ಕರ್ಮಯೋಗಿ ಹಾಗೂ ಭಕ್ತಿಯೋಗಿ 

melukoteಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ಯೋಗಾನರಸಿಂಹ ಸ್ವಾಮಿ ಜಗದ್ವಿಖ್ಯಾತವಾದ ದೇವಾಲಯಗಳು. ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುನುಜಾಚಾರ್ಯರ ಆರಾಧ್ಯ ದೈವವೂ ಹೌದು. ಪ್ರತಿನಿತ್ಯ ನೂರಾರೂ ಮತ್ತು ವಾರಾಂತ್ಯದಲ್ಲಿ ಸಾವಿರಾರು ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈರಮುಡಿ ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತಾದಿಗಳು ಸೇರುವ ಸ್ಥಳವಾಗಿದೆ. ಕಡಿದಾದ ಬೆಟ್ಟದ ತುದಿಯಲ್ಲಿ ಕಟ್ಟಿರುವ ದೇವಾಲಯ ನಿಜಕ್ಕೂ ಅಂದಿನ ದಿನದ ವಾಸ್ತುಪಂಡಿತರ ಮತ್ತು ಕುಶಲ ಕರ್ಮಿಗಳ ಅಧ್ಭುತ ಪರಿಣಿತಿಯ ದ್ಯೋತಕವಾಗಿದೆ. ಸುಮಾರು 300 ರಷ್ಟು ಕಡಿದಾದ ಎತ್ತರದ ಮೆಟ್ಟುಲುಗಳ ಯೋಗಾನರಸಿಂಹ ಸ್ವಾಮಿಯ ದೇವಾಲಯ ಸಾಮಾನ್ಯ ಆರೋಗ್ಯವಂತರಿಗೂ ಹತ್ತುವುದು ತುಸು ಕಷ್ಟವೇ ಸರಿ.

