ಅಕ್ಕ-ತಂಗಿ, ಅಣ್ಣ-ತಮ್ಮ, ಭಾವ-ಭಾವಮೈದ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ, ಅತ್ತೆ-ಮಾವ, ನಾದನಿ-ಷಡ್ಕ, ಇಂದು ನಮಗೆಲ್ಲಾ ಈ ಪದಗಳು ಚಿರಪರಿಚಿತ. ನಮ್ಮ ಸಂಬಂಧಿಕರನ್ನು ಈ ಪದಗಳ ಮೂಲಕವೇ ಸಂಭೋದಿಸುವುದು ವಾಡಿಕೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಪದಗಳಿಗೆ ಬೆಲೆಯೇ ಇಲ್ಲದೆ ಹೋಗಿ ಕೇವಲ ನಿಘಂಟಿನಲ್ಲಿ ಹುದುಗಿ ಹೋಗುತ್ತದೆ ಎಂದರೆ ನಂಬಲು ಸಾಧ್ಯವೇ? ಖಂಡಿತವಾಗಿಯೂ ನಂಬಲೇ ಬೇಕಾಗಿದೆ.
ಹಿಂದೆಲ್ಲಾ ಮತ್ತೊವ್ಬರಿಗೆ ನಮ್ಮ ಸಂಬಂಧೀಕರನ್ನು ಪರಿಚಯಿಸಿಕೊಡುವಾಗ ಅವರವರ ಸಂಬಂಧಕ್ಕೆ ಅನುಗುಣವಾಗಿ ಇವರು ನಮ್ಮ ಸೋದರ ಮಾವ ಎಂದಾಗ, ತಾಯಿಯ ತಮ್ಮನೋ ಇಲ್ಲವೇ ಅಣ್ಣನೋ ಇರಬಹುದು ಎಂದು ತಿಳಿಯುತ್ತಿತ್ತು. ಅದೇ ರೀತಿ, ಸೋದರತ್ತೇ ಎಂದರೆ ತಂದೆಯ ಅಕ್ಕನೋ ಇಲ್ಲವೇ ತಂಗಿ ಎಂದು ತಿಳಿಯುತ್ತಿತ್ತು. , ತಾಯಿಯ ತಂಗಿ ಇಲ್ಲವೇ ತಂದೆಯ ತಮ್ಮನ ಹೆಂಡತಿ ಚಿಕ್ಕಮ್ಮ. ತಂದೆಯ ತಮ್ಮ ಇಲ್ಲವೇ ತಾಯಿಯ ತಂಗೀ ಗಂಡ ಚಿಕ್ಕಪ್ಪ, ಅದೇ ರೀತಿಯಲ್ಲಿ ದೊಡ್ಡಮ್ಮ, ದೊಡ್ಡಪ್ಪ, ಇನ್ನು ಅಕ್ಕ, ಭಾವ, ಭಾವಮೈದುನ ಎಂದು ಬಹಳ ಪ್ರೀತಿಯಿಂದ ಪರಿಚಯಿಸಿದರೆ ಸಂಬಂಧ ಸುಲಭವಾಗಿ ಅರ್ಥವಾಗುತ್ತಿತ್ತು. ಅದರೆ ಇಂದು ಅಂಧ ಪಾಶ್ಚಾತ್ಯೀಕರಣದ ಪ್ರಭಾವದಿಂದಾಗಿ ಈ ಎಲ್ಲಾ ಸಂಬಂಧಗಳನ್ನೂ ಸುಲಭವಾಗಿ ಅಂಕಲ್ ಮತ್ತು ಆಂಟಿ ಎಂಬ ಎರಡು ಪದಗಳಿಂದ ಮಾರ್ಪಾಟು ಮಾಡಿರುವುದು ಬಹಳ ಬೇಸರದ ಸಂಗತಿಯಾಗಿದ್ದು, ಆ ಎರಡು ಪದಗಳಿಂದ ನಿಜವಾದ ಸಂಬಂಧವೇ ತಿಳಿಯದಂತಾಗಿದೆ.
