ಉಡುದಾರದ ಪಜೀತಿ

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅನೇಕ ಪದ್ದತಿಗಳು ನಮ್ಮ ಜೀವನದ ಅವಿಭಾಜ್ಯವಾಗಿ ರೂಢಿಯಲ್ಲಿರುತ್ತವೆ. ಅನೇಕರಿಗೆ ಅದರ ಅವಶ್ಯಕತೆಯಾಗಲೀ ಅದರ ಅನುಕೂಲವಾಗಲೀ ವೈಜ್ಞಾನಿಕ ಕಾರಣಗಳಾಗಲೀ ಗೊತ್ತಿಲ್ಲದಿದ್ದರೂ ಹಿರಿಯರಿಂದ ಬಂದ ಸಂಪ್ರದಾಯ ಎಂದು ಅದಕ್ಕೆ ಪ್ರತಿರೋಧ ತೋರದೆ ಚಾಚೂ ತಪ್ಪದೆ ಅದನ್ನು ಆಚರಿಸಿಕೊಂಡು ಬರುತ್ತಾರೆ. ಅಂತಹ ಪದ್ದತಿಯಲ್ಲಿ ಗಂಡು ಮಕ್ಕಳ ಸೊಂಟಕ್ಕೆ ಕಟ್ಟುವ ಉಡುದಾರವೂ ಹೌದು. ಹಾಗೆ ಕಟ್ಟಿ ಕೊಂಡ ಉಡುದಾರವೇ ನಮ್ಮ ಶಂಕರನನ್ನು ಪಜೀತಿಗೆ ಸಿಕ್ಕಿಸಿದ ಮೋಜಿನ ಪ್ರಸಂಗವನ್ನೇ ಇಲ್ಲಿ ಹೇಳ ಹೊರಟಿದ್ದೇನೆ.

ಉಡುದಾರ ಧರಿಸುವುದು ಹಿಂದೂ ಸಂಪ್ರದಾಯಗಳಲ್ಲಿ ಒಂದಾಗಿದ್ದು, ಬಹಳಷ್ಟು ಗಂಡು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಉಡುದಾರದ ಅಭ್ಯಾಸ ಮಾಡಿಸಿರುತ್ತಾರೆ. ಹಾಗೆ ಚಿಕ್ಕ ಮಕ್ಕಳಿಗೆ ಉಡುದಾರ ಕಟ್ಟಿದರೆ ಅವರ ಬೆಳವಣಿಗೆಯ ಸಮಯದಲ್ಲಿ ಮೂಳೆಗಳು, ಖಂಡಗಳು ಸರಿಯಾದ ಪದ್ದತಿಯಲ್ಲಿ ವೃದ್ಧಿಯಾಗುತ್ತದೆಯಂತೆ. ಮುಖ್ಯವಾಗಿ ಗಂಡು ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪುರುಷಾಂಗ ಯಾವುದೇ ರೀತಿಯ ಅಸಮತೋಲನೆಗೆ ಗುರಿಯಾಗದೇ ಸರಿಯಾದ ರೀತಿಯಲ್ಲಿ ಬೆಳವಣಿಗೆಯಾಗಲು ಸಹಕಾರಿಯಾತ್ತದೆಯಂತೆ. ಉಡುದಾರ ಧರಿಸುವುದರಿಂದ ರಕ್ತ ಪ್ರಸರಣ ಕೂಡ ಉತ್ತಮಗೊಂಡು, ಗಂಡಸರಿಗೆ ಹರ್ನಿಯಾ ಕಾಯಿಲೆಯಿಂದಲೂ ಕಾಪಾಡುತ್ತದೆ ಎಂದು ವೈಜ್ಣಾನಿಕವಾಗಿಯೂ ನಿರೂಪಿಸಲ್ಪಟ್ಟಿದೆ.