ಆದರೆ ಈ ಚಿತ್ರದಲ್ಲಿರುವ ಶ್ರೀಯುತ ಕಲಮೇಘಮ್ ರಾಮಸ್ವಾಮಿ ಅಯ್ಯಂಗಾರ್ ಪ್ರತಿನಿತ್ಯ ಶುಭ್ರವಾಗಿ ಮಡಿಯುಟ್ಟು ದೇವರ ಅಭಿಷೇಕಕ್ಕೂ ಮತ್ತು ನೈವೇದ್ಯಕ್ಕೂ ಅಗತ್ಯವಾದ ನೀರನ್ನು ಕೆಳಗಿನ ಕೊಳದಿಂದ ತಲೆಯ ಮೇಲೆ ಭಾರವಾದ ಹಿತ್ತಾಳೆಯ ಪಾತ್ರೆಯಲ್ಲಿ ಈ ಎಪ್ಪತ್ತರ ಇಳಿ ವಯಸ್ಸಿನಲ್ಲೂ ಹೊತ್ತು ಸಾಗುವುದನ್ನು ನನ್ನ ಸ್ನೇಹಿತನೊಬ್ಬ ಈ ಹಿಂದೆ ಮುಖಪುಟದಲ್ಲಿ ಹಾಕಿದ್ದಾಗ, ನನಗರಿವಿಲ್ಲದಂತೆಯೇ ಹೊಟ್ಟೆಯ ಪಾಡಿಗೆ ಏನೇನು ಮಾಡಬೇಕೋ, ಛೇ, ಅಯ್ಯೋ ಪಾಪ ಎಂದು ನಾನೇ ವ್ಯಾಖ್ಯಾನಿಸಿದ್ದು ನಂತರ ಕೆಲವು ಸ್ನೇಹಿತರು ಅದಕ್ಕೆ ಪರ ಮತ್ತು ವಿರೋಧವಾಗಿ ಚರ್ಚೆಯೂ ನಡೆಸಿದ್ದಾಗಿತ್ತು. ಅಂದಿನಿಂದ ಕುತೂಹಲಿತನಾಗಿ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲೇ ಬೇಕೆಂದು ಧೃಡ ಸಂಕಲ್ಪ ಮಾಡಿದ್ದೆನಾದರೂ, ತೇನ ವಿನಾ ತೃಣಮಪಿ ನಚಲತಿ ಎನ್ನುವಂತೆ ಆ ಭಗವಂತ ತನ್ನ ಬಳಿ ತಾನಾಗಿಯೇ ನಮ್ಮನ್ನು ಕರೆಸಿಕೊಳ್ಳುವವರೆಗೂ ಅದು ಸಾಧ್ಯವಾಗಿರಲಿಲ್ಲ. ಕಳೆದ ವಾರದ ಧೀರ್ಘ ವಾರಾಂತ್ಯದಲ್ಲಿ ನನಗೂ ಮತ್ತು ನಮ್ಮ ಮಕ್ಕಳಿಗೆ ರಜೆ ಇದ್ದ ಕಾರಣ ಹಾಗೂ ಹೊಸದಾಗಿ ಕೊಂಡುಕೊಂಡಿದ್ದ ವಾಹನದ ದೂರ ಪ್ರಯಾಣದ ಸವಿಯನ್ನು ಪಡೆಯದಿದ್ದ ಕಾರಣ ಮತ್ತು ರಾಷ್ಟ್ರೀಯ ಹೆದ್ದಾರಿ 48 ರ ರಸ್ತೆ ಅತ್ಯುತ್ತಮವಾಗಿದ್ದ ಕಾರಣ ಎಲ್ಲವೂ ಒಗ್ಗೂಡಿ ಬೆಳಿಗ್ಗೆಯೇ ಇತರೇ ವಾಹನಗಳು ರಸ್ತೆಗಳಿಗೆ ಇಳಿಯುವ ಮುನ್ನವೇ ಬೆಂಗಳೂರಿಂದ ಮೇಲುಕೋಟೆಗೆ ನಮ್ಮ ಸವಾರಿ ಹೊರಟೇ ಬಿಟ್ಟಿತು. ಹೊಸ ವಾಹನದ ಪ್ರಭಾವವೋ ರಸ್ತೆಯ ಪ್ರಭಾವವೋ, ದೇವರನ್ನು ಕಾಣುವ ನಮ್ಮ ಉತ್ಕಟ ಬಯಕೆಯೋ ಕಾಣೆ ಸುಮಾರು ಎರಡು ಗಂಟೆಗೆಳಲ್ಲಿಯೇ ಮೇಲುಕೋಟೆ ತಲುಪಿ ಪೂಜಾಸಾಮಗ್ರಿಗಳನ್ನೆಲ್ಲಾ ಕೊಂಡು ದೇವಸ್ಥಾನದ ಮೆಟ್ಟಿಲುಗಳನ್ನು ಸ್ವಲ್ಪ ತ್ರಾಸ ಪಟ್ಟು ಹತ್ತಿ ನೋಡಿದರೆ, ದೇವಾಲಯವೇ ಇನ್ನೂ ಭಕ್ತಾದಿಗಳಿಗೆ ತೆರೆದಿರಲಿಲ್ಲ. ಪೂಜಿಸಲೆಂದೇ ಅಲ್ಲಿಂದ ಬಂದೆ, ದರುಶನ ನೀಡೋ ಹೇ ತಂದೇ, ಎಂದು ಮನದಲ್ಲೇ ನೆನೆಯುತ್ತಾ ಕೈಯಲ್ಲಿದ್ದ ಹೂವು, ಹಣ್ಣು ಮತ್ತು ಕಾಯಿಗಳನ್ನು ಅಸಂಖ್ಯಾತ ಕಪಿ ಸೈನ್ಯಗಳ ದೃಷ್ಟಿಯಿಂದ ತಪ್ಪಿಸುತ್ತಾ , ಆರಿವಿಲ್ಲದೆ ಕೈಯಲ್ಲಿದ್ದ ಹಣ್ಣುಕಾಯಿ ಬುಟ್ಟಿಯನ್ನು ವಾನರ ಸೈನ್ಯ ಕಿತ್ತುಕೊಂಡಾಗ ಮತ್ತು ಕೆಲವು ಹೆಣ್ಣು ಮಕ್ಕಳು ಮುಡಿದಿದ್ದ ಮಲ್ಲಿಗೆ ಹೂವನ್ನು ಮಂಗಗಳು ಎಗರಿಸುತ್ತಿದ್ದಾಗ, ಅವರೆಲ್ಲರ ಚೀರಾಟಕ್ಕೆ ಮಮ್ಮಲ ಮರುಗುತ್ತಾ ಬೆಟ್ಟದ ತುದಿಯಿಂದ ಕೆಳಗಿನ ಜಗದ್ವಿಖ್ಯಾತ ಕಲ್ಯಾಣಿ, ಹಾಗೂ ಊರಿನ ರಮಣೀಯ ದೃಶ್ಯಗಳನ್ನು ಸವಿಯುತ್ತ ಸರದಿಯಲ್ಲಿ ನಿಂತಿರುವಾಗ ಅರ್ಚಕರುಗಳು ಬಂದು ದೇವಾಲಯದ ಬಾಗಿಲನ್ನು ತೆಗೆದು ನಮ್ಮೆಲ್ಲರಿಗೂ ಯೋಗಾನರಸಿಂಹನ ದರ್ಶನವನ್ನು ಕಣ್ತುಂಬ ನೋಡುವ ಅವಕಾಶವಿತ್ತರು. ಸಕುಟುಂಬ ಸಮೇತನಾಗಿ ಸಂಗೋಪಾಂಗವಾಗಿ ದೇವರ ದರ್ಶನವಾಗಿ ತೀರ್ಥ, ಪ್ರಸಾದವೆಲ್ಲಾ ಮುಗಿದು ದೇವಾಲಯದಿಂದ ಹೊರಬಂದರೂ ನನ್ನ ಕಣ್ಣುಗಳು ಶ್ರೀಯುತ ಕಲಮೇಘಮ್ ರಾಮಸ್ವಾಮಿ ಅಯ್ಯಂಗಾರ್ ಎಲ್ಲರ ಪ್ರೀತಿಯ ರಾಮಯ್ಯಂಗಾರರನ್ನೇ ಹುಡುಕುತ್ತಿತ್ತು.