ಕೆಲ ವರ್ಷಗಳ ಹಿಂದೆ ಈ-ಟಿವಿಯಲ್ಲಿ ಸುಷ್ಮಾ ರಾವ್ ನಿರೂಪಣೆಯಲ್ಲಿ ಜೀನ್ಸ್ ಎಂಬ ಸುಂದರವಾದ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅದರಲ್ಲಿ ಇಡೀ ಕುಟಂಬವೊಂದನ್ನು ಕರೆಸಿ ಅವರ ಮನೆಯ ಹಿರಿಯ ಸದಸ್ಯರೊಬ್ಬರಿಗೆ ಎಲ್ಲರನ್ನೂ ಪರಿಚಯಿಸಿ, ಕಿರೀ ಸದಸ್ಯರಿಗೆ ಅವರ ಸಂಬಂಧ ವಿವರಿಸಿ ಎಂದಾಗ ಸಂಬಂಧ ತಿಳಿಯದೇ ಬೆಬ್ಬೆಬ್ಬೇ ಎಂದು ಇವರು ಕಜಿನ್ ಎನ್ನುವುದನ್ನು ನೋಡಿದಾಗ ಅಯ್ಯೋ ಮನೆತನದ ಸಂಬಂಧವೇ ಅರಿತಿಲ್ಲವಲ್ಲಾ, ಎಂದು ಮನಸ್ಸಿಗೆ ನಿಜವಾಗಿಯೂ ಬೇಸರವಾಗುತ್ತದೆ.
ಒಂದು ಕಾಲದಲ್ಲಿ ಮಕ್ಕಳಿರಲವ್ವಾ ಮನೆ ತುಂಬಾ ಎನ್ನುತ್ತಿದ್ದರು. ಮದುವೆಯಲ್ಲಿ ನವ ದಂಪತಿಗಳಿಗೆ ಹರಸುವಾಗ ವರುಷದೊಳಗೇ ಮುದ್ದಾದ ಹಸುಕಂದನು ಮಡಲಲಿ ನಗುತಿರಲಿ ಎನ್ನುತ್ತಿದ್ದರು. ಸ್ವಾತಂತ್ರ್ಯಾನಂತರ ದೇಶದ ಜನಸಂಖ್ಯಾಸ್ಪೋಟದ ನೆಪದಲ್ಲಿ ಆರತಿಗೊಬ್ಭಳು ಮಗಳು, ಕೀರ್ತಿಗೊಬ್ಬ ಮಗ ಎನ್ನುವುದು ಧ್ಯೇಯ ವಾಕ್ಯವಾಯಿತು. ಕಳೆದ ಒಂದು ದಶಕಗಳಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೆಣ್ಣಾಗಲೀ, ಗಂಡಾಗಲೀ ಮಕ್ಕಳೊಂದೇ ಇರಲಿ ಎನ್ನುವಂತಾಯಿತು. ಇತ್ತೀಚೆಗೆ ಸುಖಃಸಂಸಾರ ನಡೆಸಲು ಗಂಡ ಹೆಂಡತಿ ಇದ್ದರೆ ಸಾಕು ಮಕ್ಕಳೇಕೆ ಬೇಕು? ಎನ್ನುವ ಮನೋಸ್ಥಿತಿಗೆ ಬಂದಿರುವುದು ದುರ್ವಿಧಿಯಾಗಿದೆ.
