ರಾಮ ಹೆಚ್ಚೋ, ರಾವಣ ಹೆಚ್ಚೋ‌

ಎರಡನೆಯ ಮಗುವಿನ‌ ನಿರೀಕ್ಷೆಯಲ್ಲಿದ್ದ ಒಬ್ಬ ತಾಯಿ ತನ್ನ ಎಂಟು ವರ್ಷದ ಮಗಳನ್ನು ರಾತ್ರಿ ಮೆಲ್ಲಗೆ ತಲೆ ಸವರುತ್ತಾ ಹಾಸಿಗೆಯ ಮೇಲೆ ಮಲಗಿಸುತ್ತಾ ಕುತೂಹಲದಿಂದ ಮಗಳನ್ನು ಕೇಳುತ್ತಾಳೆ. ಪುಟ್ಟೀ ನಿನಗೆ ತಮ್ಮ ಪಾಪು ಬೇಕಾ, ಇಲ್ಲವೇ ತಂಗಿ ಪಾಪು ಬೇಕಾ ಎಂದು.

ತಾಯಿ ಕೇಳಿದ ಪ್ರಶ್ನೆಗೆ ಮಗಳು ಅಷ್ಟೇ ಮುಗ್ಧವಾಗಿ ನನಗೆ ತಂಗಿ ಪಾಪು ಬೇಡ ತಮ್ಮ ಪಾಪು ಬೇಕು ಅಂತ ಹೇಳುತ್ತಾಳೆ. ಪಾಪ ಮುಗ್ಧ ಮಗುವಿಗೆ ಏನೂ ತಿಳಿಯದು ‌ಎಂದು ಭಾವಿಸಿದ ತಾಯಿ ಮಾತು ಮುಂದುವರೆಸುತ್ತಾ, ಅಲ್ಲಾ ಕಣೇ ಪುಟ್ಟಿ, ತಂಗಿ ಪಾಪು ಆದ್ರೆ, ಅವಳಿಗೆ ನಿನ್ನೆಲ್ಲಾ ಬಟ್ಟೆಗಳನ್ನೂ, ಬಣ್ಣ ಬಣ್ಣದ ಗೊಂಬೆಗಳನ್ನು ಕೊಡಬಹುದು. ಅದೂ ಅಲ್ಲದೆ ದೊಡ್ಡವಳಾದ ಮೇಲೆ ಇಬ್ಬರೂ ಒಟ್ಟಿಗೆ ಒಂದೇ ರೀತಿಯ ಬಟ್ಟೆಗಳನ್ನು ಹಾಕಿಕೊಳ್ಳ ಬಹುದು, ಸುಖಃ ದುಖಃಗಳನ್ನು ಹಂಚಿಕೊಳ್ಳಬಹುದು. ತಮ್ಮಾ ಆದ್ರೆ ಇದೆಲ್ಲಾ ಆಗೋದಿಲ್ಲಾ ಅಲ್ವಾ ಎಂದು ‌ಕೇಳುತ್ತಾಳೆ.

ಅದಕ್ಕೆ ಮಗಳು ಅಷ್ಟೇ ದೃಢವಾಗಿ ಮತ್ತೊಮ್ಮೆ ಇಲ್ಲಮ್ಮಾ ನನಗೆ ತಂಗಿ ಬೇಡ ತಮ್ಮಾನೇ‌ ಇರಲಿ ಎಂದಾಗ,‌ ಕುತೂಹಲದಿಂದ ಹೋಗಲಿ ಬಿಡು ತಮ್ಮಾನೇ ಬರಲಿ. ಅದು ಸರಿ ಎಂತಹ ತಮ್ಮ ಬರಬೇಕು ಎಂದಾಗ.

