ಸಾಲು ಸಾಲು ಹಬ್ಬ, ಮದುವೆ ಮುಂಜಿ ನಾಮಕರಣಗಳ ಸಂಭ್ರಮದಲ್ಲಿ ತರಕಾರಿ, ಹೂವು ಹಣ್ಣು ವ್ಯಾಪಾರಿಗಳಿಗೆ, ದಿನಸಿ, ಬಟ್ಟೆ ವ್ಯಾಪಾರಿಗಳಿಗೆ, ಎಲ್ಲ ರೀತಿಯ ಛತ್ರದವರಿಗೆ, ಬಾಣಸಿಗರಿಗೆ, ಪುರೋಹಿತರಿಗೆ ಪುರುಸೊತ್ತೇ ಇರುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಒಳ್ಳೆಯ ಮಹೂರ್ತದ ಜೊತೆಗೆ ಛತ್ರ, ಅಡುಗೆಯವರ ಮತ್ತು ಪುರೋಹಿತರ ಸಮಯವನ್ನೂ ನೋಡಿಕೊಂಡೇ ಮದುವೆ ಮುಂಜಿಗಳನ್ನು ನಿರ್ಧರಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.
ಇನ್ನು ಎರಡು ಮೂರು ವಾರಗಳಲ್ಲಿ ಮೂರ್ನಾಲ್ಕು ಗೃಹಪ್ರವೇಶಗಳು, ಒಂದೆರೆಡು ನಿಶ್ಚಿತಾರ್ಥ, ಒಂದೆರಡು ಮದುವೆ ಮತ್ತು ಹುಟ್ಟಿದ ಹಬ್ಬಕ್ಕೆ ಹೋಗಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ತುಂಬಾ ಆತ್ಮೀಯವಾಗಿ, ಪ್ರೀತಿಯಿಂದ, ಇಂದಿನ ಕಾಲದಲ್ಲೂ ಮನೆಯವರೆಗೂ ಬಂದು ಆತ್ಮೀಯವಾಗಿ ಆಮಂತ್ರಿಸಿದಾಗ ಹೋಗದಿದ್ದರೆ, ಅವರ ವಿಶ್ವಾಸಕ್ಕೆ ಮತ್ತು ಬಂಧುತ್ವಕ್ಕೆ ಮಾಡಿದ ಅಪಮಾನ. ಇಂದೆಲ್ಲಾ ಕರೆಯುವುದೇ 50-60 ಆತ್ಮೀಯರನ್ನು. ಹಾಗೆ ಅವರ ಅತ್ಮೀಯ ಜನರ ಸಾಲಿನಲ್ಲಿ ನಾವೂ ಇದ್ದೀವಲ್ಲಾ ಎಂಬುದೇ ಸಂತೋಷ. ಹಾಗಾಗಿ ಸಮಯ ಮಾಡಿಕೊಂಡು ಸಪತ್ನಿ ಸಮೇತರಾಗಿ ಎಚ್ಚರಿಕೆಯಿಂದ ಹೋಗಿಬರುತ್ತೇವೆ. ಇಂದಿನ ಕಾಲದಲ್ಲಿ ಮಂತ್ರಕ್ಕಿಂತ ತಂತ್ರವೇ ಹೆಚ್ಚು ಎನ್ನುವಂತೆ ಶಾಸ್ತ್ರ ಸಂಪ್ರದಾಯಕ್ಕಿಂತಲೂ ಫೋಟೋ ವೀಡೀಯೋಗಳಲ್ಲಿ ತೋರಿಕೆಯ ಆಡಂಬರವೇ ತುಸು ಹೆಚ್ಚೇ ಎನಿಸಿದರು ಕಾಲಾಯ ತಸ್ಮೈ ನಮಃ ಎಂದು ಯಾವುದೇ ಚಕಾರವೆತ್ತದೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದನ್ನು ರೂಢಿ ಮಾಡಿಕೊಂಡಿದ್ದೇವೆ. ಸಭೆ ಸಮಾರಂಭಗಳ ಕರ್ತರು ಮತ್ತು ಪುರೋಹಿತರು ಶಾಸ್ತ್ರ ಸಂಪ್ರದಾಯದ ಕಡೆ ಗಮನಿಸಿದರೆ ಬಹುತೇಕ ಕಾರ್ಯಕ್ರಮಕ್ಕೆ ಬಂದವರೆಲ್ಲರ ಗಮನವೆಲ್ಲವೂ ಊಟ ತಿಂಡಿ ತೀರ್ಥಗಳ ಬಗ್ಗೆಯೇ ಇರುತ್ತದೆ ಎಂದು ಹೇಳಿದರೆ ಉತ್ಪ್ರೇಕ್ಷೆ ಏನಲ್ಲ. ಅದೇ ರೀತಿ ಕಾರ್ಯಕ್ರಮ ಬಹುತೇಕ ಮುಗಿಯುವ ಹಂತಕ್ಕೆ ಬಂದು ಎಲ್ಲರೂ ಉಡುಗೊರೆಗಳನ್ನು ಕೊಟ್ಟು ಮನೆಯವರಿಗೆಲ್ಲಾ ಶುಭಕೋರಿ ಊಟದ ಮನೆಯತ್ತ ಧಾವಿಸುವುದರಲ್ಲಿಯೇ ನಿರತರಾಗಿರುತ್ತಾರೆ.