ram1ನನ್ನ ಸುದೈವವೋ ಎನ್ನುವಂತೆ ಸುಮಾರು ಮುಕ್ಕಾಲು ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ ಕೆಳಗಿನಿಂದ ಕಲ್ಯಾಣಿಯ ಬಳಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದ ಶ್ರೀಯುತರು ನನ್ನ ಕಣ್ಣಿಗೆ ಕಾಣಿಸಿದಾಗ ನನಗೆ ದೇವರನ್ನು ಕಂಡಾಗ ಆಗಿದ್ದಕ್ಕಿಂತಲೂ ಹೆಚ್ಚಿನ ಆನಂದವಾಯಿತು ಎಂದರೆ ಅತಿಶಯೋಕ್ತಿಯೇನಲ್ಲ. ಅಲ್ಲಿಯೇ ಕುಟುಂಬದವನ್ನು ನಿಲ್ಲಿಸಿ, ದಡ ದಡನೆ ಮೆಟ್ಟಿಲುಗಳನ್ನು ಇಳಿದು ಅವರ ಬಳಿ ಬಂದು ಸ್ವಾಮಿ ನಮಸ್ಕಾರ ಎಂದೆ. ಅವರೂ ಸಹಾ ನಮಸ್ಕಾರ ಎಂದು ಪ್ರತಿವಂದಿಸಿದರಾದರೂ ಅವರ ಮುಖಚರ್ಯೆಯಲ್ಲಿ ಯಾರೀ ಅಪರಿಚಿತ? ವ್ಯಕ್ತಿ ಎಂಬ ಭಾವ ಗೋಚರಿಸುತ್ತಿತ್ತು.

ram2ಸ್ವಾಮಿ, ನಿಮಗೆ ನನ್ನ ಪರಿಚಯವಿಲ್ಲ. ಆದರೆ ನಿಮ್ಮನ್ನು ನನ್ನ ಸ್ನೇಹಿತ ನನಗೆ ಪರೋಕ್ಷವಾಗಿ ಪರಿಚಯಿಸಿದ್ದಾನೆ ಎಂದಾಗ, ಓಹೋ ಹಾಗೋ, ನನ್ನನ್ನು ಹಲವು ವೃತ್ತ ಪತ್ರಿಕೆಗಳು ಮತ್ತು ದೃಶ್ಯಮಾಧ್ಯಮಗಳು ಈಗಾಗಲೇ ಸಂದರ್ಶಿಸಿ ನಾಡಿನಾದ್ಯಂತ ನನ್ನನ್ನು ಪರಿಚಯ ಮಾಡಿಸಿ ಬಿಟ್ಟಿದ್ದಾರೆ ಎಂದು ಧನ್ಯತಾ ಭಾವದಿಂದ ನಗೆ ಚೆಲ್ಲಿದರು. ಹಾಗೆ ಮಾತಾನಾಡುತ್ತಲೇ ಚಳಿ ಮಳೆ ಗಾಳಿ ಯಾವುದನ್ನೂ ಲೆಖ್ಖಿಸದೇ ಕಲ್ಯಾಣಿಯಲ್ಲಿ ಮತ್ತೊಮ್ಮೆ ಮಿಂದು, ಬಟ್ಟೆಗಳನ್ನು ಒದ್ದೆ ಮಾಡಿಕೊಳ್ಳುತ್ತಲೇ, ಯಾವ ಊರು? ಎಲ್ಲಿಂದ ಬಂದಿದ್ದೀರಿ? ಯಾರು ಯಾರು ಬಂದಿದ್ದೀರೀ? ಎಂದು ಕುಶಲೋಪರಿಯನ್ನು ಅವರೇ ಶುರು ಮಾಡಿಕೊಂಡಾಗ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿ ನನ್ನ ಪ್ರವರಗಳನ್ನೆಲ್ಲಾ ಹೇಳಿ, ಸದ್ಯಕ್ಕೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಕುಟುಂಬ ಸಮೇತ ವಾಸಿಸುತ್ತಿರುವುದಾಗಿ ತಿಳಿಸಿ ಇಡಿ ಕುಟುಂಬವನ್ನು ಅವರಿಗೆ ಪರಿಚಯಿಸಿದೆ. ಇಡೀ ನಮ್ಮ ಕುಟುಂಬದ ಮೇಲೆ ಚೆಲುವನಾರಾಯಣ ಅನುಗ್ರಹ ಸದಾಕಾಲವೂ ಇರಲಿ ಎಂದು ಹಾರೈಸಿ, ಓಹೋ ನೀವೂ ಕೂಡಾ ನಮ್ಮ ಊರಿನವರೇ, ನಮ್ಮವರೇ ಎಂದು ಉದ್ಗಾರ ತೆಗೆದಾಗ ನನಗಾಶ್ಚರ್ಯ!!

durga_prarameshwariಬೆಂಗಳೂರಿನ ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇವಾಲಯದ ಹಿಂದಿನ ಬಡಾವಣೆಯಲ್ಲಿ ಅವರದ್ದೂ ಮತ್ತು ಅವರ ಸಹೋದರಿಯ ಸ್ವಂತ ಮನೆ ಇದೆ ಎಂದು ತಿಳಿಸಿ ಲೋಕಾಭಿರಾಮವಾಗಿ ಅಲ್ಲಿನ ಪ್ರಸಕ್ತ ಸ್ಥಿತಿಗತಿಗಳನ್ನೂ, ಇಂದಿನ ನಿವೇಶನಗಳ ಬೆಲೆಯನ್ನು ಅವರು ಕೊಂಡು ಕೊಂಡ ಬೆಲೆಗೆ ತಳುಕು ಹಾಕುತ್ತಾ ಎಲ್ಲ ಮಧ್ಯಮವರ್ಗದವರ ರೀತಿಯೇ ನನಗೆ ಕಂಡರು. ಜೊತೆ ಜೊತೆಗೇ ನೀರಿನ ಕೊಳಗವನ್ನು ಚೆನ್ನಾಗಿ ಹುಳಿ ಹಚ್ಚಿ ತೊಳೆದು ನೀರು ತುಂಬಿಸ ತೊಡಗಿದರು. ಅಷ್ಟರಲ್ಲಾಗಲೇ ನನಗೆ ಅವರೊಂದಿಗೆ ಸ್ವಲ್ಪ ಸಲುಗೆ ಬೆಳೆದು ನನ್ನ ಸಂಸ್ಕೃತ ಮತ್ತು ವೇದಾಧ್ಯಯನದ ಮೊದಲ ಗುರುಗಳಾದ ಮೇಲುಕೋಟೆಯವರೇ ಆದ ಕೀರ್ತಿಶೇಷ ಶ್ರೀ ಸಂಪತ್ ಅಯ್ಯಂಗಾರ್ ಮತ್ತು ಅವರ ಸಹೋದರಾದ ಶಡಗೋಪನ್ ಮತ್ತು ಗೋವಿಂದ ರಾಜು ಅವರ ಬಗ್ಗೆ ಮತ್ತವರ ಕುಟುಂಬದ ಬಗ್ಗೆ ವಿಚಾರಿಸಿದಾಗ ಅವರು ನನಗೇ ಮತ್ತೂ ಆತ್ಮೀಯರಾಗಿ ಅವರೆಲ್ಲರ ಬಗ್ಗೆಯೂ ತಿಳಿಸುತ್ತಾ ನಮ್ಮ ಗುರುಗಳು ವೈರಮುಡಿ ಸಮಯದಲ್ಲಿ ಅಹೋಬಲ ಮಠದಲ್ಲಿ ಮಾಡುತ್ತಿದ್ದ ಪ್ರವಚನಗಳನ್ನು ನೆನೆದು ಸ್ವಲ್ಪ ಕಾಲ ಗದ್ಗದಿತರಾದರು.

