ಜನವರಿ 12 ಸ್ವಾಮಿ ವಿವೇಕಾನಂದರ ಜಯಂತಿ. 1893, ಸೆಪ್ಟಂಬರ್ 11ಕ್ಕೆ ಅಮೇರಿಕಾದ ಚಿಕಾಗೋದಲ್ಲಿ ಅವರು ಮಾಡಿದ ದಿಕ್ಸೂಚಿ ಭಾಷಣ. ಈ ಎರಡೂ ಸಂಧರ್ಭಗಳನ್ನು ನೆನಪಿಸಿಕೊಳ್ಳುವ ಸಲುವಾಗಿಯೇ ಸ್ವಾಮಿ ವಿವೇಕಾನಂದರ ದಿಗ್ವಿಜಯ ಎಂಬೀ ಲೇಖನ.
ಕ್ರಿ.ಶ. 1893 ಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ. 1492 ಕ್ಕೆ ಭಾರತಕ್ಕೆ ಬರಲು ಹವಣಿಸಿ ಹಡಗನ್ನೇರಿ ಹೊರಟಿದ್ದ ನಾವಿಕ ಕ್ರಿಸ್ಟೋಫರ್ ಕೋಲಂಬಸ್ ನೌಕೆ ದಿಕ್ಕು ತಪ್ಪಿ ಅಮೇರಿಕಾಕ್ಕೆ ತಲುಪಿ ಅಲ್ಲಿನ ಜನರನ್ನೇ ಅವನು ಭಾರತೀಯರೆಂದು ತಿಳಿದು ಆವರನ್ನೇ ರೆಡ್ ಇಂಡಿಯನ್ಸ್ ಎಂದು ಕರೆದ್ದದ್ದು ಇತಿಹಾಸವಾಗಿ ನಂತರ ಅಲ್ಲಿನ ಮೂಲನಿವಾಸಿಗಳನ್ನೆಲ್ಲಾ ನಾಶಪಡಿಸಿದ ಬ್ರಿಟಿಷರು ಅಮೇರಿಕಾ ಸಂಸ್ಥಾನವನ್ನು ಕಟ್ಟಿ ಬೆಳೆಸಿ, ಕೈಗಾರಿಕಾ ಕ್ರಾಂತಿಯಿಂದಾಗಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ರಾಷ್ಟ್ರವಾಗಿ ಬೆಳೆದು ತಮ್ಮ ಉತ್ಪನ್ನಗಳಿಗೆ ಹೊಸ ಹೊಸ ಮಾರುಕಟ್ಟೆಗಳನ್ನು ಹುಡುಕಲು ಹವಣಿಸುತ್ತಿದ್ದ ಸಂಧರ್ಭದಲ್ಲಿ John Benny ಎಂಬ ಅಮೇರಿಕಾದ ಪ್ರಖ್ಯಾತ ಲೇಖಕನ ಸಲಹೆಯ ಮೇರೆಗೆ World Trade Congress ಎಂಬ ಕಾರ್ಯಕ್ರಮವನ್ನು 1893 ಮೇ ತಿಂಗಳಿನಿಂದ ಡಿಸೆಂಬರ್ ವರೆಗೂ ನಡೆಸಲು ತೀರ್ಮಾನಿಸಲಾಯಿತು. ಈ ಸಮ್ಮೇಳನದ ಹಿಂದೆ ಅಮೇರಿಕಾದ 400 ವರ್ಷಗಳ ಸಂಭ್ರಮಾಚರಣೆಯ ಜೊತೆಗೆ ಒಂದಷ್ಟು ವ್ಯಾಪಾರದ ಮಾರುಕಟ್ಟೆಯನ್ನು ವೃಧ್ಧಿಸಿಕೊಳ್ಳುವ ಉದ್ದೇಶವಿತ್ತು. ಅದಕ್ಕಾಗಿ ಪ್ರಪಂಚಾದ್ಯಂತ ಎಲ್ಲಾ ದೇಶಗಳ ಸಾವಿರಾರು ಪ್ರತಿನಿಧಿಗಳು ಭಾಗವಹಿಸುತ್ತಿದ್ದರು. ಇಂತಹ ಸಂಧರ್ಭವನ್ನು ತಮ್ಮ ಮತ ಪ್ರಚಾರಕ್ಕಾಗಿ ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕೆಂದು ಹವಣಿಸಿದ ಕೆಲ ಕ್ರೈಸ್ತ ಪಾದ್ರಿಗಳ ಫಲವೇ ಸೆಪ್ಟೆಂಬರ್ 11-27ರ ವರೆಗಿನ ವಿಶ್ವ ಧರ್ಮ ಸಮ್ಮೇಳನದ ಆಯೋಜನಕ್ಕೆ ನಾಂದಿಯಾಯಿತು.
ಆರಂಭದಲ್ಲಿ ಈ ವಿಶ್ವಧರ್ಮ ಸಮ್ಮೇಳನಕ್ಕೆ ಸಾಕಷ್ಟು ಪರ ವಿರೋಧಗಳ ಚರ್ಚೆಗಳಾದವು. ವಿಶ್ವದಲ್ಲಿ ಧರ್ಮವೆಂದು ಯಾವುದಾದರೂ ಇದ್ದಲ್ಲಿ ಅದು ಕೇವಲ ಕ್ರೈಸ್ತ ಧರ್ಮವೊಂದೇ. ಮಿಕ್ಕೆಲ್ಲಾ ಧರ್ಮಗಳು ಕೇವಲ ಪೊಳ್ಳು ಧರ್ಮಗಳು ಅಂತಹ ಪೊಳ್ಳುಗಳ ನಡುವೆ ನಮ್ಮನ್ನು ಹೋಲಿಸಿಕೊಳ್ಳುವುದು ಸರಿಯಲ್ಲಾ ಎಂದು ವಾದಿಸಿದರೆ ಮತ್ತೆ ಕೆಲವರು, ಪರಮ ಸಹಿಷ್ಣುವಾದ ಕ್ರೈಸ್ತ ಮತದಿಂದ ಮಾತ್ರವೇ ಎಲ್ಲರೂ ಸದ್ಗತಿ ಕಾಣಲು ಸಾಧ್ಯ. ಹಾಗಾಗಿ ಉಳಿದ ಎಲ್ಲಾ ಮತಗಳಿಗೂ ತಮ್ಮ ಕ್ರೈಸ್ತ ಮತದ ಹಿರಿಮೆ ಗರಿಮೆಯನ್ನು ಎತ್ತಿ ತೋರಿಸಿ ಅವರನ್ನೆಲ್ಲಾ ಕ್ರೈಸ್ತ ಮತಕ್ಕೆ ಪರಿವರ್ತಿಸಿ ಅವರನ್ನೆಲ್ಲಾ ಪಾಪ ಮುಕ್ತರನ್ನಾಗಿಸುವ ಹೊಣೆಗಾರಿಕೆ ನಮ್ಮ ಮೇಲಿರುವುದರಿಂದ ಇಂತಹ ವಿಶ್ವಧರ್ಮ ಸಮ್ಮೇಳನ ಅತ್ಯಗತ್ಯ ಎಂದು ವಾದಿಸಿ ಸಮ್ಮೇಳನದ ಆಯೋಜನೆ ಮಾಡಿದ್ದರು.
ಇತ್ತ ಭಾರತದ ಕಲ್ಕತ್ತಾದಲ್ಲಿ ಹುಟ್ಟಿ ಬೆಳೆದ ನರೇಂದ್ರ ಎಂಬ ಯುವಕ ದೇವರನ್ನು ಕಾಣುವ ಹಂಬಲದಿಂದ ನಾನಾ ರೀತಿ ಪರಿಶ್ರಮ ಪಟ್ಟು ಕೊನೆಗೆ ಶ್ರೀ ರಾಮಕೃಷ್ಣ ಪರಮಹಂಸರಂತಹ ಗುರುಗಳ ಆಶ್ರಯಲ್ಲಿ ಸನ್ಯಾಸತ್ವದ ದೀಕ್ಷೆ ಪಡೆದು ಸ್ವಾಮೀ ವಿವೇಕಾನಂದ ಎಂಬ ಹೆಸರಿನಲ್ಲಿ ದೇಶವನ್ನು ಮತ್ತು ಧರ್ಮವನ್ನು ಅರಿಯಲು ಪರಿವ್ರಾಜಕರಾಗಿ ದೇಶಾದ್ಯಂತ ಪರ್ಯಟನೆ ಮಾಡುತ್ತಿರುವ ಸಂಧರ್ಭದಲ್ಲಿ ಅವರಿಗೆ ಖೇತ್ರಿ ಮಹಾರಾಜನ ಪರಿಚಯವಾಗುತ್ತದೆ. ಹೇಳಿ ಕೇಳಿ ಅಂದು ಬ್ರಿಟಿಶರು ದೇಶವನ್ನು ಆಳುತ್ತಿರುತ್ತಾರೆ. ನಮ್ಮ ಬಹುತೇಕ ರಾಜಮಹಾರಾಜರ ಬ್ರಿಟಿಷರ ಸಾಮಂತರಾಗಿ ಅವರ ಪ್ರಭಾವಕ್ಕೆ ಒಳಗಾಗಿರುಂತೆ ಖೇತ್ರಿ ರಾಜನೂ ಬ್ರಿಟಿಷರಂತೇ ನಮ್ಮ ಹಿಂದೂಗಳ ಮೂರ್ತಿ ಪೂಜೆಯ ಬಗ್ಗೆ ತುಸು ವಿರೋಧಿ ಧೋರಣೆ ಹೊಂದಿರುವುದು ಸ್ವಾಮೀಜಿಗಳ ಗಮನಕ್ಕೆ ಬಂದಿರುತ್ತದೆ. ಅದೊಂದು ದಿನ ರಾಜನ ಆಸ್ಥಾನದ ಸಭೆಯಲ್ಲಿ ಸ್ವಾಮೀಜಿಗಳು ಖೇತ್ರಿ ರಾಜನ ಮಂತ್ರಿಗೆ ರಾಜನ ಭಾವಚಿತ್ರವನ್ನು ತೋರಿಸಿ ಅದಕ್ಕೆ ಉಗಿಯಲು ಸೂಚಿಸುತ್ತಾರೆ. ಸ್ವಾಮೀಜಿಗಳ ಈ ಮಾತನ್ನು ಕೇಳಿ ಬೆಚ್ಚಿದ ಮಂತ್ರಿ , ರಾಜನ ಭಾವಚಿತ್ರಕ್ಕೆ ಉಗುಳಲು ಹಿಂಜರಿಯುವುದನ್ನು ಕಂಡ ಸ್ವಾಮೀಜಿ, ಅರೇ, ರಾಜ ನಮ್ಮ ಮುಂದಿದ್ದಾನೆ. ನೀನು ಉಗುಳುತ್ತಿರುವುದು ಕೇವಲ ಕಾಗದಕ್ಕೆ ಹಾಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಉಗಳಬಹುದು ಎಂದು ಸೂಚಿಸುತ್ತಾರೆ. ಅದಕ್ಕೆ ಮಂತ್ರಿಗಳು ರಾಜಾ ಪ್ರತ್ಯಕ್ಷ ದೇವತಾ ಎನ್ನುವಂತೆ ನಾವು ಈ ಭಾವಚಿತ್ರದಲ್ಲೂ ರಾಜನನ್ನೇ ಕಾಣುವುದರಿಂದ ಅದಕ್ಕೆ ಅಷ್ಟೇ ಗೌರವ ಕೊಡುವುದರಿಂದ ಆ ಭಾವಚಿತ್ರಕ್ಕೆ ನನ್ನಿಂದ ಉಗುಳಲು ಸಾಧ್ಯವಿಲ್ಲ ದಯವಿಟ್ಟು ಮನ್ನಿಸಿ ಎಂದಾಗ, ಸ್ವಾಮೀಜಿಗಳು ಹಸನ್ಮುಖರಾಗಿ ರಾಜನತ್ತ ತಿರುಗಿ, ರಾಜಾ, ಇದೇ ಭಕ್ತಿ ಭಾವವನ್ನೇ ನಮ್ಮ ಹಿಂದೂಗಳು ದೇವಸ್ಥಾನದಲ್ಲಿರುವ ದೇವರ ಮೂರ್ತಿಯಲ್ಲಿ ಕಾಣುತ್ತಾರೆ. ಒಮ್ಮೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಸ್ಥಾಪಿಸಿದ ಕಲ್ಲಿನ ಮೂರ್ತಿ ಅದು ಕೇವಲ ಕಲ್ಲಾಗಿರದೆ ಭಗವಂತನ ಸ್ವರೂಪವಾಗಿ ಹೋಗುವುದರಿಂದ ಜನರು ಭಕ್ತಿಭಾವದಿಂದ ಪೂಜಿಸುತ್ತಾರೆ ಎಂದಾಗ ಆ ಖೇತ್ರಿ ಮಹಾರಾಜನಿಗೆ ಸ್ವಾಮೀಜಿಗಳ ಮೇಲಿನ ಭಕ್ತಿ ಹೆಚ್ಚಾಗಿ ಇಂತಹ ಪರಮ ಜ್ಞಾನಿಗಳೇ ಚಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ನಮ್ಮ ಹಿಂದೂ ಧರ್ಮವನ್ನು ಪ್ರತಿಪಾಸಲು ಸೂಕ್ತವ್ಯಕ್ತಿ ಎಂದು ನಿರ್ಧರಿಸಿ ಆವರನ್ನು ವಿಶ್ವಧರ್ಮ ಸಮ್ಮೇಳನಕ್ಕೆ ಕಳಿಹಿಸುವುದಕ್ಕೆ ಎಲ್ಲಾ ಏರ್ಪಾಟುಗಳನ್ನು ಮಾಡಲು ಅನುವಾಗುತ್ತಾನೆ. ಆದರೆ ಈದಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ವಾಮಿಗಳು ತಮ್ಮ ದೇಶ ಪರ್ಯಟನೆಯನ್ನು ಮುಂದುವರೆಸಿ ತಮ್ಮ ಅಯಸ್ಕಾಂತೀಯ ಆಕರ್ಷಣಾ ಶಕ್ತಿಯಿಂದ ಅಪಾರ ರಾಜ ಮಹಾರಾಜರುಗಳನ್ನು ಶಿಷ್ಯವೃಂದವನ್ನೂ ಸಂಪಾದಿಸುತ್ತಾರೆ. ಅವರಿಂದ ಪ್ರಭಾವಿತರಾದ ರಾಜಮಹಾರಾಜರುಗಳಲ್ಲಿ ನಮ್ಮ ಮೈಸೂರು ಒಡೆಯರು ಕೂಡ ಒಬ್ಬರು. ಅವರೂ ಕೂಡ ಸ್ವಾಮೀಜಿಗಳ ಬುದ್ದಿಮತ್ತೆಯನ್ನು ಕಂಡು ಪ್ರಭಾವಿತರಾಗಿ ಅವರನ್ನು ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಬಲವಂತ ಪಡಿಸಿ ಅದರ ಖರ್ಚುವೆಚ್ಚಗಳನ್ನು ಭರಿಸು ಮುಂದಾಗುತ್ತಾರೆ. ಅಂತೆಯೇ ಸ್ವಾಮಿಗಳು ತಮ್ಮ ಪ್ರವಾಸವನ್ನು ಮುಂದುವರಿಸಿ ಕನ್ಯಾಕುಮಾರಿಯನ್ನು ತಲುಪಿ ಅಲ್ಲಿ ಸಮುದ್ರವನ್ನು ಈಜಿ ತುತ್ತ ತುದಿಯ ಬಂಡೆಯ ಮೇಲೆ ಕುಳಿತು ತಪಸ್ಸನ್ನು ಮಾಡಿ ಜ್ನಾನೋದಯ ಪಡೆದು ಮುಂದೆ ಮದ್ರಾಸ್ ನಗರಕ್ಕೆ ಪ್ರಯಾಣಿಸಿ ಅಲ್ಲಿನ ಅನೇಕ ಶಿಷ್ಯಂದಿರ ಒತ್ತಾಯಕ್ಕೆ ಮಣಿದು ಅಮೇರಿಕಾದ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ಒಪ್ಪಿ ಹಡಗನ್ನೇರಿ ಸುಮಾರು ಎರಡು ತಿಂಗಳಿನ ಸುಧೀರ್ಘ ಪ್ರಯಾಣದ ನಂತರ ಅಮೇರಿಕಾ ತಲುಪುತ್ತಾರೆ.
ವಿಶ್ವ ಧರ್ಮ ಸಮ್ಮೇಳನಕ್ಕೆ ಮೂರ್ನಾಲ್ಕು ತಿಂಗಳ ಮುಂಚೆಯೇ, ಅಪರಿಚಿತ ನಾಡಾದ ಅಮೇರಿಕದಲ್ಲಿ ಕಾಲಿಡುವ ಹೊತ್ತಿಗೇ, ಹಡಗಿನ ಪ್ರಯಾಣದ ಮಧ್ಯದಲ್ಲಿಯೇ ತಮ್ಮ ದಾಖಲೆಗಳನ್ನು ಕಳೆದುಕೊಂಡ ಸ್ವಾಮೀಜಿಗಳು ದುಬಾರಿ ಪ್ರದೇಶವಾದ ಚಿಕಾಗೋದಲ್ಲಿ ಇದ್ದ ಅಲ್ಪ ಸ್ವಲ್ಖ ಹಣವೂ ಖರ್ಚಾಗಿ ಹೋಗಿ ಮುಂದೇನೂ ಮಾಡುವುದು ಎಂದು ಯೋಚಿಸುತ್ತಿರುವಾಗ ಯಾರದ್ದೋ ಸಲಹೆಯ ಮೇರೆಗೆ ಅಂದಿಗೆ ಸಾಮಾನ್ಯ ನಗರವಾಗಿದ್ದ ಬೋಸ್ಟನ್ ನಗರಕ್ಕೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಸ್ವಾಮೀಜಿಗಳ ತೇಜಸ್ಸಿಗೆ ಮಾರು ಹೋದ ಸಹ ಪ್ರಯಾಣಿಕಳೊಬ್ಬಳು ಸ್ವಾಮೀಜಿಗಳ ಜೊತೆ ಮಾತಿಗಿಳಿಯುತ್ತಾ, ಅವರ ಅಸಹನೀಯ ದಯಾನೀಯ ಪರಿಸ್ಥಿಗೆ ಮರುಕಗೊಂಡು ಅವಳ ಮನೆಯಲ್ಲಿಯೇ ಆಶ್ರಯ ನೀಡುತ್ತಾಳೆ. ತತ್ವಶಾಸ್ತ್ರದ ಪಂಡಿತೆಯಾಗಿದ್ದ ಆಕೆ ಮೊದಲೆರಡು ಮೂರು ದಿನಗಳಲ್ಲಿಯೇ ಸ್ವಾಮೀಜೀಗಳ ಪಾಂಡಿತ್ಯಕ್ಕೆ ಮಾರು ಹೋಗಿ ಆಕೆ ಅವರ ಪಾಂಡಿತ್ಯವನ್ನು ತನ್ನೆಲ್ಲಾ ಸ್ನೇಹಿತರಿಗೆ ಪರಿಚಯಿಸಲು ಪ್ರತೀ ದಿನ ಸಂಜೆ ತನ್ನ ಮನೆಯಲ್ಲಿ ಚಹಾ ಕೂಟವನ್ನೇರಿಪಡಿಸಿ ಅಲ್ಲಿ ಸ್ವಾಮೀಜಿಗಳ ಒಂದೆರಡು ಘಂಟೆಗಳ ಪ್ರವಚನ ನಡೆಯುತ್ತದೆ. ತನ್ನ ಪರಿಚಯಸ್ಧರ ಬಳಿ ಸ್ವಾಮೀಜಿಯವರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿರುವುದಾಗಿಯೂ, ಆದರೆ ಅದಕ್ಕೆ ಸಂಬಂಧ ಪಟ್ಟ ದಾಖಲೆಗಳನ್ನು ಕಳೆದುಕೊಂಡ ಕಾರಣ ಅವರಿಗೆ ತಮ್ಮ ಶಿಫಾರಸ್ಸು ಪತ್ರ ನೀಡಲು ಕೇಳಿಕೊಂಡಾಗ, ಅವರು ಸ್ವಾಮೀಜಿಯನ್ನು ಭೇಟಿ ಮಾಡಿ, ಅವರ ಪಾಂಡಿತ್ಯಕ್ಕೆ ಬೆರಗಾಗಿ ಇವರಿಗೆ ಶಿಫಾರಸ್ಸು ಪತ್ರ ನೀಡುವುದೆಂದರೆ ಪ್ರಖರ ಸೂರ್ಯನ ಬೆಳಕಿಗೆ ಪ್ರಮಾಣ ಪತ್ರ ನೀಡಿದಂತೆ ಎಂದು ಉಧ್ಘರಿಸಿ, ಸಮ್ಮೇಳನದ ಆಯೋಜಕರಿಗೆ ಬರೆದ ಪತ್ರದಲ್ಲಿ ಇಡೀ ಅಮೇರಿಕಾದಲ್ಲಿರುವ ಎಲ್ಲಾ ಧರ್ಮಗುರುಗಳ ಪ್ರಾವೀಣ್ಯತೆಯನ್ನೂ ಮತ್ತು ಈ ಸ್ವಾಮಿಗಳ ಪ್ರಾವೀಣ್ಯತೆಯನ್ನು ತಕ್ಕಡಿಗೆ ಹಾಕಿದಲ್ಲಿ ನಿಶ್ಚಿತವಾಗಿಯೂ ಈ ಸ್ವಾಮಿಗಳದ್ದೇ ಹೆಚ್ಚಿನ ತೂಕವಿರುವ ಕಾರಣ ಇಂತಹವರಿಗೆ ಖಂಡಿತವಾಗಿಯೂ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ನೀಡದಿದ್ದಲ್ಲಿ ನಮಗೇ ನಷ್ಟ ಎಂದು ಕೇವಲ ಎರಡು ಮೂರು ದಿನಗಳು ಅವರೂಡನೆ ವ್ಯವಹರಿಸಿದ ಪಾಶ್ಚಿಮಾತ್ಯ ವಿದ್ವಾಂಸರೊಬ್ಬರು ಬರೆದು ಕೊಡುತ್ತಾರೆಂದರೆ ಹೇಗಿರಬಹುದು ನಮ್ಮ ಸ್ವಾಮೀಜಿಯವರ ಪ್ರಾವೀಣ್ಯತೆ.
