ನಮ್ಮ ದಕ್ಷಿಣ ಭಾರತದ ತಿಂಡಿಗಳಲ್ಲಿ ಇಡ್ಲಿ, ದೋಸೆ, ಪೂರಿ, ಉಪ್ಪಿಟ್ಟು, ಅವಲಕ್ಕಿ, ಚಿತ್ರಾನ್ನ, ಹುಗ್ಗಿ ಸಾಮಾನ್ಯವಾಗಿದೆ. ಈ ಎಲ್ಲಾ ತಿಂಡಿಗಳನ್ನು ದಿಢೀರ್ ಎಂದು ತಯಾರಿಸಬಹುದು ಆದರಿಂದು ನಾನು ಹೇಳಲು ಹೊರಟಿರುವುದು ಈ ಎಲ್ಲಾ ತಿಂಡಿಗಳ ರಾಜ ಒತ್ತು ಶ್ಯಾವಿಗೆ ಬಗ್ಗೆ. ಇದೇ ತಿಂಡಿಯ ಬಗ್ಗೆ ಏಕೆ ಅಷ್ಟು ಒತ್ತು ಕೊಡ್ತಾ ಇದ್ದೀನಿ ಅಂದರೆ ನಾವು ಸಣ್ಣವರಿದ್ದಾಗ ಒತ್ತು ಶ್ಯಾವಿಗೆ (ನಮ್ಮ ಹಾಸನದ ಕಡೆ ಶ್ಯಾಮಿಗೆ ಅಂತಾನೂ ಕರೀತಾರೆ) ಮಾಡ ಬೇಕೆಂದರೆ ಒಂದು ವಾರದಿಂದಲೇ ತಯಾರಿ ನಡೆಯುತ್ತಿದ್ದವು. ಅದು ನಮ್ಮ ಮನೆಯಲ್ಲಿ ಮಾತ್ರವಲ್ಲದೆ ನಮ್ಮ ಮನೆಯ ಸಮೀಪವಿರುವ ಸಂಬಂಧೀಕರು ಇಲ್ಲವೇ ನಮ್ಮ ವಠಾರದ ಕೆಲವು ಕುಟುಂಬಗಳು ಸೇರಿಕೊಂಡು ಮಹೂರ್ತ ನಿಶ್ಚಯಿಸುತ್ತಿದ್ದರು (ಸಾಮಾನ್ಯವಾಗಿ ರಜಾ ದಿನಗಳೇ ಆಗಿರುತ್ತಿದ್ದವು).
ಏಳೆಂಟು ಸೇರು ಅಕ್ಕಿಯನ್ನು ಹಿಟ್ಟಿನ ಗಿರಣಿಯಲ್ಲಿ ನುಣ್ಣಗೆ ಹಿಟ್ಟು ಮಾಡಿಸಿ, ಸಣ್ಣ ಕಿಂಡಿಯ ವಂದರಿಯಲ್ಲಿ ಜರಡಿ ಹಿಡಿದು ಪಂಚೆಯ ಮೇಲೆ ಹಿಟ್ಟನ್ನು ಹರಡುವ ಮೂಲಕ ಉದ್ಘಾಟನೆಯಾಗುತ್ತಿತ್ತು.
ನಂತರದಲ್ಲಿ ಯಾರ ಮನೆಯಲ್ಲಿ ಒತ್ತು ಶ್ಯಾವಿಗೆ ಒರಳು ಇರುತ್ತದೆಯೋ ಅವರ ಮನೆಗೆ ಹೋಗಿ ಒರಳನ್ನು (ಭಾರವಾದ ಮರದ ದೊಡ್ಡದಾದ, ಉದ್ದದಾದ ಹಿಡಿಯುಳ್ಳ ಪರಿಕರ) ಇಬ್ಬರು ಇಲ್ಲವೇ ಮೂರು ಮಕ್ಕಳು ಮನೆಗೆ ತಂದು ನೀರಿನಲ್ಲಿ ಚೆನ್ನಾಗಿ ತೊಳೆದು ಒರಳಿನ ಹಿತ್ತಾಳೆ ಬಿಲ್ಲೆಯನ್ನು ಹೊರಗೆ ತೆಗೆದು ಕಿಲುಬಿಲ್ಲದಂತೆ ಉಜ್ಜಿ ಉಜ್ಜಿ ಎಲ್ಲಾ ರಂದ್ರಗಳೂ ಸರಿಯಾಗಿರುವಂತೆ ತೊಳೆದು ಬೋರಲು ಹಾಕಿದರೆ ಎರಡನೆಯ ಹಂತ ಸಂಪೂರ್ಣವಾಗುತ್ತಿತ್ತು.
