ಅವರೆಲ್ಲರೂ 20-25 ರ ವಯಸ್ಸಿನ ಆಸುಪಾಸಿನಲ್ಲಿದ್ದ ವಿದ್ಯಾವಂತ ಮತ್ತು ಬುದ್ಧಿವಂತ ಯುವಕರು. ಆ ವಯಸಿನಲ್ಲಿ ಕೆಲಸಕ್ಕೆ ಸೇರಿಕೊಂಡು ಕೈ ತುಂಬಾ ಹಣ ಸಂಪಾದಿಸಿ ಐಶಾರಾಮ್ಯವಾದ ಜೀವನ ನೆಡೆಸಬಹುದಿತ್ತು. ಆದರೆ ಆ ಯುವಕರು ಆಯ್ಕೆಮಾಡಿಕೊಂಡಿದ್ದು ದೇಶ ಸೇವೆ. ಮಾರ್ಚ್ 23. 1931 ರಂದು ಭಾರತ ದೇಶದ ಆ ಮೂವರು ಮಹಾನ್ ಚೇತನಗಳಾದ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ಅವರುಗಳು ಮೇರಾ ರಂಗ್ ದೇ ಬಸಂತಿ ಚೋಲಾ… ಎಂದು ಗುಣಗಾನ ಮಾಡುತ್ತಾ ಅತ್ಯಂತ ಸಂತೋಷದಿಂದಲೇ ತಾನು ಮೊದಲು, ನಾನು ಮೊದಲು ಎಂದು ಸಂತೋಷದಿಂದ ಕೊರಳಿಗೆ ಹಾಕಿದ್ದ ಉರುಳನ್ನು ಚುಂಬಿಸಿ ನೇಣಿನ ಕುಣಿಕೆಗೆ ಕೊರಳನ್ನೊಡ್ಡಿದ ತ್ಯಾಗ ಮತ್ತು ಬಲಿದಾನದ ದಿನ.
ಸ್ವಾತಂತ್ಯ್ರ ಸಂಗ್ರಾಮದ ಸಮಯದಲ್ಲಿ ಗಾಂಧೀಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಉಪವಾಸ, ಧರಣಿ ಸತ್ಯಾಗ್ರಹ ರೂಪದಲ್ಲಿ ಶಾಂತಿಯುತವಾಗಿ ಅಹಿಂಸಾ ಮಾರ್ಗವಾದ ಹೋರಾಟಗಳು ಬಿಸಿರಕ್ತದ ಅನೇಕ ತರುಣರುಗಳಿಗೆ ಇಷ್ಟವಾಗುತ್ತಿರಲಿಲ್ಲ. ಅವರದ್ದೇನಿದ್ದರೂ ದಂಡ ದಶಗುಣಂ ಭವೇತ್ ಎನ್ನುವಂತೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆದು ಹಾಕುವಂತೆ ಬ್ರಿಟಿಯರ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಿಯಾದರೂ ಅವರನ್ನು ಭಾರತದಿಂದ ತೊಲಗಿಸಬೇಕೆಂದು ಉಗ್ರರೂಪದಲ್ಲಿ ಹೋರಾಟಮಾಡುತ್ತಿದ್ದ ಅನೇಕ ಯುವಕರುಗಳಲ್ಲಿ ಭಗತ್ ಸಿಂಗ್, ಚಂದ್ರಶೇಖರ ಆಝಾದ್ ರಾಜಗುರು, ಸುಖದೇವ್ ಮುಂತಾದವರು ಅಗ್ರಗಣ್ಯರು.
ಭಾರತೀಯರು ಕೇವಲ ಅಂಹಿಂಸಾವಾದಿಗಳಲ್ಲ. ನಮ್ಮಲ್ಲೂ ಕ್ಷಾತ್ರವಿದೆ ಎಂದು ತೋರಿಸುವ ಸಲುವಾಗಿಯೇ, ಅದೊಂದು ದಿನ ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಭಗತ್ ಮತ್ತು ಸಹಚರರು ಕಡಿಮೆ ತಾಕತ್ತಿನ ಬಾಂಬುಗಳು ಸ್ಫೋಟಿಸಿದ್ದರು. ಈ ಸ್ಪೋಟ ಕೇವಲ ಅಲ್ಲಿ ಕಾರಿಡಾರಿನಲ್ಲಿ ನೆರೆದಿದ್ದ ಜನರನ್ನು ಬೆದರಿಸಿ ಓಡಿಸುವ ತಂತ್ರವಾಗಿತ್ತೇ ಹೊರತು ಯಾರನ್ನೂ ಬಲಿ ತೆಗೆದುಕೊಳ್ಳುವ ಉದ್ದೇಶವಿರಲಿಲ್ಲ. ಹಾಗಾಗಿಯೇ ಭಬಾಂಬ್ ಸ್ಪೋಟಿಸಿದ ನಂತರ ಅವರು ತಪ್ಪಿಸಿಕೊಂಡು ಓಡಿಹೋಗದೇ ಅಲ್ಲಿಯೇ ನಿಂತರಲ್ಲದೇ ಸ್ವಪ್ರೇರಣೆಯಿಂದ ಪೋಲಿಸರಿಗೆ ಶರಣಾದರು.
