ಅದೂ೦ದು ದೊಡ್ಡ ನಗರ ಅಲ್ಲೊಬ್ಬ ಪ್ರಖ್ಯಾತ ವೈದ್ಯರು, ಅವರ ಅಚ್ಚು ಮೆಚ್ಚಿನ ಮಡದಿ, ಮುದ್ದಾದ ಮಗಳೊ೦ದಿಗೆ ಸ್ವರ್ಗಕ್ಕೇ ಕಿಚ್ಚು ಹಚ್ಚಿಸುವ೦ತಹ ಸು೦ದರ ಸ೦ಸಾರ ನಡೆಸುತ್ತಿದ್ದ ಸಮಯದಲ್ಲಿ, ಅಚಾನಕ್ಕಾಗಿ ಬರ ಸಿಡಿಲು ಎರಗಿದ೦ತೆ ವೈದ್ಯರ ಪತ್ನಿ ಆಕಾಲಿಕವಾಗಿ ಮರಣ ಹೊ೦ದಿದಾಗ ದಿಕ್ಕೇ ತೋಚದೇ ವೈದ್ಯರು ಅಧೀರರಾಗುತ್ತಾರೆ. ಪತ್ನಿಯ ವೈದೀಕ ಕಾರ್ಯಗಳೆಲ್ಲವೂ ಮುಗಿದ ನ೦ತರ ಕುಟು೦ಬದವರೆಲ್ಲಾ ಸೇರಿ, ಹೇಗೆ ದೀಪವಿಲ್ಲದೆ ದೇಗುಲ ಬೆಳಗುವುದಿಲ್ಲವೋ, ಹಾಗೆ ಹೆಣ್ಣಿನ ದಿಕ್ಕಿಲ್ಲದೆ ಮನೆಯೂ ಬೆಳಗುವುದಿಲ್ಲ. ಹೇಗೂ ನಿನಗೂ ಚಿಕ್ಕವಯಸ್ಸು, ಮಗಳೂ ಸಣ್ಣವಳಿದ್ದಾಳೆ ಅವಳನ್ನು ನೋಡಿಕೊಳ್ಳುವ ಸಲುವಾಗಿಯಾದರೂ ಮದುವೆ ಮಾಡಿಕೊಳ್ಳಲು ಒತ್ತಾಯಿಸುತ್ತಾರೆ. ಅಗಲಿದ ಮಡದಿಯ ಮೇಲಿನ ಪ್ರೀತಿಯಿ೦ದಲೂ, ಮಗಳ ಮೇಲಿನ ಮಮಕಾರದಿ೦ದಲೂ, ಮಲತಾಯಿಯ ಧೋರಣೆಯನ್ನು ಊಹಿಸಿಯೋ ನಯವಾಗಿ ಮರುಮದುವೆಯನ್ನು ನಿರಾಕರಿಸಿ ತಾವೇ ಖುದ್ದಾಗಿ ಮಗಳನ್ನು ಬೆಳೆಸುವ ಜವಾಬ್ಡಾರಿಯನ್ನು ಹೊರುತ್ತಾರೆ. ದಿನಗಳು ಉರುಳುತ್ತಿದ್ದ೦ತೆಯೇ, ತ೦ದೆಯ ಮುದ್ದಾದ ಆರೈಕೆಯಲ್ಲಿ ಬೆಳೆದ ಮಗಳು ವಿದ್ಯೆಯ ಜೊತೆಗೆ ವಿವೇಕವ೦ತಳಾಗಿಯೂ, ಸು೦ದರ ರೂಪವತಿಯಾಗಿಯೂ, ಅಗಲಿದ ತಾಯಿಯ ಅನುರೂಪವಾಗಿಯೂ ಮದುವೆಯ ವಯಸ್ಸಿನ ಕನ್ಯೆಯಾಗುತ್ತಾಳೆ. ವಯಸ್ಸಿಗೆ ಬ೦ದ ಮಗಳನ್ನು ಒಳ್ಳೆಯ ಸ೦ಬ೦ಧ ನೋಡಿ ಮದುವೆ ಮಾಡಿ ಗುರುತರ ಜವಬ್ದಾರಿಯನ್ನು ಕಳೆದುಕೊಳ್ಳಲು ನಿರ್ಧರಿಸಿದ ತ೦ದೆ ತಮಗೆ ತಿಳಿದವರ ಬಳಿಯಲ್ಲೂ, ಸ೦ಬ೦ಧೀಕರ ಬಳಿಯಲ್ಲೂ ತಮ್ಮ ಮಗಳಿಗೆ ಸರಿಹೊಂದುವ ವರನನ್ನು ಹುಡಿಕಿಕೊಡಲು ಕೋರುತ್ತಾರೆ.
ಮತ್ತೊಂದು ಹೆಸರಾಂತ ನಗರ, ಅಲ್ಲೊಬ್ಬ ಸುರದ್ರೂಪಿ, ಸುಶೀಕ್ಷಿತ, ಸಂಸ್ಕಾರವಂತ, ಒಳ್ಳೆಯ ಕಂಪನಿಯಲ್ಲಿ ನೌಕರಿ ಮಾಡುತ್ತಿರುವ, ಕೈತುಂಬಾ ಸಂಬಳ ಪಡೆಯುವ, ಆದರೆ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ಆಶ್ರಯದಲ್ಲೇ ಬೆಳೆದ ಹುಡುಗನಿಗೂ ಸುಂದರಿಯಾದ, ಸುಸಂಸ್ಕೃತಳಾದ ವಧುವನ್ನು ಹುಡುಕುತ್ತಿರುತ್ತಾರೆ.
ಭಗವಂತನ ಅನುಗ್ರಹದಿಂದ, ಗುರುಹಿರಿಯರ ಸಮ್ಮುಖದಲ್ಲಿ ಆ ಹುಡುಗನಿಗೂ, ಈ ಹುಡುಗಿಯ ಜೊತೆ ಮದುವೆ ನಿಶ್ಚಿಯವಾಗುತ್ತದೆ. ಮುದ್ದಿನಿಂದ ಸಾಕಿ ಸಲಹಿದ ಪ್ರೀತಿ ಪಾತ್ರಳಾದ ಮಗಳ ಮದುವೆಯನ್ನು ನಭೂತೋ, ನಭವಿಷ್ಯತಿಃ ಎನ್ನುವುದು ಉತ್ಪ್ರೇಕ್ಶೆ ಎನ್ನುವಂತೆ ವಿಜೃಂಭಣೆಯಿಂದ ನಗರದ ಹೆಸರಾಂತ ಕಲ್ಯಾಣ ಮಂಟಪದಲ್ಲಿ, ಬಾರೀ ಭಕ್ಷ್ಯ, ಭೂರೀ ಭೋಜನಗಳೊಂದಿಗೆ ಸಂಭ್ರಮ ಸಡಗರದಿಂದ, ಬಂದವರಿಗೆಲ್ಲರಿಗೂ ಯಥೇಚ್ಛ ಉಡುಗೊರೆಗಳೊಂದಿಗೆ ವೈದ್ಯರ ಮಗಳ ಲಗ್ನ ನೆರವೇರುತ್ತದೆ. ಬಂದ ನೆಂಟರಿಷ್ಟರೂ, ಸ್ನೇಹಿತರು ತಮ್ಮ ತಮ್ಮ ಮನೆಗಳಿಗೆ ತೆರಳಿದ ನಂತರ ಮಗಳನ್ನು ಗಂಡನ ಮನೆಗೆ ಕಳುಹಿಸುವವರೆಗೂ ಸಂತೋಷದಿಂದಿದ್ದ ವೈದ್ಯರ ದುಖಃ ಕಟ್ಟೆಯೊಡೆದು ಅವರಿಗೇ ಅರಿವಿಲ್ಲದೆಯೇ ಆನಂದಭಾಷ್ಪ ಉಕ್ಕಿ ಹರಿಯಲಾರಂಭಿಸಿ ಅವರನ್ನು ಸಂತೈಸುವುದೇ ಕಷ್ಟವಾದಾಗ, ವೈದ್ಯರೇ ಸ್ವತಃ ಸಮಾಧಾನ ಮಾಡಿ ಕೊಳ್ಳುತ್ತಾರೆ.
ತಮ್ಮ ಮಗಳು, ಅಳಿಯ ಮತ್ತು ಆತನ ತಾಯಿಯನ್ನು ಒಂದು ಕೊಠಡಿಗೆ ಕರೆದುಕೊಂಡು ಹೋಗಿ, ಅಳಿಯಂದಿರೇ, ನೀವು ವಿವೇಕವಂತರು, ವಿನಯವಂತರು. ಜೀವನವನ್ನು ಅರ್ಥ ಮಾಡಿಕೊಂಡು ಮುಂದೆ ಸಾಗುವ ಸಾಮರ್ಥ್ಯ ಹೊಂದಿರುವವರಾದರೂ, ಒಬ್ಬ ಹೆಣ್ಣು ಮಗಳ ಜವಾಬ್ದಾರಿಯುತ ತಂದೆಯಾಗಿ ನಿಮ್ಮೊಂದಿಗೆ ಎರಡು ಮಾತುಗಳನ್ನಾಡಲು ಇಚ್ಛಿಸುತ್ತೇನೆ ಅನ್ಯತಾ ಭಾವಿಸದಿರಿ ಎಂದು ಕೈ ಮುಗಿದು, ಮದುವೆಯ ಹೊಸದರಲ್ಲಿ ಗಂಡು ಮಕ್ಕಳ ಜವಾಬ್ದಾರಿ ಅತ್ಯಂತ ಹೆಚ್ಚಾಗಿಯೇ ಇರುತ್ತದೆ ಮತ್ತು ಆ ಸಮಯ ಬಹಳ ಪ್ರಾಮುಖ್ಯತೆ ಪಡೆದಿರುತ್ತದೆ. ನಿಮ್ಮ ಪ್ರತಿಯೊಂದು ನೆಡೆಯೂ ಎರಡು ಅಂಚಿನ ಕತ್ತಿಯ ಅಲುಗಿನ ಮೇಲೆ ಇಟ್ಟಂತಿರುತ್ತದೆ. ಸ್ವಲ್ಪ ಆಚೀಚೆಯಾದರೂ ಅದು ಜೀವನ ಪರ್ಯಂತ ಕಾಡುತ್ತಲೇ ಇರುತ್ತದೆ. ಒಂದು ವೇಳೆ ಈ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದಿರೆಂದರೆ ಜೀವನ ಪೂರ್ತೀ ಸುಖಃ ಮಯವಾಗಿರುತ್ತದೆ. ಅಮ್ಮನ ಮಾತು ಹೆಚ್ಚಾಗಿ ಆಲಿಸಿದರೆ ಅಮ್ಮನ ಸೆರುಗನ್ನು ಬಿಡಲಾದವರು ನನ್ನನ್ನೇಕೆ ಕಟ್ಟಿಕೊಳ್ಳಬೇಕಿತ್ತೋ ಎನ್ನುವ ಹೆಂಡತಿಯ ಆಕ್ಷೇಪಣೆ. ಇನ್ನೂ ಅಮ್ಮನನ್ನು ಬಿಟ್ಟು ತುಸು ಹೆಚ್ಚಿನ ಹೊತ್ತು ಹೆಂಡತಿಯೊಂದಿಗೆ ಕಳೆದರೆ, ಹೋಗೋ ಹೋಗೂ ಹೆಂಡತಿಯ ಗುಲಾಮ ಎನ್ನುವ ಅಮ್ಮನ ಮೂದಲಿಕೆ.
