ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರ ಬಾಳಗಂಚಿ ಶ್ರೀ ನಂಜುಡಯ್ಯನವರು

ಸೆಪ್ಟೆಂಬರ್ ೫ ಭಾರತದ ಮಾಜಿ ರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣರವರ ಜಯಂತಿ. ಇದನ್ನು ನಾವು ಪ್ರೀತಿಯಿಂದ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಇತ್ತೀಚೆಗಷ್ಟೇ ಶ್ರೀಯುತ ರಾಧಾಕೃಷ್ಣರವರು ನನ್ನ ಪ್ರಾಣ ಸ್ನೇಹಿತ ಹರಿಯವರ ಅಜ್ಜನ  ಸೋದರತ್ತೆಯ ಮಗ  ಎಂದು ತಿಳಿದುಬಂದಿದ್ದರಿಂದ ಶ್ರೀಯುತರು ನಮ್ಶ ಹತ್ತಿರದ ಸಂಬಂಧಿಯೇನೂ ಎನ್ನುವ ಭಾವನೆ ಮೂಡುತ್ತಲಿದೆ.   ನಮ್ಮ ಸಂಸ್ಕೃತಿಯಲ್ಲಿ  ತಂದೆ ತಾಯಿಯರ  ನಂತರದ ಸ್ಥಾನವನ್ನು ಗುರುಗಳಿಗೇ ಮೀಸಲಿಟ್ಟಿದ್ದೇವೆ.  ಮನೆಯೇ ಮೊದಲ ಪಾಠಶಾಲೆ  ತಂದೆ, ತಾಯಿಯರೇ ಮೊದಲ ಗುರುಗಳಾಗಿ, ಬಾಲ ಪಾಠಗಳನ್ನು ಕಲಿಸಿಕೊಟ್ಟರೂ ವ್ಯವಸ್ಥಿತವಾಗಿ ವಿದ್ಯೆಯನ್ನು ಕಲಿತು ಕೊಳ್ಳಲು ಸರಿಯಾದ ಗುರುಗಳು ಅತ್ಯಗತ್ಯವಾಗುತ್ತಾರೆ.  ಅದಕ್ಕೇ ಪುರಂದರ ದಾಸರು ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ  ಎಂದು ಹೇಳಿದರೆ ಮುಂದೆ ಸರಿಯಾದ ಗುರಿ ಇರಲಿ ಹಿಂದೆ ಸೂಕ್ತವಾದ  ಗುರುವಿರಲಿ ಎಂದಿದ್ದಾರೆ ಹಿರಿಯರು.

ಒಂದಕ್ಷರವಂ ಕಲಿಸಿದಾತನೂಂ  ಗುರುಂ ಎಂಬ ನಾನ್ನುಡಿಯಂತೆ, ಈ ಶಿಕ್ಷರಕರ ದಿನಾಚರಣೆಯನ್ನು  ಬಾಲ್ಯದಿನಗಳಲ್ಲಿ  ನನ್ನನ್ನು ಎತ್ತಿ , ಹೊತ್ತು ,  ಸಾಕಿ, ಸಲಹಿ, ತಿದ್ದಿ, ತೀಡಿ, ತೊಡೆಯ ಮೇಲೆ ಕೂರಿಸಿಕೊಂಡು ಅಚ್ಚ – ಸ್ವಚ್ಚ  ಕನ್ನಡವನ್ನು, ರಾಮಾಯಣ, ಮಹಾಭಾರತದ ಕಥೆಗಳನ್ನು, ಬಾಲ ಬಾಯಿ ಪಾಠಗಳನ್ನು , ಶ್ಲೋಕಗಳನ್ನು, ಭಗವದ್ಗೀತೆಯನ್ನು ಹೇಳಿಕೊಟ್ಟ ನನ್ನ ತಾತನವರಾದ ಕೀರ್ತಿಶೇಷ  ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರಾದ ಬಾಳಗಂಚಿ ಶ್ರೀ ನಂಜುಂಡಯ್ಯನವರಿಗೆ   ಮೀಸಲಿಡುತ್ತೇನೆ.