ಪ್ರತೀ ತಾಯಿಯರೂ ತಮ್ಮ ಮಕ್ಕಳಿಗೆ ಉಡುದಾರ ಕಟ್ಟುವಂತೆ ನಮ್ಮ ಶಂಕ್ರನಿಗೂ ಅವರ ತಾಯಿ ಸೊಂಟಕ್ಕೆ ದಾರದ ಉಡುದಾರ ಅದರ ಜೊತೆ ರಚ್ಚೆ ತಾಳಿಯನ್ನೂ ಕಟ್ಟಿದ್ದರು. ಶಂಕ್ರ ದೊಡ್ಡವನಾದ ಮೇಲೆ ಅವನ ಹುಟ್ಟು ಹಬ್ಬವೊಂದಕ್ಕೆ ಉಡುಗೊರೆಯಾಗಿ ಬೆಳ್ಳಿಯ ಉಡುದಾರವನ್ನು ಕಟ್ಟಿ ಸಂತೋಷ ಪಟ್ಟಿದ್ದರು. ಕೆಲಸದ ನಿಮಿತ್ತ ಶಂಕ್ರ ದೇಶದ ನಾನಾ ಭಾಗಗಳಿಗೆ ವಿಮಾನ ಪ್ರಯಾಣ ಮಾಡಬೇಕಾದಾಗ, ತಪಾಸಣಾ ಸಮಯದಲ್ಲಿ ಉಡುದಾರ ಸುಂಯ್ ಎಂದು ಶಭ್ಧ ಮಾಡಿದರೂ ನಮ್ಮ ದೇಶದ ರಕ್ಷಣಾ ಸಿಬ್ಬಂಧಿಗಳಿಗೆ ಉಡುದಾರದ ಮಹತ್ವ ಮತ್ತು ಸಂಪ್ರದಾಯ ತಿಳಿದಿದ್ದರಿಂದ ಯಾವುದೇ ಸಮಸ್ಯೆಗಳು ಆಗಿರಲಿಲ್ಲ. ಆದೊಮ್ಮೆ ಮಲೇಷಿಯಾಕ್ಕೂ ಹೋಗಿದ್ದಾಗಲೂ ಇದೇ ರೀತಿಯ ಪ್ರಸಂಗ ಬಂದಾಗ ಅಲ್ಲಿಯ ರಕ್ಷಣಾ ಸಿಬ್ಬಂಧಿಯೂ ತಮೀಳನೇ ಆಗಿದ್ದರಿಂದ ಆತನೂ ಕೂಡ ಯಾವುದೇ ರೀತಿಯ ತೊಂದರೆ ಕೊಟ್ಟಿರಲಿಲ್ಲವಾದ್ದರಿಂದ ಶಂಕ್ರನ ಸೊಂಟದಲ್ಲಿ ಬೆಳ್ಳಿ ಉಡುದಾರ ಇನ್ನೂ ವಿರಾಜಮಾನವಾಗಿತ್ತು.