ಹೊತ್ತೂ-ಹೆತ್ತೂ, ಸಾಕೀ-ಸಲಹಿ, ತಿದ್ದಿ-ತೀಡಿ ಬೆಳಸಿದಂತಹ ತಾಯಿ ಒಂದೆಡೆಯಾದರೆ, ತನ್ನ ತವರಿನಲ್ಲಿ ಅಕ್ಕರೆಯಿಂದ ಸಕ್ಕರೆಯಂತೆ ಮುದ್ದಿನಿಂದ ಆರೈಕೆಯಾದ ಮಡದಿ ತನ್ನೆಲ್ಲಾ ಬಂಧು-ಬಳಗವನ್ನೂ ಸ್ನೇಹಿತೆಯರನ್ನೂ ಅಗಲಿ ಕೇವಲ ನಿಮ್ಮ ಮೇಲಿನ ನಂಬಿಕೆಯನ್ನು ಇಟ್ಟು ಕೊಂಡು, ಧನ-ಧಾನ್ಯಗಳು, ಮುತ್ತು-ರತ್ನಗಳು ನಿಮ್ಮ ಮನೆಯಲ್ಲಿ ರಾಶಿ ರಾಶಿಯಾಗಿ ಚೆಲ್ಲಾಡಲೆಂದು ದವಸ ಧಾನ್ಯಗಳು ತುಂಬಿದ್ದ ಸೇರನ್ನು ಒದ್ದು ಕೊಂಡು, ನಿಮ್ಮ ಮನೆಗೆ ಬಲಗಾಲನ್ನು ಮುಂದಿಟ್ಟು ಕೊಂಡು, ಹೊಸ ಜೀವನದ ಸಿಹಿ ಕನಸುಗಳನ್ನು ಹೊತ್ತುಕೊಂಡು ಬಂದಿರುತ್ತಾಳೆ. ಮುತ್ತು ಕೊಟ್ಟವಳು ಬಂದಿರುವಾಗ, ಇಷ್ಟು ದಿನ ತುತ್ತು ಕೊಟ್ಟವರನ್ನು ಮರೆಯದೆ ಇಬ್ಬರನ್ನೂ ಸಮಚಿತ್ತದಿಂದ ಸಂಭಾಳಿಸಿ.
ನಿಮಗೇ ತಿಳಿದಿರುವಂತೆ ಈಕೆಯನ್ನು ನಾನು ಬಹಳ ಪ್ರೀತಿ ಆದರಗಳಿಂದ ನನ್ನ ಕಣ್ಣಿನ ರೆಪ್ಪೆಗಳ ಹಾಗೆ ನೋಡಿ ಕೊಂಡಿದ್ದೇನೆ. ಆಕೆಯ ಬೇಕು ಬೇಡವನ್ನು ಅವಳು ಬಯಸಿದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿಯೇ ಪೂರೈಸಿ ಈಗ ನಿಮ್ಮ ಅರ್ಧಾಂಗಿಯಾಗಿ ಮನಸಾರೆ ಧಾರೆ ಎರದು ಕೊಟ್ಟಿದ್ದೇನೆ. ಮದುವೆಯ ಶಾಸ್ತ್ರ ಸಂಪ್ರದಾಯದಲ್ಲಿ ನೀವೇ ಹೇಳಿದಂತೆ, ಅರ್ಥೇಚ, ಕಾಮೇಚ ನಾತೀಚರಾಮಿ ಎನ್ನುವ ಜೀವನ ಪರ್ಯಂತ ನೋಡಿ ಕೊಳ್ಳಿ ಎಂದು ಹೇಳಿ. ಹಾಂ!! ಮತ್ತೊಂದು ಮುಖ್ಯವಾದ ಸಂಗತಿಯನ್ನೇ ಹೇಳಲು ಮರೆತಿದ್ದೆ. ಬಾಲ್ಯದಲ್ಲೇ ತಂದೆಯ ಪ್ರೀತಿಯನ್ನು ಕಳೆದುಕೊಂಡು ಅಮ್ಮನ ಅಪ್ಪುಗೆಯಲ್ಲಿ ಬೆಳೆದವರು ನೀವು. ನನಗೂ ಒಬ್ಬಳೇ ಮಗಳು. ಮಗನನ್ನು ಸಾಕಿ ಸಲುಹಿದ ಅಭ್ಯಾಸವಿಲ್ಲ. ಹಾಗಾಗಿ ಇಂದಿನಿಂದ ನೀವು ಕೇವಲ ನನ್ನ ಅಳಿಯನಲ್ಲದೆ, ನನ್ನ ಮಗನೂ ಹೌದು. ನನ್ನ ಸಕಲ ಚರಾಚಾರಾಸ್ತಿಗಳ ಒಡತಿ ನನ್ನ ಮಗಳ ಒಡೆಯರೂ ನೀವು. ಇನ್ನು ಮುಂದೆ ಸಾಧ್ಯವಾದರೆ ನೀವು ನನ್ನಲ್ಲಿ ನಿಮ್ಮನ್ನು ಅಗಲಿರುವ ತಂದೆಯನ್ನು ಕಾಣುವಂತವರಾಗಿ. ನಿಮ್ಮ ತಂದೆಯವರಷ್ಟು ಅಲ್ಲದಿದ್ದರೂ ನನ್ನ ಕೈಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಆ ಸ್ಥಾನವನ್ನು ತುಂಬವ ಪ್ರಯತ್ನವನ್ನು ನಾನು ಮಾಡುತ್ತೇನೆ ಎನ್ನುತ್ತಾರೆ.
ಇನ್ನು ತಮ್ಮ ಅಳಿಯನ ತಾಯಿ ಬೀಗಿತ್ತಿಯವರ ಕಡೆಗೆ ತಿರುಗಿ, ಅಮ್ಮಾ, ಚಿಕ್ಕವಯಸ್ಸಿನಲ್ಲಿಯೇ ಯಜಮಾನರನ್ನು ಕಳೆದುಕೊಂಡರೂ, ತಂದೆಯ ಯಾವುದೇ ರೀತಿಯ ಕೊರತೆಯನ್ನೂ ಕಾಣದ ಹಾಗೆ ನಿಮ್ಮ ಮಗನನ್ನು ಬೆಳೆಸಿದ್ದೀರಿ ಅದಕ್ಕಾಗಿ ನಿಮಗೆ ಅನಂತಾನಂತ ಅಭಿನಂದನೆಗಳು. ಇನ್ನು ಮುಂದೆ ನನ್ನನ್ನು ನೀವು ನಿಮ್ಮ ಸೊಸೆಯ ತಂದೆ ಬೀಗರು ಎಂದು ಕಾಣದೆ ನಿಮ್ಮ ಒಡ ಹುಟ್ಟಿದ ಸಹೋದರನಂತೆ ಕಾಣಿರಿ. ತಾಯಿ ಇಲ್ಲದ ತಬ್ಬಲಿ ಎಂದು ಅರಿವಾಗದಂತೆ, ತಂದೆ ಮತ್ತು ತಾಯಿ ಎರಡೂ ರೀತಿಯಾಗಿ ನೋಡಿಕೊಂಡು ಈಗ ನಿಮ್ಮ ಮನೆಯ, ನಿಮ್ಮ ವಂಶ ಬೆಳಗಿಸಲು ನಿಮ್ಮ ಮಡಿಲಿಗೆ ನನ್ನ ಮಗಳನ್ನು ಹಾಕುತ್ತಿದ್ದೇನೆ. ದಯವಿಟ್ಟು ನೀವು ಆಕೆಯನ್ನು ಸೊಸೆಯೆಂದು ಭಾವಿಸದೆ, ನಿಮ್ಮ ಮಗಳೆಂದುಕೊಂಡು ಆಕೆಯ ಮಾಡಿದ ಎಲ್ಲಾ ತಪ್ಪು ಒಪ್ಪುಗಳನ್ನೆಲ್ಲಾ ತಿದ್ದಿ ತೀಡಿ ಅವಳನ್ನು ಒಬ್ಬ ಜವಾಬ್ದಾರಿಯುತ ಗೃಹಿಣಿಯನ್ನಾಗಿ ಮಾಡುವ ಗುರುತರ ಜವಾಬ್ಡಾರಿ ನಿಮ್ಮ ಮೇಲೆ ಹಾಕುತ್ತಿದ್ದೇನೆ. ಪುಣ್ಯಕೋಟಿ ಹಸುವಿನ ಹಾಡಿನಲ್ಲಿ ಹೇಳುವಂತೆ ಹಿಂದೆ ಬಂದರೆ ಹಾಯಬೇಡಿ, ಮುಂದೆ ಬಂದರೆ ಒದೆಯ ಬೇಡಿ ನಿಮ್ಮ ಕಂದ ಎಂದು ಕಾಣಿರಿ ತಬ್ಬಲಿಯ ಈ ನನ್ನ ಮಗಳನೂ ಎಂದು ಹೆಣ್ಣು ಒಪ್ಪಿಸುವ ಶಾಸ್ತ್ರದಂತೆ ಅವರ ಮಡಿಲಿನಲ್ಲಿ ತಮ್ಮ ಮಗಳನ್ನು ಕೂಡಿಸಿ ನಿಟ್ಟುಸಿರು ಬಿಟ್ಟರು.