ಭಾರತೀಯರಿಂದ ಏಕಾಏಕಿ ಇಂತಹ ಉಗ್ರ ಪ್ರತಿಭಟನೆಯನ್ನು ನಿರೀಕ್ಷಿಸಿರದಿದ್ದ ಬ್ರಿಟೀಷರಿಗೆ, ಇಂತಹ ಕೃತ್ಯಗಳನ್ನು ಆರಂಭದಲ್ಲೇ ಚಿವುಟದಿದ್ದರೆ ಅವರ ಮುಂದೆ ನಾವು ಅಸಹಾಯಕರು ಎಂದು ತೋರಿಸಿಕೊಂಡಂತೆ ಆಗುತ್ತದೆ ಎಂಬುದನ್ನು ಮನಗಂಡು ಆನಕೂಡಲೇ ತೀವ್ರತರವಾದ ತನಿಖೆ ನಡೆಸಿ, ಕಡೆಗೆ ಈ ಕೃತ್ಯದ ಕಾರಣೀಭೂತರದಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಬಂಧಿಸಿ ಸಾಮಾನ್ಯ ಖೈದಿಗಳ ಜೊತೆಯಲ್ಲಿ ಸೆರೆಮನೆಗೆ ತಳ್ಳುತ್ತಾರೆ ಮತ್ತು ಅವರಿಗೆ ಅತ್ಯಂತ ಕ್ರೂರವಾದ ಮರಣದಂಡನೆಯ ಶಿಕ್ಷೆಯನ್ನು ವಿಧಿಸುತ್ತಾರೆ.
ಇದನ್ನು ತೀವ್ರತರವಾಗಿ ಖಂಡಿಸಿದ ಭಗತ್ ಸಿಂಗ್ ನಮ್ಮನ್ನು ನೇಣಿಗೆ ಹಾಕಬೇಡಿ ಎಂದು ಅಂದಿನ ಪಂಜಾಬ್ ಪ್ರಾಂತ್ಯದ ಗವರ್ನರ್ ಗೆ ಪತ್ರ ಬರೆಯುತ್ತಾರೆ. ಹಾಗೆಂದ ಮಾತ್ರಕ್ಕೆ ಆ ಪತ್ರ ಹೇಡಿಯಂತೆ ಕ್ಷಮಾಪಣಾ ಪತ್ರವಾಗಿರಲಿಲ್ಲ ಬದಲಾಗಿ ಕೆಚ್ಚೆದೆಯ ಆತ್ಮವಿಶ್ವಾಸದ ದೇಶಪ್ರೇಮಿಯಾದ ಒಬ್ಬ ನೈಜ ಯೋಧನ ಅಪ್ರತಿಮ ಶೌರ್ಯ ಸ್ವಾಭಿಮಾನದ ಪ್ರತೀಕದಂತಿತ್ತು.