ಅಮ್ಮಾ ನನಗೆ ರಾವಣನಂತಹ‌ ಗುಣವುಳ್ಳ ತಮ್ಮಾ ಬೇಕು ಎಂದಾಗ,‌ ಒಂದು‌ ಕ್ಷಣ ಮಗಳ ಉತ್ತರದಿಂದ ಅವಕ್ಕಾದ ತಾಯಿ, ದಡಕ್ಕನೆ ಹಾಸಿಗೆಯಿಂದ ಮೇಲೆದ್ದು ಪುಟ್ಟಿ ಅದು ರಾಕ್ಷಸ ಗುಣದ ರಾವಣನ ಹಾಗೆ ಅಲ್ಲಮ್ಮಾ, ರಾಮನ ಗುಣವುಳ್ಳ ತಮ್ಮ ಬೇಕು ಎಂದು‌ ಕೇಳು ಎಂದು ಸರಿಪಡಿಸಲು ಹೊರಟಾಗ, ಇಲ್ಲಮ್ಮಾ ಒಮ್ಮೆ ಯೋಚಿಸಿ ನೋಡು, ತಂಗಿ ಶೂರ್ಪನಖಿಯ ಕಿವಿ ಮೂಗು ಕತ್ತರಿಸಿದವರಿಗೆ ತಕ್ಕ ಶಾಸ್ತಿ‌ ಕಲಿಸಲು, ತಂಗಿಯ ಕೋಪ ಶಮನಗಳಿಸಲು, ಸೀತೆಯನ್ನು ಅಪಹರಿಸಿ ಕೊಂಡು ಬರುವಾಗ ಸೀತೆಯ ರೂಪ ಲಾವಣ್ಯಗಳಿಗೆ ಮಾರು ಹೋಗಿ ಅವಳನ್ನು ವರಿಸಲು‌ ಇಚ್ಚಿಸಿ, ಅವಳನ್ನು ಅಶೋಕವನದಲ್ಲಿ‌ ಇರಿಸಿ, ತನ್ನ ದಾಸಿಯರ ಮೂಲಕ ರಾವಣನನ್ನು ವರಿಸುವಂತೆ ಸೀತೆಯ ಮನಸ್ಸನ್ನು ಬದಲಿಸಲು ಪ್ರಯತ್ನಿಸಿದನಾದರೂ ಒಮ್ಮೆಯೂ ಸೀತೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲಾ, ಬಲಾತ್ಕಾರವನ್ನೇನು ಎಸಗಲಿಲ್ಲಾ.

ಅದೇ ರಾಮ, ತನ್ನ ಮಲತಾಯಿಯ ಆಶೆಯದಂತೆ ಹದಿನಾಲ್ಕು ವರ್ಷಗಳ ವನವಾಸ ಮಾಡಲು ಹೊರಟಾಗ, ಸಕಲ ಸುಪ್ಪತ್ತಿಗೆಗಳನ್ನೆಲ್ಲಾ ಬಿಟ್ಟು, ನಾರಿನ ಮಡಿಯುಟ್ಟು, ಪತಿಯ ಸೇವೆಯೇ ಪರಮಾತ್ಮನ ಸೇವೆ ಎಂದು ಭಾವಿಸಿ ಕಾಡು ಮೇಡುಗಳಲ್ಲಿ ಅಲೆಯುತ್ತಾ,‌ ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ, ರಾವಣನ ಮೋಸದ ಬಲೆಯಿಂದಾಗಿ ಅಪಹರಿಸಲ್ಪಟ್ಟ, ಪತಿಯನ್ನು ‌ಬಿಟ್ಟು ಬೇರಾವ ಗಂಡಸನ್ನೂ ತಲೆ ಎತ್ತಿ ನೋಡದಂತಹ ಪತಿವ್ರತಾ ಶಿರೋಮಣಿ ಸೀತಾಮಾತೆಯ ಶೀಲದ ಮೇಲೆ ಅನುಮಾನ ಪಟ್ಟು, ಅಗ್ನಿ ಪರೀಕ್ಷೆ ನಡೆಸಿ ನಂತರ ಯಾರೋ ಪ್ರಜೆ ಮತ್ತೆ ಸೀತೆಯ ಮೇಲೆ ಅನುಮಾನ ವ್ಯಕ್ತಪಡಿಸಿದರೆಂದು ತುಂಬು ಗರ್ಭಿಣಿ ಎಂದೂ ಲೆಕ್ಕಿಸದೆ ಕಾಡಿಗೆ ಅಟ್ಟಿದ.

ಈಗ ಹೇಳಮ್ಮಾ ರಾಮನು ಹೆಚ್ಚೋ, ರಾವಣ ಹೆಚ್ಚೋ‌? ಎಂದಾಗ‌ ತಾಯಿಗೆ ಏನನ್ನೂ ಹೇಳಲಾಗದೇ ತನ್ನ ಮಗಳನ್ನು ಅಪ್ಪಿ‌‌ ಮುದ್ದಾಡಿ ತನಗಿರಿವಿಲ್ಲದೇ ಕಣ್ಣಂಚಿನಲ್ಲಿ ಜಾರಿದ ಕಣ್ಣೀರನ್ನು ಒರೆಸಿ ಕೊಳ್ಳುತ್ತಾ, ಮಗಳನ್ನು ತಟ್ಟಿ‌ ತಟ್ಟಿ ಮಲಗಿಸುತ್ತಾ, ತಾನೂ ನಿದ್ರೆಗೆ ಜಾರುತ್ತಾಳೆ.