ಅದೊಮ್ಮೆ ಶಂಕ್ರ ತನ್ನ ಕುಟುಂಬದೊಡನೆ ಅಮೇರಿಕಾ ಪ್ರವಾಸದ ಸಲುವಾಗಿ ಲಾಸಏಂಜಲೀಸ್ ವಿಮಾನ ನಿಲ್ದಾಣದಲ್ಲಿ ಕಾಲಿಟ್ಟೊಡನೆಯೇ ನಾನಾ ರೀತಿಯ ತಪಾಸಣೆಗಳು ಶುರುವಾದವು. ಹಾಗೆ ತಪಾಸಣೆ ಮಾಡುತ್ತಿದ್ದ ಸಂಧರ್ಭದಲ್ಲಿಯೇ ಯಥಾಪ್ರಕಾರ ಬೆಳ್ಳಿಯ ಉಡುದಾರ ಸುಂಯ್ಎಂದು ಶಭ್ಧ ಮಾಡಿದಾಗ ಅಲ್ಲಿಯ ರಕ್ಷಣಾ ಸಿಬ್ಬಂಧಿ ಆಶ್ವರ್ಯ ಚಕಿತನಾಗಿ ಅದೇನೆಂದು ಕೇಳಿದ. ಶಂಕ್ರ ಎಂದಿನಂತೆ ಇದು ನಮ್ಮ ಸಂಪ್ರದಾಯ. ಪ್ರತಿಯೊಬ್ಬ ಹಿಂದೂ ಗಂಡು ಮಕ್ಕಳು ಇದನ್ನು ಧರಿಸುತ್ತಾರೆ. ಕೆಲವರು ದಾರದದ್ದನ್ನು ಧರಿಸಿದರೆ ಇನ್ನೂ ಕೆಲವರು ಬೆಳ್ಳಿದಾರವನ್ನು ಧರಿಸುತ್ತಾರೆ ಎಂದು ತಿಳಿಸಲು ಪ್ರಯತ್ನಿಸಿದ. ಕೇಳಿದ್ದನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿದ್ದಲ್ಲಿ ಎಲ್ಲವೂ ಅರ್ಥವಾಗುತ್ತದೆ. ಆದರೆ ಪ್ರತಿಯೊಂದನ್ನೂ ಸಂಶಯಾತ್ಮಕವಾಗಿ ನೋಡುವವರಿಗೆ ಇತರರು ಹೇಳಿದ್ದು ಯಾವುದೂ ಅವರ ಕಿವಿಗೇ ಬೀಳುವುದಿಲ್ಲ. ಅಂತೆಯೇ ಅಲ್ಲಿಯ ಸಿಬ್ಬಂಧಿಯೂ ತಾವೇನೋ ಭಯೋತ್ಪಾದಕನನ್ನು ಹಿಡಿದಿದ್ದೇವೆ ಎನ್ನುವ ರೀತಿಯಲ್ಲಿ ಕ್ಷಣ ಮಾತ್ರದಲ್ಲಿಯೇ ಹತ್ತಾರು ಸಿಬ್ಬಂಧಿಗಳು ಶಂಕ್ರನನ್ನು ಸುತ್ತುವರಿದರು. ತಕ್ಷಣವೇ ಅವನನ್ನು ಪಕ್ಕದ ಕೋಣೆಗೆ ಹೆಚ್ಚಿನ ತಪಾಸಣೆಗೆ ಕರೆದುಕೊಂಡು ಹೋಗಿ ಅಂಗಿಯನ್ನು ಬಿಚ್ಚಿಸಿ ತಪಾಸಣೆ ಮಾಡಲು ಆರಂಭಿಸಿದ್ದು ಶಂಕರನಿಗೆ ಮುಜುಗರ ತಂದಿತ್ತು. ಇದೇನಿದು ತಮ್ಮ ದೇಶಕ್ಕೆ ಬಂದ ಅತಿಥಿಗಳನ್ನು ಈ ರೀತಿಯಾಗಿ ನೋಡಿಕೊಳ್ಳುವುದಾ ಎಂದು ಪ್ರಶ್ನಿಸಿದ್ದಕ್ಕೆ, ನಾವು ಸಂಪೂರ್ಣವಾಗಿ ಪರಿಶೀಲಿಸುವ ವರೆಗೂ ಸ್ವಲ್ಪ ಮಾತನಾಡದಿದ್ದರೆ ಚೆನ್ನಾಗಿರುತ್ತದೆ ಎಂಬ ಉದ್ಧಟತನದ ಇಲ್ಲವೇ ಉಡಾಫೆ ಮಾತು ಕೇಳಿ ಶಂಕ್ರನಿಗೆ ಅವಮಾನವೂ ಆಯಿತು. ಅಷ್ಟರಲ್ಲಿ ಬಂದ ಮತ್ತೊಬ್ಬ ಹಿರಿಯ ಅಧಿಕಾರಿ ಜಂಟಲ್ಮೆನ್ ನಾವು ಈ ಲೋಹದ ದಾರವನ್ನು ತೆಗೆಯಬಹುದೇ? ಎಂದು ಕೇಳಿದಾಗ ಶಂಕ್ರನಿಗೆ ಒಳಗೊಳಗೆ ರಕ್ತವೂ ಕುದಿಯ ತೊಡಗಿತು. ಸರಿಯಾದ ರೀತಿಯಲ್ಲಿ ಮೊದಲೇ ಕೇಳಿದ್ದರೆ ಶಂಕ್ರ ಉಡುದಾರವನ್ನು ಬಿಚ್ಚಿಬಿಡುತ್ತಿದ್ದನೇನೋ?. ಆದರೆ ಅಷ್ಟೆಲ್ಲಾ ಅವಮಾನವಾದ ಮೇಲೇ ಅವನಲ್ಲೂ ತನ್ನ ರಾಷ್ಟ್ರೀಯತೆ ಮತ್ತು ಹಿಙದೂ ಸಂಪ್ರದಾಯ ಜಾಗೃತವಾಯಿತು. ಅಧಿಕಾರಿಗಳೇ, ದಯವಿಟ್ಟು ಕ್ಷಮಿಸಿ. ಈ ರೀತಿಯಾಗಿ ಸೊಂಟಕ್ಕೆ ದಾರ ಕಟ್ಟುವುದು ನಮ್ಮ ಸಂಪ್ರದಾಯ ಅದನ್ನು ತೆಗೆಯಲು ಸಾಧ್ಯವಿಲ್ಲ. ನಿಮ್ಮ ನಿಯಮಗಳ ಪ್ರಕಾರ ತಪಾಸಣೆ ನಡೆಸಿರಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಸ್ಪಷ್ಟವಾಗಿ ಮತ್ತು ಅಷ್ಟೇ ಖಡಕ್ಕಾಗಿ ಹೇಳಿದ ಶಂಕರ. ಶಂಕ್ರನ ಈ ಮಾತುಗಳು ಅಲ್ಲಿಯ ಅಧಿಕಾರಿಗೆ ಏನೆನ್ನಿಸಿತೋ ಕಾಣೆ. ಸಾರಿ ಜಂಟಲ್ಮನ್, ನಿಮಗೆ ತೊಂದರೆ ಕೊಡುವ ಇರಾದೆ ನಮಗಿಲ್ಲ. ನಮ್ಮ ಕರ್ತವ್ಯ ನಾವು ನಿಭಾಯಿಸುತ್ತಿದ್ದೇವೆ. ದಯವಿಟ್ಟು ಸಹಕರಿಸಿ ಎಂದು ಇನ್ನೂ ಸ್ವಲ್ಪ ಕಾಲ ಅದೂ ಇದೂ ಪರೀಕ್ಷೇ ಮಾಡಿ ಕೊನೆಗೂ ಶಂಕ್ರನನ್ನು ಬಂಧ ಮುಕ್ತಗೊಳಿಸಿದರು.