ಶ್ಯಾವಿಗೆ ಮಾಡುವ ದಿನದಂದು ಇಡೀ ವಠಾರದಲ್ಲಿ ಏನೋ ಹಬ್ಬದ ಸಂಭ್ರಮ. ಬೆಳಗ್ಗೆ ದೊಡ್ಡವರಿಗೆ ಕಾಫೀ, ಟೀ ಮತ್ತು ಮಕ್ಕಳಿಗೆ ಹಾಲು, ಹಾರ್ಲಿಕ್ಸ್ , ಬೋರ್ನ್ವಿಟ ಮಾತ್ರ ಮಾಡಿಕೊಟ್ಟು ಬೇಗ ಬೇಗನೆ ಸ್ನಾನಸಂಧ್ಯಾವಂದನೆ ಮುಗಿಸಿ, ದೊಡ್ಡ ದೊಡ್ಡದಾದ ಎಂಟು – ಹತ್ತು ತೆಂಗಿನಕಾಯಿಗಳನ್ನು ಒಡೆದು ಅಕ್ಕ ಪಕ್ಕದ ಮನೆಯಿಂದ ತೆಗೆದುಕೊಂಡು ಬಂದಿದ್ದ ಕಾಯಿತುರಿಯುವ ಮಣೆಯಿಂದ ಗಂಡಸರು ಕಾಯಿ ತುರಿಯಲು ಶುರು ಮಾಡಿಕೊಂಡರೆ, ಮೂರ್ನಾಲ್ಕು ಹೆಂಗಸರು ದೊಡ್ಡದಾದ ಪಾತ್ರೆಗಳಲ್ಲಿ ನೀರನ್ನು ಕುದಿಸಲು ಇಡುತ್ತಿದ್ದರು. ಒಂದು ಹಂತದಲ್ಲಿ ನೀರು ಕೊತ ಕೊತನೆ ಕುದಿಯಲು ಆರಂಭಿಸಿದೊಡನೆಯೇ ಒಲೆಯ ಉರಿ ತಗ್ಗಿಸಿ ಜರಡಿ ಹಿಡಿದಿಟ್ಟಿದ್ದ ಅಕ್ಕಿ ಹಿಟ್ಟನ್ನು ಒಬ್ಬರು ಮೆಲ್ಲಗೆ ಕುದಿಯುವ ನೀರಿನಲ್ಲಿ ಹಾಕುತ್ತಿದ್ದರೆ, ಮತ್ತೊಬ್ಬರು ಹಿಟ್ಟಿನ ಕವಲು ಕೋಲನ್ನು ಹಿಡಿದು ಹಿಟ್ಟು ಗಂಟಾಗದಂತೆ ನಿಧಾನವಾಗಿ ತಿರುಗಿಸುವುದನ್ನು ನೋಡುವುದೇ ಆನಂದ. ಕುದಿಯುವ ನೀರಿನಲ್ಲಿ ಹಿಟ್ಟು ಹದವಾಗಿ ಬೆರೆತು ಗಟ್ಟಿಯಾಗುವ ಸಮಯದಲ್ಲಿ ಬಿಸಿ ಬಿಸಿ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದು ಚಪಾತಿ ಮಣೆಯ ಮೇಲೆ ಕೈಗಳನ್ನು ಒದ್ದೆ ಮಾಡಿಕೊಳ್ಳುತ್ತಾ ನಾದುತ್ತಾ ಪುಟ್ಟ ಪುಟ್ಟ ಉಂಡೆಗಳನ್ನು ಮಾಡಿಕೊಂಡು ಮತ್ತೊಂದು ಒಲೆಯ ಮೇಲೆ ಕುದಿಯುತ್ತಿರುವ ನೀರಿನಲ್ಲಿ ಹಾಕುವ ಮೂಲಕ ಎರಡನೇಯ ಹಂತದ ಹಿಟ್ಟನ್ನು ಬೇಯಿಸುವ ಪ್ರಕ್ರಿಯೆ ನಡೆಯುತ್ತದೆ. ಕುದಿಯುವ ನೀರಿನಲ್ಲಿ ಹಾಕಿದ್ದ ಅಕ್ಕಿಹಿಟ್ಟಿನ ಉಂಡೆಗಳು ಚೆನ್ನಾಗಿ ಹದವಾಗಿ ಬೆಂದು ಹಗುರವಾಗಿ, ನೀರಿನ ಮೇಲೆ ತೇಲಲಾರಂಭಿಸಿದರೆ ಮೂರನೇ ಹಂತಕ್ಕೆ ಸಿದ್ಧವಾಗಿದೆ ಎಂದರ್ಥ.
ತೆಂಗಿನಕಾಯಿ ಹೋಳುಗಳನ್ನು ನುಣ್ಣಗೆ ತುರಿದು ಮತ್ತೊಂದು ಸುತ್ತಿನ ಕಾಫಿ ಕುಡಿದು ಗಂಡಸರು ಶ್ಯಾವಿಗೆ ಒರಳಿನ ಸುತ್ತ ಹಾಗೂ ಬಿಲ್ಲೆಗೆ ನಯವಾಗಿ ಎಣ್ಣೆ ಸವರಿ ಶ್ಯಾವಿಗೆ ಒರಳನ್ನು ಸಿದ್ಧಪಡಿಸಿ ಹದವಾಗಿ ಬೆಂದ ಎರಡು ಮೂರು ಹಿಟ್ಟಿನ ಉಂಡೆಗಳನ್ನು ಒರಳಿಗೆ ಹಾಕಿ ಮೂರು ಕಾಲಿನ ಒರಳನ್ನು ತಮ್ಮ ಎರಡೂ ಕಾಲಿನಿಂದ ಒತ್ತಿ ಹಿಡಿದು, ತಮ್ಮೆರಡೂ ಕೈಗಳಿಂದ ಉದ್ದನೆಯ ಹಿಡಿಯನ್ನು ಹಿಡಿದು ಮೆದುವಾಗಿ ತಮ್ಮೆಲ್ಲಾ ಶಕ್ತಿಯನ್ನು ಪ್ರಯೋಗಿಸಿ ಒತ್ತುತ್ತಿದ್ದರೆ. ಸರ್, ಪರ್, ಚಟರ್, ಪಟರ್ ಎಂದು ಶಭ್ಧ ಮಾಡುತ್ತ ಎಳೆ ಎಳೆಯಾಗಿ ಬಿಸಿ ಬಿಸಿಯಾದ ಬೆಳ್ಳಗಿನ ಕೂದಲಿನಂತಹ ಶ್ಯಾವಿಗೆ ಒರಳಿನ ತಳದಲ್ಲಿ ಬರುತ್ತಿದ್ದರೆ ಸಣ್ಣ ತಟ್ಟೆಯಲ್ಲಿ ವೃತ್ತಾಕಾರದಲ್ಲಿ ಹಿಡಿದು ಒದ್ದೆ ಪಂಚೆಯ ಮೇಲೆ ಹಾಕಿ ಆರಲು ಬಿಟ್ಟರೆ ಶ್ಯಾವಿಗೆ ಸಿದ್ದ. ಈ ಪ್ರಕ್ರಿಯೆ ಇಡೀ ಹಿಟ್ಟು ಮುಗಿಯುವವರೆಗೂ ಮುಂದುವರಿಯುತ್ತದೆ.
ಅತ್ತ ಮತ್ತೊಂದು ತಂಡ ಘಮ ಘಮವಾದ ಹದವಾಗಿ ಏಲಕ್ಕಿ ಬೆರೆಸಿದ ಗಸಗಸೆ ಪಾಯಸ ಮತ್ತು ಎಳ್ಳುಸೂಸಲು (ಕರಿ ಎಳ್ಳನ್ನು ಸಣ್ಣ ಉರಿಯಲ್ಲಿ ಹುರಿದು ಬೆಲ್ಲದೊಡನೆ ಮಾಡಿದ ಪುಡಿ) ಮಾಡಿರುತ್ತಾರೆ.