ಹಿಂದೆಲ್ಲಾ ಅಚ್ಚು ಕಟ್ಟಾಗಿ ತೊಳೆದ ಅಗ್ರದ ಬಾಳೆ ಎಲೆಯನ್ನೋ ಇಲ್ಲವೇ ಮುತ್ತಗದ ಎಲೆಯನ್ನು ಸಾಲಾಗಿ ನೆಲದ ಮೇಲೆ ಜೋಡಿಸಿ, ಮಂದಲಿಗೆ (ಊಟದ ಚಾಪೆ) ಹಾಸಿ ಸ್ಟೀಲ್ ಲೋಟದ ತುಂಬಾ ನೀರು ತುಂಬಿ, ಎಲೆಗಳ ಮುಂದೆ ಎರಡೆಳೆಯ ರಂಗೋಲಿ ಎಳೆ ಎಳೆದು ಪ್ರತೀ ಎಲೆಗಳ ಮುಂದೆ ಸಣ್ಣಗೆ ದೀಪ ಹಚ್ಚಿಸಿಟ್ಟು ಊಟ ಮಾಡಲು ಬಂದಿರುವವರಿಗೆ ಉಲ್ಲಾಸದ ವಾತಾವರಣ ಸೃಷ್ಟಿ ಮಾಡಿರುತ್ತಿದ್ದರು. ಬಂದವರೆಲ್ಲರೂ ಕೈಕಾಲು ತೊಳೆದುಕೊಂಡು ಸಾಲು ಸಾಲಗಿ ಪಂಕ್ತಿಯಲ್ಲಿ ಕುಳಿತು ಕೊಳ್ಳಲು ಆರಂಭಿಸಿದರೆ, ಅಡುಗೆ ಭಟ್ಟರುಗಳು ಸಾಲು ಸಾಲಿನಲ್ಲಿ ಬಂದು, ಎಲೆಯ ಬಲ ತುದಿಗೆ ಪಾಯಸ, ಎಲೆಯ ಅಗ್ರದ ಕಡೆಯಿಂದ ಎಡದಿಂದ ಬಲಕ್ಕೆ ಉಪ್ಪು, ಉಪ್ಪಿನಕಾಯಿ, ಹೆಸರು ಬೇಳೆ ಮತ್ತು ಕಡಲೇ ಬೇಳೆಗಳ ಕೋಸಂಬರಿ, ಅದರ ಪಕ್ಕದಲ್ಲಿ ಅಯಾಯಾ ಕಾಲದ ಅನುಗುಣವಾಗಿ ಲಭಿಸುವ ತರಕಾರಿಗಳ ಎರಡು ರೀತಿಯ ಚೆನ್ನಾಗಿ ಇಂಗು ತೆಂಗಿನ ಒಗ್ಗರಣೆ ಹಾಕಿ ಹದವಾಗಿ ಬಾಡಿಸಿದ ಪಲ್ಯಗಳು, ಅದರ ಮುಂಭಾಗದಲ್ಲಿ ಸಿಹಿ-ಹುಳಿ ಸಮಾಗಮದ ಗೊಜ್ಜು, ಎಲೆಯ ಎಡ ತುದಿಯಲ್ಲಿ ಚಿತ್ರಾನ್ನ ಇಲ್ಲವೇ ಪುಳಿಯೋಗರೆ ಅಥವಾ ಯಾವುದಾದರೂ ಕಲೆಸಿದ ಅನ್ನ. ಅದರ ಮೇಲೆ ಕರಿದ ಹಪ್ಪಳ, ಸಂಡಿಗೆ, ಬಾಳಕದ ಮೆಣಸಿನಕಾಯಿ (ಉಪ್ಪು ಮೆಣಸಿನಕಾಯಿ), ಎಲೆಯ ಬಲ ತುದಿಯಲ್ಲಿ ಬೂದುಕುಂಬಳದ ಮಜ್ಜಿಗೆ ಹುಳಿ, ಎಲೆಯ ಮಧ್ಯ ಭಾಗದಲ್ಲಿ ಬಿಸಿ ಬಿಸಿಯಾದ ಅನ್ನ ಅದರ ಮೇಲೆ ಹುಳಿ ತೊವ್ವೆ ಹಾಕಿ ತುಪ್ಪದ ಆಭಿಗಾರ ಮಾಡಿ, ಊಟದ ಮಂತ್ರ ಸಹನಾ ವವತು, ಅನ್ನಪೂರ್ಣೇ ಸದಾಪೂರ್ಣೇ ಸಾಮೂಹಿಕವಾಗಿ ಹೇಳಿ, ಓಂ ಶಾಂತಿ ಶಾಂತಿ ಶಾಂತಿಃ ಎಂದು ಮುಗಿಸುತ್ತಿದ್ದಂತೆ ಮನೆಯ ಹಿರಿಯರು ತಮ್ಮ ಮನೆ ದೇವರನ್ನು ನೆನೆದು ಗೋವಿಂದ ಹೇಳಿಸಿ, ಭೋಜನ ಕಾಲೇ ಸೀತಾ ರಾಮ ಸ್ಮರಣೆ ಮಾಡಿಸಿ, ಹರ ನಮಃ ಪಾರ್ವತಿ ಪತಯೇ, ಹರ ಹರ ಮಹಾದೇವ ಎಂದು ಹೇಳಿ ಮುಗಿಸುತ್ತಿದ್ದಂತಯೇ, ಅಡುಗೆಯವರು ಬಡಿಸುತ್ತಿದ್ದ ಬಿಸಿ ಬಿಸಿ ಹುಳಿದೊವ್ವೆಯನ್ನೂ ಇಲ್ಲವೇ ಚೆನ್ನಾಗಿ ಎಲ್ಲಾ ರೀತಿಯ ತರಕಾರಿ ಹಾಕೆ ಮಾಡಿದ ಹುಳಿಯನ್ನು ಕಲೆಸಿ ತಿನ್ನುವ ರುಚಿ ವರ್ಣಿಸುವುದಕ್ಕಿಂತ ಅನುಭವಿಸಿದರೆ ಮಾತ್ರ ಆನಂದ. ಆದಾದ ನಂತರ ಕಟ್ಟೆ ಕಲಿಸಿದ ಅನ್ನದ ಮಧ್ಯೆ ಚೆನ್ನಾಗಿ ಹದವಾಗಿ ಕುದಿಸಿ ಇಂಗಿನ ಒಗ್ಗರಣೆ ಹಾಕಿದ ಬಿಸಿ ಬಿಸಿ ಬೇಳೆ ಸಾರು ಅದಕ್ಕೆ ಒಂದೆರಡು ಮಿಳ್ಳೆ ತುಪ್ಪ ಹಾಕಿಸಿಕೊಂಡು ಸಾರು ಎಲೆಯಿಂದ ಜಾರಿ ಹೋಗದಂತೆ ಹದವಾಗಿ ಕಲೆಸಿ ತಿನ್ನುವುದೇ ಒಂದು ಕಲೆ. ಚೆನ್ನಾಗಿ ಕಲೆಸಿದ ಸಾರನ್ನವನ್ನು ಸೊರ್ ಸೊರ್ ಎಂದು ಚಪ್ಪರಿಸಿ ಕೈನ ಐದೂ ಬೆರಳು ಬಾಯಿಯ ಒಳಗೆ ಫೂರ್ತಿ ಹಾಕಿಕೊಂಡು ಸಾರನ್ನ ತಿನ್ನುತ್ತಿದರೆ, ಸ್ವರ್ಗಕ್ಕೆ ಮೂರೇ ಗೇಣು. ಸಾರನ್ನ ತಿಂದು ಮುಗಿಸಿದ ನಂತರ ಅವರವರ ಅಂತಸ್ತಿಗೆ ತಕ್ಕಂತೆ ಲಾಡು, ಬೂಂದಿ, ಬಾದುಶಾ, ಜಿಲೇಬಿ, ಜಾಹಂಗೀರ್ ಇಲ್ಲವೇ ಬೇಳೆ ಒಬ್ಬಟ್ಟು ಅಥವಾ ಕಾಯಿ ಹೋಳಿಗೆ. ಇನ್ನು ಸ್ಥಿತಿವಂತರಾಗಿದ್ದರೆ ಪೇಣಿಯನ್ನೋ ಇಲ್ಲವೇ ಚಿರೋಟಿ ಜೊತೆಗೆ ಬೂರಾ ಸಕ್ಕರೆ ಮತ್ತು ಬಿಸಿ ಬಿಸಿ ಘಮ ಘಮವಾದ ಬಾದಾಮಿ ಹಾಲಿನೊಂದಿಗೆ ಕಲೆಸಿ ತಿಂದು ಮುಗಿಸುವುದರೊಳಗೆ, ಖಾರ ಖಾರವಾದ ಬೂಂದಿ ಇಲ್ಲವೇ ಹೀರೇ ಕಾಯಿ ಬಜ್ಜಿ ಅಥವಾ ಆಲೂಗೆಡ್ಡೆ ಬೋಂಡ ತಿನ್ನುವ ಅನುಭವ ಅವರ್ಣನೀಯ. ಇಷೃರ ಮಧ್ಯದಲ್ಲಿ ಪಂಕ್ತಿಯಲ್ಲಿದ್ದವರು ಯಾವುದಾದರೂ ದೇವರನಾಮವನ್ನೋ ಇಲ್ಲವೆ ಶ್ಲೋಕವನ್ನು ಎತ್ತರದ ಧನಿಯಲ್ಲಿ ಹೇಳಲು ಶುರುಮಾಡಿದರೆ ಒಬ್ಬರಿಗಿಂತ ಮತ್ತೊಬ್ಬರು ಒಂದಾದ ಮೇಲೆ ಮೂರ್ನಾಲ್ಕು ಹಾಡು/ಶ್ಲೋಕಗಳನ್ನು ಹೇಳುವಷ್ಟರಲ್ಲಿ, ಅಡುಗೆಯವರು ಮಾಡಿದ ಎಲ್ಲಾ ಪದಾರ್ಥಗಳನ್ನೂ ಮತ್ತೊಮ್ಮೆ ವಿಚಾರಣೆ ಮಾಡಿದ ನಂತರ ಸಲಿಗೆಯಿಂದ ಬಡಿಸಿದ ಕಲೆಸಿದ ಅನ್ನ ತಿಂದು ಮುಗಿಸಿ ಸ್ವಲ್ಪವೇ ಸ್ವಲ್ಪ ಅನ್ನ ಮೊಸರು ಹಾಕಿಸಿಕೊಂಡು ಅದಕ್ಕೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕಲೆಸಿಕೊಂಡು ಉಪ್ಪಿನ ಕಾಯಿ ಜೊತೆ ನೆಂಚಿಕೊಂಡು ತಿಂದರೆ ಹೊಟ್ಟೆಯಲ್ಲಿ ತಣ್ಣಗಿನ ಹಿತಾನುಭವ. ಇಷೃರಲ್ಲಿ ಕೊಟ್ಟ ತಾಂಬೂಲವನ್ನು ಎಡಗೈಯಲ್ಲಿ ತೆಗೆದುಕೊಂಡು ಅಲ್ಲಿಯೇ ಅಕ್ಕ ಪಕ್ಕದಲ್ಲಿಯೇ ತೆಂಗಿನಕಾಯಿನ್ನು ಇಟ್ಟು, ಊಟ ಮುಗಿಯುವವರೆಗೂ ತಾಳ್ಮೆಯ ಪ್ರತೀಕವಾಗಿದ್ದವರು ಕೈ ತೊಳೆಯುವ ಹೊತ್ತಿಗೆ ಒಬ್ಬರಿಗಿಂತ ಮತ್ತೊಬ್ಬರು ಕೈ ತೊಳೆಯಲು ಏಕೆ ಆತುರ ತೋರುತ್ತಾರೆ? ಎನ್ನುವುದು ಇಂದಿಗೂ ನನಗೆ ತಿಳಿಯದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಊಟ ಮುಗಿಸಿ ಡರ್ ಎಂದು ತೇಗಿ ಅಲ್ಲಿಯೇ ತಟ್ಟೆಯಲ್ಲಿ ಇಟ್ಟಿದ್ದ ವಿಳ್ಳೇದೆಲೆ ಮತ್ತು ಚೂರಡಿಕೆ ಅದಕ್ಕೆ ಹದವಾಗಿ ಸುಣ್ಣ ಹಚ್ಚಿಕೊಂಡು ಬಾಯಿಯೊಳಗೆ ಮೆಲ್ಲುತ್ತಾ , ನಾಲಿಗೆ ಕೆಂಪಾಗಿದೆಯೇ ಎಂದು ನೋಡಿ ಕೊಂಡು ನಾಲಿಗೆ ಕೆಂಪಾಗಿದ್ದರೆ ಏನೋ ಸಾಧಿಸಿದಂತಹ ಅನುಭವ.
ಆದರೆ ಇಂದು ಮೇಲೆ ಹೇಳಿದಂತಹ ಬಹುತೇಕ ಪದ್ದತಿಗಳು ಮಾಯವಾಗಿ ಎಲ್ಲವೂ ನಗರೀಕರಣವಾಗಿದೆ. ಬಹುತೇಕ ಸಮಾರಂಭಗಳಲ್ಲಿ ಪಾನಿಪುರಿ, ಬೇಲ್ ಪುರಿ, ಮಸಾಲೆ ಪೂರಿ ಒಂದೆಡೆಯಾದರೆ, ಬಾಳೆಯ ಎಲೆಗಳ ಜಾಗದಲ್ಲಿ ಪ್ಲಾಸ್ಟಿಕ್ ತಟ್ಟೆ, ಲೋಟ, ನೆಲದ ಬದಲು ಕಾಲು ನೋವಿನ ನೆಪ ಹೇಳಿ ಟೇಬಲ್ಗಳು, ಇಲ್ಲವೇ ನಿಂತೇ ತಿನ್ನುವ ರೂಡಿ. ಕುಡಿಯಲು ನೀರಿನ ಬಾಟೆಲ್ಗಳು, ಬೇಳೆ ಕೊಸಂಬರಿ ಬದಲಾಗಿ ಅಮೇರಿಕನ್ ಜೋಳದ ಕೋಸಂಬರಿ, ಅನ್ನ ತಿಂದರೆ ದಪ್ಪಗಾಗುತ್ತೇವೆಂಬ ಭಯದಿಂದ ಮೈದಾ ಹಿಟ್ಟಿನ ರುಮಾಲಿ ರೋಟಿ ಅಥವಾ ರೊಟಿ, ಅದಕ್ಕೆ ಮಸಾಲೆ ಭರಿತ ಗೊಜ್ಜು, ಜೊತೆಗೆ ಬೇಳೆ ಕಟ್ಟು (ದಾಲ್), ನೆಂಚಿಕೊಳ್ಳಲು ಗೋಬಿ ಮಂಚೂರಿ ಜೊತೆಗೆ ಪಲಾವ್, ಬಿರ್ಯಾನಿ, ಘೀ ರೈಸ್ ಕುರ್ಮಾ, ಹಾಲಿನಿಂದ ತಯಾರಿಸಿದ ಸಿಹಿ ಪದಾರ್ಥಗಳಾದ ರಸಮಲೈ, ಚಂಪಾಕಲಿ, ಚಂ ಚಂ ಎಲ್ಲಾ ತಿಂದು ಮುಗಿಸಿ ಕೈ ತೊಳೆದು ಪಕ್ಕಕ್ಕೆ ಬಂದರೆ ತಣ್ಣಗಿನ ಐಸ್ ಕ್ರೀಮ್ ಜೊತೆಗೆ ಕ್ಯಾರೆಟ್ ಹಲ್ವಾ ಇಲ್ಲವೇ ಗುಲಾಬ್ ಜಾಮೂನು, ಬಗೆ ಬಗೆಯ ಕತ್ತರಿಸಿದ ಹಣ್ಣುಗಳು ಜೊತೆಗೆ ಪಾನ್ ಬೀಡಾಗಳದ್ದೇ ಕಾರು ಬಾರಾಗಿದೆ. ಇನ್ನು ಹಾಕಿಸಿಕೊಂಡ ಎಲ್ಲಾ ಪದಾರ್ಥಗಳನ್ನು ಬಹುತೇಕ ಮಂದಿ ಪೂರ್ತಿ ತಿನ್ನುವುದೇ ಇಲ್ಲ. ಕೋಳಿ ಕೆದಕಿದಂತೆ ತಟ್ಟೆಯಲ್ಲಿ ಆಹಾರವನ್ನು ಕೆದಕಿ ತಿನ್ನುವ ಶಾಸ್ತ್ರಮಾಡಿಂತೆ ಮಾಡಿ ಚೆಲ್ಲುವವರೇ ಹೆಚ್ಚಾಗಿದ್ದಾರೆ. ಈ ರೀತಿಯಾಗಿ ಆಹಾರ ಚೆಲ್ಲುವುದು ಅನ್ನದಾತರಿಗೆ ದ್ರೋಹ ಬಗೆದಂತೆಯೇ ಸರಿ.
ಇತ್ತೀಚೆಗೆ ನಾನು ಬಹುತೇಕ ಮದುವೆ ಮನೆಗಳಲ್ಲಿ ಊಟ ಮಾಡುತ್ತಿರುವಾಗ ನಿಧಾನವಾಗಿ ಊಟ ಮಾಡಿ, ಸಾವಕಾಶವಾಗಿ ಏನನ್ನು ಬೇಕೋ ಕೇಳಿ ಹಾಕಿಸಿಕೊಳ್ಳಿ ಎಂದು ಹೆಣ್ಣಿನ ತಂದೆ ಮತ್ತು ತಾಯಿಯವರು ಕೈ ಮುಗಿದು ಎಲ್ಲರನ್ನೂ ವಿಚಾರಿಸುವುದನ್ನು ಕಂಡಾಗಲೆಲ್ಲಾ ಒಂದು ಕ್ಷಣ, ನನಗೆ ಗಂಟಲು ಭಾರವಾಗಿ ಏನನ್ನೂ ನುಂಗಲು ಆಗದಂತಹ ಅನುಭವ. ನಾವೆಲ್ಲರೂ ತಿನ್ನುತ್ತಿರುವುದು ಮಧುಮಗಳ ತಂದೆಯ ಬೆವರಿನ ಪರಿಶ್ರಮದ ಫಲ. ಎಷ್ಟೋ ಕಷ್ಟ ಪಟ್ಟು ಸಾಲ ಸೋಲ ಮಾಡಿ, ನಡೆಸುತ್ತಿರುವ ಮದುವೆಯಲ್ಲಿ ಮಾಡಿಸಿರುವ ಅಡುಗೆಯನ್ನು ತಿನ್ನಲು ನಾವೆಷ್ಟು ಅರ್ಹರು? ಎಂಬ ಪ್ರಶ್ನೆ ಕಾಡುತ್ತದೆ. ಮದುವೆ ಮನೆಯಲ್ಲಿ ಅಡುಗೆಗೆ ಉಪ್ಪು ಹೆಚ್ಚಾಗಿದ್ದಲ್ಲಿ ಬೇಸರಗೊಳ್ಳದಿರಿ. ಮಧು ಮಗಳ ತಂದೆ ತಾಯಿಯರ ಕಣ್ಣೀರು ಆಡುಗೆಗೆ ಜಾರಿ ಬಿದ್ದು ಅಡುಗೆ ಉಪ್ಪಾಗಿರಬಹುದು ಎಂಬ ಬರಹವನ್ನು ಇತ್ತೀಚೆಗೆ ವ್ಯಾಟ್ಸಾಪ್ನಲ್ಲಿ ಓದಿದ ನಂತರವಂತೂ ನನ್ನ ಮನಸಿನ ತುಮಲ ಇನ್ನೂ ಹೆಚ್ಚಾಗಿದೆ.
