋ ಹೋಗೋ ಇಷ್ಟು ದಿನಾನೇ ಯಾರಿಗೂ ಹೇಳದೆ ಬಚ್ಚಿಟ್ಟಿದ್ದ ಸತ್ಯ ಇನ್ನು ಮುಂದೆ ಬಿಚ್ಚಿಡ್ತೀನಾ ಎಂದಾ.. ಅಂದಿನಿಂದಲೇ ಪ್ರತ್ರಿ ದಿನ ರಾತ್ರಿ ಮಲಗುವ ಮುನ್ನ ಶಂಕರನೇ ಕಡ್ಡಾಯವಾಗಿ ಪವನನನ್ನು ಶೌಚಾಲಯಕ್ಕೆ ಕೆರೆದುಕೊಂಡು ಹೋಗುವ ಪರಿಪಾಠ ಬೆಳೆಸಿದ. ಮಲಗುವ ಮುನ್ನ ರಾಮಸ್ಕಂದಂ…. ಕರಚರಣ ಕೃತಂವಾ…. ಅನಾಯಾಸೇನ ಮರಣಂ…. ಶ್ಲೋಕಗಳನ್ನು ಹೇಳಿಕೊಂಡು ಮಲಗುವ ಅಭ್ಯಾಸ ಮಾಡಿಸಿದ. ಅದೇ ಕೊನೇ ಪವನ ಮುಂದೆಂದೂ ಹಾಸಿಗೆಯನ್ನು ಒದ್ದೆ ಮಾಡುವ ಪ್ರಸಂಗವೇ ಬರಲಿಲ್ಲ ಮತ್ತು ಪ್ರತಿದಿನ ಬಟ್ಟೆಗಳನ್ನು ಮಡಿ ಮಾಡುವ ಪ್ರಮೇಯವೇ ಒದಗಲಿಲ್ಲ. ಇದಕ್ಕೇ ಅಲ್ಲವೇ ಹೇಳುವುದು ಆಪತ್ತಿನಲ್ಲಿ ಆಗುವವನೇ ಆಪ್ತಮಿತ್ರ ಎಂದು.
ಏನಂತೀರೀ?
ಯಾರಿಗೂ ಹೇಳೋಣು ಬ್ಯಾಡ ಎಂದು ನೀವೇ ಹೇಳಿ ಈ ಲೇಖನದ ಮೂಲಕ ಜಗಜ್ಜಾಹೀರು ಮಾಡೋದು ಸರಿಯೇ?
LikeLike
35-36 ವರ್ಷಗಳ ಹಿಂದೆ ಪಾಣೇಮಂಗಳೂರಿನ ಶ್ರೀಕೃಷ್ಣ ಸೋಮಯಾಯಿಯವರು ನರಿಕೊಂಬುವಿನಲ್ಲಿ ನಡೆಸುತ್ತಿದ್ದ ವೇದ ಶಿಭಿರದಲ್ಲಿ ನನ್ನೋದಿಂಗೆಯೇ ಇದ್ದ ಶಿಭಿರಾರ್ಥಿಯ ಘಟನೆ. ಪವನ ಎಂದು ಹೆಸರು ಬದಲಿಸಿದ್ದೆ.
ಅದುವರೆವಿಗೂ ಯಾರಿಗಾದರೂ ತನ್ನ ಈ ಸಮಸ್ಯೆ ಗೊತ್ತಾದರೆ ಎಂಬ ಭಯದಲ್ಲೇ ಇದ್ದವನಿಗೆ ಒಮ್ಮೆ ಗುಟ್ಟು ರಟ್ಟಾದ ನಂತರ ಅಂಜಿಕೆಯೇ ಹೊರಟು ಹೋಗಿದ್ದೂ ಸಹಾ ಸಮಸ್ಯೆ ಪರಿಹಾರವಾಗಲು ಸಹಾಯಕವಾಯಿತು.
LikeLike