ಹಾಸನ ಜಿಲ್ಲೆಯ, ಚೆನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ ಬಳಿಯ ಪುಟ್ಟದಾದ ಹಳ್ಳಿಯೇ ಬಾಳಗಂಚಿ.  ಸುಮಾರು ಐದು ಸಾವಿರದಿಂದ ಏಳು ಸಾವಿರದವರೆಗೂ ಜನಸಂಖ್ಯೆ ಇರುವಂತಹ ಹಳ್ಳಿ.  ಹೆಸರಿಗಷ್ಟೇ ಚಿಕ್ಕದಾದರೂ  ಇತಿಹಾಸ ಇಣುಕಿ ನೋಡಿದರೆ ಗುರು ವಿದ್ಯಾರಣ್ಯರ ತವರೂರು ಎಂದು ಖ್ಯಾತಿ ಹೊಂದಿದೆ.   ಇನ್ನು ಕೆಲವರು ಗುರು ವಿದ್ಯಾರಣ್ಯರು ವಾಸಿಸಿದ ಸ್ಥಳವೆಂದು ಇಲ್ಲವೇ ತಪಸ್ಸನ್ನು ಮಾಡಿದ ಪ್ರದೇಶವೆಂದೂ ಹೇಳುತ್ತಾರೆ.  ಈ ಹಳ್ಳಿಯಲ್ಲಿ  ಸುಮಾರು ಹತ್ತು ಹದಿನೈದಕ್ಕೂ ಹೆಚ್ಚಿನ ದೇವಸ್ಥಾನಗಳಿದ್ದು ಸ್ವರ್ಣಾಂಬ ಅಥವಾ ಹೊನ್ನಾದೇವಿ ಎಂಬ  ದೇವಿ ಗ್ರಾಮ ದೇವತೆಯಾಗಿದ್ದು,  ಪ್ರತೀ ವರ್ಷ ಚೈತ್ರಮಾಸದಲ್ಲಿ ಬಹಳ ವಿಜೃಂಭಣೆಯಿಂದ ಸುಮಾರು ಎರಡು ವಾರಗಳ ಕಾಲ ಊರ ಹಬ್ಬ ನಡೆಸಿಕೊಂಡು ಬರುವ ಪದ್ದತಿ ಇದೆ. ಇದರ ಮೂಲ ಹೆಸರು ಬಾಲಕಂಚಿ ಎಂದಿದ್ದು ಜನರ ಆಡು ಬಾಷೆಯಲ್ಲಿ ಬಾಳಗಂಚಿ ಎಂದಾಗಿದೆ.  ಇಂತಹ ಇತಿಹಾಸ ಪ್ರಸಿದ್ಡ ಊರಿನ ಶಾನುಭೋಗರ ವಂಶದ ಕುಡಿಯೇ  ಗಮಕ ವಿದ್ವಾನ್, ಹರಿಕಥಾ ಸಾಮ್ರಾಟ, ಖ್ಯಾತ ವಾಗ್ಗೇಯಕಾರರೂ ಆದ  ದಿವಂಗತ ಶ್ರೀ ನಂಜುಡಯ್ಯನವರು. ಸಾವಿರದಾ ಒಂಬೈನೂರರಲ್ಲಿ  ಜನಿಸಿದ್ದ ಶ್ರೀಯುತರು ಸಂಗೀತದ ಜೊತೆಗೆ ಸಾಹಿತ್ಯದಲ್ಲೂ ಅಪಾರ ಪಾಂಡಿತ್ಯ ಪಡೆದಿದ್ದರು.  ಎಪ್ಪತ್ತರ ದಶಕದಲ್ಲಿ ಕರ್ನಾಟಕ ರಾಜ್ಯದ ಪ್ರಶಸ್ತಿ ಪುರಸ್ಕೃತರೂ ಹೌದು. ಅತ್ಯುತ್ತಮ ಶರೀರ ಜೊತೆಗೆ ಶಾರೀರವನ್ನು ಹೊಂದಿದ್ದವರು. ಅವರ  ಗಾಯನಕ್ಕೆ ಮತ್ತು ಹರಿಕಥೆಗೆ ಮರುಳಾಗದವರೇ ಇಲ್ಲ ಎಂದರೆ ಅತಿಶಯೋಕ್ತಿ ಆಗಲಾರದು. ಹಾಸನ, ಮಂಡ್ಯ, ಮೈಸೂರು,  ತುಮಕೂರು ಚಿಕ್ಕಮಗಳೂರು ಇನ್ನೂ ಹಲವಾರು ಜಿಲ್ಲೆಗಳ ಪ್ರಮುಖ ಹಳ್ಳಿ, ಪಟ್ಟಣಗಳ ರಾಮೋತ್ಸವ, ಗಣೇಶೋತ್ಸವ, ಊರ ಜಾತ್ರೆಗಳಲ್ಲಿ ನಂಜುಂಡಯ್ಯನವರ ಹರಿಕಥೆ ಕಡ್ದಾಯವಾಗಿ ಇದ್ದೇ ಇರುತ್ತಿತ್ತು.  