ಆ ಪತ್ರವನ್ನು ಮುಂದುವರಿಸುತ್ತಾ , ನಾವು ಸ್ವಾತಂತ್ರ್ಯ ಸಂಗ್ರಾಮದ ಸ್ವಾಭಿಮಾನೀ ಸೈನಿಕರು, ಕೆಚ್ಚೆದೆಯ ಕ್ರಾಂತಿಕಾರಿಗಳು, ನಾವು ಅಪರಾಧಿಗಳಲ್ಲಾ. ನಾವು ಕ್ರಿಮಿನಲ್ ಗಳಲ್ಲಾ . ಹಾಗಾಗಿ ನಮಗೆ ಗೌರವಾರ್ಹವಾದ ವೀರ ಯೋಧರ ಸಾವು ಬೇಕು. ಭಾರತಮಾತೆಯ ಸೇವೆಗಾಗಿ ಪ್ರಾಣವನ್ನರ್ಪಿಸಲು ಸಂತೋಷದಿಂದ ನಾವೆಲ್ಲಾ ಸಿದ್ಧರಿದ್ದೇವೆ. ಆದರೆ…ಸುಖಾ ಸುಮ್ಮನೆ ಯಾವುದೋ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಶಿಕ್ಷೆಗೆ ಗುರಿಯಾದ ಅಪರಾಧಿಗಳಂತೆ ನಮ್ಮನ್ನು ನೇಣಿಗೆ ಹಾಕಬೇಡಿ. ನಾವು ವೀರಮರಣವನ್ನಪ್ಪಲು ಸದಾ ಹಾತೊರೆಯುತ್ತಿದ್ದೇವೆ. ಹಾಗಾಗಿ ಯುದ್ಧದಲ್ಲಿ ಸೈನಿಕರನ್ನು ಶೂಟ್ ಮಾಡುವಂತೆ ನಮ್ಮನ್ನೂ ಬಂದೂಕುಗಳಿಂದ ಸುಟ್ಟು ಸಾಯಿಸಿ ಅಥವಾ ಫಿರಂಗಿಯ ಗುಂಡಿಟ್ಟು ಉಡಾಯಿಸಿ. ನಾವು ತುಪಾಕಿಯ ಬಾಯಿಗೆ, ಫಿರಂಗಿಯ ಗುಂಡಿಗೆ ಪ್ರಾಣವನ್ನರ್ಪಿಸುವ ಗುಂಡಿಗೆಯಿರುವ ಗಂಡುಗಲಿಗಳು, ಹಾಗಾಗಿ ಹೇಡಿಗಳಂತೆ ನೇಣಿಗೆ ಕೊರಳೊಡ್ಡುವ ಬದಲಿಗೆ ಬಂದೂಕಿಗೆ ಎದೆಯೊಡ್ಡಿ ಸಾಯುತ್ತೇವೆ. ಎನ್ನುವಂತಹ ಕ್ಷಾತ್ರ ತೇಜದ ವೀರಯೋಧರುಗಳು ಮರೆಯುವಂತಹ ಪತ್ರವನ್ನು ಭಗತ್ ಸಿಂಗ್ ಮತ್ತಅವರ ಗೆಳೆಯರು ಬರೆದಿದ್ದರು.
ಇವರನ್ನು ಗಲ್ಲಿಗೇರಿಸಲು ಸಕಲ ಸಿದ್ಧತೆಗಳನ್ನು ಬ್ರಿಟೀಷರು ಮಾಡಿಕೊಳ್ಳುತ್ತಿದ್ದಾಗಲೇ, ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅಂತಹ ಘನಘೋರ ತಪ್ಪನ್ನು ಮಾಡದಿದ್ದರೂ ಗಲ್ಲು ಶಿಕ್ಷೆಯಂತರ ಕಠೋರವಾದ ಶಿಕ್ಷೆಯಿಂದ ಪಾರು ಮಾಡುವಂತೆ ಅಂದಿನ ಕೆಲ ಸ್ವಾತಂತ್ರ್ಯ ಹೋರಾಟಗಾರು ಮಹಾತ್ಮಾ ಗಾಂಧಿಯವರ ಬಳಿ ಬಂದು ಹೇಗಾದರೂ ಮಾಡಿ ಬ್ರಿಟೀಷರೊಡನೆ ಮಾತನಾಡಿ ಭಗತ್ ಸಿಂಗ್ ಮತ್ತವರ ಸಂಗಡಿಗರ ಗಲ್ಲು ಶಿಕ್ಷೆಯನ್ನು ತಡೆಯವ ಪ್ರಯತ್ನ ಮಾಡ ಬೇಕೆಂದು ಕೋರುತ್ತಾರೆ. ದುರಾದೃಷ್ಟವಶಾತ್ ಅಹಿಂಸಾತ್ಮಕ ಹೋರಾಟದ ಭ್ರಮೆಯಲ್ಲಿಯೇ ತೇಲಾಡುತ್ತಿದ್ದ ಗಾಂಧಿಯವರು, ಭಗತ್ ಸಿಂಗ್ ಮತ್ತವರ ಸಂಗಡಿಗರು ತಮ್ಮ ನಂಬಿಕೆಯ ವಿರುದ್ಧವಾಗಿ ಹಿಂಸಾತ್ಮಕ ಚಳುವಳಿಯಲ್ಲಿ ಪಾಲ್ಗೊಂಡ ಪರಿಣಾಮ, ತಾವು ಅವರ ಪರ ಬ್ರಿಟೀಷ್ ಅಧಿಕಾರಿಗಳ ಬಳಿ ಮಾತನಾಡಲು ಸಿದ್ದವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದಾಗ, ಮನಸ್ಸಿನಲ್ಲಿ ಗಾಂಧಿಯವರ ಸಂಕುಚಿತ ಮನೋಭಾವನೆಯನ್ನು ಮತ್ತು ದೂರದೃಷ್ಟಿಯ ಕೊರತೆಯನ್ನು ಹಳಿಯುತ್ತಾ, ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ, ಹಿಂದುರಿಗಿದ್ದು ದುರಾದೃಷ್ಟಕರ ಸಂಗತಿಯಾಗಿ ಭಾರತೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿಯೇ ಉಳಿದು ಹೋಗಿದೆ.