ಕಡೆಗೆ ತಮ್ಮ ಮಗಳ ಕಡೆಗೆ ತಿರುಗಿ, ನನ್ನಮ್ಮ, ಪುಟ್ಟೀ, ರಾಣಿ, ಬಂಗಾರೀ, ಚಿನ್ನೂ ಇನ್ನೂ ಎಷ್ಟೋಂದು ಹೆಸರಿನಿಂದ ಇನ್ನು ಮುಂದೆ ಯಾರನ್ನು ಕರೆಯಲೇ ಪುಟ್ಟಾ? ನೆನ್ನೆ ಮೊನ್ನೆ ಆಸ್ಪತ್ರೆಯಲ್ಲಿ ದಾದಿ ನಿನ್ನನ್ನು ನನ್ನ ಕೈಗಿತ್ತು, ನೋಡಿ ನಿಮ್ಮ ಮನೆಗೆ ಬಂದ ಪುಟ್ಟಲಕ್ಷ್ಮಿ ಹೇಗಿದ್ದಾಳೆ ಎಂದ ನೆನಪೇ ಇನ್ನೂ ಮಾಸಿ ಹೋಗಿಲ್ಲ. ನಿನ್ನ ನಾಮಕರಣ, ನಿನ್ನ ಅಂಬೇಗಾಲು, ನಿನ್ನ ಕೈ ಹಿಡಿದು ಪುಟ್ಟ ಹೆಜ್ಜೆ ಹಾಕಿಸುತ್ತಾ ನಡೆಸಿದ್ದದ್ದೂ, ನನ್ನ ಎದೆಯ ಮೇಲೆಯೇ ಮಲಗುತ್ತಿದ್ದದ್ದು , ನಿನ್ನ ಮೊದ ಮೊದಲ ತೊದಲು ನುಡಿಗಳು, ಜೇಬು ಎನ್ನಲು ಬೋಜು, ಟೋಪಿ ಎನ್ನಲು ಪೇತಾ, ಪೆನ್ನು ಎನ್ನಲು ಮಣ್ಣಾ ಎನ್ನುತ್ತಿದ್ದದ್ದು ಇನ್ನೂ ಮನದಲ್ಲಿಯೇ ಹಚ್ಚ ಹಸುರಾಗಿದೆಯಲ್ಲೋ? ನಿನಗೇನೂ ತಿಳಿಯದ ವಯಸ್ಸಿನಲ್ಲಿ ನಿನ್ನಮ್ಮ ಸತ್ತಾಗ, ನಿನಗೆ ಅದರ ಕೊರತೆಯೇ ಬಾರದಂತೆ ನೋಡಿಕೊಳ್ಳಲು ಪಟ್ಟ ಪಾಡು ಹೇಳ ತೀರದಲ್ಲೋ. ಈಗ ನೋಡಿದರೆ ಬೆಳೆದು ದೊಡ್ಡವಳಾಗಿ, ಹೆತ್ತ ಮನೆಯನ್ನು ತೊರೆದು ಗಂಡನ ಮನೆಗೆ ಹೊರಟು ನಿಂತಿರುವೆಯಲ್ಲೋ ಎಂದು ಕಂಬನಿ ಸುರಿಸುತ್ತಾ ಮಗಳ ಕೈ ಹಿಡಿದು, ನನಗೆ ಓಂದು ಭಾಷೆಕೊಡು. ಅಮ್ಮನ ಅಕ್ಕರೆ ತಿಳಿಯದ ನಿನಗೆ ಇಂದು ಮತ್ತೊಬ್ಬ ಅಮ್ಮ ಸಿಕ್ಕಿದ್ದಾರೆ. ನಿನ್ನ ಅತ್ತೆಯಲ್ಲಿ ನಿನ್ನ ಹೆತ್ತಮ್ಮನನ್ನು ಕಾಣು. ನೀನು ಜನಿಸಿ ನನಗೆ ಅಪ್ಪನ ಜವಾಬ್ಡಾರಿಯನ್ನು ಹೊರಿಸಿದ್ದೆ. ಈಗ ಆದಷ್ಟು ಬೇಗನೆ ಅಪ್ಪನಿಂದ ಅಜ್ಜನ ಜವಾಬ್ಡಾರಿ ಹೊರುವಂತೆ ಮಾಡು. ಹೆತ್ತ ಮನೆಗೂ ಮತ್ತು ಹೋದ ಮನೆಗೂ ಕೀರ್ತಿ ತರುವ ಹಾಗೆ ಬಾಳು ಎಂದು ಹೇಳಿ ಎಲ್ಲರನ್ನೂ ಮನೆಯ ಹೊರಗೆ ಸಿದ್ದವಾಗಿದ್ದ ಕಾರಿನಲ್ಲಿ ಹತ್ತಿಸಿ ಭಾರವಾದ ಹೃದಯದಿಂದ ಮಗಳನ್ನು ಗಂಡನ ಮನೆಗೆ ಬೀಳ್ಕೋಟ್ಟು, ಕಾರು ತಮ್ಮ ಕಣ್ಣಳತೆಯ ದೂರದಿಂದ ಮಾಯವಾಗುವವರೆಗೂ ಅಲ್ಲಿಯೇ ಇದ್ದು ಮನೆಯ ಒಳಹೊಕ್ಕರು.
ಗಂಡನ ಮನೆಯನ್ನು ತಲುಪಿದ ಕೂಡಲೇ ಅಪ್ಪನಿಗೆ ಕರೆ ಮಾಡಿದ ಮಗಳು, ಮೊದ ಮೊದಲು ದಿನಕ್ಕೆರಡು ಮೂರು ಬಾರಿ ಕರೆ ಮಾಡಿ ಅಪ್ಪನ ಯೋಗಕ್ಷೇಮ ವಿಚಾರಿಸುತ್ತಿದ್ದವಳು ಬರಬರುತ್ತಾ ದಿನಕ್ಕೊಂದು ಕರೆಗೆ ಸೀಮಿತಗೊಳಿಸಿದ್ದಳು. ಇನ್ನು ವೈದ್ಯರೂ ತಮ್ಮ ವೃತ್ತಿಯಲ್ಲಿ ನಿರತರಾಗಿ ನಿಧಾನವಾಗಿ ಮನೆಯಲ್ಲಿ ಮಗಳಿಲ್ಲದೆ ಬದುಕುವ ಪ್ರಯತ್ನ ಮಾಡುತ್ತಿದ್ದಾಗಲೇ, ಒಂದು ದಿನ ಅಚಾನಕ್ಕಾಗಿ ಹೇಳದೇ ಕೇಳದೇ ಮಗಳೊಬ್ಬಳೇ ತವರಿಗೆ ಮೊದಲ ಬಾರಿ ಬಂದಾಗ, ಖುಷಿಯಾದರೂ, ಆತಂಕದಿಂದ ಏನಮ್ಮಾ, ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಕ್ಷೇಮ ತಾನೇ? ಅತ್ತೆ ಹೇಗಿದ್ದಾರೆ? ನಮ್ಮ ಅಳಿಯಂದಿರು ಹೇಗಿದ್ದಾರೆ? ಅವರ ಕೆಲಸ ಹೇಗಿದೆ? ಅವರೇಕೆ ಬರಲಿಲ್ಲಾ? ಎಂದು ಒಂದೇ ಉಸಿರಿನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಳೆಯನ್ನು ಮಗಳ ಮೇಲೆ ಸುರಿಸಿದರು. ಅಪ್ಪಾ, ನಿನ್ನ ಪ್ರಶ್ನೆಗಳಿಗೆ ಉತ್ತರಿಸುವ ವ್ಯವಧಾನ ಈಗ ನನಗಿಲ್ಲ. ಮೊದಲು ನೀನು ನನ್ನ ಪ್ರಶ್ನೆಗೆ ಉತ್ತರಿಸು. ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯಾ? ನನ್ನ ಕಂಡರೆ ನಿನಗೆಷ್ಟು ಅಕ್ಕರೆ?ಎಂದಾಗ, ಒಂದು ಕ್ಷಣ ಅವಾಕ್ಕಾದರೂ ಸಾವರಿಸಿಕೊಂಡು, ಇದೇನೋ ಕಂದಾ ಹೀಗೆ ಕೇಳುತ್ತಿದ್ದೀಯಾ? ನಿನ್ನನ್ನು ಬೆಟ್ಟದಷ್ಟು ಪ್ರೀತಿಸುತ್ತೀನಲ್ಲೋ? ನೀನೇ ನನ್ನ ಪ್ರಾಣ ಕಣೋ ಎಂದು ಮಗಳನ್ನು ಅಪ್ಪಿಕೊಂಡು ಮಗಳ ತಲೆ ಸವರಿದರು. ಅವರ ಉತ್ತರದಿಂದ ಸಮಾಧಾನಳಾಗದ ಮಗಳು, ನೀನು ನನ್ನನ್ನು ಅಷ್ಟೊಂದು ಪ್ರೀತಿಸುವುದಾದರೆ, ನಾನು ಏನು ಕೇಳಿದರೂ ಕೊಡುತ್ತೀಯಾ? ನಾನು ಹೇಳಿದರೂ ಮಾಡುತ್ತೀಯಾ? ಎಂದು ಮರು ಸವಾಲನ್ನು ಅಪ್ಪನಿಗೇ ಹಾಕಿದಳು. ಮಗಳ ಸವಾಲಿಗೆ ನಾನಾ ರೀತಿಯ ಅರ್ಥಗಳನ್ನು ಕಲ್ಪಿಸಿಕೊಳ್ಳುತ್ತಾ ಯಾಕೋ ಪುಟ್ಟಾ? ಏನಾಯ್ತೋ? ಏನು ಬೇಕೋ ನಿನಗೆ? ನಿನ್ನ ಗಂಡನ ಮನೆಯವರು ವರದಕ್ಷಿಣೆ ಏನಾದರೂ ಕೇಳಿದ್ರೇನೋ? ಮದುವೆಯ ಮಾತು ಕಥೆಯ ಸಮಯದಲ್ಲಿ ವರದಕ್ಷಿಣೆ, ಗಿರಿದಕ್ಷಿಣೆ ಏನೂ ಬೇಡಾ ಮದುವೆ ಚೆನ್ನಾಗಿ ಮಾಡಿಕೊಡಿ ಅಂದವರು ಈಗ ಏನೋ ಅವರದ್ದು ಎಂದು ಆತಂಕದಿಂದ ಮಗಳನ್ನು ಕೇಳಿದರು? ಮತ್ತೆ ಮಾತು ಮುಂದುವರಿಸುತ್ತಾ , ಯಾಕೋ ನಿನ್ನ ಗಂಡ ಸರಿ ಇಲ್ಲವೇನೋ? ದುಶ್ಚಟಗಳ ದಾಸನೇನೋ? ನೋಡೋದಕ್ಕೆ ಹಾಗೆ ಕಾಣೋದಿಲ್ವಲ್ಲೋ? ಬೈಯ್ತಾನಾ? ಹೊಡಿತಾನಾ? ಅಥವಾ ಬೇರೇ ಯಾವುದಾದರೂ ಸಂಬಂಧಾ??…… ಅಂತ ಕೇಳಿದಾಗ, ಅಪ್ಪಾ ಸುಮ್ಮ ಸುಮ್ಮನೆ ಏನೇನೋ ಯೋಚಿಸಿ ನಿನ್ನ ಮನಸ್ಸು ಹಾಳುಮಾಡಿಕೊಳ್ಳಬೇಡ. ದೇವರಂಥಾ ಗಂಡ ನಿನಗಿಂತಲೂ ಒಂದು ಕೈ ಹೆಚ್ಚಾಗಿಯೇ ನನ್ನನ್ನು ಪ್ರೀತಿಸುತ್ತಾರೆ ಮತ್ತು ನೋಡಿಕೊಳ್ಳುತ್ತಾರೆ ಅವರ ಬಗ್ಗೆ ಸುಮ್ಮನೆ ಅಪಾರ್ಧ ಕಲ್ಪಿಸ ಬೇಡ. ಗಂಡ ಚೆನ್ನಾಗಿದ್ದಾರೆ, ಗಂಡನ ಮನೆ ಚೆನ್ನಾಗಿದೆ. ನಿನ್ನ ವರದಕ್ಷಿಣೆಗೆ ಕೈ ಚಾಚುವ ಬಾಬತ್ತು ಅವರಿಗಿಲ್ಲ. ಕೈಗೊಂದು ಕಾಲ್ಗೊಂದು ಆಳು-ಕಾಳಿದ್ದಾರೆ. ಊಟ ತಿಂಡಿಗೇನು ಕೊರತೆ ಇಲ್ಲಾ, ಹೊತ್ತು ಹೊತ್ತಿಗೆ ಊಟ ತಿಂಡಿ ಎಲ್ಲವೂ ಸುಗಮವಾಗಿಯೇ ಆಗುತ್ತಿದೆ. ನೆರೆ ಹೊರೆಯವರೂ ಚೆನ್ನಾಗಿಯೇ ಇದ್ದಾರೆ ಎಂದು ಮಗಳು ಹೇಳಿದ್ದನ್ನು ಕೇಳಿ ಸ್ವ್ಲಲ್ಪ ನಿರಾಳರಾದ ವೈದ್ಯರು, ಎಲ್ಲ ಸರಿ ಇದ್ದ ಮೇಲೆ ಇನ್ಯಾಕಮ್ಮಾ ಈ ಸಿಟ್ಟು, ಸೆವಡು, ಸ್ವಲ್ಪ ನಿಧಾನವಾಗಿ ಹೇಳು ಎಂದಾಗ, ಮಗಳು ಅಪ್ಪನ ಕೈ ತನ್ನ ತಲೆಯ ಮೇಲೆ ಇರಿಸಿ, ನಾನು ಕೇಳಿದ್ದನ್ನು ನೀನು ಮಾಡಿಕೊಡುವೆ ಎಂದು ಆಣೆ ಮಾಡಿದಲ್ಲಿ ಮಾತ್ರ ಹೇಳುತ್ತೇನೆ ಎಂದಾಗ, ಮಗಳ ಮೇಲಿನ ಮಮಕಾರದಿಂದ ಆಯ್ತಮ್ಮಾ ತಾಯೀ ನೀನು ಹೇಳಿದಂತೆಯೇ ಆಗಲಿ, ಅದೇನು ಕೇಳಿತ್ತೀಯೋ ಕೇಳು ನನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ತಂದು ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು. ಅಪ್ಪನ ಒಪ್ಪಿಗೆಯಿಂದ ಸಂತಸಳಾದ ಮಗಳು ಜೋರಾಗಿ ಅಳುತ್ತಾ ಅಪ್ಪಾ ಎಲ್ಲಾ ಚೆನ್ನಾಗಿಯೇ ಕೊಟ್ಟ ಭಗವಂತ ಇಂಥಾ ಅತ್ತೆಯನ್ನೇಕೆ ಕೊಟ್ಟನಪ್ಪಾ? ಎದ್ದರೂ ತಪ್ಪು, ಕುಳಿತರೂ ತಪ್ಪು, ರಜೆ ದಿನ ಅಂತ ಸ್ವಲ್ಪ ಜಾಸ್ತಿ ನಿದ್ದೆ ಮಾಡಿದರೂ ತಪ್ಪು. ಗಂಡನ ಜೊತೆ, ಸಿನಿಮಾ ಹೊಟೆಲ್ ಹೋಗೋದೂ ತಪ್ಪು, ನಾನು ಏನು ಮಾಡಿದರೂ ತಪ್ಪು ಕಂಡು ಹಿಡಿಯುತ್ತಾರೆ. ನನಗೆ ಸಾಕು ಸಾಕಾಗಿದೆ. ಇನ್ನು ನಾನು ಆ ಮನೆಗೆ ಅವರು ಇರುವವರೆಗೆ ಹೋಗುವುದಿಲ್ಲ ಎಂದಾಗ, ವೈದ್ಯರಿಗೆ ನಿಧಾನವಾಗಿ ಮಗಳ ಸಿಟ್ಟಿನ ರಹಸ್ಯ ತಿಳಿದು, ತಮ್ಮ ಮದುವೆಯ ಹೊಸದರಲ್ಲಿ ಅವರ ಹೆಂಡತಿಯೂ ಇದೇ ನೆಪವೊಡ್ಡಿ ತವರಿಗೆ ಹೋಗಿದ್ದದ್ದು ಜ್ಣಾಪಕವಾಗಿ ಈ ಸಮಸ್ಯೆ ಹೇಗೆ ಬಗೆಹರಿಸುವುದೆಂದು ಯೋಚಿಸುತ್ತಿದ್ದಾಗಲೇ, ಅಪ್ಪಾ ನೀನು ಹೆಸರಾಂತ ವೈದ್ಯರಿದ್ದೀರೀ, ನನಗೆ ಮಾತನ್ನೂ ಕೊಟ್ಟೀದ್ದೀರೀ. ಹೇಗದರೂ ಮಾಡಿ, ನನ್ನ ಅತ್ತೆಯನ್ನು ಯಾರಿಗೂ ಅನುಮಾನ ಬಾರದಂತೆ ಸಾಯುವ ಹಾಗೆ ಯಾವುದಾದರೂ ಔಷಧಿಯನ್ನು ಕೊಟ್ಟುಬಿಡಿ. ಮುದಿಗೂಬೆ ಸತ್ತರೆ, ನಾನು ನೆಮ್ಮದಿಯಾಗಿ ಸಂಸಾರ ನಡೆಸಬಹುದು ಎಂದಳು. ಮಗಳ ಕೃತ್ರಿಮ ಮಾತಿಗೆ ಬೆರಗಾದ ವೈದ್ಯರು, ಏನಮ್ಮಾ ಮಾತಾಡ್ತಾ ಇದ್ದೀಯಾ? ವೈದ್ಯರ ವೃತ್ತಿಧರ್ಮ ಬದುಕಿಸುವುದೇ ಹೊರತು, ಸಾಯಿಸುವುದಲ್ಲ. ನಿನ್ನ ಮಾತನ್ನು ಒಪ್ಪಲಾಗದು ಎಂದಾಗ, ಕೋಪಗೊಂಡ ಮಗಳು, ಮಗಳ ಈ ಸಣ್ಣ ಕೋರಿಕೆಯನ್ನೂ ತೀರಿಸದ ನೀನೆಂತಾ ಅಪ್ಪಾ? ಒಬ್ಬರನ್ನು ಕೊಲ್ಲಲಾಗದ ನೀನೆಂತಾ ವೈದ್ಯ? ನೀನು ನನಗೆ ಆಣೆ ಮಾಡಿದಂತೆ ನಡೆದು ಕೊಳ್ಳದಿದ್ದರೆ, ನಾನು ಯಾವುದಾದರೂ ಕೆರೆ ಭಾವಿಯನ್ನೋ ಇಲ್ಲವೇ ರೈಲ್ವೇ ಹಳಿಯನ್ನೋ ನೋಡಿಕೊಳ್ಳುತ್ತೇನೆ. ನಾಳೆ ನಾನು ಸತ್ತ ವಿಷಯ ತಿಳಿದು ಹಾಲು ಕುಡಿದು ಸಂತಸ ಪಡು ಎಂದು ಆರ್ಭಟಿಸುತ್ತಾಳೆ. ಮಗಳ ಈ ರೀತಿಯ ಧಮ್ಕಿಗೆ ಬೆದರಿದ ಅಪ್ಪ, ಮಗಳೇ ಸಾಯುವ ಮಾತನ್ನೇಕೆ ಆಡುತ್ತೀಯಾ? ಸ್ವಲ್ಪ ತಾಳ್ಮೆಯಿಂದ ಆಲೋಚಿಸು ಎಲ್ಲದ್ದಕ್ಕೂ ಪರಿಹಾರವಿದ್ದೇ ಇರುತ್ತದೆ ಎಂದಾಗ, ಯಾರ ಮಾತನ್ನೂ ಕೇಳುವ ಸಂಯಮದಲ್ಲಿರದ ಮಗಳು ನಿನ್ನಂತಹ ವಚನಭ್ರಷ್ಟ ಅಪ್ಪನೊಂದಿಗೆ ನನ್ನದೇನೂ ಮಾತು. ಇನ್ನು ಮುಂದೆ ನನ್ನ ಪಾಡು ನನ್ನದು. ನಿಮಗೊಬ್ಬಳು ಮಗಳು ಇದ್ದಳೆಂಬುದನ್ನು ಮರೆತು ಬಿಡಿ ಎಂದು ಅಪ್ಪನ ಮನೆಯಿಂದ ಹೊರಡಲನುವಾಗುತ್ತಾಳೆ. ಒಂದು ಕಡೆ ಮಗಳು, ಮತ್ತೊಂದೆಡೆ ವೃತ್ತಿಧರ್ಮ ಇವೆರಡರ ಮಧ್ಯೆ ನಿರ್ಧಾರ ತಳೆಯಲಾರದೆ, ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ಮಗಳ ಕೈ ಹಿಡಿದು ಜಗ್ಗಿ, ನೋಡಮ್ಮಾ, ನಾನು ಸುಮ್ಮನೆ ಯಾರನ್ನೂ ನೋಡದೆ ಪರೀಕ್ಷೀಸದೇ ಔಷಧಿ ಕೊಡಲು ಆಗುವುದಿಲ್ಲ. ಹೇಗೂ ಕತ್ತಲಾಗಿದೆ. ನಾಳೆ ಬೆಳಿಗ್ಗೆ ನಾನು ನಿನ್ನೊಡನೆ ನಿಮ್ಮ ಮನೆಗೆ ಬಂದು ನಿನ್ನ ಅತ್ತೆಯವನ್ನು ನೋಡಿ ನಿರ್ಧಾರ ತೆಗೆದು ಕೊಳ್ಳೋಣ ಎಂದಾಗ, ಅಪ್ಪನ ಸಲಹೆ ಮಗಳಿಗೆ ಸೂಕ್ತವೆನಿಸಿ ಅದಕ್ಕೆ ಒಪ್ಪಿಕೊಳ್ಳುತ್ತಾಳೆ. ಅಷ್ಟರಲ್ಲಿ ಮನೆಗೆ ಬಂದ ಗಂಡ, ಎಷ್ಟು ಹೊತ್ತಾದರೂ ಹೆಂಡತಿಯನ್ನು ಕಾಣದೆ ಅಮ್ಮನ ಬಳಿ ತನ್ನ ಹೆಂಡತಿ ಎಲ್ಲಿ ಹೋದಳೆಂದು ಕೇಳಲು ಆಕೆಯೂ ಕೂಡಾ ನನಗೂ ಹೇಳದೆ ಎಲ್ಲಿಯೋ ಹೋಗಿದ್ದಾಳೆ. ಬಹುಶಃ ಅವಳು ನಿನ್ನ ಜೊತೆಯಲ್ಲೇ ಎಲ್ಲೋ ಹೊರಗೆ ಹೋಗಿರ ಬಹುದೆಂದು ಸುಮ್ಮನಿದ್ದೆ ಎನ್ನಲು ಆತಂಕಗೊಂಡ ಪತಿ ತನ್ನ ಕೋಣೆಗೆ ಹೋದಾಗ, ಅಪ್ಪನ ಮನೆಗೆ ಹೋಗುತ್ತಿದ್ದೇನೆ ಎಂದ ಬರೆದ ಚೀಟಿಯನ್ನು ನೋಡಿ ಸ್ವಲ್ಪ ನಿರಾಳ ಹೊಂದಿ, ಪತ್ನಿಯೊಂದಿಗೆ ಮಾತನಾಡಲು ಕರೆ ಮಾಡಲು ಪ್ರಯತ್ನಿಸಿದನಾದರೂ ಸಂಪರ್ಕ ಸಿಗದ ಕಾರಣ ಮಾರನೇ ದಿನ ಕರೆ ಮಾಡೋಣವೆಂದು ಸುಮ್ಮನಾಗುತ್ತಾನೆ. ಮಾವನೊಂದಿಗೆ ಮಾತನಾಡಿ ತಿಳಿದುಕೊಳ್ಳಲು ಮನ ಬಯಸಿದರೂ ಸುಮ್ಮನೆ ಅವರ ಕೆಲಕ್ಕೇಕೆ ಭಂಗ ತರುವುದು ಎಂದು ಯೋಚಿಸಿ ಸುಮ್ಮನಾಗುತ್ತಾನೆ. ತಾನಾಡಿ ಬೆಳೆದ ಮನೆಯಲ್ಲಿಯೇ ಮಲಗಿದ್ದರೂ ಇಡೀ ರಾತ್ರಿಯೆಲ್ಲಾ ನಿದ್ದೆ ಬಾರದೆ, ಯಾವಾಗ ಬೆಳಗಾಗುವುದೋ? ಎಂದು ಹಾಸಿಗೆಯ ಮೇಲೆಯೇ ಚಡಪಡಿಸುತ್ತಾ ಬೆಳಕು ಹರಿದ ಕೂಡಲೇ ಅಪ್ಪನನ್ನು ಎಚ್ಚರಿಸಿ ಸ್ನಾನ ಮುಗಿಸಿ ತಿಂಡಿಯನ್ನು ದಾರಿಯಲ್ಲೇ ತಿಂದರಾಯಿತು ಎಂದು ಬಲವಂತದಿಂದ ಅಪ್ಪನೊಡನೆ ತನ್ನ ಮನೆಗೆ ಮರಳುತ್ತಾಳೆ.
ಹೇಳದೇ ಕೇಳದೆ, ಚೀಟಿ ಬರೆದಿಟ್ಟು ಹೋಗಿದ್ದ ಸೊಸೆ ತಂದೆಯೊಡನೆ ಬಂದ್ದನ್ನು ನೋಡಿದ ಸ್ವಲ್ಪ ಕೃಶಕಾಯರಾಗಿದ್ದ ಅತ್ತೆಯವರಿಗೆ ಸಮಾಧಾನವಾಗಿ ಅವರಿಬ್ಬರನ್ನೂ ಒಳಗೆ ಕುಳ್ಳರಿಸಿ ಮಗನಿಗೆ ಸೊಸೆ ಮರಳಿ ಬಂದ ವಿಷಯ ತಿಳಿಸುತ್ತಾಳೆ. ಮಗಳ ಮನೆಗೆ ಬಂದ ವೈದ್ಯರು ಕೆಲದಿನಗಳು ಅಲ್ಲಿಯೇ ಇದ್ದು ಮನೆಯ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸ ತೊಡಗುತ್ತಾರೆ. ವಾರಾಂತ್ಯದಲ್ಲಿ ಎಲ್ಲರೊಡನೆ ವಿಹಾರಕ್ಕೆ ಕರೆದುಕೊಂಡು ಹೋಗಿ, ಊಟ ತಿಂಡಿಗಳನ್ನೆಲ್ಲಾ ಹೊರಗಡೆಯೇ ಮುಗಿಸಿ ಅವರೆಲ್ಲರ ನಡೆಗಳನ್ನು ಅತ್ಯಂತ ಎಚ್ಚರದಿಂದ ಮತ್ತು ಕುತೂಹಲದಿಂದ ಗಮನಿಸುತ್ತಿರುತ್ತಾರೆ.
ಅಪ್ಪ ತನ್ನ ಮನೆಯಲ್ಲಿ ಇದ್ದಷ್ಟು ದಿನವೂ ಅಪ್ಪಾ, ನನ್ನತ್ತೆಯನ್ನು ನೋಡಿದೆಯಾ? ಯಾವ ನಿರ್ಧಾರಕ್ಕೆ ಬಂದೇ? ಎಂದು ಪದೇ ಪದೇ ಪೀಡಿಸುತ್ತಿದ್ದರೂ ಸುಮ್ಮನಿದ್ದ ವೈದ್ಯರು ತಮ್ಮ ಮನೆಗೆ ಹಿಂತಿರುಗಿ ಹೊರಡುವ ಹಿಂದಿನ ದಿನದ ರಾತ್ರಿ ಮಗಳ ಕೋಣೆಗೆ ಹೋಗಿ, ಮಗಳೇ ನಿನ್ನ ಮನೆಯಲ್ಲಿ ಸಮಸ್ಯೆ ಇದೆ. ಅದಕ್ಕೆ ಸೂಕ್ತ ಪರಿಹಾರವನ್ನೂ ಕಂಡುಹಿಡಿದಿರುವೆ ಎಂದು ಮಗಳ ಕೈಗೆ ಒಂದು ಮಾತ್ರೆಯ ದಬ್ಬಿಯನ್ನಿಟ್ಟು, ಸರಿಯಾಗಿ ಕೇಳೀಸಿಕೋ, ಇದು ಅತ್ಯಂತ ಪರಿಣಾಮಕಾರಿ ಔಷಧಿಯಾಗಿದ್ದು, ಇದನ್ನು ಪ್ರತಿದಿನ ನಿಮ್ಮ ಅತ್ತೆಯವರಿಗೆ ಹಾಲಿನಲ್ಲಿ ಕರಗಿಸಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ತಪ್ಪದೆ ಒಂದು ತಿಂಗಳು ಕೊಡಬೇಕು. ಅತ್ಯಂತ ಮುಖ್ಯವಾದ ಸಂಗತಿ ಏನೆಂದರೆ ಈ ಪದ್ದತಿ ಒಂದು ದಿನ ತಪ್ಪಿದರೂ ಔಷಧಿಯ ಸತ್ವ ಹೊರಟು ಹೋಗಿ ಮತ್ತೆ ಮೊದಲಿನಿಂದ ಶುರು ಮಾಡಬೇಕಾಗುತ್ತದೆ. ಆದ್ದರಿಂದ ಜಾಗೃತವಾಗಿ ಕೊಡಬೇಕು ಎಂದು ಸೂಚಿಸುತ್ತಾರೆ, ಹಾಗೆಯೇ ಈ ಪರಿಣಾಮಕಾರೀ ಔಷಧಿ ತೆಗೆದುಕೊಳ್ಳುವುದರಿಂದ ಹೊಟ್ಟೆ ಉರಿ ಸಮಸ್ಯೆ ಉಂಟಾಗುವ ಅಡ್ಡ ಪರಿಣಾಮ ಇರುವುದರಿಂದ ಅವರಿಗೆ ಔಷಧಿಯ ಜೊತೆ ಹಣ್ಣು ಹಂಪಲುಗಳನ್ನು ಕೊಡು ಎಂದು ಸೂಚಿಸುತ್ತಾರೆ. ಅತ್ತೆಯ ಸಾವನ್ನೇ ಬಯಸುತ್ತಿದ್ದ ಸೊಸೆ ಅಪ್ಪ ಹೇಳಿದ್ದಕ್ಕೆಲ್ಲಾ ಒಪ್ಪಿಕೊಂಡು ಸಂತಸದಿಂದ ಅಪ್ಪನನ್ನು ಅವರ ಊರಿಗೆ ಕಳುಹಿಸಿ ಕೊಟ್ಟು ಅಪ್ಪಾ ಹೇಳಿದಂತೆಯೇ ಅತ್ತೆಯ ಆರೈಕೆ(ಓಲೈಕೆ)ಯಲ್ಲಿ ತೊಡಗುತ್ತಾಳೆ.