ಯಾಕೋ‌ ಏನೋ, ದೇಶಾದ್ಯಂತ ಏನನ್ನೂ ಅರಿಯದ ಪುಟ್ಟ ಪುಟ್ಟ ಮುಗ್ಧ ಹೆಣ್ಣು ಕಂದಮ್ಮಗಳ ಮೇಲೆ ಅತ್ಯಾಚಾರ ನಡೆಸಿ‌ ಕೊಲೆ ನಡೆಸುತ್ತಿರುವ ವಿಷಯಗಳನ್ನು ಕೇಳುತ್ತಿರುವಾಗ, ಈ‌ ಮೇಲಿನ ಕಥೆ ನನ್ನ ಮನಸ್ಸನ್ನು ಬಹಳವಾಗಿ ಕಾಡಿತು.

ಧರ್ಮದ ಸೋಗಿನಲ್ಲಿ, ಮರ್ಯಾದೆಗೆ ಅಂಜಿ ರಾಮನಂತೆ ಸುಮ್ಮನಿರದೆ, ರಾಕ್ಷಸನಾದರೂ ತಂಗಿ‌ಯ ಇಚ್ಛೆಯನ್ನೂ ಮತ್ತು ಸೀತೆಯ ಪಾತಿವ್ರತ್ಯವನ್ನೂ ಕಾಪಾಡಿದ ರಾವಣನಂತಾಗುವುದೇ ಸರಿಯಲ್ಲವೇ

ಅತ್ಯಾಚಾರಿಗಳಿಗೆ ಧರ್ಮದ ಹಂಗಿಲ್ಲಾ, ಅಂತಹವರನ್ನು ಈ ಕೂಡಲೇ ಗಲ್ಲಿಗೆ ಏರಿಸಿರಲ್ಲಾ.

ಏನಂತೀರೀ?

ಭಾಗ-2

ರಾಕ್ಷಸೀ ಗುಣವುಳ್ಳ‌ ರಾವಣ ಸೀತಾಮಾತೆಯನ್ನು ಅಪಹರಿಸಿದ ಅಂದಾ ಮಾತ್ರಕ್ಕೆ ಆತ ಕೆಟ್ಟವನು ಎನಿಸಬಹುದಾದರೂ, ಆತ ಸ್ವಭಾವತಃ ಮಹಾ ಜ್ಞಾನಿ. ಪರಮ ಶಿವ ಭಕ್ತ, ನಾಲ್ಕೂ ವೇದಗಳನ್ನು ಬಲ್ಲವನಾಗಿದ್ದ. ಅತ್ಯುತ್ತಮ ‌ಸಂಗೀತಗಾರ, ಶಿವನನ್ನು ‌ಒಲಿಸಿಕೊಳ್ಳುವ ಸಲುವಾಗಿ‌ ತನ್ನ‌ ಕರಳುಗಳನ್ನೇ ಹೊರ‌ತೆಗೆದು‌ ರುದ್ರ ವೀಣೆಯನ್ನಾಗಿಸಿ‌‌ ನುಡಿಸಿ‌ ಶಿವನನ್ನು ಒಲಿಸಿಕೊಂಡು‌ ಪರಶಿವನ ಆತ್ಮಲಿಂಗವನ್ನೇ ಪಡೆದಂತಹವನು.