ಕೆಲವು ವರ್ಷಗಳ ನಂತರ ಸಂಸಾರದಲ್ಲಿ ಮಕ್ಕಳೇ ಇಲ್ಲದಿದ್ದಲ್ಲಿ ಅಥವಾ ಕೇವಲ ಒಂದೇ ಮಗುವಾದಲ್ಲಿ ಆ ಮಗುವಿಗೆ, ತಂದೆ ತಾಯಿ, ಅಜ್ಜ ಅಜ್ಜಿ, ತಾತ ಅಜ್ಜಿಯ ಹೊರತಾಗಿ ಮತ್ತಾವ ಸಂಬಂಧಿಕರು ಇಲ್ಲವೇ ಇಲ್ಲದಂತಾಗುವುದಿಲ್ಲವೆ? ಆ ಮಗು ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಯಾವುದೇ ರಕ್ತ ಸಂಬಂಧಿಯೂ ಇಲ್ಲದಂತಾಗುವುದಿಲ್ಲವೇ? ಆ ಮಗುವಿಗೆ ಅನಾಥ ಪ್ರಜ್ಞೆ ಕಾಡುವುದಿಲ್ಲವೇ? ಕೇವಲ ಊಹಿಸಿಕೊಳ್ಳುವುದಕ್ಕೇ ಇಷ್ಟೊಂದು ಭಯಾನಕವಾಗಿರುವಾಗ ಇದು ನಿಜವೇ ಆಗಿ ಹೋದಲ್ಲಿ ದೇಶ, ಧರ್ಮ, ಸಂಸ್ಕೃತಿಗಳಿಗೆ ಏನಾಗಬಹುದು? ಕೆಲವೇ ವರ್ಷಗಳಲ್ಲಿ ನಮ್ಮ ಧರ್ಮ ಸಂಸ್ಕೃತಿಯೂ ನಶಿಸಿ ಕೇವಲ ಅಂತರ್ಜಾಲದಲ್ಲಿ ಹುಡುಕುವ ವಿಷಯವಾಗಬಹುದು.
ಇಂತಹ ಗಹನವಾದ ವಿಷಯ ಮಂಡಿಸುತ್ತಿರುವುದರಿಂದ ನಾನು ಕುಟುಂಬ ಯೋಜನೆ ವಿರೋಧಿ, ಯಾವುದೋ ಧರ್ಮದ ವಿರೋಧಿ, ದೇಶದ ಆರ್ಥಿಕ ಪರಿಸ್ಥಿತಿ ಅರಿಯದವ ಎಂದು ಹಣೆಪಟ್ಟಿ ಕಟ್ಟದೆ ಸ್ವಲ್ಪ ತಾಳ್ಮೆವಹಿಸಿ ಯೋಚಿಸಿ ನೋಡಿ. ಹೆಣ್ಣಾಗಲಿ, ಗಂಡಾಗಲಿ ಮಕ್ಕಳೆಡಿರಲಿ. ಹಾಗದಾಗಲೇ ಮಕ್ಕಳ ನಡುವೆ ಸಹೋದರ ಸಹೋದರಿಯರ ಮಧುರ ಬಾಂಧವ್ಯ ಬೆಸೆಯುವುದಲ್ಲದೇ ಒಬ್ಬರಿಗೊಬ್ಬರು ಹಂಚಿಕೊಂಡು ಸಹಬಾಳ್ವೆ ನಡೆಸಿಕೊಂಡು ಹೋಗುವ ಸಹನಶೀಲತೆ ಬೆಳೆಯುತ್ತದೆ.