ಹಾಗೆಯೇ ಮಾತನಾಡುತ್ತಾ ಪ್ರತಿದಿನ ಎಂಟು ಹತ್ತು ಬಾರಿ ಕೆಳಗಿನಂದ ಮೇಲಕ್ಕೆ ನೀರನ್ನು ತೆಗೆದು ಕೊಂಡು ಹೋಗುವುದಾಗಿ ತಿಳಿಸಿ ವಿಶೇಷ ದಿನಗಳಲ್ಲಿ ಅದು ಇನ್ನೂ ಹೆಚ್ಚಾಗ ಬಹುದು ಎಂದು ತಿಳಿಸಿ ಸಿಂಬಿಯನ್ನು ತಲೆಯ ಮೇಲಿರಿಸಿಕೊಂಡು ನಿಧಾನವಾಗಿ ನೀರಿನ‌‌ ಕೊಳಗವನ್ನು ತಲೆಯ ಮೇಲೆ ಇರಿಸಿ ಕೊಂಡು ದೇವಾಲಯದ ಕಡಿದಾದ ಮೆಟ್ಟಲುಗಳನ್ನು ಏರತೊಡಗಿದಾಗ ಅವರಿಗೆ ವಂದಿಸಿ ಮೆಟ್ಟಿಲುಗಳನ್ನು ಇಳಿಯಲಾರಂಭಿಸಿದೆವು

ಅವರು ಈ ಎಪ್ಪತ್ತರ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲದಿದ್ದರೂ, ಕೇವಲ ದೇವರ ಮೇಲಿನ ಆನನ್ಯ ಭಕ್ತಿಯಿಂದ ಈ ಮಹತ್ಕಾರ್ಯವನ್ನು ಮಾಡುತ್ತಿರುವುದು ನನಗೆ ಅರಿವಾಗಿ ನಾನೇ ಅವರ ಬಗ್ಗೆ ತಿಳಿಯದೆ, ಉದರ ನಿಮಿತ್ತ ಬಹುಕೃತ ವೇಷಂ ಎಂದು ಮುಖ ಪುಟದಲ್ಲಿ ಹೇಳಿದ್ದಕ್ಕಾಗಿ ಪಶ್ವಾತ್ತಾಪವಾಗಿ ಅವರ ಬಳಿ ನನ್ನಿಂದಾಗಿ ಅರಿಯದೆ ಆದ ತಪ್ಪಿಗೆ ಕ್ಷಮೆಯನ್ನು ಕೋರಿ, ಮನಸ್ಸನ್ನು ಹಗುರ ಮಾಡಿಕೊಂಡೆ. ಶ್ರೀಯುತರಿಗೆ ಅವರು ಮಾಡುತ್ತಿರುವ ಕಾಯಕದಲ್ಲಿ ಯಾವುದೇ ರೀತಿಯ ಸಂಕೋಚವಿಲ್ಲದೆ ಹೆಚ್ಚಿನ ಆರ್ಥಿಕ ಪರಿಣಾಮಗಳನ್ನು ಯೋಚಿಸದೆ, ಕೇವಲ ಭಗವಂತನ ಸೇವೆ ಮಾಡುವ ಅವಕಾಶವಿದೆಯಲ್ಲಾ ಎಂದು ಧನಾತ್ಮಕವಾಗಿ ಆಲೋಚಿಸುತ್ತಿರುವ ಪರಿಣಾಮವಾಗಿ ಅವರು ಮಾಡುತ್ತಿರುವ ಎಲ್ಲಾ ಕೆಲಸ ಕಾರ್ಯಗಳೂ ಸುಲಭ ಸಾದ್ಯವಾಗಿದೆ. ಹಾಡುತ್ತಾ ಹಾಡುತ್ತಾ ರಾಗ ಎನ್ನುವಹಾಗೆ ಪ್ರತಿದಿನವೂ ಅದೇ ಮೆಟ್ಟಿಲುಗಳನ್ನು ನಿಶ್ಕಲ್ಮಶ ಮನಸ್ಸಿನಿಂದ ಧೃಡ ಸಂಕಲ್ಪದಿಂದ ಭಗಂತನನ್ನು ನೆನೆಯುತ್ತಾ ಹತ್ತುತ್ತಿರುವುದರಿಂದ ಅವರಿಗೆ ಅದು ಅಭ್ಯಾಸಗತವಾಗಿ ಹೋಗಿ ತಲೆಯ ಮೇಲಿರುವ ಭಾರವೂ ಅರಿವಾಗದೆ ಭಗವಂತನ ಸೇವೆಯನ್ನು ಮಾಡಲು ಸಾಧ್ಯವಾಗಿದೆ. ಈ ಜೀವ ಇರುವವರೆಗೂ ಆ ಭಗವಂತನ ಸೇವೆಯನ್ನು ಮಾಡುತ್ತಲೇ ಇರುವೆ ಎಂದು ಅವರು ಹೇಳುವಾಗ ಅವರ ಕಣ್ಣುಗಳಲ್ಲಿದ್ದ ಕ್ಷಾತ್ರ ತೇಜವನ್ನು ವರ್ಣಿಸಲಸದಳ ಮತ್ತು ಅದನ್ನು ಪ್ರತ್ಯಕ್ಷವಾಗಿ ನೋಡಿಯೇ ತೀರಬೇಕಷ್ಟೇ.