ನಂತರದ ದಿನಗಳಲ್ಲಿ ಈ ಪತ್ರವನ್ನೂ ಕಳೆದುಕೊಂಡ ಸ್ವಾಮಿಗಳು ಮತ್ತೊಬ್ಬರ ಸಹಾಯದ ಮೂಲಕ ಹಾಗೂ ಹೀಗೂ ಮಾಡಿಕೊಂಡು ಸೆಪ್ಟೆಂಬರ್ 11ರ ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಪ್ರತಿಪಾದಕರಾಗಿ ವೇದಿಕೆಯನ್ನೇರುತ್ತಾರೆ. ಆಗಷ್ಟೇ ಸುಮಾರು ಮೂವತ್ತು ವರ್ಷ ಪ್ರಾಯದ ತರುಣ ಸ್ವಾಮೀ ವಿವೇಕಾನಂದರು ಸಮ್ಮೇಳನದಲ್ಲಿ ನೆರೆದಿದ್ದ ಭಾರೀ ಜನಸ್ತೋಮವನ್ನು ನೋಡಿ ನಿಬ್ಬೆರಗಾಗಿದ್ದಂತೂ ಸುಳ್ಳಲ್ಲ. ಅದಕ್ಕಿಂತ ಮುಂಚೆ ಅವರೆಂದೂ ಅಷ್ಟೋಂದು ಜನರೆದರು ಮಾತನಾಡಿಯೇ ಇರಲಿಲ್ಲ. ಅವರ ಪ್ರವಚನಗಳೇನಿದ್ದರೂ ಐವತ್ತು ಅರವತ್ತು ಜನರ ನಡುವೆಯೇ ನಡೆಯುತ್ತಿತ್ತಾದ್ದರಿಂದ ಮೊದಲ ಕೆಲವು ಗಂಟೆಗಳು ಭಾಷಣ ಮಾಡಲು ಹಿಂಜರಿದು, ಆಯೋಜಕರು ಪ್ರತೀ ಬಾರಿ ಮುಂದಿನ ಭಾಷಣ ನಿಮ್ಮದೇ ಎಂದಾಗಲೂ ಈಗ ಬೇಡ ನಂತರ ಮಾತನಾಡುತ್ತೇನೆ ಎಂದು ಮುಂದೂಡುತ್ತಾ, ವಿಧಿ ಇಲ್ಲದೆ ದಿನದ ಕಟ್ಟ ಕಡೆಯ ಭಾಷಣಕಾರರಾಗಿ ಧ್ವನಿವರ್ಧಕದ ಮುಂದೆ ಬಂದು ನಿಲ್ಲುತ್ತಾರೆ. ಇಡೀ ದಿನ ಹಲವಾರು ಧರ್ಮ ಪ್ರಚಾರಕರ ಭಾಷಣಗಳಿಂದ ಆಗಲೇ ಬೇಸರಿಗೊಂಡಿದ ಸಭಿಕರಲ್ಲನೇಕರು ಈ ಸ್ವಾಮಿ ಏನು ಮಾತಾನಾಡುತ್ತಾನೆ ಎಂದು ತಿಳಿದು ತಮ್ಮ ತಮ್ಮ ಜಾಗದಿಂದ ಹೊರನಡೆಯಲು ಸಿಧ್ಧರಾಗುತ್ತಿದ್ದಂತೆಯೇ, ತಮ್ಮ ಗಂಟಲನ್ನು ಸರಿ ಮಾಡಿಕೊಂಡು, ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರನ್ನೂ, ತಾಯಿ ಭಾರತಿಯನ್ನು ಮನದಲ್ಲಿಯೇ ವಂದಿಸಿ, ಅಮೇರಿಕಾದ ನನ್ನ ನೆಚ್ಚಿನ ಸಹೋದರಿ, ಸಹೋದರರೇ ( Sisters & Brothers of America) ಭಾಷಣ ಆರಂಭಿಸುತ್ತಿದ್ದಂತೆಯೇ, ಆ ಒಂದು ವಾಕ್ಯ ಕೇಳಿದೊಡನೆಯೇ ಇಡೀ ಸಮ್ಮೇಳದಲ್ಲಿ ಒಂದು ರೀತಿಯ ವಿದ್ಯುತ್ ಸಂಚಲನಗೊಂಡು ಇಡೀ ಜನಸ್ತೋಮ ತಮಗರಿವಿಲ್ಲದಂತೆಯೇ ಕರತಾಡನ ಮಾಡಲು ಶುರು ಮಾಡಿ ಅದು ಸುಮಾರು ಎರಡು ನಿಮಿಷಕ್ಕೂ ಅಧಿಕಕಾಲ ಇಡೀ ಸಭಾಂಗಣದಲ್ಲಿ ಮಾರ್ಧನಿಸುತ್ತದೆ. ಸಭಾಂಗಣದ ಹೊರಗಿನವರೆಗೂ ಗಡಚಿಕ್ಕುವ ಆ ಚಪ್ಪಾಳೆಯ ಸದ್ದನ್ನು ಕೇಳಿ, ಈಗಾಗಲೇ ಸಭೆಯಿಂದ ಹೊರನಡೆದವರೂ ಸಹಾ ಲಘು ಬಗೆಯಿಂದ ಸಭಾಗಂಣದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಕುತೂಹಲದಿಂದ ಒಳಗೆ ಬಂದರೆ ಇಡೀ ಸಭಾಂಗಣದಲ್ಲಿ ನಿಲ್ಲಲೂ ಸಾಧ್ಯವಾಗದಷ್ಟು ಜನರಿಂದ ಕಿಕ್ಕಿರಿದು ತುಂಬಿಹೋಗುತ್ತದೆ. ಚಪ್ಪಾಳೆ ಸದ್ದೇಲ್ಲ ನಿಂತು ನಿಶ್ಯಬ್ಧವಾದಾಗ ತಮ್ಮ ಭಾಷಣ ಮುಂದುವರಿಸಿದ ಸ್ವಾಮೀಜಿಗಳು ನಿರರ್ಗಳವಾಗಿ ಸನಾತನ ಹಿಂದೂಧರ್ಮ ಮತ್ತು ನಮ್ಮ ಧರ್ಮನಿರಪೇಕ್ಷತೆ, ನಮ್ಮ ಜನರ ಇತಿಹಾಸವನ್ನೆಲ್ಲಾ ಎಳೆ ಎಳೆಯಾಗಿ ಎಲ್ಲರ ಮುಂದೆಯೂ ಬಿಚ್ಚಿಟ್ಟು ತಮ್ಮ ಭಾಷಣ ಮುಗಿಸಿದಾಗ ನೆರೆದಿದ್ದ ಸಭಿಕರಿಗೆಲ್ಲಾ ರೋಮಾಂಚನವಾಗಿದ್ದಂತೂ ಸುಳ್ಳಲ್ಲ.
ಸೆಪ್ಟೆಂಬರ್ 12ರಂದು ಅಮೇರಿಕಾದ ಬಹುತೇಕ ಎಲ್ಲಾ ಪತ್ರಿಕೆಗಳ ಮುಖಪುಟದಲ್ಲೂ ವಿವೇಕಾನಂದರು ಮತ್ತು ಅವರ ದಿಕ್ಸೂಚಿ ಭಾಷಣಕ್ಕೇ ಮೀಸಲಾಗಿಟ್ಟಿದ್ದವು. ಭಾರತ ಎಂದರೆ ಅನಾಗರೀಕ ದೇಶ, ಅದು ಹಾವಾಡಿಗರ, ಕರಡಿ ಮತ್ತು ಕೋತಿ ಕುಣಿಸುವ ದೇಶ. ಅಂತಹ ದೇಶವನ್ನು ಉದ್ಧಾರ ಮಾಡಲು ನಾವಲ್ಲಿಗೆ ಹೋಗಲೇ ಬೇಕು ಎಂದು ಎಲ್ಲರಿಂದಲೂ ಪ್ರತೀ ತಿಂಗಳು ದೇಣಿಗೆ ಸಂಗ್ರಹಿಸುತ್ತಿದ್ದ ಕ್ರೈಸ್ತ ಮಿಷನಿರಿಗಳಿಗೆ ಈ ಭಾಷಣ ಮರ್ಮಾಘಾತವನ್ನುಂಟು ಮಾಡಿದೆ. ಭಾರತದಂತಹ ದೇಶದಿಂದ ಬಂದ ಒಬ್ಬ ಸನ್ಯಾಸಿಗೇ ಇಷ್ಟೋಂದು ಪಾಂಡಿತ್ಯವಿರಬೇಕಾದರೆ ಇಂತಹ ಸಾವಿರಾರು ಪಂಡಿತರನ್ನು ಹೊಂದಿ ಭೌಧ್ಧಿಕವಾಗಿ ಸುಭಿಕ್ಷವಾಗಿರಲೇ ಬೇಕು ಎಂದು ಬರೆದಿದ್ದವು. ಅಂದಿನಿಂದ ಸಮ್ಮೇಳನದಲ್ಲಿ ಪ್ರತಿದಿನ ವಿವೇಕಾನಂದರನ್ನು ನೋಡಲು ಮತ್ತು ಅವರ ಮಾತನ್ನು ಕೇಳಲು ಜನರ ನೂಕು ನುಗ್ಗಲನ್ನು ಮನಗಂಡ ಸಮ್ಮೇಳನದ ಆಯೋಜಕರು ಪ್ರತಿದಿನ ಸಂಜೆ ವಿವೇಕಾನಂದರ ಭಾಷವನ್ನು ಏರ್ಪಾಡು ಮಾಡುತ್ತಾರೆ. ಕೇವಲ ಸ್ವಾಮೀಜೀಗಳ ಮಾತನ್ನು ಕೇಳುವ ಸಲುವಾಗಿಯೇ ಇಡೀ ದಿನ ಇತರರ ಭಾಷಣಗಳನ್ನು ಸಹಿಸಿಕೊಂಡು ದಿನದ ಅಂತ್ಯದಲ್ಲಿ ಸ್ವಾಮೀಜೀಯವರ ಪ್ರೇರಣಾತ್ಮಕ ಭಾಷವನ್ನಾಲಿಸಿ ಕೃತಾರ್ಥರಗುತ್ತಿದ್ದದ್ದು ಅನೇಕ ಕ್ರೈಸ್ತ ಧರ್ಮಗುರುಗಳಿಗೆ ಸ್ವಾಮೀಜಿಗಳ ಮೇಲೆ ಕೋಪವನ್ನು ತರಿಸಿದ್ದಂತೂ ಸುಳ್ಳಲ್ಲ. ಒಟ್ಟಿನಲ್ಲಿ ಯಾವುದೇ ಹೆಚ್ಚಿನ ಅಪೇಕ್ಷೆ ಇಲ್ಲದೇ ಎಲ್ಲರಿಂದಲೂ ತಾತ್ಸಾರಕ್ಕೊಳಗಾಗಿದ್ದ ಸ್ವಾಮೀ ವಿವೇಕಾಂದರು ವಿಶ್ವಧರ್ಮ ಸಮ್ಮೇಳನದ ತಮ್ಮ ಸಾಲು ಸಾಲು ಭಾಷಣಗಳಿಂದ Man of the series ಆಗಿ ಹೋಗುತ್ತಾರೆ ಎನ್ನುವುದಂತೂ ಅಕ್ಷರಶಃ ಸತ್ಯ.
ಈ ದಿಕ್ಸೂಚಿ ಭಾಷಣದ ನಂತರದ ನಾಲ್ಕು ವರ್ಷಗಳು ಸ್ವಾಮೀಜಿಯವರು ಬಿಡುವಿಲ್ಲದಂತೆ ಅಮೇರಿಕಾ ಮತ್ತು ಯೂರೋಪಿನ ನಾನಾ ಪ್ರದೇಶಗಳಿಗೆ ಪ್ರವಾಸ ಮಾಡಿ ತಮ್ಮ ಅನುಯಾಯಿಗಳ ಪಡೆಯನ್ನು ಹೆಚ್ಚಿಸಿಕೊಳ್ಳುತ್ತಾ, ಹಿಂದೂ ಧರ್ಮದ ಬಗ್ಗೆಯೂ ಮತ್ತು ಭಾರತ ಬಗ್ಗೆ ಇದ್ದ ಎಲ್ಲಾ ಅಪನಂಬಿಕೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿರುವಾಗಲೇ, ಸ್ವಾಮಿಗಳ ಮೇಲೆ ಕ್ರೈಸ್ತ ಮಿಷನರಿಗಳು ಇಲ್ಲ ಸಲ್ಲದ ಆರೋಪಗಗಳನ್ನು ಮಾಡುತ್ತಾ ಸ್ವಾಮಿಜಿಯವರ ಮಾನ ಹಾನಿ ಮಾಡಲು ಪ್ರಯತ್ನಿಸಿದರೂ ಅದು ನದಿ ನೀರಿನಲ್ಲಿ ಹುಣಸೇಹಣ್ಣು ತೊಳೆದಂತೆ ಕೊಚ್ಚಿಕೊಂಡು ಹೋಗುತ್ತವೆ.
ಈ ವೇಳೆಗಾಗಲೇ ವಿದೇಶದಲ್ಲಿ ನಮ್ಮ ದೇಶದ ಮತ್ತು ಧರ್ಮದ ಕೀರ್ತಿಪತಾಕೆಯನ್ನೇರಿಸಿದ ಸ್ವಾಮೀಜಿಯವರ ಪ್ರತಾಪ ಭಾರತಾದ್ಯಂತ ಹಳ್ಳಿ ಹಳ್ಳಿಗಳಲ್ಲಿಯೂ ಜನರಿಂದ ಜನರಿಗೆ ಕಾಳ್ಗಿಚ್ಚಿನಂತೆ ಹಬ್ಬಿ ಎಲ್ಲರಿಗೂ ಸ್ವಾಮೀಜೀಯವನ್ನು ಕಾಣುವ ಕುತೂಹಲ ಮೂಡಿರುತ್ತದೆ. ಇನ್ನೂ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ದೇಶ ಭಕ್ತರಿಗಂತೂ ವಿದೇಶದ ನೆಲದ ಮೇಲೆಯೇ ನಿಂತು ಅವರನ್ನೇ ನೇರವಾಗಿ ಪ್ರಶ್ನಿಸುತ್ತಿದ್ದ, ಅವರ ತಪ್ಪುಗಳನ್ನು ಎತ್ತಿತೋರುವ ದಿಟ್ಟ ತನವನ್ನು ತೋರುತ್ತಿದ್ದ ಸ್ವಾಮಿ ವಿವೇಕಾನಂದರು ಸ್ಪೂರ್ತಿದಾಯಕರಾಗುತ್ತಾರೆ. ಸುಭಾಸ್ ಚಂದ್ರ ಬೋಸ್, ಗಾಂಧೀಜೀ, ರವೀಂದ್ರನಾಥ್ ಟಾಗೂರರಂತಹ ಮಹಾನ್ ನಾಯಕರುವಳು ಸ್ವಾಮೀಜಿಯವರಿಂದ ಪ್ರೇರಿತರಾಗಿದ್ದಂತೂ ಸತ್ಯ ಸಂಗತಿ.