ಇದಾವುದರ ಪರಿವೇ ಇಲ್ಲದೇ ತಮ್ಮ ತಪಾಸಣೆ ಮುಗಿಸಿ ಅಲ್ಲಿಯೇ ತನ್ನ ಪತಿರಾಯನ ಆಗಮನಕ್ಕಾಗಿ ಕಾಯುತ್ತಿದ್ದ ಶಂಕ್ರನ ಮಡದಿಗೆ ತನ್ನ ಪತಿರಾಯ ಎಷ್ಟು ಹೊತ್ತಾದರೂ ಬಾರದಿರುವುದು ಗಾಭರಿ ತರಿಸಿತ್ತು. ಶಂಕ್ರನ ನೋಡಿದ ಕೂಡಲೇ ಓಡಿ ಬಂದು ತಬ್ಬಿಕೊಂಡು ಏನಾಯ್ತು ರೀ? ಯಾಕೆ ಇಷ್ಟು ಹೊತ್ತು ತಡ ಎಂದಾಗ, ಆದಾಗಲೇ ತಪಾಸಣೆಯಿಂದ ಸುಸ್ತಾಗಿದ್ದ ಶಂಕ್ರ ಸರಿ ಸರಿ ಮತ್ತೊಂದು ವಿಮಾನಕ್ಕೆ ತಡವಾಗುತ್ತದೆ. ಹೋಗುವಾಗ ಎಲ್ಲವನ್ನೂ ವಿವರವಾಗಿ ತಿಳಿಸುತ್ತೇನೆ ಎಂದು ಹೇಳಿ ಲಾಸ್ಏಂಜಲೀಸ್ನಿಂದ ಮತ್ತೊಂದು ವಿಮಾನ ಹಿಡಿದು ತಲುಪಬೇಕಾದ ಸ್ಥಳವನ್ನು ತಲುಪುವ ಹೊತ್ತಿಗೆ ಸಾಕು ಸಾಕಾಗಿ ಹೋಗಿತ್ತು.

ಒಂದು ತಿಂಗಳ ಅಮೇರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗುವಾಗಲೂ ಮತ್ತೆದೇ ಉಡುದಾದರ ಪಜೀತಿ ಲಾಸ್ ಏಂಜಲೀಸ್ ವಿಮಾನ ನಿಲ್ಡಾಣದಲ್ಲಿ ಆಯಿತಾದರೂ ಹಿಂದಿನಷ್ಟು ಪಜೀತಿ ಇರಲಿಲ್ಲ. ಬೆಂಗಳೂರಿಗೆ ಬಂದ ತಕ್ಷಣವೇ ಶಂಕ್ರ ತನ್ನ ತಂದೆ ತಾಯಿಯರಿಗೆ ತನ್ನ ಬೆಳ್ಳಿ ಉಡುದಾರದಿಂದ ಆತನಿಗಾದ ಪಜೀತಿ, ಮುಜುಗರ ಮತ್ತು ಅವಮಾನಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದರೆ ಮನೆಯವರಿಗೆಲ್ಲರೂ ನಗು.