ರಾಮ‌‌ ಮತ್ತು ಲಕ್ಷ್ಮಣರು ಯುಧ್ದಕ್ಕೆ ಶತ್ರು ವಿನಾಶಕಾರೀ ಪೂಜೆಮಾಡಿಸಲು‌‌ ಲಂಕೆಯಲ್ಲಿ ಪುರೋಹಿತರು ‌ಯಾರೂ‌ ಸಿಗದಿದ್ದಾಗ, ಸ್ವತಃ ರಾವಣನೇ ಬಂದು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ‌ ರಾಮ‌ ಲಕ್ಷ್ಮಣರಿಗೆ ಕಂಕಣ ಕಟ್ಟಿ ವಿಜಯೀಭವ ಎಂದು ಹರಸಿ ತನ್ನ ಬ್ರಾಹ್ಮಣ್ಯತ್ವವನ್ನೇ ಮೆರೆದವನು. ಮಾರನೇಯ ದಿನ ಯುದ್ದದಲ್ಲಿ ಎದುರಿಸ ಬೇಕಾಗಿದ್ದ ಶತ್ರುವಿಗೇ ವಿಜಯೀಭವ ಎಂದು ಆಶೀರ್ವಾದ ಮಾಡಿದ್ದಕ್ಕೆ ಆಶ್ಚರ್ಯ ಚಕಿತನಾದ ಲಕ್ಷಣನನ್ನು ನೋಡಿದ ರಾವಣ. ಈಗ ಗುರುವಾಗಿ ನನ್ನ ಶಿಷ್ಯಂದಿರಾದ ನಿಮಗೆ ಆಶೀರ್ವದಿಸಿದ್ದೇನೆ. ನನ್ನ ಶಕ್ತಿ ಸಾಮರ್ಥ್ಯದ ಬಗ್ಗೆ ನನಗೆ ಅರಿವಿವಿದೆ. ನಾಳಿನ ಯುದ್ಧದಲ್ಲಿ ನಿಮ್ಮನ್ನು ಸೋಲಿಸುವ ಭರವಸೆಯಂತೂ ನನಗಿದೆ ಎಂದು ತಿಳಿಸಿದ್ದ ರಾವಣ, ಕೇವಲ ತಂಗಿಗಾದ ಅವಮಾನಕ್ಕೆ ಪ್ರತೀಕಾರ ತೀರಿಸಲು ಮಾತ್ರವೇ ಸೀತಾಮಾತೆಯನ್ನು ಅಪಹರಿಸಿದ ಕಪ್ಪು ಚುಕ್ಕೆಯ ಹೊರತಾಗಿ ಆತನ ಮೇಲೆ ಬೇರಾವ ಗಹನವಾದ ಆರೋಪಗಳು ಕಾಣಸಿಗುವುದಿಲ್ಲ.

ಆದರೆ ಅದೇ, ರಾಮ ಯುಧ್ಧದಲ್ಲಿ ರಾವಣನ್ನು‌ ಸೋಲಿಸಿ ಸೀತೆಯನ್ನು ಅಯೋಧ್ಯೆಗೆ ಕರೆದುಕೊಂಡು ಹೋಗುವ ಮುನ್ನ ಸೀತಾಮಾತೆಯನ್ನು ಯಾರಾದರೂ ಪರಪುರುಷ ಮುಟ್ಟಿದರೆ ಸುಟ್ಟು ಭಸ್ಮವಾಗುತ್ತಾನೆ ಎಂಬ ಅಂಶ ಗೊತ್ತಿದ್ದರೂ, ಸೀತಾ‌ಮಾತೆಯ ಪಾತಿವ್ರತ್ಯವನ್ನು ಮತ್ತೊಮ್ಮೆ ಪರೀಕ್ಷಿಸುವ ಸಲುವಾಗಿ ಆಕೆಯನ್ನು ಅಗ್ನಿಪರೀಕ್ಷೆಗೆ ಒಡ್ಡಿದ್ದು ಸುಳ್ಳಲ್ಲ. ನಂತರ ಕೆಲವು ವರ್ಷಗಳು‌ ಸುಖಃ ಸಂಸಾರ ನಡೆಸಿದ ಫಲವಾಗಿ ಸೀತಾ ಮಾತೆಯು ಗರ್ಭಿಣಿಯಾಗಿದ್ದಾಗ, ಅರಮನೆಯ ಅಗಸರ ದಾಂಪತ್ಯದಲ್ಲಿ ಬಿರುಕಿನ ಸಮಸ್ಯೆ ‌ಪರಿಹರಿಸುತ್ತಿದ್ದಾಗ, ಅಚಾನಕ್ಕಾಗಿ ಅಗಸ ಬಾಯಿ ತಪ್ಪಿ‌ ಆಡಿದ‌ ಮಾತು‌ ಕಂಡವರ‌ ಮನೆಯಲ್ಲಿದ್ದ ಹೆಂಡತಿಯನ್ನು ಮರಳಿ‌ ಸ್ವೀಕರಿಸಲು ನಾನೇನೂ ಪ್ರಭು ಶ್ರೀರಾಮನಲ್ಲಾ ಎಂಬ ಮಾತಿನ ಕಟ್ಟು ಪಾಡಿಗೆ ಬಿದ್ದು, ನಾನು ಮತ್ತೊಮ್ಮೆ ಅರಣ್ಯಕ್ಕೆ ಹೋಗಿ ವಾಲ್ಮೀಕಿಗಳ ಆಶ್ರಮ ವಾಸಿಗಳನ್ನು ಭೇಟಿಯಾಗ ಬೇಕು ಮತ್ತು ಅಲ್ಲಿಯ ಪಶು ಪಕ್ಷಿಗಳನ್ನು ನೋಡಬೇಕೆಂಬುದು ಬಸುರಿಯ ಬಯಕೆ ಎಂದು, ಎಂದೋ ಹೇಳಿದ್ದನ್ನು ನೆನಪಿಸಿಕೊಂಡು, ಸೀತೆಗೆ ಏನನ್ನೂ ತಿಳಿಸದೆ, ಆಕೆಯನ್ನು ಮಾತನಾಡಿಸಲೂ ಇಚ್ಚಿಸದೇ, ನಟ್ಟ ನಡು ರಾತ್ರಿಯಲ್ಲಿ ಲಕ್ಷ್ಮಣನ ಮೂಲಕ ಕಾಡಿನಲ್ಲಿ ಬಿಟ್ಟದ್ದೂ‌ ಸುಳ್ಳಲ್ಲ.