ಅಮೇರಿಕಾದಿಂದ ಶ್ರೀಲಂಕಾದ ಮೂಲಕ ಭಾರತಕ್ಕೆ ಮರಳುವಾಗ, ಸ್ವಾಮೀಜಿಯವರನ್ನು ಕಾಣಲು ಅಲ್ಲಿನ ಗಣ್ಯಾತಿ ಗಣ್ಯರೇ ಕಾಯುತ್ತಾ ನಿಂತಿರುವಾಗ, ಹಡಗಿನಿಂದ ಇಳಿದ ಕೂಡಲೇ ಸ್ವಾಮೀಜಿಯವರು ಮರಳನ್ನು ತಮ್ಮ ಮೇಲೆ ಸುರಿದುಕೊಳ್ಳುತ್ತಿದ್ದದ್ದನ್ನು ನೋಡಿ ಎಲ್ಲರೂ ಆಶ್ವರ್ಯಚಕಿತರಾಗುತ್ತಾರೆ. ಸ್ವಲ್ಪ ಸಮಯದನಂತರ ಸಾವರಿಸಿಕೊಂಡು ಕಳೆದ ನಾಲ್ಕೈದು ವರ್ಷಗಳಿಂದ ಭೋಗ ಭೂಮಿಯಲ್ಲಿದ್ದ ನನ್ನ ದೇಹ ಅಪವಿತ್ರಗೊಂಡಿದೆ. ಈಗ ಅದನ್ನು ತ್ಯಾಗಭೂಮಿಯ ಮಣ್ಣಿನಿಂದ ಶುಚಿಗೊಳ್ಳಿಸುತ್ತಿದ್ದೇನೆ ಎಂದಾಗ ಎಲ್ಲರಿಗೂ ಸ್ವಾಮೀಜಿಯವರ ದೇಶಪ್ರೇಮದ ಅರಿವಾಗಿ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಮಂದೆ ನಾಲ್ಕೈದು ವರ್ಷಗಳು ದೇಶಾದ್ಯಂತ ಪರ್ಯಟನ ಮಾಡಿ ಎಲ್ಲರಿಗೂ ಮಾರ್ಗದರ್ಶನ ಮಾಡಿ ತಮ್ಮ ಮೂವತ್ತೊಂಬತ್ತರ ವಯಸ್ಸಿನಲ್ಲಿ ಜುಲೈ 4, 1902 ರಂದು ನಾನಾ ರೀತಿಯ ಖಾಯಿಲೆಗಳಿಂದ ಜರ್ಜರಿತವಾಗಿದ್ದ ದೇಹದಿಂದ ಮುಕ್ತಿಹೊಂದುತ್ತಾರೆ. ಹಾಗೆ ಮುಕ್ತಿ ಹೊಂದುವ ಮೊದಲು ತಮ್ಮ ಶಿಷ್ಯರೊಂದಿಗೆ ಮಾತನಾಡುತ್ತಾ ಸರಿಯಾದ ಆಹಾರವಿಲ್ಲದೆ, ಸರಿಯಾದ ಪಥ್ಯವಿಲ್ಲದೆ, ದೇಶ ವಿದೇಶಗಳ ವಿವಿಧ ಹವಾಮಾನಗಳಲ್ಲಿ ಸುತ್ತಿದ ಪರಿಣಾಮವಾಗಿ ಈ ದೇಹ ಕೃಶವಾರಿರುವ ಪರಿಣಾಮವಾಗಿ ಈ ದೇಹವನ್ನು ತ್ಯಜಿಸಲೇ ಬೇಕಾಗಿದ್ದರೂ ನನ್ನ ಚಿಂತನೆಗಳ ಮೂಲಕ ಇನ್ನೂ ಸಾವಿರ ವರ್ಷಗಳು ನಿಮ್ಮೊಂದಿಗೇ ಇರುತ್ತೇನೆ ಎಂದು ಹೇಳಿದ್ದದ್ದು ಇಂದಿಗೂ ಪ್ರಸ್ತುತವಾಗಿದೆ.
ಇಂದಿನ ಯುವಜನತೆ ಆಧುನಿಕತೆ ಎಂಬ ಹೆಸರಿನಲ್ಲಿ ಪಾಶ್ವಾತ್ಯ ಸಂಸ್ಕೃತಿಯನ್ನು , ಸಿನಿಮಾ ನಾಯಕರಗಳು, ತಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ಮತ್ತು ಅಪ್ರಬುಧ್ಧ ರಾಜಕೀಯ ನಾಯಕರುಗಳನ್ನು ತಮ್ಮ ನಾಯಕರುಗಳು ಎಂದು ನಂಬಿ ಅವರನ್ನೇ ಅಂಧಾನುಕರಣೆ ಮಾಡುತ್ತಾ ದಿಕ್ಕು ತಪ್ಪುತ್ತಿರುವ ಸಮದಲ್ಲಿ ನರೇಂದ್ರರ ಚಿಂತನೆಗಳು ಇಂದಿಗೂ ಅತ್ಯಾವಶ್ಯಕ ಅನಿಸುತ್ತಿದೆಯಲ್ಲವೇ?
ಏನಂತೀರೀ?
ನಿಮ್ಮವನೇ ಉಮಾಸುತ