ನಾನು ಈಗಾಗಲೇ ಹತ್ತು ಹಲವು ಬಾರಿ ಹೇಳಿದಂತೆ, ಭಕ್ತಿ ಎನ್ನುವುದು ವ್ಯಾಪಾರವಲ್ಲ, ಅದು ಪ್ರದರ್ಶನಕ್ಕಿಟ್ಟ ವಸ್ತುವಲ್ಲ. ಅಂಧಾನುಕರಣೆ ಅಂತೂ ಅಲ್ಲವೇ ಅಲ್ಲ. ಅದು ನಮ್ಮಲ್ಲಿಯೇ ಭಗವಂತನನ್ನು ಕಾಣುವ ಪರಿ. ನಮ್ಮನ್ನೇ ನಾವು ಅರಿತು ಬಾಳುವ ಸರಿದಾರಿ. ಉತ್ಕಟ ಭಕ್ತಿಯ ಮೂಲಕ ನಮ್ಮೊಳಗೇ ಭಗವಂತನನ್ನು ಸಾಕ್ಷಾತ್ಕಾರಗೊಳಿಸಿ, ಯಾವುದೇ ಸಬೂಬು ಹೇಳದೆ ಭಗವಂತನನ್ನು ಒಲಿಸಿಕೊಳ್ಳುವ ಪರಿ. ಎಂಬ ವಾಕ್ಯಗಳನ್ನು ಅಕ್ಷರ ಸಹಾ ಪಾಲಿಸುತ್ತಿದ್ದರು.

ಹೀಗೆ ಮೇಲುಕೋಟೆಯ ಬಾಹುಬಲಿ ಎಂದೇ ಪ್ರಖ್ಯಾತರಾಗಿದ್ದ ಸುಮಾರು 70+ ವರ್ಷದ ಶ್ರೀ ಕಲಮೇಘಮ್ ರಾಮಸ್ವಾಮಿ ಅಯ್ಯಂಗಾರ್ ಅವರು ಜೂನ್ 14, 2022, ಮಂಗಳವಾರ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ವಿಧಿವಶರಾಗಿದ್ದಾರೆ ಎಂಬ ಸುದ್ಧಿ ಕೇಳಿ ಮನಸ್ಸಿಗೆ ಬಹಳವಾಗಿ ಆಘಾತವಾಯಿತು.