ಅಂದಿನ ಬ್ರಿಟಿಷ್ ಸರ್ಕಾರ, ಭಗತ್ ಸಿಂಗ್ ಮತ್ತವರ ಕ್ರಾಂತಿಕಾರಿಗಳ ತಂಡಕ್ಕೆ ಹೆದರಿ ನಡುಗಿ ಹೋಗಿತ್ತು…! ಈಗಾಗಲೇ ಭಗತ್ ಸಿಂಗ್ ಮತ್ತವರ ಸಂಗಡಿಗರು ತಮ್ಮ ಸಾಹಸದಿಂದ ಇಡೀ ಭಾರತದಲ್ಲೇ ಸಂಚಲವನ್ನುಂಟು ಮಾಡಿದ್ದರು. ದೇಶದಾದ್ಯಂತ ಯುವಜನತೆಗೆ ಭಗತ್ – ರಾಜ ಗುರು – ಸುಖದೇವ್ ಮಾದರಿಯಾಗಿದ್ದರು, ದಿನ ಬೆಳಗಾಗುವುದರೊಳಗೆ ಆ ಮೂವರೂ ದೇಶಾಭಿಮಾನೀ ಯುವಕ ಯುವತಿಯರ ಪಾಲಿಗೆ ಹೀರೋಗಳಾಗಿದ್ದರು. ಒಂದು ವೇಳೆ ತಾವು ಭಗತ್ ಮತ್ತವರ ಸಂಗಡಿಗರನ್ನು ಬಂದೂಕಿನಿಂದ ಗುಂಡು ಹಾರಿಸಿ ಅಥವಾ ಫಿರಂಗಿಯಿಂದ ಉಡಾಯಿಸಿ ಸಾಯಿಸಿದ್ದೇ ಆದರೆ ಇಡೀ ಭಾರತದಾದ್ಯಂತ ಕ್ರಾಂತಿಯ ಕೆನ್ನಾಲಗೆ ಹರಡಿ ದೇಶಭಕ್ತಿ ಕಿಚ್ಚು ವ್ಯಾಪಿಸಿ ತಾವು ಭಾರತ ಬಿಟ್ಟೋಡುವ ಪರಿಸ್ಥಿತಿ ಉದ್ಭವವಾಗಬಹುದೆಂಬುದನ್ನು ಊಹಿಸಿಯೇ ಬೆದರಿದ ಬ್ರಿಟಿಷರು ಬಹಳ ಗುಟ್ಟು ಗುಟ್ಟಾಗಿ, ಅತ್ಯಂತ ರಹಸ್ಯವಾಗಿ, ಅವಸರವಸರವಾಗಿ ಭಗತ್ ಸಿಂಗ್, ಶಿವರಾಮ ರಾಜ್ ಗುರು, ಸುಖದೇವ್ ಥಾಪರ್ ಅವರನ್ನು ಒಂದು ದಿನದ ಮುಂಚೆಯೇ ಅಂದರೆ ಅಂದರೆ ಮಾರ್ಚ್ 23, 1931 ರಂದೇ ಲಾಹೋರ್ ಜೈಲಿನಲ್ಲಿ ಗಲ್ಲುಗಂಭಕ್ಕೇರಿಸಿದರು. ಬ್ರಿಟಿಷ್ ಅಧಿಕಾರಿಗಳು ಇವರ ಬಗ್ಗೆ ಅದೆಷ್ಟು ಭಯಭೀತರಾಗಿದ್ದರೆಂದರೆ ನೇಣಿಗೇರಿಸಿದರೂ, ಅವರೆಲ್ಲಾದರೂ ಮತ್ತೆ ಬದುಕಿಬಿಟ್ಟಾರೂ ಎಂಬ ಭಯದಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನೇಣುಗಂಭದಲ್ಲೇ ಆ ಮೂವರನ್ನೂ ನೇತಾಡಿಸಿ ಅವರು ನಿಜವಾಗಲೂ ಸತ್ತಿದ್ದಾರೆ ಅಂತ ವೈದ್ಯರು ಖಾತ್ರಿ ಪಡಿಸಿದ ನಂತರವೇ ದೇಹಗಳನ್ನು ನೇಣು ಕುಣಿಕೆಯಿಂದ ಬಿಡಿಸಿ ಕೆಳಗಿಳಿಸಿದರು.