ಇಂದು ಇಡೀ ವಿಶ್ವದ ಎಲ್ಲಾ ದೇಶಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಯುವಕ-ಯುವತಿಯರನ್ನು ಹೊಂದಿದ ದೇಶ ಯಾವುದೆಂದರೆ ಅದು ನಮ್ಮ ಬಾರತ ದೇಶವೇ ಆಗಿದೆ. ಇಂತಹ ತರುಣ ಶಕ್ತಿಯೇ ನಮ್ಮ ದೇಶದ ಸಂಪತ್ತಾಗಿರುವ ಕಾರಣ ಎಲ್ಲಾ ದೇಶಗಳು ನಮ್ಮ ದೇಶದೊಡನೆ ವಿವಿಧ ರೂಪದ ವ್ಯಾವಹಾರಿಕ ಸಂಬಂಧಗಳನ್ನು ಹೆಚ್ಚಿಸಿಕೊಳ್ಳುತ್ತಿವೆ. ಬಹುತೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಮ್ಮ ಜನರಿಗೆ ಕೆಳ ಮಟ್ಟದಿಂದ ಹಿಡಿದು ಉನ್ನತ ಮಟ್ಟದವರೆಗಿನ ಉದ್ಯೋಗಗಳು ಲಭಿಸುವಂತಾಗಿದೆ. ಆದರೆ ಕೇವಲ ಒಂದೇ ಮಗು ಅಥವಾ ಮಕ್ಕಳೇ ಬೇಡ ಎಂದು ನಿರ್ಧರಿಸಿದಲ್ಲಿ, ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ದೇಶವೂ ಇತರೇ ದೇಶಗಳಂತೆ ಮುದುಕರ ನಾಡಾಗುವ ಸಂಭವವೇ ಹೆಚ್ಚಾಗಿದೆ ಮತ್ತು ಪ್ರತಿಯೊಂದು ಕೆಲಸಕ್ಕೂ ವಿದೇಶಿಯರನ್ನೇ ಆಶ್ರಯಿಸ ಬೇಕಾಗುತ್ತದೆ.
ಹಿಂದೆ ದುಡಿಯುವ ಕೈ ಒಂದಾದರೆ ತಿನ್ನುವ ಕೈ ಹತ್ತಾರು ಇರುತ್ತಿತ್ತು. ಇಂದು ಕಾಲ ಬದಲಾಗಿದೆ ಮನೆಯವರೆಲ್ಲರೂ ದುಡಿಯುತ್ತಿದ್ದರೂ, ತಿನ್ನುವ ಕೈಗಳೇ ಇಲ್ಲದಂತಾಗಿದೆ.
ಅಂದು ಎಲ್ಲರ ಮನೆಗಳು ಚಿಕ್ಕದಿದ್ದವು, ಮನಸ್ಸುಗಳು ವಿಶಾಲವಾಗಿದ್ದವು. ಇಂದು ಎಲ್ಲರ ಮನೆಗಳು ವಿಶಾಲವಾಗಿವೆ ಆದರೆ ಮನಸ್ಸುಗಳು ಮಾತ್ರ ಸಂಕುಚಿತಗೊಂಡಿರುವುದು ವಿಪರ್ಯಾಸವೇ ಸರಿ.
ಇನ್ನು ಸಂಬಂಧ ಎಂದರೆ ಕೇವಲ ರಕ್ತ ಸಂಬಂಧವೇ ಅಲ್ಲದೇ ನೆರೆಹೊರೆಯ ಸಂಬಂಧವೂ ಕ್ಷೀಣಿಸುತ್ತಿದೆ. ಹಿಂದೆ ಎರಡು ಮೂರು ಮೈಲಿಗೆ ಒಂದು ಮನೆಗಳು ಇದ್ದರೂ ಸುತ್ತಾ ಮುತ್ತಲಿನ ಹತ್ತಾರು ಹಳ್ಳಿಗಳ ಬಹುತೇಕರು ಚಿರಪರಿಚಿತರಾಗಿರುತ್ತಿದ್ದರು. ಇಂದು ಒಂದೇ ಅಪಾರ್ಟ್ಮೆಂಟ್ ನಲ್ಲಿ ನೂರಾರು ಮನೆಗಳು ಒಂದಕ್ಕೊಂದು ಗೋಡೆಗಳನ್ನು ಹಂಚಿಕೊಂಡಿದ್ದರೂ, ಒಬ್ಬರಿಗೊಬ್ಬರು ಸಂಬಂಧವೇ ಇಲ್ಲದ ಹಾಗೆ ಅಕ್ಕ ಪಕ್ಕದ ಮನೆಯವರ ಪರಿಚಯ ಇಲ್ಲವಾಗಿರುವುದು ಖೇದಕರವೇ ಸರಿ.