ಅವರ ಶ್ರದ್ಧೆ ಮತ್ತು ಭಕ್ತಿ ಇಂದಿನ ಯುವ ಜನರಿಗೆ ಪ್ರೇರಣಾದಾಯಕವೇ ಸರಿ. ಅವರ ಆತ್ಮಕ್ಕೆ ಅವರ ಆರಾಧ್ಯ ದೈವ ಆ ಮೇಲುಕೋಟೆಯ ಚಲುವ ನಾರಾಯಣಸ್ವಾಮಿ ಸದ್ಗತಿಯನ್ನು ನೀಡಲಿ ಎಂದು ನಾವು ನೀವು ಪ್ರಾರ್ಥಿಸೋಣ ಅಲ್ವೇ.

ನಾರಾಯಣ ನಾರಾಯಣ 🙏

ಏನಂತೀರೀ?
ನಿಮ್ಮವನೇ ಉಮಾಸುತ

6 thoughts on “ಕರ್ಮಯೋಗಿ ಹಾಗೂ ಭಕ್ತಿಯೋಗಿ 

  1. ಶ್ರೀ ರಾಮೈಯಂಗಾರ್ ಅವರ ಸೇವೆಯ ಬಗ್ಗೆ ನಿಮ್ಮ ಲೇಖನ ನೋಡಿದೆ. ಅವರನ್ನು ಬೆಂಗಳೂರಿನಿಂದ ಮೇಲುಕೋಟೆಗೇ ಖುದ್ದಾಗಿ ಭೇಟಿ ಮಾಡಿ ಸಂದರ್ಶನ ಮಾಡಿ ವಿವರವಾಗಿ ತಿಳಿಸಿದ್ದೀರಿ. ನಾವು ಅವರು ಮಾಡುತ್ತಿರುವ ಸೇವೆಯನ್ನು ಒಂದು ದಿನವೂ ಮಾಡುತ್ತೇವೋ ಇಲ್ಲವೋ ಗೊತ್ತಿಲ್ಲ. ಎಪ್ಪತ್ತು ವರ್ಷದ ಶ್ರೀಯುತರು ಇಪ್ಪತ್ತರ ಯುವಕರಂತೆ ಪ್ರತಿದಿನ ಐದಾರು ಬಾರಿ ಕೊಳದಿಂದ ಮಡಿಯಲ್ಲಿ ನೀರಿನ ಸೇವೆಯನ್ನು ಮಾಡುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹವಾದುದು. ಧಾರ್ಮಿಕ ಕ್ಷೇತ್ರದಲ್ಲಿ ಯಾವುದಾದರೂ ಪ್ರಶಸ್ತಿ ಕೊಡುವ ವ್ಯವಸ್ಥೆ ಇದ್ದರೆ ಇವರ ಸೇವೆಗೆ ಖಂಡಿತ ಕೊಡಬಹುದು.

    Liked by 1 person

    1. ಲೇಖನದಲ್ಲಿಯೇ ತಿಳಿಸಿರುವಂತೆ ಅವರು ಮೇಲುಕೋಟೆಯ ಸ್ಥಳೀಯ ನಿವಾಸಿಗಳಾಗಿದ್ದು, ಪ್ರತೀ ದಿನವೂ ಈ ಸೇವಾ‌ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

      Like

      1. ನಿಮ್ಮ ಲೇಖನ ಇಷ್ಟವಾಯಿತು ಆದರೆ ಅವರು ಯಾವ ರೀತಿ ವಿಧಿವಶ ವಿಧಿವಶರಾದರು ಎಂಬುದರ ಬಗ್ಗೆ ತಾವು ತಿಳಿಸಬೇಕಿತ್ತು.

        Like

  2. ಆದರೆ, ಅವರು ಇತ್ತೀಚಿಗೆ ನಡೆದ ನರಸಿಂಹ ಜಯಂತಿಯಂದೇ ದೇಹ ಬಿಟ್ಟರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು.

    Liked by 1 person

    1. ನಾವೆಲ್ಲಾ ನರಸಿಂಹ ಜಯಂತಿಯನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಆಚರಿಸಿದರೆ ಐಯ್ಯಂಗಾರ್ ವೈಶಾಖ ಮಾಸದ ಸ್ವಾತಿ ನಕ್ಷತ್ರದಂದು ಆಚರಿಸುತ್ತಾರೆ. ಹಾಗಾಗಿ ನೆನ್ನೆ ಮಂಗಳವಾರ ಅವರ ಪ್ರಕಾರ ನರಸಿಂಹ ಜಯಂತಿ ಆಗಿತ್ತು

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s