ಬೇಸಿಗೆ ಮುಗಿದು, ಮಳೆ ಬಾರದಿದ್ದ ಸಮಯದಲ್ಲಿ ಇವರ ಭಕ್ತಿಯಿಂದ ನಡೆಸಿಕೊಡುತ್ತಿದ್ದ ರಾಮ ಸಂಕೀರ್ತನೆಯ ಫಲವಾಗಿ ಧಾರಾಕಾರವಾದ ಮಳೆ ಸುರಿಯುತ್ತದೆ ಎಂಬ ನಂಬಿಕೆ ಇದ್ದದ್ದರಿಂದ ಹಲವಾರು ಹಳ್ಳಿಗಳಲ್ಲಿ ನಮ್ಮ ತಾತನವರ ಹರಿಕಥೆಗಳನ್ನು ಏರ್ಪಡಿಸಿ ತಮ್ಮ ತಮ್ಮ ಊರುಗಳಿಗೆ ಮಳೆಯನ್ನು ಸುರಿಸಿಕೊಂಡ ಹಲವಾರು ನಿದರ್ಶನಗಳಿಂದ ಇವರನ್ನು ಮಳೇ ನಂಜುಂಡಯ್ಯನವರೂ ಎಂದೂ ಪ್ರೀತಿಯಿಂದ ಕರೆದಿದ್ದಾರೆ. ಗರಳಪುರಿ ನಂಜುಂಡ ಎಂಬ ಅಂಕಿತ ನಾಮದೊಂದಿಗೆ  ನಾಡಿನ ಬಹುತೇಕ ಎಲ್ಲಾ ದೇವರಗಳ ಮೇಲೂ ಕೃತಿಗಳನ್ನು ರಚಿಸಿರುವ ನಂಜುಡಯ್ಯನವರು ಭಗವದ್ಗೀತೆಯನ್ನು ಅತೀ ಸರಳ ಕನ್ನಡಕ್ಕೆ ತರ್ಜುಮೆ ಮಾಡಿರುವುದಲ್ಲದೇ  “ಗೀತೇ ಶ್ರೀ ಹರಿಮುಖ ಜಾತೆ” ಎಂದು ಭಗವದ್ಗೀತೆಯ ಮೇಲೆಯೇ ಗೀತೆಯನ್ನು ರಚಿಸಿರುವ ಹೆಗ್ಗಳಿಕೆ ಅವರದು.  ಗಮಕ ಎಂದರೆ ಕೇವಲ ಪದ್ಯಗಳನ್ನು ಸಂಗೀತ ರೂಪದಲ್ಲಿ  ಪ್ರಸ್ತುತ ಪಡಿಸದೆ ಸಾಹಿತ್ಯಕ್ಕೆ ಅನುಗುಣವಾಗಿ ರಾಗ ಸಂಯೋಜಿಸಿ ಪ್ರತೀ ಪದಗಳಿಗೆ ಅನುಗುಣವಾಗಿ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಕಂಚಿನ ಕಂಠದಲ್ಲಿ ಎತ್ತರದ ಧನಿಯಲ್ಲಿ ಏರಿಳಿತಗಳೊಂದಿಗೆ ಹಾಡುತ್ತಿದ್ದದ್ದು ಇನ್ನೂ ನಮ್ಮ ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ.  ಕೇವಲ ತಾವೊಬ್ಬರೇ ಸಂಗೀತ, ಸಾಹಿತ್ಯದಲ್ಲಿ ಪಾರಂಗತರಾಗದೇ ಸುತ್ತಮುತ್ತಲಿನ ಅನೇಕ ಹಳ್ಳಿಗಳ ಜನರಿಗೆ ಸಂಗೀತ ಮತ್ತು ದೇವರ ನಾಮಗಳನ್ನು ಹೇಳಿ ಕೊಟ್ಟಿದ್ದಲ್ಲದೆ ಹಲವಾರು  ಪೌರಾಣಿಕ ನಾಟಕಗಳಿಗೆ ಸಂದರ್ಭೋಚಿತವಾಗಿ ಮಟ್ಟುಗಳನ್ನು (ಹಾಡುಗಳು) ಬರೆದುಕೊಟ್ಟಿದ್ದಾರೆ. ಇಂದಿಗೂ ಅವರ ಅನೇಕ ಮಟ್ಟುಗಳನ್ನು ಹಲವಾರು ನಾಟಕಗಳಲ್ಲಿ ಪ್ರಚಲಿತವಾಗಿದೆ ಮತ್ತು  ಇಂದಿಗೂ ಅವರಿಂದ ಸಂಗೀತ, ನಾಟಕ ಮತ್ತು ಗಮಕ ಕಲಿತ ಅನೇಕ ಶಿಷ್ಯವೃಂದ ರಾಜ್ಯದ ಹಲವಾರು ಕಡೆಗಳಲ್ಲಿ ನಮಗೆ ಕಾಣ ಸಿಗುತ್ತಾರೆ.

1983 ಇಸವಿ.  ನಾನಾಗ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೆ.   ಸೆಪ್ಟೆಂಬರ್ 5,  ಶಿಕ್ಷಕರ ದಿನಾಚರಣೆಯ ಅಂಗವಾಗಿ ಅಂತರ್ಶಾಲಾ ಚರ್ಚಾ ಸ್ಪರ್ಧೆಗೆ ನಮ್ಮ ಶಾಲೆಯ ಪರವಾಗಿ ಭಾಗವಹಿಸಲು ಆಯ್ಕೆಗೊಂಡು ನನ್ನ ವಿಚಾರಗಲನ್ನು ಮಂಡಿಸಲು ಎರಡು ಮೂರು ದಿನಗಳಿಂದಲೂ ತಯಾರಿಯಾಗಿ ಬೆಳಿಗ್ಗೆ ಸುಮಾರು   8:30ರ ವೇಳೆಗೆ ಶಾಲೆಯ ಬಳಿ ಹೋದಲ್ಲಿ ಅಲ್ಲಿಂದ ನಮ್ಮ ಶಿಕ್ಷಕರೊಬ್ಬರು ನಮ್ಮನ್ನು  ಚರ್ಚಾ ಸ್ಪರ್ಧೆಗೆ ಕರೆದುಕೊಂಡು ಹೋಗುವುದಾಗಿ ನಿಶ್ಚಯಿಸಲಾಗಿತ್ತು.  ನಾವೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವ ಹಾಗೆ  ಅಂದು ಬೆಳ್ಳಿಗ್ಗೆ ಎಂದಿನಂತೆಯೇ ಮುಂಜಾನೆಯೇ ಎದ್ದು ಪ್ರಾಥರ್ವಿಧಿಗಳೊಂದಿಗೆ, ಸ್ನಾನ, ದೇವರ ಪೂಜೆ  ಮುಗಿಸಿ ಅಮ್ಮ ಮಾಡುತ್ತಿದ್ದ ತಿಂಡಿಗಾಗಿ ಕಾಯುತ್ತಾ  ಚರ್ಚಾಕೂಟದಲ್ಲಿ ಮಂಡಿಸಬೇಕಿದ್ದ ವಿಷಯಗಳ ಬಗ್ಗೆ ಮನನ ಮಾಡಿಕೊಳ್ಳುತ್ತಿದ್ದಾಗಲೇ, ನಮ್ಮ ತಂದೆಯವರು ಅಂದಿನ  ಬೆಳಗಿನ ಜಾವ ಎಂಭತ್ಮೂರು ವರ್ಷದ ತುಂಬು ಜೀವನ ನಡೆಸಿದ  ನಮ್ಮ ಪೂಜ್ಯ ತಾತನವರು ನಮ್ಮನ್ನಗಲಿದ ಸುದ್ದಿಯನ್ನು ಆಸ್ಪತ್ರೆಯಿಂದ ಮನೆಗೆ ಬಂದು ತಿಳಿಸಿದರು. ಆ ವಿಷಯ ಕೇಳಿ ಇಡೀ ಕುಟುಂಬಕ್ಕೇ ಬರ ಸಿಡಿಲು ಬಡಿದಂತಾಗಿ  ಕೆಲ ಕಾಲ ಮೌನಾವೃತವಾಯಿತು. ಇಂದಿನ ಹಾಗೆ ಅಂದು ದೂರವಾಣಿ ಸಂಪರ್ಕ ಇಲ್ಲದಿದ್ದ ಕಾರಣ  ದೂರದ ಸಂಬಂಧೀಕರ ಮನೆಗಳಿಗೆ ಸುದ್ದಿಯನ್ನು ತಲುಪಿಸಲು ಟೆಲಿಗ್ರಾಂ ಮಾಡಲು ಮತ್ತು  ನಗರದಲ್ಲೇ ಇದ್ದ ಹಲವಾರು  ಮನೆಗೆಳಿಗೆ ಸೈಕಲ್ನಲ್ಲೇ ಹೋಗಿ ಸುದ್ದಿ ತಿಳಿಸ್ದಿದ್ದದ್ದು ಇನ್ನೂ ಹಸಿ ಹಸಿ ನೆನಪು. ತಾತನವರ ಅಂತಿಮ ಕಾರ್ಯದಲ್ಲಿ ನಿರತನಾಗಿದ್ದ ನನಗೆ  ಚರ್ಚಾ ಸ್ಪರ್ಧೆಗೆ ಬರಲಾಗುವುದಿಲ್ಲ ಎಂದು ಶಾಲೆಗೆ ತಿಳಿಸಲು ಆಗದೆ, ಮಾರನೆಯ ದಿನ ಶಾಲೆಗೆ ಹೋದಾಗ ನಮ್ಮ ಗುರುಗಳು ನನ್ನನ್ನು ಹಿಗ್ಗಾ ಮುಗ್ಗಾ ಝಾಡಿಸಿ ಕಿವಿ ಹಿಂಡ್ದಿದ್ದದ್ದು,  ನಂತರ ನಮ್ಮ ತಾತನವರು ಕಾಲವಾದ ಕಾರಣ ಬರಲಾಗಲಿಲ್ಲವೆಂಬ ಸಂಗತಿ ನನ್ನ ಸ್ನೇಹಿತರಿಂದ ತಿಳಿದು ಅದೇ ಗುರುಗಳೇ ನನ್ನ ಬಳಿ ಬಂದು ಕ್ಷಮೆ ಯಾಚಿಸಿ ದೊಡ್ಡ ಗುಣ ತೋರಿದ್ದದ್ದು ಇಂದಿಗೂ ನೆನಪಾಗಿಯೇ ಇದೆ.  ಈ ಎಲ್ಲ ಕಾರಣಗಳಿಂದಾಗಿ  ಪ್ರತೀ ವರ್ಷವೂ ಶಿಕ್ಷಕರ ದಿನಾಚರಣೆಯಂದು  ನನಗೆ,  ಅಗಲಿದ ನನ್ನ ಬಾಲ್ಯದ ಗುರು ತಾತನವರ ನೆನಪಿಗೆ  ಬರುವ ಕಾರಣ ಮರೆಯಲಾಗದ ದಿನವಾಗಿಯೇ ಉಳಿದು ಹೋಗಿದೆ.

ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂದು,  ಇತರರು ಮಾಡಿದ ತಪ್ಪುಗಳಿಗೆಲ್ಲಾ, ಯಾರೋ ನಿನಗೆ ವಿದ್ಯೆ ಕಲಿಸಿದ್ದು ಎಂದು ಸುಲಭವಾಗಿ ಕಾಣದ ಅವರ  ಗುರುಗಳನ್ನು ದೂಷಿಸುವ ಬದಲು, ನಾವೇ, ಅವರು ಮಾಡಿದ ತಪ್ಪನ್ನು ಅವರಿಗೆ ತಿಳಿಯಪಡಿಸಿ ಅದನ್ನು  ಸರಿ ಪಡಿಸುವ ದಾರಿ ತೋರಿಸಿ,  ಮುಂದೆ ಹೀಗಾಗದಂತೆ ತಿದ್ದಿ ತೀಡಿ ಕಲಿಸುವ ಗುರುಗಳಾಗ ಬಹುದಲ್ಲವೇ?

ಜೀವನದಲ್ಲಿ, ಎಲ್ಲರೂ ಒಂದಲ್ಲಾ ಒಂದು  ರೀತಿಯ ನಮಗೆ ಪಾಠ ಕಲಿಸಿದ  ಗುರುಗಳೇ,   ನಾವಿಂದು ಸುಖ ಜೀವನ ನಡೆಸುತ್ತಿರುವುದು ಅವರುಗಳು ನೀಡಿದ ಶಿಕ್ಷಣದಿಂದಲೇ. ಹಾಗಾಗೀ  ಇಂದಿನ ನನ್ನೀ ಸ್ಥಿತಿಗತಿಗೆ ಕಾರಣಭೂತರಾದ ನನ್ನ ಎಲ್ಲಾ ಗುರುಗಳಿಗೆ.  ಶಿಕ್ಷಕರ ದಿನಾಚರಣೆಯ ಶುಭಾಷಗಳು ಹಾಗೂ ಹೃದಯ ಪೂರ್ವಕ ವಂದನೆಗಳು.

ಏನಂತೀರೀ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s