ಒಟ್ಡಿನಲ್ಲಿ ನನ್ನ ಬರಹದ ಹಿಂದೆ ರಾಮನನ್ನು ‌ತೆಗಳಿ‌ ರಾವಣನನ್ನು ‌ವೈಭವೀಕರಿಸುವ ಉದ್ದೇಶವಿರದೆ. ರಾಕ್ಷಸೀ‌ ಗುಣವುಳ್ಳ ರಾವಣನಂತಹ ಮನುಷ್ಯನೇ ಸೀತಾಮಾತೆಯ ಇಚ್ಛೆಗೆ ವಿರುದ್ಧವಾಗಿ ಬಲಾತ್ಕಾರ ಮಾಡದಿದ್ದಾಗ,ರಾಮನಂತಹ ಮರ್ಯಾದೆಗೆ ಆಂಜುವ ನರ ಮನುಷ್ಯರು‌ ಮುಗ್ಧ ಹಸು ಕಂದಮ್ಮಗಳ ಮತ್ತು ‌ಅತ್ಯಾಚಾರ ಮಾಡುತ್ತಿರುವುದು ಎಷ್ಟು‌ ಸರಿ?

ಅಂತಹ ಅತ್ಯಾಚಾರಿಗಳನ್ನು ಧರ್ಮದ ‌ಹೆಸರಿನಲ್ಲಿ ರಕ್ಷಿಸುತ್ತಿರುವುದು ಎಷ್ಟು ಸರಿ?

ಇಂತಹ ಕೆಲವು ಅತ್ಯಾಚಾರಿಗಳಿಗೆ ಯಾವುದೇ ವಿಚಾರಣೆಯಿಲ್ಲದೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಯನ್ನು ‌ನೀಡಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸದ‌ ಹೊರತಾಗಿ ಇಂತಹ‌ ಪಿಡುಗನ್ನು ತಪ್ಪಿಸಲಾಗದು ಎನ್ನುವ ಭಾವನೆಯಿಂದ ಬರೆದದ್ದಷ್ಟೆ.

ಅತ್ಯಾಚಾರಿಗಳಿಗೆ ಧರ್ಮವಿಲ್ಲಾ. ಅಂತಹವರನ್ನು ಈ ಕೂಡಲೇ ಗಲ್ಲಿಗೆ ಏರಿಸಿರಲ್ಲಾ

ಏನಂತೀರೀ?

ಭಾಗ-3

ನಾವೆಲ್ಲಾ ಓದಿದಂತೆ‌ ಇಲ್ಲವೇ ನಮ್ಮ ಹಿರಿಯರಿಂದ ಕೇಳಿ ತಿಳಿದಿರುವುದು ರಾಮ‌ ಒಳ್ಳೆಯವನು‌ ಮತ್ತು ರಾವಣ ಕೆಟ್ಟವನು ಏಂದೇ. ಹಾಗಾಗಿ ಪ್ರತೀ ಬಾರಿಯೂ ರಾವಣ ‌ಮಾಡಿದ ಎಲ್ಲ ಕೆಲಸಗಳನ್ನೂ ದ್ವೇಷಿಸ‌ಲೇ ಬೇಕು ಮತ್ತು ರಾಮ ಏನನ್ನೇ ಮಾಡಿದರು ಸಹಿಸಿಕೊಳ್ಳಬೇಕು. ರಾಮ ಪ್ರಶ್ನಾತೀತ ಎಂದೇ ನಮ್ಮ ಹಿರಿಯರು ನಮ್ಮ ಮನಃ ಪಠದಲ್ಲಿ ಅಚ್ಚೊತ್ತಿರುವ ಹಾಗಿದೆ.