ಪ್ರತಿಯೊಂದು ಧಾನ್ಯ ಧಾನ್ಯಗಳ ಮೇಲೂ ತಿನ್ನುವವರ ಹೆಸರು ಬರೆದಿರುತ್ತದೆ ಎಂದು ತುಳಸೀ ದಾಸರು ಎಂದೋ ಹೇಳಿರುವಂತೆ , ನಮ್ಮ ಹೆಸರು ಆಂದಿನ ಕಾರ್ಯಕ್ರಮದ ಊಟದ ಮೇಲೆ ಬರೆದ್ದಿದ್ದಲ್ಲಿ ಮಾತ್ರವೇ ನಮಗೆ ತಿನ್ನುವ ಭಾಗ್ಯ ಇಲ್ಲದಿದ್ದಲ್ಲಿ ತಿನ್ನಲು ಅರ್ಹತೆಯೇ ಇರುವುದಿಲ್ಲ ಎಂದು ಎಷ್ಟೋ ಬಾರಿ ನನಗೆ ನಾನೇ ಸಮಾಧಾನ ಪಟ್ಟುಕೊಂಡಿದ್ದೇನೆ.
ಆದರೂ ಅಂದಿನ ಊಟದ ಮೇಲೆ ನಮ್ಮ ಹೆಸರು ಬರೆದಿದೆ ಎಂದು ಸಿಕ್ಕಾ ಪಟ್ಟೆ ಎಲೆಗೆ ಹಾಕಿಸಿಕೊಂಡು ಸುಮ್ಮನೆ ನೈವೇದ್ಯ ಮಾಡಿದಂತೆ ಎರೆಡೆರಡು ಕಾಳು ತಿಂದು ಆಹಾರವನ್ನು ಚೆಲ್ಲುವ ಅಧಿಕಾರ ನಮಗೇನಿದೆ? ಪ್ರಪಂಚಾದ್ಯಂತ ತಿನ್ನುವ ಆಹಾರಕ್ಕೆ ಮತ್ತು ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವಾಗ ನಾವು ಯಾರದ್ದೋ ಮನೆಯ ಸಮಾರಂಭದಲ್ಲಿ ಆಹಾರವನ್ನು ಅನಗತ್ಯವಾಗಿ ಚೆಲ್ಲುವುದು ಎಷ್ಟು ಸರಿ?
ಹಿಂದಿನ ಕಾಲದಲ್ಲಿ ಅಳಿದುಳಿದ ಎಂಜಲನ್ನು ಮನೆಯಲ್ಲಿ ಸಾಕಿರುವ ಗೋವುಗಳಿಗೆ ಕಲಗಚ್ಚಿನ ರೂಪದಲ್ಲಿ ಹಾಕುತ್ತಿದ್ದರು. ನಾವು ಬಿಸಾಡಿದ ಪದಾರ್ಥಗಳನ್ನೇ ತಿಂದು ನಮಗೆ ಆರೊಗ್ಯಕರವಾದ ಗಟ್ಟಿ ಹಾಲನ್ನು ಹಸುಗಳು ಕೊಡುತ್ತಿದ್ದವು. ಇನ್ನು ಉಳಿದ ಎಂಜಲು ಎಲೆಗಳನ್ನು ಮನೆಯ ಪಕ್ಕದಲ್ಲಿರುತ್ತಿದ್ದ ತಿಪ್ಪೆಗೆ ಹಾಕಿ ಅದರ ಮೇಲೆ ಸ್ವಲ್ಪ ಮನೆಯ ಆಕಳ ಸಗಣಿಯನ್ನು ಹಾಕಿದರೆ ಫಲವತ್ತಾದ ನೈಸರ್ಗಿಕ ಸಾವಯವ ಗೊಬ್ಬರ ಕೃಷಿಗೆ ಉಚಿತವಾಗಿಯೇ ತಯಾರಾಗುತ್ತಿತ್ತು. ಇನ್ನು ಕೈ ತೊಳೆಯುವ ನೀರು, ಪಾತ್ರೆ ತೊಳೆಯುವ ನೀರು ಸೀದಾ ಮನೆಯ ಮುಂದೆಯೋ ಇಲ್ಲವೇ ಹಿತ್ತಲಿನಲ್ಲಿಯೋ ಹಾಕಿರುವ ಬಾಳೇಗಿಡಗಳಿಗೋ ಇಲ್ಲವೇ ಹೂವಿನ ಗಿಡ ಅಥವಾ ತರಕಾರಿಯ ಕೈತೋಟಕ್ಕೆ ನೀರುಣಿಸುತ್ತಿತ್ತು. ಹೀಗೆ ಪ್ರತಿಯೊಂದು ಕಸವೂ ರಸವಾಗಿ ಮಾರ್ಪಡುತ್ತಿದ್ದವು.