ಇಂದು ಭಾರತ ಮಾತೆಯ ಆ ಮೂವರು ವೀರಪುತ್ರರು ವೀರಸ್ವರ್ಗವನ್ನೇರಿದ ದಿನ. ಭಗತ್ ಸಿಂಗ್, ಶಿವರಾಂ ರಾಜ್ ಗುರು ಮತ್ತು ಸುಖದೇವ್ ಥಾಪರ್ ಈ ಮೂವರ ಬಲಿದಾನದ ದಿವಸವನ್ನು ಶಹೀದ್ ದಿವಸ ಅಥವಾ ಹುತಾತ್ಮ ದಿನಾಚರಣೆ ಅಂತ ದೇಶಭಕ್ತರೆಲ್ಲರೂ ಆಚರಿಸುತ್ತೇವೆ. ಅಂದು, ಇಂದು, ಮುಂದೆಯೂ ಅವರೆಲ್ಲರೂ ಸಮಸ್ತ ಭಾರತೀಯರ ಪ್ರಾಥ ಸ್ಮರಣೀಯರು ಮತ್ತು ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವವರು. ದೇಶಕ್ಕಾಗಿ ಅವರ ನಿಸ್ವಾರ್ಥ ತ್ಯಾಗ ಮತ್ತು ಬಲಿದಾನಕ್ಕಾಗಿ ಇಡೀ ಭಾರತ ದೇಶವಾಸಿಗಳ ಪರವಾಗಿ ಅವರಿಗೆ ನಮ್ಮ ಕೋಟಿ ಕೋಟಿ ನಮನಗಳು. 🙏🙏🙏
ಅಂದು ಅವರ ಬಲಿದಾನದಿಂದಾಗಿ ಲಭಿಸಿದ ಸ್ವಾತಂತ್ರ್ಯ, ಕೇವಲ ರಂಗ್ ದೇ ಬಸಂತಿ ಎಂದು ಹಾಡುತ್ತಲೋ ಅಥವ ಆ ಸಿನಿಮಾ ನೋಡುತ್ತಲೋ ಒಂದು ದಿನ ಕಳೆಯದೆ ರಾಷ್ಟ್ರದ ಐಕ್ಯತೆಗಾಗಿ ಮತ್ತು ಏಳಿಗೆಗಾಗಿ ನಾವೆಲ್ಲರೂ ಕಟಿ ಬದ್ಧರಾಗಿ ಶ್ರಮಿಸುವ ಮೂಲಕ ಭಾರತ ದೇಶ ಮತ್ತೊಮ್ಮೆ ವಿಶ್ವಗುರುವಾದಾಗಲೇ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖದೇವ್ ಅಂತಹ ವ್ಯಕ್ತಿಗಳ ತ್ಯಾಗ ಮತ್ತು ಬಲಿದಾನಗಳಿಗೆ ಸಾರ್ಥಕತೆ ದೊರೆಯುತ್ತದೆ.
ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ ದೇವ್ ನಿಮ್ಮಿಂದಲೇ ಇಂದುನಾವೆಲ್ಲಾ. ನೀವಿಲ್ಲದೆ ಎಂದೂ,ನಾವಿಲ್ಲ. ಇವೆಲ್ಲರೂ ನಿಸ್ಸಂಶಯವಾಗಿ, ಆಚಂದ್ರಾರ್ಕವಾಗಿ ಭಾರತೀಯರ ಪಾಲಿಗೆ ಅಜರಾಮರರು..
ಭಾರತ್ ಮಾತಾ ಕಿ ಜೈ. ವಂದೇ ಮಾತರಂ
ಏನಂತೀರೀ?
ನಿಮ್ಮವನೇ ಉಮಾಸುತ
Great and brave sons of Mother India. Because of such people sacrifices we are leading peaceful life today. They are always immortal. They will and have to be remembered always with great respect. Jaihind!!
LikeLiked by 1 person
ಈ ತ್ರಿಮೂರ್ತಿಗಳಿಗೆ ನಮ್ಮ ಮನಃಪೂರ್ವಕ ನಮನಗಳು
LikeLiked by 1 person
Eaee thrimuthi halogen nana mans perurvaka namanagalu
LikeLiked by 1 person
ಭಾರತ್ ಮಾತಾ ಕಿ ಜೈ. ವಂದೇ ಮಾತರಂ
LikeLiked by 1 person