ನಂತರ ಬಾಣಲೆಯಲ್ಲಿ ಸ್ಪಲ್ಪ ಎಣ್ಣೆ ಹಾಕಿ ಒಣ ಮೆಣಸಿನಕಾಯಿ ಮತ್ತು ತೆಂಗಿನಕಾಯಿಯನ್ನು ಬಾಡಿಸಿಕೊಂಡು, ಚೂರು ಬೆಲ್ಲ, ಹುಣಸೇಹಣ್ಣಿನ ನೀರಿನೊಂದಿಗೆ ನುಣ್ಣಗೆ ರುಬ್ಬಿಕೊಂಡು, ಮತ್ತೊಮ್ಮೆ ಬಾಣಲೆಯಲ್ಲಿ ಸಾಸಿವೆ ಸಿಡಿಸಿ, ಕಡಲೇಕಾಯಿ ಬೀಜ ಹದವಾಗಿ ಕರಿದು, ಕಡಲೇಬೇಳೆ, ಉದ್ದಿನ ಬೇಳೆ ಕರಿಬೇವು, ಚಿಟಿಕೆ ಇಂಗು ಮತ್ತು ಅರಿಶಿನದೊಂದಿಗೆ ಒಗ್ಗರಣೆ ಮಾಡಿಕೊಂಡು ತಬ್ಬಿಕೊಂಡ ಮಿಶ್ರಣವನ್ನು ಬಾಡಿಸುತ್ತಿದ್ದರೆ, ಬರುತ್ತಿರುವ ಘಮಲು ಬೆಳಗಿನಿಂದಲೂ ಬರೀ ದ್ರವಾಹಾರಲ್ಲೇ ಆಡುತ್ತಿದ್ದ ಮಕ್ಕಳ ನಾಸಿಕಕ್ಕೆ ಬಡಿದು, ಹೊರಗಿನಿಂದಲೇ ಅಮ್ಮಾ ಇನ್ನೂ ಎಷ್ಟುಹೊತ್ತಮ್ಮಾ, ಹೊಟ್ಟೆ ತುಂಬಾ ಹಸಿಯುತ್ತಿದೆ. ಇನ್ನು ತಡೆಯಲು ಆಗುತ್ತಿಲ್ಲ ಎನ್ನುವ ಆಕ್ರಂದನ ತಾಯಂದಿರ ಕರುಳು ಚುರುಕ್ ಎಂದಿರುತ್ತದೆ.
ಹೇಗೋ ಇಷ್ಟೇ ಹೊತ್ತು ಕಾಯ್ದಿದ್ದೀರಿ ಇನ್ನೊಂದು ಹತ್ತು ನಿಮಿಷ ತಡೀರೋ ಮಕ್ಳಾ, ಮೊಸರಿಗೆ ಹಸಿ ಶುಂಠಿ, ಇಂಗು, ಕಡಲೇಬೇಳೆ, ಉದ್ದಿನ ಬೇಳೆ, ತೆಂಗಿನಕಾಯಿ ಒಗ್ಗರಣೆ ಹಾಕಿ ಬಿಟ್ರೆ, ಎಲ್ಲರೂ ಒಟ್ಟಿಗೆ ಕುಳಿತು ತಿನ್ನೋಣ ಅನ್ನೋ ಮಾತು ಕೇಳಿ ಬರುತ್ತದೆ.
ಇಷ್ಟೆಲ್ಲಾ ಕಾರ್ಯಗಳು ಮುಗಿಯುವ ಹೊತ್ತಿಗೆ ಸೂರ್ಯ ನೆತ್ತಿಮೇಲೆ ಬಂದು ಹೊಟ್ಟೆ ಕೂಡಾ ಚುರಗುಡುತ್ತಾ ಮಕ್ಕಳೆಲ್ಲಾ ಸಾಲಾಗಿ ತಟ್ಟೆ ಹಾಕಿಕೊಂಡು ಅಪ್ಪಾ ಇದೆಂತಾ ಶ್ಯಾವಿಗೇನೋ ಅದ್ಯಾಕ್ ಇಷ್ಟುಹೊತ್ತು ಸತಾಯಿಸ್ತಾರೋ ಅಂತ ಗೊಣಗುವುದು ಹಿರಿಯರ ಕಿವಿಗೆ ಕೇಳಿಸಿದರೂ, ಕೇಳಿಸದಂತೆ ಮಾಡಿಟ್ಟ ಸ್ವಲ್ಪ ಶ್ಯಾವಿಗೆಯನ್ನು ಕಾಯಿಸಾಸಿವೆ ಗೊಜ್ಜಿನೊಂದಿಗೆ, ಇನ್ನು ಸ್ವಲ್ಪ ಎಳ್ಳು ಸೂಸಲೊಂದಿಗೆ. ಮತ್ತೊಂದಷ್ಟು ಶ್ಯಾವಿಗೆಯನ್ನು ಒಗ್ಗರಣೆ ಮೊಸರಿನೊಂದಿಗೆ ಕಲಸಿ ಬಡಿಸಲು ಸಿದ್ದವಾದ ಕೂಡಲೇ ಅಲ್ಲಿಯವರೆಗೆ ಪಟ ಪಟಾ ಎಂದು ಮಾತನಾಡುತ್ತಿದ್ದ ಎಲ್ಲಾ ಮಕ್ಕಳು, ಒಮ್ಮಿಂದೊಮ್ಮೆಲೆ ನಿಶ್ಯಬ್ಧರಾಗಿ ತಮಗೆ ಎಷ್ಡು ಬೇಕೋ, ಏನು ಬೇಕೋ ಅಷ್ಟನ್ನು ಹಾಕಿಸಿಕೊಂಡು ಕೈ ಬಾಯಿಗೆ ಕೆಲಸವನ್ನು ಕೊಡುವುದನ್ನು ವರ್ಣಿಸುವುದಕ್ಕಿಂತ ಅನುಭವಿಸಿದರೇ ಮಹದಾನಂದ. ಶ್ಯಾವಿಗೆ ಜೊತೆ ಘಮ ಘಮವಾದ ಬಿಸಿ ಬಿಸಿಯಾದ ಗಸಗಸೆ ಪಾಯಸ ಜೊತೆಗೆ ನೆಂಚಿಕೊಳ್ಳಲು ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಇಲ್ಲವೇ ಕರಿದ ಬಾಳಕ (ಉಪ್ಪಿನ ಮೆಣಸಿನಕಾಯಿ) ಇದ್ದರಂತೂ ಹೇಳತೀರದ ಆನಂದ.
ಮಕ್ಕಳಾ ಹೊಟ್ಟೆ ತುಂಬಾ ತಿನ್ರೋ, ಇನ್ನೂ ಸ್ವಲ್ಪ ಬಡಿಸಲಾ, ಖಾರ ಜಾಸ್ತಿ ಆಯ್ತೇನ್ರೋ, ಎಳ್ಳು ಸೂಸಲು ಶ್ಯಾವಿಗೆ ಹಾಕ್ಲಾ ಸಿಹಿಯಾಗಿರುತ್ತದೆ, ಇಲ್ಲಾ ಅಂದ್ರೆ ಗಸಗಸೆ ಪಾಯಸದ ಜೊತೆ ಕಲೆಸಿಕೊಂಡು ತಿನ್ರೋ, ಕಡೇಲಿ ಮೊಸರು ಶ್ಯಾವಿಗೆ ತಿನ್ನುವಿರಂತೆ ಹೊಟ್ಟೆ ತಣ್ಣಗೆ ಆಗುತ್ತದೆ ಅಂತಾ ಹೇಳಿ, ಗೋಗರೆದು, ಅಮ್ಮಂದಿರು ಅಕ್ಕರೆಯಿಂದ ಬಡಿಸ್ತಾ ಇದ್ರೆ ಬೆಳಗಿನಿಂದ ಹಸಿದಿದ್ದಕ್ಕೋ, ಇಲ್ಲವೇ ತುಂಬಾ ರುಚಿಯಾಗಿರುವುದಕ್ಕೋ ಇಲ್ಲವೇ ಅಮ್ಮಂದಿರ ಮೇಲಿನ ಪ್ರೀತಿಗೋ ಒಟ್ಟಿನಲ್ಲಿ ಪ್ರತಿದಿನ ತಿನ್ನುವುದಕ್ಕಿಂತಲೂ ಹೆಚ್ಚಿಗೆ ತಿಂದು ಡರ್ ಎಂದು ಮಕ್ಕಳು ಸಣ್ಣಗೆ ತೇಗಿದ ಶಬ್ಧ ಅಮ್ಮಂದಿರ ಕಿವಿಗೆ ಬೀಳ ತೊಡಗುತ್ತಿದ್ದಂತೆಯೇ ಇಷ್ಟು ಕಷ್ಟ ಪಟ್ಟು ಮಾಡಿದ ಆಯಾಸವೆಲ್ಲಾ ಮಾಯವಾಗಿ ಹೋಗ್ರೋ ಅಪ್ಪಂದಿರನ್ನೆಲ್ಲಾ ಕರಿರೋ ಅವರೂ ಬೆಳಗಿನಿಂದ ಹೊಟ್ಟೆ ಹಸಿವಿನಿಂದ ಇದ್ದಾರೆ. ಅವರಿಗೂ ಬಡಿಸಿ ನಾವೂ ಸ್ವಲ್ಪ ತಿನ್ನೋ ಶಾಸ್ತ್ರ ಮಾಡ್ತೀವಿ ಅಂದರೆ ಅಲ್ಲಿಗೆ ಘಂಟೆ ಎರಡು ಅಥವಾ ಮೂರಾಗಿದೆ ಎಂದರ್ಥ.
ಮಕ್ಕಳೆಲ್ಲಾ ಹೊರಗೆ ಆಡಲು ಹೋದರೆ ಎಲ್ಲಾ ಅಪ್ಪ ಅಮ್ಮಂದಿರು ಮಾಡಿರುವ ಎಲ್ಲಾ ರೀತಿಯ ಶ್ಯಾವಿಗೇ ಪದಾರ್ಥಗಳನ್ನು ಮಧ್ಯದಲ್ಲಿ ಇಟ್ಟು ಕೊಂಡು ಸುತ್ತಲೂ ಕುಳಿತುಕೊಂಡು ಲೋಕಾಭಿರಾಮವಾಗಿ ಹರಟುತ್ತಾ,, ಶ್ಯಾವಿಗೆ ಸ್ವಲ್ಪ ಗಟ್ಟಿಯಾಯ್ತೇನೋ, ಏನು ಮಾಡೋದು ಈಗ ಸಿಕ್ತಿರೋ ಅಕ್ಕಿನೇ ಚೆನ್ನಗಿರೊಲ್ಲಾರೀ, ಮುಂಚೆ ಹೇಗಿರುತ್ತಿತ್ತೂ ಅಂತೀರೀ ಅಂತಾನೋ, ಇಲ್ಲವೇ ಎಡಗೈಯಲ್ಲಿ ಬಡಿಸುತ್ತಿದ್ದೀನಿ ಅಂತ ಸಂಕೋಚ ಪಟ್ಕೋಬೇಡಿ ಅಂತ ಹೇಳ್ರಿ ನಿಮ್ಮ ಮನೆಯವರಿಗೆ ಅಂತಾನೋ ಅದೇನೋಪ್ಪಾ ಇಷ್ಟು ಪರಿಚಯ ಇದ್ರೂ ನಮ್ಮ ಮನೆಯಲ್ಲಿ ಊಟ ಮಾಡುವುದಕ್ಕೆ ನಿಮ್ಮೆಜಮಾನ್ರು ಯಾಕೆ ಸಂಕೋಚ ಪಟ್ಕೋತಾರೋ ಅಂತ ಹುಸಿ ಕೋಪ ತೋರಿಸುತ್ತಾನೋ ಒಟ್ಟಿನಲ್ಲಿ ಮಾಡಿದ ಒತ್ತು ಶ್ಯಾವಿಗೆಯ ಎಲ್ಲಾ ರೀತಿಯ ಪದಾರ್ಥಗಳನ್ನು ಹೊಟ್ಟೆ ಬರಿಯುವ ವರೆಗೆ ತಿಂದು ಕಂಠ ಪೂರ್ತಿ ಗಸಗಸೆ ಪಾಯಸ ಕುಡಿದು ಮುಗಿಸುವ ವೇಳೆ ಸಂಜೆಯಾಗಿರುತ್ತಿತ್ತು.