ರಕ್ತ ಸಂಬಂಧ ಮತ್ತು, ನರೆಹೊರೆ ಸಂಬಂಧದ ಹೊರತಾಗಿಯೂ ವೃತ್ತಿಪರ ಸಂಬಂಧಗಳನ್ನೂ ಇಟ್ಟುಕೊಂಡಿರಲೇ ಬೇಕಾಗುತ್ತದೆ. ಉದಾಹರಣೆಗೆ, ಕಿರಾಣಿ ಅಂಗಡಿ, ಹಾಲಿನ ಅಂಗಡಿ, ಹೇರ್ ಕಟಿಂಗ್ ಶಾಪ್, ಕಾಫೀ ಪುಡಿ ಶಾಪ್, ತರಕಾರಿ ಅಂಗಡಿ ಇತ್ಯಾದಿ, ಇತ್ಯಾದಿ.. ಈ ಎಲ್ಲರೂಡನೆಯೂ ಕೇವಲ ಹಣಕಾಸಿನ ಸಂಬಂಧದ ಹೊರತಾಗಿಯೂ ಒಂದು ರೀತಿಯ ಅವಿನಾಭಾವ ಸಂಬಂಧ ಬೆರೆತಿರುವ ಕಾರಣ, ಅಕಸ್ಮಾತ್ ಆ ಅಂಗಡಿಯವರು ಬಾಗಿಲು ತೆಗೆಯದೇ ಇದ್ದರೂ ಅವರಿಗಾಗಿಯೇ ಒಂದೆರಡು ದಿನ ಕಾಯುವ ಮನಸ್ಥಿತಿ ಬೆಳೆಸಿಕೊಂಡಿರುತ್ತೇವೆ. ಅದೇ ರೀತಿಯಲ್ಲಿ ಅವರೂ ಸಹಾ ನಮ್ಮ ಬಳಿ ಹಣ ಕಡಿಮೆ ಇದ್ದಲ್ಲಿ, ಆದಾಗ ಕೊಡೀ ಎಂದು ಉದ್ರಿ ಕೊಡುವಷ್ಟು ನಮ್ಮ ಮೇಲಿನ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿರುತ್ತಾರೆ. ಇಂದೆಲ್ಲಾ Mall & Online Shopping_ಗಳು ಬಂದು, ಈ ಎಲ್ಲಾ ಸಂಬಂಧಗಳೂ ಮಾಯವಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಇಂದು ಭಾರತ ಬಡ ರಾಷ್ಟವಲ್ಲ. ಅಪಾರ ಸಂಪತ್ಭರಿತ ರಾಷ್ಟ್ರವಾಗಿದೆ. ಇಂತಹ ಸಂಪತ್ತನ್ನು ನಮ್ಮ ಮಕ್ಕಳಿಗೆ ಉಳಿಸಿಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದರೆ ನಮ್ಮ ದೇಶದಲ್ಲಿ ಮಕ್ಕಳ ಸಂಖ್ಯೆಯೇ ಕ್ಷೀಣವಾಗಿ ಹೋಗಿ ಸಂಬಂಧಗಳಿಗೆ ಬೆಲೆಯೇ ಇಲ್ಲವಾಗಿ ಹೋದಾಗ ಮಾಡಿರುವ ಈ ಅಪಾರವಾದ ಸಂಪತ್ತನ್ನು ಉಳಿಸುವುದಾದರೂ ಯಾರಿಗೇ? ಇಂತಹ ಸೂಕ್ಷ್ಮ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದೇನೆ. ಯೋಚಿಸಿ ಇದನ್ನು ಕಾರ್ಯರೂಪಕ್ಕೆ ತರುವುದು ನಮ್ಮ ನಿಮ್ಮ ಜವಾಬ್ದಾರಿಯೇ ಆಗಿದೆ.
ಏನಂತೀರಿ?