ಆದರೆ ಇಂದು ಪ್ಲಾಸ್ಟಿಕ್ ಯುಕ್ತ ಕಸವನ್ನು ವಿಲೇವಾರಿ ಮಾಡುವುದೇ ಬಹಳ ಸಮಸ್ಯೆಯಾಗಿದ್ದು, ಪರಿಸರದ ಹಾನಿಗೆ ನಮಗರಿವಿಲ್ಲದಂತೆ ನಾವೇ ಕಾರಣೀಕೃತರಾಗುತ್ತಿದ್ದೇವಲ್ಲವೇ? ಕೈ ಮತ್ತು ಪಾತ್ರೆ ತೊಳೆದ ನೀರು ಸೀದಾ ಚರಂಡಿಗೆ ಸೇರಿ ಅದು ಹಾಗೇ ಹರಿದು ಕೆರೆ, ಕೊಳ್ಳ, ನದಿಯನ್ನು ಸೇರಿ ನೀರನ್ನು ಕಲುಷಿತ ಗೊಳಿಸುತ್ತಿರುವುದು ನಿಜಕ್ಕೂ ಆಘಾತಕಾರಿ. ಇನ್ನು ಬಹುತೇಕ ಅಡುಗೆಯ ರುಚಿ ಹೆಚ್ಚಿಸುವುದ್ದಕ್ಕಾಗೆ ಬಳೆಸುತ್ತಿರುವ ತೈಲಗಳು ಎಷ್ಟು ಸುರಕ್ಷಿತ ಎಂದು ಯೋಚಿಸಿದ್ದೇವೆಯೇ? ಶುಧ್ಧ ತುಪ್ಪದ ಹೆಸರಿನಲ್ಲಿ ಪ್ರಾಣಿಗಳ ಕೊಬ್ಬನ್ನು ತಿನ್ನುತ್ತಿರುವುದರಂದಲೇ ಬಹುತೇಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಎಂಬುವ ಅರಿವಿದೆಯೇ? ಇನ್ನು ರಾಸಾಯನಿಕ ಕೃತಕ ಗೊಬ್ಬರಗಳಿಂದ ಬೆಳೆದ ಆಹಾರ, ಕೊಳಕು ಚರಂಡಿ ನೀರಿನಿಂದ ಬೆಳೆದ ತರಕಾರಿಗಳು ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರ?
ಹಾಗಂದ ಮಾತ್ರಕ್ಕೇ ನಾನು ಏನನ್ನೂ, ಏಲ್ಲಿಯೂ ತಿನ್ನಬಾರದೆಂದು ಹೇಳುತ್ತಿಲ್ಲ. ನಾವು ತಿನ್ನುತ್ತಿರುವ ಆಹಾರಗಳನ್ನು ಒಮ್ಮೆ ಪರೀಕ್ಷಿಸಿ ಸಾಧ್ಯವಾದಷ್ಟೂ ಆರೋಗ್ಯಕರ ಆಹಾರವನ್ನು ಸೇವಿಸೋಣ ಮತ್ತು ಆರೋಗ್ಯಕರ ಜೀವನ ನಡೆಸೋಣ. ಬದುಕುವುದಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸಬೇಕೇ ಹೊರತು ಆಹಾರ ಸೇವಿಸುವಕ್ಕೇ ಬದುಕಬಾರದು ಅಲ್ಲವೇ?
ಏನಂತೀರೀ?
ಇಂತಿ ನಿಮ್ಮವ ಉಮಾಸುತ