ಇತ್ತ ಊರಿಗೆ ಮರಳಿದ ವೈದ್ಯರು ಮಗಳ ಸಮಸ್ಯೆಯನ್ನೇ ಮರೆತು ತಮ್ಮ ಕೆಲಸದಲ್ಲಿ ಮಗ್ನರಾಗಿ ಬಿಡುತ್ತಾರೆ. ಮಗಳ ಮನೆಯಿಂದ ಮರಳಿ ಇಪ್ಪತ್ತು ಇಪ್ಪತ್ತೈದು ದಿನಗಳೊಳಗೇ ಮತ್ತೊಮ್ಮೆ ಧುತ್ತೆಂದು ಮಗಳು ಒಬ್ಬಳೇ ಅವರ ಮನೆಯಲ್ಲಿ ಪ್ರತ್ಯಕ್ಷಳಾದಾಗ , ಅವಳ ಕಣ್ಗಳಲ್ಲಿ ಮತ್ತೊಮ್ಮೆ ಆತಂಕದ ಛಾಯೆಯನ್ನೇ ಕಂಡು ಏನಮ್ಮಾ, ನಿಮ್ಮ ಅತ್ತೆಗೆ ಏನಾಯ್ತು? ಅತ್ತೆ ಹೋಗಿ ಬಿಟ್ರಾ? ನಿನ್ನ ಆಸೆ ನೆರೆವೇರಿದ್ದಕ್ಕೆ ಸಂತೋಷ ಪಡುವುದನ್ನು ಬಿಟ್ಟು ಮತ್ತೇಕೆ ಆಕಾಶವೇ ನಿನ್ನ ತಲೆ ಮೇಲೆ ಬಿದ್ದಿರುವ ಹಾಗೆ ಕಾಣ್ತಾಯಿದ್ದೀಯಾ? ಮತ್ತೇನು ಸಮಸ್ಯೆ ಎಂದು ಕೇಳುತ್ತಾಳೆ. ಆಗ ಆಪ್ಪಾ ನಾನೇನೋ ಸಣ್ಣ ವಯಸ್ಸಿನವಳು, ಲೋಕದ ವ್ಯವಹಾರ ತಿಳಿಯದವಳು, ನಾನು ತಪ್ಪು ಮಾಡುವುದು ಸಹಜ. ನೀನು ಖ್ಯಾತ ವೈದ್ಯ, ಸದಾ ಜನರ ಜೊತೆಯಲ್ಲಿಯೇ ಇರುವವರು, ಅದು ಹೇಗೆ ನನ್ನ ಅತ್ತೆಯವರನ್ನು ಸಾಯಿಸುವ ಕಠಿಣ ಹೃದಯಿಯಾದೆ? ನನಗೆ ನೀನೇನು ಮಾಡುತ್ತೀಯೋ ತಿಳಿಯದು ನೀನೀಗ ನನ್ನ ಅತ್ತೆಯವರನ್ನು ಬದುಕುವಂತೆ ಮಾಡು ಎಂದಾಗ, ವೈದ್ಯರು, ಇದೊಳ್ಳೆ ಚೆನ್ನಾಗಾಯ್ತಲ್ಲಾ? ಅಂದು ಸಾಯಿಸಲು ಕೇಳಿಕೊಂಡವಳೂ ನೀನೇ, ಇಂದು ಬದುಕಿಸಲು ಪರಿತಪಿಸುತ್ತಿರುವಳೂ ನೀನೆ, ನಾನು ಕೊಟ್ಟ ಔಷಧಿ ಈಗಾಗಲೇ ಪರಿಣಾಮವಾಗಿದ್ದು, ನಿಮ್ಮ ಅತ್ತೆಯ ದೇಹದ ಪೂರ್ತಿ ಹರಡಿಕೊಂಡು ಇಂದೋ ಇಲ್ಲವೇ ನಾಳೆ ಯಾರಿಗೂ ತಿಳಿಯದಂತೆ ವಯೋಸಾವಿನ ರೀತಿಯಲ್ಲೇ ಮರಣ ಹೊಂದುತ್ತಾರೆ. ಆಗ ನಿನ್ನಿಚ್ಛೆಯಂತೆ ನೀನು ನಿನ್ನ ಪತಿಯೊಡನೆ ಸುಖಃ ಸಂತೋಷದಿಂದಿರ ಬಹುದು ಎನ್ನುತ್ತಾರೆ. ಆಪ್ಪನ ಮಾತನ್ನು ಕೇಳಿ ಕೋಪಗೊಳ್ಳುವ ಮಗಳು,ಆಪ್ಪಾ ಮತ್ತೊಮ್ಮೆ ಹೇಳುತ್ತಿದ್ದೇನೆ, ನನಗೆ ನೀನೇನು ಮಾಡುತ್ತೀಯೋ ತಿಳಿಯದು ನೀನೀಗ ನನ್ನ ಅತ್ತೆಯವರನ್ನು ಬದುಕುವಂತೆ ಮಾಡು ಇಲ್ಲವೇ ನಾನು ಪೋಲೀಸರಲ್ಲಿ ನಿನ್ನ ವಿರುಧ್ಢ ಅತ್ತೆಯವರನ್ನು ಕೊಲ್ಲಲು ಸಹಕರಿಸಿದ್ದಕ್ಕಾಗಿ ದೂರನ್ನು ಧಾಖಲಿಸುತ್ತೇನೆ. ಹೇಗೂ ನನ್ನ ಬಳಿ ನೀನೇ ಕೊಟ್ಟ ಮಾತ್ರೆಗಳ ಡಬ್ಬಿ ಇದೆ. ಅದುವೇ ಸಾಕ್ಷವಾಗುತ್ತದೆ ಎಂದಾಗ ಇದೊಳ್ಳೇ ರಾಮಾಯಣ ಆಯ್ತಲ್ಲಾ, ಸರಿ ನಡಿ ನಿಮ್ಮ ಊರಿಗೆ ಹೋಗಿ ಸಮಸ್ಯೆಯನ್ನು ಪರಿಹರಿಸುವಾ ಎಂದು ಮಗಳೊಟ್ಟಿಗೆ ಮತ್ತೊಮ್ಮೆ ಅಳಿಯನ ಮನೆಗೆ ಬರುತ್ತಾರೆ.
ತಂದೆಯೊಡನೆ ಬಂದ ಸೊಸೆಯನ್ನು ನೋಡಿದ ಕೂಡಲೇ ಅತ್ತೆಯವರು, ಬಹಳ ಹಸನ್ಮುಖರಾಗಿ ಅವರಿಬ್ಬರನ್ನೂ ಒಳಗೆ ಕುಳ್ಳರಿಸಿ ನೀರು ತಂದು ಕೊಟ್ಟು, ಸೊಸೆ ಅಪ್ಪನಿಗೆ ಕಾಫೀ ಮಾಡಿಕೊಡಲು ಹೋದಾಗ, ಅವಳನ್ನು ತಡೆದು, ಅಪ್ಪನೊಡನೆ ಊರಿನಿಂದ ಬಂದು ದಣಿವಾಗಿರುತ್ತದೆ. ನೀವಿಬ್ಬರೂ ಕೈಕಾಲು ತೊಳೆದು ಕೊಂಡು ಆಯಾಸ ಪರಿಹರಿಸಿಕೊಳ್ಳಿ ನಾನು ಕಾಫಿ ತಿಂಡಿಯ ವ್ಯವಸ್ಠೆ ಮಾಡುತ್ತೇನೆ ಎಂದಾಗ, ಕಳೆದ ಬಾರಿಗಿಂತಲೂ ಸಧೃಡರಾಗಿ, ಆರೋಗ್ಯವಂತರಾಗಿ ಕಂಡ ಬೀಗಿತ್ತಿಯನ್ನು ನೋಡಿ ಮನಸ್ಸಿನಲ್ಲಿಯೇ ಸಂತೋಷ ಪಡುತ್ತಾರೆ. ಕಾಫಿ ತಿಂಡಿಯ ವ್ಯವಸ್ಠೆ ಮಾಡಿದ ನಂತರ ಸೊಸೆ ಮತ್ತು ಬೀಗರ ಕೈಗೆ ತಿಂಡಿ ಕೊಟ್ಟು, ನೋಡಿ ನಿಮ್ಮ ಮಗಳು ಹೀಗೆ ಮಾಡ ಬಹುದಾ? ನೀವಾದರೂ ಸ್ವಲ್ಪ ಬುದ್ದಿ ಹೇಳ್ಬಾರ್ದಾ? ಯಾರಿಗೂ ಹೇಳದೆ, ಕೇಳದೆ, ಅವಳೊಬ್ಬಳೇ ನಿಮ್ಮ ಮನೆಗೆ ಆಗಿಂದ್ದಾಗೆ ಹೊಗ್ಬಿಡ್ತಾಳೆ ಎಂದಾಗ, ವೈದ್ಯರಿಗೆ ಇದೇನಪ್ಪಾ ಹೊಸಾ ವರಸೇ ಅಂದು ಕೊಳ್ಳುತ್ತಾ, ಹಾಗೇನಿಲ್ಲಾ, ಅಳಿಯಂದಿರು ಅವರ ಕೆಲಸದಲ್ಲಿ ಮಗ್ನರಾಗಿರುವ ಕಾರಣ ಮತ್ತೂ ನಿಮಗೂ ವಯಸ್ಸಾಗಿರುವ ಕಾರಣ ತೊಂದರೆ ಕೊಡಬಾರದೆಂದು ಅಪ್ಪನನ್ನು ಹೆಚ್ಚು ದಿನ ಬಿಟ್ಟಿರಲಾರದ ಕಾರಣ ಅವಳೊಬ್ಬಳೇ ಒಮ್ಮೊಮ್ಮೆ ಬರುತ್ತಾಳೆಂದು ಮಗಳನ್ನು ಸಮರ್ಥಿಸಿ ಕೊಳ್ಳುತ್ತಾರೆ. ಇಷ್ಟೆಲ್ಲಾ ಮಾತುಕತೆಯಾಗುತ್ತಿದ್ದ ಸಮಯದಲ್ಲೇ ಮಗಳು ಲಗುಬಗೆಯಿಂದ ಆಡುಗೆ ಮನೆಯಿಂದ ಬಂದು ಹಾಗೆನಿಲ್ಲಾ ಅತ್ತೇ , ಮುಂದಿನ ಬಾರೀ ನಾವೆಲ್ಲ ಒಟ್ಟಿಗೇ ಅಪ್ಪನ ಮನೆಗೆ ಹೋಗೋಣ. ಆವರಿಗೂ ಹಾಗೂ ಅಪ್ಪನಿಗೂ ಎರಡು ದಿನ ರಜೆ ಹಾಕ್ಸಿ, ನಮ್ಮೂರಿನ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಠಳಗಳನ್ನೆಲ್ಲಾ ನೋಡಿಕೊಂಡು ಬರೋಣ. ಈಗ ಹೇಳೀ ಇವತ್ತು ಏನು ಆಡಿಗೆ ಮಾಡೋಣ ಎಂದು ಕೇಳುತ್ತಾಳೆ. ಆದಕ್ಕೆ ಅವಳ ಆತ್ತೆಯವರು ಹೇಗೂ ನಿಮ್ಮ ತಂದೆಯವರು ಬಂದಿದ್ದಾರೆ. ಅವರಿಗೂ ಅವರ ಕೈ ಅಡುಗೆ ತಿಂದು ಬೇಜಾಗಿರುತ್ತದೆ. ಹಾಗಾಗಿ ನಿನ್ನ ಗಂಡನಿಗೂ ಆಫೀಸಿನಿಂದ ನೇರವಾಗಿ ಬರಲು ಹೇಳು ನಾವೆಲ್ಲಾ ಹೊರಗೆ ಹೋಗಿ ಊಟ ಮಾಡೋಣ ಎಂಬುದನ್ನು ಕೇಳಿ ವೈದ್ಯರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಎಲ್ಲರೂ ಕೂಡಿ ಊಟ ಮಾಡಿಕೊಂಡು ರಾತ್ರಿ ತಡವಾಗಿ ಮನೆಗೆ ಬಂದು ಭುಕ್ತಾಯಾಸದ ಪರಿಣಾಮವಾಗಿ ಎಲ್ಲರೂ ಮಲಗಲು ಅವರವರ ಕೋಣೆಗಳಿಗೆ ಹೋಗುತ್ತಾರೆ. ಇಂತಹ ಸಮಯವನ್ನೇ ಕಾಯುತ್ತಿದ್ದ ಮಗಳು ಅಪ್ಪನ ಕೋಣೆಗೆ ಹೋಗಿ ಆಪ್ಪಾ ನಮ್ಮ ಅತ್ತೆಯವರನ್ನು ನೋಡಿದ್ದಾಯ್ತು, ಮಾತನಾಡಿಸಿದ್ದಾಯ್ತು. ಈಗ ಅವರನ್ನು ಬದುಕಿಸುವ ಪರಿ ಹೇಳು ಎಂದು ಸ್ವಲ್ಪ ಏರು ಧನಿಯಲ್ಲಿ ಕೇಳಿದಾಗ ವೈದ್ಯರೂ ಕೂಡಾ ಅಷ್ಟೇ ಜೋರು ಧನಿಯಲ್ಲಿ ನೋಡಮ್ಮಾ ನೀನು ಹೇಳಿದಾಗ ಸಾಯಿಸಲು, ಕೇಳಿದಾಗ ಬದುಕಿಸಲು ಸಾಧ್ಯವಿಲ್ಲ. ನಾನು ಕೊಟ್ಟ ಔಷಧಿ ಚೆನ್ನಾಗಿಯೇ ಕೆಲಸ ಮಾಡಿದೆ. ಆಗಲೇ ಹೇಳಿದಂತೆ ಇನ್ನೊಂದು ವಾರದಲ್ಲಿ ನಿಮ್ಮ ಆತ್ತೆಯವರ ದೇಹಂತ್ಯವಾಗುತ್ತದೆ. ನೀನು ಅದಕ್ಕೆ ಬೇಕಾಗುವ ಸಿದ್ದತೆ ಮಾಡಿಕೋ ಎಂದು ಧೃಢ ನುಡಿಯಲ್ಲಿ ಕಠುವಾಗಿ ಹೇಳುತ್ತಾರೆ. ಕೊಠಡಿಯಲ್ಲಿ ಸದ್ದು ಗದ್ದಲವಾಗುತ್ತಿದ್ದದ್ದನ್ನು ಕೇಳಿದ ತಾಯಿ ಮತ್ತು ಮಗ ಅವರ ಕೋಣೆಗೆ ಬರುತ್ತಾರೆ. ಅತ್ತೆಯವರನ್ನು ನೋಡಿದ ಸೊಸೆ ಕೂಡಲೇ ಜೋರಾಗಿ ಗದ್ಘತಳಾಗಿ ಅಳುತ್ತಾ, ಅಮ್ಮಾ ನನ್ನನ್ನು ಕ್ಷಮಿಸಿ. ನಿಮ್ಮನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗದೇ, ನಾನು ಮತ್ತು ನಮ್ಮ ತಂದೆಯವರು ಸೇರಿ ನಿಮ್ಮ ಸಾವಿಗೆ ಸಂಚನ್ನು ಹೂಡಿ ನಿಮ್ಮನ್ನು ಕೊಲ್ಲುವ ಪ್ರಯತ್ನ ಮಾಡಿದ್ದೇವೆ. ಈಗ ನಿಮ್ಮನ್ನು ಬದುಕಿಸಲು ಹೋರಾಡುತ್ತಿದ್ದೇವೆ ಎನ್ನುತ್ತಾಳೆ. ಅವಳ ಮಾತನ್ನು ಕೇಳಿದ ಅಮ್ಮಾ ಮತ್ತು ಮಗನ ಬಾಯಿಯಿಂದ ಮಾತೇ ಹೊರಡದೇ ದಿಗ್ಭ್ರಾಂತರಾಗುತ್ತಾರೆ. ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿಸುತ್ತಿದ್ದ ವೈದ್ಯರು ಜೋರಾಗಿ ಚಪ್ಪಾಳೆ ತಟ್ಟುತ್ತಾ, ಗಹ ಗಹಿಸಿ ನಗುತ್ತಾರೆ. ಇಂತಹ ಆತಂಕದ ಕ್ಷಣದಲ್ಲೂ ವೈದ್ಯರ ಈ ವಿಚಿತ್ರ ರೀತಿಯ ವರ್ತನೆ ಎಲ್ಲರಿಗೂ ಆಶ್ಛರ್ಯವನ್ನು ಉಂಟು ಮಾಡುತ್ತದೆ.
ಆಗ ಎಲ್ಲರನ್ನೂ ವೈದ್ಯರು ಮನೆಯ ಹಜಾರಕ್ಕೆ ಕರೆತಂದು ಸಾವಕಾಶವಾಗಿ ಕುಳ್ಳರಿಸಿ ಎಲ್ಲರಿಗೂ ನೀರನ್ನು ಕುಡಿಯಲು ಹೇಳಿ ತಾವೂ ಓಂದು ಲೋಟ ನೀರನು ಕುಡಿದು, ನೀವೆಲ್ಲಾ ಅನಾವಶ್ಯಕವಾಗಿ ಆತಂಕ ಪಡುವ ಅಗತ್ಯವಿಲ್ಲ. ಇಲ್ಲಿ ಯಾರೂ ಯಾವ ತಪ್ಪನ್ನೂ ಮಾಡಿಲ್ಲ ಹಾಗೂ ಯಾರೂ ಸಾಯುವ ಪ್ರಮೇಯವಿಲ್ಲದ ಕಾರಣ ನಿಶ್ವಿಂತಿರಾಗಿರಿ ಎಂದಾಗ ಎಲ್ಲರ ಮನಸ್ಸಿನ ದುಗುಡ ಸ್ವಲ್ಪ ಕಡಿಮೆಯಾಗಿ ವೈದ್ಯರನ್ನೇ ದಿಟ್ಟಿಸಿ ನೋಡ ತೊಡಗುತ್ತಾರೆ.
ವೈದರು ತಮ್ಮ ಮಗಳು ಮೊದಲ ಬಾರಿ ತಮ್ಮ ಮನೆಗೆ ಬಂದು ಅವಳ ಅತ್ತೆಯನ್ನು ಕೊಲ್ಲಲು ಕೇಳಿಕೊಂಡಾಗ ಸ್ವಲ್ಪ ಚಿಂತಿತಗೊಂಡರೂ ಆಳಿಯನ ಮನೆಗೆ ಬಂದ ಎರಡು ಮೂರು ದಿನಗಳೊಳಗೆ ಅಲ್ಲಿನ ಪರಿಸ್ಠಿತಿ ಅವರಿಗೆ ಅರಿವಾಗುತ್ತದೆ. ಅಷ್ಟು ವರುಷ ಪ್ರತಿಯೊಂದಕ್ಕೂ ಅಮ್ಮನನ್ನೇ ಆಶ್ರಯಿಸುತ್ತಿದ್ದ ಮಗ ಸೊಸೆ ಬಂದ ಕೂಡಲೇ ಅಮ್ಮನ ಬದಲಾಗಿ ಹೆಂಡತಿಯನ್ನು ಹಿಂದೆ ಓಡಾಡುವುದನ್ನು ನೋಡಿದ ತಾಯಿಗೆ, ತಾನು ಹೊತ್ತು, ಸಾಕಿ ಸಲಹಿದ ಮಗನನ್ನು ಸೊಸೆ ತನ್ನಿಂದ ಕಿತ್ತುಕೊಳ್ಳುತ್ತಿರುವ ಅನುಭವದ ಕಾರಣ ಸೊಸೆಯ ಮೇಲೆ ಸದಾ ಸಿಡಿ ಮಿಡಿ ಗೊಳ್ಳುತ್ತಿರುತ್ತಾರೆ.
