ಮಣ್ಣಿನ ಋಣ

ಮೊನ್ನೆ ಶಿವರಾತ್ರಿಯ ಹಬ್ಬದ ಪ್ರಯುಕ್ತ ಮಲ್ಲೇಶ್ವರದ ಕಾಡುಮಲ್ಲೇಶ್ವರ ಮತ್ತು ದಕ್ಷಿಣ ಮುಖ ನಂದಿ ತೀರ್ಥ ದೇವಸ್ಧಾನಕ್ಕೆ ಹೋಗಿದ್ದೆ. ಆ ದೇವಸ್ಥಾನಗಳ ಸುತ್ತ ಮುತ್ತಲಿನ ಪ್ರದೇಶಗಳನ್ನು ನೋಡುತ್ತಿದ್ದಾಗ. ನಮಗೆ ಋಣವಿದ್ದಿದ್ದಲ್ಲಿ ಇದೇ ಜಾಗದಲ್ಲಿ ನಮ್ಮ ಮನೆ ಇರಬೇಕಿತ್ತು. ನಾವುಗಳು ಐಶಾರಾಮ್ಯಾವಾಗಿ ಇರಬಹುದಿತ್ತೇನೋ ಎಂದು ಯೋಚಿಸಲು ಕಾರಣವಿಷ್ಟೆ. ನಮ್ಮ ತಾತ ದಿ. ಗಮಕಿ ನಂಜುಂಡಯ್ಯನವರು ಖ್ಯಾತ ವಾಗ್ಗೇಯಕಾರರು, ಸಾಹಿತಿಗಳು ಮತ್ತು ಅತ್ಯುತ್ತಮ ಗಮಕಿಗಳು. ಮೇಲಾಗಿ ನಮ್ಮ ಊರಾದ ಬಾಳಗಂಚಿಯ ಶಾನುಭೋಗರೂ ಹೌದು. ಆಗಿನ ಕಾಲದಲ್ಲಿ ಅಲ್ಲಿಂದ ಬೆಂಗಳೂರಿನ ಸಾಹಿತ್ಯ ಪರಿಷತ್ತು , ಗಮಕ ಕಲಾಪರಿಷತ್ತುಗಳಿಗೆ ಆಗಾಗ ಕುದುರೆ ಮೇಲೆ ಬಂದು ಹೋಗುತ್ತಿದ್ದರು. ಕೆಲವು ಬಾರಿ ಒಂದೆರಡು ದಿನ ಬೆಂಗಳೂರಿನಲ್ಲಿಯೇ ಉಳಿಯಬೇಕಾದ ಸಂದರ್ಭ ಬಂದಲ್ಲಿ ಮಲ್ಲೇಶ್ವರದಲ್ಲಿ ತಮ್ಮ ಸ್ನೇಹಿತರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದರಂತೆ. ಹಾಗೆ ಉಳಿದುಕೊಂಡ ಸಮಯದಲ್ಲಿ ತಮ್ಮ ಸ್ನೇಹಿತರಿಗೆ ದುಡ್ಡಿನ ಅವಶ್ಯಕತೆ ಇದ್ದುದ್ದರಿಂದ ಕಾಡುಮಲ್ಲೇಶ್ವರದ ಸಮೀಪ ಅವರ ಬಳಿಯಿದ್ದ ಸುಮಾರು ಒಂದು ಎಕರೆ ಜಾಗವನ್ನು ಅಂದಿನ ಕಾಲದಲ್ಲೇ ಇಪ್ಪತ್ತು ರೂಪಾಯಿಗಳಿಗೆ ಕೊಂಡು ಕೊಂಡು ಬೆಂಗಳೂರಿಗೆ ಬಂದಾಗಲೆಲ್ಲಾ ಅಲ್ಲಿ ತಮ್ಮ ಕುದುರೆಯನ್ನು ಮೇಯಲು ಬಿಡುತ್ತಿದ್ದರಂತೆ. ಮುಂದೆ ನಮ್ಮ ತಾತನವರಿಗೇ ತುರ್ತಾಗಿ ಹಣ ಬೇಕಿದ್ದರಿಂದ, ಅವರು ಅಂದು ಕೊಂಡಿದ್ದ ಜಾಗವನ್ನು ನಲವತ್ತು ರೂಪಾಯಿಗಳಿಗೆ ಮಾರಿ ಇಪ್ಪತ್ತು ರೂಪಾಯಿ ಲಾಭ ಬಂದಿತಲ್ಲಾ ಎಂದು ಸಂತೋಷದಿಂದ, ಹಣವನ್ನು ಬಳೆಸಿಕೊಂಡಿದ್ದರಂತೆ. ಬಹುಶಃ ಅವರಿಗೆ ಆ ಜಾಗದ ಬೆಲೆ ಮುಂದೆ ಎಷ್ಟಾಗ ಬಹುದಂಬ ಅರಿವಿದ್ದಲ್ಲಿ ಅವರು ಹಾಗೆ ಮಾರದೇ ಇರುತ್ತಿದ್ದರೋ ಏನೋ?. ಅವರು ಅಂದು ಮಾರಿದ ಜಾಗ ಇಂದು ಹಲವಾರು ಜನರಲ್ಲಿ ಹಂಚಿ ಹೋಗಿ ದೊಡ್ಡ ದೊಡ್ಡ ಬಂಗಲೆಗಳು ತಲೆ ಎತ್ತಿವೆ. ಈಗ ನಾವು ಅವರ ಬಳಿ ಹೋಗಿ ನೀವು ನಮ್ಮ ಜಾಗವನ್ನು ಅನುಭವಿಸುತ್ತಿದ್ದೀರಿ ಎನ್ನಲು ಸಾಧ್ಯವೇ? ಹೆಣ್ಣು, ಹೊನ್ನು ಮತ್ತು ಮಣ್ಣು, ಋಣವಿದ್ದವರು ಮಾತ್ರವೇ ಅನುಭವಿಸಲು ಸಾಧ್ಯ. ಒಮ್ಮೆ ಇನ್ನೊಬ್ಬರಿಗೆ ನಮ್ಮ ವಸ್ತುವನ್ನು ಕೊಟ್ಟ ಮೇಲೆ ಅದರ ಫಲಾನುಫಲಗಳು ಕೊಂಡವರದ್ದೇ ಆಗುವುದು ಹೊರತು ಮಾರಿದವರದ್ದಲ್ಲಾ ಅಲ್ಲವೇ

ಏನಂತೀರೀ?

4 thoughts on “ಮಣ್ಣಿನ ಋಣ

  1. ಹೌದು, ನಮ್ಮ ತಂದೆಯ ಪಾಲಿನ ಆಸ್ತಿಯ ಜಾಗದಲ್ಲಿ ವಿಶ್ವವಿಖ್ಯಾತ ದೇವಸ್ಥಾನದ ಅತಿಥಿಗೃಹ ವಿದೆ. ವ್ಯಾಪ್ತಿಯೇ ಬೇರೆ ಪ್ರಾಪ್ತಿಯೇ ಬೇರೆ.

    Liked by 1 person

Leave a comment