ಮಿಕ್ಕೆಲ್ಲಾ ತಿಂಡಿಗಳಿಗಿಂತಲೂ ಹೆಚ್ಚು ಪರಿಶ್ರಮದಾಯಕ, ಆರೋಗ್ಯದಾಯಕ(ಎರಡುಬಾರೀ ಬೇಯುವ ಕಾರಣ), ರುಚಿಕರ ಮತ್ತು ಎಲ್ಲ ಸ್ನೇಹಿತರನ್ನೂ, ಬಂಧು ಬಾಂಧವರನ್ನು ಒಗ್ಗೂಡಿಸುವುದರಿಂದಲೇ ನಾನು ಒತ್ತು ಶ್ಯಾವಿಗೆಯನ್ನು ತಿಂಡಿಗಳ ರಾಜ ಎಂದು ಕರೆಯಲು ಇಚ್ಚಿಸುತ್ತೇನೆ.
ಮೊದಲು ಎಲ್ಲರ ಮನೆಗಳು ಚಿಕ್ಕದಿದ್ದವು ಮನಸ್ಸುಗಳು ವಿಶಾಲವಾಗಿದ್ದವು. ಇಂದು ಎಲ್ಲರ ಮನೆಗಳೂ ದೊಡ್ಡ ದೊಡ್ಡದಾಗಿವೆಯಾದರೂ, ಮನಸ್ಸುಗಳು ಮಾತ್ರ ಸಂಕುಚಿತವಾಗಿರುವ ಕಾರಣ,
ಹೇಗೂ ಒತ್ತು ಶ್ಯಾವಿಗೆ ಮಾಡುವುದು ಹೇಗೆ, ಅದರಿಂದಾಗುವ ಪರಿಣಾಮಗಳನ್ನು ತಿಳಿಸಿದ್ದೇನೆ. ನೀವೂ ನಿಮ್ಮಗಳ ಮನೆಗಳಲ್ಲಿ ಒಮ್ಮೆ ಎಲ್ಲರೊಡಗೂಡಿ ಒತ್ತು ಶ್ಯಾವಿಗೆ ಮಾಡಿ ಶ್ಯಾವಿಗೆ ಎಳೆಗಳಂತೆ ಸಂಬಂಧ ಒಟ್ಟುಗೊಳಿಸುವ ಪ್ರಯತ್ನ ಮಾಡಿ ನೋಡಿ.
ವಿಭಕ್ತ ಕುಟುಂಬಗಳೇ ಹೆಚ್ಚಾಗಿರುವ ಇಂದು ಮನೆಗಳ ಪ್ರತೀ ಸಭೆ, ಸಮಾರಂಭಗಳಲ್ಲಿ ಅಡುಗೆಯವರನ್ನು ಕರೆಸಿಯೋ ಇಲ್ಲವೇ ಹೊರಗಿನಿಂದ ಅಡುಗೆ ತರಿಸಿ ಬಡಿಸಿ ನೆಂಟರಿಷ್ಟರ ಸಂತೃಪ್ತಿ ಪಡಿಸುವ ಬದಲು ಹಿಂದನಂತೆ ಮನೆಯವರು, ಸ್ನೇಹಿತರೊಂದಿಗೆ ಎಲ್ಲರೊಡಗೂಡಿ ಅಪರೂಪಕ್ಕೊಮ್ಮೆ ಒಟ್ಟಿಗೆ ಇದೇ ರೀತಿಯ ಯಾವುದಾದರೂ ಭಕ್ಷ ಭೋಜನಗಳನ್ನು ಮಾಡಿ ಸಂಭ್ರಮಿಸುವ ಪ್ರಯತ್ನ ಮಾಡಬಹುದಾ ಎಂದು ಆಲೋಚಿಸಿ
ಸರ್ವೇ ಜನಾಃ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.
ಒಗ್ಗಟ್ಟಿನಲ್ಲಿ ಬಲವಿದೆ
ಏನಂತೀರೀ
[…] ಮತ್ತು ನನ್ನ ಒತ್ತು ಶ್ಯಾವಿಗೇ ಲೇಖನ ಓದಿ (https://wp.me/paLWvR-44) , ಚೆನ್ನಾಗಿ ಬರೆದಿದ್ದಿಯಾ, ನಮ್ಮ […]
LikeLike