ಅದೇ ರೀತಿ ರಾಣಿಯಂತೆ ಅಪ್ಪನ ಮನೆಯಲ್ಲಿ ಬೆಳೆದು ತನ್ನವರನ್ನೆಲ್ಲಾ ಬಿಟ್ಟು ಗಂಡನ ಮನೆಗೆ ಬಂದು ಆಲ್ಲಿನ ವಾತಾವರಣಕ್ಕೆ ಹೊಂದಿ ಕೊಳ್ಳಲು ಪ್ರಯತ್ನಿಸುತ್ತಿದ್ದ ಸೊಸೆಗೆ ಅತ್ತೆಯ ಈ ವರ್ತನೆ ಸಹಿಸಲಾಗದೇ ಅವಳೂ ಕೂಡಾ ಅತ್ತೆಯೊಂದಿಗೆ ಅಸಹಕಾರ ತೋರುತ್ತಿರುವುದನ್ನು ಮನಗಾಣುತ್ತಾರೆ.
ಮೊದಲೇ ಕೃಶಕಾಯರಾಗಿದ್ದ ಅತ್ತೆಯವರಿಗೆ ಹಾಲು ಹಣ್ಣು ಹಂಪಲಿನೊಂದಿಗೆ ಬೆಳಿಗ್ಘೆ, ಮಧ್ಯಾಹ್ನ, ರಾತ್ರಿ ನೋಡಿಕೊಳ್ಳಲು ಶುರು ಮಾಡಿದ ಸೊಸೆಯ ವರ್ತನೆ ಮೊದ ಮೊದಲು ಆಶ್ಚರ್ಯವೆನಿಸಿದರೂ ಪ್ರತಿನಿತ್ಯ ಅದೇ ಕಾಯಕವನ್ನು ಮುಂದುವರಿಸಿದಾಗ ಅವರಿಗೇ ಅರಿವಿಲ್ಲದಂತೆ ತನ್ನ ಸೊಸೆಯ ಮೇಲಿದ್ದ ಆತಂಕ ಮಾಯವಾಗಿ ಸೊಸೆಯನ್ನು ಮಗಳ ರೀತಿಯಲ್ಲಿ ನೋಡ ತೊಡಗಿ, ಅವಳು ಮಾಡುತ್ತಿದ್ದ ಕೆಲಸಗಳಲ್ಲಿ ಅತ್ತೆಯವರೂ ಕೈ ಜೋಡಿಸುವುದನ್ನೂ ಹಾಗೂ ಸೊಸೆಯ ಮಾಡುತ್ತಿದ್ದ ಕೆಲಸ ಕಾರ್ಯಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸದೇ, ಅವಳ ಜೊತೆ ಆಕೆ ನೋಡುತ್ತಿದ್ದ ಧಾರಾವಾಹಿಗಳನ್ನೇ ಅತ್ತೆಯೂ ಒಟ್ಟಿಗೆ ಕುಳಿತು ನೋಡುತ್ತಾ ಆ ಧಾರವಾಹಿಗಳ ಬಗ್ಗೆ ಮಾತನಾಡುದನ್ನು ಕಂಡು ಹಾಗೂ ಗಂಡ ಮನೆಯಲ್ಲಿದ್ದಾಗ ಗಂಡನ ಜೊತೆ ಹೆಚ್ಚಿನ ಸಮಯವನ್ನು ಕಳೆಯಲು ಅತ್ತೆಯವರೇ ಸೂಚಿಸಿದ್ದನ್ನು ಕೇಳಿ ಅತ್ತೆಯ ಮೇಲಿದ್ದ ಅಸೂಯೆ ಮಾಯವಾಗಿ ಅತ್ತೆಯಲ್ಲಿ ತನ್ನ ಅಗಲಿದ ತಾಯಿಯನ್ನು ಕಾಣತೊಡಗುತ್ತಾಳೆ. ಅತ್ತೆ ಯಾವಾಗ ತನ್ನ ಸೊಸೆಯಲ್ಲಿ ಮಗಳನ್ನು ಕಂಡುಕೊಳ್ಳುತ್ತಾರೋ ಅದೇ ರೀತಿಯಲ್ಲಿಯೇ ಸೊಸೆಯೂ ಕೂಡ ತನ್ನ ಅತ್ತೆಯವರಲ್ಲಿ ಅಗಲಿದ ತನ್ನ ತಾಯಿಯನ್ನು ಕಾಣುತ್ತಾಳೆ. ಆಗ ಮನೆಯಲ್ಲಿದ್ದ ಆತಂಕಗಳೆಲ್ಲಾ ಮಾಯವಾಗಿ ಸಂಭ್ರಮದ ವಾತಾವರಣ ಮೂಡಿ ಅತ್ತೆಯವರನ್ನು ಕೊಲ್ಲಲು ರೂಪಿಸಿದ್ದ ಸಂಚಿಗೆ ತನ್ನನ್ನೇ ತಾನು ಹಳಿದು ಕೊಂಡು ಆತ್ತೆಯವನ್ನು ಬದುಕಿಸಿಕೊಳ್ಳಲು ಅಪ್ಪನ ಮನೆಗೆ ಮತ್ತೊಮ್ಮೆ ಹೋಗಿರುತ್ತಾಳೆ.
ಇದನ್ನೆಲ್ಲಾ ವೈದ್ಯರು ಹೇಳುತ್ತಿದ್ದನ್ನು ತದೇಕ ಚಿತ್ತದಿಂದ ಕೇಳುತ್ತಿದ್ದ ಅತ್ತೆ-ಸೊಸೆ (ತಾಯಿ-ಮಗಳು) ತಮ್ಮ ತಮ್ಮ ತಪ್ಪಿನ ಅರಿವಾಗಿ ಪರಸ್ಪರ ಒಬ್ಬರನ್ನೊಬ್ಬರು ತಬ್ಬಿಕೊಂಡು ಧಾರಾಕಾರವಾಗೆ ಆನಂದ ಭಾಷ್ಪವನ್ನು ಸುರಿಸಿ ಪರಸ್ಪರ ಸಂತೈಸಿ ಕೊಳ್ಳುತ್ತಾರೆ.
ಇದನ್ನೆಲ್ಲಾ ಕುತೂಹಲದಿಂದ ಬಿಟ್ಟ ಬಾಯಿ ಬಿಟ್ಟು ಕೊಂಡು ನೋಡುತ್ತಿದ್ದ ಅಳಿಯ ತನಗರಿವಿಲ್ಲದಂತೆಯೇ ತನ್ನ ಮನೆಯಲ್ಲಿದ್ದ ಸಮಸ್ಯೆಯನ್ನು ಪರಿಹರಿಸಿದ್ದ ತನ್ನ ಮಾವನವರ ಕಾಲಿಗೆ ಎರಗಿದಾಗ, ಅಳಿಯನ್ನು ತೋಳಿನಲ್ಲಿ ಆಲಂಗಿಸಿ ಕೊಂಡು ಸಮಾಧಾನ ಪಡಿಸುತ್ತಾರೆ ವೈದ್ಯರು.
ಮಾವಾ-ಅಳಿಯನ ಅಪ್ಪುಗೆಯನ್ನು ತೆರೆದ ಕಣ್ಣುಗಳಿಮ್ದ ನೋಡುತ್ತಿದ್ದ ಮಗಳು ತಾನೂ ಅಪ್ಪನ ತೋಳಿಗೊರಗಿ ಪಿಸು ಮಾತಿನಲ್ಲಿ ಕೇಳುತ್ತಾಳೆ, ಅದೆಲ್ಲಾ ಸರಿ ಅಪ್ಪಾ ನೀನು ಕೊಟ್ಟ ಮಾತ್ರೆ ಕೆಲಸ ಮಾಡಲೇ ಇಲ್ಲ. ನೀನೆಂತಾ ವೈದ್ಯ ಎಂದು ಹಂಗಿಸುತ್ತಾಳೆ. ಆಗ ವೈದ್ಯರು ನಗು ನಗುತ್ತಲೇ ನಾನು ಕೊಟ್ಟ ವಿಟಮಿನ್ ಮಾತ್ರೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದ ಪರಿನಾಮವಾಗಿಯೇ ಕೃಶಕಾಯರಾಗಿದ್ದ ನಿಮ್ಮ ಅತ್ತೆಯವರಿಂದು ಮೊದಲಿಗಿಂತಲೂ ಆರೋಗ್ಯವಾಗಿದ್ದಾರೆ. ಮಾಡಿದ ತಪ್ಪನ್ನು ಮರೆತು ನಾನು ಮದುವೆಯ ಸಮಯದಲ್ಲಿ ನಿನ್ನ ಬಳಿಯಲ್ಲಿ ಕೇಳಿದಂತೆ, ಈಗ ಹೇಳು ನಾನು ಅಜ್ಜನಾಗುವುದು ಯಾವಾಗ ಎಂದು ಪ್ರಶ್ನಿಸುತ್ತಾರೆ.
ಆಪ್ಪನ ಮಾತನ್ನು ಕೇಳಿದ ಮಗಳು ನಾಚಿ ನೀರಾಗಿ ಅಪ್ಪನ ತೋಳಿನಿಂದ ಹೊರಬಂದು ಪತಿಯ ತೋಳಿಗೆ ಓರಗಿ ಆದಷ್ಟು ಶೀಘ್ರದಲ್ಲಿಯೇ ತಿಳಿಸುತ್ತೇವೆ ಎಂದು ನಸುನಗುತ್ತಾಳೆ
ಈಗ ಹೇಳಿ ಸಂಸಾರದ ದೋಣಿ ಸುಖಃವಾಗಿ ಸಾಗಲು ಕೇವಲ ಗಂಡು-ಹೆಣ್ಣು ಜಾತಕ ಕೂಡಿದ್ರೆ ಮಾತ್ರ ಸಾಲದು. ಅತ್ತೆ-ಸೊಸೆಯರ ಅನ್ಯೋನ್ಯತೆಯೂ ಇರಬೇಕಲ್ವೇ?
ಏನಂತೀರೀ?