ಆದರೆ ಪ್ರತಿಯೊಬ್ಬರಲ್ಲೂ ಒಳ್ಳೆಯ ‌ಹಾಗೂ‌‌ ಕೆಟ್ಟ ಗುಣಗಳಿದ್ದು ಅದು ಅಯಾಯಾ ಸಂದರ್ಭಕ್ಕನುಗುಣವಾಗಿ ‌ಪ್ರಕಟಿತಗೊಳ್ಳುತ್ತವೆ. ಒಳ್ಳೆಯ ಕೆಲಸ‌‌‌ ಮಾಡಿದಾಗ ಅವರನ್ನು ಪ್ರೋತ್ಸಾಹಿಸಿ, ಕೆಟ್ಟ‌ ಕೆಲಸಗಳನ್ನು ಮಾಡಿದಾಗ ದಾಕ್ಷಿಣ್ಯವಿಲ್ಲದೆ ಖಂಡಿಸೋಣ.

ನಾನು ವಿವರಿಸಿದ ಎರಡೂ ಸಂದರ್ಭಗಳಲ್ಲಿ ಶಕ್ತಿಶಾಲಿ ರಾಮ, ವಿವೇಕವಂತ ರಾಮ, ಪತ್ನಿಯನ್ನು ಅತ್ಯಂತ ಗೌರವಾದರದಿಂದ ಕಾಣುತ್ತಿದ್ದ ರಾಮ, ಸುಗ್ರೀವನ ಪರವಾಗಿ ವಾಲಿಯ ವಿರುದ್ಧ ರಾಮನಿಗೆ ಯಾವುದೇ ದ್ವೇಷವಿರದಿದ್ದರೂ ಆತನನ್ನು ಕುತಂತ್ರದಿಂದ ಕೊಂದದ್ದು ಅದೇ ರೀತಿ ಲವ ಕುಶರೊಂದಿಗೆ ಹೋರಾಟ ಮಾಡುವಾಗಲೂ ರಾಮನ ದ್ವಂದ್ವ ನೀತಿ ತಳೆದಿದ್ದು, ರಾಮ ಎಲ್ಲರಿಗೂ ಒಳ್ಳೆಯನಾಗುವ ಉಮೇದಿನಲ್ಲಿ ಸತ್ಯದ ಪರವಾಗಿರದೇ ಅನುಕೂಲ ಸಿಂಧುವಾಗಿದದ್ದು ಸ್ಪಷ್ಟವಾಗಿ ಗೋಚರಿಸುತ್ತದೆ.

ಉಳಿದ‌ ಎಲ್ಲಾ ಸಂದರ್ಭಗಳಲ್ಲಿ ‌ರಾವಣ ಎಂತೆಂತಹಾ ತಪ್ಪಗಳನ್ನು ‌ಮಾಡಿದ್ದರೂ ರಾಮನ ಗೆಲುವಿಗೆ ಪೌರೋಹಿತ್ಯವಹಿಸಿ ವಿಜಯದ‌ ಕಂಕಣ ಕಟ್ಟಿದ್ದಂತೂ ಸುಳ್ಳಲ್ಲ. (ಈ ಕೆಳಕಂಡ ವಿಡೀಯೋ ನೋಡಿ)

ನಾನು ರಾಮನ ಮತ್ತೊಂದು ‌ಮುಖವನ್ನು ಪರಿಚಯಿಸಿದ ಮಾತ್ರಕ್ಕೆ, ನನ್ನನ್ನು ಹಿಂದೂ ವಿರೋಧಿ, ಕಮ್ಯುನಿಸ್ಟ್ ಅಥವಾ ಅನ್ಯಮತದ ಪರವಾಗಿ ಹಿಂದೂ‌ ಧರ್ಮವನ್ನು ಅವಹೇಳನ ಮಾಡುವ ವ್ಯಕ್ತಿ ಎಂದು ಪೂರ್ವಾಗ್ರಹ ಪೀಡಿತರಾಗದೇ ಸೂಕ್ಷ್ಮವಾಗಿ ಒಮ್ಮೆ ಬಿಚ್ಚು ಮನಸ್ಸಿನಿಂದ, ಓದಿದರೆ ನನ್ನ ಲೇಖನದ ಒಳ ಅರಿವಾಗುತ್ತದೆ. ಇಲ್ಲಿ ರಾಮನ ‌ಅವೇಳನ‌ ರಾವಣನ ಗುಣಗಾನ ಮಾಡುತ್ತಿದ್ದೇನೆ ಎಂದು ನೋಡದೆ ಆ ಸಾಂಧರ್ಭಿಕ ಸತ್ಯವನ್ನು ಪರಾಮರ್ಶಿಸಿ‌‌ ನೋಡೋಣ.

ಪ್ರಸ್ತುತವಾಗಿ ರಾವಣನಂತಹ‌ ರಾಕ್ಷಸೀ ಪ್ರವೃತ್ತಿಯ ‌ವ್ಯಕ್ತಿಗಳು ನಾನಾ ಕಾರಣಗಳಿಂದಾಗಿ ಮೃಗೀಯ ವರ್ತನೆಯಿಂದ ಹೆಣ್ಣು ಮಕ್ಕಳನ್ನು ಅಪಹರಿಸಿಯೋ ಇಲ್ಲವೇ ಹೊಂಚಿ ಹಾಕಿ ಅವರುಗಳ ಮೇಲೆ ಅನಾಗರೀಕವಾಗಿ ಅತ್ಯಾಚಾರಮಾಡಿ ಕಡೆಗೆ ಸಿಕ್ಕಿ ಹಾಕಿಕೊಳ್ಳುವ ಭಯದಿಂದಾಗಿ ಸಾಕ್ಷಾಧಾರ ನಾಶಕ್ಕಾಗಿ ಅವರನ್ನು ಸುಟ್ಟುಹಾಕುವ ಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಸಂತ್ರಸ್ತರ ಪರವಾಗಿ ಇದ್ದೇವೆಂದು ಮೇಲಿಂದ ಮೇಲೆ ಮೂಂಬತ್ತಿಗಳನ್ನು ಉರಿಸುತ್ತಾ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಾ , ಅತ್ಯಾಚಾರಿಗಳಿಗೆ ಶಿಕ್ಷೆಯಾದಾಗ ಇದೇ ಬುಧ್ದಿ ಜೀವಿಗಳು ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಸೋಗಿನಲ್ಲಿ ಅಪರಾಧಿಯ ಪರವಾಗಿ ನಿಲ್ಲುವ ಇಬ್ಬಂಧಿತನಕ್ಕೆ ಕೊನೆ ಹಾಡಲೇ ಬೇಕಾಗಿದೆ. ಅತ್ಯಾಚಾರಿಗಳ ವಿಚಾರಣೆಯನ್ನು ಅನಗತ್ಯವಾಗಿ ಹತ್ತಾರು ವರ್ಷಗಳಷ್ಟು ಎಳೆಯದೇ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ನ್ಯಾಯಾಲಯಗಳೂ ಶೀಘ್ರಾತಿಶೀಘ್ರವಾಗಿ ಇತ್ಯರ್ಥಗೊಳಿಸಿ ನಿಜವಾದ ಅಪರಾಧಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡುವ ಮೂಲಕ ಮುಂದೆಂದೂ ಯಾರೂ ಇಂತಹ ಕುಕೃತ್ಯವನ್ನು ಎಸಗುವ ಮೊದಲು ನೂರು ಬಾರಿ ಯೋಚಿಸುವಂತಾದಲ್ಲಿ ಮಾತವೇ ನಮ್ಮ ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ ಎನ್ನುವ ಶ್ಲೋಕಕ್ಕೆ ನಿಜವಾದ ಅರ್ಥ ಬರುತ್ತದೆ. ರಾತ್ರಿ ಹನ್ನೆರಡು ಘಂಟೆಯಲ್ಲಿಯೂ ನಿರ್ಜನ ಬೀದಿಯಲ್ಲಿ ಹೆಣ್ಣುಮಕ್ಕಳು ಓಡಾಡುವ ಹಾಗೆ ಆದಾಗಲೇ ನಿಜವಾದ ಸ್ವಾತಂತ್ರ್ಯ ದೊರೆಯುವುದು ಎಂಬುದಾಗಿ ಹೇಳಿದ್ದ ಮಹಾತ್ಮ ಗಾಂಧಿಯವರ ಕನಸು ಸಾಕಾರಗೊಳ್ಳುತ್ತದೆ.