ಅವರೆಲ್ಲರೂ ಆ ರೀತಿಯಾಗಿ ಗಹ ಗಹಿಸಿ ನಗುತ್ತಿದ್ದದ್ದನ್ನೂ ನೋಡಿದ ಶಂಕ್ರ, ಹೌದು ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ ನನ್ನ ಪರಿಸ್ಥಿತಿ. ಈ ಬೆಳ್ಳೀ ಉಡುದಾರದಿಂದಲೇ ತಾನು ಆಷ್ಟೊಂದು ಪಜೀತಿ ಅನುಭವಿಸಬೇಕಾಯಿತು ಎಂದು ಹೇಳಿ, ತಾಯಿಯ ಅಪ್ಪಣೆಯಂತೆಯೇ ಬೆಳ್ಳಿ ಉಡುದಾರವನ್ನು ಬಿಚ್ಚಿಹಾಕಿದ ಶಂಕ್ರ. ಉಡುದಾರ ಲೋಹದಿದ್ದರೆ ತಾನೇ ತೊಂದರೆ, ದಾರದ್ದಾದರೆ ಏನೂ ತೊಂದರೆ ಇಲ್ಲವಲ್ಲಾ ಎಂದೆಣಿಸಿ, ಅಂದು ಸಂಜೆಯೇ ಅವನ ತಂದೆ ಕಪ್ಪು ಬಣ್ಣದ ಉಡುದಾರ ತಂದು
ಶಂಕ್ರನ ಸೊಂಟಕ್ಕೆ ಕಟ್ಟುವ ಮೂಲಕ, ಒಂದು ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವಂತೆ ಸಂಪ್ರದಾಯ ಮತ್ತು ಸಂಸ್ಕೃತಿಯನ್ನೂ ಉಳಿಸಿದಂತಾಯಿತು ಮತ್ತು ಮುಂದೆಂದೂ ಅದೇ ಉಡುದಾರದಿಂದ ತಮ್ಮ ಮಗ ಪಜೀತಿಯನ್ನು ಅನುಭವಿಸುವ ಮುಜುಗರವೂ ತಪ್ಪಿತ್ತು. ಇದಕ್ಕೇ ಅಲ್ಲವೇ ಹೇಳುವುದು ತಂದೆ ತಾಯಿಯರ ವಾತ್ಸಲ್ಯ ಮತ್ತು ಮಮತೆ.

ಏನಂತೀರೀ?

ನಿಮ್ಮವನೇ‌ ಉಮಸುತ

8 thoughts on “ಉಡುದಾರದ ಪಜೀತಿ

  1. ನಿಮ್ಮ ಕಥೆಗಳು ಸತ್ಯಕ್ಕೆ ಕನ್ನಡಿಹಿಡಿದಂತೆ, ಸೊಗಸಾದ ನಿರೂಪಣೆ,ನವಿರಾದ ಹಾಸ್ಯ , ಸುಲಭವಾಗಿ ಓದಿಸಿಕೊಂಡುಹೋಗುವಂತ ಶೈಲಿ ಇಷ್ಟ ಆಯಿತು. ಮುಂದುವರೆಸಿ

    Liked by 1 person

  2. ಬಹಳ ಮಜವಾಗಿದೆ, ಈ ವಿಷಯ ನನಗೆ ತಿಳಿದಿರಲಿಲ್ಲ. ಅಮೆರಿಕನ್ನರು ರಕ್ಷಣಾ ವಿಚಾರದಲ್ಲಿ ಅಷ್ಟು ಕಟ್ಟುನಿಟ್ಟಾಗಿ ಇರುವುದರಿಂದ ಮತ್ತೊಂದು ೯/೧೧ ಕ್ಕೆ ಅವಕಾಶ ನೀಡಿಲ್ಲ.

    Liked by 1 person

Leave a comment