ಅದು ಬಿಟ್ಟು ಸುಮ್ಮನೆ ಧರ್ಮದ ಸೋಗಿನಲ್ಲಿಯೋ ಇಲ್ಲವೇ ಯಾವುದೇ ಒತ್ತಡಗಳಿಂದಾಗಿಯೋ ಶ್ರೀರಾಮನಂತೆ ಮರ್ಯಾದೆಗೆ ಅಂಜಿ ರಾವಣನಂತಹ ಖೂಳರನ್ನು ಶಿಕ್ಷಿಸದೇ ಹೋದಲ್ಲಿ ನಾವೆಲ್ಲರೂ ರಾಮನ ಅನುರೂಪ‌, ರಾಮನೇ ನಮ್ಮ‌ ಆದರ್ಶ ಎಂದು‌ ಹೇಳುವ ನಾವುಗಳು ಏನೂ ಅರಿಯದ ನೂರಾರು ಮುಗ್ಧ ಕಂದಮ್ಮಗಳು ಮತ್ತು ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ‌ ವ್ಯಕ್ತಿಗಳನ್ನು ರಾಜಾರೋಷವಾಗಿ ತಮ್ಮ ಕುಕೃತ್ಯಗಳನ್ನು ಮುಂದುವರಿಸುತ್ತಲೇ ಹೋಗುತ್ತಾರೆ. ನಿಧಾನಗತಿಯ ಕಾನೂನಿನ ಮೇಲೆ ಜನರಿಗೂ ಬೇಸರಮೂಡಿ ಜನರೇ ಕಾನೂನನ್ನು ಕೈಗೆತ್ತಿಕೊಳ್ಳುವ ಮುಂಚೆ ಸರ್ಕಾರ ಮತ್ತು ನ್ಯಾಯಾಂಗ ಎಚ್ಚೆತ್ತಿಕೊಳ್ಳಲಿ ಮತ್ತು ರಾಮ ಮತ್ತು ರಾವಣ ಎಂಬ ಪೂರ್ವಾಗ್ರಹ ಪೀಡಿತರಾಗದೇ, ರಾಮನಾಗಲೀ, ರಾವಣನಾಗಲೀ ತಪ್ಪು ಮಾಡಿದ್ದರೆ ಅವರಿಗೆ ಅತೀ ಶೀಘ್ರದಲ್ಲಿ ಕಠಿಣವಾದ ಸಜೆ ಸಿಗುವಂತಾಗಲಿ ಎಂದಷ್ಟೇ ನನ್ನ ಈ ಬರಹದ ಸದುದ್ದೇಶ.

ಸತ್ಯ ಸದಾ ಕಹಿ. ಆ ಕಹಿಯನ್ನು ಮೀರಿ ಸವಿಯುವ ಪ್ರಯತ್ನ ಮಾಡಿದರೆ ಖಂಡಿತ‌ ಸಿಹಿ.

ಅತ್ಯಾಚಾರಿಗಳಿಗೆ ಧರ್ಮವಿಲ್ಲಾ. ಅಂತಹವರನ್ನು ಈ ಕೂಡಲೇ ಗಲ್ಲಿಗೆ ಏರಿಸಿರಲ್ಲಾ

ನಾನು ಮಂಡಿಸಿದ ಈ ವಿಚಾರಗಳಿಗೆ ಸದಾ ಬದ್ದ. ಆರೋಗ್ಯಕರ ಚರ್ಚೆಗೆ ಸದಾ ಸಿದ್ಧ.

ಏನಂತೀರಿ?

One thought on “ರಾಮ ಹೆಚ್ಚೋ, ರಾವಣ ಹೆಚ್ಚೋ‌

  1. ಕಣ್ಣೆದುರು ಆಗುವ ಅಧರ್ಮಿಗಳನ್ನು ತೊಡೆದುಹಾಕಲು ರಾಮ ಕೃಷ್ಣ ರ ಉದಾಹರಣೆ ಬೇಕಿಲ್ಲ…. ಆತ್ಮಸಾಕ್ಷಿ ಇದ್ದರೆ ಸಾಕು….ಆಯಾ ಪಾತ್ರಗಳ ನ್ಯಾಯ ಅನ್ಯಾಯ ಇತಿಹಾಸ ಕ್ಕೆ ಸೇರಿದ್ದು…. ನಾಗರಿಕ,, ಸುಧಾರಿತ ಎಂದುಕೊಳ್ಳುವವರು ಓಟಿನಾಸೆಗಾಗಿ ಪಿಶಾಚಿಗಳನ್ನು ಸಾಕುವುದು ದೇಶದ್ರೋಹ,,,ಆತ್ಮದ್ರೋಹ,,ಮಾನವತೆಗೆ ದ್ರೋಹ ಮತ್ತು ಭವಿಷ್ಯಕ್ಕೆ ಮಾಡುವ ದ್ರೋಹ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s